ಅಯೋಧ್ಯೆ ತೀರ್ಪು: ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆ

ಸುಪ್ರೀಮ್ ಕೋರ್ಟಿನ ಈ ನಿರ್ಣಯ ಸ್ಥೂಲವಾಗಿ ನಂಬಿಕೆ ಆಧಾರಿತ ಬಹುಮತಪರ ನಿರ್ಧಾರವೆಂದು ಹೇಳಬೇಕಾಗುತ್ತದೆ. ಪ್ರಚಲಿತ ಕಾನೂನು ಮತ್ತು ಪುರಾವೆಗಳನ್ನು ಬದಿಗಿಟ್ಟ ಈ ತೀರ್ಪು ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆಯೊಂದಕ್ಕೆ ನಾಂದಿ ಹಾಡಿದೆ.

ಅಯೋಧ್ಯೆ ಭೂವಿವಾದದಲ್ಲಿ ಸವೋಚ್ಚ ನ್ಯಾಯಾಲಯದ ಪಂಚಸದಸ್ಯರ ಸಾಂವಿಧಾನಿಕ ಪೀಠದ ಒಮ್ಮತದ ತೀರ್ಪು ಹಲವು ಕಾರಣಗಳಿಗೆ ‘ಮೊದಲೆಂಬ’ ಖ್ಯಾತಿ ಪಡೆದಿದೆ. ಈ ವಿವಾದಕ್ಕೆ ತುರ್ತು ಪರಿಹಾರ ನೀಡಲೇಬೇಕೆಂದು ದಿನವೂ ಎಡೆಬಿಡದೆ ಒಂದೂವರೆ ತಿಂಗಳುಗಳ ಕಾಲ ನಡೆದ ಈ ವಿಚಾರಣೆ ದೇಶದ ನ್ಯಾಯಿಕ ಇತಿಹಾಸದಲ್ಲಿಯೇ ಮೊದಲನೆಯದಾಗಿದೆ. ವಾದ-ಪ್ರತಿವಾದಗಳ ಈ ಭೂವಿವಾದ ದೇಶದ ಪುರಾಣ, ಇತಿಹಾಸ, ಕಾನೂನು ಹಾಗೂ ನಂಬಿಕೆಗಳ ಆಧಾರದ ಮೇಲೆ ನಡೆಯಬೇಕೋ ಇಲ್ಲವೊ ಎಂಬ ಸಂಕೀರ್ಣ ಸವಾಲಿಗೂ ಒಳಗಾಗಿದೆ. ಪುರಾವೆ-ನಂಬಿಕೆಗಳ, ಅಲ್ಪಸಂಖ್ಯಾತ ಹಕ್ಕು, ಬಹುಸಂಖ್ಯಾತ ನ್ಯಾಯಗಳ ಹಾಗೂ ನೆನ್ನೆ-ನಾಳೆಗಳ ಸಂಘರ್ಷಕ್ಕೆ ಸುಪ್ರೀಮ್ ಕೋರ್ಟ್ ಹೊಸ ಭಾಷ್ಯವೊಂದನ್ನು ಬರೆದಿದೆ. ಈ ವಿವಾದ ಹಾಗೂ ತೀರ್ಪುಗಳ ಕೆಲವು ಮಹತ್ವದ ಅಂಶಗಳನ್ನು ಹೀಗೆ ನೋಡೋಣ.

• ಬಾಬರ್ ಸಾಮ್ರಾಟನ ದಳಪತಿ ಮೀರ್ ಬಾಕಿ 1528 ರಲ್ಲಿ ಈ ಮಸೀದಿಯನ್ನು ಕಟ್ಟಿದ್ದನೆಂದು ನ್ಯಾಯಾಲಯ ಒಪ್ಪಿದೆ. ಶಿಯಾ ಪಂಗಡದ ಈ ದಳಪತಿ ಕಟ್ಟಿದ ಮಸೀದಿಯಲ್ಲಿ 1949 ರವರೆಗೂ ಸುನ್ನಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರೆಂದೂ ಸುಪ್ರೀಮ್ ಒಪ್ಪಿದೆ.

• 1949 ಡಿಸೆಂಬರ್ 22-23ರ ರಾತ್ರಿ ಮಸೀದಿಯ ಕೇಂದ್ರ ಗೋಪುರದ ಕೆಳಗೆ ರಾಮ್‍ಲಾಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಹಾಗೂ 1992ರ ಡಿಸೆಂಬರ್ 6 ರಂದು ಈ ಮಸೀದಿಯನ್ನು ಕೆಡವಲಾಯಿತೆಂದು ನ್ಯಾಯಾಲಯ ಒಪ್ಪಿದೆ. ಈ ಎರಡೂ ಕ್ರಿಯೆಗಳನ್ನು ಕಾನೂನುಬಾಹಿರ ಎಂದೂ ನ್ಯಾಯಾಲಯ ನಿರ್ಣಯಿಸಿದೆ.

• ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ವರದಿಯಂತೆ ಬಾಬರಿ ಮಸೀದಿಯಿದ್ದ ಜಾಗದಲ್ಲಿ ನಡೆಸಿದ ಉತ್ಖನನದಂತೆ ಮುಸ್ಲಿಮೇತರ (ಬಹುಶಃ ಹಿಂದೂ) ಕಟ್ಟಡದ ಪಳೆಯುಳಿಕೆಗಳು ಕಂಡುಬಂದಿವೆಯೆಂದು ನ್ಯಾಯಾಲಯ ಹೇಳಿದೆ. ಹಳೆಯ ಯಾವುದೋ ಕಟ್ಟಡಗಳ ಅವಶೇಷದ ಮೇಲೆ ಮೀರ್ ಬಾಕಿ ಮಸೀದಿಯೊಂದನ್ನು ಸ್ಥಾಪಿಸಿರಬೇಕು ಎಂದೂ ತೀರ್ಮಾನಿಸಲಾಗಿದೆ.

ಈ ಎಲ್ಲಾ ಭೂಮಿಯು ಭಾರತ ದೇಶದ ಪ್ರಜೆಗಳಿಗೆ ಸೇರಿದ್ದೆಂದು ಪ್ರತಿಪಾದಿಸಿ ಐತಿಹಾಸಿಕತೆ ಮತ್ತು ಭಾವನಾತ್ಮಕತೆಯ ಆಧಾರದ ಮೇಲೆಯೇ ಸರ್ಕಾರಿ ನ್ಯಾಸವೊಂದಕ್ಕೆ ಜಮೀನನ್ನು ಹಸ್ತಾಂತರಿಸಬಹುದಾಗಿತ್ತು. ಹಾಗೆಯೇ ಮುಸ್ಲಿಮರಿಗೆ ಐದು ಎಕರೆ ಜಮೀನು ಪರಿಹಾರ ನೀಡುವ ಬದಲಿಗೆ ಮಸೀದಿ ನಿರ್ಮಾಣಕ್ಕೆ ಸರ್ಕಾರಿ ನ್ಯಾಸವೊಂದರ ಸ್ಥಾಪನೆಗೂ ಆದೇಶ ನೀಡಬಹುದಾಗಿತ್ತು.

• ಈ ವಿವಾದಿತ 2.77 ಎಕರೆ ಜಮೀನಿನ ವಶಕ್ಕಾಗಿ 1865 ರಿಂದ ನಿರ್ಮೋಹಿ ಅಖಾಡ ಹಾಗೂ ರಾಮಜನ್ಮಭೂಮಿ ನ್ಯಾಸವು ಕೋರ್ಟಿನ ಮೆಟ್ಟಲೇರಿದೆ. ಹಲವು ಕೆಳ ನ್ಯಾಯಾಲಯಗಳು ನಿರ್ಮೋಹಿ ಅಖಾಡದ ಮನವಿಯನ್ನು ತಿರಸ್ಕರಿಸಿದರೂ 2010 ರಲ್ಲಿ ಅಲಹಾಬಾದ್ ಹೈ ಕೋರ್ಟು ಈ ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ ರಾಮಲಾಲಾ ವಿರಾಜಮಾನ್, ನಿರ್ಮೋಹಿ ಅಖಾಡ ಹಾಗೂ ಬಾಬರಿ ಮಸೀದಿ ನಿರ್ಮಾಣಕ್ಕೆ ಸಮಾನ ಪ್ರಮಾಣದಲ್ಲಿ ನೀಡಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಎಲ್ಲಾ ವಾದಿಗಳೂ ಸುಪ್ರೀಮ್ ಮೆಟ್ಟಲೇರಿದ್ದವು.

• ಪ್ರಚಲಿತ ನ್ಯಾಯ ಮತ್ತು ಪುರಾವೆಗಳ ಆಧಾರದ ಮೇಲೆ ನ್ಯಾಯ ನಿರ್ಣಯ ಮಾಡಹೊರಟ ಅಲಹಾಬಾದ್ ಉಚ್ಚ ನ್ಯಾಯಾಲಯ ಕಡೆಗೆ ವಿವಾದವನ್ನು ಸಂಪೂರ್ಣವಾಗಿ ಪರಿಹರಿಸಲಾಗದೆ ವಿವಾದದ ಮೂರೂ ಪಕ್ಷಗಳು ತಮ್ಮ ಹಕ್ಕು ಮಂಡನೆಯಲ್ಲಿ ಸರಿಸಮಾನವಾಗಿ ಗೆದ್ದಿವೆ-ಸೋತಿವೆ ಎಂಬ ರೀತಿಯಲ್ಲಿ ತೀರ್ಪು ನೀಡಿತ್ತು. ಹಾಗಿದ್ದರೂ ಬಾಬರಿ ಮಸೀದಿಯಿದ್ದ ಜಾಗವನ್ನು ರಾಮಲಾಲಾ ವಿರಾಜಮಾನ್‍ಗೆ ನೀಡಿದ್ದ (ಹಿಂದೂಗಳಿಗೆ ಒಪ್ಪಿಯಾಗಬಹುದಾದ) ಈ ತೀರ್ಪನ್ನು ಸುಪ್ರೀಮ್ ಅಂತಿಮಗೊಳಿಸಬಹುದಿತ್ತು.

• 2014 ರ ನಂತರದಲ್ಲಿ ದೇಶದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ ನ್ಯಾಯಾಲಯದ ಕೈಕಟ್ಟಿತು ಎಂದು ಹೇಳಿದರೆ ತಪ್ಪಾಗಲಾರದು. ಬಲಪಂಥೀಯ ಬಹುಮತದ ಸರ್ಕಾರದಲ್ಲಿ ಹಾಗೂ ಈಗ ಇಲ್ಲದ ಮಸೀದಿಯ ವಾಸ್ತವಿಕತೆಯಲ್ಲಿ ನ್ಯಾಯಾಲಯ ಮುಸ್ಲಿಮರ ಪರ ನಿರ್ಣಯ ನೀಡುವ ಸಾಧ್ಯತೆ ಇರಲಿಲ್ಲ. ಹೇಗಾದರೂ ಮಾಡಿ ಆ ವಿವಾದಿತ ಜಾಗದಲ್ಲಿಯೇ ರಾಮಮಂದಿರ ಕಟ್ಟುತ್ತೇವೆಂಬ ಹಿಂದೂ ಪರ ಸಂಘಟನೆಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವ ಸಾಧ್ಯತೆಯೂ ಇರಲಿಲ್ಲ. ಹೀಗಾಗಿ ನ್ಯಾಯಿಕ ಪ್ರಕ್ರಿಯೆಯೇ ‘ಬಹುಮತಪರ’ (ಮೆಜಾರಿಟೇರಿಯನ್) ಆಗಿರುವುದನ್ನು ಸಾಂದರ್ಭಿಕ ಸತ್ಯವಾಗಿ ಪರಿಗಣಿಸಬೇಕಿದೆ.

ವಿವಾದದ ಐತಿಹಾಸಿಕತೆ ಮತ್ತು ಭಾವನಾತ್ಮಕತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಅಂತಿಮ ತೀರ್ಪಿನಲ್ಲಿಯೂ ಕೂಡಾ ವಿವಾದಿತ 2.77 ಎಕರೆ ಜಮೀನಿನ ಜೊತೆಗೆ ಉಳಿದ ಎಪ್ಪತ್ತು ಎಕರೆ ಜಮೀನನ್ನೂ ರಾಷ್ಟ್ರೀಕರಣ ಮಾಡಿ ಆದೇಶ ಹೊರಡಿಸಬಹುದಾಗಿತ್ತು.

• ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿಗೆ ವಿಭಿನ್ನವಾಗಿ ಹಾಗೂ ಬಹುಮತಪರ ನಿರ್ಣಯ ನೀಡಬೇಕೆನ್ನುವ ವಾದವನ್ನು ಮುಂದಿಟ್ಟುಕೊಂಡರೂ ನ್ಯಾಯಾಲಯದ ಮುಂದೆ ಹಲವು ಆಯ್ಕೆಗಳಿದ್ದವು. ನಂಬಿಕೆ ಹಾಗೂ ಐತಿಹಾಸಿಕತೆಯ ಆಧಾರದಲ್ಲಿ ನಿರ್ಣಯ ನೀಡಬೇಕಿದ್ದರೂ ನ್ಯಾಯಾಲಯ ಹಲವು ಸಾಧ್ಯತೆಗಳನ್ನು ಪರಶೀಲಿಸಬಹುದಿತ್ತು. ವಿವಾದಿತ 2.77 ಎಕರೆ ಜಮೀನಿನ ಜೊತೆಗೆ ಸುತ್ತಲಿನ ಸುಮಾರು ಎಪ್ಪತ್ತು ಎಕರೆ ಜಮೀನನ್ನು ಒಳಗೊಂಡು ಸುಪ್ರೀಮ್ ನ್ಯಾಯಾಲಯ ‘ಮಧ್ಯಸ್ಥಿಕೆ’ ನ್ಯಾಯ ಮಾಡಬಹುದಿತ್ತು.

• 1949 ಮತ್ತು 1992ರ ಕ್ರಮಗಳನ್ನು ಕಾನೂನುಬಾಹಿರವೆಂದು ಹೆಸರಿಸಿದ ನ್ಯಾಯಾಲಯ ಯಾವ ಆಧಾರದ ಮೇಲೆ ತನ್ನ ಅಂತಿಮ ತೀರ್ಪು ನೀಡಿದೆಯೆಂದು ಸ್ಪಷ್ಟ ಪಡಿಸಿಲ್ಲ. ಯಾವುದೇ ತೀರ್ಪಿನ ಅಂತಿಮತೆಗೆ ಮೊದಲು ನೀಡಲಾಗುವ ಕಾರಣಗಳನ್ನು (ರೇಶಿಯೋ ಡೆಸಿಡೆಂಡಿ) ಸುಪ್ರೀಮ್ ನೀಡಿಲ್ಲ. ಪುರಾವೆ ಮುಖ್ಯವೋ ನಂಬಿಕೆ ಮುಖ್ಯವೋ, ಪ್ರಸ್ತುತತೆ ಮುಖ್ಯವೊ ಐತಿಹಾಸಿಕತೆ ಮುಖ್ಯವೋ ಎಂಬ ವಿಷಯಗಳ ಬಗ್ಗೆಯೂ ಸುಪ್ರೀಮ್ ಸ್ಪಷ್ಟಪಡಿಸಿಲ್ಲ.

• ಅಂತಿಮ ತೀರ್ಪಿನಲ್ಲಿ ರಾಮಮಂದಿರ ಕಟ್ಟಲು ಸರ್ಕಾರಿ ನ್ಯಾಸವೊಂದಕ್ಕೆ ವಿವಾದಿತ ಜಮೀನು ನೀಡಿರುವ ನ್ಯಾಯಾಲಯ ‘ಸೂಕ್ತ’ ಜಾಗದಲ್ಲಿ ಮಸೀದಿ ಕಟ್ಟಲು ಐದು ಎಕರೆ ನೀಡಬೇಕೆಂದಿದೆ. ಈ ಐದು ಎಕರೆ ಜಾಗವನ್ನು ಎಲ್ಲಿ ನೀಡಬೇಕೆಂದು ಸಹ ನಿರ್ಧರಿಸಿಲ್ಲ. ಹೀಗೆ ಈ ನಿರ್ಣಯವು ಹಿಂದೂಗಳ ಪರ ಅಂತಿಮವಾದರೆ ಮುಸ್ಲಿಮರ ಪರ ಅಪೂರ್ಣವಾಗಿದೆ.

• ರಾಮಮಂದಿರಕ್ಕೆ ಬಹುತೇಕ ಜಾಗ ಹಾಗೂ ಮಸೀದಿಗೆ ‘ಸೂಕ್ತ’ ಐದು ಎಕರೆ ನೀಡಬೇಕೆನ್ನುವುದು ಅಂತಿಮ ತೀರ್ಪು ಆಗಬೇಕಿದ್ದರೆ ನ್ಯಾಯಾಲಯ ಅದಕ್ಕೆ ಬಲವಾದ ನ್ಯಾಯಿಕ ಕಾರಣಗಳನ್ನು ನೀಡಬೇಕಿತ್ತು. ವಿವಾದದ ಐತಿಹಾಸಿಕತೆ ಮತ್ತು ಭಾವನಾತ್ಮಕತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಅಂತಿಮ ತೀರ್ಪಿನಲ್ಲಿಯೂ ಕೂಡಾ ವಿವಾದಿತ 2.77 ಎಕರೆ ಜಮೀನಿನ ಜೊತೆಗೆ ಉಳಿದ ಎಪ್ಪತ್ತು ಎಕರೆ ಜಮೀನನ್ನೂ ರಾಷ್ಟ್ರೀಕರಣ ಮಾಡಿ ಆದೇಶ ಹೊರಡಿಸಬಹುದಾಗಿತ್ತು. ಈ ಎಲ್ಲಾ ಭೂಮಿಯು ಭಾರತ ದೇಶದ ಪ್ರಜೆಗಳಿಗೆ ಸೇರಿದ್ದೆಂದು ಪ್ರತಿಪಾದಿಸಿ ಐತಿಹಾಸಿಕತೆ ಮತ್ತು ಭಾವನಾತ್ಮಕತೆಯ ಆಧಾರದ ಮೇಲೆಯೇ ಸರ್ಕಾರಿ ನ್ಯಾಸವೊಂದಕ್ಕೆ ಜಮೀನನ್ನು ಹಸ್ತಾಂತರಿಸಬಹುದಾಗಿತ್ತು. ಹಾಗೆಯೇ ಮುಸ್ಲಿಮರಿಗೆ ಐದು ಎಕರೆ ಜಮೀನು ಪರಿಹಾರ ನೀಡುವ ಬದಲಿಗೆ ಮಸೀದಿ ನಿರ್ಮಾಣಕ್ಕೆ ಸರ್ಕಾರಿ ನ್ಯಾಸವೊಂದರ ಸ್ಥಾಪನೆಗೂ ಆದೇಶ ನೀಡಬಹುದಾಗಿತ್ತು. ಮಂದಿರದ ಹಾಗೂ ಮಸೀದಿಯ ಜಮೀನುಗಳೆರಡೂ ಸರ್ಕಾರಿ ಸ್ವತ್ತೆಂದು ಘೋಷಿಸುವ ಮೂಲಕ ಯಾವುದೇ ವಾದಿಯ ಪರ ತಾವು ನಿರ್ಣಯ ನೀಡಿಲ್ಲವೆಂದು ಪ್ರತಿಪಾದಿಬೇಕಿತ್ತು.

ಸ್ಥೂಲವಾಗಿ ಹೇಳಬೇಕೆಂದರೆ, ಸುಪ್ರೀಮ್ ಕೋರ್ಟಿನ ಈ ನಿರ್ಣಯ ನಂಬಿಕೆ ಆಧಾರಿತ ಬಹುಮತಪರ ನಿರ್ಧಾರವೆಂದು ಹೇಳಬೇಕಾಗುತ್ತದೆ. ಪ್ರಚಲಿತ ಕಾನೂನು ಮತ್ತು ಪುರಾವೆಗಳನ್ನು ಬದಿಗಿಟ್ಟ ಈ ತೀರ್ಪು ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆಯೊಂದಕ್ಕೆ ನಾಂದಿ ಹಾಡಿದೆ ಎಂದೂ ಹೇಳಬೇಕಾಗುತ್ತದೆ. ಈ ನಿರ್ಣಯವು ಮುಂದೆ ಯಾವ ನ್ಯಾಯಿಕ ಸಿದ್ಧಾಂತಗಳಿಗೆ ಬುನಾದಿಯಾಗುತ್ತದೆ ಎಂಬುದನ್ನೂ ನಾವು ಕುತೂಹಲದಿಂದ ಗಮನಿಸಬೇಕಾಗುತ್ತದೆ.

Leave a Reply

Your email address will not be published.