ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಸಾವು: ಹಸಿವಿನಿಂದಲೋ? ವೈರಾಣುವಿನಿಂದಲೋ?

ಇಂಡೋನೇಷ್ಯಾದ ಸಚಿವ ಲುಹುತ್ ಪಾಂಡ್ ಜೈತಾನ್ಸಾ ಹೇಳುವಂತೆ ‘ಸಾಮಾಜಿಕ ಭದ್ರತೆ ಹೊಂದದ ರಾಷ್ಟçಗಳಲ್ಲಿ, ಪೂರ್ಣ ಪ್ರಮಾಣದ ಲಾಕ್‌ಡೌನ್ ಹೆಚ್ಚಿನ ಹಸಿವು ಮತ್ತು ಸಾವಿಗೆ ಕಾರಣವಾಗುತ್ತದೆ’.

ಅನೇಕ ಶ್ರೀಮಂತ ರಾಷ್ಟಗಳು ಕೊರೊನ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತಂದರೂ, ಕೆಲವು ಅಭಿವೃದ್ಧಿಶೀಲ ದೇಶಗಳಿಗೆ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸ್ವಿಜರ್ಲ್ಯಾಂಡಿನ ಯುಬಿಎಸ್ ಬ್ಯಾಂಕ್ ನಡೆಸಿದ ಅಧ್ಯಯನ ವರದಿಯ ಪ್ರಕಾರ, ಅಭಿವೃದ್ಧಿಶೀಲ ರಾಷ್ಟçಗಳಲ್ಲಿ, ಹೆಚ್ಚಿನವು ‘ಮಧ್ಯಮ’ ಲಾಕ್‌ಡೌನ್ ಹಾಗು ಬೆರಳೆಣಿಕೆಯ ದೇಶಗಳು ಮಾತ್ರ ‘ತೀವ್ರ’ ಲಾಕ್‌ಡೌನ್ ಅಳವಡಿಸಿಕೊಂಡಿವೆ. ಉದಾಹರಣೆಗೆ, ಟರ್ಕಿಯಲ್ಲಿ ಜನ ವೈರಸ್ ದಾಳಿಗೆ ತುತ್ತಾಗುತ್ತಿದ್ದರೂ, 20 ರಿಂದ 65 ವರ್ಷದೊಳಗಿನ ಹೆಚ್ಚಿನ ಜನರು ಹೊರಗೆ ಕೆಲಸಮಾಡುತ್ತಿದ್ದಾರೆ. ಇದರಂತೆ, ಪಾಕಿಸ್ತಾನವೂ ಕೂಡ, ಜವಳಿ ಸೇರಿದಂತೆ ಹಲವಾರು ಪ್ರಮುಖ ರಫ್ತು ಕೈಗಾರಿಕೆಗಳನ್ನು ತೆರೆದಿಟ್ಟಿದೆ. ಅಂತೆಯೇ, ಪ್ರಯಾಣ ನಿರ್ಬಂಧ ಮತ್ತು ಮನೆಯಲ್ಲಿರುವ ಆದೇಶಗಳನ್ನು ನಿಧಾನವಾಗಿ ಅನುಷ್ಠಾನಗೊಳಿಸಿದ ಇಂಡೋನೇಷ್ಯಾದ ಸಚಿವ ಲುಹುತ್ ಪಾಂಡ್‌ಜೈತಾನ್ಸಾ ಹೇಳುವಂತೆ ‘ಸಾಮಾಜಿಕ ಭದ್ರತೆ ಹೊಂದದ ರಾಷ್ಟçಗಳಲ್ಲಿ, ಪೂರ್ಣ ಪ್ರಮಾಣದ ಲಾಕ್‌ಡೌನ್ ಹೆಚ್ಚಿನ ಹಸಿವು ಮತ್ತು ಸಾವಿಗೆ ಕಾರಣವಾಗುತ್ತದೆ’.

ಕುತೂಹಲದ ಅಂಶವೆಂದರೆ, ಇಲ್ಲಿಯವರೆಗೆ ವರದಿಯಾದ ಶೇಕಡಾ 90ರಷ್ಟು ಕೊರೊನ ಸಂಬಂಧಿ ಪ್ರಕರಣಗಳು ಮತ್ತು ಸಾವು, ಸರಾಸರಿ 63 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಕಡಿಮೆ ತಾಪಮಾನವಿರುವ ದೇಶಗಳಲ್ಲಿವೆ. ಅವುಗಳಲ್ಲಿ ಹೆಚ್ಚಿನವು ಉತ್ತರ ಗೋಳಾರ್ಧದ ಶ್ರೀಮಂತ, ಅಭಿವೃದ್ಧಿ ಹೊಂದಿದ ದೇಶಗಳಾಗಿವೆ. ಆದರೆ ವ್ಯತಿರಿಕ್ತವಾಗಿ, ಆರ್ಥಿಕ ಕುಸಿತದ ಭೀಕರತೆಯು ಉಷ್ಣವಲಯದ ರಾಷ್ಟಗಳನ್ನು ತಟ್ಟುತ್ತಿದೆ. ಇಂತಹ ವಿಲಕ್ಷಣ ಸನ್ನಿವೇಶ, ಎರಡನೆಯ ಮಹಾಯುದ್ಧದ ನಂತರ ಮೊದಲ ಬಾರಿಗೆ ಆಗಿದೆ.

ಕೊರೊನ ವೈರಸಿನಿಂದಾಗಬಹುದಾದ ಪೂರ್ಣಪ್ರಮಾಣದ ಆರ್ಥಿಕಹಾನಿಯನ್ನು ಇನ್ನೂ ಅಂದಾಜು ಮಾಡಲಾಗಿಲ್ಲ. ಆದರೆ, 2020ರ ಆರ್ಥಿಕ ಮುನ್ನೋಟಗಳು ನಿರಂತರವಾಗಿ ಕುಸಿಯುತ್ತಲೇ ಇವೆ. ಮಾತ್ರವಲ್ಲ, ಪ್ರತಿದಿನ, ಅದರ ದೈನಂದಿನ ಮಟ್ಟದ ಹಾನಿಪ್ರಮಾಣ ವರದಿಯಾಗುತ್ತಿದೆ. ಅಮೆರಿಕಾದ ಷೇರುಗಳು ತಮ್ಮ ಸಾರ್ವಕಾಲಿಕ ಗರಿಷ್ಠಕ್ಕಿಂತ ಶೇಕಡಾ 35ರಷ್ಟು ಕೆಳಸ್ತರ ಮುಟ್ಟಿದೆ. ಈ ಕುಸಿತವು 2008ರ ಆರ್ಥಿಕ ಹಿಂಜರಿತದ ಅರ್ಧಪ್ರಮಾಣವಾಗಿದೆ. ಬ್ರೆಜಿಲ್ ಸೇರಿದಂತೆ, ಅಭಿವೃದ್ಧಿಹೊಂದುತ್ತಿರುವ ದೇಶಗಳಾದ ಟರ್ಕಿ ಮತ್ತು ಮೆಕ್ಸಿಕೊ, ತಮ್ಮ ಸಾರ್ವಕಾಲಿಕ ಗರಿಷ್ಠಕ್ಕಿಂತ ಶೇಕಡಾ 70ರಷ್ಟು ಕುಸಿತವನ್ನು ಕಂಡಿವೆ. ಇನ್ನೂ ಅನೇಕ ದೇಶಗಳು ತಮ್ಮ 2008ರ ಕನಿಷ್ಠಕ್ಕಿಂತ ಕಡಿಮೆ ಪ್ರಮಾಣದ ವಹಿವಾಟು ನಡೆಸುತ್ತಿವೆ.

ಪ್ರಸ್ತುತ ಜಾಗತಿಕ ಆರ್ಥಿಕ ದುಸ್ಥಿತಿ, ಕಳೆದ ಶತಮಾನದಿಂದ ಎದುರಿಸುತ್ತಿರುವ ಎಂಟನೇ ಆರ್ಥಿಕ ಹಿಂಜರಿತವಾಗಿದೆ. ಇದು, ಅಭಿವೃದ್ಧಿಹೊಂದುತ್ತಿರುವ ರಾಷ್ಟçಗಳನ್ನು ವಿಶಿಷ್ಟ ಸವಾಲುಗಳಲ್ಲಿ ಸಿಲುಕಿಸಿದೆ.  ಯಾಕೆಂದರೆ, ಇವುಗಳಿಗೆ, ಅಭಿವೃದ್ಧಿಹೊಂದಿದ ದೇಶಗಳಂತೆ, ಹೆಚ್ಚಿನ ಪ್ರಮಾಣದ ಆರ್ಥಿಕ ಹಿಂಜರಿತವನ್ನು ತಡೆಯುವ ಸಂಪನ್ಮೂಲಗಳಿಲ್ಲ. ಜೊತೆಗೆ, ಈ ದೇಶಗಳಲ್ಲಿನ ದಟ್ಟ ಜನಸಂದಣಿಯ ವಾಸ್ತವಸ್ಥಿತಿಯಿಂದಾಗಿ, ವೈರಸ್ ಹರಡದಂತೆ ಸಾಮಾಜಿಕ ದೂರಕಾಯುವ ನಿಯಮಗಳನ್ನೂ ಅಳವಡಿಸಲು ಕಷ್ಟವಾಗುತ್ತದೆ. ಒಂದು ವೇಳೆ, ಈ ರಾಷ್ಟçಗಳು ಕಠಿಣ ಲಾಕ್‌ಡೌನ್ ವಿಧಿಸಿದರೆ, ಅವುಗಳ ಅಶಕ್ತ ನಾಗರಿಕಸೇವಾ ಯೋಜನೆಗಳು, ನಿರುದ್ಯೋಗಿ ಕಾರ್ಮಿಕರನ್ನು ದೀರ್ಘಕಾಲ ಬೆಂಬಲಿಸಲು ವಿಫಲವಾಗುತ್ತವೆ.

ಈ ನಿಟ್ಟಿನಲ್ಲಿ, ಅಮೇರಿಕಾ ತನ್ನ ಆರ್ಥಿಕ ಬೆಳವಣಿಗೆಯ ನಿರಂತರತೆ ಕಾಪಾಡಲು ಪ್ರೋತ್ಸಾಹಕ ಕ್ರಮವಾಗಿ, ವಾರ್ಷಿಕ ಆರ್ಥಿಕ ಉತ್ಪಾದನೆಯ ಸುಮಾರು ಶೇಕಡಾ 10ರಷ್ಟು ಮೊತ್ತವನ್ನು ಮುಂಗಡವಾಗಿ ಖರ್ಚುಮಾಡಲು ನಿರ್ಧರಿಸಿದೆ. ಅದೇ ರೀತಿ, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ಕೂಡ ಶೇಕಡಾ 15ರಷ್ಟು ಅಥವಾ ಹೆಚ್ಚಿನ ಮೊತ್ತವನ್ನು ಖರ್ಚುಮಾಡಲು ಯೋಜಿಸಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶ್ರೀಮಂತ ರಾಷ್ಟಗಳು ಸಾಲ ಮಾಡುವ ಮತ್ತು ಮುಕ್ತವಾಗಿ ಖರ್ಚುಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಆದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಈ ಐಷಾರಾಮಿಯಿಲ್ಲ. ಕೆಲವು ದೇಶಗಳು, ತಮ್ಮ ಆರ್ಥಿಕ ಉತ್ಪಾದನೆಯ ಶೇಕಡಾ 1 ರಿಂದ 3ರಷ್ಟು ಮುಂಗಡ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇನ್ನು ಕೆಲವು ದೇಶಗಳು, ಈಗಾಗಲೇ ನಿಗದಿಯಾಗಿದ್ದ ಮುಂಗಡ ಹಣವನ್ನು ಸೇರಿಸಿ ಯೋಜನೆ ಘೋಷಿಸುತ್ತಾ, ಸುಳ್ಳು ಲೆಕ್ಕಾಚಾರ ತೋರಿಸುತ್ತಿದ್ದಾರೆ. ಒಂದು ವೇಳೆ, ಈ ರೀತಿ ಹೆಚ್ಚು ಖರ್ಚು ತೋರಿಸಿ ಹೆಚ್ಚು ಸಾಲ ಪಡೆದರೆ, ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳುವುದರ ಜೊತೆಗೆ, ಕರೆನ್ಸಿಯಲ್ಲಿ ಕುಸಿತ ಉಂಟಾಗುವ ಅಪಾಯವಿದೆ.  ಕ್ರಮೇಣ, ಇದು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.

ಈ ಆತಂಕದ ಸೂಚನೆಗಳು ಈಗಾಗಲೇ ಕಾಣಿಸುತ್ತಿವೆ. ಒಂದು ದಶಕದ ಜಾಗತಿಕ ದುರ್ಬಲ ಆರ್ಥಿಕ ಬೆಳವಣಿಗೆಯಿಂದ ಚೇತರಿಸಿಕೊಳ್ಳುತ್ತಿರುವ ಅಭಿವೃದ್ಧಿಶೀಲ ರಾಷ್ಟಗಳಿಗೆ, ಈಗ ಆರ್ಥಿಕ ಬಿಕ್ಕಟ್ಟಿಕ್ಕಿಂತ ಹೆಚ್ಚು ಆಘಾತ ತರಿಸುವ ಈ ಸಾಂಕ್ರಾಮಿಕ ರೋಗ ಪ್ರವೇಶಿಸಿದೆ. ವಿಶೇಷವೆಂದರೆ, ಈ ಸರ್ಕಾರಗಳು 2008ಕ್ಕಿಂತ ಮೊದಲು ಸಮತೋಲಿತ ಬಜೆಟ್, ಹಾಗು ಆರೋಗ್ಯಕರ ಆರ್ಥಿಕತೆ ಹೊಂದಿದ್ದವು. ಎಷ್ಟೆಂದರೆ, ಅಂತರರಾಷ್ಟಿಯ ಹಣಕಾಸು ಸಂಸ್ಥೆ, ಗ್ರಾಹಕರ ಕೊರತೆಯಿಂದಾಗಿ ತನ್ನ ಆರ್ಥಿಕ ಭದ್ರತೆ ಕಾರ್ಯಕ್ರಮವನ್ನು ಮುಚ್ಚಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತಿತ್ತು.

ಸಧ್ಯಕ್ಕೆ, ಈ ದೇಶಗಳ ಆರ್ಥಿಕ ಸ್ವರೂಪ, ತಮ್ಮ ಹಿಂದಿನ ಸಮತೋಲಿತ ಬಜೆಟ್ ಸ್ಥಿತಿಯಿಂದ, ದೊಡ್ಡ ಪ್ರಮಾಣದ ಬಜೆಟ್ ಕೊರತೆಗಳಾಗಿ ಮಾರ್ಪಟ್ಟಿವೆ. ಇದರೊಂದಿಗೆ, ಈ ಸಾಂಕ್ರಾಮಿಕ ರೋಗದಿಂದಾಗಿ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಅರ್ಜೆಂಟೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ತಮ್ಮ ಬಜೆಟ್ ಮತ್ತು ಚಾಲ್ತಿ ಖಾತೆ ಎರಡರಲ್ಲೂ ದೊಡ್ಡ ಪ್ರಮಾಣದ ‘ಅವಳಿ ಕೊರತೆ’ ಎದುರಿಸುತ್ತಿವೆ (ಅಂದರೆ, ಈ ರಾಷ್ಟçಗಳು ತಮ್ಮ ನಿಗದಿತ ಖರ್ಚು ಮತ್ತು ಅದರ ಆಧಾರದ ಮೇಲೆ ವಿದೇಶದಲ್ಲಿ ಎಷ್ಟು ಸಾಲ ಪಡೆಯಬೇಕು ಎಂಬುದರ ನಡುವಿನ ವ್ಯತ್ಯಾಸ). ಇದರಿಂದ ಆತಂಕಕ್ಕೊಳಗಾದ ಹೂಡಿಕೆದಾರರು, ತಮ್ಮ ಆರ್ಥಿಕ ಸುರಕ್ಷತೆಗಾಗಿ ಅಮೆರಿಕಾದ ಡಾಲರಿನಲ್ಲಿ ವ್ಯವಹರಿಸಲು ನಿರ್ಧರಿಸುತ್ತಿದ್ದಾರೆ. ಈ ಪ್ರಕ್ರಿಯೆಯಿಂದಾಗಿ, ಆಯಾಯ ದೇಶಗಳ ಆರ್ಥಿಕ ಕರೆನ್ಸಿ ಮತ್ತು ಹಣ ಮರುಪಾವತಿಸುವ ಸಾಮರ್ಥ್ಯ ದುರ್ಬಲಗೊಳ್ಳುತ್ತಿದೆ.

ಇದರ ಫಲವಾಗಿ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಭದ್ರತೆಗೆ ವಿಪರೀತ ಬೇಡಿಕೆಯಾಗಿದೆ. ಇದಕ್ಕೆ ನಿದರ್ಶನವಾಗಿ, ಈ ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟು, ಅಂತಾರಾಷ್ಟಿಯ ಹಣಕಾಸು ಸಂಸ್ಥೆಯನ್ನು ಪುನಃ ವ್ಯವಹಾರಕ್ಕೆ ಇಳಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಸಾಮಾನ್ಯವಾಗಿ ಈ ಸಂಸ್ಥೆ ಆರ್ಥಿಕ ಸಹಾಯಕ್ಕಾಗಿ 10 ರಿಂದ 15 ಅರ್ಜಿಗಳನ್ನು ಸ್ವೀಕರಿಸುತ್ತಿತ್ತು. ಆದರೆ, ಪ್ರಸ್ತುತ ಸುಮಾರು 80 ದೇಶಗಳು ತುರ್ತು ಆರ್ಥಿಕ ಸಹಾಯಕ್ಕಾಗಿ ವಿನಂತಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ, ಪ್ರಸಕ್ತ ಬಿಕ್ಕಟ್ಟನ್ನು ನಿಭಾಯಿಸಲು ತನ್ನಲ್ಲಿರುವ ಒಂದು ಟ್ರಿಲಿಯನ್ ಡಾಲರ್ ಆಪತ್ಕಾಲದ ನಿಧಿ ಸಾಕಾಗುತ್ತದೆಯೇ ಎಂಬ ಕಳವಳವಾಗಿದೆ. ಈಗಾಗಲೇ, ಈಕ್ವೆಡಾರ್‌ನಿಂದ ಹಿಡಿದು ಜಾಂಬಿಯಾದವರೆಗೆ ಹೆಚ್ಚಿನ ದೇಶಗಳು, ತಮ್ಮ ವಿದೇಶಿ ಸಾಲದಾತರಲ್ಲಿ ಸಾಲಮನ್ನ ಮಾಡುವಂತೆ ಬೇಡಿಕೊಳ್ಳುತ್ತಿವೆ.

ಈ ಆರ್ಥಿಕ ಕುಸಿತದಲ್ಲಿ, ಜಾಗತಿಕ ವ್ಯವಹಾರವೂ ಒಂದು ಪಾತ್ರವನ್ನು ವಹಿಸಿದೆ. 2008ರ ನಂತರ ಭಾರತ, ಇಂಡೋನೇಷ್ಯಾ ಮತ್ತು ಬ್ರೆಜಿಲ್‌ನಂತಹ ಅನೇಕ ಅಭಿವೃದ್ಧಿಹೊಂದುತ್ತಿರುವ ದೇಶಗಳು, ತಮ್ಮ ದೇಶೀಯ ಗ್ರಾಹಕರ ಬೇಡಿಕೆಯಿಂದ ಭಾಗಶಃ ರಕ್ಷಿಸಲ್ಪಟ್ಟಿದ್ದವು. ಆದರೆ, ಈಗ ಕೊರೊನದಿಂದಾಗಿ ಅಂತರರಾಷ್ಟಿçÃಯ ವ್ಯಾಪಾರ ಇನ್ನಷ್ಟು ಕುಸಿಯುವುದರೊಂದಿಗೆ, ದೇಶೀಯ ವಾಣಿಜ್ಯವೂ ಸ್ತಬ್ಧವಾಗಿದೆ.

ಪ್ರಸ್ತುತ, 15 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಸುಮಾರು ಎರಡು ನೂರು ಕೋಟಿ ಜನರು ಆರ್ಥಿಕ ಸವಲತ್ತಿಲ್ಲದ ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ. ವಿಶೇಷವೆಂದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ನಿರುದ್ಯೋಗ ವಿಮೆ ಉದ್ಯೋಗ ಕಳೆದುಕೊಳ್ಳುವ 10ರಲ್ಲಿ ಆರು ಜನರನ್ನು ರಕ್ಷಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಅಭಿವೃದ್ಧಿಶೀಲ ರಾಷ್ಟçಗಳಲ್ಲಿ 10 ಜನರಲ್ಲಿ ಕೇವಲ ಒಬ್ಬರಿಗೆ ಮಾತ್ರ ಇದರ ಲಾಭ ಸಿಗುತ್ತದೆ. ಇಲ್ಲಿ ಹೆಚ್ಚಿನ ಜನರು ಖಾಯಂ ಉದ್ಯೋಗ ಹೊಂದಿರುವುದಿಲ್ಲ.

ಈ ವಾಸ್ತವದಿಂದಾಗಿಯೇ, ಅಭಿವೃದ್ಧಿಶೀಲ ದೇಶಗಳಲ್ಲಿನ ಅನೇಕ ಆರ್ಥಿಕತಜ್ಞರು, ಶ್ರೀಮಂತ ದೇಶಗಳಲ್ಲಿ ಅಳವಡಿಸಿಕೊಂಡ ಕ್ರಮಗಳನ್ನು ತಮ್ಮ ದೇಶಗಳು ಅನುಕರಿಸಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಹ ಟ್ವೀಟ್ ಮಾಡಿದಂತೆ, ‘ದಕ್ಷಿಣ ಏಷ್ಯಾದ ದೇಶಗಳು ವೈರಸನ್ನು ನಿಯಂತ್ರಿಸಲು “ಲಾಕ್ ಡೌನ್” ಮಾಡುವಾಗ, ಜನರು ಹಸಿವಿನಿಂದ ಸಾಯುವುದಿಲ್ಲ ಮತ್ತು ಆರ್ಥಿಕತೆ ಕುಸಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದರ ಮೂಲಕ ಕಠಿಣ ಆಯ್ಕೆ ಮಾಡಬೇಕಾಗುತ್ತದೆ’.

ಮುಂದಿನ ಆರ್ಥಿಕ ಹೆಜ್ಜೆ, ವೈರಸಿನ ಮೇಲೆ ಅವಲಂಬಿತವಾಗಿದೆ. ಈಗಾಗಲೇ, ಕೆಲವು ವ್ಯಾಖ್ಯಾನಕಾರರು ಸಧ್ಯದ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸುತ್ತಿದ್ದಾರೆ. ಸಧ್ಯದ ಪರಿಸ್ಥಿತಿ ಎದುರಿಸಲು, ಈ ವರ್ಷ ಜಾಗತಿಕ ಬೆಳವಣಿಗೆಯನ್ನು ಶೇಕಡಾ 3ರಷ್ಟು ಕಡಿಮೆಗೊಳಿಸಬೇಕು ಮತ್ತು ಮುಂದಿನವರ್ಷ ಚೇತರಿಸಿಕೊಳ್ಳುವ ಪ್ರಯತ್ನಪಡಬೇಕು ಎಂದು ಆರ್ಥಿಕತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೋಲಿಸಿದರೆ, 1929 ಮತ್ತು 1932ರ ನಡುವೆ, ಜಾಗತಿಕ ಬೆಳವಣಿಗೆಯನ್ನು ಶೇಕಡಾ 6ರಷ್ಟು ಕಡಿಮೆಮಾಡಲಾಗಿತ್ತು. ಆ ಕಾಲಘಟ್ಟದ ಸರ್ಕಾರಗಳು ಆರ್ಥಿಕ ಕುಸಿತ ತಡೆಯಲು ತಡವಾಗಿ ಎಚ್ಚೆತ್ತಿದ್ದವು. ಆದರೆ ಪ್ರಸಕ್ತ, ಒಟ್ಟಾರೆಯಾಗಿ 10 ಟ್ರಿಲಿಯನ್ ಡಾಲರ್ ನೆರವನ್ನು ಮೀಸಲಿಡಲಾಗಿದೆ. ಇದು, 2008 ಮತ್ತು 2009ರ ನಡುವೆ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಖರ್ಚುಮಾಡಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು.

ಕಳೆದ ವಾರ ವಿಶ್ವದಾದ್ಯಂತ, ಮುಖ್ಯವಾಗಿ ಸ್ಪೇನ್, ಇಟಲಿ ಮತ್ತು ಜರ್ಮನಿ ಸೇರಿದಂತೆ ನಿರ್ಣಾಯಕ ಹಾಟ್ ಸ್ಪಾಟ್‌ಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂದು ಅಂಕಿಅಂಶಗಳು ಸೂಚಿಸುತ್ತಿವೆ. ಇದರೊಂದಿಗೆ, ತಮ್ಮ ದೇಶಗಳಲ್ಲಿರುವ ಗುಣಾತ್ಮಕ ಅಂಶಗಳಾದ ಬಿಸಿಲಿನ ತಾಪಮಾನ ಮತ್ತು ಯುವಜನತೆಯಿಂದಾಗಿ, ವೈರಸ್ ತಮ್ಮ ದೇಶಗಳ ಗಡಿ ದಾಟಲಾರದು ಎಂದು ಅನೇಕ ಅಭಿವೃದ್ಧಿಶೀಲ ರಾಷ್ಟನಾಯಕರು ಈಗ ಆಶಿಸುತ್ತಿದ್ದಾರೆ.

ಯಾಕೆಂದರೆ, ಯುವಜನತೆಗೆ ಈ ವೈರಸ್ ತುಂಬಾ ಕಡಿಮೆ ಅಪಾಯಕಾರಿ. ಒಂದು ಅಂಕಿಅಂಶದ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಾವಿನ ಪ್ರಮಾಣ ಎಂಟು ಪಟ್ಟು ಹೆಚ್ಚಾಗಿದೆ. ವಿಶೇಷವಾಗಿ, ಅಭಿವೃದ್ಧಿಶೀಲ ದೇಶಗಳಲ್ಲಿ, ಜನಸಂಖ್ಯೆಯ ಕೇವಲ ಶೇಕಡಾ 10ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟಿದ್ದಾರೆ. ಇದಕ್ಕೆ ಹೋಲಿಸಿದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇಕಡಾ 25ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟಿದ್ದಾರೆ. ಈ ಅಂಶವು ಕೂಡ ಅಭಿವೃದ್ಧಿಶೀಲ ದೇಶಗಳಿಗೆ ಅನುಕೂಲವಾಗಿದೆ.

ವಿಪರ್ಯಾಸವೆಂದರೆ, ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆ, ತಮ್ಮ ನಿಯಂತ್ರಣ ಮೀರಿ ಪ್ರಾಕೃತಿಕ ಶಕ್ತಿಗಳಿಂದ ಹಾನಿಗೊಳಗಾಗುತ್ತವೆ. ಆದರೆ, ಪರಿಹಾರಕ್ಕಾಗಿ ಪುನಃ ಅದೇ ಶಕ್ತಿಗಳಿಗೆ ಮೊರೆ ಹೋಗಬೇಕಾಗುತ್ತದೆ. ಜೊತೆಗೆ, ಇವು ಶ್ರೀಮಂತ ರಾಷ್ಟಗಳಂತೆ, ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ನಿಷ್ಕಿçಯವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ, ಈ ದೇಶಗಳು ತಮ್ಮ ಕಟುವಾಸ್ತವ ಒಪ್ಪಿಕೊಂಡಿವೆ. ಅದೇನೆಂದರೆ, ಕೊರೊನಾ ವೈರಸ್ ತಡೆಗಟ್ಟಲು ದೀರ್ಘಕಾಲದ ಲಾಕ್ ಡೌನ್ ಜಾರಿಗೊಳಿಸಿದರೆ, ಜನರಿಗೆ ಅತೀವ ಆರ್ಥಿಕಹಾನಿ ಉಂಟಾಗುವುದರಿಂದ, ಅವರು ಒಂದು ಸೀಮಿತ ಅವಧಿಯ ಯುದ್ಧ ನಿಭಾಯಿಸಲು ಮಾತ್ರ ಶಕ್ತರು.

ಮೂಲ: ದಿ ನ್ಯೂ ಯಾರ್ಕ್ ಟೈಮ್ಸ್  ಅನುವಾದ: ಡಾ.ಜ್ಯೋತಿ

Leave a Reply

Your email address will not be published.