‘ಅರಣ್ಯ ಇಲಾಖೆ ಜೊತೆಗೆ ಪ್ರಜೆಗಳೂ ಕೈಜೋಡಿಸಬೇಕು’

ವಿನಯ್ ಲೂತ್ರ ಜನಿಸಿದ್ದು ಮಾರ್ಚ್ 20, 1956ರಂದು; ಹರಿಯಾಣ ರಾಜ್ಯದ ರೋಥಕ್‌ನಲ್ಲಿ. ದೆಹಲಿ ವಿವಿಯಿಂದ ಪ್ರಾಣಿಶಾಸ್ತದಲ್ಲಿ ಎಂಎಸ್ಸಿ ಮತ್ತು ಇಂಗ್ಲೆಂಡಿನ ವೇಲ್ಸ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಮತ್ತೊಂದು ಎಂಎಸ್ಸಿ ಪದವಿ ಪಡೆದಿದ್ದಾರೆ. 1979ರಲ್ಲಿ ಐಎಫ್‌ಎಸ್ (ಇಂಡಿಯನ್ ಫಾರೆಸ್ಟ್ ಸರ್ವಿಸ್) ತೇರ್ಗಡೆ. 1981 ರಿಂದ 1987ವರೆಗೆ ಕರ್ನಾಟಕದಲ್ಲಿ, ನಂತರ ದೇಶದ ವಿವಿಧ ರಾಜ್ಯದಲ್ಲಿ ಸೇವೆ. 1997 ರಿಂದ 2016ರಲ್ಲಿ ನಿವೃತ್ತಿಯಾಗುವವರೆಗೆ ಕರ್ನಾಟಕ ಇವರ ಕರ್ಮಭೂಮಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲ್ಲಿ ಕೆಲಸ ಮಾಡಿದ ಅನುಭವ. ನಿವೃತ್ತಿ ವೇಳೆಗೆ ಹೆಡ್ ಆಫ್ ಫಾರೆಸ್ಟ್ ಡಿಪಾರ್ಟ್ಮೆಂಟ್ ಮತ್ತು ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ ನಂತಹ ಹುದ್ದೆಯನ್ನ ನಿರ್ವಹಿಸಿದ ಕೀರ್ತಿ ಇವರದು. ಮೂಲತಃ ಪಂಜಾಬಿ ಭಾಷಿಕರಾದರೂ ಕನ್ನಡವನ್ನು ಅಷ್ಟೇ ಸುಲಲಿತವಾಗಿ ಮಾತನಾಡಬಲ್ಲರು. ಸಮಾಜಮುಖಿಯ ಮುಖ್ಯಚರ್ಚೆಯ ಭಾಗವಾಗಿ ವಿನಯ್ ಲೂತ್ರ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

 

ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆಯೇ?

ಇದಕ್ಕೆ ಉತ್ತರವಾಗಿ ಹೌದು ಮತ್ತು ಇಲ್ಲ ಎಂದು ಹೇಳಬಹುದು. ಇದನ್ನು ಎರಡು ರೀತಿಯಲ್ಲಿ ನೋಡಬಹುದು. ನಾವು ಯಾವ ರೀತಿಯಲ್ಲಿ ಅಥವಾ ದೃಷ್ಟಿಯಲ್ಲಿ ನೋಡುತ್ತಿದ್ದೇವೆ ಮತ್ತು ವಿಶ್ಲೇಷಣೆ ಮಾಡುತ್ತೇವೆ ಆ ಆಧಾರದ ಮೇಲೆ ಈ ಹೌದು ಅಥವಾ ಇಲ್ಲ ಎನ್ನುವುದು ನಿರ್ಧಾರವಾಗುತ್ತದೆ. ಮೊದಲಿಗೆ ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ನಾವು ಕೈಗೊಂಡಿರುವ ಕಾರ್ಯಗಳು ನಿಜಕ್ಕೂ ಯಶಸ್ವಿಯಾಗಿವೆ ಎಂದು ಹೇಳಬಹುದು. ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಎಲ್ಲಕ್ಕೂ ಮೊದಲಿಗೆ ಕರ್ನಾಟಕದಲ್ಲಿ ಕಳೆದೆರೆಡು ವರ್ಷದಲ್ಲಿ ಹೆಚ್ಚುವರಿಯಾಗಿ 1025 ಚದರ ಕಿಮೀ ಭೂಮಿ ಅರಣ್ಯವಾಗಿ ಪರಿವರ್ತಿತವಾಗಿದೆ. ಅಂದರೆ ಇದು ರಾಜ್ಯದ ಒಟ್ಟು ಅರಣ್ಯಭೂಮಿಯ ಶೇಕಡಾ 0.5 ಪ್ರತಿಶತದಷ್ಟು ಹೆಚ್ಚು ಮಾಡಿದಂತಾಯಿತು.

ಇದರ ಜೊತೆಗೆ ಬಹಳಷ್ಟು ಕಾಡುಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ವೃದ್ಧಿಯಾಗಿದೆ. ದೇಶದಲ್ಲಿನ ಕಾಲುಭಾಗದಷ್ಟು ಹುಲಿಗಳು ಕರ್ನಾಟಕದಲ್ಲಿವೆೆ ಮತ್ತು ಇವುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಚಿರತೆ, ಕಾಡಾನೆ ಮತ್ತು ಬೇರೆಲ್ಲಾ ಕಾಡುಪ್ರಾಣಿಗಳ ಸಂಖ್ಯೆ ಕರ್ನಾಟಕದ ಕಾಡುಗಳಲ್ಲಿ ಆರೋಗ್ಯಕರವಾಗಿದೆ. ಇಲ್ಲಿನ ಕಾಡುಗಳಲ್ಲಿ 536 ಹುಲಿಗಳು, 6050 ಆನೆಗಳು ಹಾಗೂ 1129 ಚಿರತೆಗಳು ಇವೆ. ಮೊದಲೇ ಹೇಳಿದಂತೆ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಖಂಡಿತ ಕರ್ನಾಟಕ ಬಹಳಷ್ಟು ಯಶಸ್ವೀ ರಾಜ್ಯ.

ಕಳೆದ ಹತ್ತು ವರ್ಷಗಳಲ್ಲಿ ದಕ್ಷಿಣ ಕರ್ನಾಟಕ, ಪಶ್ಚಿಮಘಟ್ಟ ಪ್ರದೇಶ ಹಾಗೂ ಕರಾವಳಿ ಪ್ರದೇಶಗಳು ಮತ್ತೆ ಹಸಿರಾಗಿವೆ. ನಗರಗಳಲ್ಲಿಯೂ ಮರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದರ ಜೊತೆಗೆ ಜಲ-ವಾಯು-ಬಿಸಿಲು ಮೂಲಗಳಿಂದ ನವೀಕರಿಸಬಹುದಾದ ವಿದ್ಯುಚ್ಛಕ್ತಿ ಮೂಲಗಳಿಗೆ ಒತ್ತಾಸೆ ನೀಡಲಾಗಿದೆ. ಈಗಾಗಲೇ ನಿಗದಿತ ಶೇಕಡಾ 15ಕ್ಕೂ ಹೆಚ್ಚು ಶಕ್ತಿಮೂಲ ಈ ಅಸಾಂಪ್ರದಾಯಿಕ ಮೂಲಗಳಿಂದ ಒದಗಿಬಂದಿದೆ.

ಬೆಂಗಳೂರಿನ ಜನಸಂಖ್ಯೆ ನಿಯಂತ್ರಣ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿ, ನಗರವನ್ನು ಇನ್ನಷ್ಟು ಪರಿಸರ ಸ್ನೇಹಿ ಮಾಡುವಲ್ಲಿ ಸೋತಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನ ಹೋಲಿಸಿಕೊಳ್ಳಲು ಶುರುಮಾಡಿದರೆ ಆಗ ಕರ್ನಾಟಕದಲ್ಲಿ ಪರಿಸರ ಸಮತೋಲನೆ ಮಾಡುವಲ್ಲಿ ಇನ್ನೂ ಹೆಚ್ಚಿನ ಕೆಲಸ ಬಾಕಿ ಇದೆ ಅನ್ನಿಸುತ್ತದೆ. ಉದಾಹರಣೆಗೆ ಯೂರೋಪ್ ಖಂಡವನ್ನ ಮತ್ತೆ ಕಾಡನ್ನಾಗಿ ಪರಿವರ್ತಿಸಲು ಬಹಳಷ್ಟು ಕೆಲಸ ನಡೆಯುತ್ತಿದೆ. 2030ರ ವೇಳೆಗೆ ಯೂರೋಪಿನ ಭೂಪಟದಿಂದ ಅಳಿಸಿ ಹೋಗಿರುವ ಎಷ್ಟೊಂದು ಪ್ರಭೇದಗಳನ್ನ ಮರಳಿ ಸೃಷ್ಟಿಸಿ ಕಾಡಿನಲ್ಲಿ ಬಿಡುವ ಯೋಜನೆ ರೂಪುಗೊಂಡಿದೆ.

ಮುಂದೆ ಮಾಂಸಕ್ಕಾಗಿ ಒಂದು ಸಣ್ಣ ಪ್ರಾಣಿಯನ್ನೂ ಕೊಲ್ಲಬೇಕಾದ ಪರಿಸ್ಥಿತಿ ಇರುವುದಿಲ್ಲ. ಟಿಶ್ಯೂಗಳನ್ನು ಬಳಸಿ ಲ್ಯಾಬ್‌ನಲ್ಲಿ ಮಾಂಸ ಸೃಷ್ಟಿಸುತ್ತಿದ್ದಾರೆ. ಹಾಗೆಯೇ ಒಂದೆರೆಡು ದಶಕದಲ್ಲಿ ಎಲ್ಲಾ ರೀತಿಯ ಹಣ್ಣು ಮತ್ತು ತರಕಾರಿಯನ್ನು ಕೂಡ ಮನೆಯಲ್ಲೇ ಬೆಳೆಯಬಹುದಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಆಗ ನಾವು ವಾಸಿಸುವುದಕ್ಕೆ ಎಷ್ಟು ಬೇಕು ಅಷ್ಟು ಜಾಗ ಬಿಟ್ಟು ಉಳಿದ ಜಾಗವನ್ನು ಕಾಡನ್ನಾಗಿ ಮಾಡಬಹುದು; ಅಳಿವಿನಂಚಿನಲ್ಲಿರುವ ಎಷ್ಟೊಂದು ಪ್ರಾಣಿ ಪ್ರಭೇದಗಳನ್ನು ಉಳಿಸಬಹುದು. ಇದೆಲ್ಲ ನಮ್ಮಲ್ಲಿ ಶುರುವಾಗಲು ಸಮಯ ತಗಲುತ್ತದೆ. ಆದರೆ ಇದು ಖಂಡಿತ ಸಾಧ್ಯ. ಆ ನಿಟ್ಟಿನಲ್ಲಿ ನೋಡಿದಾಗ ಕರ್ನಾಟಕದಲ್ಲಿ ಪರಿಸರ ಸಮತೋಲನಕ್ಕೆ ಆಗಿರುವ ಕೆಲಸ ಸಾಲದು ಅನ್ನಿಸುತ್ತದೆ.

ಬೆಂಗಳೂರು ಟು ಗೊವಾ!

ನೀವು ಬೆಂಗಳೂರಿನಿಂದ ಕಾಡಿನ ಹಾದಿಯಲ್ಲೇ ಗೋವಾ ತಲುಪಲು ಸಾಧ್ಯ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ನೀವು ಯಾವುದೇ ನಗರದಲ್ಲಿ ಪ್ರಯಾಣ ಮಾಡದೆ ಕೇವಲ ಕಾಡಿನ ಮಾರ್ಗದಲ್ಲಿಯೇ ಗೋವಾ ತಲುಪಬಹುದು.

ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಪ್ರವೇಶಿಸಿ ನಂತರ ನಡೆಯುತ್ತಾ ಹೋದರೆ ಕಾವೇರಿ ವೈಲ್ಡ್ ಲೈಫ್ ಸಿಗುತ್ತದೆ; ನಂತರ ಮಲೆಮಹದೇಶ್ವರ, ಸತ್ಯಮಂಗಲ, ಆಮೇಲೆ ಬಿಳಿಗಿರಿ ರಂಗನಬೆಟ್ಟ, ಬಂಡೀಪುರ, ನಾಗರಹೊಳೆ, ಕೊಡಗಿನಲ್ಲಿ ಬ್ರಹ್ಮಗಿರಿ, ಪುಷ್ಪಗಿರಿ ದಾಟಿ ಕುದುರೆಮುಖ ತಲುಪಬಹುದು. ಅಲ್ಲಿಂದ ಮೂಕಾಂಬಿಕಾ ದಾಟಿ ಸಿರ್ಸಿ, ಯಲ್ಲಾಪುರ, ದಾಂಡೇಲಿ, ಭೀಮಗಡ್ ಮೂಲಕ ಗೋವಾ ರಾಜ್ಯವನ್ನು ಪ್ರವೇಶಿಸಬಹುದು. ಇಷ್ಟೊಂದು ದೊಡ್ಡ ಮತ್ತು ಒಂದಕ್ಕೊಂದು ಸಂಪರ್ಕ ಹೊಂದಿರುವ ನ್ಯಾಷನಲ್ ಪಾರ್ಕ್ ಅಥವಾ ಕಾಡು ಪ್ರದೇಶ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಹೀಗಾಗಿ ಕರ್ನಾಟಕ ಅರಣ್ಯ, ಪರಿಸರ ಸಮತೋಲನ ಸಾಧಿಸುವಲ್ಲಿ ಜಯಗಳಿಸಿದೆ ಎಂದು ಹೇಳಬಹುದು.

 

ಸಾಧಿಸುವ ಗುರಿಯ ದೂರ ಮತ್ತು ಕ್ಲಿಷ್ಟತೆಯ ಮುಂದೆ ಇದುವರೆಗಿನ ನಮ್ಮ ಸಾಧನೆ ಅಲ್ಪಮಾತ್ರ ಎನ್ನಬಹುದೆ?

ಅಷ್ಟೊಂದು ಬೇಗ ಮತ್ತು ಆತುರದಲ್ಲಿ ಅಂತಹ ನಿರ್ಧಾರಕ್ಕೆ ಬರಬೇಡಿ. ಇಂದು ಭಾರತ ಅಭಿವೃದ್ಧಿಯ ಪಥದಲ್ಲಿದೆ. ಇದಕ್ಕಾಗಿ ನಮಗೆ ರಸ್ತೆ, ಸೇತುವೆ ಹೀಗೆ ಅನೇಕ ಮೂಲಭೂತ ಸೌಕರ್ಯದ ಅವಶ್ಯಕತೆ ಇದೆ. ಒಂದು ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ಸಬಲವಾಗಿ ನಿಲ್ಲಬೇಕಾದರೆ ಇಂತಹ ಮೂಲಭೂತ ಸೌಕರ್ಯಗಳು ಬೇಕೇ ಬೇಕು. ಇದಕ್ಕಾಗಿ ಹಲವೊಮ್ಮೆ ಕಾಡು ಪ್ರದೇಶದಲ್ಲಿ ರಸ್ತೆ, ರೈಲ್ವೆ ಇತರ ಕೆಲಸಕ್ಕಾಗಿ ಒಂದಷ್ಟು ಜಾಗ ಬಿಟ್ಟುಕೊಡಬೇಕಾದ ಸಂದರ್ಭ ಬರುತ್ತದೆ. ಇವೆಲ್ಲವುಗಳ ನಡುವೆ ಕಾಡು ಉಳಿಸಿಕೊಂಡಿರುವುದು ಕೂಡ ಒಂದು ದೊಡ್ಡ ಸಾಧನೆ. ಉದಾಹರಣೆಗೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಪ್ರಾಜೆಕ್ಟ್ ಅನ್ನು ಕಳೆದ ಹನ್ನೆರಡು ವರ್ಷದಿಂದ ಅರಣ್ಯ ಇಲಾಖೆ ತಡೆಯುತ್ತಾ ಬಂದಿದೆ. ಸರಕಾರ ಈ ಯೋಜನೆಗೆ ಅಸ್ತು ಅಂದರೆ ಒಟ್ಟು 727 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗುತ್ತದೆ. ಇಂದಿನ ದಿನಗಳಲ್ಲಿ ಸರಕಾರ ಈ ಪ್ರಾಜೆಕ್ಟ್ ಒಪ್ಪುವ ಸಾಧ್ಯತೆ ಹೆಚ್ಚಾಗಿದೆ. ಹಾಗೊಮ್ಮೆ ಸರಕಾರ ಇದಕ್ಕೆ ಓಕೆ ಎಂದರೆ ಜನ ಹೋರಾಟಕ್ಕೆ ಇಳಿಯಬೇಕು. ಅರಣ್ಯ ಇಲಾಖೆ ಒಂದೇ ಎಲ್ಲಾ ಕೆಲಸವನ್ನ ಮಾಡಲು ಸಾಧ್ಯವಿಲ್ಲ. ಪ್ರಜೆಗಳು ಕೂಡ ಇದನ್ನ ತಮ್ಮ ಕೆಲಸ ಎಂದುಕೊಂಡಾಗ ಎಲ್ಲವೂ ಸಾಧ್ಯ. (*ಈ ಸಂದರ್ಶನ ಪ್ರಕಟವಾಗುವಷ್ಟರಲ್ಲಿ ಸದರಿ ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ! -ಸಂ.)

ನಮಗೆ ಮುಂದೆ ಆಗಬೇಕಿರುವ ಕಾರ್ಯಗಳ ಸಂಪೂರ್ಣ ಅರಿವು ಇದೆ ಅನ್ನಿಸುತ್ತದೆಯೇ?

ಎಲ್ಲಕ್ಕೂ ಮೊದಲು ಭಾರತದಲ್ಲಿ ಹಸಿರು ಪ್ರದೇಶವಾಗಿ ಉಳಿದಿರುವುದು ಕೇವಲ 20 ಪ್ರತಿಶತ ಮಾತ್ರ. ಅದರಲ್ಲೂ ಪ್ರೊಟೆಕ್ಟೆಡ್ ಲ್ಯಾಂಡ್ ಅಥವಾ ಕಾಡಿಗಾಗಿ ಎಂದು ಮೀಸಲಾದ ಪ್ರದೇಶ ಕೇವಲ 4 ರಿಂದ 5 ಪ್ರತಿಶತ. ಇದು ಅಮೆರಿಕಾದಲ್ಲಿ 14 ಪ್ರತಿಶತವಿದ್ದರೆ ಯೂರೋಪಿಯನ್ ಯೂನಿಯನ್‌ನಲ್ಲಿ 21 ಪ್ರತಿಶತವಿದೆ. ಹೀಗಾಗಿ ಭಾರತದಲ್ಲಿ ಹಸಿರು ಪ್ರದೇಶ ಬಹಳ ಕಡಿಮೆಯಾಗಿದೆ. ಇದನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಬಹಳಷ್ಟು ಜನ ಜಮೀನು ಮಾರಲು ಸಿದ್ಧರಿದ್ದಾರೆ; ಕೊಳ್ಳುವ ಕೆಲಸ ಸರಕಾರದಿಂದ ಆಗಬೇಕಿದೆ.

ಇದನ್ನು ಸರಕಾರ ಒಂದೇ ಮಾಡಲಿ ಎನ್ನುವುದು ಕೂಡ ತಪ್ಪಾಗುತ್ತದೆ. ನಮ್ಮಲ್ಲಿ ಈಗ ಬಹಳಷ್ಟು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಇವೆ. ಇವುಗಳಿಗೆ ಒಂದಷ್ಟು ಸಾಮಾಜಿಕ ಜವಾಬ್ದಾರಿಗಳಿರುತ್ತದೆ. ಹೀಗೆ ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಕೈಜೋಡಿಸಿ ಅರಣ್ಯ ವೃದ್ಧಿಗೆ ಕೆಲಸ ಮಾಡಬೇಕಿದೆ. ತನ್ಮೂಲಕ ಬಯೋ ಡೈವರ್ಸಿಟಿ ಕಾಪಾಡಲು ಕೂಡ ಸಾಧ್ಯ.

ನಾವು ಮುಂದೆ ಮಾಡಬೇಕಿರುವ ಕಾರ್ಯಗಳ ಅರಿವು ಚೆನ್ನಾಗಿದೆ. ಹಾಗೆ ನೋಡಿದರೆ ಭಾರತದಲ್ಲಿ ಅರಣ್ಯ ನೀತಿಯ ಕುರಿತು ಇರುವ ಕಾನೂನುಗಳು ಸಹ ಸಾಕಷ್ಟು ಪ್ರಬಲವಾಗಿವೆ. ಆದರೆ ಕಾರ್ಯರೂಪಕ್ಕೆ ತರುವಾಗ ಆಗುವ ಲೋಪದೋಷಗಳನ್ನು ತಿದ್ದಿಕೊಳ್ಳಬೇಕಿದೆ.

ಬೆಂಗಳೂರಿನ ಒಬ್ಬ ಸಾಮಾನ್ಯ ನಿವಾಸಿಯಾಗಿ ಪರಿಸರ ಸಮತೋಲನ ಸಾಧಿಸುವಲ್ಲಿ ನಾವೇನು ಮಾಡಬಹುದು?

ನಗರ ಪ್ರದೇಶದಲ್ಲಿ ಜನರ ಬಳಿ ವೇಳೆಯ ಕೊರತೆ ಬಹಳ. ‘ಇಕೋ ಟೂರಿಸಂ ಬೆಂಗಳೂರು’ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸರ್ಟಿಫೈಡ್ ವಾಲಂಟೀರ್ಸ್ ಎನ್ನುವ ಒಂದು ತರಬೇತಿ ಶಿಬಿರ ಹಮ್ಮಿಕೊಳ್ಳುತ್ತದೆ. ಇದು ಎರಡು ವಾರದ ಟ್ರೇನಿಂಗ್ ಕೋರ್ಸ್. ಈಗಾಗಲೇ ಇಲ್ಲಿ 800 ರಿಂದ 1000 ಸ್ವಯಂ ಸೇವಕರು ಇದ್ದಾರೆ. ಇವರು ರಜಾ ದಿನಗಳಲ್ಲಿ ಅರಣ್ಯ ಪ್ರದೇಶದ ಸುತ್ತಮುತ್ತ ಸಂಚರಿಸಿ ಜನರಿಗೆ ಪರಿಸರದ ಬಗ್ಗೆ ಮಾಹಿತಿ ನೀಡುತ್ತಾರೆ. ಮರಗಿಡಗಳ ರಕ್ಷಣೆ, ಪ್ರಾಣಿಪಕ್ಷಿಗಳ ರಕ್ಷಣೆ ಮಾಡದಿದ್ದರೆ ಏನಾಗುತ್ತದೆ, ಅದು ಬೀರುವ ದುಷ್ಪರಿಣಾಮಗಳು ಮುಂತಾದ ಹಲವಾರು ವಿಷಯಗಳ ಬಗ್ಗೆ ವಿವರಿಸುತ್ತಾರೆ.

ಕಾಡುಪ್ರಾಣಿ-ಮಾನವ ಸಂಘರ್ಷ ಎದುರಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ನಾನು ಮೊದಲೇ ಹೇಳಿದಂತೆ ನಮ್ಮಲ್ಲಿ ಕಾಡಿಗಾಗಿ ಮೀಸಲಾದ ಭೂಪ್ರದೇಶ ಬಹಳ ಕಡಿಮೆ. ಪ್ರಾಣಿ ಮತ್ತು ಮನುಷ್ಯನ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ. ನಾವು ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರದೇಶವನ್ನು ಕಾಡಾಗಿ ಪರಿವರ್ತಿಸಿ, ಅಲ್ಲಿ ಹೆಚ್ಚು ಕಾಡು ಪ್ರಾಣಿಗಳನ್ನ ಸಂರಕ್ಷಿಸಿ ಅದನ್ನು ಟೂರಿಸಂಗೆ ಬಳಸಿಕೊಳ್ಳಬಹುದು.

ಉದಾಹರಣೆಗೆ ಕೀನ್ಯಾದ ಮಸಾಯ್ ಮಾರ ಪ್ರದೇಶ. ಇದನ್ನು ಪೂರ್ಣವಾಗಿ ಅರಣ್ಯ ಪ್ರದೇಶವೆಂದು ಘೋಷಿಸಿದ್ದಾರೆ. ಹಿಂದೆ ಅಲ್ಲಿನ ಮೂಲನಿವಾಸಿಗಳು ಮತ್ತು ಕಾಡುಪ್ರಾಣಿಗಳ ನಡುವೆ ನಿರಂತರ ಸಂಘರ್ಷ ಇರುತ್ತಿತ್ತು. ಇದನ್ನು ಮನಗಂಡ ಅಲ್ಲಿನ ಸರಕಾರ ಆ ಭೂಭಾಗವನ್ನು ಅರಣ್ಯ ಪ್ರದೇಶವೆಂದು ಘೋಷಿಸಿ, ಪ್ರಾಣಿಪಕ್ಷಿಗಳಿಗೆ ಬೌಂಡರಿ ಹಾಕದೆ ಹಾಗೆಯೇ ಸ್ವಂತಂತ್ರವಾಗಿ ಓಡಾಡಿಕೊಂಡಿರಲು ಬಿಟ್ಟಿದ್ದಾರೆ. ಇದನ್ನು ನೋಡಲು ಜಗತ್ತಿನಾದ್ಯಂತ ಜನರು ಬರುತ್ತಿದ್ದಾರೆ. ಸರಕಾರಕ್ಕೂ ಆದಾಯ; ಸಮಸ್ಯೆಯೂ ದೂರ!

ಇಂದಿನ ಯುವಜನರಿಗೆ ನಿಮ್ಮ ಕಿವಿಮಾತು?

ನಾನು ಹೊಸದಾಗಿ ಹೇಳುವುದು ಏನಿಲ್ಲ. ಅದು ಅವರಿಗೆಲ್ಲಾ ಗೊತ್ತಿರುವುದೇ. ನಮಗಿರುವುದು ಒಂದೇ ಭೂಮಿ, ಅದನ್ನ ಸರಿಯಾಗಿ ಬಳಸಿಕೊಂಡು ಉಳಿಸಿಕೊಳ್ಳಬೇಕಿದೆ. ಇಲ್ಲಿ ನಮಗೆ ಬದುಕುವ ಹಕ್ಕು ಎಷ್ಟಿದೆಯೋ ಅಷ್ಟೇ ಹಕ್ಕು ಪ್ರತಿಯೊಂದು ಜೀವಿಗೂ ಇದೆ ಎನ್ನುವ ಸರಳ ತತ್ವ ಅರಿತು ಪಾಲಿಸಿದರೆ ಸಾಕು.

ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ

 

 

 

 

Leave a Reply

Your email address will not be published.