ಅಮೆರಿಕಾದ ದಾರ್ಶನಿಕ ಬರಹಗಾರ ಹೆನ್ರಿ ಡೇವಿಡ್ ಥೋರೋನ ಕೃತಿ ವಾಲ್ಡನ್

ನನ್ನ ಮೇಲೆ ಬಹಳ ಪ್ರಭಾವ ಬೀರಿದ ಅತಿ ಮುಖ್ಯ ಕೃತಿ ಎಂದರೆ ಹೆನ್ರಿ ಡೇವಿಡ್ ಥೋರೋನ ವಾಲ್ಡನ್.

-ಸಿ.ಎನ್.ಶ್ರೀನಾಥ್

ಥೋರೋ 19ನೇ ಶತಮಾನದ ಅಮೆರಿಕಾದ ದಾರ್ಶನಿಕ, ಪ್ರಖ್ಯಾತ ಬರಹಗಾರ ಎಮರ್ಸನ್‍ನ ಶಿಷ್ಯ ಹಾಗೂ ಕಿರಿಯ ಮಿತ್ರ. ಇವರಿಬ್ಬರದೂ ಅಮೆರಿಕಾದ ಮೆಸ್ಯಾಚುಸೆಟ್ಟ್‍ನ ಪ್ರಾಂತ್ಯದಲ್ಲಿನ ಒಂದು ಸಣ್ಣ ಊರು ಕಾಂಕರ್ಡ್ ಎಂಬಲ್ಲಿ ವಾಸ. ಅದೇ ಕಾಂಕರ್ಡ್‍ನಿಂದ 5-6 ಮೈಲಿಗಳ ದೂರಕ್ಕೆ ಕಾಡು, ಕಾಡಿನ ಮಧ್ಯೆ ಒಂದು ದೊಡ್ಡ ಕೊಳ, ವಾಲ್ಡನ್, ಸಮುದ್ರದ ಹಾಗೆ ವಿಸ್ತಾರ, ನದಿಯ ಹಾಗೆ ಶುಭ್ರ ವರ್ಚಸ್ಸು. ಭೂಮಿಯ ಕಣ್ಣು ಎಂದು ಥೋರೋ ವಿವರಿಸಿದ ಕೆರೆ.

ಥೋರೋ ಅದೇ ವಾಲ್ಡನ್ ಕೊಳದ ಬದಿಯಲ್ಲಿ ಒಂದು ಸಣ್ಣ ಕೊಠಡಿಯನ್ನು ಕಟ್ಟಿಕೊಂಡು ವಾಸಿಸಿದ, ನಾಗರಿಕ ಸಮಾಜದ ಹೊರಗಿದ್ದು ಜೀವನದ ಅಂತರಾಳದ ಸ್ಪಂದನವನ್ನು, ಪ್ರಕೃತಿಯ ನಿರ್ಮಲ ಉಸಿರನ್ನು ಆಸ್ವಾದಿಸಲು ಪ್ರೇರಿತನಾಗಿ ತನ್ನ ಏಕಾಂತ ಸಂಸಾರವನ್ನು ಶುರು ಹಚ್ಚಿದ. ಎರಡು ವರ್ಷ ಎರಡು ತಿಂಗಳು ಅವನ ವನವಾಸದ ಚರಿತ್ರೆ ವಾಲ್ಡನ್ ಎಂಬ ಕೃತಿಯಾಗಿ ಹೊರಬಂದಿತು.

ಎಮರ್ಸನ್ ಮಹಾ ಚಿಂತಕ, ದಾರ್ಶನಿಕ ಸಂತರಲ್ಲಿ ಅಗ್ರಗಣ್ಯ. ಅವನ ಶಿಷ್ಯ ಥೋರೋ ಅಷ್ಟೇ ಸ್ವಾತಂತ್ರಪ್ರಿಯ.  ತನ್ನ ಹಾದಿಯೇ ತನಗೆ ಗುರಿ ಮುಟ್ಟಿಸುತ್ತದೆಂದು ಅಚಲ ನಂಬಿಕೆ ಉಳ್ಳವನು. ಇವರಿಬ್ಬರೂ ಅಪ್ರತಿಮ ವಿದ್ವಾಂಸರು, ವೇದ ಉಪನಿಷತ್ತು, ಗೀತೆ, ಪುರಾಣಗಳು ಭಾರತೀಯ ಸಾಹಿತ್ಯ ಓದಿ ಪಕ್ವವಾದ ಜ್ಞಾನ ಪಡೆದ ವಿಭೂತಿ ಪುರುಷರು. ಥೋರೋ ತುಳಿದ ಹಾದಿಯನ್ನು ತುಳಿಯದೆ ಬೇರೆಯ ನಗಾರಿಯ ಸಪ್ಪಳದ ಜಾಡು ಹಿಡಿದು ನಡೆದವನು.  ‘I hear a different drummer I am in the
majority of one’ ಎಂದು ನಂಬಿದ್ದವನು.

ಒಂದು ಸಾರಿ ಥೋರೋ ಮುನಿಸಿಪಾಲಿಟಿಗೆ ಸುಂಕ ಕಟ್ಟಲಿಲ್ಲವೆಂದು ಅವನ ಮಿತ್ರನಿಂದಲೇ ಜೈಲು ಸೇರಬೇಕಾಯಿತು. ವಾಲ್ಡನ್‍ನಿಂದ ಕಾಂಕರ್ಡ್‍ಗೆ ಚಪ್ಪಲಿ ರಿಪೇರಿಗೆಂದು ಹೊರಟಿದ್ದಾಗ ಅವನ ಮಿತ್ರ ಥೋರೋನ ತಡೆದು ಆತ ಸುಂಕ ಕಟ್ಟದಿದ್ದರೆ ಜೈಲಿಗೆ ಹೋಗಬೇಕೆಂದು ಹೇಳಿದಾಗ ಥೋರೋ ಜೈಲಿಗೆ ನಡೆದ. ಆತ ಸುಂಕ ಕಟ್ಟದಿರಲು ಅಮೆರಿಕದ ಸರ್ಕಾರ ಮೆಕ್ಸಿಕೋ ಜನರ ವಿರುದ್ಧ ಅಕಾರಣವಾಗಿ ಯುದ್ಧ ನಡೆಸಿ ಹಣದ ಪೋಲು ಮಾಡಿದೆಯೆಂಬ ಆಪಾದನೆ ಕಾರಣವಾಗಿತ್ತು. ತಾನು ಅದರ ಭಾಗಿಯಾಗುವುದಿಲ್ಲ ಎಂಬ ಧೋರಣೆ ಇಟ್ಟುಕೊಂಡು ಸುಂಕಕೊಡದೆ ತನ್ನ ನಿಲುವನ್ನು ಸಾಬೀತು ಮಾಡಿಕೊಂಡಿದ್ದ. ಜೈಲಿನಲ್ಲಿದ್ದ ತನ್ನ ಪ್ರಿಯಮಿತ್ರ ಥೋರೋವನ್ನು ನೋಡಲು ಗುರು ಎಮರ್ಸನ್ ಧಾವಿಸಿ ಬಂದು: ‘Henry, why are you here? ಎಂದು ವ್ಯಾಕುಲಗೊಂಡು ಕೇಳಿದ. ಥೋರೋ ಅದಕ್ಕೆ ಎಲ್ಲಾ ಶತಮಾನಗಳಿಗೂ, ಎಲ್ಲಾ ಪೀಳಿಗೆಗಳಿಗೂ ಸವಾಲಾಗಿರುವ ಒಂದು ಪ್ರತಿಕ್ರಿಯೆಯನ್ನು ಉಸುರಿದ: ‘Waldo, why are you not here?’

ಒಂದೇ ರಾತ್ರಿ ಥೋರೋ ಜೈಲಿನಲ್ಲಿ ಕಳೆದಿದ್ದು, ಎಮರ್ಸನ್‍ನ ಚಿಕ್ಕಮ್ಮ ಥೋರೋವಿನ ಪರವಾಗಿ ಸುಂಕ ಕಟ್ಟಿ ಬಿಡಿಸುತ್ತಾಳೆ. ಆದರೆ ಥೋರೋ ಅ ಸನ್ನಿವೇಶವನ್ನು ಕುರಿತು ದೀರ್ಘ ಚಿಂತನೆ ಮಾಡಿ ‘Civil
Disobedience’ ಎಂಬ ಲೇಖನ ಬರೆದು ವಿಶ್ವವಿಖ್ಯಾತಿ ಪಡೆಯುತ್ತಾನೆ. ಅದೇ ಮಹಾತ್ಮಾ ಗಾಂಧೀಜಿಗೆ ಸ್ಫೂರ್ತಿಕೊಟ್ಟ ಚೇತನ.

ಹೀಗೆ, ಥೋರೋವಿನ ವಾಲ್ಡನ್ ಒಬ್ಬ ಅಮೆರಿಕನ್ ಯೋಗಿಯ ಜೀವನಾನುಭವದ ಪದ್ಧತಿಯನ್ನೇ ಬುಡಮೇಲು ಮಾಡುವ ಅತೀ ಸೂಕ್ಷ್ಮವಾದ, ಸರಳವಾದ, ಅಸಾಧಾರಣ ಕೃತಿ. ಪ್ರಕೃತಿಯ ವೈವಿಧ್ಯ, ಅದರ ರೂಪ, ವಾಸನೆ, ಶಬ್ದ, ನಾದ, ಸಂಗೀತ, ಪ್ರಾಣಿ ಪಕ್ಷಿಗಳ, ಪುಷ್ಪಗಳ ವೈಚಿತ್ರ್ಯ, ಜಲ, ಆಕಾಶ, ಮೋಡ, ಮಳೆ, ಗಾಳಿ ಇವೆಲ್ಲದರ ಸಾಮೀಪ್ಯದ ಆಂತರಾಳದ ಅತೀಂದ್ರಿಯ ಅನುಭವ -ಇದೆಲ್ಲದರ ಸಹಜ ಸಾಮೀಪ್ಯದಲ್ಲಿ ಸೃಜನಾತ್ಮಕ ಜೀವನದಲ್ಲಿ ಮೌಲ್ಯಗಳ ಸಾಂದ್ರತೆ, ಮನುಷ್ಯನ ಮೂಢತನ, ಉದ್ಧಟತನ, ಅಹಂಕಾರಗಳು ಇವೆಲ್ಲದರ ನಿರೂಪಣೆ ತನ್ನದೇ ಆದ ಅಪೂರ್ವ ಶೈಲಿಯಲ್ಲಿ, ತಿಳಿಹಾಸ್ಯಪೂರಿತವಾಗಿ ಗ್ರಂಥಗಳ ಅವಲೋಕನದ ವಿದ್ವತ್ತು ಹೊಂದಿ ಬದುಕಿನ ಸಮಸ್ಯೆಗಳು ಹೇಗೆ ಮಾನವ ಸಮಾಜವನ್ನೇ ಕುರುಡು ಮಾಡಿ ಮನುಷ್ಯನನ್ನು ನಿಷ್ಪ್ರಯೋಜಕತೆಯ ಸನ್ನಿಧಿಯಲ್ಲಿ ತಳ್ಳಿಬಿಡುತ್ತೆ ಎಂದು ವಿವರಿಸಿ ಖೇದದಿಂದ ರಚಿಸಿದ ಕೃತಿ ವಾಲ್ಡನ್.

ವಾಲ್ಡನ್ ಅತಿ ಶ್ರೇಷ್ಠವಾದ ಅರಣ್ಯ ಪರ್ವದ ಹಾಗಿರುವ ಹಾಗೂ ಬಾಹ್ಯ ಪ್ರಪಂಚ ಮತ್ತು ಪಟ್ಟಣದ ಹಣದ ಬದುಕು ಎಷ್ಟು ನಿಕೃಷ್ಟವೆಂದು ಸಾರುವ ಮಹಾನ್ ಕೃತಿ. ವಾಲ್ಡನ್ ಸರೋವರದ ತೀರದಲ್ಲಿ ಕೂತು ಅದರ ಅಲೆಗಳ ನಾದವನ್ನು ತನ್ನ ರಕ್ತ ಚಲನೆಗೆ ಹೊಂದಿಸಿಕೊಂಡು ಆಕಾಶದ ನಕ್ಷತ್ರಗಳನ್ನು ತನ್ನ ತಲೆಯ ದಿಂಬಿನ ಬದಿಯಲ್ಲಿರುವ ಹೂಗಳಂತೆ ಕಂಡು ವಿಶ್ವರೂಪವನ್ನು ತನ್ನ ಸ್ವಸ್ಥಾನದಲ್ಲೇ ಅನುಭವಿಸಿದ ಮಹಾನ್ ಕಲೆಗಾರ, ನುಡಿಶಿಲ್ಪಿ ಥೋರೋ.

ಸುಮಾರು 200 ಪುಟಗಳಿರುವ ಈ ಕೃತಿಯಲ್ಲಿ 10-12 ಅಧ್ಯಾಯಗಳನ್ನು ವಿಂಗಡಿಸಿ ತನ್ನ ಬಾಹ್ಯ ಜಗತ್ತಿನ ಮತ್ತು ಅಂತರಾತ್ಮದ ಬದುಕನ್ನು ಮೇಳೈಸಿ ಪರಿಪಕ್ವದ ಕಡೆಗೆ ಮುಂದುವರಿಯುವ ಕ್ರಮಗಳೇನೆಂದು ವಿವರಿಸುತ್ತಾ ಸಾಗುತ್ತಾನೆ ಥೋರೋ. ‘ನಾನೇಕೆ ಅಲ್ಲಿ ವಾಸಿಸಿದೆ, ಏತಕೋಸ್ಕರ ಬದುಕಿದೆ’ ಎಂಬ ಶೀರ್ಷಿಕೆಯಿಂದ ಪ್ರಾರಂಭಿಸಿ ತನ್ನ ಮರದ ಕ್ಯಾಬಿನ್ ಅನ್ನು ತಾನೇ ಕೈಯಿಂದ ಮರಗಳನ್ನು ಸೀಳಿ ಮೊಳೆಗಳನ್ನು ಹೊಡೆದು ಕಟ್ಟಿದ. ಅದಕ್ಕೆ ಹಿಡಿದ ಖರ್ಚು 37 1/2 ಡಾಲರ್‍ಗಳು. ಅದರಲ್ಲಿ ಮೂರೇ ಮೂರು ಆಸನಗಳಿದ್ದವು.  ಒಂದು ತನಗೆ, ಇನ್ನೊಂದು ಸ್ನೇಹಿತರಿಗೆ ಮತ್ತೊಂದು ಸಮಾಜಕ್ಕೆ.

ಅವನ ನಿತ್ಯ ಮಂತ್ರ ‘ಸರಳತೆ, ಸರಳತೆ’ ಎಂದು. ಎಲ್ಲಾ ಕಾರ್ಯಗಳಲ್ಲೂ ಸರಳತೆ ಇರಬೇಕು. ಅದೇ ಜೀವನದ ಗುರಿಯಾಗಬೇಕೆಂದು ತಿಳಿದಿದ್ದ ಥೋರೋ. ಹೀಗಾಗಿ, ನಮ್ಮ ಪಟ್ಟಣದ ಜೀವನದಲ್ಲಿ ನೈಜತೆ ಸರಳತೆ ಮಾಯಾವಾಗಿ ಮನುಷ್ಯ ತನ್ನ ತಲೆಯ ಮೇಲೆ ಬೇಡದ ಹೊರೆ ಹೊತ್ತು ನರಳುತ್ತಿದ್ದಾನೆ ಎಂದು ಭಾವಿಸಿದ ಪ್ರಕೃತಿಯ ಸರಳ ಆರಾಧಕ ಥೋರೋ. ವೃತ್ತಪತ್ರಿಕೆಯಲ್ಲಿ ನಂಬಿಕೆ ಇರಲಿಲ್ಲ, ಏಕೆಂದರೆ ಅದು ಕ್ಷಣಿಕ ವಾರ್ತೆಗಳನ್ನು ಹಿಗ್ಗಿಸಿ ಉದ್ರೇಕಗೊಳಿಸುತ್ತದೆ ಎಂದು. ಯೂರೋಪ್‍ನಲ್ಲಿ ಭೂಕಂಪವಾಗಿ ಇಷ್ಟು ಜನ ಸತ್ತರು, ದೋಣಿಯಲ್ಲಿ ಮುಳುಗಿ 4 ಜನ ನಿನ್ನೆ ಸತ್ತರು, ಮೊನ್ನೆ 6 ಜನ ಸತ್ತಿದ್ದರು, ಇವೇ ವಾರ್ತೆಗಳು.  ಅಂಚೆ ಪತ್ರಗಳೂ ಅಷ್ಟೆ, ಇದುವರೆಗೂ ನನಗೆ ಕಾಗದಕ್ಕೆ ಹಚ್ಚಿದ ಸ್ಟಾಂಪ್ ಯೋಗ್ಯತೆಯನ್ನು ಮೀರಿ ಒಂದು ಪತ್ರವೂ ನನಗೆ ಬಂದಿಲ್ಲ ಎಂದು ಸಾರಿದವನು ಈ ವಿವಾದಸ್ಪದ ಚಿಂತಕ.

ಆದರೆ ಪ್ರಕೃತಿಯ ಶಿಸ್ತು, ರಚನೆ, ವಿನ್ಯಾಸ ಮತ್ತು ಲಯ ಅವನನ್ನು ಮೂಕನನ್ನಾಗಿ ಮಾಡಿತ್ತು. ವಾಲ್ಡನ್ ಸರೋವರದ ಅಲೆಗಳು, ಅದರ ಬಣ್ಣ ನೀಲಿಯ ಬೂದು ಆಕಾಶಕ್ಕೆ ಹಿಡಿದ ಕನ್ನಡಿ ಎಂದು, ಭೂಮಿಯ ಕಣ್ಣು ಎಂದೂ ಅದರಲ್ಲಿ ಮೀನು ಮತ್ತು ಇತರೇ ಜಂತುಗಳು ವಾಸಿಸುವ ವಿಧಾನವನ್ನು ಸೂಕ್ಷ್ಮವಾಗಿ ಅಭ್ಯಸಿಸಿದ್ದ. ತನ್ನ ಡೈರಿಯಲ್ಲಿ ಯಾವ ಹೂವು, ಯಾವ ಗಿಡ ಹೂ ಬಿಟ್ಟಿತ್ತು 10 ವರ್ಷದ ಹಿಂದೆ ಎಂಬ ಮಾಹಿತಿ ಕ್ರೋಡೀಕರಿಸಿದ್ದ. ಅವನು ವೃತ್ತಿಯಲ್ಲಿ ಸರ್ವೆಯರ್ ಆಗಿದ್ದರೂ ನಿಜವಾಗಿ ಪ್ರಕೃತಿಯ ಸರ್ವೆಯರ್ ಆಗಿ ಜೀವಿಸಿದ.

ಇಂತಹ ವೈಜ್ಞಾನಿಕ ಮನೋಭಾವದಿಂದ ಕೂಡಿದ ಕನಸುಗಾರ ಥೋರೋ ಶಬ್ದ, ನೋಟ, ಓದು, ಜೀವನದ ಉನ್ನತ ಮೌಲ್ಯಗಳು ಎಂದು ಹೀಗೆ ಸರಳವಾಗಿ ಅಧ್ಯಾಯಗಳನ್ನು ಮಾಡಿ ಬಹಳ ಗಂಭೀರವಾಗಿ ಮನುಷ್ಯನ ಸಣ್ಣತನವನ್ನು ಹಿಯಾಳಿಸಿ ಉನ್ನತ ಮೌಲ್ಯಗಳ ಸಿದ್ಧಿಯನ್ನು ಪಡೆಯುವುದು ತನ್ನ ಬಾಳ ಉಸಿರೆಂದು ಭಾವಿಸಿ ಪ್ರಪಂಚದ ಎಲ್ಲಾ ಸಾಹಿತ್ಯಗಳ, ಗ್ರೀಕ್, ಭಾರತ, ಚೀನಾ ಮತ್ತು ಯುರೋಪಿನ ಸಾಹಿತ್ಯಗಳ ಚರ್ಚೆಯನ್ನು ನಮ್ಮ ಮುಂದೆ ಇಟ್ಟು ಈ ಕೃತಿಯ ಸಾಂದ್ರತೆಯನ್ನು ವೈಶಿಷ್ಟ್ಯವನ್ನು ವೃದ್ಧಿಸಿದ. ನಮ್ಮ ಭಾರತದ ಸಾಂಸ್ಕøತಿಕ ಪರಂಪರೆಯನ್ನು ವೇದ, ಉಪನಿಷತ್ತು, ಪುರಾಣಗಳಲ್ಲಡಗಿರುವ ಜೀವನಾನುಭವನ್ನು, ಬೃಹತ್‍ದೃಷ್ಟಿಯನ್ನು ಮೆಚ್ಚಿ, ಯುರೋಪಿನ ಚಿಂತಕರು ಅವರ ಮುಂದೆ ಶಾಲೆಗೆ ಹೋಗುವ ಮಕ್ಕಳೆಂದು ವರ್ಣಿಸಿದ್ದಾನೆ.

ಇಂತಹ ಕೃತಿ ವಾಲ್ಡನ್. ಥೋರೋನ ವಾಲ್ಡನ್ ಭಾರತೀಯ ಸಂಸ್ಕøತಿಯ ನೆರಳಲ್ಲಿ ಉದ್ಭವಿಸಿದ ಕೃತಿ ಎಂದು ಹೇಳಿದರೂ ತಪ್ಪಾಗಲಾರದು. ಆದರೆ ಅದರ ಮೂಲ ಶಕ್ತಿ, ಚಾಲನೆ, ಥೋರೋನ ಅಸಾಧಾರಣವಾದ ಪ್ರಕೃತಿ ಪ್ರೇಮ, ನಿರ್ಭೀತಿಯ ಚಿಂತನೆ, ಸ್ವತಂತ್ರ ದೃಷ್ಟಿ.

ದೀಪಧಾರಿಣಿ

ಕವನ ಸಂಕಲನ

ಆರ್.ಎಂ.ಸಹನ

ಪುಟ: 68  ಬೆಲೆ: ರೂ.40

ಪ್ರಥಮ ಮುದ್ರಣ: 2020

ಅಕ್ಷಯ ಪ್ರಕಾಶನ,

ಸಂಪರ್ಕ: 94409148885

ಭೂದೇವಿಯ ಚೆಲುವು, ತುಂಟಾಟ, ಗಡಿಯಂಚಿನ ರಾಜರು, ಎಲ್ಲವೂ ಕ್ಷಣಿಕ, ವಿಸ್ಮಯ, ಸಂಕೋಲೆ, ಅಲೆಮಾರಿ ಸೇರಿದಂತೆ 55 ಕವನಗಳ ಸಂಕಲನವಿದು. ಕವಿಯತ್ರಿಯ ಮೊದಲನೆ ಸಂಕಲನ. ಆರ್.ಎಂ.ಸಹನ ಮೈಸೂರು ವಿಶ್ವವಿದ್ಯಾನಿಲಯ ಮಹಾರಾಣಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎಸ್‍ಸಿ ವಿದ್ಯಾರ್ಥಿನಿ. ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೂ ಕನ್ನಡ ಭಾಷಾ ಕವನದಲ್ಲಿ ಆಸಕ್ತಿ ಹೊಂದಿರುವುದು ವಿಶೇಷ. ಪ್ರಾಸಕ್ಕೆ ಅಂಟಿಕೊಳ್ಳದೇ ವಿಷಯಗಳನ್ನು ನೇರವಾಗಿ ಅಭಿವ್ಯಕ್ತಿಗೊಳಿಸಿರುವುದು ಇಲ್ಲಿನ ಕವನಗಳಲ್ಲಿದೆ.

ಹಸಿರುಡುಗೆ

ಮಕ್ಕಳ ಕಾದಂಬರಿ

ಪರಮೇಶ್ವರಯ್ಯ ಸೊಪ್ಪಿಮಠ

ಪುಟ: 132 ಬೆಲೆ: ರೂ. 120

ಪ್ರಥಮ ಮುದ್ರಣ: 2020

ಪ್ರಕಾಶನ: ದಾಕ್ಷಾಯಿಣಿ ಪ್ರಕಾಶನ, ನಂ: 418/1, ವೀಣೆ ಶಾಮಣ್ಣ ರಸ್ತೆ, ಮೈಸೂರು-570004

ಹಸಿರಿನ ರಕ್ಷಣೆಯಲ್ಲಿ ಮಕ್ಕಳು ನಡೆಸುವ ಹೋರಾಟದ ತಂತ್ರ ಹೊಂದಿರುವ ಕಾದಂಬರಿ ಇದು. ಪರಿಸರ ದಿನ, ಇತರ ಸಂದರ್ಭಗಳಲ್ಲಿ ಮೆರವಣಿಗೆ ನಡೆಸಿ, ಘೋಷಣೆ ಕೂಗುವ ಮಕ್ಕಳಾಗದೆ, ಮರಗಿಡ, ಅರಣ್ಯ ಸಂರಕ್ಷಣೆಯ ನಿಜವಾದ ಮಹತ್ವವನ್ನು ಕಂಡುಕೊಂಡವರು. ತಮ್ಮ ಕಾರ್ಯ ಸಾಧನೆಯಲ್ಲಿ ಮಕ್ಕಳೆಲ್ಲ ಕಾಣೆಯಾಗಿ ಹಿರಿಯರಿಗೆ, ಮಂತ್ರಿಗಳಿಗೆ, ಅಧಿಕಾರಿಗಳಿಗೆ ನಿಜವನ್ನು ತಿಳಿಸಿಕೊಟ್ಟವರು. ಅವರ ಸಾಹಸಕಾರ್ಯ, ಕಳಕಳಿ ಗಮನ ಸೆಳೆಯುತ್ತದೆ.

ಸಿಐಎ ದುಷ್ಟಕೂಟ

ಭಾರತದಲ್ಲಿ ಅಮೆರಿಕಾ ಗುಪ್ತಚರ ಸಂಸ್ಥೆಯ ಕಾಳ ಕಾರ್ಯಾಚರಣೆಗಳು

ಯಡೂರ ಮಹಾಬಲ

ಪುಟ: 252  ಬೆಲೆ: ರೂ.250

ಪ್ರಥಮ ಮುದ್ರಣ: 2020

ಪ್ರಕಾಶನ: ಕಾವ್ಯಕಲಾ ಪ್ರಕಾಶನ,

ಸಂಪರ್ಕ: 9964124831

ದೇಶದಲ್ಲಿ ಅಮೆರಿಕದ ಸಿಐಎ ಸಂಸ್ಥೆಯ ಕರಾಳ ಕೃತ್ಯಗಳನ್ನು ಉಲ್ಲೇಖಿಸುತ್ತದೆ ಈ ಪುಸ್ತಕ. 1962ರ ಚೀನಾ ಯುದ್ಧ ಉಂಟಾಗುವು ದಕ್ಕೂ, ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳು ವುದರಲ್ಲಿ ಅಮೆರಿಕ ಮತ್ತು ಸಿಐಎ ದೊಡ್ಡ ಪಾತ್ರ ನಿರ್ವಹಿಸಿದೆ. ಸಿಐಎ ಭಾರತದಲ್ಲಿ ಅನೇಕ ಕರಾಳ ಕಾರ್ಯಾಚರಣೆ ನಡೆಸಿರುವ ಬಗ್ಗೆ ಸೂಕ್ತ ಮಾಹಿತಿಗಳು ಇನ್ನೂ ಹೊರಬೀಳಬೇಕಿವೆ ಎನ್ನುತ್ತಾರೆ ಲೇಖಕರು.  

ಮಕ್ಕಳ ಮೇಷ್ಟ್ರು

ಶಿಕ್ಷಕ ಎಲ್.ರೆಡ್ಡಿನಾಯ್ಕರ್ ಅಭಿನಂದನ ಗ್ರಂಥ

ಸಂಪಾದಕರು: ಹುರುಕಡ್ಲಿ ಶಿವಕುಮಾರ

ಪುಟ: 204 ಬೆಲೆ: ರೂ. 150

ಪ್ರಥಮ ಮುದ್ರಣ: 2020

ಪ್ರಕಾಶನ: ಕುವೆಂಪು ಗ್ರಂಥಾಲಯ ಬಳಗ,

ಸಂಪರ್ಕ: 9019190195

ವಿಶೇಷ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕ ಲಂಬಾಣಿ ರೆಡ್ಡಿನಾಯ್ಕರ್ ಅವರ ಅಭಿನಂದನ ಗ್ರಂಥವಿದು. ಗ್ರಾಮೀಣ ಸ್ತರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸಿದ ರೆಡ್ಡಿನಾಯ್ಕರ್ ಅವರು ಆರ್ಥಿಕ, ಸಾಮಾಜಿಕವಾಗಿ ಹಿಂದು ಳಿದ ಮಕ್ಕಳೊಂದಿಗೆ ಬೆರೆತು, ಕಲಿಕೆ ನೀಡಿ ಸಮಾಜಮುಖಿಯಾಗಿ ಶ್ರೇಯಸ್ಸು ರೆಡ್ಡಿ ನಾಯ್ಕರದು. ಅವರ ಸಾಧನೆಗಳ ಅನಾವರಣ ಈ ಪುಸ್ತಕದಲ್ಲಿನ ಲೇಖನಗಳಲ್ಲಿದೆ.

ನರಹರಿ ಕವಿ ಮತ್ತು

ಅವನ ಪ್ರಹ್ಲಾದ ಚರಿತ್ರೆ

ಡಾ.ವೇಣುಗೋಪಾಲ ಎನ್.ಎಸ್.

ಪುಟ: 140  ಬೆಲೆ: ರೂ.120

ಪ್ರಥಮ ಮುದ್ರಣ: 2020

ಪ್ರಕಾಶನ: ಬಸವ ಪಬ್ಲಿಕೇಶನ್ಸ್,

ಸಂಪರ್ಕ: 9590439732

18ನೇ ಶತಮಾನದ ಕವಿ ನರಹರಿ ಮತ್ತು ಆತ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಪ್ರಹ್ಲಾದ ಚರಿತ್ರೆ ಕುರಿತ ಕೃತಿ ಇದು. ಕವಿಯ ಕಾಲ, ಜೀವನ, ಇತರ ವಿಷಯಗಳ ಮಾಹಿತಿ ಕೃತಿಯಲ್ಲಿದೆ. ಪ್ರಹ್ಲಾದ ಚರಿತ್ರೆಯ ವಸ್ತು ವಿನ್ಯಾಸ, ಸನ್ನಿವೇಶಗಳ ನಿರ್ಮಾಣ ವಿಧಾನ, ಪಾತ್ರಗಳ ವಿಶ್ಲೇಷಣೆ, ಕವಿಯ ವರ್ಣನಾಕೌಶಲ, ನಿರೂಪಣೆ ಮತ್ತು ಶೈಲಿ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ.

ಸಾಹಿತ್ಯ ಸುರಭಿ

ಸಂಶೋಧನಾ ಲೇಖನಗಳು

ಡಾ.ತಿಪ್ಪೇರುದ್ರ ಸಂಡೂರು

ಪುಟ: 132  ಬೆಲೆ: ರೂ.140

ಪ್ರಥಮ ಮುದ್ರಣ: 2020

ಪ್ರಕಾಶನ: ಬಸವ ಪಬ್ಲಿಕೇಶನ್ಸ್,

ಸಂಪರ್ಕ: 9590439732

ಪಂಪನ ನುಡಿಗಣಿ, ವಚನ ನಿಘಂಟುಗಳು, ಪ್ರಾಚೀನ ಕನ್ನಡ ನಿಘಂಟುಗಳು, ದುರ್ಗಸಿಂಹ ಕವಿಯ ಕರ್ನಾಟಕ ಪಂಚತಂತ್ರಂ, ಕೆ.ಎಸ್.ನ. ಕವಿತೆಗಳಲ್ಲಿ ದಾಂಪತ್ಯ ಚಿತ್ರಣ ಸೇರಿದಂತೆ 16 ಲೇಖನಗಳು ಈ ಕೃತಿಯಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ನಿಘಂಟು ಮಾಲೆಯನ್ನು ವಿಮರ್ಶಾ ಮಾದರಿಯಲ್ಲಿ ಲೇಖನಗಳಲ್ಲಿ ವಿಶ್ಲೇಷಿಸಲಾಗಿದೆ. ಪಂಪನ ನುಡಿಗಣಿ ಲೇಖನ ಚಿಂತನಶೀಲ ಲೇಖನ.

ತಿಳಿದಷ್ಟೇ ಬಯಲು

ಸಂಶೋಧನಾ ಲೇಖನಗಳು

ಡಾ. ಜಾಜಿ ದೇವೇಂದ್ರಪ್ಪ

ಪುಟ: 132  ಬೆಲೆ: ರೂ.140

ಪ್ರಥಮ ಮುದ್ರಣ: 2020

ಪ್ರಕಾಶನ: ಶ್ರೀ ಮರಡಿಲಿಂಗೇಶ್ವರ, ಮೈಸೂರು.

ಸಂಪರ್ಕ: 9481662735

ಹರಿಹರನ ರಗಳೆಗಳು ಮತ್ತು ಸಾಮಾಜಿಕ ಸಂದರ್ಭ, ಶರಣ ಮಾರೆಯ್ಯರೆಷ್ಟು ಜನ ಒಂದು ಅವಲೋಕನ, ಸ್ತ್ರೀವಾದಿ ತತ್ವಪದ ಚಿಂತಕಿ ಫೈಮುದಾ ಫಾತಿಮಾ, ಜನರ ಸರದಾರ ಕುಮಾರರಾಮ ಸೇರಿದಂತೆ 20 ಲೇಖನಗಳು ಈ ಕೃತಿಯಲ್ಲಿವೆ. ತಿಳಿವಿಗೆ ಸ್ಪಂದಿಸುವ ಮತ್ತು ಚಿಂತನೆಯ ಓರೆಗಲ್ಲಿಗೆ ಹಚ್ಚುವ ಲೇಖನಗಳು ಇಲ್ಲಿವೆ.

ನನ್ನದೆಯ ಭಾವನೆಗಳು

ಕವನ ಸಂಕಲನ

ಶಂಕರ್ ಹುಲಿಕಲ್

ಪುಟ: 88  ಬೆಲೆ: ರೂ.100

ಪ್ರಥಮ ಮುದ್ರಣ: 2020

ಪ್ರಕಾಶನ: ಮಧುರ ಪ್ರಕಾಶನ,

ಸಂಪರ್ಕ: 9743735650

ಜ್ಞಾನಿ, ಅಪ್ಪ, ನನ್ನ ನೋವು, ಸವಿ ಪ್ರೀತಿ, ಸಮಾಜ ಸುಧಾರಕರು, ಹಗಲುಗನಸು, ಬಿಟ್ಟು ಹೋದವಳು, ಹುಡುಕಾಟ ಮತ್ತು ವಿಸ್ಮಯ ಸೇರಿದಂತೆ ಹಲವು ಕವನಗಳ ಗುಚ್ಛ ಈ ಕೃತಿ. ಭಾವಾಭಿವ್ಯಕ್ತಿ, ಯೌವನದ ನಲಿವು-ನೋವುಗಳು, ಆಶಯಗಳ ವಸ್ತು ಇಲ್ಲಿನ ಕವನಗಳಲ್ಲಿ ಹೆಚ್ಚು ಮೂಡಿದೆ.

ಈವರೆಗಿನ ಕವಿತೆಗಳು

ಕವನ ಸಂಕಲನ

ಪ್ರೊ. ಸಬಿಹಾ ಭೂಮಿಗೌಡ

ಪುಟ: 184  ಬೆಲೆ: ರೂ.160

ಪ್ರಥಮ ಮುದ್ರಣ: 2020

ಪ್ರಕಾಶನ: ಕವಿ ಪ್ರಕಾಶನ, ಕವಲಕ್ಕಿ.

ಸಂಪರ್ಕ: 9480211320

ಚದುರಿಹೋದ ಕವನಗಳನ್ನು ಒಂದೆಡೆ ಸೇರಿಸುವ ಯತ್ನವಾಗಿ ಈ ಕೃತಿ ಮೂಡಿಬಂದಿದೆ. ಹಳತು-ಹೊಸತು, ಪ್ರಕಟಿತ-ಅಪ್ರಕಟಿತ, ಪ್ರಬುದ್ಧ-ಲಲಿತ ಹೀಗೆ ವಿಭಿನ್ನ ಕವಿತೆಗಳು ಜತೆ ಗೂಡಿವೆ ಎನ್ನುತ್ತಾರೆ ಕವಯತ್ರಿ ಪ್ರೊ. ಸಬಿಹಾ. ವಾನಪ್ರಸ್ತ, ಗೌರೀ ದುಃಖ, ನುಗ್ಗೆ ಮರ, ಸಖಿ, ಅವ್ವನಿಗೆ.., ಹೆಂಡತಿ, ಶಿವಮ್ಮ, ಮುಮ್ತಾಜ್ ಮತ್ತು ಕನ್ನಡ, ಕರವಸ್ತ್ರ, ಆಟದ ಲೆಕ್ಕ, ಶೀರ್ಷಿಕೆ ಸೇರಿದಂತೆ ಹಲವು ಕವನಗಳು ಇಲ್ಲಿವೆ.

ದಣಿವರಿಯದ ಪಯಣ

ಅನುಭವ ಕಥನ

ಡಾ.ವೆಂಕಟಯ್ಯ ಅಪ್ಪಗೆರೆ

ಪುಟ: 506  ಬೆಲೆ: ರೂ.500

ಪ್ರಥಮ ಮುದ್ರಣ: 2020

ಪ್ರಕಾಶನ: ಸಂಸ್ಕøತಿ ಪ್ರಕಾಶನ, ಬಳ್ಳಾರಿ.

ಸಂಪರ್ಕ: 9448323400

ಲೇಖಕರ ಜೀವನಗಾಥೆ ಇದು. `ಬ್ಯಾಂಕ್ ವೃತ್ತಿನಿರತರಿಗೆ ಅನುಭವ ವಿಸ್ತಾರ ವೈವಿಧ್ಯಗಳಿರುವುದಿಲ್ಲ ಎಂಬುದು ಕೆಲವರ ಸಾಮಾನ್ಯ ಭಾವನೆ. ನನ್ನ ವೃತ್ತಾಂತದಿಂದ ಅದು ಬದಲಾಗುತ್ತದೆ’ ಎಂದು ಅವರು ಹೇಳುತ್ತಾರೆ. ನಿಜ. ಅದರಂತೆ ಇಲ್ಲಿನ ಅನುಭವಗಳು ಕುತೂಹಲಕರವಾಗಿವೆ. ಬೆರಗಿನಿಂದ ಕೂಡಿವೆ.

ಕೋಳಿ ಅಂಕ

ಕಥಾ ಸಂಕಲನ

ಡಾ. ಕುರುವ ಬಸವರಾಜ್

ಪುಟ: 120 ಬೆಲೆ: ರೂ.100

ಪ್ರಥಮ ಮುದ್ರಣ: 2020

ಪ್ರಕಾಶನ: ಕಿರಂ ಪ್ರಕಾಶನ, ಬೆಂಗಳೂರು,

ಸಂಪರ್ಕ: 9844467351

ಉರಿ, ಯಾತಕ್ಕೆ ಮಳೆ ಹೋದವೋ, ಕೋಳಿ ಅಂಕ, ಕಣ್ಣು ಬಂತು ಕತ್ತಲೆಗೆ, ಹರಿದ ಕಂಬಳಿ, ಕುಡುಗೋಲು ಸೇರಿದಂತೆ 12 ಕಥೆಗಳ ಸಂಕಲನವಿದು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರವದವರಾದ ಲೇಖಕರು ಗ್ರಾಮೀಣ ಸೊಗಡಿನ ಭಾಷೆ ಮತ್ತು ಪರಿಸರ ವನ್ನು ದಟ್ಟವಾಗಿ ಕಥೆಗಳಲ್ಲಿ ಮೂಡಿಸಿದ್ದಾರೆ.

ಮಾತು ಮೀಟಿ ಹೋಗುವ ಹೊತ್ತು

ಕವನ ಸಂಕಲನ

ಸ್ಮಿತಾ ಅಮೃತರಾಜ್

ಪುಟ: 110  ಬೆಲೆ: ರೂ.120

ಪ್ರಥಮ ಮುದ್ರಣ: 2020

ಪ್ರಕಾಶನ: ಭಾವಸಿಂಚನ, ಕುಣಿಗಲ್.

ಸಂಪರ್ಕ: 9036402083

ಭೂಮಿ ತೂಗುವ ಹಕ್ಕಿ, ಅರಳು ಗುಲಾಬಿಯ ಹಿಂದೆ, ಸೋನೆ ಹನಿ ಹನಿದ ಹೊತ್ತು, ಹಣತೆ ಹಾಡುತ್ತಿದೆ, ಕುಕ್ಕರು ಈಗ ಮೊದಲಿನಂತಿಲ್ಲ, ಮಳೆ ಬರುವ ಕಾಲಕ್ಕೆ ಸೇರಿದಂತೆ 25 ಕವನಗಳ ಸಂಕಲನವಿದು. ‘ತಮ್ಮ ಅನುಭವಕ್ಕೆ ದಕ್ಕಿದ ಪ್ರತಿಯೊಂದನ್ನೂ ಅರ್ಥಪೂರ್ಣ ರೂಪಕವಾಗಿಸುವ ಕಲೆ ಸ್ಮಿತಾರಿಗೆ ದಕ್ಕಿದೆ’ ಎಂದು ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಕೃತಿಯ ಮುನ್ನುಡಿಯಲ್ಲಿ ಹೇಳಿದ್ದಾರೆ.

ಹೆಣದ ದಿಬ್ಬ

ಕಥಾ ಸಂಕಲನ

ಅಕ್ಬರ್ ಸಿ. ಕಾಲಿಮಿರ್ಚಿ

ಪುಟ: 96  ಬೆಲೆ: ರೂ.100

ಪ್ರಥಮ ಮುದ್ರಣ: 2020

ಟಾಮಿ, ಕೆಂಡದ ಮಳೆ, ಜೀವಪಥ, ಕಲ್ಲಾಗುವ ಸಮಯ, ಆಕಾಶ ಮಲ್ಲಿಗೆ, ಬೆಳಕು ಹರಿಯಿತು, ಕರಿನಿಂಗ ಸೇರಿದಂತೆ 15 ಕಥೆಗಳನ್ನು ಈ ಸಂಕಲನದಲ್ಲಿ ಬಳಸಿಕೊಳ್ಳಲಾಗಿದೆ. ವಿಭಿನ್ನ ವಸ್ತು-ವಿಷಯಗಳನ್ನು ಒಳಗೊಂಡ ಕಥೆಗಳು ಇವು. ಬದುಕಿನ ನೋವು-ನಲಿವಿನ ಚಿತ್ರಣ ಕಥೆಗಳಲ್ಲಿ ಕಾಣುತ್ತವೆ. ಮಾತೃಹೃದಯದ ಆಪ್ಯಾಯಮಾನತೆ ಒಡಮೂಡಿದೆ. ಸರಳ ಶೈಲಿಯ ಬರಹ ಸುಲಭವಾಗಿ ಓದಿಸಿಕೊಂಡು ಸಾಗುತ್ತದೆ.

ಪುಟ್ಟಿಯ ಆಸೆ

ಮಕ್ಕಳ ಕವನಗಳು

ಅಕ್ಬರ್ ಸಿ. ಕಾಲಿಮಿರ್ಚಿ

ಪುಟ: 80  ಬೆಲೆ: ರೂ.80

ಪ್ರಥಮ ಮುದ್ರಣ: 2020

ಗಾಡಿಯ ಆಟ, ಗಣಪತಿ, ಗೊಂಬೆ, ಗೋಲಿ ಆಟ, ಮುದ್ದು ಪಾಪು, ಹೂವು, ತೊದಲಮಾತು, ಕನ್ನಡದ ತೇರು, ಪುಟಾಣಿ ಗಿಳಿ ಒಳಗೊಂಡಂತೆ 41 ಮಕ್ಕಳ ಕವನಗಳ ಸಂಕಲನವಿದು. ಮಕ್ಕಳ ಜಗತ್ತಿನ ಆಪ್ತತೆಯ ಭಾವ ಇಲ್ಲಿನ ಕವನಗಳಲ್ಲಿ ಒಡಮೂಡಿದೆ. ಅವರ ಆಟ, ಪಾಠ, ಒಡನಾಟ, ಸಹಜ ಅಭಿವ್ಯಕ್ತಿಗಳು ಸರಳವಾದ ಪದಗಳಲ್ಲಿ ಕವನಗಳಾಗಿ ಮೂಡಿಬಂದಿವೆ.

ಮೇಲಿನ ಎರಡೂ ಕೃತಿಗಳ ಪ್ರಕಾಶಕರು: ಕನ್ನಡ ಮೈತ್ರಿ ಪ್ರಕಾಶನ,

ನಂ: 731/3, ನಂ.9, ಮಂಜುನಾಥ ಬಡಾವಣೆ, ಅಂಚೆ: ಭಾಗ್ಯನಗರ-583238 

ತಾಲೂಕುಜಿಲ್ಲೆ: ಕೊಪ್ಪಳ. ಸಂಪರ್ಕ: 9731327829

ಅರಿವಿನ ಹರಿಗೋಲು

(ಮಕ್ಕಳ ಮಟ್ಟಕ್ಕೆ ಏರುವ ಹಾದಿಯಲಿ)

ಪರಮೇಶ್ವರಯ್ಯ ಸೊಪ್ಪಿಮಠ

ಪುಟ: 208  ಬೆಲೆ: ರೂ.225

ಪ್ರಥಮ ಮುದ್ರಣ: 2020

ಯಶೋಗಾಥೆ, ನಾವೀನ್ಯ, ಚಿಣ್ಣರಚಿತ್ತ ಕಲಿಕೆಯತ್ತ, ಪರೀಕ್ಷೆ ಗಗನ ಕುಸುಮವಲ್ಲ, ಪೋಷಕರ ಕಡೆಯಿಂದ ಅಧ್ಯಾಯಗಳಲ್ಲಿ ಹಲವು ಲೇಖನಗಳನ್ನು ಈ ಕೃತಿಯಲ್ಲಿ ತೆರೆದಿಡಲಾಗಿದೆ. ಮಕ್ಕಳ ಶಾಂತಿದೂತ-ಕೈಲಾಶ ಸತ್ಯಾರ್ಥಿ, ಸರಕಾರಿ ಶಾಲೆ ಸ್ಟ್ರಾಂಗು ಗುರು, ನನ್ನ ಅಭ್ಯಾಸ ನನ್ನ ಕೈಲಿ, ಆತ್ಮಹತ್ಯೆಯ ವಿಷವರ್ತುಲದಲ್ಲಿ ಮಕ್ಕಳು, ಶಾಲಾ ಬ್ಯಾಗಿನ ಭಾರ ಇಳಿಸುವ ಹೊಣೆ, ಮಕ್ಕಳ ಓದು-ಪಾಲಕರ ಪಾತ್ರ ಇತರ ಲೇಖನಗಳು ಇವೆ.

ಶಿಕ್ಷಣ ದೀವಿಗೆ

ಮಕ್ಕಳ ವಿಕಸನದ ದಾರಿಯಲಿ

ಪರಮೇಶ್ವರಯ್ಯ ಸೊಪ್ಪಿಮಠ

ಪುಟ: 192 ಬೆಲೆ: ರೂ.220

ಪ್ರಥಮ ಮುದ್ರಣ: 2020

ಈ ಕೃತಿಯಲ್ಲಿ ನವೀನತೆ, ಭಾಷಾ ಕಲಿಕೆ, ಬೋಧನಾ ತಂತ್ರಗಳು, ಗಣಿತದ ಅಗಣಿತ ಲೋಕ, ಮಾರ್ಗದರ್ಶನ, ರಜೆಯ ಸಂಭ್ರಮ ವಿಭಾಗಗಳಿವೆ. ನವೀನತೆ ವಿಭಾಗದಲ್ಲಿ 5 ಲೇಖನಗಳಿದ್ದು, ಗುಣಮಟ್ಟದ ಶಿಕ್ಷಣ ಎಂದರೇ?, ಸರಕಾರಿ ಶಾಲೆ ಮತ್ತು ಸಾಧಕರು ಬರಹಗಳಿವೆ. ಭಾಷಾ ಕಲಿಕೆಯಲ್ಲಿ ನಲಿ-ಕಲಿ ಅವಲೋಕನ ಮಾಡಲಾಗಿದೆ. ಬೋಧನಾ ಕಲಿಕೆಗೆ ಕ್ರಿಯಾಶೀಲತೆಯ ಸೆಲೆ, ಗಣಿತವೆಂಬ ಗುಮ್ಮ, ಎಸ್.ಎಸ್.ಎಲ್.ಸಿ., ಪಿಯುಸಿ ನಂತರ ಮುಂದೇನು? ಇತರ ಲೇಖನಗಳು ಬೇರೆ ಬೇರೆ ವಿಭಾಗಗಳಲ್ಲಿವೆ.

ಮೇಲಿನ ಎರಡೂ ಕೃತಿಗಳ ಪ್ರಕಾಶನ: ಮಣಿ ಪ್ರಕಾಶನ, ನಂ. 560, 12ನೇ ಮೇನ್, 20 `ಬಿಕ್ರಾಸ್, `ಸಿಬ್ಲಾಕ್, ವಿಜಯನಗರ 3ನೇ ಹಂತ, ಮೈಸೂರು-570030 ಸಂಪರ್ಕ: 9686535465

Leave a Reply

Your email address will not be published.