ಅಮೆರಿಕೆಯಲ್ಲಿ ಬೈಡನ್ ಆಡಳಿತ: ನಿರೀಕ್ಷೆಗಳು ನಿಜವಾಗಬಹುದೇ?

-ಶಿರೂರು ಹನುಮಂತರೆಡ್ಡಿ

ಸಂದಿಗ್ಧ ಕಾಲದಲ್ಲಿ ಅಮೆರಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಜೋ ಬೈಡನ್ ಮುಂದೆ ಹಲವು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆತನ ಕನಸಿನ ಅಮೆರಿಕ ಹೇಗಿರಬಹುದು? ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಲೇಖಕರು ಮುಂಬರುವ ಬೈಡನ್ ಆಡಳಿತದ ಪ್ರಭಾವಗಳನ್ನು ಸಮಚಿತ್ತದಿಂದ ಅಂದಾಜಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಮೂರು ವಾರಗಳಾದರೂ ಸೋಲೊಪ್ಪಿಕೊಳ್ಳದ ಟ್ರಂಪ್ ಭಂಡತನ ಮುಂದುವರಿದಿದೆ. ಆತ ಮತ್ತು ಆತನ ವಕೀಲರ ಪಟಾಲಂ ಹಾಕಿರೋ ಚುನಾವಣಾ ಅಕ್ರಮ ಕೇಸುಗಳೆಲ್ಲ ಒಂದೊOದಾಗಿ ಬಿದ್ದು ಹೋಗುತ್ತಿದ್ದು ಜನವರಿ 20ರಂದು ಜೋ ಬೈಡನ್ ಅಧಿಕಾರ ಸ್ವೀಕರಿಸೋದು ದಿಟವಾಗಿದೆ.

ಈ ನಡುವೆ ಕೋವಿಡ್ ಸೋಂಕಿತರ ಸಂಖ್ಯೆ ದಿನಕ್ಕೆ ಎರಡು ಲಕ್ಷ ತಲುಪಿದೆ ಮತ್ತು ಇಡೀ ದೇಶಕ್ಕೆ ಮತ್ತೊಮ್ಮೆ ಲಾಕ್ ಡೌನ್ ಆತಂಕ. ಈ ಆತಂಕದ ನಡುವೆ ಕೋವಿಡ್ ಲಸಿಕೆಗಳು ಆದಷ್ಟು ಬೇಗ ಲಭ್ಯವಾಗೋ ಶುಭ ಸೂಚನೆಗಳಿವೆ. ಸಂಶೋಧಕರು ಮತ್ತು ವಿಜ್ಞಾನಿಗಳು ಹೇಳುವಂತೆ ಡಿಸೆಂಬರ್ ಎರಡನೇ ವಾರದಲ್ಲಿ ಲಸಿಕೆ ಹಾಕೋ ಕಾರ್ಯ ಆರಂಭವಾಗಲಿದ್ದು ಮುಂದಿನ ವರ್ಷ ಜೂನ್ ಆಸುಪಾಸು ಕೋವಿಡ್ ಸ್ವಲ್ಪ ಹತೋಟಿಗೆ ಬರಬಹುದು. ಲಸಿಕೆ ವಿತರಣೆಯ ಪೂರ್ಣ ಜವಾಬ್ದಾರಿ ಅಮೆರಿಕದ ಸೈನ್ಯ ವಹಿಸಿಕೊಂಡಿರೋದೂ ಉತ್ತಮ ಬೆಳವಣಿಗೆ. ಇದೆಲ್ಲದರ ನಡುವೆ ಮುಂದಿನ ಆಡಳಿತ ನಡೆಸಲು ಬೈಡನ್ ತಯಾರಿಯೂ ನಡೆಯುತ್ತಿದ್ದು ಈಗಾಗಲೇ ಇಲಾಖೆಗಳ ಕಾರ್ಯದರ್ಶಿಗಳನ್ನ (ಇಂಡಿಯಾದ ಕೇಂದ್ರ ಮಂತ್ರಿಗಳOತೆ) ಗುರುತಿಸಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ “ಅಮೆರಿಕಾ ಫಸ್ಟ್” ಅನ್ನೋ ನೀತಿ ಅನುಸರಿಸಿ ತನ್ನ ಮನಸ್ಸಿಗೆ ಬಂದOತೆ ಆಡಳಿತ ನಡೆಸಿದ್ದು ಕಣ್ಣ ಮುಂದಿದೆ. ಆತನ ಆಡಳಿತ ಒಂದು ರೀತಿ ಪಿಂಗಾಣಿಯAಗಡಿಗೆ ನುಗ್ಗಿದ ಗೂಳಿಯಂತಿತ್ತು. ರಾಜಕಾರಣ, ಆರ್ಥಿಕತೆ, ವಿದೇಶ ನೀತಿ… ಹೀಗೆ ಎಲ್ಲ ವಿಷಯಗಳಲ್ಲೂ ಟ್ರಂಪ್ ಏಕಪಕ್ಷೀಯವಾಗಿ ಆಳ್ವಿಕೆ ನಡಿಸಿದ ಪರಿಣಾಮದಿಂದ ಇಡೀ ದೇಶ ಒಡೆದ ಮನೆಯಂತಾಗಿದೆ ಮತ್ತು ಹೊರ ದೇಶಗಳಲ್ಲಿ ಅಮೆರಿಕಾ ಅಂದರೆ ಜನ ನಗುವಂತಾಗಿದೆ.

ಅಮೆರಿಕದ ಐದು ಅಧ್ಯಕ್ಷೀಯ ಚುನಾವಣೆಗಳಲ್ಲಿ ಮತ ಹಾಕಿರೋ ನಾನು ಈ ಸಾರಿ ಇಂಥಾ ಅರಾಜಕತೆ ನೋಡುತ್ತೇನೆಂದು ಕನಸಲ್ಲೂ ಊಹಿಸಿರಲಿಲ್ಲ. ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಮತ ಚಲಾವಣೆಯ ದಾಖಲೆ ಬರೆದ ಚುನಾವಣೆ ಇದು. ಬೈಡನ್ ಗಳಿಸಿದ್ದು 80 ಮಿಲಿಯನ್ ಮತಗಳು. ಅವೆಲ್ಲವೂ ಬೈಡನ್ ಪಡೆದದ್ದು ಅನ್ನೋದಕ್ಕಿಂತ ಟ್ರಂಪ್-ವಿರೋಧಿ ಮತಗಳೆನ್ನಬಹುದು. ಇನ್ನು 74 ಮಿಲಿಯನ್ ಜನ ಟ್ರಂಪ್ ಬೆಂಬಲಿಗರು. ಅವರು ಆತನ ಕಟ್ಟಾ ಭಕ್ತರು. ಆ ಭಕ್ತರಿಗೆ ಇಂದಿಗೂ ಟ್ರಂಪ್ ಸೋತಿಲ್ಲ ಅನ್ನೋ ನಂಬಿಕೆ. ಇಂಥ ಸಂದಿಗ್ಧ ಕಾಲದಲ್ಲಿ ಆಯ್ಕೆಯಾಗಿರೋ ಜೋ ಬೈಡನ್ ಮುಂದೆ ಹಲವು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆತನ ಕನಸಿನ ಅಮೆರಿಕ ಹೇಗಿರಬಹುದು?

ಬೈಡನ್ ಮೊದಲ ಆದ್ಯತೆ ಕೋವಿಡ್ ನಿಯಂತ್ರಣ. ಮೇಲೆ ಹೇಳಿದಂತೆ ದೇಶದ ಜನಕ್ಕೆಲ್ಲ ಲಸಿಕೆ ಸಿಕ್ಕರೆ ಮುಂದಿನ ವರ್ಷ ಪರಿಸ್ಥಿತಿ ಸುಧಾರಿಸಬಹುದು. ಆದರೆ ಇನ್ನೆರಡು ತಿಂಗಳ ಕಾಲ ಟ್ರಂಪ್ ಅಧಿಕಾರದಲ್ಲಿರೋದರಿಂದ ಆತನ ತಟಸ್ಥ ನೀತಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಕೋವಿಡ್ ನಿಯಂತ್ರಣಕ್ಕೆ ಟ್ರಂಪ್ ವಿಜ್ಞಾನಿಗಳು ಮತ್ತು ವೈದ್ಯರನ್ನ ನಂಬುತ್ತಿರಲಿಲ್ಲ. ಆತನ ಅಂಧ ಭಕ್ತರಿಗೆ ಮಾಸ್ಕ್ ಹಾಕಬೇಡಿ ಅನ್ನೋ ಉಪದೇಶ ಬೇರೆ. ಆದರೆ ಬೈಡನ್ ಆಡಳಿತದಲ್ಲಿ ಅದೆಲ್ಲ ಬದಲಾಗಬಹುದು.

ಸೋಂಕಿತರ ಸಂಖ್ಯೆ ಗಗನಕ್ಕೇರಿ ಈಗ ದಿನಕ್ಕೆ 1500 ಜನ ಸಾಯುತ್ತಿದ್ದಾರೆ. ಸೋಂಕಿತರಿOದ ಆಸ್ಪತ್ರೆಗಳು ತುಂಬತೊಡಗಿವೆ. ಸಣ್ಣ ಪುಟ್ಟ ವ್ಯಾಪಾರಿಗಳು, ಉದ್ಯಮಗಳು ಮತ್ತೆ ಮುಚ್ಚತೊಡಗಿದ್ದು ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಸ್ಥಿತಿ ಸುಧಾರಿಸಲು ನಾಲ್ಕೈದು ತಿಂಗಳ ಕಾಲ ಬೇಕಾದೀತು. ಆದರೆ ಇದೆಲ್ಲದರ ಹೊಡೆತದಿಂದ ದೇಶದ ಆರ್ಥಿಕತೆ ಸ್ವಲ್ಪ ಕಾಲ ಕುಗ್ಗೋದೂ ನಿಜ.

ನ್ಯೂಯಾರ್ಕಿನ ಷೇರು ಮಾರುಕಟ್ಟೆ ನೋಡಿದರೆ ಅಮೆರಿಕದ ಆರ್ಥಿಕ ಸ್ಥಿತಿ ಮೇಲ್ನೋಟಕ್ಕೆ ಸುಭದ್ರವಾಗಿದೆ ಅನ್ನಿಸಬಹುದು. ಆದರೆ ಸರ್ಕಾರದ ಸಾಲವೇ (federal debt) 27 ಟ್ರಿಲಿಯ ಡಾಲರ್! ಇಲ್ಲಿ ದೈನಂದಿನ ಬದುಕಿಗೆ ಬೇಕಾಗೋ ಅಗತ್ಯವಸ್ತುಗಳ ಏರಿದ ಬೆಲೆಗಳು, ಕೋವಿಡ್ ಅಡ್ಡ ಪರಿಣಾಮ, ಹೆಚ್ಚುತ್ತಿರೋ ನಿರುದ್ಯೋಗಗಳಿಂದ ಶ್ರಮಿಕ ವರ್ಗ ತತ್ತರಿಸಿದೆ. ಈ ದೇಶದ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಗಂಟೆಗೆ ಕೇವಲ ಏಳೂಕಾಲು ಡಾಲರ್. ಅದು 2009ರಿಂದ ನಿಂತಲ್ಲೇ ನಿಂತಿದೆ. ಕೆಲವು ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚಿಗೆ ಸಿಕ್ಕರೂ ಬಹುಕಾಲದಿಂದ ಗಂಟೆಗೆ 15 ಡಾಲರ್ ಬೇಕೆನ್ನೋ ಬೇಡಿಕೆ ಇದೆ.

ರಿಪಬ್ಲಿಕನ್ ಪಕ್ಷದವರು ಕನಿಷ್ಠ ವೇತನ ಹೆಚ್ಚಳ ವಿರೋಧಿಗಳು. ಅವರೇನಿದ್ದರೂ ಹಣವಂತರು ಮತ್ತು ಮಾಲೀಕರ ಪರ. ಇನ್ನು ತೆರಿಗೆ ವಿಚಾರದಲ್ಲೂ ಅವರು ದೊಡ್ಡ ಉದ್ದಿಮೆದಾರರ ಪರವಾಗಿರುತ್ತಾರೆ. ಬೈಡನ್ ಈಗಾಗಲೇ ಕಾರ್ಪೊರೇಟ್ ಮತ್ತು 400,000 ಸಾವಿರ ಆದಾಯ ಇರೋ ಹಣವಂತರ ಮೇಲೆ ಅಧಿಕ ತೆರಿಗೆ ಹಾಕೋ ಮಾತಾಡಿದ್ದಾರೆ. ಇನ್ನು ಖಾಸಗೀ “ಆರೋಗ್ಯ ವಿಮೆ” ಅನ್ನೋ ಶಾಪದಿಂದ ಈ ದೇಶದ ಪ್ರಜೆಗಳು ಎಂದು ಮುಕ್ತರಾಗುತ್ತಾರೋ ಗೊತ್ತಿಲ್ಲ. ಅಮೆರಿಕಾ ಅಂದ ಕೂಡಲೇ ಇಲ್ಲಿರೋರೆಲ್ಲ ಶ್ರೀಮಂತರಲ್ಲ. ಐಟಿ ವಲಯ, ವೈದ್ಯರು, ವಕೀಲರು ಮತ್ತು ವಿಶೇಷ ಪರಿಣತಿ ಇರೋ ಹಲವರನ್ನ ಬಿಟ್ಟರೆ ದೇಶದ ಬಹುತೇಕ ಪ್ರಜೆಗಳ ವಾರ್ಷಿಕ ಆದಾಯ 33000 ಡಾಲರ್. ಈ ಮೊತ್ತ ರೂಪಾಯಿಗೆ ಪರಿವರ್ತಿಸಿದರೆ ದೊಡ್ಡದೆನಿಸಬಹುದು. ಆದರೆ ಈ ಹಣ ಎಷ್ಟೋ ಕುಟುಂಬಗಳ ಕೈ ಬಾಯಿಗೂ ಸಾಕಾಗುವುದಿಲ್ಲ. ಇದರಲ್ಲಿ ಅರೋಗ್ಯ ವಿಮೆ ಒಂದಕ್ಕೇ ವರ್ಷಕ್ಕೆ ಏಳೆಂಟು ಸಾವಿರ ಡಾಲರ್ ಬೇಕು.

ಒಬಾಮಾ-ಬೈಡನ್ ಆಡಳಿತದಲ್ಲಿ ಸಾರ್ವಜನಿಕ ಆರೋಗ್ಯ ವಿಮೆ ಜಾರಿಗೆ ಬಂದರೂ ಅದು ಪರಿಪೂರ್ಣವಾಗಿರಲಿಲ್ಲ. ಅದು ಜಾರಿಯಾದ ದಿನದಿಂದಲೇ ರಿಪಬ್ಲಿಕನ್ ಪಕ್ಷ ಮತ್ತು ಟ್ರಂಪ್ ಅದನ್ನ ಕಿತ್ತು ಹಾಕಲು ಪ್ರಯತ್ನಿಸಿದ್ದಾರೆ. ಯಾಕೆಂದರೆ ಅವರು ಖಾಸಗೀ ವಲಯ ಪ್ರೇಮಿಗಳು. ಬೈಡನ್ ಆಡಳಿತದಲ್ಲಿ ಕನಿಷ್ಠ ವೇತನ, ಆರೋಗ್ಯ ವಿಮೆ, ತೆರಿಗೆ ತಾರತಮ್ಯ ಇತ್ಯಾದಿಗಳ ಸುಧಾರಣೆಯಾಗಬಹುದು. ಆದರೆ ಇದಕ್ಕೆಲ್ಲ ಅಡ್ಡಿಯಾಗೋದು ಅಮೆರಿಕಾದ ಸೆನೆಟ್. ಅಲ್ಲಿ ರಿಪಬ್ಲಿಕನ್ ಪಕ್ಷದ ಬಹುಮತ. ಜನವರಿಯಲ್ಲಿ ಎರಡು ಸೆನೆಟ್ ಸ್ಥಾನಗಳಿಗೆ ನಡೆಯೋ ಮರುಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿಗಳು ಗೆದ್ದರೆ ಬೈಡನ್ ಕಾರ್ಯಕ್ರಮಗಳ ಜಾರಿ ಸುಗಮವಾಗಬಹುದು.

ಟ್ರಂಪ್ ಆಡಳಿತದಲ್ಲಿ ಅಮೆರಿಕಾದ ವ್ಯವಹಾರಿಕ ವಿದೇಶ ನೀತಿ ಬದಲಾಗಿತ್ತು ಅನ್ನೋದಕ್ಕಿಂತ ವಿಲಕ್ಷಣವಾಗಿತ್ತು ಅನ್ನಬಹುದು. ಆತನ “ಅಮೆರಿಕಾ ಫಸ್ಟ್” ಮಂತ್ರದಿAದ ಅಂತರರಾಷ್ಟಿçÃಯ ವ್ಯಾಪಾರ ವಹಿವಾಟುಗಳು ತತ್ತರಿಸಿದ್ದು ನಿಜ. ಮೊದಲಿಗೆ ಚೀನಾ ಮೇಲೆ ಹೇರಿದ ಆರ್ಥಿಕ ನಿರ್ಬಂಧನದ ಸಿಂಧುತ್ವವನ್ನ ಸ್ವಲ್ಪ ಮಟ್ಟಿಗೆ ಒಪ್ಪಬಹುದು. ಆದರೆ ಟ್ರಂಪ್ ಅನವಶ್ಯಕವಾಗಿ ಮಿತ್ರ ರಾಷ್ಟçಗಳಾದ ಜರ್ಮನಿ, ಇಂಗ್ಲೆOಡ್, ಕೆನಡಾ, ಮೆಕ್ಸಿಕೋ ಮತ್ತು ಭಾರತದ ವಿರುದ್ಧ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡದ್ದೂ ಆಗಿದೆ. “ಮೇಡ್ ಇನ್ ಅಮೆರಿಕಾ” ನೀತಿಯನ್ನ ಬೈಡನ್ ಕೂಡಾ ಸಮರ್ಥಿಸುತ್ತಾರೆ. ಆದರೆ ಇನ್ನುಮುಂದೆ ಅಂತರರಾಷ್ಟಿçÃಯ ವ್ಯಾಪಾರದ ಒಪ್ಪಂದಗಳಿಗೆ ಮಾನ್ಯತೆ ಸಿಗಬಹುದು.

ಇನ್ನು ವಿದೇಶ ನೀತಿಯ ರಾಜಕೀಯ ಮತ್ತಿತರೆ ಆಯಾಮಗಳ ದೃಷ್ಟಿಯಿಂದ ಅಮೆರಿಕಾ ಬದಲಾಗಿದೆಯೇ? ಬದಲಾಗುತ್ತಾ? ಅನ್ನೋ ಪ್ರಶ್ನೆಗಳಿಗೆ “ಇಲ್ಲ, ಇಲ್ಲ, ಇಲ್ಲ” ಅನ್ನಬೇಕಾಗುತ್ತೆ. ಈ ದೇಶದದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದರ ವಿದೇಶ ನೀತಿ ಯಾವತ್ತೂ ಅಮೆರಿಕಾದ ಪರ (pro-american) ಆಗಿರುತ್ತೆ. ತನ್ನ ಅತಿರೇಕ ವರ್ತನೆಯಿಂದ ಟ್ರಂಪ್ ಓಂಖಿಔ, ಸಂಯುಕ್ತ ಸಂಸ್ಥಾನ (United Nations) ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆ ಜಗಳ, ಪರಿಸರ ಸ್ನೇಹಿ ಪ್ಯಾರಿಸ್ ಒಪ್ಪಂದ ಮತ್ತು ಇರಾನ್ ದೇಶದ ಅಣ್ವಸ್ತç ನಿಯಂತ್ರಣ ಒಪ್ಪಂದದಿAದ ಏಕಪಕ್ಷೀಯ ನಿರ್ಗಮನ ಇತ್ಯಾದಿ ವಿಷಯಗಳು ತಾತ್ಕಾಲಿಕ ಅನ್ನಬಹುದು. ಬೈಡನ್ ಅದೆಲ್ಲ ಒಂದೆರಡು ತಿಂಗಳಲ್ಲಿ ಸರಿಪಡಿಸುತ್ತಾರೆ. ಹಲವು ದಶಕಗಳಿಂದ ಇಸ್ರೇಲಿಗೆ ಕೊಡುತ್ತಿರೋ ಮಿಲಿಟರಿ ಮತ್ತು ಆರ್ಥಿಕ ಸಹಾಯ, ಪ್ಯಾಲೆಸ್ಟೆöÊನ್ ಬಗ್ಗೆ ಇರೋ ಮಲತಾಯಿ ಧೋರಣೆ ಅಥವಾ ಫ್ಲೋರಿಡಾ ರಾಜ್ಯದಲ್ಲಿರೋ ಕ್ಯೂಬನ್-ಅಮೆರಿಕನ್ ವೋಟ್ ಬ್ಯಾಂಕ್ ಮನವೊಲಿಕೆಗೆ ಕ್ಯೂಬಾ ಅನ್ನೋ ಪುಟ್ಟ ಬಡಪಾಯಿ ದೇಶಕ್ಕೆ ಕೊಡುತ್ತಿರೋ ಕಾಟ… ಹೀಗೆ ರಿಪಬ್ಲಿಕನ್ ಅಥವಾ ಡೆಮಾಕ್ರೆಟಿಕ್ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಒಟ್ಟಾರೆ ಅಮೆರಿಕಾದ ವಿದೇಶ ನೀತಿ ಅಮೆರಿಕಾದ ಪರವಾಗೇ ಇರುತ್ತದೆ. ಇನ್ನು ರಷ್ಯಾದ ಪುಟಿನ್ ಮತ್ತು ಉತ್ತರ ಕೊರಿಯಾದ ಕಿಮ್ ಜೊತೆ ಟ್ರಂಪ್ ನಡವಳಿಕೆ ಹಾಸ್ಯಾಸ್ಪದವಾಗಿತ್ತು. ಪಾಳೇಗಾರಿಕೆ ಮನಸ್ಸಿನ ಟ್ರಂಪಿಗೆ ಸ್ವಾಭಾವಿಕವಾಗಿ ಅವರಿಬ್ಬರೂ ಇಷ್ಟವಾಗಿದ್ದರು. ಬೈಡನ್ ಇದಕ್ಕೆ ತದ್ವಿರುದ್ಧ.

ವಿದೇಶ ನೀತಿ ಅಂದಕೂಡಲೇ “ವಲಸೆ” ನೆನಪಾಗ್ತಿದೆ. 30 ವರ್ಷಗಳ ಹಿಂದೆ ನಾನು ಈ ದೇಶಕ್ಕೆ ಬಂದಾಗ ಈಗಿನ ಸಂಕೀರ್ಣ ವಲಸೆ ಸಮಸ್ಯೆಗಳಿರಲಿಲ್ಲ. ಮುಂದೆ ದಕ್ಷಿಣ ಅಮೆರಿಕಾದಲ್ಲಿರೋ ಬಡತನ ಸಹಿಸದೇ ಲಕ್ಷಾಂತರ ಜನ ಉತ್ತರ ಅಮೆರಿಕಕ್ಕೆ ಕಾನೂನುಬಾಹಿರ ಗುಳೇ ಹೋಗಿದ್ದು ನಿಜ. ಆದರೆ ಅವರು ಮಾಡುತ್ತಿರೋ ಶ್ರಮಭರಿತ ಕೆಲಸ ಸ್ವತಃ ಅಮೆರಿಕನ್ನರು ಮಾಡಲ್ಲ. ಇನ್ನು ಅಮೆರಿಕಾದ ಐಟಿ ವಲಯ ಹೊರಗುತ್ತಿಗೆ ಆಧಾರದ ಮೇಲೆ ಭಾರತ ಮತ್ತು ಚೀನಾ ದೇಶಗಳ ಬುದ್ಧಿವಂತರನ್ನ ಇಲ್ಲಿಗೆ ಕರೆಸಿಕೊಂಡು ಕಡಿಮೆ ಸಂಬಳದಲ್ಲಿ ದುಡಿಸಿಕೊಂಡOತೆ ಸ್ಥಳೀಯರಿಗೆ ಅವಕಾಶಗಳು ಕಡಿಮೆ ಆದದ್ದೂ ನಿಜ. ಈ ಪರಿಸ್ಥಿತಿಯನ್ನ ಜಾಣತನದಿಂದ ಬಳಸಿಕೊಂಡು ಗೆದ್ದ ಟ್ರಂಪ್ ಹೆಚ್ಚುಕಡಿಮೆ ಅಮೆರಿಕಾದ ಗಡಿಯನ್ನ ಬಂದ್ ಮಾಡಿದ್ದಾನೆ. ಬೈಡನ್ ಆಡಳಿತದಲ್ಲಿ ಈಗಿರೋ ಕಠಿಣ ವಲಸೆ ನೀತಿ ಸಡಿಲವಾಗಬಹುದು.

ಕೊನೆಯದಾಗಿ ಬೈಡನ್ ಆಡಳಿತದಲ್ಲಿ ಅಮೆರಿಕಾ-ಭಾರತ ಸಂಬAಧ ಹೇಗಿರಬಹುದು? ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್-ಮೋದಿ ಜೋಡಿಯ ಘಟಬಂಧನ ಎಲ್ಲರಿಗೆ ಗೊತ್ತಿದೆ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ಘೋಷಿಸಿದ್ದ ಮೋದಿಯವರಿಂದಾಗಿ ಅಮೆರಿಕಾದಲ್ಲಿರೋ ಭಾರತೀಯ ಮೂಲದ ಮತಗಳನ್ನ ಟ್ರಂಪ್ ಸ್ವಲ್ಪ ಮಟ್ಟಿಗೆ ಗಿಟ್ಟಿಸಿದರೂ ಆತ ಗೆಲ್ಲಲಿಲ್ಲ. ಬೈಡನ್-ಕಮಲಾ ಜೋಡಿ ಗೆದ್ದನಂತರ ಮೋದಿ “ನಿಮ್ಮ ಪ್ರಚಂಡ ಗೆಲುವಿಗೆ ಶುಭಾಶಯಗಳು” ಅನ್ನೋ ಸಂದೇಶ ಕಳಿಸಿದ್ದಾರೆ. ಭಾರತದ ಎಲ್ಲ ರಾಜಕೀಯ ಮುಖಂಡರು ಕಮಲಾ ಹ್ಯಾರಿಸ್ ಅವರನ್ನ ತಮಿಳಿನ ಆತ್ಮೀಯ ಪದ “ಚಿಟ್ಟಿ”, “ಭಾರತದ ಮಗಳು” ಅಂದುಕೊOಡು ಸಂಭ್ರಮಿಸಿದ್ದಾಗಿದೆ.

ಮೋದಿ ಸರ್ಕಾರದ ವಿವಾದಾತ್ಮಕ ನಿರ್ಧಾರಗಳನ್ನ ಟ್ರಂಪ್ ಬೆಂಬಲಿಸದಿದ್ದರೂ ಮೌನವಾಗಿದ್ದರು. ಆದರೆ ಬೈಡನ್-ಕಮಲಾ ಆಗಾಗ ಮೋದಿ ಸರ್ಕಾರದ ನಡವಳಿಕೆ ಬಗ್ಗೆ ಅದರಲ್ಲೂ ಭಾರತದಲ್ಲಿ ಆಗಿರಬಹುದಾದ ಮಾನವ ಹಕ್ಕುಗಳ ಹರಣ, ಅಲ್ಪ ಸಂಖ್ಯಾತರ ಮೇಲೆ ಆಗುತ್ತಿರೋ ದೌರ್ಜನ್ಯ, ಧಾರ್ಮಿಕ ಅಸಹನೆ, ಕಾಶ್ಮೀರ ಮುಂತಾದ ವಿವಾದಾತ್ಮಕ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಬೈಡನ್ ಗೆಲುವು ಮೋದಿ ಸರ್ಕಾರಕ್ಕೆ ಖಂಡಿತಾ ಕೆಟ್ಟ ಸುದ್ದಿ.

ಟ್ರಂಪ್ ಮತ್ತು ಚೀನಾ ನಡುವಿನ ವಿರಸ ಭಾರತಕ್ಕೆ ಸ್ವಲ್ಪ ಉಪಯೋಗವಾಗಿರಬಹುದು. ಆದರೆ ಬೈಡನ್ ಕಾಲದಲ್ಲಿ ಚೀನಾ-ಅಮೆರಿಕಾ ಸಂಬOಧ ಹೇಗಿರಬಹುದೆಂದು ಈಗಲೇ ಊಹಿಸಿಕೊಳ್ಳೋದು ಕಷ್ಟ. ಪಾಕಿಸ್ತಾನ ಮತ್ತು ಅಮೆರಿಕಾ ಸಂಬAಧವೇನೂ ಬದಲಾಗಲಿಕ್ಕಿಲ್ಲ. ಹಾಗೆ ನೋಡಿದರೆ ಭಾರತ ಉಪಖಂಡದಲ್ಲಿ ಅಮೆರಿಕಾದ ಖಾಯಂ ಗೆಳೆಯರು ಅಥವಾ ಶತ್ರುಗಳಿಲ್ಲ. ಅಲ್ಲಿರೋ ದೇಶಗಳ ನಡುವಿನ ವಿರಸ ಅಮೆರಿಕಕ್ಕೆ ಲಾಭಕಾರಿ. ಎಲ್ಲ ದೇಶಗಳೂ ಅಮೆರಿಕದ ಮಿಲಿಟರಿ ಉತ್ಪನ್ನಗಳ ಗಿರಾಕಿಗಳು. ಟ್ರಂಪ್ ವಲಸೆ ನೀತಿಯಿಂದಾಗಿ ಭಾರತದ ಐಟಿ ಉದ್ಯೋಗಿಗಳು ತೊಂದರೆಯಲ್ಲಿರೋದು ನಿಜ. ಈ ಸಮಸ್ಯೆ ಬೈಡನ್ ಸರ್ಕಾರದಲ್ಲಿ ಬಗೆಹರಿಯಬಹುದು. ಇಲ್ಲಿ ಗಮನಿಸಬೇಕಾದ ಅಂಶ ಬೈಡನ್ ಗೆದ್ದು ಬಂದಿರೋದು ಎಡಪಂಥೀಯ ಡೆಮಾಕ್ರೆಟಿಕ್ ಪಕ್ಷದಿಂದ. ಆ ಪಕ್ಷದ ಸಿದ್ಧಾಂತಗಳು ಬಲ ಪಂಥೀಯ ಮೋದಿ ಸರ್ಕಾರವನ್ನ ಮೆಚ್ಚಲಿಕ್ಕಿಲ್ಲ.

*ಲೇಖಕರು ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಪರಿಸರ ಸಮಾಲೋಚಕರು; ಬಳ್ಳಾರಿ ಮೂಲದವರು.

 

Leave a Reply

Your email address will not be published.