ಅಮೆರಿಕದ ಎತ್ತು ಓಡಿಸಿ ಮತ್ತೆ ನೀರಿಗಿಳಿದ ಅಫಘಾನಿಸ್ತಾನ

ಅಂಕಣವನ್ನು ಬರೆಯುವ ಸಮಯಕ್ಕೆ ಅಮೆರಿಕದ ಸೈನ್ಯ ಅಫಘಾನಿಸ್ತಾನದಿಂದ ಕಾಲ್ಕೀಳಲು ತಾಲಿಬಾನ್ ನೀಡಿರುವ ಆಗಸ್ಟ್ 31 ಗಡುವನ್ನು ಪಾಲಿಸುವುದಾಗಿ ಹೇಳಿಕೊಂಡಿದೆ. ಅಮೆರಿಕದ ಅಧ್ಯಕ್ಷ ಬೈಡೆನ್ ಆಗಸ್ಟ್ ಅಂತ್ಯದೊಳಗೆ ಬಗ್ರಾಮ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಸಂಪೂರ್ಣವಾಗಿ ಅಮೆರಿಕದ ನಾಗರಿಕರು ಮತ್ತು ಸೈನಿಕರನ್ನು ಹಿಂದೆಗೆಯುವುದಾಗಿಯೂ ಆಶ್ವಾಸನೆ ನೀಡಿದ್ದಾರೆ. ಇದರಂತೆ ಅಫಘಾನಿಸ್ತಾನದಲ್ಲಿ ಅಮೆರಿಕದ ದುಬಾರಿ ವ್ಯವಹಾರ ಸುಮಾರು ಇಪ್ಪತ್ತು ವರ್ಷಗಳ ನಂತರದಲ್ಲಿ ಕೊನೆಗಾಣಲಿದೆ.

80 ಮತ್ತು 90 ದಶಕಗಳಲ್ಲಿ ಇದೇ ರೀತಿಯಲ್ಲಿ ಸೋವಿಯಟ್ ಸೈನ್ಯ ಅಫಘಾನಿಸ್ತಾನದಲ್ಲಿ ಬೇರೂರಿತ್ತು. ಆಗ ಮುಜಾಹಿದೀನ್ ಸೈನ್ಯಕ್ಕೆ ಇದೇ ಅಮೆರಿಕದ ಗೂಢಚಾರ ಸಂಸ್ಥೆ ಶಸ್ತ್ರಾಸ್ತ್ರಗಳನ್ನು ಕೊಡುವುದಲ್ಲದೆ ಹೆಗಲ ಮೇಲಿನಿಂದ ಹಾರಿಸಬಲ್ಲ ಸ್ಟಿಂಜರ್ ಮಿಸೈಲ್ಗಳನ್ನು ನೀಡಿದ್ದರು. ಕ್ಷಿಪಣಿ ಪ್ರಯೋಗಕ್ಕೆ ರಷ್ಯಾಸೋವಿಯಟ್ ಸೈನ್ಯದ ಹೆಲಿಕಾಪ್ಟರ್ಗಳು ಮತ್ತು ಯುದ್ಧ ಟ್ಯಾಂಕುಗಳು ಶಿಕಾರಿಯಾಗಿದ್ದವು. ರಷ್ಯಾದ ಸೈನ್ಯವನ್ನು ಓಡಿಸಿದ ಮುಜಾಹಿದೀನ್ ನಂತರದ ದಿನಗಳಲ್ಲಿ ತಾಲಿಬಾನ್ ಸೈನ್ಯಕ್ಕೆ ಅಧಿಕಾರ ಹಸ್ತಾಂತರಿಸಿತ್ತು. ಅಂದು ರಷ್ಯಾದ ಜೊತೆಗೂಡಿದ್ದ ನಜೀಬ್ರವರನ್ನು ಕಾಬೂಲ್ ರಸ್ತೆಯಲ್ಲಿ ಗಲ್ಲಿಗೇರಿಸಲಾಗಿತ್ತು. 90 ದಶಕದ ಅಂತ್ಯಕ್ಕೆ ಅತ್ಯಂತ ಬರ್ಬರ ಹಾಗೂ ಮುಸ್ಲಿಮ್ ಸಂಪ್ರದಾಯವಾದಿ ರಾಷ್ಟ್ರವಾಗಿ ಅಫಘಾನಿಸ್ತಾನ ಹೊರಹೊಮ್ಮಿತ್ತು. ಷರಿಯಾ ಕಾನೂನಿನಂತೆ ಸಂಗೀತ ನೃತ್ಯ ಕ್ರೀಡೆಗಳು ನಿರ್ಬಂಧಗೊಂಡರೆ ಹೆಂಗಸರನ್ನು ಕೇವಲ ಮನೆಯೊಳಗೆ ಇರಲು ಆದೇಶಿಸಲಾಗಿತ್ತು. ಅಕ್ಷರಶಃ ದೇಶವನ್ನು ಮಧ್ಯಯುಗಕ್ಕೆ ಕೊಂಡೊಯ್ಯುವ ಹಾದಿಯಲ್ಲಿತ್ತು.

ಸಮತೋಲನವನ್ನು ಕದಡಿದ ಘಟನೆ 2001 ಸೆಪ್ಟೆಂಬರ್ 11 ರಂದು ನಡೆದಿತ್ತು. ಓಸಾಮ ಬಿನ್ ಲಾಡೆನ್ನಿನ ಅಲ್ ಖೈದಾ ಉಗ್ರರು ಅಮೆರಿಕದಲ್ಲಿ ವೈಮಾನಿಕ ದಾಳಿ ಮಾಡಿ ದೂರದ ಅಮೆರಿಕ ಸೈನ್ಯ ಅಫಘಾನಿಸ್ತಾನ ಪ್ರವೇಶವಾಗುವಂತೆ ಮಾಡಿದ್ದರು. ತಾಲಿಬಾನಿನ ಮುಖ್ಯಸ್ಥ ಮುಲ್ಲಾ ಓಮರ್ ಮತ್ತು ಓಸಾಮ ಬಿನ್ ಲಾಡೆನ್ ಅಮೆರಿಕದ ದಾಳಿಗೆ ಹೆದರಿ ಓಡಿದ್ದರು. ಮುಂದಿನ ಹಲವಾರು ವರ್ಷಗಳವರೆಗೆ ಅಮೆರಿಕ ಸೈನ್ಯದಿಂದ ಇವರಿಬ್ಬರ ಹುಡುಕುವಿಕೆ ಮುಂದುವರೆದಿತ್ತು. ಮಧ್ಯೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ನೆರವಿನಿಂದ ಅಫಘಾನಿಸ್ತಾನದಲ್ಲಿ ಪಾಶ್ಚಾತ್ಯಪರ ಸರಕಾರವೊಂದು ರಚನೆಯಾಗಿತ್ತು. ಮೊದಲಿಗೆ ಹಮೀದ್ ಕಜ್ರ್ಯಾರವರ ಅಧ್ಯಕ್ಷತೆಯಲ್ಲಿ ಸರ್ಕಾರ ಸರಿಸುಮಾರು 2002 ರಿಂದ ಆಫ್ಘಾನಿಸ್ತಾದ ಚುಕ್ಕಾಣಿ ಹಿಡಿದಿತ್ತು.

2001 ರಿಂದ 2021 ರವರೆಗಿನ ಇಪ್ಪತ್ತು ವರ್ಷಗಳಲ್ಲಿ ತಾಲಿಬಾನ್ ಸಂಪ್ರದಾಯವಾದಿ ಸಂಘಟನೆ ದೇಶದ ಶೇಕಡ ಹತ್ತರಿಂದ ಮೂವತ್ತರಷ್ಟು ಜಿಲ್ಲೆಗಳ ಮೇಲೆ ತನ್ನ ಹಿಡಿತ ಮುಂದುವರೆಸಿತ್ತು. ಪ್ರಾಂತ್ಯಗಳ ರಾಜಧಾನಿಗಳು ಸರ್ಕಾರದ ಹಿಡಿತದಲ್ಲಿದ್ದರೆ ಹೊರಗಿನ ಹಲವಾರು ಪ್ರದೇಶಗಳು ತಾಲಿಬಾನ್ ಹಿಡಿತದಲ್ಲಿಯೇ ಮುಂದುವರೆದಿದ್ದವು. ಸಮಯದಲ್ಲಿ ತಾಲಿಬಾನ್ ತೆರಿಗೆ ಸಂಗ್ರಹ, ಆಫೀಮು ರಫ್ತು ಹಾಗೂ ವಿದೇಶಿ ದೇಣಿಗೆಗಳಿಂದ ತನ್ನ ಕಾರುಬಾರನ್ನು ಎಂದಿನಂತೆಯೇ ಮುಂದುವರೆಸಿತ್ತು. ಶಸ್ತ್ರಾಸ್ತ್ರ ಮೂರೈಕೆ ಕೂಡಾ ನಿಂತಿರಲಿಲ್ಲ.

ಮಧ್ಯೆ ಆಫ್ಘನ್ ಸರ್ಕಾರಗಳು ಬಂದು ಹೋದವು. ಸಂವಿಧಾನದ ಪ್ರಕಾರ ಚುನಾವಣೆಗಳನ್ನು ನಡೆಸಲಾಯಿತಾದರೂ ಚುನಾವಣೆಯ ಫಲಿತಾಂಶಗಳನ್ನು ರಾಜಕೀಯ ವಿರೋಧಿಗಳು ಒಪ್ಪುತ್ತಿರಲಿಲ್ಲ. ಕೊನೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಹೊಂದಾಣಿಕೆ ರಾಜಕೀಯ ಮುಂದುವರಿದಿತ್ತು. ಇದರಂತೆ ಮೊದಲು ಹಮೀದ್ ಕರ್ಜೈ ನಂತರ ಅಷ್ರಫ್ ಘನಿಯವರು ದೇಶದ ಅಧ್ಯಕ್ಷರಾಗಿದ್ದರು. ರಾಷ್ಟ್ರ ಮಟ್ಟದಲ್ಲಿ ಇವರು ಅಧಿಕಾರ ಚಲಾಯಿಸಿದರೂ ಪ್ರಾಂತೀಯ ಮಟ್ಟದಲ್ಲಿ ಹಲವಾರು ಕ್ಷೇತ್ರೀಯ ಸೇನಾಪತಿಗಳು ತಮ್ಮ ಆಳ್ವಿಕೆ ಮುಂದುವರೆಸಿದ್ದರು. ಒಂದು ರೀತಿಯಲ್ಲಿ ಕೊಂಡುಕೊಳ್ಳುವ ಸಂಬಂಧದಂತೆ ಆಫ್ಘನ್ ಸರ್ಕಾರ ಮುಂದುವರೆದಿತ್ತು.

ಅಮೆರಿಕದ ಸರ್ಕಾರ ಅಫಘಾನಿಸ್ತಾನ ಆರ್ಥಿಕತೆಯನ್ನು ಕಟ್ಟಲು ಬಿಲಿಯಾಂತರ ಡಾಲರ್ ಖರ್ಚು ಮಾಡಿತ್ತು. ಇದರಲ್ಲಿ ಸೈನ್ಯದ ನಿರ್ವಹಣೆಗೆ ಎಷ್ಟು ಮತ್ತು ನಾಗರೀಕ ಸಔಲಭ್ಯಗಳಿಗೆ ಎಷ್ಟು ಎಂಬ ವಿಭಜನೆ ಕಷ್ಟವಾದರೂ ಆಫ್ಘನ್ ಆರ್ಥಿಕತೆ ಸಂಪೂರ್ಣವಾಗಿ ಅಮೆರಿಕದ ಡಾಲರ್ಗಳ ಮೇಲೆಯೇ ನಿರ್ಭರವಾಗಿತ್ತು. ಅಫಘಾನಿಸ್ತಾನಕ್ಕೆ ಸುಮಾರು ಒಂದೂವರೆ ಲಕ್ಷ ಸಂಖ್ಯೆಯ ದೇಶಿ ಸೈನ್ಯವನ್ನೂ ಕಟ್ಟಲಾಗಿತ್ತು. ಆದರೆ ಸೈನ್ಯಕ್ಕೆ ಅಫಘಾನಿಸ್ತಾನದ ಪರವಾಗಿ ಹಾಗೂ ತಾಲಿಬಾನ್ ವಿರೋಧಿಯಾಗಿ ಯುದ್ಧ ಮಾಡಿ ಗೆದ್ದ ಉದಾಹರಣೆಗಳಿಲ್ಲ. ಎಲ್ಲಕ್ಕೂ ಅಮೆರಿಕದ ಸೈನ್ಯ ಹಾಗೂ ಡ್ರೋನ್ ಕ್ಷಿಪಣಿ ದಾಳಿಯನ್ನೇ ಅವಲಂಬಿಸಲಾಗಿತ್ತು. ಎಲ್ಲಕ್ಕಿಂತ ಮೇಲಾಗಿ ಅಫಘಾನಿಸ್ತಾನಕ್ಕೆ ನಂಬಿಕರ್ಹ ರಾಷ್ಟ್ರೀಯ ನಾಯಕನೊಬ್ಬನು ಸಿಗಲೇ ಇಲ್ಲ.

2001 ರಿಂದ 2021 ರವರೆಗಿನ ಇಪ್ಪತ್ತು ವರ್ಷಗಳಲ್ಲಿ 2000 ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಅಫಘಾನಿಸ್ತಾನದಲ್ಲಿ ಹುತಾತ್ಮರಾಗಿದ್ದರು. ಸಾವಿರಾರು ಸೈನಿಕರು ಗಾಯಾಳುಗಳಾಗಿದ್ದರು. ಸಾವು ನೋವಿನ ಸಂಖ್ಯೆ ಹಾಗೂ ಇಪ್ಪತ್ತು ವರ್ಷಗಳ ನಂತರವಾದರೂ ಏನಾದರೂ ಗಟ್ಟಿಯಾದ ಸಾಧನೆ ಮಾಡಲಾಗಿಲ್ಲವೆಂಬ ಅಳುಕು ಅಮೆರಿಕದ ಸಾರ್ವಜನಿಕ ವಲಯದಲ್ಲಿತ್ತು. ರಾಜಕಾರಣಿಗಳಾಗಿ ಇದಕ್ಕೆ ಸ್ಪಂದಿಸಲೇಬೇಕಾದ ಅಮೆರಿಕದ ಅಧ್ಯಕ್ಷರು ಆದಷ್ಟು ಬೇಗ ಅಫಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ಹಿಂದೆಗೆಯುವ ಮಾತನ್ನಾಡಿದ್ದರು. ಮೊದಲು ಬರಾಕ್ ಓಬಾಮ ಹಾಗೂ ನಂತರದಲ್ಲಿ ಡಾನಲ್ಡ್ ಟ್ರಂಪ್ ಅಮೆರಿಕದ ಸೈನ್ಯದ ಹಿಂದೆಗೆತಕ್ಕೆ ಗಡುವು ನೀಡಲಾರಂಭಿಸಿದ್ದರು. ಟ್ರಂಪ್ 2020 ರಲ್ಲಿಯೇ ಸೈನ್ಯ ಹಿಂದೆಗೆತಕ್ಕೆ ಘೋಷಣೆ ಮಾಡಿದ್ದರಾದರೂ ಕೋವಿಡ್ ಮತ್ತಿತರ ವಿವಾದಗಳಲ್ಲಿ ಗಡುವು ಮುಂದಕ್ಕೆ ಹೋಗಿತ್ತು.. ನಂತರದಲ್ಲಿ ಬಂದ ಬೈಡೆನ್ 2021 ಜುಲೈಆಗಸ್ಟ್ನಲ್ಲಿ ತಮ್ಮ ಸೈನ್ಯವನ್ನು ಹಿಂದೆಗೆಯುವ ಗಟ್ಟಿ ಆಶ್ವಾಸನೆ ನೀಡಿದ್ದರು.

ನಡುವೆ ಕತಾರ್ ಮತ್ತು ದೋಹಾಗಳಲ್ಲಿ ಅಮೆರಿಕವು ತಾಲಿಬಾನ್ ಜೊತೆಗೆ ತನ್ನ ಸಂಧಾನದ ಮಾತುಕತೆ ಮುಂದುವರೆಸಿತ್ತು. ಎದೆಗುಂದದ ತಾಲಿಬಾನ್ ಅಫಘಾನಿಸ್ತಾನದಿಂದ ಅಮೆರಿಕದ ಸೈನ್ಯ ಹಿಂದೆಗೆತಕ್ಕೆ ಬೆದರಿಕೆ ಮತ್ತು ಗಡುವು ವಿಧಿಸುತ್ತಿತ್ತು. 2021 ಜುಲೈ ಅಂತ್ಯಕ್ಕೆ ತನ್ನ ಸೈನಿಕ ಹೋರಾಟ ಮುಗಿಸಿದ ಅಮೆರಿಕ ಅಫಘಾನಿಸ್ತಾನದ ಸರ್ಕಾರ ಉಳಿಸಿಕೊಳ್ಳಲು ಅಲ್ಲಿನ ಸರ್ಕಾರವೇ ಮುಂದೆ ಕಾರ್ಯಾಚರಣೆ ಮಾಡಬೇಕೆಂದು ಅಪೇಕ್ಷಿಸಿತ್ತು. ಇದರಂತೆ ಮುಂದಿನ ಎರಡು ಮೂರು ತಿಂಗಳುಗಳವರೆಗೆ ತಾಲಿಬಾನ್ ಮತ್ತು ಸರ್ಕಾರಿ ಸೈನ್ಯದ ನಡುವೆ ಯುದ್ಧ ನಡೆಯುವುದೆಂದೂ ಹಾಗೂ ಸೈನ್ಯ ಹಿಂದೆಗೆತಕ್ಕೆ ಅಮೆರಿಕಕ್ಕೆ ಸಾಕಷ್ಟು ಕಾಲಾವಕಾಶ ದೊರೆಯುವುದೆಂದೂ ಎಣಿಸಲಾಗಿತ್ತು.

ಆದರೆ ಕ್ರೂರ ಆಗಸ್ಟ್ ತಿಂಗಳಲ್ಲಿ ನಡೆದ ಘಟನೆಗಳು ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳನ್ನೇ ಅಚ್ಚರಿಗೊಳಿಸಿದ್ದವು. ಯುದ್ಧ ಮಾಡಲು ಬಯಸುವ ಆಸಕ್ತಿ ತೋರದ ಆಫ್ಘನ್ ಸೇನೆ ಏಕಾಏಕಿ ತಾಲಿಬಾನಿಗಳಿಗೆ ಶರಣಾಗಿತ್ತು. ಅಧ್ಯಕ್ಷ ಅಫ್ಘನ್ ಘನಿ ರಾತ್ರೋರಾತ್ರಿ ಪಲಾಯನಗೈದಿದ್ದರು. ತಾಲಿಬಾನಿ ಸೈನ್ಯ ಯಾವುದೇ ಅಡೆತಡೆಯಿಲ್ಲದೆ ಕಾಬೂಲ್ ಪ್ರವೇಶಿಸಿಅಧಿಕಾರ ಹಾಗೂ ಅಧ್ಯಕ್ಷೀಯ ಅರಮನೆಯನ್ನು ಆಕ್ರಮಿಸಿತ್ತು. ಅಂತರರಾಷ್ಟ್ರೀಯ ಸಮುದಾಯ ದಂಗಾದರೆ ಸ್ವತಃ ಅಮೆರಿಕದ ರಾಜತಾಂತ್ರಿಕ ಬಳಗ ಮೌನಕ್ಕೆ ಶರಣಾಗಿತ್ತು.

ಅಫಘಾನಿಸ್ತಾನದ ಸರ್ಕಾರದ ಪತನ ಹಾಗೂ ತಾಲಿಬಾನಿನ ವಿಜಯ ಅಮೆರಿಕದ ಸೂಪರ್ಪವರ್ ಸ್ಥಾನಕ್ಕೆ ದೊಡ್ಡ ಪೆಟ್ಟಾಗಿ ಪರಿಣಮಿಸಿತ್ತು. ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಸೈನ್ಯವೆಂದು ಬೀಗುತ್ತಿದ್ದ ಸೈನ್ಯ ವಿಶ್ವದ ಅತ್ಯಂತ ಬಡರಾಷ್ಟ್ರದ ಬಂಡುಕೋರ ಸೈನ್ಯವೊಂದಕ್ಕೆ ರಾಜ್ಯಾಡಳಿತ ಒಪ್ಪಿಸಿ ಹೊರಡಬೇಕಾಗಿರುವುದು ದೊಡ್ಡ ವಿಪರ್ಯಾಸವೇ ಸರಿ. ವಿಶ್ವದ ದೊಡ್ಡಣ್ಣನಾಗಬೇಕಾದರೆ ಸೈನಿಕಶಕ್ತಿಯ ಉಪಯೋಗದಲ್ಲಿ ಬಲಿದಾನ ನೀಡಲು ಅಮೆರಿಕ ಸಿದ್ಧವಾಗಲೇಬೇಕಿತ್ತು. ಕಳೆದ ಹತ್ತು ವರ್ಷಗಳಲ್ಲಿ ಇರಾಖ್ ಸಿರಿಯಾ ಹಾಗೂ ಅಫಘಾನಿಸ್ತಾನಗಳಲ್ಲಿ ತನ್ನ ಸೈನಿಕರ ಸಾವುನೋವು ಅಮೆರಿಕದ ಸಾರ್ವಜನಿಕ ಅಭಿಪ್ರಾಯವನ್ನು ಯುದ್ಧದಿಂದ ಹಿಮ್ಮೆಟ್ಟಿಸಿತ್ತು. ಅಮೆರಿಕವು ಹಲವಾರು ಸೈನಿಕ ಕಾರ್ಯಾಚರಣೆಗಳನ್ನುಗುತ್ತಿಗೆದಾರಪಡೆಗಳಿಂದಲೇ ಮಾಡುತ್ತಿದ್ದರೂ ಅಮೆರಿಕನ್ನರ ಯಾವುದೇ ಜೀವಹಾನಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿಯೇ ಬಿಂಬಿತವಾಗಿ ಯುದ್ಧದ ಪರವಾದ ಸಾರ್ವಜನಿಕ ನೀತಿ ದಿನೇದಿನೇ ಕುಂಠಿತವಾಗಿದೆ. ಹೀಗೆಯೇ ಮುಂದುವರೆದರೆ ಅಮೆರಿಕ ತನ್ನ ಸ್ಥಾನವನ್ನು ಕಳೆದುಕೊಳ್ಳುವ ದಿನಗಳು ದೂರವಿಲ್ಲ.
ಅದೇ ರೀತಿಯಲ್ಲಿ ಅಮೆರಿಕ ನೇತೃತ್ವದ ಪಾಶ್ಚಾತ್ಯ ರಾಷ್ಟ್ರಗಳ ಒಕ್ಕೂಟದ ಗೌರವಕ್ಕೂ ಧಕ್ಕೆಯಾಗಿದೆ. ಅಫಘಾನಿಸ್ತಾನದ ಘಟನೆಗಳು ಪಾಶ್ಚಾತ್ಯ ರಾಷ್ಟ್ರಗಳ ಗರಿಮೆ ಮತ್ತು ಹಿರಿಮೆಗೆ ಪೆಟ್ಟು ನೀಡಿವೆ. ಅಮೆರಿಕವೇ ಸೋತು ಹಿಮ್ಮೆಟ್ಟಿದರೆ ಅಮೆರಿಕದ ಬಾಲಂಗೋಚಿ ರಾಷ್ಟ್ರಗಳಾದ ಯುಕೆ, ಜಪಾನ್, ಆಸ್ಟ್ರೇಲಿಯಾ, ಕೆನಡ, ಜರ್ಮನಿಗಳು ಏನು ಮಾಡಬೇಕು..? ಮುಂದಿನ ದಿನಗಳಲ್ಲಿ ಪಾಶ್ಚಾತ್ಯ ಒಕ್ಕೂಟ ಅಮೆರಿಕದ ನೇತೃತ್ವವನ್ನೇ ಪ್ರಶ್ನಿಸಬಹುದು ಹಾಗೂ ವಿಶ್ವದ ಯಾವುದೇ ಅಂತಃಕಲಹದ ಪ್ರದೇಶಗಳಲ್ಲಿ ಭಾಗವಹಿಸಲು ಹಿಂದೇಟು ಹಾಕಬಹುದು ಎನ್ನಲಾಗಿದೆ.

ಅಮೆರಿಕದ ಮುಖಭಂಗ ಹಾಗೂ ತಾಲಿಬಾನ್ ವಿಜಯವು ಚೀನಾಕ್ಕೆ ಅಪಾರ ಸಂತಸ ತಂದಿರಬೇಕು. ಅಂತೆಯೇ ಚೀನಾ ತಾಲಿಬಾನ್ ಸರ್ಕಾರವನ್ನು ಒಪ್ಪಿದ ಮೊದಲ ಎರಡು ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ತಾಲಿಬಾನಿಗೆ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಚೀನಾಪಾಕಿಸ್ತಾನ ಕಾರಿಡಾರನ್ನು ಕಾಬೂಲಿನವರೆಗೆ ವಿಸ್ತರಿಸುವುದಾಗಿಯೂ ಹೇಳಿಕೊಂಡಿದೆ. ತನಗೆ ತಾನು ಇಸ್ಲಾಮಿಕ್ ಎಮಿರೇಟ್ ಎಂದು ಹೇಳಿಕೊಳ್ಳುವ ತಾಲಿಬಾನ್ ಚೀನಾದ ಉಯ್ಘುರ್ ಪ್ರಾಂತ್ಯದಲ್ಲಿ ಮುಸ್ಲಿಮರ ದಮನದ ಬಗ್ಗೆ ಏನು ಹೇಳುವುದೆಂಬುದನ್ನು ಕಾದುನೋಡಬೇಕಿದೆ. ಆದರೆ ಸದ್ಯಕ್ಕೆ ಶತ್ರುವಿನ ಶತ್ರು ತನ್ನ ಮಿತ್ರ ಎಂಬಂತೆ ಚೀನಾ ಮತ್ತು ತಾಲಿಬಾನಿಗಳು ಪರಸ್ಪರರ ತೆಕ್ಕೆಗೆ ಬೀಳುವಂತಾಗಿದೆ.

ಅಫಘಾನಿಸ್ತಾನದ ಎಲ್ಲ ಬೆಳವಣಿಗೆಗಳಲ್ಲಿ ಭಾರತ ಕೇವಲ ಮೂಕಪ್ರೇಕ್ಷಕನಾಗಿದೆ. ಕಾಬೂಲಿನಿಂದ ಭಾರತೀಯ ದೂತಾವಾಸದ ಸಿಬ್ಬಂದಿಯನ್ನು ಹಾಗೂ ನೂರಾರು ಹಿಂದುಸಿಖ್ಖ್ ಅಫಘನ್ ನಾಗರೀಕರನ್ನು ರಕ್ಷಿಸುವುದರ ಹೊರತಾಗಿ ಭಾರತದ ಪಾತ್ರ ಗೌಣವಾಗಿದೆ. ಮುಂದುವರೆದ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಕೂಡಾ ಹೊರದೇಶಕ್ಕೆ ತಮ್ಮ ಸೈನಿಕರನ್ನು ಕಳುಹಿಸುವ ಹೊಣೆಗಾರಿಕೆ ತೋರಿದರೆ ಭಾರತ ಇನ್ನೂ ಅಂತರರಾಷ್ಟ್ರೀಯ ಹೊಣೆಗಾರಿಕೆ ಹೆಗಲಿಗೇರಿಸಲು ಮೀನಮೇಷ ಎಣಿಸುತ್ತಿದೆ. ಸಹಜವಾಗಿ ತಾಲಿಬಾನ್ ಪಾಕಿಸ್ತಾನದ ಸೇನೆಯ ಸಹಾಯಕ್ಕೆ ಋಣಿಯಾಗಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಸೈನಿಕರು ಪಾಕಿಸ್ತಾನದ ಅಣತಿಯಂತೆ ಕಾಶ್ಮೀರ ಕಣಿವೆಯಲ್ಲಿಯೂ ಸಹಾ ಶಸ್ತ್ರಾಸ್ತ್ರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಹಾಗೇನಾದರೂ ಆದಲ್ಲಿ ಇದುವರೆಗೆ ತಣ್ಣಗಿರುವ ಕಾಶ್ಮೀರ ಚಳುವಳಿ ಮತ್ತಷ್ಟು ಉಗ್ರವಾಗಲಿದೆ.

ಆದಾಗ್ಯೂ ಎಲ್ಲವೂ ಹಳಸಿದಂತಿಲ್ಲ. 2021 ತಾಲಿಬಾನ್ 2001 ತಾಲಿಬಾನಿನಂತಿಲ್ಲ. ತಾಲಿಬಾನ್ ನಾಯಕತ್ವ ಬದಲಾಗಿದೆ. ಹಾಗೆಯೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಸ್ವಾತಂತ್ರ್ಯ ಅನುಭವಿಸಿರುವ ಅಫಘನ್ ಯುವಜನತೆ ತಾಲಿಬಾನಿಗಳ ಮೂಲಭೂತವಾದಿ ಆದೇಶಗಳನ್ನು ಒಪ್ಪಲಾರರು ಹಾಗೂ ತಾಲಿಬಾನ್ ಏನಾದರೂ ಹಳೆಯ ಚಾಳಿ ಮುಂದುವರೆಸಿದರೆ ಅಫಘನ್ ಯುವಜನತೆ ದಂಗೆಯೇಳಲೂ ಸಿದ್ಧವಾಗಬಹುದು. ಅಫಘನ್ರು ತಾಲಿಬಾನಿನ ಸೈನಿಕರನ್ನು ವಿರೋಧಿಸಿ ಎದೆಯೊಡ್ಡದೇ ಇರಬಹುದು. ಆದರೆ ಕಳೆ ಇಪ್ಪತ್ತು ವರ್ಷಗಳಲ್ಲಿ ಬದಲಾವಣೆ ಕಂಡಿರುವ ಅಫಘನ್ ಜನತೆ ಸುಲಭವಾಗಿ ತಾಲಿಬಾನ್ ಕಟ್ಟಳೆಯನ್ನು ಒಪ್ಪಲಾರರು. ತಾಲಿಬಾನಿನ ನಾಯಕತ್ವದಲ್ಲಿಯೂ ಆಗಿರುವ ಬದಲಾವಣೆಗಳನ್ನು ಗಮನಿಸಿದರೆ 2021 ತಾಲಿಬಾನ್ ಆಡಳಿತ ಹಿಂದಿನ ಶತಮಾನದ ಆಡಳಿತಕ್ಕೆ ಸಾಕಷ್ಟು ಬದಲಾವಣೆ ಹೊಂದಿರುತ್ತದೆ ಎಂದಷ್ಟೇ ಹೇಳಬಹುದು. ಬದಲಾವಣೆಯ ರೂಪುರೇಷೆ ಮತ್ತು ಎಲ್ಲೆಗಳು ಹೇಗಿರಲಿವೆ ಎಂಬುದು ಮುಂದಿನ ನಾಲ್ಕಾರು ತಿಂಗಳಲ್ಲಿ ನಮಗೆ ಗೋಚರಿಸಲಿದೆ.

ಪುರುಷೋತ್ತಮ ಆಲದಹಳ್ಳಿ

Leave a Reply

Your email address will not be published.