ಅಮಿತಾವ್ ಘೋಷ್ ಅವರ ಗನ್ ಐಲ್ಯಾಂಡ್

ನಿರಾಶ್ರಿತರ ಮಾನವ ಹಕ್ಕುಗಳು ಮತ್ತು ಜಾಗತಿಕ ಹವಾಮಾನ ವ್ಯತ್ಯಯದ ಸಮಸ್ಯೆಗಳನ್ನು ಕತೆಯ ಮೂಲಕ ನಿರೂಪಿಸುವ ಮಹತ್ವಾಕಾಂಕ್ಷೆಯ ಕೃತಿ ಅಮಿತಾವ್ ಘೋಷ್ ಅವರ `ಗನ್ ಐಲ್ಯಾಂಡ್’ (ಬಂದೂಕು ದ್ವೀಪ) ಎಂಬ ಇತ್ತೀಚಿನ ಕಾದಂಬರಿ. ಮಾನವ ಕೇಂದ್ರಿತ ದೃಷ್ಟಿಕೋನವನ್ನು ತೊರೆದು ನಿಸರ್ಗದಲ್ಲಿನ ಎಲ್ಲ ಜೀವರಾಶಿಗಳೂ ಸಮಾನ ಕ್ರಿಯಾಶಾಲಿಗಳು ಎಂಬ ಕಾಣ್ಕೆಯನ್ನು ತನ್ನದಾಗಿಸಿಕೊಂಡಿರುವ ಕಾದಂಬರಿ.

ಕಾದಂಬರಿಯು ಅಪಾರ ಸಾಧ್ಯತೆಗಳ ಸಾಹಿತ್ಯಿಕ ಪ್ರಕಾರವೆಂದು ನಂಬಿರುವ ಅಮಿತಾವ್ ಘೋಷ್ ತಮ್ಮ ಈವರೆಗಿನ ಒಂಬತ್ತು ಕಾದಂಬರಿಗಳಲ್ಲಿ ಹಲವು ದಿಕ್ಕುಗಳಲ್ಲಿ ಅಂತಹ ಸಾಧ್ಯತೆಗಳ ಶೋಧನೆ ನಡೆಸಿದ್ದಾರೆ. ಅವರ ಕಾದಂಬರಿಗಳು ಎಂದೂ ಕತೆಯಾಗಿ ಮಾತ್ರ ಮೈದೋರದೇ ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಸಂಸ್ಕೃತಿ, ಭಾಷಾಜ್ಞಾನ, ವಿಜ್ಞಾನ, ಸಂಶೋಧನೆ ಹೀಗೆ ಹಲವಾರು ಜ್ಞಾನಮಾಹಿತಿಗಳನ್ನು ಮೈವೇತ್ತುಕೊಂಡ ಕಥನವಾಗಿ ರೂಪುಗೊಂಡಿರುತ್ತವೆ. ಸಾಮಾಜಿಕ ಮಾನವಶಾಸ್ತದ ಸಂಶೋಧಕರಾಗಿ (social anthropologist) ತರಬೇತಿ ಪಡೆದಿರುವ ಅಮಿತಾವ್ ಘೋಷರ ಮೊದಲ ಕಾದಂಬರಿ “ದಿ ಸರ್ಕಲ್ ಆಫ್ ರೀಸನ್” ಬಂದದ್ದು 1987ರಲ್ಲಿ. ಭೌಗೋಳಿಕ ವಿಸ್ತಾರ, ಐತಿಹಾಸಿಕ ಕಥನ, ಭಾಷಾಶಾಸ್ತçದ ವಿವರಗಳು ಮುಂತಾದ ಘೋಷರವರ ಕಥನ ಶೈಲಿಯನ್ನು ಈ ಕಾದಂಬರಿಯಲ್ಲಿಯೇ ನಾವು ಕಾಣಬಹುದು.

ಈವರೆಗೆ ಐದು ಕಥನೇತರ ಗ್ರಂಥಗಳನ್ನು ಬರೆದಿರುವ ಘೋಷ್, ಹವಾಮಾನ ಸ್ಥಿತ್ಯಂತರ ಸೃಷ್ಟಿಸಿರುವ ಬಿಕ್ಕಟ್ಟಿನ ಪರೀಕ್ಷೆಯಾಗಿ 2016ರಲ್ಲಿ ‘ದಿ ಗ್ರೇಟ್ ಡಿರೆಂಜ್ಮೆಂಟ್’ (ಮಹಾ ವಿರೂಪ) ಎನ್ನುವ ಪುಸ್ತಕ ಬರೆದಿದ್ದರು. ಹವಾಮಾನ ಸ್ಥಿತ್ಯಂತರ ಇಡೀ ಜಗತ್ತಿಗೆ ಒಡ್ಡಿರುವ ಸವಾಲನ್ನು ಅನ್ವೇಷಿಸುವ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ತಾವೂ ಸೇರಿದಂತೆ, ಎಲ್ಲ ಸಮಕಾಲೀನ ಬರಹಗಾರರು ಸೋತಿರುವುದನ್ನು ಅವರು ಪ್ರಶ್ನಿಸುತ್ತಾರೆ.

ಅವರ ಇತ್ತೀಚಿನ ಕಾದಂಬರಿಯಾದ ‘ಗನ್ ಐಲ್ಯಾಂಡ್’ (ಬಂದೂಕು ದ್ವೀಪ) ಈ ಗುರುತರ ಹೊಣೆಯನ್ನು ಹೊರುವ ಇರಾದೆ ಹೊಂದಿದೆ. ಹವಾಮಾನ ಸ್ಥಿತ್ಯಂತರದ ಬಿಕ್ಕಟ್ಟು ವಿಶ್ವದೆಲ್ಲೆಡೆ ಚರ್ಚಿತವಾಗುತ್ತಿರುವ ಸಂದರ್ಭದಲ್ಲಿ, ಬರಹಗಾರರಿಗೆ, ಕಲಾವಿದರಿಗೆ, ರಾಜಕಾರಣಿಗಳಿಗೆ, ಅರ್ಥಶಾಸ್ತçಜ್ಞರಿಗೆ, ಉದ್ಯಮಿಗಳಿಗೆ, ವಿಜ್ಞಾನಿಗಳಿಗೆ, ಅಜ್ಞಾನಿಗಳಿಗೆ, ಅರೆಜ್ಞಾನಿಗಳಿಗೆ, ಎಲ್ಲ ಜನರಿಗೆ ನಾವು ಸದ್ಯ ಬಾಳುತ್ತಿರುವ, ನಾವೇ ಕೈಯಾರೆ ಸೃಷ್ಟಿಸಿರುವ ವಿರೂಪದ ಕುರಿತಾಗಿ ‘ಗನ್ ಐಲ್ಯಾಂಡ್’  ಒಂದು ಎಚ್ಚರಿಕೆ. ಹವಾಮಾನ ಸ್ಥಿತ್ಯಂತರದ ಪ್ರಕ್ರಿಯೆ ಎಷ್ಟು ಸಂಕೀರ್ಣ ಮತ್ತು ಅದು ಹೇಗೆ ಜನರ ಮೇಲೆ, ರಾಷ್ಟçಗಳ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ದರ್ಶಿಸುತ್ತದೆ ಈ ಕಾದಂಬರಿ.

ಪರ್ಯಾವರಣದ ಬಿಕ್ಕಟ್ಟನ್ನು ನಮ್ಮ ಕಾಲಮಾನದ ಸಾಮಾಜಿಕ ಬಿಕ್ಕಟ್ಟು ಎಂದೇ ನೋಡುತ್ತ, ಘೋಷ್ ಈ ಕಾದಂಬರಿಯಲ್ಲಿ ಅಕಾಲ ಚಂಡಮಾರುತಗಳು, ಆಮ್ಲಜನಿಕ ನಶಿಸಿದ ನೀರು, ಹಲಬಗೆಯ ಡಾಲ್ಫಿನ್ನು-ಪಕ್ಷಿಗಳ ಮೇಳ, ಮಾನವೀಯತೆಯ ವಿಶೇಷ ಪ್ರದರ್ಶನ, ಮತ್ತು ಕಾಲಾಂತರದ ವಲಸೆಗಳ ಒಂದು ಕತೆಯನ್ನು ಹೆಣೆಯುತ್ತಾರೆ -ಅದೂ ಸಹ ವಾಸ್ತವವಾದಿಯೂ ಅಲ್ಲದ, ಅತ್ತ ಕಾಲ್ಪನಿಕವೂ ಅಲ್ಲದ, ಇತಿಹಾಸ, ವಿಜ್ಞಾನಗಳೆಲ್ಲವನ್ನು ನೇಯ್ದ ಹೊಸ ಕಥನ ಶೈಲಿಯ ಮೂಲಕ.

ಕತೆಯ ಹಂದರ ಭಾರತ, ಬಾಂಗ್ಲಾದೇಶ, ಅಮೆರಿಕಾ, ಇಟಲಿ ಹೀಗೆ ಬೇರೆ ಬೇರೆ ದೇಶಗಳ ಜನರ ಬೇರೆ ಬೇರೆ ಪ್ರದೇಶಗಳಲ್ಲಿ ಆಗಿಹೋಗುವ ಕತೆಗಳನ್ನು ಹೆಣೆಯುತ್ತದೆ. ಒಂದು ಹದದಲ್ಲಿ ಕತೆ ಎನ್ನುವದು ಇಲ್ಲಿ ಸಾಕ್ಷ÷್ಯಚಿತ್ರದ ತರಹ ಭೂತಕಾಲದ ಘಟನೆಗಳು, ವರ್ತಮಾನದ ಪ್ರದೇಶಗಳು ಮತ್ತು ಸಮಸ್ಯೆಗಳು ಹಾಗೂ ಅವುಗಳ ನಡುವಿರುವ ಸಂಬಂಧಗಳನ್ನು ವಿಶ್ಲೇಷಿಸುತ್ತ ಸಾಗುತ್ತದೆ. ದೀನ ದತ್ತ ನ್ಯೂಯಾರ್ಕಿನಲ್ಲಿ ಪುರಾತನ ಗ್ರಂಥ, ಹಸ್ತಪ್ರತಿಗಳ ಅಂತರರಾಷ್ಟಿçÃಯ ವ್ಯಾಪಾರಿ. ಅವನ ಸಭ್ಯಸುರಕ್ಷಿತ ಬದುಕು ಮತ್ತು ಅವನ ಸರಳ ನಂಬಿಕೆಗಳನ್ನು ಬುಡಮೇಲು ಮಾಡುವ ಪ್ರವಾಸವೊಂದು – ಭಾರತ, ಲಾಸ್ ಏಂಜೆಲೀಸ್, ವೆನೀಸ್-ಗಳನ್ನೆಲ್ಲ ಹೊಕ್ಕಿಸಾಗುವ ಪ್ರವಾಸ – ಮೊದಲಾಗುವುದು “ಬಂದೂಕು” ಎಂಬ ಒಂದು ಶಬ್ದ ಶುರುಹಚ್ಚುವ ಕುತೂಹಲದಿಂದ.

ಹಲವು ಆಶ್ಚರ್ಯ, ಸ್ಮಸ್ಕೃತಿ, ಸಾಹಸಗಳ ಈ ಯಾತ್ರೆಗೆ ಸ್ಫೂರ್ತಿ ಪಿಯಾ ಎಂಬ ಡಾಲ್ಫಿನ್ ಸಂಶೋಧಕಿ (“ಹಂಗ್ರಿ ಟೈಡ್’ ಕಾದಂಬರಿಯಲ್ಲಿ ಈ ಪಾತ್ರದ ಪರಿಚಯ ನಮಗಾಗಿದೆ). ಟೀಪು (“ಹಂಗ್ರಿ ಟೈಡ್” ಕಾದಂಬರಿಯ ಅಂತ್ಯದಲ್ಲಿ ಪಿಯಾಳನ್ನು ಬದುಕಿಸುತ್ತ ತನ್ನ ಪ್ರಾಣ ತ್ಯಾಗ ಮಾಡುವ ಫೋಕೀರ್ ನ ಮಗ) ಮತ್ತು ರಫಿ ಎಂಬ ಉದ್ಯಮಶೀಲ ಬಾಂಗ್ಲಾದೇಶೀ ಹುಡುಗ, ಮತ್ತು ಚಿಂತಾ ಎಂಬ ವೇನೀಸ್ ನ ಇತಿಹಾಸ ಶಾಸ್ತçಜ್ಞೆ ದೀನ ದತ್ತನ ಸಾಹಸಗಳಲ್ಲಿ ಬರುವ ಪ್ರಮುಖ ಪಾತ್ರಗಳು. ಈ ಯಾತ್ರೆಯಲ್ಲಿ ದೀನ ದತ್ತ ತನ್ನ ಬಾಲ್ಯದಲ್ಲಿ ಕೇಳಿದ ಬಂಗಾಲೀ ಐತಿಹ್ಯಗಳು, ತನ್ನ ಯೌವನದಲ್ಲಿ ಓದಿದ ಇತಿಹಾಸಗಳು ಮತ್ತು ಪ್ರಸ್ತುತ ತನ್ನ ನಡುವಯಸ್ಸಿನಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಗಳ ಕಥನಗಳು ಒಂದನ್ನೊಂದು ವಿಶದಗೊಳಿಸುತ್ತ ಸಮಕಾಲೀನ ಘಟನೆಗಳನ್ನು ಅರ್ಥೈಸುತ್ತವೆ.

ಮಾನಸಾ ದೇವಿ ಎಂಬ ಸರ್ಪದೈವದ ಅವಕೃಪೆಗೆ ಒಳಗಾಗಿ ಊರು ತೊರೆದು ಊರೂರು ಅಲೆಯುವ ಬಂದೂಕು ವ್ಯಾಪಾರಿಯ ಕತೆ ಪದರ ಪದರವಾಗಿ ಹೇಳುತ್ತ, ಅದನ್ನು ರಫಿ ಮತ್ತು ಟೀಪು ಎಂಬಿಬ್ಬರು ಬಡ ಆದರೆ ಚುರುಕು ಹದಿಹರಯದ ಹುಡುಗರ ವಲಸೆಯ ಕತೆಯೊಂದಿಗೆ ಹೆಣೆಯುತ್ತ, ಪದಗಳು, ಪುಸ್ತಕಗಳು, ಕಾವ್ಯ, ಐತಿಹ್ಯಗಳು, ಮುದ್ರಣ ಸಂಸ್ಕಸ್ಕೃತಿಯ ಇತಿಹಾಸಗಳ ಪರಿಶೋಧನೆಗಳೊಂದಿಗೆ ಬೆರೆಸುತ್ತ ಸಾಗುವ ಇದನ್ನು ಇತ್ತೀಚೆಗೆ ಜನಪ್ರಿಯವಾಗಿರುವ ಊಹಾತ್ಮಕ ಕಥನದ (Sಠಿeಛಿuಟಚಿಣive ಈiಛಿಣioಟಿ) ಪ್ರಕಾರಕ್ಕೂ ಸೇರಿಸ ಬಹುದಾಗಿದೆ.

ಕೊಲಕತ್ತಾದಲ್ಲಿ ನಡೆವ ಪಾರ್ಟಿ ಒಂದರಲ್ಲಿ ಈ ಬಂದೂಕು ವ್ಯಾಪಾರಿಯ ಕುರಿತ ಪ್ರಚೋದನೆಯಿಂದ ದೀನ್ ಸುಂದರಬನದ ಜೌಗುವನಗಳಿಗೆ ಹೋಗಿ, ಅಲ್ಲಿ ಬಂದೂಕು ವ್ಯಾಪಾರಿಯ ಕತೆಯ ಕುರುಹುಗಳಿರುವ ಮಂದಿರವೊಂದಕ್ಕೆ ಭೇಟಿ ಕೊಡುತ್ತಾನೆ. ಇಲ್ಲಿ ಅದು ಇನ್ನಷ್ಟು ನಿಗೂಢವಾಗುವುದರ ಜೊತೆಗೆ ಅವನನ್ನು ಟೀಪುನ ಸಂಪರ್ಕಕ್ಕೆ ತರುತ್ತದೆ. ಹೀಗೆ ಒಂದಕ್ಕೊಂದು ತಳುಕು ಹಾಕುತ್ತ ಸುರುಳಿ ಬಿಚ್ಚುವ ಕಥಾನಕವು ಸುಂದರಬನದಿಂದ ಕಾಡ್ಗಿಚ್ಚು ಹಬ್ಬಿದ ಲಾಸ್ ಏಂಜೆಲೀಸ್, ಇಂಚಿಂಚಾಗಿ ಸಾಗರದ ಉಬ್ಬರದಡಿ ಮುಳುಗುತ್ತಿರುವ ವೇನಿಸ್ ಶಹರಗಳನ್ನು ತಲುಪುತ್ತದೆ. ಈ ಪ್ರವಾಸದಲ್ಲಿ, ಇತಿಹಾಸ ಪಂಡಿತೆಯಾದ ಇಟಲಿಯ ಚಿಂತಾಳ ಪೂರ್ವವಿಷಯದ ಜ್ಞಾನ, ಮೃತರ ಜೊತೆಗಿನ ಸಂಪರ್ಕಗಳು ಕತೆಗೆ ಮತ್ತಷ್ಟು ನಿಗೂಢತೆಯನ್ನು, ವಸ್ತುನಿಷ್ಠ ನಿರೂಪಣೆಯಿಂದ ದೂರವನ್ನೂ ಒದಗಿಸುತ್ತವೆ. ಕತೆಗೆ ಹೆಚ್ಚು ಹೆಚ್ಚು ಸಾಂದ್ರತೆ ತರುವ ಘಟನಾವಳಿಗಳಲ್ಲಿ ಟೀಪು ಮತ್ತು ರಫಿ ಎಂಬ ಇಬ್ಬರು ಬೆಂಗಾಲೀ (ಒಬ್ಬ ಭಾರತೀಯ. ಇನ್ನೊಬ್ಬ ಬಾಂಗ್ಲಾದೇಶಿ) ಯುವಕರು, ಅಂತರರಾಷ್ಟ್ರೀಯ ವಲಸೆಯ ದಲಾಲರ ಮೂಲಕ ಯುರೋಪು ತಲುಪುವುದು; ನದಿಸಮುದ್ರಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾಗುವ “ಮೃತ ವಲಯ”ಗಳ ಕುರಿತು, ನೆಲದಲ್ಲಿ ಸಿಕ್ಕಿಕೊಳ್ಳುತ್ತಿರುವ ತಿಮಿಂಗಲ ಮತ್ತು ಡಾಲ್ಫಿನ್‌ಗಳ ಕುರಿತು ಅಪಾರ ಅಪಾಯಗಳನ್ನು ಎದುರಿಸಿ ಸಂಶೋಧನೆ ನಡೆಸುತ್ತಿರುವ ಪಿಯಾ ಎಂಬ ಜೀವಶಾಸ್ತ್ರಜ್ಞೆಯ ಕಥನವೂ ಸೇರುತ್ತದೆ.

ಈ ಎಲ್ಲ ಕತೆ-ಉಪಕತೆಗಳ ನಿರೂಪಣೆಯಲ್ಲಿ ಫೋನು, ಈ-ಅಂಚೆ, ಸಾಮಾಜಿಕ ಮಾಧ್ಯಮಗಳು, ಎಲ್ಲ ಹಾಸುಹೊಕ್ಕಾಗಿದ್ದು, ಮುದ್ರಣ ತಂತ್ರಜ್ಞಾನ ಪೀಳಿಗೆಯ ಮತ್ತು ಅದೇ ವ್ಯವಹಾರದಲ್ಲಿ ತೊಡಗಿಕೊಂಡಿರುವ ದೀನ್ ದತ್ತಾ – ಜೊತೆಗೆ ಓದುಗರೂ ಸಹ – ಹೇಗೆ ಡಿಜಿಟಲ್ ಮಾಧ್ಯಮವು ಕಾಲದೇಶಗಳ ನಮ್ಮ ಗ್ರಹಿಕೆಯನ್ನು ಪುನರ್ನಿದೇಶಿಸುತ್ತಿದೆ ಎನ್ನುವುದನ್ನು ಅರಿಯುವಂತೆ ಮಾಡುತ್ತದೆ.

ವಾಸ್ತವವಾದಿ ನಿರೂಪಣಾ ಶೈಲಿಯಲ್ಲಿ ಬಂಧಿತವಾಗಿ ಉಳಿದ ಕಾದಂಬರಿ ನಮ್ಮ ಕಾಲಮಾನದ ಆಗುಹೋಗುಗಳನ್ನು, ಆಶಯಗಳನ್ನು, ವಿಪತ್ತು-ವೈಪರೀತ್ಯಗಳನ್ನು ಕಥನವಾಗಿಸುವಲ್ಲಿ ವಿಫಲ ಎಂಬ ದೃಷ್ಟಿಕೋನ ಸಾಮಾನ್ಯವಾಗಿದೆ. ಅದಕ್ಕೆ ಸಂವಾದಿಯಾಗಿ ಕಾದಂಬರಿ ಪ್ರಕಾರವನ್ನು ದುಡಿಸಿಕೊಳ್ಳುವ ಪ್ರಯೋಗಗಳು ಬಹುಶಃ ಅಷ್ಟು ಪ್ರಮಾಣದಲ್ಲಿ ಆಗಿಲ್ಲ. ಅಮಿತಾವ್ ಘೋಷ್ ತಮ್ಮ “ಗನ್ ಐಲ್ಯಾಂಡ್” ಕಾದಂಬರಿಯಲ್ಲಿ ಅಂತಹ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ಇಲ್ಲಿ ಐತಿಹಾಸಿಕ ಕಥನಗಳು ಅನುಭವಗಳನ್ನು, ಐತಿಹ್ಯಗಳು ವಾಸ್ತವವನ್ನು, ಅಮಾಯಕ ಹುಡುಗರು ವಿದ್ವಾಂಸರನ್ನು, ಸಾಂಪ್ರದಾಯಿಕ ನಂಬಿಕೆಗಳು ವೈಜ್ಞಾನಿಕ ಜ್ಞಾನವನ್ನು ಒಂದಕ್ಕೊಂದು ಪ್ರತಿಬಿಂಬಿಸುತ್ತವೆ. ಕಾದಂಬರಿಯ ಹಲವಾರು ಪ್ರಮುಖ ಘಟನೆಗಳು, ಪಾತ್ರಗಳು, ಇನ್ನೂ ಅಂದರೆ ಪ್ರದೇಶಗಳು ಸಹ, ಒಂದು ಇನ್ನೊಂದರ ಪ್ರತಿಬಿಂಬವಾಗಿ ಕಾಣುತ್ತವೆ. ಉದಾಹರಣೆಗೆ, ಭಾರತದ ವಾರಾಣಸಿ ಮತ್ತು ವೆನೀಸ್ ನಗರಗಳ ನಡುವೆ ಮಾಡಲಾದ ಹೋಲಿಕೆ.

ಈ ಕಾದಂಬರಿಯ ಕೆಲವು ಪಾತ್ರಗಳಿಗೆ ಭೂತ ಭವಿತವ್ಯದ ಮುನ್ಸೂಚನೆಯಾಗಿ ತೋರುತ್ತದೆ. ಇತರ ಪಾತ್ರಗಳಿಗೆ ವೈಜ್ಞಾನಿಕ ಜ್ಞಾನ ಮತ್ತು ಅಲೌಕಿಕ ಜ್ಞಾನ ಪರಸ್ಪರ ವಿರುದ್ಧವೆಂದು ಅನಿಸುವುದಿಲ್ಲ. ಅಸಂಭಾವ್ಯ ಘಟನೆಗಳು, ವಿಲಕ್ಷಣ ಆಕಸ್ಮಿಕಗಳು, ಕಾಕತಾಳೀಯ ಭೇಟಿಗಳು, ಪುರಾತನ ಕತೆಕಾವ್ಯಗಳ ಜೊತೆಗಿನ ಸಾದೃಶ್ಯಗಳು ಈ ಕಾದಂಬರಿಯಲ್ಲಿ ತುಂಬಿ ತುಳುಕಾಡುತ್ತವೆ. ಶಬ್ದಗಳು ಮತ್ತವುಗಳ ಹಲವು ದೇಶಕಾಲದಲ್ಲಿನ ಬಗೆಬಗೆಯ ಅವತಾರಗಳ ಕುರಿತಾದ ಕಥನಗಳು ಸಹ ಇಲ್ಲಿವೆ. ಒಚಿgiಛಿಚಿಟ ಡಿeಚಿಟism ತಂತ್ರವನ್ನು ಉಪಯೋಗಿಸಿಯೂ ಕಾದಂಬರಿ ಕಾಲ್ಪನಿಕ, ಅವೈಜ್ಞಾನಿಕವಾಗಿ ತೋರದಂತೆ ಸರೀಸುಮಾರು ಎಲ್ಲಾ ಅವಾಸ್ತವಿಕ ಘಟನೆಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಒಂದಲ್ಲಾ ಒಂದು ಪಾತ್ರಗಳು ವಿವರಿಸುತ್ತಾರೆ.

ಕಾದಂಬರಿಯ ಚಿಠಿoಛಿಚಿಟಥಿಠಿಣiಛಿ ಅಂತ್ಯದಲ್ಲಿ ಪಕ್ಷಿಗಳು ಡಾಲ್ಫಿನ್ ಗಳು ಏಕತ್ರವಾಗಿ ಹಡಗೊಂದರ ಸುತ್ತ ಪ್ರದಕ್ಷಿಣೆ ಹಾಕುವ ಅಸಾಧಾರಣ ದೃಶ್ಯವನ್ನು ಸಹ ಪಿಯಾ ಎಂಬ ಡಾಲ್ಫಿನ್ ಸಂಶೋಧಕಿ ವೈಜ್ಞಾನಿಕವಾಗಿ ವಿವರಿಸುತ್ತಾಳೆ. ಹೀಗೆ ಎಲ್ಲಿಯೂ ತರ್ಕಬದ್ಧ ವೈಚಾರಿಕತೆಯ ಹೊರಗೂ ಹೋಗದೆ ಅಮಿತಾವ್ ಘೋಷ್ ತಮ್ಮ ವಿಶೇಷ ಕಥನ ತಂತ್ರವನ್ನು ದುಡಿಸಿಕೊಳ್ಳುತ್ತಾರೆ. ಇಲ್ಲಿ ಹಲವು ಬಗೆಯ ಸಂಶೋಧನೆಗಳ, ವಿಷಯ ಜ್ಞಾನಗಳ, ಐತಿಹಾಸಿಕ ವಿವರಗಳ, ಪ್ರಚಲಿತ ವಿದ್ಯಮಾನಗಳ ಸಮ್ಮಿಳನವಿದೆ.

ಒಂದು ದೃಷ್ಟಿಯಲ್ಲಿ “ಗನ್ ಐಲ್ಯಾಂಡ್” ಕಾದಂಬರಿಯಲ್ಲಿ ಘೋಷ್ ಅವರ ಹಿಂದಿನ ಕಾದಂಬರಿಗಳ ನಿರೂಪಣಾ ಶೈಲಿ, ಪಾತ್ರಗಳು, ಪ್ರದೇಶಗಳು ಪುನರಾವರ್ತಿಸಿವೆ. ಆದರೆ, ಊಹಾತ್ಮಕ ನಿರೂಪಣಾ ಶೈಲಿಯಲ್ಲಿ ಸಾಮ್ಯ ದಟ್ಟಾವಾಗಿ ಇರುವುದು The Calcutta Chromosome ಎಂಬ ಕಾದಂಬರಿಯ ಜತೆ. ಈ ಸಾಮ್ಯ ಈ ಎರಡು ಕಾದಂಬರಿಗಳ ಅಲೌಕಿಕ ಅಂಶಗಳಿಗೆ ಸೀಮಿತವಾಗಿಲ್ಲ. “ಕಲಕತ್ತಾ ಕ್ರೊಮೊಸೊಮ್” ಕಾದಂಬರಿಯಲ್ಲಿ ಇರುವ ಹಾಗೆ “ಗನ್ ಐಲ್ಯಾಂಡ್’ ನಲ್ಲಿಯೂ ಮಹಿಳಾಶಕ್ತಿ ಮುನ್ನೆಲೆಯಲ್ಲಿದೆ ಮತ್ತು ಅದು ವಸ್ತುನಿಷ್ಠ ಸತ್ಯ ಎಂಬ ಶಿರೋನಾಮೆಯಡಿ ಸಾಗುವ ಯಜಮಾನೀ ದೃಷ್ಟಿಕೋನಗಳನ್ನು ಪ್ರಶ್ನಿಸುತ್ತದೆ.

ಹವಾಮಾನ ಸ್ಥಿತ್ಯಂತರದ ಹೊರತಾಗಿ ಮಾನವ ಹಕ್ಕುಗಳೂ, ಅದರಲ್ಲೂ ವಲಸಿತ ಸಮುದಾಯಗಳ ಅವಸ್ಥೆ ಕೂಡ ಕಾದಂಬರಿಯ ಪ್ರಮುಖ ವಸ್ತುವಾಗಿದೆ. ಹಾಗೆ ನೋಡಿದರೆ, “ಹಂಗ್ರಿ ಟೈಡ್” ಕಾದಂಬರಿಯಂತೆ ಇಲ್ಲಿಯೂ ನಿಮ್ನ ವರ್ಗಗಳ ಪಾತ್ರಗಳಿಗೆ ವಿಶೇಷ ಸ್ಥಾನವಿದೆ. ಹಲಬಗೆಯ ಯುಗಳಗಳು ಮತ್ತು ಮಾನವಕೇಂದ್ರಿತ ದೃಷ್ಟಿಕೋನದಿಂದ ದೀನ್ ದತ್ತಾ ಕ್ರಮಕ್ರಮೇಣ ಪಡೆದುಕೊಳ್ಳುವ ಬಿಡುಗಡೆ ಕಾದಂಬರಿಯ ತಾತ್ವಿಕ ವಿನ್ಯಾಸಗಳಲ್ಲಿ ಒಂದು. ಚಿಂತಾ, ಕಾದಂಬರಿಯ ಬೌದ್ಧಿಕ ಗುರುತ್ವ, ಒಂದೆಡೆ ಹೇಳುವಂತೆ, “ಕತೆಗಳ ಶಕ್ತಿಯನ್ನು ಹೀಯಾಳಿಸ ಬೇಡಾಪ್ಪಾ. ಅದೇನೋ ಮೂಲಭೂತ, ಅವರ್ಣನೀಯ ಅಂಶ ಕತೆಗಳಲ್ಲಿ ಇರುತ್ತೆ. ನೀನು ಕೇಳಿಲ್ಲವೇನು, ನಮ್ಮನ್ನು, ಅಂದ್ರೆ, ಮನುಷ್ಯರನ್ನು ಮೃಗಗಳಿಂದ ಪ್ರತ್ಯೇಕಿಸೋದೇ ನಮ್ಮ ಕತೆಹೇಳುವ ಶಕ್ತಿ. ಸತ್ಯ ಎನ್ನೋದು ವಿಚಿತ್ರ, ಏನೀವಾಗ? ಅಥವಾ ಉಲ್ಟಾ ಇದೆ ಅಂದ್ರೂ ಏನೀವಾಗ? ಕತೆ ಹೇಳೋದು ನಮ್ಮ ಅನನ್ಯ ಶಕ್ತಿ ಆಗಿರದೆ, ಮೃಗತ್ವದಿಂದ ನಮ್ಮೊಳಗೆ ಉಳಿದಿರುವ ಅಂಶದ ಅಲ್ಪಾವಶೇಷವಾಗಿದ್ದರೆ?”

ಭಾರತೀಯ ಸಾಹಿತ್ಯದ ಸಂದರ್ಭದಲ್ಲಿ ಪ್ರಮುಖ ಕಥನಕಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ, ಅಪಾರ ಶ್ರದ್ಧೆಯಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅತ್ಯಂತ ಗಂಭೀರವಾದ ಹಾಗೂ ಅಷ್ಟೇ ಓದುಗ-ಸ್ನೇಹಿಯಾದ ಕಾದಂಬರಿಗಳನ್ನು ಬರೆಯುತ್ತ ಬಂದಿರುವ ಅಮಿತಾವ್ ಘೋಷ್ ತಮ್ಮ “ಗನ್ ಐಲ್ಯಾಂಡ್” ಕಾದಂಬರಿಯಲ್ಲಿ ಬಹು ಮುಖ್ಯ ಮತ್ತು ತುರ್ತು ಸವಾಲುಗಳನ್ನು ಎತ್ತಿದ್ದಾರೆ.

ವಲಸೆ, ಕಾರ್ಮಿಕರ ಮತ್ತು ಸಂಪತ್ತಿನ ಚಲನೆ, ಅಂತರರಾಷ್ಟ್ರೀಯ ಗಡಿಗಳು ಮತ್ತದಕ್ಕೆ ಸಂಬಂಧಿಸಿದ ರಾಜಕಾರಣ, ಅನ್ಯದ್ವೇಷ ಮತ್ತು ವಸಾಹತುಶಾಹಿ ಇತಿಹಾಸ, ಪುನರಾವರ್ತಿಸುವ ಸಾಮ್ರಾಜ್ಯಶಾಹಿ ದಾಹಗಳು ಪ್ರಸಕ್ತ ಜಗತ್ತಿನಲ್ಲಿ ಹೊಂದಿರುವ ಅರ್ಥವನ್ನು ಇಲ್ಲಿ ಕತೆಯ ಮುಖಾಂತರ ವಿಶ್ಲೇಷಿಸಲಾಗಿದೆ. ಜಾಗತಿಕ ಹರಹಿನ ಈ ಕಾದಂಬರಿ ಜಗತ್ತನ್ನೇ ಬೆಚ್ಚಿಬೀಳಿಸಿರುವ ವಿಷಯಗಳ ಬಗೆಗೆ ಓದುಗರನ್ನು ಯೋಚನೆಗೆ ಹಚ್ಚುವಲ್ಲಿ ಖಂಡಿತ ಸಫಲವಾಗುತ್ತದೆ.

Leave a Reply

Your email address will not be published.