ಅಮೆಜ಼ಾನ್-ಪ್ಯೂಚರ್ ಗುಂಪಿನ ವಿವಾದ ಭಾರತದ ಚಿಲ್ಲರೆ ಮಾರುಕಟ್ಟೆಗಾಗಿ ದೈತ್ಯರ ಕಾಳಗ

ಇದು ಅಮೆಜ಼ಾನ್ ಹಾಗೂ ಮುಖೇಶ್ ಅಂಬಾನಿಯ ನಡುವೆ ಮುಂದೊಂದು ದಿನ ಭಾರತದ ಚಿಲ್ಲರೆ ಮಾರುಕಟ್ಟೆಗೆ ಹಾಗೂ ವಿದ್ಯುನ್ಮಾನ ವಾಣಿಜ್ಯಕ್ಕೆ ಯಾರು ಅಧಿಪತಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವ ಯುದ್ಧ. ಕಾರಣದಿಂದಲೇ ಅಮೆಜ಼ಾನ್ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನೆಲಕಚ್ಚಿ ಹೋರಾಟ ಮಾಡುತ್ತಿದೆ.

-ಎಂ.ಕೆ.ಆನಂದರಾಜೇ ಅರಸ್

ಭಾರತದ ಗ್ರಾಹಕ ಚಿಲ್ಲರೆ ಮಾರುಕಟ್ಟೆಗೆ ಹೊಸ ಮುನ್ನುಡಿ ಬರೆದ ಪ್ಯೂಚರ್ ಗುಂಪಿನ ಮುಖ್ಯಸ್ಥ ಕಿಶೋರ್ ಬಿಯಾನಿ ಹಾಗೂ ಪ್ರಪಂಚದ ವಿದ್ಯುನ್ಮಾನ ವಾಣಿಜ್ಯದ ಚಕ್ರವರ್ತಿ ಜೆಫರಿ ಪ್ರೆಸ್ಟನ್ ಬೆಜೊಸ್ ಒಡೆತನದ ಸಂಸ್ಥೆಗಳ ನಡುವೆ ನಡೆಯುತ್ತಿರುವ ಕಾನೂನು ಸಮರ ಹಾಗೂ ಅದರ ಅಂತಿಮ ತೀರ್ಪು ತಗೆದುಕೊಳ್ಳಬಹುದಾದ ಸ್ವರೂಪ ದೇಶದ ಕಾರ್ಪೊರೆಟ್ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾಸ್ತವವಾಗಿ ಇದು ಅಮೆಜ಼ಾನ್ ಹಾಗೂ ಮುಖೇಶ್ ಅಂಬಾನಿಯ ನಡುವೆ ಮುಂದೊಂದು ದಿನ ಭಾರತದ ಗ್ರಾಹಕ ಚಿಲ್ಲರೆ ಮಾರುಕಟ್ಟೆಗೆ ಹಾಗೂ ವಿದ್ಯುನ್ಮಾನ ವಾಣಿಜ್ಯಕ್ಕೆ ಯಾರು ಅಧಿಪತಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವ ಯುದ್ಧ. ಈ ಕಾರಣದಿಂದಲೇ ಅಮೆಜ಼ಾನ್ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನೆಲಕಚ್ಚಿ ಹೋರಾಟ ಮಾಡುತ್ತಿದೆ.

ಆರಂಭ

ಪ್ಯೂಚರ್ ಗುಂಪಿನ ಆಸ್ತಿಗಳನ್ನು ಸುಮಾರು ರೂ. ೨೪,೭೧೩ ಕೋಟಿ ಮೊತ್ತಕ್ಕೆ ಖರೀದಿಸಲು ಮುಖೇಶ್ ಅಂಬಾನಿಯ ರಿಲೈಯನ್ಸ್ ಹಾಗೂ ಪ್ಯೂಚರ್ ಗುಂಪಿನ ನಡುವೆ ೨೦೨೦ರ ಆಗಸ್ಟ್‌ನಲ್ಲಿ ಒಪ್ಪಂದವಾಗುತ್ತದೆ. ಅಮೆಜ಼ಾನ್ ಈ ಒಪ್ಪಂದವು ತಾನು ಪ್ಯೂಚರ್ ಗುಂಪಿನ ಜೊತೆ ಈ ಮೊದಲೇ ಹೊಂದಿದ್ದ ಪಾಲುಗಾರಿಕೆ ಒಪ್ಪಂದವನ್ನು ಉಲ್ಲಂಘಿಸುತ್ತದೆ ಹಾಗೂ ತನ್ನ ಪ್ರತಿಸ್ಪರ್ಧಿಯಾದ ರಿಲೈಯನ್ಸ್‌ಗೆ ಮಾರುವುದರಿಂದ ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂಬ ವಾದದೊಂದಿಗೆ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ರಿಲೈಯನ್ಸ್‌ನೊಡನೆ ಈ ಒಪ್ಪಂದ ಮಾಡಿಕೊಳ್ಳದಿದ್ದರೇ, ಇಡೀ ಪ್ಯೂಚರ್ ಗುಂಪು ದಿವಾಳಿಯಾಗಬೇಕಾಗುತ್ತದೆ ಹಾಗೂ ಇದನ್ನೆ ನಂಬಿಕೊಂಡಿರುವ ಸಾವಿರಾರು ಉದ್ಯೋಗಿಗಳ ಜೀವನ ಅತಂತ್ರವಾಗುತ್ತದೆ ಎಂಬುದು ಪ್ಯೂಚರ್ ಗುಂಪಿನ ವಾದವಾಗಿದೆ.

೨೦೧೯ರ ಆಗಸ್ಟ್‌ನಲ್ಲಿ ಅಮೆಜ಼ಾನ್, ಪ್ಯೂಚರ್ ಗುಂಪಿನ ಪ್ರಮುಖ ಕಂಪನಿಯಾದ ಪ್ಯೂಚರ್ ರಿಟೇಲ್ ಸಂಸ್ಥೆಯನ್ನು ಕೆಲವು ವರ್ಷಗಳ ನಂತರ ಕೊಳ್ಳುವ ಹಕ್ಕಿನೊಂದಿಗೆ, ಅದೇ ಗುಂಪಿನ ಯಾವುದೇ ಶೇರು ವಿನಿಮಯದಲ್ಲಿ ಪಟ್ಟಿಯಾಗಿರದ ಪ್ಯೂಚರ್ ಕೂಪನ್ಸ್ ಸಂಸ್ಥೆಯಲ್ಲಿ ಶೇ. ೪೯ರಷ್ಟು ಪಾಲನ್ನು ಸುಮಾರು ರೂ. ೧,೫೦೦ ಕೋಟಿಗೆ ಖರೀದಿಸುತ್ತದೆ. ನಂತರದ ದಿನಗಳಲ್ಲಿ ಕರೋನಾ ಪಿಡುಗಿನಿಂದ ದೇಶದೆಲ್ಲಡೆ ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ, ವ್ಯಾಪಾರ ಕುಸಿದು ಪ್ಯೂಚರ್ ಗುಂಪಿಗೆ ತೀವ್ರ ಮಟ್ಟದಲ್ಲಿ ನಗದಿನ ಕೊರತೆಯಾಗುತ್ತದೆ.

೨೦೨೦ರ ಮೇ ತಿಂಗಳಿನಲ್ಲಿ ಅಮೆಜ಼ಾನ್, ಪ್ಯೂಚರ್ ರಿಟೇಲಿನಲ್ಲಿ ತನ್ನ ಪಾಲನ್ನು ಹೆಚ್ಚು ಮಾಡುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ ಎಂಬ ಸುದ್ದಿ ಹರಿದಾಡಿದರೂ ಸಹ, ಅಂತಹ ಯಾವುದೇ ವ್ಯವಹಾರ ನಡೆಯುವುದಿಲ್ಲ. ನೆರವು ಕೋರಿ ಹಲವಾರು ಬಾರಿ ತಾನು ಅಮೆಜ಼ಾನ್ ಬಳಿ ಹೋದೆನೆಂದು, ಆದರೆ ಅಮೆಜ಼ಾನ್ ಸಕಾರಾತ್ಮಕವಾಗಿ ಪ್ರತಿಕಿಯಿಸಲಿಲ್ಲವೆಂದು ಕಿಶೋರ್ ಬಿಯಾನಿ ಹೇಳುತ್ತಾರೆ. ಯಾವಾಗ ಅಮೆಜ಼ಾನ್ ತನಗೆ ಸಹಾಯ ಮಾಡುವುದಿಲ್ಲವೆಂಬುದು ಖಚಿತವಾಗುತ್ತದೋ, ಆಗ ಪ್ಯೂಚರ್ ಗುಂಪು ರಿಲೈಯನ್ಸ್ ಸಂಸ್ಥೆಯೊಂದಿಗೆ ಒಪ್ಪಂದಕ್ಕಿಳಿಯುತ್ತದೆ. ಇದು ಬಿಯಾನಿಯವರ ವಾದ. ಆದರೆ ಅಮೆಜ಼ಾನ್ ಈ ಬಗ್ಗೆ ಸ್ಪಷ್ಟ ದೃಢೀಕರಣ ನೀಡಿಲ್ಲ. ಅಮೆಜ಼ಾನ್ ಪ್ಯೂಚರ್ -ರಿಲೈಯನ್ಸ್ ಒಪ್ಪಂದದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುತ್ತದೆ.

ಈ ಕಾನೂನು ಸಮರ ಭಾರತದ ಸುಮಾರು ಒಂದು ಟ್ರಿಲಿಯನ್ ಡಾಲರ್ (ಸುಮಾರು ೭೨ ಲಕ್ಷ ಕೋಟಿ ರೂಪಾಯಿಗಳು) ಗ್ರಾಹಕ ಚಿಲ್ಲರೆ ಮಾರುಕಟ್ಟೆಗಾಗಿ ನಡೆಯುತ್ತಿರುವ ಸಮರ. ಪ್ರಪಂಚದ ಇಬ್ಬರು ಅತೀ ಶ್ರೀಮಂತರ ನಡುವಿನ ಸಮರದಲ್ಲಿ ಪ್ಯೂಚರ್ ಗುಂಪು ಸಿಕ್ಕಿಹಾಕಿಕೊಂಡಿದೆ. ರಿಲೈಯನ್ಸ್ ಈಗಾಗಲೇ ದೇಶದ ಅತ್ಯಂತ ದೊಡ್ಡ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಯಾಗಿದ್ದು, ಪ್ಯೂಚರ್ ರಿಟೇಲ್‌ನ ಸಗಟು, ಲಾಜಿಸ್ಟಿಕ್ಸ್ ಹಾಗೂ ಗೋದಾಮುಗಳನ್ನು ಸ್ವಾಧೀನಪಡಿಸಿಕೊಂಡರೆ, ತನ್ನ ವ್ಯಾಪಾರ ದ್ವಿಗುಣವಾಗಿ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಅನುಕೂಲಗಳನ್ನು ಪಡೆಯುತ್ತೇನೆಂಬ ಲೆಕ್ಕಾಚಾರ ಅಂಬಾನಿಗಿದೆ.

ಕಿಶೋರ್ ಬಿಯಾನಿ

ಬಲಿಷ್ಠ ಬಹುರಾಷ್ಟ್ರೀಯ ಸಂಸ್ಥೆ ಅಮೆಜ಼ಾನ್ ಎದುರು ನ್ಯಾಯಾಲಯದ ಕಟಕಟೆಯಲ್ಲಿ ಬಿಡುವಿಲ್ಲದೇ ಬಡಿದಾಡುತ್ತಿರುವ ಕಿಶೋರ್ ಬಿಯಾನಿ ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟಿಹಾಕಿದ ಮಾಂತ್ರಿಕ. ಭಾರತದ ‘ಸ್ಯಾಮ್ ವಾಲ್ಟನ್’ ಎಂದೆಲ್ಲಾ ಕರೆಸಿಕೊಳ್ಳುವ ಕಿಶೋರ್ ಬಿಯಾನಿ ಬರೆದ ‘ಇಟ್ ಹ್ಯಾಪನ್ಡ್ ಇನ್ ಇಂಡಿಯಾ’ ಪುಸ್ತಕದ ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ. ಯಥಾಸ್ಥಿತಿಯನ್ನು ಪ್ರಶ್ನಿಸುತ್ತಾ, ವ್ಯಾಪಾರದಲ್ಲಿ ಸಾಂಪ್ರಾದಾಯಿಕ ಮನೋಭಾವವನ್ನು ವಿರೋಧಿ ಸುತ್ತಾ, ಮೂರು ದಶಕಗಳ ಕಾಲ ಬಿಡುವಿಲ್ಲದೇ ಎತ್ತರೆತ್ತರಕ್ಕೆ ಬೆಳೆಯುತ್ತಲೇ ಹೋದ ಕಿಶೋರ್ ಬಿಯಾನಿ ಇಷ್ಟು ಪ್ರಮಾಣದಲ್ಲಿ ಕೆಳಗೆ ಜಾರಿ ಬೀಳುತ್ತಾರೆಂದು ಯಾರು ಊಹಿಸಲು ಸಾಧ್ಯ?

೧೯೬೧ರಲ್ಲಿ ಮಧ್ಯಮ ವರ್ಗದ ವ್ಯಾಪಾರಿ ಕುಟುಂಬವೊಂದರಲ್ಲಿ ರಾಜಸ್ಥಾನದಲ್ಲಿ ಜನಿಸಿದ ಬಿಯಾನಿಗೆ ಭಾರತದ ಚಿಲ್ಲರೆ ಮಾರಾಟದ ಸ್ವರೂಪವನ್ನು ಬದಲಿಸಿದ ಹೆಗ್ಗಳಿಕೆಯಿದೆ. ಕಾಲೇಜು ಶಿಕ್ಷಣ ಮುಗಿಸಿದ ಬಿಯಾನಿಗೆ ಇದ್ದದ್ದು ಒಂದೇ ಆಸಕ್ತಿ. ವ್ಯಾಪಾರ. ವ್ಯಾಪಾರಿಗಳ ನಡುವೇ ಗಂಟೆಗಟ್ಟಲೆ ಕುಳಿತು ಗ್ರಾಹಕರ ವರ್ತನೆಯನ್ನು ಗಮನಿಸುತ್ತಿದ್ದರು. ಆರಂಭದಲ್ಲಿ ತಂದೆ ಮತ್ತು ಸಹೋದರರ ಜೊತೆ ‘ಬನ್ಸಿ ಸಿಲ್ಕ್ ಮಿಲ್ಸ್’ ನಲ್ಲಿ ಕೆಲಸ ಆರಂಭಿಸುವ ಬಿಯಾನಿ ಬಹಳ ಬೇಗನೆ ಜುಗುಪ್ಸೆ ಹೊಂದುತ್ತಾರೆ. ಆ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದ ರೀತಿ ತಪ್ಪೆಂದು ಅಭಿಪ್ರಾಯ ಪಡುತ್ತಾರೆ.

ಅದೇ ಸಮಯದಲ್ಲಿ ಬಿಯಾನಿ ತನ್ನ ಕೆಲವು ಸ್ನೇಹಿತರು ಸ್ಟೋನ್‌ವಾಷ್‌ಡ್ ಪ್ಯಾಂಟ್‌ಗಳನ್ನು ಧರಿಸುತ್ತಿರುವುದನ್ನು ಗಮನಿಸುತ್ತಾರೆ. ಸ್ಟೋನ್‌ವಾಷ್‌ಡ್ ವಸ್ತ್ರ ತಯಾರಿಸುವ ಸ್ಥಳೀಯ ತಯಾರಕನನ್ನು ಬಿಯಾನಿ ಪತ್ತೆ ಹಚ್ಚಿ ನಂತರ ನಗರದ ಕೆಲವು ಆಯ್ದ ತಯಾರಿಕರಿಗೆ ಹಾಗೂ ಅಂಗಡಿಗಳಿಗೆ ಆ ಬಟ್ಟೆಯನ್ನು ಮಾರುತ್ತಾರೆ. ೧೯೮೭ರಲ್ಲಿ ತಮ್ಮದೇ ಸಂಸ್ಥೆಯನ್ನು ಪ್ರಾರಂಭಿಸುವ ಬಿಯಾನಿ, ನಂತರದ ದಿನಗಳಲ್ಲಿ ಫ್ಯಾಕ್ಟರಿ, ಹೋಮ್ ಟೌನ್, ಫ಼ುಡ್ ಬಜ಼ಾರ್, ಸೆಂಟ್ರಲ್, ಈಜೋನ್, ಬಿಗ್ ಬಜ಼ಾರ್ ಇತ್ಯಾದಿ ಬ್ರಾಂಡ್‌ಗಳನ್ನು ಹುಟ್ಟುಹಾಕುತ್ತಾರೆ. ಇವೆಲ್ಲಾ ಈಗ ಮನೆಮಾತಿನ ಜನಪ್ರಿಯ ಬ್ರಾಂಡ್‌ಗಳಾಗಿವೆ. ತಮ್ಮ ಮೊದಲ ಡಿಪಾರ್ಟ್‌ಮೆಂಟ್ ಸ್ಟೋರ್ ಅನ್ನು ೧೯೯೭ರಲ್ಲಿ ಕೊಲ್ಕತ್ತಾದಲ್ಲಿ ಆರಂಭಿಸುತ್ತಾರೆ. ೨೦೦೯ರ ವೇಳೆಗೆ ನೂರು ಬಿಗ್ ಬಜ಼ಾರ್ ಮಳಿಗೆಗಳು ದೇಶದಾದ್ಯಂತ ಇರುತ್ತವೆ. ಇದು ಸಣ್ಣ ಸೀರೆ ಅಂಗಡಿಯಿಂದ ಆರಂಭವಾಗಿ ನೂರಾರು ಬೃಹತ್ ರಿಟೇಲ್ ಬ್ರಾಂಡ್‌ಗಳ ಒಡೆಯನಾಗಿ ಬಿಯಾನಿ ಬೆಳೆದು ಬಂದ ಕಥೆ.

ಪ್ಯೂಚರ್ ರಿಟೇಲ್, ಫ಼ೂ?ಯಚರ್ ಕನ್‌ಸ್ಯೂಮರ್, ಪ್ಯೂಚರ್ ಫ್ಯಾಷನ್ ಅಂಡ್ ಲೈಫ್‌ಸ್ಟೈಲ್ ಎಲ್ಲವೂ ಕಿಶೋರ್ ಬಿಯಾನಿ ಆರಂಭಿಸಿ, ಪೋಷಿಸಿ ಬೆಳೆಸಿರುವ ಸಂಸ್ಥೆಗಳು. ಗ್ರಾಹಕ ಚಿಲ್ಲರೆ ವ್ಯಾಪಾರದಲ್ಲಿ ಕಿಶೋರ್ ಬಿಯಾನಿ ಕೈಹಾಕದ ಕ್ಷೇತ್ರಗಳಿಲ್ಲ. ಅವರ ವ್ಯಾವಹಾರಿಕ ಜಾಣ್ಮೆ, ದೂರದೃಷ್ಟಿ, ಗ್ರಾಹಕರ ತುಡಿತವನ್ನು ಅರ್ಥಮಾಡಿಕೊಳ್ಳಬಲ್ಲ ಅವರ ಶಕ್ತಿ ಎಲ್ಲವೂ ಕಿಶೋರ್ ಬಿಯಾನಿಯನ್ನು ಒಬ್ಬ ಶ್ರೇಷ್ಠ ಉದ್ಯಮಿಯನ್ನಾಗಿ ಮಾಡುತ್ತವೆ. ಆದರೆ ಕೈಮೀರಿದ ಸಾಲ, ಕೋವಿಡ್-೧೯ ಪಿಡುಗು ಚಿಲ್ಲರೆ ವ್ಯಾಪಾರಕ್ಕೆ ನೀಡಿದ ಆಘಾತ ಎಲ್ಲವೂ ಬಿಯಾನಿಯ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತವೆ.

ರಿಲೈಯನ್ಸ್‌ನ ದಾಪುಗಾಲಿಗೆ ತಡೆಯೊಡ್ಡುವ ದೃಷ್ಟಿಯನ್ನು ಇಟ್ಟುಕೊಂಡು, ಬಿಯಾನಿ-ರಿಲೈಯನ್ಸ್ ಒಪ್ಪಂದವನ್ನು ಕಸದಬುಟ್ಟಿಗೆ ಹಾಕಲು ಅಮೆಜ಼ಾನ್ ಈಗ ಶತಾಯಗತಾಯ ಪ್ರಯತ್ನಿಸುತ್ತಿದೆ. ಅಮೆಜ಼ಾನ್ ಜಗತ್ತಿನ ಸರ್ವ ಶ್ರೇಷ್ಠ ಕಂಪನಿಗಳಲ್ಲೊಂದಾಗಿದೆ. ಅಮೆರಿಕಾದ ಮಾಹಿತಿ ತಂತ್ರಜ್ಞಾನ ವಲಯದ ಐದು ಬೃಹತ್ ಕಂಪನಿಗಳಲ್ಲಿ ಒಂದಾಗಿರುವ ಅಮೆಜ಼ಾನ್ ಪ್ರಪಂಚದ ಅತ್ಯಂತ ಬೆಲೆಬಾಳುವ ಬ್ರಾಂಡ್ ಎಂಬ ಹಿರಿಮೆಯನ್ನು ಹೊಂದಿದೆ. ೨೦೨೦ರಲ್ಲಿ ಈ ಸಂಸ್ಥೆಯ ಆದಾಯ ಸುಮಾರು ೩೮೬ ಬಿಲಿಯನ್ ಯು.ಎಸ್. ಡಾಲರ‍್ಗಳು (ಸುಮಾರು ೨೮ ಲಕ್ಷ ಕೋಟಿ ರೂಪಾಯಿ). ಈಗ ಈ ಸಂಸ್ಥೆ ಭಾರತದಲ್ಲಿ ಚಿಲ್ಲರೆ ವ್ಯಾಪಾರದ ವಲಯದ ಮೇಲೆ ಸಂಪೂರ್ಣ ಸ್ವಾಮ್ಯ ಸಾಧಿಸಲು ಸಜ್ಜಾಗಿದೆ.

ಪ್ಯೂಚರ್ ಸಂಸ್ಥೆಗಳುಅನಿಶ್ಚಿತ ಭವಿಷ್ಯ

ಕಿಶೋರ್ ಬಿಯಾನಿಯ ಪ್ಯೂಚರ್ ಗುಂಪಿನ ಸಂಸ್ಥೆಗಳಿಗೆ ಈಗ ಅತ್ತ ದರಿ ಇತ್ತ ಪುಲಿ ಪರಿಸ್ಥಿತಿ. ಇದೇ ಮಾರ್ಚ್ ೩೧ಕ್ಕೆ ಇನ್‌ಸಾಲ್ವೆನ್ಸಿ ಹಾಗೂ ಬ್ಯಾಂಕ್‌ರಪ್ಟ್‌ಸಿ ಕೋಡ್ (ಐಬಿಸಿ) ಮೇಲಿದ್ದ ತಾತ್ಕಾಲಿಕ ತಡೆ ಕೊನೆಯಾಗಲಿದೆ. ಈ ಗುಂಪಿನ ಸಂಸ್ಥೆಗಳಿಗೆ ಒಟ್ಟಾರೆಯಾಗಿ ಈಗ ಸುಮಾರು ೧೭ ಸಾವಿರ ಕೋಟಿ ರೂಪಾಯಿಗಳ ಸಾಲವಿದ್ದು, ಅವು ಬ್ಯಾಂಕ್‌ಗಳೊಡನೆ ಎಲ್ಲಾ ಸಾಲಗಳ ಒಂದು-ಬಾರಿ ಪುನರ್ರಚನೆಗೆ ಮಾತುಕತೆಯಲ್ಲಿವೆ. ಬ್ಯಾಂಕ್‌ಗಳು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಾಲ ನೀಡಿರುವ ಬ್ಯಾಂಕಿಂಗ್ ಅಲ್ಲದ ಸಂಸ್ಥೆಗಳು ಮಾರ್ಚ್ ನಂತರ ತಮ್ಮನ್ನು ದಿವಾಳಿತನಕ್ಕೆ ದೂಡಬಹುದೆಂಬ ಚಿಂತೆ ಸಹ ಪ್ಯೂಚರ್ ಗುಂಪಿಗಿದೆ.

ಮಾರ್ಚ್ ೨೨ರಂದು ದೆಹಲಿ ಹೈಕೋರ್ಟ್, ಪ್ಯೂಚರ್ ರಿಟೇಲ್ ಹಾಗೂ ರಿಲೈಯನ್ಸ್ ರಿಟೇಲ್ ತಮ್ಮ ನಡುವಿನ ಸುಮಾರು ರೂ. ೨೪,೭೧೩ ಕೋಟಿ ಮೊತ್ತದ ಒಪ್ಪಂದವನ್ನು ಅನುಷ್ಠಾನಗೊಳಿಸಲು ದೆಹಲಿಯ ಏಕ ನ್ಯಾಯಾಧೀಶರ ಪೀಠ ನೀಡಿದ್ದ ನಿರ್ಬಂಧಕ್ಕೆ ತಡೆಯಾಜ್ಞೆ ನೀಡಿದೆ. ೨೦೨೦ರ ಅಕ್ಟೋಬರ್ ೨೫ರಂದು ಸಿಂಗಪೂರದ ತುರ್ತು ನ್ಯಾಯಾಲಯ ಅಮೆಜ಼ಾನ್ ಪರ ತೀರ್ಪು ನೀಡಿ, ರಿಲೈಯನ್ಸ್ ಇಂಡಸ್ಟ್ರೀಸ್ ಹಾಗೂ ಪ್ಯೂಚರ್ ಒಪ್ಪಂದವನ್ನು ನಿಲ್ಲಿಸಲು ಮಧ್ಯಂತರ ತೀರ್ಪನ್ನು ನೀಡಿತ್ತು. ಸಿಂಗಪುರದ ನ್ಯಾಯಲಯವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಗೆ ಸಹ ಪತ್ರ ಬರೆದು ತನ್ನ ತೀರ್ಪನ್ನು ಎತ್ತಿ ಹಿಡಿಯಲು ತಿಳಿಸಿತ್ತು. ಇದಲ್ಲದೆ, ಅಮೆಜ಼ಾನ್ ರಿಲೈಯನ್ಸ್‌ನೊಂದಿಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ಯೂಚರ್ ಕೂಪನ್ಸ್ ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿತ್ತು.  ಈ ತೀರ್ಪಿನ ಆಧಾರದ ಮೇಲೆ ದೆಹಲಿಯ ಏಕ ನ್ಯಾಯಾಧೀಶ ಪೀಠ ತನ್ನ ಮಾರ್ಚ್ ೧೮ರ ಆದೇಶದಲ್ಲಿ ಒಪ್ಪಂದದ ಮುಂದಿನ ಅನುಷ್ಠಾನ ಕ್ರಮಗಳಿಗೆ ತಡೆಯಾಜ್ಞೆ ನೀಡಿತ್ತು. ಈ ವಿಚಾರಣೆ ಏಪ್ರಿಲ್ ಕಡೆಯ ವಾರದಲ್ಲಿ ಮುಂದುವರೆಯಲಿದೆ.

ಈಗಾಗಲೇ ಬಳಿದು ಬಸವಳಿದಿರುವ ಕಿಶೋರ್ ಬಿಯಾನಿ ಬಳಿ ಈಗ ಹೆಚ್ಚಿನ ಸಮಯವಿಲ್ಲ. ತೀವ್ರವಾಗಿ ನಗದಿನ ಕೊರತೆಯಿರುವ ಪ್ಯೂಚರ್ ಸಂಸ್ಥೆಗಳು ಮುಖೇಶ್ ಅಂಬಾನಿ ನೇತೃತ್ವದ ಸಂಸ್ಥೆಯೊಡನೆ ಈಗಾಗಲೇ ಆಗಿರುವ ಒಪ್ಪಂದವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವ ತರಾತುರಿಯಲ್ಲಿವೆ. ಸಾಲಗಾರರು ಹಣಕ್ಕಾಗಿ ಕಾಯುತ್ತಿದ್ದಾರೆ. ರಿಲೈಯನ್ಸ್ ಬಂಡವಾಳ ಹೂಡಲು ಸಿದ್ಧವಾಗಿದೆ. ಅಮೆಜ಼ಾನ್ ಈ ಸಂಸ್ಥೆಗಳನ್ನು ಕೊಂಡುಕೊಂಡು ಅವುಗಳನ್ನು ಉಳಿಸಲು ತಯಾರಿಲ್ಲ. ಇನ್ನೂ ತಡಮಾಡಿದರೆ, ಈಗಾಗಲೇ ಸಾಲದ ಕಂತು ತಪ್ಪಿಸಿರುವ ಪ್ಯೂಚರ್ ಗುಂಪಿನ ಸಂಸ್ಥೆಗಳು ದಿವಾಳಿತನ ವಿಚಾರಣೆಯನ್ನು ಎದುರಿಸಬೇಕಾಗಬಹುದೆಂಬ ಭೀತಿ ಪ್ಯೂಚರ್ ಸಂಸ್ಥೆಗಳಿಗಿವೆ.

ನ್ಯಾಯಲಯದಲ್ಲಿ ಹಾವುಏಣಿ ಆಟ

ಪ್ಯೂಚರ್ ಗುಂಪು ಹಾಗೂ ಅಮೆಜ಼ಾನ್ ಸಂಸ್ಥೆಯ ನಡುವಿನ ಈ ಕಾನೂನು ಸಮರ ಈಗಾಗಲೇ ಹಲವಾರು ನ್ಯಾಯಾಲಯಗಳ ಕಟಕಟೆಯಲ್ಲಿ ನಡೆದಿವೆ. ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಹಾಗೂ ಜಸ್ಟೀಸ್ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ, ಏಕ ನ್ಯಾಯಾಧೀಶ ಪೀಠ ಮಾರ್ಚ್ ೧೮ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಫ಼ೂ?ಯಚರ್ ಗುಂಪು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಅಮೆಜ಼ಾನ್ ಸಂಸ್ಥೆಗೆ ನೋಟಿಸ್ ನೀಡಿದೆ. ಜೊತೆಗೆ ಬಿಯಾನಿ ಹಾಗೂ ಇತರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನೀಡಿದ್ದ ಆದೇಶಕ್ಕೆ ಸಹ ತಡೆಯಾಜ್ಞೆ ನೀಡಿ, ಅವರಿಗೆ ಏಪ್ರಿಲ್ ೨೮ರಂದು ನ್ಯಾಯಾಲಯಕ್ಕೆ ಹಾಜರಾಗಲು ನಿರ್ದೇಶನ ನೀಡಿದೆ.

ಏಕ ನ್ಯಾಯಾಧೀಶ ಪೀಠದ ಜಸ್ಟೀಸ್ ಜೆ.ಆರ್.ಮಿಧಾ ಮಾರ್ಚ್ ೧೮ರಂದು ಪ್ಯೂಚರ್ ಗುಂಪು ಸಿಂಗಪೂರ ಮಧ್ಯಸ್ಥಗಾರರ ಆದೇಶವನ್ನು ಬೇಕಂತಲೇ ಉಲ್ಲಂಘಿಸಿತೆಂದು ಹೇಳಿ, ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದೆಂದು ಹೇಳಿತ್ತು. ಅಲ್ಲದೇ, ತುರ್ತು ನಿರ್ಣಾಯಕರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಯಾಕೆ ಮೂರು ತಿಂಗಳುಗಳ ಕಾಲ ಸಿವಿಲ್ ಕಾರಾಗೃಹದಲ್ಲಿ ಬಂಧಿಸಬಾರದೆಂದು ಕಾರಣ ನೀಡಲು ಹೇಳಿತ್ತು. ಜೊತೆಗೆ ಪ್ಯೂಚರ್ ಗುಂಪು ಹಾಗೂ ಅದರ ನಿರ್ದೇಶಕರಿಗೆ ರೂ. ೨೦ ಲಕ್ಷ ದಂಡ ವಿಧಿಸಿ ಆ ಮೊತ್ತವನ್ನು ಬಡತನ ರೇಖೆಯ ಕೆಳಗಿರುವವರಿಗೆ ಕೋವಿಡ್-೧೯ ಲಸಿಕೆ ನೀಡಲು ಪ್ರಧಾನ ಮಂತ್ರಿ ರಿಲೀಫ್ ಫಂಡ್‌ಗೆ ನೀಡಲು ಹೇಳಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ ೧೮ರಂದು ವಿಭಾಗೀಯ ಪೀಠ ತೆಗೆದುಕೊಂಡಿರುವ ನಿರ್ಧಾರ ಕಿಶೋರ್ ಬಿಯಾನಿಗೆ ತಾತ್ಕಾಲಿಕ ಆಮ್ಲಜನಕ ಸಿಕ್ಕಂತಾಗಿದೆ. ಆದರೆ ನೆತ್ತಿಯ ಮೇಲೆ ಕತ್ತಿ ಇನ್ನೂ ಅಲುಗಾಡುತ್ತಿದೆ.

ವಿಭಾಗೀಯ ಪೀಠದ ತೀರ್ಪಿಗೂ ಮುನ್ನವೇ, ಪ್ಯೂಚರ್ ಗುಂಪು ಸಿಂಗಪುರದ ಮಧ್ಯಸ್ಥಗಾರ ನ್ಯಾಯಾಲಯದಲ್ಲಿ ಅಮೆಜ಼ಾನ್ ಜೊತೆಗಿನ ಹೋರಾಟದಲ್ಲಿ ಪ್ಯೂಚರ್ ಗುಂಪನ್ನು ಹೊರಗಿಡುವಂತೆ ಮನವಿ ಮಾಡಿದೆ. ಅಮೆಜ಼ಾನ್‌ನ ಒಪ್ಪಂದವು ಫ಼ೂ?ಯಚರ್ ಕೂಪನ್ಸ್ ಜೊತೆ ಮಾತ್ರವಿತ್ತೆಂದು ಹಾಗೂ ಈಗ ಅಮೆಜ಼ಾನ್ ಹಕ್ಕು ಕೇಳುತ್ತಿರುವ ಪ್ಯೂಚರ್ ರಿಟೇಲ್‌ನೊಡನೆ ಇರಲಿಲ್ಲವೆಂಬುದು ಬಿಯಾನಿಯ ವಾದವಾಗಿದೆ.

ಅಮೆಜ಼ಾನ್ ನ್ಯಾಯಾಲಯದಲ್ಲಿ, ಈ ವಿವಾದವು ಭಾರತವು ವ್ಯವಹಾರ ಒಪ್ಪಂದಗಳನ್ನು ಎಷ್ಟರ ಮಟ್ಟಿಗೆ ಮನ್ನಿಸುತ್ತದೆ ಎಂಬ ವಿಷಯವಾಗಿದೆ ಎಂದು ವಾದಿಸಿದೆ. ಒಂದು ವೇಳೆ ಪ್ಯೂಚರ್ ಗುಂಪು ತನ್ನ ಒಪ್ಪಂದದಿಂದ ಪಾರಾಗಲು ನ್ಯಾಯಾಲಯ ಅನುವು ಮಾಡಿಕೊಟ್ಟರೆ ಅದು ವ್ಯಾವಹಾರಿಕ ಒಪ್ಪಂದಗಳು ಭಾರತದಲ್ಲಿ ಸಂರಕ್ಷಿತವಿಲ್ಲವೆಂಬ ಹಾಗೂ ಹೂಡಿಕೆಗಳು ಇಲ್ಲಿ ಅಪಾಯಕರ ಎಂಬ ಸಂದೇಶವನ್ನು ನೀಡುತ್ತದೆ ಎಂದು ವಾದಿಸಿ ಈ ವಿವಾದಕ್ಕೆ ಸಂಬಂಧಪಟ್ಟ ಅಂತಿಮ ತೀರ್ಪಿನ ಪ್ರಾಮುಖ್ಯವನ್ನು ಹೆಚ್ಚಿಸಿದೆ.

ಈ ಎರಡು ಬಣಗಳ ಪರವಾಗಿ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ಉನ್ನತ ಮಟ್ಟದ ವಕೀಲರು ವಾದಿಸುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ವಕೀಲರು ಈ ಎರಡು ಕಂಪನಿಗಳನ್ನು ಪ್ರತಿನಿಧಿಸುತ್ತಿದ್ದು, ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಇಬ್ಬರು ಮಾಜಿ ಸಾಲಿಸಿಟರ್ ಜರ್ನಲ್‌ಗಳಾದ ಗೋಪಾಲ್ ಸುಬ್ರಮಣಿಯನ್ ಮತ್ತು ಹರೀಶ್ ಸಾಳ್ವೆ, ಹಾಗೂ ಭಾರತದ ಮಾಜಿ ಅಡಿಷನಲ್ ಸಾಲಿಸಿಟರ್ ಜನರಲ್ ಹಾಗೂ ರಾಜಕಾರಣಿ ಅಭಿಷೇಕ್ ಮನು ಸಿಂಗ್ವಿ ಈ ಸೆಣಸಾಟದಲ್ಲಿದ್ದಾರೆ.

ಪ್ಯೂಚರ್ ಗುಂಪಿನ ಭವಿಷ್ಯ ಈ ವಿವಾದದಲ್ಲಿ ಬರುವ ತೀರ್ಪಿನ ಮೇಲೆ ನಿಂತಿದೆ. ಈಗಾಗಲೇ ೨೦೨೦ರ ಆಗಸ್ಟ್‌ನಲ್ಲಿ ಸಾಲದ ಕಂತುಗಳನ್ನು ಪಾವತಿಸುವುದರಲ್ಲಿ ಹಾಗೂ ಜನವರಿಯ ಡಾಲರ್ ಬಾಂಡ್ ಮೇಲಿನ ಬಡ್ದಿ ಪಾವತಿಯನ್ನು ಮಾಡುವುದರಲ್ಲಿ ವಿಫಲವಾಗಿರುವ ಪ್ಯೂಚರ್ ಗುಂಪು ದೈನ್ಯಾವಸ್ಥೆಯಲ್ಲಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಸತತವಾಗಿ ನಷ್ಟ ಅನುಭವಿಸಿರುವ ಪ್ಯೂಚರ್ ರಿಟೇಲ್‌ನ ಶೇರು ಕಳೆದ ಒಂದು ವರ್ಷದಲ್ಲಿ ಶೇ.೮೦ರಷ್ಟು ಕುಸಿದಿದೆ.

ನೇಪಥ್ಯಕ್ಕೆ ಸರಿಯಲಿರುವ ಕಿಶೋರ್ ಬಿಯಾನಿ

ಅಮೆಜ಼ಾನ್ ತನ್ನ ಉದ್ದೇಶ ಪ್ಯೂಚರ್ ರಿಟೇಲ್ ಅನ್ನು ಉಳಿಸುವುದೆಂದು ಹೇಳುತ್ತಿದ್ದರೂ ಅದರ ಕ್ರಮಗಳು ಆ ನಿಟ್ಟಿನಲ್ಲಿಲ್ಲ. ಅದರ ಉದ್ದೇಶ, ಪ್ಯೂಚರ್ ರಿಟೇಲ್ ಪೂರ್ಣವಾಗಿ ಮುಳಗಿಹೋದರೂ ಪರವಾಗಿಲ್ಲ, ಆದರೆ ಮುಖೇಶ್ ಅಂಬಾನಿಯ ತೆಕ್ಕೆಗೆ ಬೀಳಬಾರದೆಂಬುದಾಗಿದೆ. ಈ ದೈತ್ಯರ ಕಾಳಗದಲ್ಲಿ ಯಾರೇ ಗೆದ್ದರೂ ಸಹ, ಚಿಲ್ಲರೆ ವ್ಯಾಪಾರದ ಚಕ್ರವರ್ತಿ ಕಿಶೋರ್ ಬಿಯಾನಿ ನೇಪಥ್ಯಕ್ಕೆ ಸರಿಯುವುದು ಹೆಚ್ಚುಕಡಿಮೆ ಖಚಿತವಾಗಿದೆ. ಒಂದು ವೇಳೆ ರಿಲೈಯನ್ಸ್ ಜೊತೆಗಿನ ಒಪ್ಪಂದಕ್ಕೆ ಗೆಲುವು ದೊರೆತರೂ ಕಿಶೋರ್ ಬಿಯಾನಿಗೆ ಯಾವುದೇ ಮೊತ್ತ ದೊರಕುವುದಿಲ್ಲ. ಹೆಚ್ಚು-ಕಡಿಮೆ ಅಷ್ಟು ಹಣವೂ ಸಾಲ ನೀಡಿದವರ ಪಾಲಾಗುತ್ತದೆ. ಅಲ್ಲದೇ, ಒಪ್ಪಂದದ ಪ್ರಕಾರ ಕಿಶೋರ್ ಬಿಯಾನಿ ೧೫ ವರ್ಷಗಳ ಕಾಲ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸುವಂತಿಲ್ಲ.

‘ಇಟ್ ಹ್ಯಾಪನ್ಡ್ ಇನ್ ಇಂಡಿಯಾ’ ಬರೆದ ಕಿಶೋರ್ ಬಿಯಾನಿ ಮುಂದೊಂದು ದಿನ ‘ದಿ ಫಾಲ್ ಆಫ್ ಫ಼ೂ?ಯಚರ್ ಗ್ರೂಪ್’ ಪುಸ್ತಕ ಬರೆದರೂ ಅಚ್ಚರಿಯಿಲ್ಲ.

Leave a Reply

Your email address will not be published.