ಅಮೆರಿಕೆಯ ಕಲಾಗ್ರಾಮ ಕಾರ್ಮೇಲ್

ಒಂದೇ ಊರಲ್ಲಿ ಇಷ್ಟು ಸಂಖ್ಯೆಯ ಕಲಾವಿದರು ತುಂಬಿಕೊಂಡು ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸುವ ಇನ್ನೊಂದು ಸ್ಥಳ ಬೇರೆಲ್ಲೂ ಇರಲಾರದು.

ಮೆರಿಕೆಯ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕಲೆ, ಕಲಾವಿದರನ್ನು ಗೌರವಿಸುತ್ತಿರುವ ಪ್ಯಾಸಿಫಿಕ್ ಮಹಾಸಾಗರದ ದಂಡೆಯಲ್ಲಿರುವ ವಿಶಿಷ್ಟ ಊರು -ಕಾರ್ಮೆಲ್. ಹಿಂದಿನ ದಿನವಷ್ಟೇ ಪ್ಲ್ಯಾನ್ ಮಾಡಿಕೊಂಡಂತೆ ಹನ್ನೊಂದು ಗಂಟೆಗೆ ಕಾರ್ಮೆಲ್ಲಿಗೆ ಹೊರಟಾಗ ಚಳಿಗಾಲದ ಅಬ್ಬರದ ಮಳೆ ಶುರುವಾಯ್ತು. ಇಂಥ ಮಳೆಯಲ್ಲಿ ಊರನ್ನು ನೋಡುವುದು ಹೇಗೆ ಎಂಬ ನಿರಾಶೆಯಾವರಿಸಿಕೊಂಡಿತು. ನಿರಾಶೆಗೆ ಕಾರಣವಿಲ್ಲ ಎಂಬಂತೆ ಸುರಿಯುವ ಮಳೆ ತನ್ನ ವಿವಿಧ ಮುಖಗಳ-ದರ್ಶನ ಮಾಡಿಸತೊಡಗಿತು. ಕಣ್ಣೆದುರಿಗೆ ಕವಿದ ಮಂಜು ದಟ್ಟ ಹಚ್ಚನೆಯ ಕಾಡುಗಳಲ್ಲೊಂದು ಕನಸಿನ ಲೋಕಕ್ಕೆ ಕರೆದೊಯ್ಯುತ್ತಿದ್ದಂತಿತ್ತು. ಅಕ್ಕಪಕ್ಕದಲ್ಲಿ ಮುಗಿಲೆತ್ತರಕ್ಕೆ ಬೆಳೆದುನಿಂತ ಸೂಚಿಪರ್ಣಿ ವೃಕ್ಷಗಳು ಹಸಿರು ಶಾಹಿಯಲ್ಲಿ ಯಾವುದೋ ಪ್ರೇಮಿ ಬರೆದ ಕವಿತೆಗಳಂತೆ ಕಂಡವು! ಒಂದು ಕಡೆ ಕಾಡಿನ ಸಾಮ್ರಾಜ್ಯ. ಇನ್ನೊಂದೆಡೆ ಮೊರೆಯುವ ದಟ್ಟ ನೀಲಿ ಬಣ್ಣದ ವಿಶಾಲ ಪ್ಯಾಸಿಫಿಕ್ ಮಹಾಸಾಗರ! ‘ಬಾ ಮಗಳೇ’ ಎಂದು ಕಡಲು ಕರೆಯಿತು!

60 ಮೈಲು ದೂರವಿದ್ದ ಕಾರ್ಮೆಲ್ಲನ್ನು ಒಂದು ಗಂಟೆಯಲ್ಲಿ ತಲುಪಬೇಕಾದ ನಾವು ಎರಡು ಗಂಟೆ ದಾರಿಯಲ್ಲಿ ಕಳೆದಿದ್ದೆವು. ಫಾಲ್ ಸೀಸನ್ನು ಅಂದರೆ ಅಮೆರಿಕೆಯಲ್ಲಿ ಬಣ್ಣದೆಲೆಗಳು ಹಗೂರಾಗಿ ನೆಲವನ್ನು ಸೇರುವ ಚೆಂದದ ದೃಶ್ಯ! ಹಳದಿ ಕೆಂಪು ಕಂದು ಬಣ್ಣದೆಲೆಗಳ ರಂಗೋಲಿ ನೆಲತುಂಬ! ಎಲೆಗಳನ್ನೆಲ್ಲ ಕಳಚಿ ನಗ್ನವಾಗಿ ನಿಂತ ಗಿಡಗಳ ಸಾಲು ನೀಡಿದ ಪುಳಕ ಇನ್ನೊಂದು ಬಗೆಯದು!

ಸ್ಯಾನ್‍ಹೋಜೆಯಿಂದ ಹೊರಟ ನಾವು ಕಾರ್ಮೆಲ್ ಮುಟ್ಟಿದಾಗ ಮಧ್ಯಾಹ್ನ ಒಂದುಗಂಟೆ. ಸುದೈವಕ್ಕೆ ಮಳೆ ಸಂಪೂರ್ಣವಾಗಿ ನಿಂತು ಕಾರ್ಮೆಲ್ಲಿನ ಓಣಿ ಓಣಿಗಳಲ್ಲಿ ಪ್ರವಾಸಿಗರ ತಂಡಗಳು ಓಡಾಡುತ್ತಿದ್ದವು. ಅಲ್ಲಿ ಕಲಾರಾಧಕ ಯುವಕರ ಗುಂಪುಗಳು ಕಂಡವು. ವಿವಿಧ ರೀತಿಯಲ್ಲಿ ಸಿಂಗರಿಸಿದ ನಾಯಿಗಳನ್ನು ಹಿಡಿದುಕೊಂಡು ಮಹಿಳೆಯರು ಅವುಗಳೊಂದಿಗೆ ಮುದ್ದಿನಿಂದ ಮಾತಾಡುವುದನ್ನು ನೋಡಿದಾಗ ಅಮೆರಿಕನ್ನರ ಶ್ವಾನಪ್ರೀತಿ ಎಂಥದು ಎಂಬ ಅರಿವು ಮೂಡಿತು. ಕಾರನ್ನು ಒಂದೆಡೆ ಪಾರ್ಕ್ ಮಾಡಿ ಕಲಾಪ್ರಪಂಚದ ಓಣಿಗಳತ್ತ ನಮ್ಮ ಹೆಜ್ಜೆ ಇಟ್ಟೆವು. ಮಗ ಶ್ರೀಶೈಲ ಮೊದಲೇ ನನ್ನ ಮನಸ್ಸಿನ ಸಿದ್ಧತೆ ಮಾಡಿಬಿಟ್ಟ: ‘ಇಲ್ಲಿ ನೂರಾರು ಆರ್ಟ್ ಗ್ಯಾಲರಿಗಳಿವೆ. ಎಲ್ಲವನ್ನು ನೋಡುವುದಂತೂ ಸಾಧ್ಯವಿಲ್ಲದ ಮಾತು. ನಮ್ಮ ಸಹನೆ ಇದ್ದಷ್ಟನ್ನು ನೋಡೋಣ. ಅದಕ್ಕಾಗಿ ಸ್ವಲ್ಪ ಅವಸರದಲ್ಲೇ ಎಲ್ಲವನ್ನೂ ನೋಡಬೇಕು’.

ಒಂದೊಂದು ಆರ್ಟ್ ಗ್ಯಾಲರಿ ಹೊಕ್ಕು ಹೊರಗೆ ಹೊರಟಾಗಲೆಲ್ಲ ಪ್ರತಿಸಲವೂ ನನ್ನ ಕಣ್ಣುಗಳನ್ನು ಕಿತ್ತುಕೊಂಡೇ ನಡೆಯಬೇಕಾದ ಪ್ರಸಂಗಗಳು ಹಲವಿದ್ದವು. ಸೂರ್ಯಾಸ್ತದ ಸೂರ್ಯನನ್ನು ನೋಡುವ ಮತ್ತು ಬೀಚಿನಲ್ಲಿ ಅಡ್ಡಾಡುವ ಪ್ರೋಗ್ರಾಂ ಇದ್ದುದರಿಂದ ಸ್ನಾಕ್‍ಗಾಗಿ ಅರ್ಧಗಂಟೆ ಕಳೆದದ್ದನ್ನು ಬಿಟ್ಟರೆ ಉಳಿದ ನಾಲ್ಕು ಗಂಟೆ ಕಾಲ 22-23 ಕಲಾ ಪ್ರದರ್ಶನಗಳನ್ನು ಮಾತ್ರ ನೋಡುವುದು ಹೇಗೋ ಸಾಧ್ಯವಾಯಿತು. ಇಲ್ಲಿ ಪೇಂಟಿಂಗ್‍ಗಳ ಪ್ರದರ್ಶನಗಳ ಗ್ಯಾಲರಿಗಳೇ ಮುಕ್ಕಾಲು ಪಾಲು! ಒಂದು ಆರ್ಟ್ ಗ್ಯಾಲರಿ ಮಾಲೀಕ ಹೇಳಿದ, ‘ಕಾರ್ಮೆಲ್‍ನಲ್ಲಿರುವ ಕಲಾವಿದರ ಪೇಂಟಿಂಗ್‍ಗಳೇ ಇಲ್ಲಿವೆ. ಕೆಲ ಹೊರಗಿನ ಕಲಾಕಾರರನ್ನು ಆಮಂತ್ರಿಸಿದಾಗ ಅವರು ಇಲ್ಲಿಯೇ ಉಳಿದುಕೊಂಡು ಪೇಂಟ್ ಮಾಡಿಕೊಟ್ಟು ಹೋಗುತ್ತಾರೆ’.

ಪಕ್ಕದಲ್ಲೇ ಇರುವ ಸಮುದ್ರದ ಹಲವು ಮುಖಗಳನ್ನು ವಿವಿಧ ಬಣ್ಣಗಳ ಚಿತ್ರಗಳಲ್ಲಿ ನೋಡುವುದೇ ಒಂದು ವಿಶಿಷ್ಟ ಅನುಭವ! ನಾನು ನೋಡಿದ ನೂರಾರು ಪೇಂಟಿಂಗ್‍ಗಳಲ್ಲಿ ಮೆಚ್ಚಿಕೊಂಡವು ಕೆಲವು. ಸಿಮೊನ್‍ಬುಲ್ ರ ಹಲವು ಬಗೆಯ ಹೂವುಗಳು, ಹೂತೋಟ, ಹೂವಿನ ಕಾಡುಗಳ ಪೇಂಟಿಂಗ್‍ಗಳು ಡೈ ಅನ್ಸ್ ರ ಸಮುದ್ರ ತೀರದ ಹಲವು ದೃಶ್ಯಗಳ ಪೇಂಟಿಂಗ್‍ಗಳು, ಸಿಂಡ್ರಾ ಬ್ರಾಡ್‍ಫೋರ್ಡರ ಮಹಿಳೆ ಮತ್ತು ಪುರುಷರ ಹಲವು ಭಂಗಿಯ ಪೇಂಟಿಂಗ್‍ಗಳು ನನಗೆ ಬಹಳ ಇಷ್ಟವಾದವು. ಇನ್ನೊಂದು ಶೋ ರೂಮಲ್ಲಿ ಡಾವ್ಸನ್ ಕೂಲೆ ಅವರ ಹಲವು ಬಗೆಯ ಲೋಹದ ಮೂರ್ತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಸ್ತ್ರೀ, ಪುರುಷರ ದ್ವಂದ್ವ ಭಾವಗಳನ್ನು ಕಲಾತ್ಮಕವಾಗಿ ಪ್ರಕಟಿಸಿದ ಕೃತಿಗಳಿವು. ಸ್ಟೀವನ್ ವೈಟರು ನಿರ್ಮಿಸಿದ ಒಂದು ದೃಶ್ಯದಲ್ಲಿ 20-25 ಲೋಹದ ಮೂರ್ತಿಗಳಿದ್ದವು. ಸುಪ್ರಸಿದ್ಧ ಬಾಬ್ ಹಾಪರಿಗೆ ಸನ್ಮಾನ ನೀಡುವ ದೃಶ್ಯವದು. ಒಂದೊಂದು ಮುಖದಲ್ಲಿ ಒಂದೊಂದು ಬಗೆಯ ಆದ್ರ್ರ ಭಾವಗಳ ಅಭಿವ್ಯಕ್ತಿಯನ್ನು ಕಂಡು ದಂಗಾದೆ! ಲೋಹದಲ್ಲಿ ಅರಳಿಕೊಂಡ ಆ ಎಲ್ಲ ಮಾನವೀಯ ಭಾವಗಳನ್ನು ಪರೀಕ್ಷಿಸುತ್ತಲೇ ಅಚ್ಚರಿಪಟ್ಟೆ!

ಅಭಿವೃದ್ಧಿ ಮಂಡಳಿಯ ಕಾರ್ಯ

ಕಾರ್ಮೆಲ್ ಪಟ್ಟಣದ ಅಭಿವೃದ್ಧಿ ಮಂಡಳಿ ಅತ್ಯಂತ ಕ್ರೀಯಾಶೀಲ ಎನ್ನಲಿಕ್ಕೆ ಅವರು ವರ್ಷ ಇಡೀ ಆಯೋಜಿಸುವ ಕಾರ್ಯಕ್ರಮಗಳೇ ಸಾಕ್ಷಿ. ಇಲ್ಲಿ ಪೇಂಟಿಂಗ್ ಕಲೆಯಲ್ಲಿ ಅಭಿರುಚಿ ಇರುವ 8-10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಶಿಕ್ಷಣದ ವ್ಯವಸ್ಥೆ ಮಾಡುತ್ತಾರೆ. 3-4 ಜನ ಪ್ರಸಿದ್ಧ ಕಲಾಕಾರರ ಪೇಂಟಿಂಗ್‍ನ್ನು ಕುರಿತು ಅಭ್ಯರ್ಥಿಗಳಿಗೆ ಅಧ್ಯಯನ ಮಾಡಿಸುವುದಲ್ಲದೆ, ಕಲಾವಿದರೊಂದಿಗೆ ಅವರ ಕಲಾಕೃತಿಗಳನ್ನು ಕುರಿತ ಸಂವಾದದ ಕಾರ್ಯಕ್ರಮಗಳೂ ಇರುತ್ತವೆ. ಇದಕ್ಕೆ ‘ಆರ್ಟವಾಕ್’ ಎಂದು ಕರೆಯುತ್ತಾರೆ.

ಜಗತ್ಪ್ರಸಿದ್ಧ ನಾಟಕಕಾರರ ನಾಟಕಗಳ ಪ್ರದರ್ಶನಗಳು, ವಾದ್ಯಸಂಗೀತ, ಸಂಗೀತ, ನೃತ್ಯ ಪ್ರದರ್ಶನಗಳಲ್ಲದೆ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತವೆ. ಹೀಗೆ ವರ್ಷವಿಡೀ ಇಲ್ಲಿ ಕಲಾಭಿವ್ಯಕ್ತಿಯ ಹಲವು ಕೂಟಗಳು ರೂಪುಗೊಳ್ಳುತ್ತವೆ. ಇದರಲ್ಲಿ ಭಾಗವಹಿಸಲು ಬರುವ ಕಲಾಭಿಮಾನಿಗಳ ಸಂಖ್ಯೆ ಎಣಿಸಲು ಸಾಧ್ಯವಾಗದೆಂದು ಅಲ್ಲಿಯ ಜನರು ಹೇಳುತ್ತಾರೆ. ಜಗತ್ತಿನ ನಕಾಶೆಯಲ್ಲಿ ಕಲೆಗಳಿಗಾಗಿಯೇ ಸಮರ್ಪಿತವಾದ ಈ ಊರಿನ ಅಭಿವೃದ್ಧಿ ಮಂಡಳಿಯ ಸದಸ್ಯರ ಸೇವೆ ಪ್ರಶಂಸನಾರ್ಹ.

ಗೃಹವಿನ್ಯಾಸದ ಸಾಮಗ್ರಿಗಳಿಗಾಗಿ ಬೇರೆ ಪ್ರದರ್ಶನಗಳಿದ್ದವು. ಪೀಠೋಪಕರಣಗಳು, ಗೃಹಾಲಂಕಾರದ ವಸ್ತುಗಳಲ್ಲದೆ ಕಲಾತ್ಮಕವಾಗಿ ರೂಪಿಸಿದ ವಿದ್ಯುದ್ದೀಪಗಳೂ ಪ್ರದರ್ಶನಗೊಂಡಿದ್ದವು. ಪುರುಷರ, ಮಹಿಳೆಯರ ಆಧುನಿಕ ವಸ್ತ್ರಭಂಡಾರಗಳಲ್ಲಿಯೂ ಕಲೆಗೆ ಏನೂ ಕಡಿಮೆ ಇರಲಿಲ್ಲ. ನೂರು ಡಾಲರಿಗಿಂತ ಕಡಿಮೆ ಬೆಲೆಯ ವಸ್ತುಗಳೇ ಅಲ್ಲಿರಲಿಲ್ಲ. ಫೋಟೋಗ್ರಾಫಿಯ ಕಲಾಕೌಶಲದ ಆರ್ಟ್‍ಗ್ಯಾಲರಿಗಳೂ ಇದ್ದವು. ಈ ಎಲ್ಲ ಪ್ರದರ್ಶನಗಳಲ್ಲಿ ಆಧುನಿಕತೆ ಇದ್ದೇ ಇತ್ತು. ಆದರೆ ನಾನು ಮೆಚ್ಚಿಕೊಂಡಿದ್ದು ಕಲಾಕಾರರ ಕಲ್ಪನಾ ವಿಲಾಸವನ್ನು! ಫೆಂಗ ಶುಯಿಗಾಗಿದ್ದ ಚೀನಿಯರ ಅಂಗಡಿಗಳಲ್ಲಿ ಪ್ರತಿಯೊಂದು ವಸ್ತುವಿನಲ್ಲೂ ಕಲೆ ಉಕ್ಕುತ್ತಿತ್ತು. ಅಲ್ಲಿಯ ಒಬ್ಬಿಬ್ಬ ಚಿತ್ರಕಲಾವಿದರೊಂದಿಗೆ ತುಸು ಮಾತುಕತೆಯೂ ಆಯ್ತು.

ಕಾರ್ಮೆಲ್ ಹುಟ್ಟಿದ ಕಥೆ

ಕಲೆಯ ಬೀಡಾದ ಕಾರ್ಮೆಲ್ ಊರಿನ ಸಂಸ್ಥಾಪನೆಯ ಕತೆಯೂ ಕುತೂಹಲಕಾರಿ. 1902ರಲ್ಲಿ ಈ ಊರಿನ ಸ್ಥಾಪನೆಯಾಯಿತು. ಜೋನ್, ರೊಡರಿಗ್ಜ, ಕ್ಯಾಬ್ರಿಲ್ಲೊ ಎಂಬ ಸ್ಪ್ಯಾನಿಶ್ ಭೂಸಂಶೋಧಕರು ಕಾರ್ಮೆಲ್ಲಿನ ವಿಸ್ತಾರವಾದ ಉಸುಕಿನ ಸಮುದ್ರ ತೀರವನ್ನು ಮತ್ತು ಪೈನ್ ಮರಗಳ ದಟ್ಟ ಕಾಡುಗಳನ್ನು ಮೊಟ್ಟಮೊದಲು ಶೋಧಿಸಿದರು. ಆ ಬಳಿಕ ಸೆಬಾಸ್ಟಿನ್ ವಿಝಿಕಾವೋ ಎಂಬವ ಈ ಊರಿಗೆ ಕಾರ್ಮೆಲ್ ಎಂದು ನಾಮಕರಣ ಮಾಡಿದ.

1906ರಲ್ಲಿ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ಭೀಕರ ಭೂಕಂಪನವಾಯ್ತು. ಪ್ರಾಣರಕ್ಷಣೆಗಾಗಿ ಅಲ್ಲಿಯ ಕಲಾವಿದರು, ಲೇಖಕರು ಅಲ್ಲಿಂದ ಓಡಿಬಂದು ಶಾಂತ, ಸುರಕ್ಷಿತವಾದ ಈ ಪ್ರದೇಶದಲ್ಲಿ ನೆಲೆನಿಂತರು. ಆಶ್ರಯ ನೀಡಿದ ಕಾರ್ಮೆಲ್ ಈ ಕಲಾವಿದರಿಂದ ಅಭಿವೃದ್ಧಿ ಹೊಂದುತ್ತ ಪ್ರಸಿದ್ಧಿಯನ್ನು ಪಡೆದಿದೆ. ಕಾರ್ಮೆಲ್ಲಿನಲ್ಲಿ ಜನಸಂಖ್ಯೆಯ ಶೇ.60 ರಷ್ಟು ಕಲಾವಿದರೇ ಇದ್ದಾರೆ. ವರ್ಷವಿಡೀ ಕಲಾಪ್ರದರ್ಶನಗಳು, ಉಪನ್ಯಾಸಗಳು, ಸಂಗೀತ, ನೃತ್ಯ ಸಮಾರಂಭಗಳೆಲ್ಲ ‘ಪೈನ್‍ಇನ್’ ಹೋಟೆಲ್, ‘ಓಲ್ಡ್ ಬಾಥ್‍ಹೌಸ್’ ಮತ್ತು ‘ಫಾರೆಸ್ಟ್ ಥೇಟರು’ಗಳಲ್ಲಿ ಆಯೋಜಿತವಾಗುತ್ತವೆ. ಸ್ಪ್ಯಾನಿಶ್, ಮೆಕ್ಸಿಕನ್, ಅಮೆರಿಕನ್ ಸಂಸ್ಕøತಿಗಳ ಸಮ್ಮಿಲನವೂ ಇಲ್ಲಿದೆ. ದಿನವಿಡೀ ಇಲ್ಲಿಯ ಜನರ ಮಾತುಕತೆ ಕಲೆಯ ಕುರಿತಾಗಿಯೇ ಇರುತ್ತದೆಯೆಂಬುದು ಸೋಜಿಗದ ಸಂಗತಿ.

ಸೂರ್ಯ ತನ್ನ ಸಂಜೆಯ ಸುವರ್ಣ ಸಿಂಹಾಸನದಲ್ಲಿ ಕುಳಿತು ‘ಹೊರಟಿದ್ದೇನೆ, ಶುಭರಾತ್ರಿ’ ಎಂದು ಹೇಳುತ್ತಿರುವ ಮುಗಿಲಿನ ಹಿನ್ನೆಲೆಯಲ್ಲಿ ನೂರಾರು ಬಣ್ಣಗಳು! ಆಗ ನಾವು ಬೀಚಿನತ್ತ ಅಕ್ಷರಶಃ ಓಡಿದೆವು. ಉಸುಕಿನಲ್ಲಿ ಆಟ ಆಡುವ ಮಕ್ಕಳು, ಸಮುದ್ರದ ಹೆದ್ದೆರೆಗಳಿಗೆ ಹೆದರದೆ ಮುನ್ನುಗ್ಗುತ್ತಿರುವ ತರುಣ, ತರುಣಿಯರು, ಸಾವಕಾಶವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ಹೊರಟ ವೃದ್ಧ ದಂಪತಿಗಳು… ಎಲ್ಲ ವಯಸ್ಸಿನವರೂ ಸೂರ್ಯಾಸ್ತದ ದೃಶ್ಯವನ್ನು ಸೆರೆಹಿಡಿಯಲು ಕ್ಯಾಮರಾ, ಮೊಬೈಲುಗಳನ್ನು ಹಿಡಿದು ನಿಂತಿದ್ದರು. ಸೂರ್ಯ ಮುಳುಗಿದಾಗ ಸುತ್ತಲೂ ಕವಿದ ಕಗ್ಗತ್ತಲಿನಿಂದಾಗಿ ಬೀಚಿನಲ್ಲಿಯ ಜನ ಹೊರಟುನಿಂತರು. ನಾವೂ ಹೊರಟೆವು. ಹೀಗೆ ಕಂಡ ಕಾರ್ಮೆಲ್ ನನ್ನ ಸ್ಮೃತಿಯಲ್ಲಿ ಒಂದು ಅದ್ಬುತ ಕಲಾಕೃತಿಯಾಗಿ ನಿಂತುಬಿಟ್ಟಿದೆ! ಬೊಗಸೆಯಲ್ಲಿ ತುಂಬಿಕೊಂಡ ಆನಂದದ ಅನುಭವಗಳೊಂದಿಗೆ ಮರಳಿ ಮನೆಯತ್ತ ಹೊರಟರೂ ಮನಸ್ಸನ್ನು ಮಾತ್ರ ಅಲ್ಲೇ ಬಿಟ್ಟು ಬಂದೆನೇನೊ ಅನ್ನಿಸಿತು.

ಅಮೆರಿಕೆಯ ಇತರ ಪ್ರಾಂತಗಳಲ್ಲೂ ಕಲೆಗಳನ್ನು ಪ್ರೋತ್ಸಾಹಿಸುವ ಸಂಘ-ಸಂಸ್ಥೆಗಳಿರಬಹುದು. ಭಾರತದಂತಹ ಬಹುಸಂಸ್ಕೃತಿ, ಸಂಪ್ರದಾಯ, ಭಾಷೆಗಳ ನೆಲದಲ್ಲೂ ಕೆಲವೆಡೆ ಕಲಾರಾಧನೆಯನ್ನು ನಡೆಸುವ ಸಂಘಟನೆಗಳಿರಬಹುದು. ಆದರೆ ಒಂದೇ ಊರಲ್ಲಿ ಇಷ್ಟು ಸಂಖ್ಯೆಯ ಕಲಾವಿದರು ತುಂಬಿಕೊಂಡು ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸುವ ಇನ್ನೊಂದು ಸ್ಥಳ ಇರಲಾರದು.

ಅಮೆರಿಕೆಯ ಕಲಾವಿದರೆಲ್ಲರೂ ಶ್ರೀಮಂತರೇ. ನಮ್ಮ ದೇಶದಲ್ಲಿ ಬಹುತೇಕರು ಬಡವರು. ಕಲೆಗೆ ನಮ್ಮಲ್ಲಿ ಬೆಲೆ ಇಲ್ಲ, ಪ್ರೀತಿ ಇಲ್ಲ, ಅದರ ಮಹತ್ವದ ಅರಿವೂ ಇಲ್ಲ, ಆದ್ದರಿಂದ ಶತಮಾನಗಳಿಂದ ನಡೆದುಬಂದ ಕಲೆಗಳು ಇಂದು ಸಾಯುತ್ತಿವೆ. ಹಿಂದೆ ರಾಜಾಶ್ರಯದಲ್ಲಿ ಕಲಾವಿದರು ಸನ್ಮಾನಿಸಲ್ಪಡುತ್ತಿದ್ದರು. ರಾಜರಂತಿರುವ ನಮ್ಮ ಇಂದಿನ ಭಾರತೀಯ ಉದ್ಯಮಿಗಳು ಏಕೆ ಭಾರತೀಯ ಕಲೆಗಳನ್ನು ಪೋಷಿಸುತ್ತಿಲ್ಲ? ಭಾರತೀಯ ಕಲೆಗಳನ್ನು ಉಳಿಸಿ, ಸಂಶೋಧನೆ ನಡೆಸಿ ಸಂಗ್ರಹಿಸಿ ಕಾಪಾಡಿಕೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿ ಜಾಗೃತಗೊಳ್ಳಬೇಕಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ, ಶಿಕ್ಷಣ ಕ್ಷೇತ್ರಗಳು ಮಾನವ ಸಂಪನ್ಮೂಲ ವಿಭಾಗಗಳು, ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗುವ ಅಗತ್ಯವಿದೆ.

*ಲೇಖಕರು ಹುಟ್ಟಿದ್ದು ಕೊಲ್ಲಾಪುರ; ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಮಾಡಿ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವು ಕವಿತೆ ಮತ್ತು ಕಥಾ ಸಂಕಲನಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.

Leave a Reply

Your email address will not be published.