ಅಮೆರಿಕೆಯ ‘ಕೃಷಿಕರ ಮಾರುಕಟ್ಟೆ’

ಅಮೆರಿಕೆಯ ಫಾರ್ಮರ್ಸ್ ಮಾರ್ಕೆಟ್ಟಿನಂತೆ ನಮ್ಮ ರೈತರು ಸಂಘಟಣೆಗೊಂಡು ನೇರವಾಗಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗೆ ದಳ್ಳಾಳಿಗಳ ಅಗತ್ಯವಾದರೂ ಏನು?

ಕಳೆದ ಕೆಲವು ವರ್ಷಗಳಿಂದ ನನ್ನನ್ನು ಚಿಂತೆಗೀಡು ಮಾಡಿದ ವಿಷಯಗಳೆಂದರೆ ಕರ್ನಾಟಕದಲ್ಲಿಯ ರೈತರ ಆತ್ಮಹತ್ಯೆಗಳು, ಕಬ್ಬಿನ ಬೆಳೆಗಾರರ ಸಮಸ್ಯೆಗಳು, ರೈತರಿಗೆ ಸರಕಾರದಿಂದ ಸಿಗದ ಬೆಂಬಲ ಬೆಲೆ, ಸಾಲಮನ್ನಾ ವಿಷಯ, ರೈತರ ಪ್ರತಿಭಟನೆಗಳು, ಚಳವಳಿಗಳು ಮತ್ತು ರೈತರನ್ನು ಶೋಷಿಸುತ್ತಿರುವ ದಳ್ಳಾಳಿಗಳ ಕ್ರೌರ್ಯಗಳು. ನನ್ನ ಮಗ ಶ್ರೀಶೈಲನು ತಾನಿರುವ ಕ್ಯಾಲಿಫೋರ್ನಿಯಾದಲ್ಲಿಯ ಸ್ಯಾನಹೋಜೆಗೆ ನನ್ನನ್ನು ಕರೆದುಕೊಂಡುಹೋಗಿದ್ದ.

ಅವನಿಗೆ ಸಮಯ ಸಿಕ್ಕಾಗಲೆಲ್ಲ ಭಾರತದ, ವಿಶೇಷವಾಗಿ ಕರ್ನಾಟಕದ ಜ್ವಲಂತ ವಿಷಯಗಳ ಬಗ್ಗೆ ಚರ್ಚಿಸುತ್ತೇನೆ. ಹಾಗೆಯೇ ಅಮೆರಿಕದಲ್ಲಿಯ ಪ್ರಸ್ತುತದಲ್ಲಿರುವ ಬಹುಚರ್ಚಿತ ವಿಷಯಗಳನ್ನು ಕೇಳುತ್ತೇನೆ. ಇಲ್ಲಿಯ ರೈತರಿಗೆ ಏನಾದರೂ ಸಮಸ್ಯೆಗಳಿವೆಯೇ? ಎಂದೆ. ಅದಕ್ಕೆ ಉತ್ತರಿ ಸುತ್ತ, ‘ಬಾ ಇಂದು ಶನಿವಾರವಾದ್ದರಿಂದ ಫಾರ್ಮರ್ಸ್ ಮಾರ್ಕೆಟ್ಟಿಗೆ ಕರೆದೊಯ್ಯುತ್ತೇನೆ. ಅಲ್ಲಿ ನಿನ್ನ ಕುತೂಹಲ ಸ್ವಲ್ಪಮಟ್ಟಿಗಾದರೂ ತಣಿಯಬಹುದು’ ಅಂದ.

ಸನ್ನೀವೇಲ ಪ್ರದೇಶದಲ್ಲಿರುವ ಹಿಸ್ಟೋರಿಕ್ ಮರ್ಪಿ ಅವೆನ್ಯೂದಲ್ಲಿರುವ ಫಾರ್ಮರ್ಸ್ ಮಾರ್ಕೆಟ್ಟಿಗೆ ಕರೆತಂದ. ಈ ಮಾರ್ಕೆಟ್ಟಿಗೆ ತಂಡೋಪತಂಡದಲ್ಲಿ ಗ್ರಾಹಕರು ಧಾವಿಸುತ್ತಿರುವುದನ್ನು ನೋಡಿ ಶನಿವಾರಕ್ಕೊಮ್ಮೆ ಹನುಮಂತ ದೇವರ ಗುಡಿಗಳಿಗೆ ಭಕ್ತಿಯಿಂದ ಹೋಗುವ ನಮ್ಮ ಜನರ ನೆನಪಾಯ್ತು. ಮುದುಕರು, ಹರೆಯದವರು, ಮಕ್ಕಳು -ಎಲ್ಲರನ್ನೂ ಆಕರ್ಷಿಸುತ್ತಿರುವ ಈ ಮಾರ್ಕೆಟ್ಟಿನಲ್ಲೇನಿದೆ? ಎಂದು ಕುತೂಹಲದಿಂದ ಹೊರಟೆ.

ಅವರವರ ವ್ಯಕ್ತಿತ್ವ, ಬಟ್ಟೆ ಬರೆಗಳನ್ನು ನೋಡಿದಾಗ ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ದಕ್ಷಿಣ ಪೂರ್ವದ ರಾಷ್ಟ್ರಗಳ ಜನರೇ ಇದ್ದರು. ಇವರಲ್ಲಿ ಮೆಕ್ಸಿಕನ್ನರೂ, ಭಾರತೀಯರೂ ಇದ್ದರು. ಅಮೆರಿಕೆಯಲ್ಲಿ ಯಾವ ಪ್ರಾಂತ್ಯಕ್ಕೆ ಹೋದರೂ ಬಹು ಸಂಸ್ಕೃತಿಯ ದರ್ಶನವಾಗುತ್ತದೆ. ನಾವು ಪೇಟೆಗೆ ಹೋಗುವಾಗ, ಬಸ್ಸಲ್ಲೊ, ಆಟೋರಿಕ್ಷಾದಲ್ಲೊ, ಟುವ್ಹಿಲರುಗಳಲ್ಲೊ ಹೋಗುತ್ತೇವೆ. ಇಲ್ಲಿ ಪ್ರತಿಯೊಂದು ಕುಟುಂಬವೂ ಕಾರಲ್ಲೇ ಬರುತ್ತದೆ. ಕಾರಣ ಸಾರ್ವಜನಿಕ ಸಂಪರ್ಕಕ್ಕೆ ಸರಕಾರದ ವ್ಯವಸ್ಥೆಗಳಿಲ್ಲ. ರೈಲುಗಳಿವೆ, ಬಹಳ ಕಡಿಮೆ. ಪ್ರತಿಯೊಂದು ಕುಟುಂಬಕ್ಕೆ ಒಂದೋ, ಎರಡೊ, ಮೂರೋ ಕಾರುಗಳಿರುತ್ತವೆ. ಕಾರುಗಳಿಗಾಗಿ ಪ್ರತಿ ಮನೆ ಮುಂದೆ ವಿಶಾಲವಾದ ಗರಾಜುಗಳಿರುತ್ತವೆ.

ಮಾರ್ಕೆಟ್ಟಿನ ಪ್ರವೇಶದ್ವಾರದಲ್ಲಿ ವಿಚಾರಣೆಗಾಗಿ ಒಂದು ಕೌಂಟರ್ ಇರುತ್ತದೆ. ಇಲ್ಲಿ ಮಾರ್ಕೆಟ್ಟಿನ ಸಮಯವನ್ನು ಕೇಳಿದೆ. ಪ್ರತಿ ಶನಿವಾರ, ರವಿವಾರ ಬೆಳಿಗ್ಗೆ ಹತ್ತರಿಂದ ಸಂಜೆ ಐದು-ಎಂದು ತಿಳಿಯಿತು. ಮೊದಲ ಕೌಂಟರಿನಲ್ಲಿ ತಮ್ಮ ಹೊಲ, ತೋಟಗಳಲ್ಲಿ ತಯಾರಿಸಿದ ಜೇನುತುಪ್ಪವನ್ನು ವಿಧವಿಧದ ಪ್ಯಾಕ್‍ಗಳಲ್ಲಿ ಬಾಟಲಿಗಳಲ್ಲಿ ಮಕ್ಕಳಿಗಾಗಿ ಸ್ಥಳದಲ್ಲೇ ತಿನ್ನಲು  ಚಿಕ್ಕ ಪ್ಯಾಕೆಟ್ಟುಗಳೊಂದಿಗೆ ನಳಿಕೆಗಳನ್ನು ಕೊಡುತ್ತಿದ್ದರು. ಇದು ಶುದ್ಧ ಜೇನುತುಪ್ಪವಾದ್ದರಿಂದ ಸಣ್ಣವರು, ದೊಡ್ಡವರು ಇರುವೆಯಂತೆ ಮುಕರಿ ದ್ದರು. ಜೇನಿನಲ್ಲಿ ತಯಾರಿಸಿದ ಬೇಕರಿ ತಿಂಡಿಗಳ ಅಂಗಡಿ ಪಕ್ಕದಲ್ಲಿತ್ತು. ಈ ಟೆಂಟಿನಲ್ಲೂ ಮಕ್ಕಳ ದೊಡ್ಡ ಜಾತ್ರೆ ಇತ್ತು.

ನನ್ನ ಅಂದಾಜಿನ ಪ್ರಕಾರ ರಸ್ತೆಯ ಎರಡೂ ಮಗ್ಗಲಿಗೆ ನಾಲ್ವತ್ತುಐವತ್ತು ಟೆಂಟುಗಳಿದ್ದವು. ಮುಂದಿನ ಅಕ್ಕ ಪಕ್ಕದ ಟೆಂಟುಗಳಲ್ಲಿ ಬಣ್ಣಬಣ್ಣದ ಹೂಗಳೇ ಹೂಗಳು! ನಾನೇನಾದರೂ ನಂದನವನಕ್ಕೆ ಬಂದಿರುವೆನೋ ಅನ್ನುವ ರೀತಿಯಲ್ಲಿ, ಅಷ್ಟು ಚೆಂದ ಚೆಂದದ ಬಣ್ಣ ಬಣ್ಣದ ಹೂಗಳ ಗುಚ್ಛಗಳು, ಹೂ-ಹಣ್ಣಿನ ಸಸಿಗಳು ಇದ್ದವು. ನಾವು ಹೂ ಕೊಂಡರೆ ಅವು ದೇವರಿಗಾಗಿಯೋ ಅಥವಾ ಮುಡಿದುಕೊಳ್ಳುವುದಕ್ಕೊ ಇರಬಹುದು. ಇಲ್ಲಿ ಹೂಗುಚ್ಛಗಳನ್ನು ಮನೆ ಸಿಂಗರಿಸಲಿಕ್ಕಾಗಿ ಕೊಳ್ಳುತ್ತಾರೆ. ಸಸಿಗಳನ್ನು ಅಂಗಳದಲ್ಲೋ, ಹಿತ್ತಲಲ್ಲೋ ಬೆಳೆಯಲು ಕೊಳ್ಳುತ್ತಾರೆ. ಮನೆಯ ಸೌಂದರ್ಯಕ್ಕಾಗಿ ಕೈತೋಟಗಳನ್ನು ಹೂವಿನ, ಹಣ್ಣಿನ ಗಿಡಗಳನ್ನು ಬೆಳೆದಿದ್ದನ್ನು ನಾನು ಸ್ವತಃ ನೋಡಿದ್ದೇನೆ. ಹೂ ಹಣ್ಣು ಬೆಳೆಸುವ ಅಮೆರಿ ಕನ್ನರ ಹುಚ್ಚನ್ನು ನಾನು ತುಂಬ ನೋಡಿ ತಿಳಿದಿದ್ದೇನೆ.

ಹೂವಿನ ಮಾರಾಟಗಾರರ ಟೆಂಟುಗಳಾದ ಮೇಲೆ ಹಣ್ಣು ಮಾರುವವರ ಟೆಂಟುಗಳು. ಪ್ರತಿಯೊಂದು ಹಣ್ಣಿನ ಟೆಂಟಿನ ಮುಂದೆ ಟೇಬಲ್ಲುಗಳನ್ನಿಟ್ಟು ತಾವು ತಂದ ಹಣ್ಣುಗಳನ್ನು ಹೋಳುಗಳಲ್ಲಿ ಕತ್ತರಿಸಿ ಗ್ರಾಹಕರನ್ನು ಕರೆಕರೆದು ತಿನ್ನಿಸುವುದನ್ನು ನೋಡಿ ಅಚ್ಚರಿಪಟ್ಟೆ. ಅಲ್ಲಿ ಹಣ್ಣಿನ ರಸದ ವಿವಿಧ ಆಕಾರದ ಡಬ್ಬಿಗಳು, ಬಾಟಲಿಗಳಿದ್ದವು. ಕತ್ತರಿ ಸಿದ ಹಣ್ಣುಗಳ ಹೋಳುಗಳನ್ನು ಮಿಕ್ಸ್ ಮಾಡಿದ ಡಬ್ಬಗಳೂ ಇದ್ದವು. ನಾನೂ ಸಹ ಭಾರತದಲ್ಲಿ ಅಪರೂಪದಲ್ಲಿ ಸಿಗುವ ಪೇರ್, ಕಿವಿ,ಅವಾಕಾಡೋ, ವಿವಿಧ ಬಣ್ಣದ ಬೆರಿಗಳನ್ನು ಕೊಂಡೆ. ರಾಸಾಯನಿಕಗಳ ಬಳಕೆ ಇಲ್ಲದೆ ಬೆಳೆದ ಹಣ್ಣು ಕಾಯಿಪಲ್ಲೆಗಳಿಗಾಗಿಯೇ ಇಲ್ಲಿಯ ಜನರು ಹುಡುಕಿಕೊಂಡು ಬರುತ್ತಾರೆ. ಇನ್ನೊಂದು ಆಕರ್ಷಣೆಯೆಂದರೆ -ಹೂ ಹಣ್ಣು ಕಾಯಿಪಲ್ಲೆಗಳೆಲ್ಲ ‘ತಾಜಾ’ ಆಗಿರುವುದು; ಫ್ರಿಜ್‍ಗಳಲ್ಲಿ ಇಟ್ಟವುಗಳಲ್ಲ.

ಮುಂದಿನ ಅನೇಕ ಟೆಂಟುಗಳಲ್ಲಿ ಕಾಯಿಪಲ್ಯೆಗಳ ಸಾಮ್ರಾಜ್ಯವಿತ್ತು! ಸಮಶೀತೋಷ್ಣ ಪ್ರದೇಶವಾದ್ದರಿಂದ ಇಲ್ಲಿ ಬೆಳೆಯುವ ಕಾಯಿಪಲ್ಯೆ ಹಣ್ಣುಗಳೆಲ್ಲ ಬೇರೆ ಬೇರೆ! ಅವುಗಳ ಗಾತ್ರಗಳೂ ದಿಗ್ಭ್ರಮೆಗೊಳಿಸಿದವು. ಟೆಂಗಿನಕಾಯಿ ಗಾತ್ರದ ಈರುಳ್ಳಿ, ಕ್ರಿಕೆಟ್ ಚೆಂಡಿನಷ್ಟು ದೊಡ್ಡ ಬಳ್ಳೊಳ್ಳಿ ಗಡ್ಡೆಗಳು, ಮೊಳ ಉದ್ದದಷ್ಟಿದ್ದ ಮೂಲಂಗಿ! ಒಂದು ಸಣ್ಣ ಗಾತ್ರದ ಕುಂಬಳಕಾಯಿಯ ಎರಡು ಹೋಳು, ಸಬ್ಬಸಿಗೆ, ಕೋತಂಬರಿ ಕೊಂಡೆ. ಬಟಾಟೆ ಅಂಗಡಿಗೆ ಹೋದರೆ ನನಗೇ ಸೂಜಿಗವಾಗುವಂತೆ, ಕೆಂಪು, ಜಾಂಬಳಿ, ಕಂದು ಕಪ್ಪುಬಣ್ಣದ ಬಟಾಟೆ! ಈ ಬಣ್ಣಬಣ್ಣದ ಬಟಾಟೆ ಮಿಕ್ಸನ್ನು ಅರ್ಧ ಪೌಂಡು ಕೊಂಡೆ! ಮುಂದಿನ ಟೆಂಟಲ್ಲಿ ನಾನೆಂದೂ ನೋಡದ ಹಳದಿ, ನೀಲಿ, ಕೆಂಪು ಕೇಸರಿ ಬಣ್ಣದ ಕ್ಯಾಬೀಜ, ಕಾಲಿ ಪ್ಲಾವರ್ ಮತ್ತು ಡೊಣ್ಣಮೆಣಸಿನಕಾಯಿ!

ಈ ಪೇಟೆಯಲ್ಲಿ ನಾನು ಮೆಚ್ಚಿಕೊಂಡದ್ದು ಇಲ್ಲಿಯ ಸ್ವಚ್ಛತೆಯನ್ನು. ಅಲ್ಲಲ್ಲಿ ಕಸದ ತೊಟ್ಟೆಗಳನ್ನಿಟ್ಟಿದ್ದರು. ಪೇಟೆಗೆ ಬರುವ ಜನರಿಗಾಗಿ, ಮಾರುವವರಿಗಾಗಿ ಕುಡಿವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛವಾದ ರೆಸ್ಟ್ ರೂಮ್‍ಗಳು, ಅಲ್ಲಲ್ಲಿ ಗಿಟಾರು ನುಡಿಸುವ ಬಡವರು, ತಾವಿಟ್ಟ ಪೆಟ್ಟಿಗೆಗಳಲ್ಲಿ ಯಾರಾದರೂ ಹಣ ಹಾಕಿದಾಗ ಧನ್ಯವಾದಗಳನ್ನು ತಿಳಿಸುವ ಸವಿನಯದ ರೀತಿಯು ಗಮನ ಸೆಳೆಯಿತು. ಅಲ್ಲಲ್ಲಿ ಕೆಲ ಪೋಸ್ಟರ್‍ಗಳನ್ನು ಓದುತ್ತ ನಡೆದೆ. ಕೆಲವು ತಾವು ರಾಸಾಯನಿಕಗಳ ಬಳಕೆ ಇಲ್ಲದರ ಬಗೆಗಿದ್ದರೆ ಕೆಲವು ವಿನಂತಿಸುವ ಬೋರ್ಡುಗಳು: ‘ಬನ್ನಿ ಕೊಂಡುಕೊಳ್ಳಿ ನಮ್ಮ ಹಣ್ಣು, ಹೂ, ಕಾಯಿಪಲ್ಯೆಗಳನ್ನು, ನೀವು ಕೊಂಡರೆ ನಮ್ಮ ಶ್ರಮವನ್ನು ಕೊಂಡಾಡಿದಂತೆ. ನಿಮ್ಮ ಸಂತೃಪ್ತಿಯೇ ನಮ್ಮ ಸಂತೃಪ್ತಿ’.

ಅಮೆರಿಕೆಯ ಫಾರ್ಮರ್ಸ್ ಮಾರ್ಕೆಟ್ಟಿನಂತೆ ನಮ್ಮ ರೈತರು ಸಂಘಟಣೆಗೊಂಡು ನೇರವಾಗಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗೆ ದಳ್ಳಾಳಿಗಳ ಅಗತ್ಯವಾದರೂ ಏನು? ಎಲ್ಲವನ್ನು ಕಡಿಮೆ ಬೆಲೆಗೆ ಮಾರಿ ಗೋಳಾಡುತ್ತಾರೆ. ಪ್ರತಿಯೊಂದು ಗ್ರಾಮದವರೂ ಕೂಡಿಕೊಂಡು ಪಟ್ಟಣದಲ್ಲಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗಾಗಿ ನಮ್ಮ ನಗರಪಾಲಿಕೆಯವರು ಅಂಗಡಿಗಳನ್ನು ಕಟ್ಟಿ ಕಡಿಮೆ ಬಾಡಿಗೆಗೆ ಕೊಟ್ಟು ಏಕೆ ಪ್ರೋತ್ಸಾಹಿಸಬಾರದು? ಬದಲಾಗಿ ಇಲ್ಲಿಯ ಕಾಯಿಪಲ್ಯೆ ಮಾರುವ ಬಡವರಿಂದ ಜೋಬಿನಿಂದ ಕರ ವಸೂಲಿ ಮಾಡುವುದನ್ನು ನೋಡಿ ನೊಂದಿದ್ದೇನೆ. ನಮ್ಮ ಕಾಯಿಪಲ್ಯೆ ಮಾರುವ ಸಮುದಾಯ ಬೇರೆಯೇ. ಇವರೆಲ್ಲ ಬಡವರೇ. ಇಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ದೊಡ್ಡದು. ದಳ್ಳಾಳಿಗಳಿಂದ ಕೊಂಡ ಕಾಯಿಪಲ್ಲೆಗೆ ಮಾರಾಟದ ನಂತರ ಉಳಿಯುವ ಗಳಿಕೆ ಒಂದು ನೂರೋ, ಒಂದುವರೆ ನೂರೋ! ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಿಸಿಲಿಗೆ, ಚಳಿಗೆ ಕುಳಿತುಕೊಂಡು, ಚಿಕ್ಕ ಮಕ್ಕಳನ್ನು ಬೆನ್ನಿಗಿರಿಸಿಕೊಂಡು ಮಾಡುವ ಉಪಜೀವನದ ರೀತಿ ಕಣ್ಣೀರು ಬರಿಸುತ್ತದೆ!

ದಳ್ಳಾಳಿಗಳಿಂದ ರೈತರ ಶೋಷಣೆ ಎಂದು ನಿಂತೀತು! ಬಡ ಚಿಲ್ಲರೆ ವ್ಯಾಪಾರಸ್ಥರ ಶೋಷಣೆ ನಿಲ್ಲಿಸಲು ಕೈಗೊಳ್ಳಬೇಕಾದ ಉಪಾಯಗಳೇನು? ನಮ್ಮ ಗ್ರಾಮ ಪಂಚಾಯತಿಗಳು, ತಾಲೂಕು ಜಿಲ್ಲಾ ಪಂಚಾಯತಿಗಳು ರೈತರ ಈ ಶೋಷಣೆಗಳನ್ನು ಗಮನಿಸಿ, ರೈತರ ಪರವಾಗಿ, ಅವರ ಶ್ರಮಕ್ಕೆ ನ್ಯಾಯಬದ್ಧವಾದ ಬೆಲೆ ಸಿಗುವಂತೆ ಏಕೆ ಯೋಜನೆಗಳನ್ನು ರೂಪಿಸಬಾರದು? ಪ್ರಶ್ನೆಗಳ ಸರಮಾಲೆ ನನ್ನನ್ನು ಸುತ್ತಿಕೊಂಡಿತು. ವೇದನೆಗಳು ಮನಸ್ಸನ್ನು ಮುತ್ತಿಕೊಂಡವು. ಮನೆಗೆ ಮರಳಿದ ಮೇಲೂ ದಿನವಿಡಿ ಮನಸ್ಸು ಅಸ್ವಸ್ಥ ಸ್ಥಿತಿಯಲ್ಲೇ ಇತ್ತು. 

Leave a Reply

Your email address will not be published.