ಅಭಿವೃದ್ಧಿಯ ‘ಭ್ರಮೆ’ ಬಿಡಿಸಿದ ಕೋವಿಡ್

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಮ್ಮದೂ ಒಂದು ಎಂದು ಬೀಗುತ್ತಿದ್ದ ನಮಗೆ ಕೋವಿಡ್ ಕಾಯಿಲೆ ನಾವು ಒಂದು ರಾಜಕೀಯ ವ್ಯವಸ್ಥೆಯಾಗಿ ನಮ್ಮದೇ ಅಂತರಿಕ ಸಂಗತಿಗಳಾದ ಆಹಾರ/ಆರೋಗ್ಯ/ಶಿಕ್ಷಣದಂತಹ ಮೂಲ ಅಗತ್ಯಗಳ ವಿಷಯದಲ್ಲಿ ಎಷ್ಟು ಸಾವಾಲುಗಳನ್ನು ಹೊಂದಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದೆ.

-ಡಾ.ಕಿರಣ್ ಎಂ. ಗಾಜನೂರು

ನಾವು ‘ಅಭಿವೃದ್ಧಿ’ ಎನ್ನುವ ಪರಿಭಾಷೆಗೆ ಯಾವ ವ್ಯಾಖ್ಯಾನ ನೀಡುತ್ತೇವೆ ಎಂಬುದು ಬಹಳ ಮುಖ್ಯ. ಹಾಗೆ ನೋಡುವುದಾದರೆ ಅಭಿವೃದ್ಧಿ ಎಂದರೆ ಏನು? ಎಂಬ ಪ್ರಶ್ನೆಯನ್ನು ವ್ಯಾಖ್ಯಾನಿಸಿದ ನೂರಾರು ಚಿಂತಕರಿದ್ದಾರೆ. ಆದರೆ ಆ ಎಲ್ಲಾ ಚಿಂತಕರ ಸಾಲಿನಲ್ಲಿ ಭಾರತದವರೇ ಆದ ಅಮಾಥ್ರ್ಯ ಸೇನ್ ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ ಮೊಟ್ಟಮೊದಲ ಬಾರಿಗೆ ಅವರು ಈ ಪ್ರಶ್ನೆಗೆ ಬಹಳ ಮೌಲಿಕವಾದ ವ್ಯಾಖ್ಯಾವನ್ನು ನೀಡಿದ್ದರು.

ಅವರ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಎಂದರೆ ‘ವ್ಯಕ್ತಿಯ ಸ್ವಾತಂತ್ರ್ಯವನ್ನು ಹೆಚ್ಚಿಸುವುದು’ ಅಂದರೆ “The enhancement of freedoms that allow people to lead lives that they have reason to live”ಎಂಬುದಾಗಿದೆ. ಅಭಿವೃದ್ಧಿ ಎನ್ನುವುದರ ನಿಜವಾದ ಅರ್ಥ ಸಮಾಜವೊಂದರಲ್ಲಿ ಮನುಷ್ಯನ ಬೆಳವಣಿಗೆಗೆ ಅಗತ್ಯವಾದ ಸ್ವಾತಂತ್ರ್ಯವನ್ನು ಪ್ರಭುತ್ವ ಒದಗಿಸುವುದು ಮತ್ತು ಆ ಸ್ವಾತಂತ್ರ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದೇ ಆಗಿದೆ. ಆ ತಡೆಗಳ ಪಟ್ಟಿಯಲ್ಲಿ ಬಡತನ, ಅರಾಜಕತೆ, ಸಮಾನ ಆರ್ಥಿಕ ಅವಕಾಶಗಳ ಕೊರತೆ, ಸಾರ್ವಜನಿಕ ಸಂಪನ್ಮೂಲಕ ಬಳಕೆಯ ಮೇಲಿರುವ ನಿರ್ಬಂಧ, ವ್ಯವಸ್ಥಿತ ಸಾಮಾಜಿಕ ಅಸಮಾನತೆ ಇತ್ಯಾದಿ ಬರುತ್ತವೆ.

ಸೇನ್ ಅವರ ಪ್ರಕಾರ ಮನುಷ್ಯನ ಅಭಿವೃದ್ಧಿಗೆ ಪೂಕರವಾದ ಪರಸ್ಪರ ಅಂತರ್‍ಸಂಬಂಧ ಹೊಂದಿದ ಐದು ರೀತಿಯ ಸ್ವಾತಂತ್ರ್ಯಗಳಿವೆ. ಅವು ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸವಲತ್ತುಗಳು, ಸಾಮಾಜಿಕ ಅವಕಾಶಗಳು, ಪಾರದರ್ಶಕತೆ ಮತ್ತು ರಕ್ಷಣೆ. ಸೇನ್ ಅವರು ಈ ಸ್ವಾತಂತ್ರ್ಯಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸಲು ಬೇಕಾದ ಸಂಪನ್ಮೂಲಗಳಾದ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸವಲತ್ತುಗಳು, ಸಾಮಾಜಿಕ ಭದ್ರತೆ, ಪೂರಕ ಬೃಹತ್ ಆರ್ಥಿಕ ನೀತಿಗಳು, ಉತ್ಪಾದನಾ ಸಾಮಥ್ರ್ಯದ ಹೆಚ್ಚಳ ಮತ್ತು ಪರಿಸರದ ಸಂರಕ್ಷಣೆಯ ಜವಾಬ್ದಾರಿಯನ್ನು ರಾಜ್ಯ ನಿರ್ವಹಿಸಬೇಕು ಎನ್ನುತ್ತಾರೆ.

ಇನ್ನೂ ಮುಂದುವರಿದು ಆ ಸ್ವಾತಂತ್ರ್ಯಗಳನ್ನು ಅನುಭವಿಸಲು ವ್ಯಕ್ತಿಗೆ ಅಗತ್ಯವಾದ ‘ಸಾಮಥ್ರ್ಯ’ (Capabilities) ಒದಗಿಸುವ ಜವಾಬ್ದಾರಿಯನ್ನು ರಾಜ್ಯವೇ ಹೊರಬೇಕು. ಆ ಸಾಮಥ್ರ್ಯ ವೃದ್ಧಿಗೆ ಅಗತ್ಯವಾದ ಆರ್ಥಿಕ ಅವಕಾಶಗಳು, ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಅಧಿಕಾರ, ಉತ್ತಮ ಆಹಾರ/ಶಿಕ್ಷಣ ಇತ್ಯಾದಿಗಳು ನೆರವಾಗುತ್ತವೆ. ಅವುಗಳನ್ನು ವ್ಯಕ್ತಿಗೆ ಒದಗಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವನು ಪಾಲ್ಗೊಳ್ಳುವ ಸಾಮರ್ಥ್ಯವನ್ನು (Capabilities) ಸೃಜಿಸಬೇಕು ಎನ್ನುವ ವಾದವನ್ನು ಸೇನ್ ಮುಂದಿಟ್ಟಿದ್ದಾರೆ. ಒಟ್ಟಾರೆ “ಬಡತನವನ್ನು ಅಳೆಯಲು ಕಡಿಮೆ ಆದಾಯಕ್ಕಿಂತ ತನ್ನ ಮೂಲಭೂತ ಸ್ವಾತಂತ್ರ್ಯಗಳನ್ನು ಅನುಭವಿಸುವ ಆತ/ಆಕೆಗಿರುವ ‘ಸಾಮರ್ಥ್ಯಗಳ ಅಭಾವ’ (Deprivation of Capabilities) ಮುಖ್ಯವಾದ ಮಾನದಂಡವಾಗಬಹುದು” ಎನ್ನುವ ಅಂಶವನ್ನು ಸೇನ್ ನಮ್ಮ ಮುಂದಿಡುತ್ತಾರೆ.

ಅಮಾಥ್ರ್ಯ ಸೇನ್ ಅವರ ಅಭಿವೃದ್ಧಿಯ ಕುರಿತು ವ್ಯಾಖ್ಯಾನವನ್ನು ಒಪ್ಪಿ ನಾವು ಭಾರತದ ವರ್ತಮಾನದ ಸ್ಥಿತಿಯನ್ನು ವಿಶ್ಲೇಷಿಸಿದರೆ ನಮಗೆ ತುಸು ನಿರಾಶೆ ಮೂಡುತ್ತದೆ. ಎಕೆಂದರೆ ಸೇನ್ ಹೇಳಿದ ಮಾದರಿಯ ಅಭಿವೃದ್ಧಿಯನ್ನು ಸಾಧಿಸಲು ಪೂಕರಕವಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಆ ಸ್ವಾತಂತ್ರ್ಯವನ್ನು ಅನುಭವಿಸಲು ಅಗತ್ಯವಾದ ಸಾಮಥ್ರ್ಯ ಎರಡರಿಂದಲೂ ನಾವು ಬಳಲುತ್ತಿದ್ದೇವೆ. ಈ ಸಂಗತಿಯನ್ನು ಅರ್ಥಮಾಡಿಕೊಳ್ಳಲು 2016-2017ರ ಸಾಲಿನಿಂದ ಭಾರತದ ಪ್ರಗತಿಯ ದರವನ್ನು ನಾವು ಗಮನಿಸುವುದು ಒಂದು ಮಾನದಂಡವಾಗಬಹದು.

ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ 2016-17ರಲ್ಲಿ ಶೇಕಡಾ 8 ಇದ್ದ ಅಭಿವೃದ್ಧಿ ದರ 2017-18ರಲ್ಲಿ 6.6%, 2018-19ರಲ್ಲಿ 6%, 2019-20ರಲ್ಲಿ 3.9% ಮತ್ತು 2020-21ರಲ್ಲಿ ದಾಖಲೆಯ -7.3%ಗೆ ಕುಸಿದಿದೆ ಇದರ ಅರ್ಥ ಕಳೆದ ಎಳು ವರ್ಷಗಳಿಂದ ಕುಸಿಯುತ್ತಲೇ ಸಾಗಿದ್ದ ಭಾರತದ ಅಭಿವೃದ್ಧಿಯ ದರ 2019-20 ಮತ್ತು 2020-21ನೇ ಸಾಲಿನಲ್ಲಿ ಕೋವಿಡ್-19 ಸೃಷ್ಟಿಸಿದ ಸವಾಲುಗಳ ಕಾರಣಕ್ಕೆ ತೀರ್ವವಾಗಿ ಕುಸಿತವನ್ನು ಕಂಡಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಕೋವಿಡ್-19ರ ಸವಾಲುಗಳು ಮಾತ್ರವಲ್ಲ ಬದಲಾಗಿ ನಾವು ಜಾರಿಗೆ ತಂದ ಜಿಎಸ್ಟಿ, ನೋಟ್-ಬ್ಯಾನ್ ಮತ್ತು ಇ-ಕ್ಯಾಶ್ ನೀತಿಗಳು ಹಣದ ವಹಿವಾಟನ್ನೆ ಆಧರಿಸಿ ದ್ದ ಅಸಂಘಟಿತ ವಲಯವನ್ನು ಒಂದು ರೀತಿಯ ಪ್ಯಾರಾಲಿಸಿಸ್ ಗೆ ಒಳಗುಮಾಡಿದವು. ಅದರ ಪರಿಣಾಮ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ನೆಲಕಚ್ಚಿದವು. ಭಾರತದ ಬಹುದೊಡ್ಡ ಅಸಂಘಟಿತ ಕಾರ್ಮಿಕ ವಲಯಕ್ಕೆ ಉದ್ಯೋಗ ನೀಡುತ್ತಿದ್ದ ಈ ವಲಯದ ಕುಸಿತ ನಮ್ಮ ಆರ್ಥಿಕ ಬೆಳವಣಿಗೆಯ ದರದ ಮೇಲೆ ನೇರವಾದ ಪ್ರಭಾವವನ್ನು ಬೀರಿದೆ ಎಂಬ ವಿಶ್ಲೇಷಣೆಗಳು ನಮ್ಮ ನಡುವೆ ಇವೆ. 

ಈ ಎಲ್ಲಾ ಸಂಗತಿಗಳ ಪರಿಣಾಮ ದೇಶದ ಆರ್ಥಿಕತೆಯ ಬೆನ್ನುಲುಬಾಗಿದ್ದ ಅಸಂಘಟಿತ ಕಾರ್ಮಿಕ ವಲಯ ಇಂದು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯನ್ನು ತಲುಪಿದೆ. ಕಳೆದ ಇಪ್ಪತ್ತು ತಿಂಗಳಿಂದ ಭಾಗಶಃ ಲಾಕ್ ಡೌನ್‍ನಲ್ಲೆ ಉಳಿದ ದೇಶದ ಸ್ಥಿತಿ, ಸರಿಸುಮಾರು 139 ಮಿಲಿಯಲ್ ವಲಸೆ ಕಾರ್ಮಿಕ ವರ್ಗವನ್ನು ಅತ್ಯಂತ ಸಂಕಷ್ಟಕ್ಕೆ ದೂಡಿದೆ. ಮೊದಲೇ ಬಡತನ, ಕೌಶಲಗಳ ಕೊರತೆ, ಮಾಲೀಕರೊಂದಿಗೆ ಮಾತನಾಡುವ ಸಾಮಥ್ರ್ಯದಂತಹ ಸಮಸ್ಯೆಗಳಿಂದ ಅತ್ಯಂತ ಕಡಿಮೆ ಕೂಲಿಗೆ ತಮ್ಮ ಶ್ರಮವನ್ನು ಮಾರಿಕೊಳ್ಳುವ ಸ್ಥಿತಿಯಲ್ಲಿದ್ದ ವಲಸೆ ಕಾರ್ಮಿಕರು ಇಂದು ಕನಿಷ್ಟ ಆ ಸ್ಥಿತಿಯಿಂದಲೂ ಹೊರದಬ್ಬಲ್ಪಟ್ಟಿದ್ದಾರೆ. ವಲಸೆ ಕಾರ್ಮಿಕರಿಗೆ ಒದಗಿದ ಸ್ಥಿತಿ ಕೇವಲ ಕೋವಿಡ್ ಕಾರಣದಿಂದ ಸೃಷ್ಟಿಯಾದ ಸಮಸ್ಯೆಯಾಗಿ ಮಾತ್ರ ನೋಡಲಾಗುವುದಿಲ್ಲ. ಬದಲಾಗಿ ನಮ್ಮ ಸಮಾಜದ ಒಟ್ಟು ಬೆಳವಣಿಗೆಯ ಮೂಲ ಆಧಾರವಾದ ಶ್ರಮಿಕವರ್ಗವನ್ನು ನಮ್ಮದೇ ವ್ಯವಸ್ಥೆ ಸಂವಿಧಾನ ಪ್ರತಿಪಾದಿಸುವ ನ್ಯಾಯಯುತ ಮತ್ತು ಗೌರವಯುತ ನಾಗರಿಕರಂತೆ ನಡೆಸಿಕೊಳ್ಳದಿರುವುದರ ಉಪ-ಉತ್ಪನ್ನವಾಗಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ,

ಇಂದು ಜಗತ್ತಿನ ಎದುರು ನಾವು ವಿಶ್ವಗುರು, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಾವೂ ಒಬ್ಬರು ಎಂಬ ಚಿತ್ರಣವನ್ನು ಮುಂದಿಡಲು ತೋರುವ ಉತ್ಸಾಹವನ್ನು ನಮ್ಮ ಅಸಂಘಟಿತ ಕಾರ್ಮಿಕ ವಲಯದ ನ್ಯಾಯಬದ್ಧ, ಸಮಾನ ಮತ್ತು ಗೌರವಯುತ ಬದುಕುವ ಹಕ್ಕಿನ ಕುರಿತು ಹೊಂದಿದ್ದೇವೆಯೇ ಎಂಬ ಸಂಗತಿಯ ಕುರಿತು ನಾವು ಅಲೋಚಿಸಬೇಕಿದೆ. ದೇಶಕ್ಕೆ ದೇಶವೇ ಭಾಗಶಃ ಲಾಕ್-ಡೌನ್ ಆಗಿದ್ದ ಮತ್ತು ಬಹುತೇಕ ರೈಲು ಸಂಚಾರ ಸ್ಥಗಿತಗೊಂಡಿದ್ದ 2020ರ ಅವಧಿಯಲ್ಲಿ 8700 ಜನ ರೈಲ್ವೆ ಹಳಿಗಳ ಮೇಲೆ ಸತ್ತಿದ್ದಾರೆ ಎಂಬ ಸಂಗತಿಯನ್ನು ಮಾಹಿತಿ ಹಕ್ಕು ಹೇಳುತ್ತಿದೆ ಮತ್ತು ಅವರಲ್ಲಿ ಬಹುತೇಕ ಮಂದಿ ವಲಸೆ ಕಾರ್ಮಿಕರಾಗಿದ್ದರು ಎಂಬ ಸಂಗತಿಯೂ ಉತ್ಪ್ರೇಕ್ಷೆಯಲ್ಲ. ನೂರಾರು ಜನ ಆಕ್ಸಿಜನ್ ಸಿಗದೆ, ಹಾಸಿಗೆ ಸಿಗದೇ ಆಸ್ಪತ್ರೆಯ ಬಾಗಿಲುಗಳಲ್ಲಿ ಪ್ರಾಣಬಿಟ್ಟ ಸಂಗತಿ, ನದಿಗಳಲ್ಲಿ ಹರಿದಾಡಿದ ನೂರಾರು ಶವಗಳು, ಮರಳಿನಲ್ಲಿ ಮುಚ್ಚಿಟ್ಟು ನಂತರ ಮೇಲೆ ಬಂದು ತಮ್ಮ ಧಾರುಣ ಅಂತ್ಯಸಂಸ್ಕಾರದ ಕಥೆ ಹೇಳಿದ ಶವಗಳು… ಇವೆಲ್ಲವೂ ನಮ್ಮ ಆಡಳಿತ ವೈಖರಿಯನ್ನು “ಅಭಿವೃದ್ಧಿಯ” ವೇಗವನ್ನು ಜಗತ್ತಿನ ಎದುರು ಬಿಚ್ಚಿಟ್ಟಿವೆ.

ಪರಿಸ್ಥಿತಿ ಹೀಗಿರುವಾಗ ನಮ್ಮ ವರ್ತಮಾನದಲ್ಲಿನ ಚರ್ಚೆಗಳೇ ಬೇರೆಯಾಗಿವೆ. ಹಾಗೆ ನೋಡುವುದಾದರೆ ವರ್ತಮಾನದ ಭಾರತದಲ್ಲಿ ‘ಅಭಿವೃದ್ಧಿ’ ಎಂಬ ಪರಿಭಾಷೆಯ ವ್ಯಾಖ್ಯಾನವನ್ನೆ ಬದಲಿಸಲಾಗಿದೆ. ಒಂದು ಕಡೆ ಕೋವಿಡ್ ಒಡ್ಡುತ್ತಿರುವ ಸವಾಲುಗಳು ಜನರನ್ನು ಬಾಧಿಸುತ್ತಿದ್ದರೆ ಮತ್ತೊಂದು ಕಡೆ ಆರ್ಥಿಕ ಪ್ರಗತಿಯಲ್ಲಿ ಐತಿಹಾಸಿಕ ಕುಸಿತ; ಹೆಚ್ಚುತ್ತಿರುವ ಬಡತನ, ಅಸಮಾನತೆ ಮತ್ತು ನಿರುದ್ಯೋಗದ ಪ್ರಮಾಣ; ಪೆಟ್ರೋಲ್/ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ ಮತ್ತು ಆರೋಗ್ಯದಂತಹ ಅತ್ಯಗತ್ಯ ಸಂಪನ್ಮೂಲಗಳ ಮೇಲೆ ಏರುತ್ತಿರುವ ವೆಚ್ಚವನ್ನು ಕುರಿತ ಮುಖ್ಯ ಪ್ರಶ್ನೆಗಳನ್ನು ಅಭಿವೃದ್ಧಿ ಸಂಕಥನಗಳಿಂದ ದೂರ ಇಟ್ಟು; ಮಂದಿರದ ಚರ್ಚೆ, ಮೂಲಭೂತವಾದ, ಯುದ್ಧೋನ್ಮಾದ, ಚುನಾವಣಾ ರಾಜಕೀಯದ ಗೆಲವು/ಸೋಲುಗಳ ಸಂಗತಿಗಳನ್ನೆ ‘ಅಭಿವೃದ್ಧಿ’ ಎಂಬಂತೆ ವೈಭವೀಕರಿಸಿ ವ್ಯಾಖ್ಯಾನಿಸಲಾಗುತ್ತಿದೆ.

ಈ ಹಿನ್ನಲೆಯಲ್ಲಿಯೇ ಇತ್ತಿಚೆಗೆ ಭಾರತದ ರಾಜಕೀಯ ನೀತಿಗಳನ್ನು ಉದ್ದೇಶಿಸಿ “ಒಡೆದು ಆಳುವ ನೀತಿ ಮತ್ತು ಅಸಹಿಷ್ಣುತೆ ಭಾರತದ ಆರ್ಥಿಕ ಅಭಿವೃದ್ಧಿಗೆ ಇರುವ ಮುಖ್ಯವಾದ ಸವಾಲುಗಳು” ಎಂಬ ವಿಶ್ಲೇಷಣೆಯನ್ನು ಜಾಗತಿಕ ಆರ್ಥಿಕ ತಜ್ಞ ಕೌಶಿಕ್ ಬಸು ಮುಂದಿಟ್ಟಿದ್ದರು.

ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಮ್ಮದೂ ಒಂದು ಎಂದು ಬೀಗುತ್ತಿದ್ದ ನಮಗೆ ಕೋವಿಡ್-19 ಎಂಬ ಸಾಂಕ್ರಾಮಿಕ ಕಾಯಿಲೆ ನಾವು ಒಂದು ರಾಜಕೀಯ ವ್ಯವಸ್ಥೆಯಾಗಿ ನಮ್ಮದೇ ಅಂತರಿಕ ಸಂಗತಿಗಳಾದ ಆಹಾರ/ಆರೋಗ್ಯ/ಶಿಕ್ಷಣದಂತಹ ಮೂಲ ಅಗತ್ಯಗಳ ವಿಷಯದಲ್ಲಿ ಎಷ್ಟು ಸಾವಾಲುಗಳನ್ನು ಹೊಂದಿದ್ದೇವೆ; ವಲಸೆ ಕಾರ್ಮಿಕರು, ರೈತರು, ಸಣ್ಣ/ಅತಿಸಣ್ಣ ವ್ಯಾಪಾರಿಗಳು, ಬಹಳ ಮುಖ್ಯವಾಗಿ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರು, ಮಹಿಳೆ ಮತ್ತು ಮಕ್ಕಳ ಕುರಿತಂತೆ ಎಷ್ಟು ಅಸೂಕ್ಷ್ಮವಾಗಿದ್ದೇವೆ; ಸೇನ್ ಹೇಳಿದಂತೆ ಅವರ ಸ್ವಾತಂತ್ರ್ಯ ಮತ್ತು ಆ ಸ್ವಾತಂತ್ರ್ಯ ಅನುಭವಿಸುವ ಅವರ ಸಾಮಥ್ರ್ಯವನ್ನು ಒದಗಿಸುವ ಕುರಿತು “ಪ್ರಜಾಪ್ರಭುತ್ವ ರಾಜ್ಯವಾಗಿ” ನಾವು ಸಾಗಬೇಕಾದ ಹಾದಿ ಎಷ್ಟು ದುರ್ಗಮವಾಗಿದೆ ಎಂಬ ಸಂಗತಿಗಳನ್ನು ನಮ್ಮ ರಾಜಕೀಯ ನಾಯಕತ್ವಕ್ಕೆ ತೋರಿಸಿಕೊಟ್ಟಿದೆ.

ನಾವು ಈ ಕೋವಿಡ್-19ರ ಅನುಭವದಿಂದ ಸಾಕಷ್ಟು ಪಾಠ ಕಲಿಯಬೇಕಿದೆ. ನಾವು ಕೇವಲ ಸಿರಿವಂತ ದೇಶಗಳ ಅಗತ್ಯಗಳನ್ನು ಪೂರೈಸುವÀ ‘ಉತ್ಪಾದನಾ ರಾಜ್ಯವಾಗಿ’ ಮಾತ್ರ ಉಳಿಯದೇ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು, ಇಲ್ಲಿನ ಸಮಾಜೋ-ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲರೂ ಭಾಗವಹಿಸುವ, ಎಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಖಾತ್ರಿಗೊಳಿಸುವ ರಾಜಕೀಯ ಮತ್ತು ಆರ್ಥಿಕ ನೀತಿಗಳ ಆವಿಷ್ಕಾರ ವರ್ತಮಾನದ ತುರ್ತಾಗಿದೆ. ಈಗಲೂ ನಾವು ಆ ಕೆಲಸಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳು ಇನ್ನಷ್ಟು ಸವಾಲಿನಿಂದ ಕೂಡಿರಲಿವೆ.

1992ರ ಆಮೆರಿಕಾ ದೇಶದ ಚುನಾವಣಾ ಸಮಯ. ಅಂದಿನ ಅಧ್ಯಕ್ಷೀಯ ಅಭ್ಯರ್ಥಿಯಾದ ಬಿಲ್ ಕ್ಲಿಂಟನ್ ಪರವಾಗಿ ಪ್ರಚಾರದಲ್ಲಿ ತೋಡಗಿದ್ದ ಚುನಾವಣಾ ತಂತ್ರಜ್ಞ “ಜೆಮ್ಸ್ ಕಾರ್ವಿಲ್ಲೆ” It’s the Economy, Stupid ಎಂಬ ಘೋಷಣೆಯನ್ನು ನೀಡಿದ್ದ. ಅಂದರೆ ಅಂದಿನ ಆಡಳಿತಾರೂಢ ಅಧ್ಯಕ್ಷರು ಆರ್ಥಿಕತೆಯನ್ನು ನಿರ್ವಹಿಸಿದ ಅವೈಜ್ಞಾನಿಕ ಕ್ರಮವನ್ನು ಜನರಿಗೆ ತಲುಪಿಸಲು ಕಾರ್ವಿಲ್ಲೆ ಈ ಘೋಷಣೆಯನ್ನು ವ್ಯಂಗ್ಯವಾಗಿ ಪ್ರಚಾರಕ್ಕೆ ಬಳಸಿಕೊಂಡಿದ್ದ. ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಆಮೆರಿಕಾ ಸಮಾಜ, ಮಧ್ಯಮವರ್ಗ ಮುಖ್ಯವಾಗಿ ನಿರುದ್ಯೋಗದಿಂದ ಬಳಲುತ್ತಿದ್ದ ಅಲ್ಲಿನ ಯುಜಜನರನ್ನು ಈ It’s the Economy, Stupid ಎಂಬ ಪದಪುಂಜ ಒಂದು ಚಳವಳಿಯಂತೆ ಪ್ರಭಾವಿಸಿತ್ತು…!

ಕೋವಿಡ್-19 ಜಗತ್ತಿನ ಹಲವಾರು ದೇಶಗಳ ನಾಯಕರನ್ನು ಈ ಸವಾಲಿಗೆ ತಂದು ನಿಲ್ಲಿಸಿದೆ. ಈಗಲಾದರೂ ನಮ್ಮ ಅಭಿವೃದ್ಧಿಶೀಲ ದೇಶಗಳ ರಾಜಕೀಯ ನಾಯಕತ್ವ ಎಲ್ಲರನ್ನು ಒಳಗೊಳ್ಳುವ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತದ ಮಾದರಿಯನ್ನು ಅನುಸರಿಸಬೇಕಿದೆ. ಇಲ್ಲವಾದರೆ It’s the Economy, Stupid ಮಾದರಿಯ ಘೋಷಣೆಗಳು ಮತ್ತೆ ಮತ್ತೆ ತೃತೀಯ ಜಗತ್ತಿನ ಜನಹೋರಾಟಗಳ ಭಾಗವಾಗಿ ಮುಂಚೂಣಿಗೆ ಬರಲಿವೆ.

*ಲೇಖಕರು ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.