ಅಭಿವ್ಯಕ್ತಿ ಸ್ವಾತಂತ್ರದ ಹಿಂದಿನ ಸಂಚುಗಳು

ಯಶವOತ ಟಿ.ಎಸ್.

ಫ್ರಾನ್ಸ್ನಲ್ಲಿ ನಡೆದ ಶಿಕ್ಷಕನ ಕೊಲೆ ಮತ್ತು ಅಲ್ಲಿನ ಭಯೋತ್ಪಾದಕ ಕೃತ್ಯಗಳನ್ನು ನಾವೆಲ್ಲರೂ ಖಂಡಿಸಬೇಕು ಎಂಬುದು ಮಾನವೀಯ ದೃಷ್ಟಿಯಿಂದ ಸರಿ. ಆದರೆ ತಾತ್ವಿಕ, ಐತಿಹಾಸಿಕ ಮತ್ತು ಸಾಂಸ್ಕತಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಫ್ರಾನ್ಸ್ ದೇಶದ ದುರಹಂಕಾರ ಮತ್ತು ಕೀಳು ಮಟ್ಟದ ನಡೆಯನ್ನು ಕೂಡ ಖಂಡಿಸಬೇಕು.

ಕೆಲದಿನಗಳ ಹಿಂದಷ್ಟೇ ನಮ್ಮನ್ನೆಲ್ಲಾ ಬೆಚ್ಚಿಬೀಳಿಸುವಂತಹ ಎರಡು ಘಟನೆಗಳು ಫ್ರಾನ್ಸ್ ದೇಶದಲ್ಲಿ ನಡೆದವು; ಪ್ರವಾದಿ ಮೊಹಮ್ಮದರ ಬಗೆಗೆ ಚಾರ್ಲಿ ಹೆಬ್ದೋ ಪ್ರಕಟಿಸಿದ್ದ ವ್ಯಂಗ್ಯ ಚಿತ್ರಗಳನ್ನು ತನ್ನ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ತಲೆ ಕಡಿದ ಒಂದು ಘಟನೆ ಮತ್ತು ಆ ಘಟನೆಗೆ ಫ್ರೆಂಚ್ ಸರ್ಕಾರ ಪ್ರತಿಕ್ರಿಯಿಸಿದ ರೀತಿ.

ಶಿಕ್ಷಕನ ಹತ್ಯೆಯ ಬರ್ಬರತೆ ಒಂದೆಡೆಯಾದರೆ ಶಿಕ್ಷಕನ ಹತ್ಯೆಯನ್ನು ಖಂಡಿಸಲು ಫ್ರೆಂಚ್ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ಆ ವ್ಯಂಗ್ಯ ಚಿತ್ರಗಳನ್ನು ಸರ್ಕಾರಿ ಕಟ್ಟಡಗಳ ಮೇಲೆ ಪ್ರದರ್ಶಿಸಿದ್ದು ಇಡೀ ಜಗತ್ತಿಗೆ ಇನ್ನೂ ಬರ್ಬರವಾಗಿ ತೋರಿತು. ಇದರ ಪರಿಣಾಮವಾಗಿ ವಿಶ್ವದಾದ್ಯಂತ ಮುಸಲ್ಮಾನರು ಈ ನಡೆಯನ್ನು ತೀವ್ರವಾಗಿ ಖಂಡಿಸಿದರು. ಯಾವ ಖಂಡನೆಯನ್ನೂ ಲೆಕ್ಕಿಸದ ಫ್ರೆಂಚ್ ಸರ್ಕಾರ ತನ್ನ ನಡೆಯನ್ನು ಅಭಿವ್ಯಕ್ತಿ ಸ್ವಾತಂತ್ರö್ಯದ ಹಕ್ಕಿನ ನೆಲೆಗಟ್ಟಿನಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು. ಫ್ರೆಂಚ್ ಸರ್ಕಾರದ ನಡೆ ಮತ್ತದರ ವರ್ತನಾಶೈಲಿಯನ್ನು ಹೇಗೆ ಗ್ರಹಿಸಬೇಕು? ವಸಾಹತುಶಾಹಿ ಇತಿಹಾಸವುಳ್ಳ ಫ್ರಾನ್ಸ್ ಮತ್ತೊಂದು ಸಂಸ್ಕೃತಿಯ ಜೊತೆಗೆ ಹೇಗೆ ನಡೆದುಕೊಳ್ಳಬೇಕು? ಈ ನಿಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನ ಹುಟ್ಟಿಗೆ ಕಾರಣನಾದ ವಸಾಹತುಕಾರನ ಈ ಸಾಂಸ್ಕತಿಕ ನಡೆಯಲ್ಲಿ ಅಡಗಿರುವ ಬೂಟಾಟಿಕೆಯನ್ನು ಅರ್ಥೈಸುವ ಮಾಪನಗಳು ಯಾವುವು?

ಚಾರ್ಲಿ ಹೆಬ್ದೋ ಪತ್ರಿಕೆಯ ವ್ಯಂಗ್ಯ, ಫ್ರಾನ್ಸ್ ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಸ್ವಾತಂತ್ರ್ಯಗಳನ್ನು ವಿಶ್ವಾತ್ಮಕಗೊಳಿಸುವುದು ಒಂದು ರಾಜಕೀಯ ನಡೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕರ ವಿಕಸನಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯವಶ್ಯಕ. ಆದರೆ ಇಲ್ಲಿ ಯಾರು ಈ ಹಕ್ಕಿನ ಪ್ರತಿಪಾದನೆ ಮಾಡುತ್ತಿದ್ದಾರೆಂದು ನಾವು ಗಮನಿಸಬೇಕು. ಇಲ್ಲಿ ಒಂದು ಬಲಾಢ್ಯ ಸಂಸ್ಕöÈತಿ ಮತ್ತೊಂದು ತುಳಿತಕ್ಕೊಳಪಟ್ಟ ಸಂಸ್ಕöÈತಿಯನ್ನು ಹೀನಾಯವಾಗಿ ಕಾಣುತ್ತಿರುವುದು ಗೋಚರವಾಗುತ್ತಿದೆಯೇ ಹೊರತು ವಸಾಹತುಕಾರ ಬಡಾಯಿ ಕೊಚ್ಚುವಂತೆ ಧಾರ್ಮಿಕ ಸುಧಾರಣೆಯ ಸದುದ್ದೇಶ ಕಾಣಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಜೊತೆಗೆ, ತಮ್ಮ ಸಂಸ್ಕೃತಿಯೊಳಗಿನ ವಿಚಾರವನ್ನು ವ್ಯಂಗ್ಯದಿOದ ಟೀಕಿಸಿ ಸ್ವ-ವಿಮರ್ಶೆಯನ್ನು ಅಭಿವ್ಯಕ್ತಿಗೊಳಿಸಲಿಲ್ಲ. ಆದ್ದರಿಂದ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಹೆಸರಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರವೊಂದರ ಉದ್ಧಟತನ ಮತ್ತು ದುರಹಂಕಾರದ ನಡೆಯೇ ಹೊರತು ಪ್ರಗತಿಪರ ನಡೆಯಂತೂ ಖಂಡಿತ ಅಲ್ಲ.

ಇಂದಿನ ಪ್ರಪಂಚದ ಬಹುತೇಕ ಎಲ್ಲ ಪ್ರಜಾತಾಂತ್ರಿಕ ರಾಜ್ಯಗಳ ರಾಜಕೀಯ ವಿಚಾರಧಾರೆಗಳ ಮೂಲವನ್ನು ಒಮ್ಮೆ ಅವಲೋಕಿಸಿದರೆ ಎಲ್ಲರ ಗಮನವು ಯೂರೋಪಿಯನ್ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಕೇಂದ್ರೀಕೃತವಾಗುತ್ತದೆ. ಅಷ್ಟೇ ಏಕೆ, ಇಂದಿನ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಹುಟ್ಟು ಮತ್ತು ಬೆಳವಣಿಗೆಯೇ ಯೂರೋಪಿನ ನೆಲದಲ್ಲಾದದ್ದು. ಈ ಯೂರೋಪಿಯನ್ ರಾಜ್ಯಗಳು ವಿಶ್ವದಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸಿ ಜಗತ್ತನ್ನೇ ಆಳಿದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಯೂರೋಪಿನ ಹೊರಗೆ ನಡೆಯುತ್ತಿದ್ದ ಈ ವಸಾಹತೀಕರಣದ ಕಾಲದಲ್ಲಿ ಯೂರೋಪಿನ ಒಳಗೆ ಕೆಲವು ಕುತೂಹಲಕಾರಿ ಘಟನೆಗಳು ನಡೆದವು.

ಯೂರೋಪಿನೊಳಗೆ ವೈಚಾರಿಕ ಮತ್ತು ವೈಜ್ಞಾನಿಕ ಕ್ರಾಂತಿ ಫಲವಾಗಿ ಅಮೆರಿಕಾದ ಸ್ವಾತಂತ್ರ್ಯ ಕ್ರಾಂತಿ ಹಾಗು ಫ್ರೆಂಚ್ ಕ್ರಾಂತಿಗಳು ವಿಶ್ವವನ್ನೇ ತಮ್ಮತ್ತ ನೋಡುವಂತೆ ಮಾಡಿದವು. ಯೂರೋಪಿನೊಳಗೆ ವೈಯಕ್ತಿಕ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಹಲವು ಪರಿಕಲ್ಪನೆಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪರಿವರ್ತಿಸುತ್ತಾ ಸಮಾಜದ ಭೂಮಿಕೆಯನ್ನೇ ಬದಲಾಯಿಸಿದ ಕಾಲವದು. ಆದರೆ, ಹೊರಗೆ ಬೇರೊಂದು ಕ್ರಾಂತಿಯೇ ನಡೆಯುತ್ತಿತ್ತು. ಅದು ಸಂಪತ್ತು ಮತ್ತು ಅಧಿಕಾರಕ್ಕಾಗಿ ಜನ-ಸಂಸ್ಕೃತಿಗಳನ್ನೊಡೆದು ಆಳುವ ಕ್ರೂರ ಕ್ರಾಂತಿ.

ಈ ಹಿನ್ನೆಲೆಯಲ್ಲಿ ವಸಾಹತೋತ್ತರ ವಿದ್ವಾಂಸರ ವಾದವನ್ನು ಪರಿಗಣಿಸಿದರೆ, ವಸಾಹತುಗಳಲ್ಲಿ ತಮ್ಮ ಅತ್ಯಂತ ಶ್ರೇಷ್ಠವಾದ ತಾತ್ವಿಕ ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಮುಂತಾದವುಗಳನ್ನು ಪ್ರಸರಣ ಮಾಡಬೇಕು ಎಂಬುದನ್ನು ಪರಿಗಣಿಸದೆ ತಮ್ಮ ಪೊಳ್ಳು ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸಿ ಆ ಪ್ರದೇಶಗಳ ಜನಜೀವನವನ್ನೇ ಬುಡಮೇಲು ಮಾಡಿದರು ಎಂದು ಅರ್ಥವಾಗುತ್ತದೆ. ಆದ್ದರಿಂದ, ಇಂದು ನಾವು ಮತ್ತು ನಮ್ಮಂತಹ ಹಲವಾರು ದೇಶಗಳು ಅನುಭವಿಸುವ ಎಷ್ಟೋ ಸಮಸ್ಯೆಗಳ ಮೂಲ ಹುಡುಕಿದರೆ ಸಿಗುವ ಉತ್ತರ ಇದೇ ಪಾಶ್ಚಿಮಾತ್ಯ ವಸಾಹತೀಕರಣ. ಫ್ರಾನ್ಸ್ ವಸಹಾತುಗಳು ಸೃಷ್ಟಿಸಿದ ರಾಷ್ಟçಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿದೆ.

ಬಿಳಿ ಮನುಷ್ಯನ ಹೊರೆ ಎಂಬ ಪರಿಕಲ್ಪನೆಯು ತನ್ನ ವಸಾಹತುವನ್ನು ನಾಗರಿಕಗೊಳಿಸುವ ಮೂಲಕ ಅಭಿವ್ಯಕ್ತಿಯಾಗುತ್ತಿತ್ತು ಎಂಬ ವಾದವು ವಸಾಹತೋತ್ತರ ವಾದದ ಕಣ್ಣಿಗೆ ತಾವು ಸೃಷ್ಟಿಸಿದ ನರಕವ ಕಂಡು ಅದನ್ನು ಸರಿಪಡಿಸಲಾಗದೆ ಕಾಲ್ಕೀಳುವ ಬೇಜವಾಬ್ದಾರಿತನ ವಸಾಹತೀಕರಣದ ಒಂದು ಮುಖ್ಯ ಲಕ್ಷಣ ಎಂದು ತೋರುತ್ತದೆ. ವಸಾಹತುಗಳ ಸಂಪತ್ತಿನ ಮೇಲೆ ಮಾತ್ರ ಕಣ್ಣಿಟ್ಟಿದ್ದ ಯೂರೋಪಿಯನ್ನರು ಅಲ್ಲಿನ ಮೂಲನಿವಾಸಿಗಳ ಬಗೆಗೆ ಕಿಂಚಿತ್ತೂ ಕಾಳಜಿ ತೋರದೆ ಆ ಜನರನ್ನು ಒಡೆದು ಆಳುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ತಮ್ಮ ದೇಶಗಳಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಹಲವಾರು ತಾತ್ವಿಕ-ರಾಜಕೀಯ ಪರಿಕಲ್ಪನೆಗಳನ್ನು ಮೂಲಭೂತ ಹಕ್ಕುಗಳನ್ನಾಗಿ ನೀಡಿದ್ದಷ್ಟೇ ಅಲ್ಲದೆ ಅವುಗಳನ್ನು ಸಾಮಾಜಿಕ ರೂಢಿಗಳಾಗಿ ಬೆಳಸಿ ಸಲಹುತ್ತಿದ್ದ ಈ ಯೂರೋಪಿಯನ್ನರು ತಮ್ಮ ವಸಾಹತುಗಳಲ್ಲಿ ಅವರ ವಿಚಾರಧಾರೆಯನ್ನೇ ವಿರೋಧಿಸುವಂತಹ ಕೆಲಸ ಮಾಡುತ್ತಿದ್ದರು.

ಯೂರೋಪಿಯನ್ನರು ಎಂದೂ ಕೂಡ ವಸಾಹತುಗಳ ಜನರನ್ನು ಮತ್ತವರ ಸಂಸ್ಕೃತಿಯನ್ನು ಶ್ರೇಷ್ಠ ಮತ್ತು ಗುಣಾತ್ಮಕವೆಂದು ಪರಿಗಣಿಸಲಿಲ್ಲ. ಹಾಗೆಂದು ವಸಾಹತುಗಳ ಜನರಿಗೆ ಶ್ರೇಷ್ಠ ತಾತ್ವಿಕ ಪರಿಕಲ್ಪನೆಗಳ ಪರಿಚಯವನ್ನು ಮಾಡುವ ಕೆಲಸವನ್ನೂ ಸರಿಯಾಗಿ ಮಾಡಲಿಲ್ಲ. ಭಾರತದಂತಹ ಒಂದು ಕಾಲೋನಿಯಲ್ಲಿ ಬ್ರಿಟಿಷರಿಗೆ ಬೇಕಾದದ್ದು ಗುಮಾಸ್ತರು ಮತ್ತು ಗುಲಾಮರೇ ಹೊರತು ಶ್ರೇಷ್ಠ ಚಿಂತಕರಾಗಲಿ ರಾಜಕಾರಣಿಗಳಾಗಲಿ ಅಲ್ಲ. ಅದಕ್ಕೇ ಶಿಕ್ಷಣದ ಮಟ್ಟವನ್ನು ಬಹಳ ಕೆಳಸ್ತರದಲ್ಲಿಟ್ಟರು. ಚಿಂತಕ ಶ್ಲಾವೋ ಝಿಝೆಕ್ ಹೇಳುವಂತೆ ಯುರೋಪಿಯನ್ ವಸಹಾತುಶಾಹಿಗಳು ಬಾಯಿಮಾತಿನಲ್ಲಿ ವಸಾಹತಿನ ಜನರ ಅವರ ಸಂಸ್ಕೃತಿಯ ಬಗ್ಗೆ ಕನಿಕರ, ಉತ್ಪ್ರೇಕ್ಷೆ ಮತ್ತು ಕುತೂಹಲವನ್ನು ತೋರಿಸುತ್ತಿದ್ದರೂ ಅವರು ಎಂದೂ ಕೂಡ ಮೂಲನಿವಾಸಿಗಳನ್ನು ಯೂರೋಪಿನ ಜನರಂತೆ ಪರಿವರ್ತಿಸುವ ಕೆಲಸವನ್ನು ಮಾಡಲಿಲ್ಲ. ವಸಹಾತುಗಳ ಆಡಳಿತ ಕಷ್ಟವಾದಾಗ ಅಲ್ಲಿ ಸೃಷ್ಟಿಸಿದ ನರಕವನ್ನು ಬಿಟ್ಟು ತಮ್ಮ ಸಂಪತ್ಭರಿತ ರಾಷ್ಟ್ರಗಳಿಗೆ ಸದ್ದಿಲ್ಲದೇ ಕಾಲ್ಕಿತ್ತು ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಅನಾಥ ವಸಾಹತುಗಳಲ್ಲಿ ಹುಟ್ಟಿದ ಬಹುತೇಕ ಮುಸ್ಲಿಂ ರಾಷ್ಟ್ರಗಳ ವಸಾಹತೋತ್ತರ ಇತಿಹಾಸವನ್ನು ಗಮನಿಸಿದರೆ ನಮಗೆ ಬಹುದೊಡ್ಡ ಸಮಸ್ಯೆಗಳ ಸರಮಾಲೆಯೇ ಕಾಣಸಿಗುತ್ತದೆ. ವಸಾಹತೀಕರಣದ ಪ್ರಭಾವ ಇನ್ನೂ ಜೀವಂತವಾಗಿರುವಾಗಲೇ ನವ ವಸಾಹತೀಕರಣ ಎಂಬ ಪ್ರಕ್ರಿಯೆ ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವೆ ನಡೆದ ಶೀತಲ ಸಮರದ ಫಲವಾಗಿ ಹುಟ್ಟಿತು. ಈ ಪ್ರಕ್ರಿಯೆಯ ಪರಿಣಾಮವಾಗಿ ಮತ್ತೊಂದು ರೀತಿಯ ರಾಜಕೀಯ ಸಂಘರ್ಷ ಮತ್ತು ಸಮಸ್ಯೆಗಳು ಮುಸ್ಲಿಂ ರಾಷ್ಟçಗಳನ್ನು ಆವರಿಸಿದವು.

ಹಲವಾರು ಮುಸ್ಲಿಂ ದೇಶಗಳನ್ನಾಳುತ್ತಿದ್ದ ನಾಯಕರನ್ನು ಅಮೇರಿಕ ಮತ್ತು ಸೋವಿಯತ್ ರಷ್ಯಾ ತಮ್ಮ ಕೈಗೊಂಬೆಗಳನ್ನಾಗಿಸಿಕೊOಡು ತಮ್ಮ ಆಧಿಪತ್ಯ ಸ್ಥಾಪನೆಗಾಗಿ ನಾನಾ ರೀತಿಯ ಅಸಹ್ಯಕರ ಮಾರ್ಗಗಳನ್ನನುಸರಿಸಿ ಆ ದೇಶದ ಪ್ರಗತಿಪರ ಚಿಂತನೆಗಳನ್ನು ಮತ್ತವುಗಳ ಬೆಳವಣಿಗೆಯನ್ನು ನಾಶಪಡಿಸಿದವು. ಆ ಕಾಲದ ಜಗತ್ತಿನ ನವೀನ ಸೆಕ್ಯುಲರ್ ದೇಶಗಳಲ್ಲೊಂದಾಗಿದ್ದ ಅಫ್ಘಾನಿಸ್ತಾನದಲ್ಲಿ ಈ ಶೀತಲ ಸಮರದಿಂದಾಗಿ ಕಟ್ಟರ್ ಸಂಪ್ರದಾಯವಾದಿ ತಾಲಿಬಾನ್ ಸಂಘಟನೆಯನ್ನು ಬೆಳಸಿ ಪೋಷಿಸಿದ್ದು ಇದೇ ಪಾಶ್ಚಿಮಾತ್ಯ ರಾಷ್ಟçಗಳ ಒಕ್ಕೂಟ. ಎರಡು ಮಹಾಶಕ್ತಿಗಳ ಸೊಕ್ಕಿನ ಸಮರಕ್ಕೆ ಸಿಲುಕಿದ ಈ ಬಡ ದೇಶ ಪ್ರಗತಿಪರತೆಯಿಂದ ಜಾರಿ ಸಂಪ್ರದಾಯವಾದಿ ರಾಷ್ಟçವಾದದ್ದು.

1989ರಲ್ಲಿ ಸೋವಿಯತ್ ರಷ್ಯಾದ ಅವನತಿಯಿಂದಾಗಿ ಜಗತ್ತಿನ ಏಕೈಕ ಶಕ್ತಿಯಾಗಿ ಹೊರಹೊಮ್ಮಿ ಪ್ರಪಂಚಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸಾರುವ ಜವಾಬ್ದಾರಿಯನ್ನು ತನ್ನ ಹೆಗಲೇರಿಸಿಕೊಂಡ ಅಮೆರಿಕಕ್ಕೆ ಅಫ್ಘಾನಿಸ್ತಾನ ಬೇಡವಾಯಿತು ಅಲ್ಲಿಂದ ಕಾಲ್ಕಿತ್ತು ಕೈತೊಳೆದುಕೊಂಡ ತಕ್ಷಣ ಅಫ್ಘಾನಿಸ್ತಾನವು ತಾಲಿಬಾನಿ ಹಿಡಿತಕ್ಕೆ ಸಿಲುಕಿತು. ಹೀಗೆ ಅಮೆರಿಕಾ ತನ್ನ ವ್ಯಾಪಾರ ವ್ಯವಹಾರಗಳಿಗೆ ಸೂಕ್ತವಾಗುವಂತೆ ತಾನೇ ಬೆಳಸಿದ ಹಲವಾರು ಮುಸ್ಲಿಂ ರಾಷ್ಟ್ರಗಳ ಸರ್ವಾಧಿಕಾರಿಗಳನ್ನು ಮತ್ತವರ ಸೈನ್ಯಗಳನ್ನು ಉಗ್ರಗಾಮಿಗಳೆಂದು ಕರೆದು, ಆ ದೇಶಗಳ ಮೇಲೆ ದಾಳಿ ನಡೆಸಲು ಮುಂದಾದಾಗ ಹಲವಾರು ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡು ಅಮೆರಿಕಾದ ನೆಲದಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ಮಾಡಲು ಶುರುಮಾಡಿದವು.

2001ರಲ್ಲಿ ಡಬ್ಲೂ.ಟಿ.ಒ. ಕಟ್ಟಡಗಳನ್ನು ಬಿನ್ ಲಾಡೆನ್ ತನ್ನ ಉಗ್ರಗಾಮಿಗಳ ಸಹಾಯದಿಂದ ಹೊಡೆದುರುಳಿಸಿದ ಮೇಲೆ “ವಾರ್ ಆನ್ ಟೆರರ್” (ಭಯೋತ್ಪಾದನೆಯ ಮೇಲಿನ ಸಮರ) ಎಂಬ ಹೊಸ ಯುದ್ಧವನ್ನು ಬುಷ್ ಘೋಷಿಸಿ ಮತ್ತೊಂದು ನರಕಸದೃಶ ಕಾಲಕ್ಕೆ ನಾಂದಿಹಾಡುತ್ತಾನೆ. ಈ ಎಲ್ಲಾ ಯುದ್ಧಗಳಲ್ಲೂ ಅಮೆರಿಕಾದೊಡನೆ ಫ್ರಾನ್ಸ್ ಸೇರಿದಂತೆ ಯೂರೋಪಿನ ಎಲ್ಲ ರಾಷ್ಟçಗಳು ಗಟ್ಟಿಯಾಗಿ ನಿಲ್ಲುತ್ತವೆ.

ಇದೇ ದೃಷ್ಟಿಯಲ್ಲಿ “ವಾರ್ ಆನ್ ಟೆರರ್” ಅಫ್ಘಾನಿಸ್ತಾನ, ಇರಾಕ್ ಹಾಗೂ ಹಲವಾರು ಮಧ್ಯಪ್ರಾಚ್ಯ ರಾಷ್ಟçಗಳನ್ನು ನಾಶಪಡಿಸಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತದೆ. ಅಲ್ಲಿನ ಜನರು ವಸಾಹತುಶಾಹಿ ವ್ಯವಸ್ಥೆಯ, ಶೀತಲ ಸಮರದ ಪರಿಣಾಮಗಳಿಂದ ಹೊರಬರುವ ಮುನ್ನವೇ ಅವರ ಜೀವನ ಮತ್ತೆ ನರಕವಾಗುತ್ತದೆ ಹಾಗು ಧಾರ್ಮಿಕ ಮತಾಂಧತೆ ಮತ್ತಷ್ಟು ತೀಕ್ಷ÷್ಣಗೊಳ್ಳುತ್ತಾ ವ್ಯಾಪಕವಾಗಿ ಹೆಚ್ಚಾಗುತ್ತದೆ. ಮುಸ್ಲಿಂ ದೇಶಗಳ ನಡುವೆಯೇ ಶೀತಲ ಸಮರಗಳು, ಇಸ್ರೇಲ್ ದೇಶದ ಕೈಚಳಕ, ಪಾಶ್ಚಿಮಾತ್ಯ ದೇಶಗಳ ಆಕ್ರಮಣ ಮತ್ತು ದಬ್ಬಾಳಿಕೆ ಈ ದೇಶಗಳ ಜನರನ್ನು ಪ್ರಗತಿಪಥದಿಂದ ಬಹುದೂರ ತಳ್ಳುತ್ತವೆ. ಧರ್ಮ ರಾಜಕೀಯ ಮಾಡಲು ಒಂದು ಬರಿಯ ಸಾಧನವಾಗುತ್ತದೆ.

ಈ ದಾರುಣ ಸ್ಥಿತಿಗೆ ಕಾರಣರಾದ ಬುಷ್, ನಂತರ ಬಂದ ಒಬಾಮ ಮತ್ತು ಟ್ರಂಪ್ ಸೇರಿದಂತೆ ಯೂರೋಪಿನ ರಾಷ್ಟçನಾಯಕರು ಯಾವ ಜವಾಬ್ದಾರಿಯನ್ನೂ ಹೊರಲು ಇಚ್ಛಿಸದೆ ಅಲ್ಲಿಂದ ತಮ್ಮ ಸೈನಿಕರನ್ನು ವಾಪಾಸ್ ಕರೆಸಿಕೊಳ್ಳುವ ಮಾತುಗಳನ್ನೇ ಇಂದಿಗೂ ಆಡುತ್ತಿದ್ದಾರೆ. ಇಲ್ಲಿ ಯಾರೂ ಗೆದ್ದಂತಿಲ್ಲ ಯಾರೂ ಸೋತಂತಿಲ್ಲ; ಹೆಚ್ಚು ಸತ್ತದ್ದು ಮಾತ್ರ ಆ ದೇಶಗಳ ಸಾಮಾನ್ಯ ಜನರು. ಇಂತಹ ಸಂದರ್ಭದಲ್ಲಿ ಎಂದೂ ಮುಗಿಯದ ಯುದ್ಧ ಒಂದೆಡೆಯಾದರೆ, ಬಹುದೂರದ ಯೂರೋಪ್ ಮತ್ತು ಅಮೆರಿಕಾದ ಬಿಳಿಯರು ತಮ್ಮ ದೇಶಗಳಲ್ಲಿ ಸ್ವಚ್ಛಂದವಾಗಿ ತಾತ್ವಿಕ ಚಿಂತನೆ, ಕಲೆ, ಸಾಹಿತ್ಯ ಮತ್ತು ಉತ್ಪ್ರೇಕ್ಷೆ ವಿಚಾರಗಳನ್ನು ಬಹಳ ಆರಾಮಾಗಿ ಸವಿಯುತ್ತಾ, ಚಿಂತಿಸುತ್ತಾ ಪ್ರಪಂಚವೇಕೆ ಇಷ್ಟೊಂದು ದಾರುಣವಾಗಿದೆ? ಏಕೆ ಈ ಪೂರ್ವದ ದೇಶಗಳಲ್ಲಿ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು, ಧರ್ಮನಿರಪೇಕ್ಷತೆ ಮುಂತಾದ ವಿಚಾರಗಳು ಇಲ್ಲವೆಂದು ವಿಷಾದಿಸುತ್ತಿದ್ದಾರೆ.

ಈ ಸಂಕೀರ್ಣ ಸ್ಥಿತಿಗತಿಗಳ ಯಾವ ಅರಿವೂ ಇಲ್ಲದೆ, ಮುಸ್ಲಿಂ ಸಮುದಾಯದಲ್ಲೇ ಹಾಗೂ ಅವರ ಧರ್ಮದಲ್ಲೇ ಸಮಸ್ಯೆಗಳಿವೆ ಎಂದು ಹೇಳುವುದೂ ಉಂಟು. ನಮ್ಮ ದೇಶದ ಹಲವಾರು ಬುದ್ಧಿಜೀವಿಗಳು ಕೂಡ ಈ ರೀತಿಯ ಚಿಂತನೆಯಲ್ಲಿ ತೊಡಗಿರುವುದು ದುರದೃಷ್ಟಕರ.

ಈಗ ಫ್ರಾನ್ಸ್ನಲ್ಲಿ ನಡೆದ ಘಟನೆಗೆ ಬರೋಣ. ಪ್ರವಾದಿ ಮೊಹಮ್ಮದರನ್ನು ವ್ಯಂಗ್ಯವಾಗಿ ಮಾತ್ರವಲ್ಲದೆ ಬಹಳ ಅಶ್ಲೀಲವಾಗಿ ಚಿತ್ರಿಸಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ÷್ಯವನ್ನು ಸಾಬೀತುಪಡಿಸಲು ಚಾರ್ಲಿ ಹೆಬ್ದೋ ಪತ್ರಿಕೆ ತನ್ನ ಮೇಲೆ ಉಗ್ರರು ದಾಳಿ ನಡೆಸಿದರೂ ಜಗ್ಗಲಿಲ್ಲ. ಈ ದಾಳಿಯಾದ ಹಲವು ವರ್ಷಗಳ ನಂತರ ಈ ಚಿತ್ರಗಳನ್ನು ತನ್ನ ವಿದ್ಯಾರ್ಥಿಗಳಿಗೆ ತೋರಿಸಿದ ಒಬ್ಬ ಶಿಕ್ಷಕನ ಬರ್ಬರ ಹತ್ಯೆ ಇದೀಗ ಫ್ರೆಂಚರನ್ನು ಮತ್ತು ಪಾಶ್ಚಿಮಾತ್ಯ ದೇಶಗಳನ್ನು ವಿಚಲಿತಗೊಳಿಸಿದೆ. ಇದಕ್ಕೆ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಎಲ್ ಮ್ಯಾಕ್ರನ್ ಮತ್ತವರ ಸರ್ಕಾರ ಪ್ರತಿಕ್ರಿಯೆಯಾಗಿ ಸರ್ಕಾರದ ಕಟ್ಟಡದ ಮೇಲೆ ಆ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿತು. ಇದ್ಕಕೀಗ ಮುಸ್ಲಿಂ ದೇಶಗಳ ನಾಯಕರು ಸೇರಿದಂತೆ ಹಲವಾರು ಸಂಘಟನೆಗಳು ಮತ್ತು ಮುಸಲ್ಮಾನರು ಕುಪಿತಗೊಂಡು ಪ್ರತಿಭಟಿಸುತ್ತಾ ಫ್ರೆಂಚ್ ವಸ್ತುಗಳ ಸಾಮಾಜಿಕ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಇದಾದ ನಂತರ ಮತ್ತೊಂದು ಭಯೋತ್ಪಾದಕ ದಾಳಿ ನೀಸ್ ನಗರದಲ್ಲಾಯಿತು. ಆದರೆ ಫ್ರಾನ್ಸ್ ಸರ್ಕಾರ ಇದರ ಕುರಿತಾಗಿ ಸಂವೇದನಾಶೀಲವಾಗಿ ಆಲೋಚಿಸುವಂತೆ ಕಾಣುತ್ತಿಲ್ಲ. ತಾನು ಮಾಡಿದ್ದೆಲ್ಲಾ ಸರಿ ಮತ್ತು ತನ್ನ ಚಿಂತನೆಗಳೇ ಶ್ರೇಷ್ಠ ಎಂಬ ಪೊಳ್ಳು ಅಹಂಕಾರ ಬಿಳಿಯರ ದೇಶಗಳಿಗೆ ಹೊಸದೇನಲ್ಲ. ತಮ್ಮ ವಸಾಹತುಶಾಹಿ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಬೇರೆ ಸಂಸ್ಕೃತಿಗಳ ಟೀಕೆ ಟಿಪ್ಪಣಿ ಮಾಡಬೇಕು ಎಂಬ ಅರಿವಿರದ ಫ್ರಾನ್ಸ್ ಮತ್ತು ಅದರ ನಡೆಯ ಸಮರ್ಥನೆ ಮಾಡುತ್ತಿರುವ ಪಾಶ್ಚಿಮಾತ್ಯ ರಾಷ್ಟçಗಳು ಇಂದು ಪ್ರಪಂಚಕ್ಕೆ ಅಭಿವ್ಯಕ್ತಿ ಸ್ವಾತಂತ್ರö್ಯದ ಪಾಠಮಾಡುತ್ತಿರುವುದು ವಿಪರ್ಯಾಸವೇ ಸರಿ. ಭಾರತ ಸರ್ಕಾರವಾಗಲಿ ನಮ್ಮ ದೇಶದ ಲಿಬರಲ್ಲುಗಳಾಗಲಿ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವ ಭರದಲ್ಲಿ ಈ ರಾಷ್ಟ್ರಗಳ ದುರಹಂಕಾರದ ಬಗೆಗೆ ಮೌನ ತಾಳಿರುವುದು ದುರದೃಷ್ಟಕರ.

ಪ್ರಗತಿಪರರಾದವರು ಹಾಗೂ ಮುಖ್ಯವಾಗಿ ವಸಾಹತುವಾಗಿದ್ದ ಭಾರತದಂತಹ ದೇಶದಲ್ಲಿರುವ ನಾವು ಈ ವಿಚಾರಗಳನ್ನು ಹೇಗೆ ಗ್ರಹಿಸಬೇಕು? ವಾಸ್ತವವಾಗಿ ನಮ್ಮ ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಮೇಲೆ ವ್ಯಾಖ್ಯಾನಿಸಿದ ಘಟನೆಯ ಹಿನ್ನೆಲೆಯಲ್ಲಿ ನೋಡುವುದಾದರೆ ನಮ್ಮ ದೇಶದ ರಾಜಕೀಯ ಸಂಸ್ಕೃತಿ ಮತ್ತಷ್ಟು ಬಲಾಢ್ಯವಾಗಬೇಕಾದರೆ ಈ ರೀತಿಯ ಹಕ್ಕುಗಳು ನಮಗೆ ಬೇಕೇ ಬೇಕು. ಆದರೆ ಫ್ರಾನ್ಸ್ ನಮ್ಮ ರೀತಿಯ ತುಳಿತಕ್ಕೊಳಪಟ್ಟ ದೇಶವಲ್ಲ ಬದಲಾಗಿ ನಮ್ಮಂಥವರನ್ನು ತುಳಿದು ಆಳಿದ ದೇಶ. ನಾವು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಯೋಗ ಮಾಡುವುದಕ್ಕೂ ಫ್ರೆಂಚರು ಮಾಡುವುದಕ್ಕೂ ಒಂದು ವ್ಯತ್ಯಾಸವಿದೆ. ನಾವು ಈ ಹಕ್ಕನ್ನು ವಿಮೋಚನಾ ಸಾಧನವಾಗಿ ಬಳಸಿದರೆ ಅವರು ಅಧಿಕಾರ ಸ್ಥಾಪನಾ ಸಾಧನವಾಗಿ ಬಳಸುತ್ತಾರೆ. ಆದ್ದರಿಂದ, ಫ್ರಾನ್ಸ್ನಲ್ಲಿ ನಡೆದ ಶಿಕ್ಷಕನ ಕೊಲೆ ಮತ್ತು ಅಲ್ಲಿನ ಭಯೋತ್ಪಾದಕ ಕೃತ್ಯಗಳನ್ನು ನಾವೆಲ್ಲರೂ ಖಂಡಿಸಬೇಕು ಎಂಬುದು ಮಾನವೀಯ ದೃಷ್ಟಿಯಿಂದ ಸರಿ. ಆದರೆ ತಾತ್ವಿಕ, ಐತಿಹಾಸಿಕ ಮತ್ತು ಸಾಂಸ್ಕತಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಫ್ರಾನ್ಸ್ ದೇಶದ ದುರಹಂಕಾರ ಮತ್ತು ಕೀಳು ಮಟ್ಟದ ನಡೆಯನ್ನು ಕೂಡ ಖಂಡಿಸಬೇಕು ಎಂಬುದು ಯಾವುದೇ ಪ್ರಜ್ಞಾವಂತನ ನಿಲುವಾಗಿರುತ್ತದೆ.

ಒಂದು ತುಳಿತಕ್ಕೊಳಪಟ್ಟ ಸಂಸೃತಿ ಅಥವಾ ಸಮಾಜ ಬದಲಾಗಬೇಕಾದರೆ ಸುಧಾರಣೆ ಆ ಸಮಾಜದೊಳಗಿಂದ ಬರಬೇಕೇ ವಿನಃ ತುಳಿವವನ ಅಹಂಕಾರದ ವ್ಯಂಗ್ಯದಿದಲ್ಲ.

*ಲೇಖಕರು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು; ರಾಷ್ಟ್ರವಾದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸಂಸ್ಕೃತಿ ಅಧ್ಯಯನ ಮತ್ತು ರಾಜಕೀಯ ತತ್ವಶಾಸ್ತç ಇವರ ಸಂಶೋಧನಾ ವಿಷಯಗಳು.

Leave a Reply

Your email address will not be published.