ಅಮೆರಿಕೆಯಲ್ಲಿ ಬೈಡನ್-ಹ್ಯಾರೀಸ್ ಗೆಲುವು ಹೊಸ ದಿಗಂತದ ನಿರೀಕ್ಷೆ

-ನಾ ದಿವಾಕರ

ಅಮೆರಿಕೆಯಲ್ಲಿ ಡೆಮಾಕ್ರಟ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅಲ್ಲಿನ ಜನರಲ್ಲಿ, ಜಾಗತಿಕ ಸಮುದಾಯದಲ್ಲಿ ಆಶಾಭಾವ ಮೂಡಿಸಿದೆ.

ಅಮೆರಿಕದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಕಾರ್ಪೋರೇಟ್ ಪ್ರತಿನಿಧಿಯಂತೆಯೇ ತಮ್ಮ ಅಧ್ಯಕ್ಷಾವಧಿಯನ್ನು ಪೂರೈಸಿದ್ದಾರೆ. ಟ್ರಂಪ್ ಆಡಳಿತದ ಜನವಿರೋಧಿ ನೀತಿಗಳು, ಕೋವಿದ್ ನಿಯಂತ್ರಣದ ವೈಫಲ್ಯ, ಟ್ರಂಪ್ ಹುಚ್ಚಾಟದಿಂದ ಲಕ್ಷಾಂತರ ಜನರ ಸಾವು, ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ ಇವೆಲ್ಲ ಕಾರಣಗಳಿಂದ ಕಳೆದ ಚುನಾವಣೆಗಳಲ್ಲಿ ಅಮೆರಿಕದ ಜನತೆ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ನೇತೃತ್ವದ ಡೆಮಾಕ್ರಟ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ.

ಪರಿಸರ ಕಾಳಜಿಯನ್ನು ಕುರಿತಂತೆ ಟ್ರಂಪ್ ಸರ್ಕಾರದ ಎಡಬಿಡಂಗಿ ನೀತಿಗಳ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಡೆಮಾಕ್ರಟ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅಲ್ಲಿನ ಜನರಲ್ಲಿ, ಜಾಗತಿಕ ಸಮುದಾಯದಲ್ಲಿ ಆಶಾವಾದವನ್ನು ಮೂಡಿಸಿದೆ. ತಮ್ಮ ಡೆಮಾಕ್ರಟ್ ಪಕ್ಷದ ಆಳ್ವಿಕೆಯಲ್ಲಿ ಪರಿಸರ ರಕ್ಷಣೆಗೆ ಶಾಸನವನ್ನು ಜಾರಿಗೊಳಿಸಲು ಕಮಲಾ ಹ್ಯಾರಿಸ್ ಆಶ್ವಾಸನೆ ನೀಡಿದ್ದು, ಪರಿಸರ ರಕ್ಷಣೆಯನ್ನು ಕ್ರಿಯಾಶೀಲಗೊಳಿಸಲು ಹಲವು ಸಂಘಟನೆಗಳ ಸಹಯೋಗವನ್ನು ಸಾಧಿಸುವ ಸಾಧ್ಯತೆಗಳಿವೆ.

ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಕಂಪನಿಗಳು ತೀವ್ರವಾದ ಇಂಗಾಲವನ್ನು ಹೊರಸೂಸುವ ಮೂಲಕ ಪರಿಸರ ಮಾಲಿನ್ಯವನ್ನು ಹೆಚ್ಚು ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೂ ಕಮಲಾ ಹ್ಯಾರಿಸ್ ನಿರ್ಧರಿಸಿದ್ದಾರೆ.

ಹ್ಯಾರಿಸ್ ಆಯ್ಕೆಯನ್ನು ಅಮೆರಿಕದ ಪರಿಸರವಾದಿಗಳು ಮತ್ತು ತಜ್ಞರು ಮುಕ್ತಕಂಠದಿಂದ ಸ್ವಾಗತಿಸಿದ್ದು ಓಝೋನ್ ಪದರದ ಸಮಸ್ಯೆ ಮತ್ತು ಪರಿಸರ ನಾಶದ ಸಮಸ್ಯೆಯನ್ನು ಸವಾಲಿನಂತೆ ಎದುರಿಸಿ ಅಮೆರಿಕ ಜಾಗತಿಕ ಪರಿಸರ ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುವಲ್ಲಿ ಕಮಲಾಹ್ಯಾರಿಸ್ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎನ್ನುವ ಭರವಸೆ ವಿಶ್ವದೆಲ್ಲೆಡೆ ಕಂಡುಬರುತ್ತಿದೆ. ಸೆನೇಟರ್ ಆಗಿದ್ದಾಗಲೇ ತಮ್ಮ ಪರಿಸರ ಕಾಳಜಿಯನ್ನು ಮತ್ತು ಪರಿಸರ ರಕ್ಷಣೆಗೆ ಇರುವ ಬದ್ಧತೆಯನ್ನು ಕಾರ್ಯತಃ ಸಾಧಿಸಿ ತೋರಿಸಿರುವ ಕಮಲಾ ಹ್ಯಾರಿಸ್ ವಿಶ್ವ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿರುವುದು ಅಚ್ಚರಿಯೇನಲ್ಲ. 2005ರಲ್ಲಿ ಕ್ಯಾಲಿಫೋರ್ನಿಯಾದ ಅಟೋರ್ನಿ ಜನರಲ್ ಆಗಿದ್ದ ಹ್ಯಾರಿಸ್ ಷೆವ್ರನ್ ಪ್ರಾಂತ್ಯದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ರಿಫೈನರಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು. ಲಾಸ್ ಏಂಜಲಿಸ್‍ನ ಹೊರವಲಯದಲ್ಲಿ ಮಿಥೇನ್ ಅನಿಲ ಸೋರಿಕೆಯಿಂದ ಅಲ್ಲಿನ ಜನತೆಗೆ ಬದುಕೇ ದುಸ್ತರವಾಗುತ್ತಿದ್ದ ಹಿನ್ನೆಲೆಯಲ್ಲಿ ಸದರನ್ ಕ್ಯಾಲಿಫೋರ್ನಿಯಾ ಗ್ಯಾಸ್ ಕಂಪನಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು.

ಭಾರತೀಯ ಸಂಜಾತ ತಾಯಿ ಮತ್ತು ಜಮೈಕಾದ ತಂದೆಗೆ ಜನಿಸಿದ ಕಮಲಾ ಹ್ಯಾರಿಸ್ ಸಾಮಾನ್ಯವಾಗಿ ತಮ್ಮ ಭಾರತೀಯ ನಂಟಿನ ಬಗ್ಗೆ ಮಾತನಾಡದಿದ್ದರೂ ಈ ಬಾರಿ ಚುನಾವಣೆಗಳ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಂಜಾತ ಪ್ರಜೆಗಳ ಮತಗಳಿಕೆಗಾಗಿ ತಮ್ಮ ಭಾರತದ ಮೂಲವನ್ನು ಪ್ರಸ್ತಾಪಿಸಿದ್ದರು. ಆದರೆ ಈ ಅಸ್ಮಿತೆಯ ರಾಜಕಾರಣವನ್ನು ಬದಿಗಿಟ್ಟು ಅಮೆರಿಕದಲ್ಲಿರುವ ಅಂಚಿಗೆ ತಳ್ಳಲ್ಪಟ್ಟ, ಅವಕಾಶವಂಚಿತ ಜನಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿರುವ ಕಮಲಾ ಹ್ಯಾರಿಸ್, ಕಾಂಗ್ರೆಸ್ ಸದಸ್ಯೆ ಅಲೆಕ್ಸಾಂಡ್ರಿಯಾ ಒಕೇಷಿಯೋ ಕೋರ್ಟೆಜ್ ಅವರ ಸಹಯೋಗದಲ್ಲಿ ಪರಿಸರ ರಕ್ಷಣೆಗೆ ಶ್ರಮಿಸಲು ಪಣತೊಟ್ಟಿದ್ದಾರೆ. ಇಂಗಾಲ ಮುಕ್ತ ಅರ್ಥವ್ಯವಸ್ಥೆಯನ್ನು ವ್ಯವಸ್ಥಿತವಾಗಿ, ವೈಜ್ಞಾನಿಕ ನೆಲೆಯಲ್ಲಿ ರೂಪಿಸುವ ನಿಟ್ಟಿನಲ್ಲಿ ಕಮಲಾ ಹ್ಯಾರಿಸ್ ಅಲೆಕ್ಸಾಂಡ್ರಿಯಾ ಮತ್ತು ಸೆನೇಟರ್ ಎಡ್ ಮರ್ಕೇ ಅವರ ಸಹಯೋಗದೊಂದಿಗೆ ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದಾರೆ. 

ಆದರೆ ಅಮೆರಿಕದ ರಾಜಕಾರಣದಲ್ಲಿ ಸದಾ ಕಾಣಬಹುದಾದ ದ್ವಂದ್ವ ನೀತಿಯನ್ನು ಕಮಲಾ ಹ್ಯಾರಿಸ್ ಅವರಲ್ಲೂ ಗುರುತಿಸಬಹುದು. ಅಲ್ಲಿನ ಪ್ರಭುತ್ವ ನೀತಿಗಳು, ಆಡಳಿತಾರೂಢ ಪಕ್ಷದ ಪ್ರಭಾವದಿಂದ ಹೊರತಾಗಿಯೇ ಜಾರಿಯಲ್ಲಿರುವುದನ್ನು ಮಧ್ಯಪ್ರಾಚ್ಯ ನೀತಿ, ಇಸ್ರೇಲ್ ಕುರಿತ ನೀತಿ ಮತ್ತು ಕಪ್ಪು ಜನಾಂಗವನ್ನು ಕುರಿತಂತೆ ಅನುಸರಿಸುವ ನೀತಿಗಳಲ್ಲಿ ಸದಾ ಗುರುತಿಸಬಹುದಾಗಿದೆ. ಕಮಲಾ ಹ್ಯಾರಿಸ್ ಸಹ ಈ ನಿಟ್ಟಿನಲ್ಲಿ ವಿಭಿನ್ನವಾಗಿ ಕಾಣುವುದಿಲ್ಲ.

ಪರಿಸರ ಮಾಲಿನ್ಯ ಒಂದು ತಾಂತ್ರಿಕ ಸಮಸ್ಯೆಯಲ್ಲ. ಬದಲಾಗಿ ಸಮಾಜೋ-ರಾಜಕೀಯ ಸಮಸ್ಯೆ. ಯುದ್ಧ ವಿರೋಧಿ, ಸೇನಾ ಮನೋಭಾವ ವಿರೋಧಿ ಮತ್ತು ಸಮುದಾಯ ಪ್ರೇರಿತ ಆಡಳಿತ ನೀತಿಗಳನ್ನು ಜಾರಿಗೊಳಿಸಿದಲ್ಲಿ ಮಾತ್ರವೇ ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ವಿಶ್ವದ ಜನತೆ ನೆಮ್ಮದಿಯ ಉಸಿರಾಡಲು ಸಾಧ್ಯ. ಸೇನಾ ವೆಚ್ಚಗಳು, ಪೊಲೀಸ್ ಇಲಾಖೆ ಮತ್ತು ಬಂದಿಖಾನೆಯ ನಿರ್ವಹಣೆಯ ವೆಚ್ಚಗಳನ್ನು ವಿರೋಧಿಸುವುದರೊಂದಿಗೇ, ಪುನರ್ ಬಳಕೆಯ ಇಂಧನ ಉತ್ಪಾದನೆ, ಪರಿಸರ ರಕ್ಷಣೆಗೆ ಪೂರಕವಾದ ಮೂಲ ಸೌಕರ್ಯಗಳಿಗೆ ಪ್ರೋತ್ಸಾಹ ಹಾಗೂ ಇಂಗಾಲ ಹೊರಸೂಸುವಿಕೆಯ ನಿಯಂತ್ರಣ ಇವೆಲ್ಲವೂ ಸಹ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕಮಲಾ ಹ್ಯಾರಿಸ್ ಕಾರ್ಪೋರೇಟ್ ಪರ ಧೋರಣೆಯಿಂದ ಹೊರತಾದವರಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ. ಅಮೆರಿಕನ್ನರಿಗಾಗಿ ಅಮೆರಿಕ ಎಂದು ಹೇಳುವ ಮೂಲಕ ಜಾಗತೀಕರಣದ ವೈಫಲ್ಯವನ್ನು ಒಪ್ಪಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಅವರಂತೆಯೇ ದೇಶೀ ಬಂಡವಾಳಿಗರಿಗೆ ಅನುಕೂಲವಾಗುವಂತಹ ಆರ್ಥಿಕ ನೀತಿಯನ್ನೇ ಬೈಡನ್ ಮತ್ತು ಹ್ಯಾರಿಸ್ ಆಡಳಿತವೂ ಅನುಸರಿಸುವ ಸಾಧ್ಯತೆಗಳಿರುತ್ತವೆ. 

ಈ ಎಲ್ಲ ದ್ವಂದ್ವಗಳ ನಡುವೆಯೇ ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಮತ್ತು ಜಗತ್ತಿನಾದ್ಯಂತ ಭರವಸೆಯ ಕಿರಣಗಳನ್ನು ಮೂಡಿಸಿದ್ದಾರೆ. ಆದರೆ ಅವರ ಪರಿಸರ ಕಾಳಜಿ ಮತ್ತು ಪರಿಸರ ರಕ್ಷಣೆಗಾಗಿ ಅವರಲ್ಲಿರುವ ಬದ್ಧತೆ, ಅಮೆರಿಕದ ಸಮರಶೀಲ ನೀತಿಗಳನ್ನು, ಸಮಾಜದ ತಳಮಟ್ಟದ ಜನಸಮುದಾಯಗಳಿಗೆ ಮಾರಕವಾಗುವ ಆರ್ಥಿಕ ನೀತಿಗಳನ್ನು, ವಿಶ್ವ ಶಾಂತಿಗೆ ಮಾರಕವಾದ ಇಸ್ರೇಲ್ ಪರ ನೀತಿಯನ್ನು ಎದುರಿಸಲು ನೆರವಾಗುವುದೇ ಎಂದು ಕಾದು ನೋಡಬೇಕಿದೆ.

 

Leave a Reply

Your email address will not be published.