ಅರ್ಥಸ್ವಾತಂತ್ರ್ಯ@75 ಹೀಗೊಂದು ಹಿನ್ನೋಟ

.ನಾರಾಯಣ

1991ರಿಂದೀಚೆಗೆ ಭಾರತ ಒಂದು ಹೊಸ ಶ್ರೀಮಂತಿಕೆ ಮತ್ತು ಅದೇ ಹಳೆಯ ಬಡತನ ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದೆ. ಬಡತನವನ್ನು ಭಾರತೀಯರಷ್ಟು ಪ್ರಬುದ್ಧವಾಗಿ, ಭಾರತೀಯರಷ್ಟು ಸಹನಶೀಲರಾಗಿ ನಿಭಾಯಿಸಿದ ಇನ್ನೊಂದು ಸಮಾಜ ಬಹುಶಃ ಇರಲಾರದು. ಆದರೆ ಹೊಸ ಶ್ರೀಮಂತಿಕೆಯ ವಿಷಯದಲ್ಲಿ ಹೀಗೆಲ್ಲಾ ಹೇಳಲು ಸಾಧ್ಯವಿಲ್ಲ.

ಆಯಾ ಕಾಲದ ಆರ್ಥಿಕ ಅಗತ್ಯಗಳಿಗೆ ಅಧಿಕಾರದಲ್ಲಿರುವವರು ಯಾವ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ ಎನ್ನುವುದರ ಮೇಲೆ ದೇಶವೊಂದರ ಆರ್ಥಿಕ ಚರಿತ್ರೆ ನಿರ್ಮಾಣವಾಗುತ್ತಾ ಹೋಗುತ್ತದೆ. ಕೊನೆಗೂ 1947ರಲ್ಲಿ ಸ್ವಾತಂತ್ರ್ಯ ಬಂದಾಗ ಅವಿರತ ಹೋರಾಟದಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಅರ್ಥನೀತಿಗಳನ್ನು ಹೇಗೆ ರೂಪಿಸಬೇಕು ಎನ್ನುವ ಪ್ರಶ್ನೆ ಅಂದಿನ ನಾಯಕತ್ವವನ್ನು ಕಾಡಿತು..

ಸ್ವಾತಂತ್ರ್ಯ ಉಳಿಯಬೇಕಾದರೆ ಆರ್ಥಿಕ ಸ್ವಾವಲಂಬನೆ ಬೇಕು ಎನ್ನುವುದು ಅಂದಿನ ನಾಯಕರ ಸ್ಪಷ್ಟ ಅನ್ನಿಸಿಕೆಯಾಗಿತ್ತು. ಹೇಳಿಕೇಳಿ ಬ್ರಿಟಿಷರು ದೇಶವನ್ನು ಅರ್ಥಮಾರ್ಗದ ಮೂಲಕ ಪ್ರವೇಶಿಸಿದ್ದು ಮತ್ತು ಆರ್ಥಿಕವಾಗಿ ಬಳಲಿಸಿ ದೇಶದ ಮೇಲೆ ಸವಾರಿ ಮಾಡಿದ್ದು ಎಂಬ ಚಾರಿತ್ರಿಕ ಸತ್ಯ ನಾಯಕರ ಮುಂದಿತ್ತು. ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಬೇಕಾದ ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಬೇಕಾದರೆ ಅರ್ಥವ್ಯವಸ್ಥೆ ಸರಕಾರದ ಅಧೀನ ಮತ್ತು ನಿಯಂತ್ರಣದಲ್ಲಿರಬೇಕು ಎನ್ನುವುದು ಚಿಂತನೆಯ ಮುಂದುವರಿದ ಭಾಗ.

ಸರಕಾರ ಅರ್ಥವ್ಯವಸ್ಥೆಯನ್ನು ವಿದೇಶಿ ಆರ್ಥಿಕ ಶಕ್ತಿಗಳಿಂದ ರಕ್ಷಿಸದೇ ಹೋದರೆ ಬ್ರಿಟಿಷರು ಬಂದಂತೆ ಇನ್ಯಾವುದೋ ವಸಾಹತು ಶಕ್ತಿ ದೇಶದ ಸ್ವಾತಂತ್ರ್ಯ ಕಸಿದುಕೊಳ್ಳಬಹುದು ಎಂಬ ಆತಂಕದಿಂದ ವಿದೇಶಿ ವ್ಯಾಪಾರದ ಮೇಲೆ ನಿಯಂತ್ರಗಳ ಮೇಲೆ ನಿಯಂತ್ರಣ ಹೇರಲಾಯಿತು. ಅದೇ ರೀತಿ ದೇಶಿಯ ಖಾಸಗಿ ಆರ್ಥಿಕ ಶಕ್ತಿಗಳಿಗೆ ಪೂರ್ಣ ಆರ್ಥಿಕ ಸ್ವಾತಂತ್ರ್ಯ ನೀಡಿದರೆ ಶಕ್ತಿಗಳು ದೇಶಕ್ಕೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸದೆ ಲಾಭಕ್ಕೇನು ಮಾಡಬೇಕು ಎಂದೇ ಯೋಚಿಸಿ ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸಬಹುದು ಎಂಬ ಭೀತಿ ಇತ್ತು. ಹಾಗಾಗಿ ಸರಕಾರ ಖಾಸಗಿ ರಂಗವನ್ನು ಬಹುವಿಧದಿಂದ ನಿಯಂತ್ರಿಸಲು ತೊಡಗಿತು.

ಸರಕಾರ ಸಾರ್ವಜನಿಕ ಉದ್ದಿಮೆಗಳ ಮೂಲಕ ಆರ್ಥಿಕತೆಯನ್ನು ಬೆಳೆಸುವುದು, ನಿಯಂತ್ರಣದ ಮೂಲಕ ಖಾಸಗಿ ಬಂಡವಾಳವನ್ನು ದೇಶದ ಅಗತ್ಯಗಳತ್ತ ಹಾಯಿಸುವುದು, ಹಾಗೆ ಮಾಡುವ ಖಾಸಗಿ ರಂಗವನ್ನು ವಿದೇಶಿ ವಸ್ತುಗಳ ದಾಳಿಯಿಂದ ರಕ್ಷಿಸುವುದು. ಇವಿಷ್ಟು ನೀತಿಗಳನ್ನು ಒಟ್ಟಾಗಿ ಈಗ `ನೆಹರೂ ಸಮಾಜವಾದ‘ (ehಡಿuviಚಿಟಿ Soಛಿiಚಿಟism) ಅಂತ ಗುರುತಿಸಲಾಗುತ್ತದೆ. ಇದು ಸ್ವಂತಂತ್ರ ಭಾರತದ ಅರ್ಥ ಚರಿತ್ರೆಯ ಮೊದಲ ಅಧ್ಯಾಯ. ಅಧ್ಯಾಯವನ್ನು ಹೀಗೆ ರೂಪಿಸುವುದರ ಹಿಂದೆ ಅಂದಿನ ನಾಯಕತ್ವಕ್ಕೊಂದು ತರ್ಕ ಇತ್ತು. ಅದನ್ನು ಕಾಲಘಟ್ಟದಲ್ಲಿ ನಿಂತು ಟೀಕಿಸುವುದು ಸುಲಭ. ಆದರೆ ಇಂದು ಭಾರತದ ಆರ್ಥಿಕತೆ ಪ್ರಪಂಚದಲ್ಲಿ ಎತ್ತರಕ್ಕೆ ಬೆಳೆದಿದ್ದರೆ ಅದರ ತಳಪಾಯ ರೂಪುಗೊಂಡದ್ದು ಕಾಲದಲ್ಲಿ ಎನ್ನುವ ಸತ್ಯವನ್ನು ನಿರಾಕರಿಸುವಂತಿಲ್ಲ.

ಕಾಲದಲ್ಲೂ ಆರ್ಥಿಕ ಮಾದರಿಗೆ ವಿರೋಧ ಇರಲಿಲ್ಲ ಎಂದಲ್ಲ. ಉದಾರೀಕೃತ ಅರ್ಥನೀತಿಯ ಬಹುದೊಡ್ಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಪಾದಕರಾಗಿದ್ದ ಎಫ್..ಹಯೆಕ್ ಅವರ ಶಿಷ್ಯ ಅರ್ಥಶಾಸ್ತ್ರಜ್ಞ ಬಿ.ಆರ್.ಶೆಣೈ ಅವರು ರೀತಿಯ ಸಮಾಜವಾದಿ ಮಾರ್ಗ ಹಿಡಿದರೆ ಅಪಾಯ ಕಾದಿದೆ ಅಂತ ಎಚ್ಚರಿಸಿದ್ದರು. 1991ರಲ್ಲಿ ಅರ್ಥವ್ಯವಸ್ಥೆ ಯಾವ ಸ್ಥಿತಿ ತಲುಪಿತ್ತೋ ಸ್ಥಿತಿಯನ್ನು ಒಂದು ದಿನ ಅದು ತಲುಪುತ್ತದೆ ಅಂತ ಶೆಣೈ ಅಂದೇ ಹೇಳಿದ್ದರು. ಆದರೆ ಅಲ್ಲಿಯವರೆಗೆ ಸ್ಥಿತಿ ಬಾರದಂತೆ ನೋಡಿಕೊಂಡದ್ದು ಮತ್ತು ಅವಧಿಯಲ್ಲಿ ಅರ್ಥವ್ಯವಸ್ಥೆಗೊಂದು ಭದ್ರ ಬುನಾದಿಯನ್ನು ಹಾಕಿದಷ್ಟರ ಮಟ್ಟಿಗೆ ಮೊದಲ ಮಾದರಿಗೊಂದು ಪ್ರಾಶಸ್ತ್ಯ ಇದೆ. ಇನ್ಯಾವುದೋ ಮಾರ್ಗ ಹಿಡಿದಿದ್ದರೆ, ಇನ್ನಷ್ಟು ಶ್ರೀಘ್ರ ಇನ್ನಷ್ಟು ಬೆಳೆಯಬಹುದಿತ್ತು ಎನ್ನುವುದು ಕೇವಲ ತರ್ಕದ ಮಾತು ಪ್ರಾಮಾಣಿಕರಿಸಲಾಗದ ಪ್ರಮೇಯ.

ನೆಹರುವಿಯನ್ ಸೊಷಿಯಲಿಸಮ್ ಅಂತ ಕಾಲದಲ್ಲಿ ಒಂಥರಾ ಅವಜ್ಞೆಯಿಂದ ಗುರುತಿಸಲ್ಪಡುವ ಮೊದಲ ಹಂತದಲ್ಲಿ ಸಮಾಜವಾದದ ಇನ್ನೊಂದು ಮುಖವಾದ ಸಂಪತ್ತಿನ ಮರುಹಂಚಿಕೆ ಅಥವಾ ಬಡತನೋದ್ಧಾರ ದೊಡ್ಡ ಮಟ್ಟಿಗೆ ನಡೆಯಲಿಲ್ಲ. ಯಾಕೆಂದರೆ, ಹಂಚಲು ಆಗ ಸಂಪತ್ತೇ ಇರಲಿಲ್ಲ. ಬ್ರಿಟಿಷರು ಎಲ್ಲವನ್ನೂ ಬಾಚಿ ಹೋಗಿದ್ದರು. ಕೈಗಾರೀಕರಣವನ್ನು ಶೂನ್ಯ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು. ದೊಡ್ಡ ಮರುಹಂಚಿಕೆ ಅಂತ ಕಾಲದಲ್ಲಿ ಆಗಿದ್ದರೆ ಅದು ಭೂಸುಧಾರಣೆ ಮಾತ್ರ. ಅದೂ ಬೇರೆ ಬೇರೆ ಕಾರಣಕ್ಕೆ ಅಪೂರ್ಣವಾಗಿಯೇ ಉಳಿಯಿತಾದರೂ, ಸಂಪತ್ತಿನ ಮರುಹಂಚಿಕೆಯ ಉದ್ದೇಶದಿಂದ ಕಾಲದಲ್ಲಿ ನಡೆದ ಒಂದು ಪ್ರಯತ್ನವಾಗಿಯಾದರೂ ಕಾಣಿಸುವುದು ಅದು ಮಾತ್ರ.

ನೆಹರೂವಿಯನ್ ಸೊಷಿಯಲಿಸಮ್ ಮತ್ತಷ್ಟೂ ಎಡಕ್ಕೆ ತಿರುಗಿದ್ದು ಇಂದಿರಾ ಗಾಂಧಿಯವರ ಕಾಲದಲ್ಲಿ. ಅಷ್ಟೊತ್ತಿಗೆ ಕಾಂಗ್ರೆಸ್ ಇಬ್ಭಾಗವಾಗಿತ್ತು. ಇಂದಿರಾ ಗಾಂಧಿ ಬಣಕ್ಕೆ ಹೊಸ ಜನಸಮುದಾಯದ ಬೆಂಬಲ ಬೇಕಿತ್ತು. ಇಂದಿರಾ ಗಾಂಧೀ ಸಮುದಾಯವನ್ನು ದೇಶದ ಬಡಜನರಲ್ಲಿ ಕಂಡರು. ಇಡೀ ಅರ್ಥವ್ಯವಸ್ಥೆಯನ್ನು ಅವರತ್ತ ವಾಲಿಸಿದರು. ರಾಷ್ಟ್ರೀಕರಣದ ಪರ್ವ ಪ್ರಾಂಭವಾಯಿತು. ಖಾಸಗಿ ರಂಗದ ಮೇಲಿನ ವಿಶ್ವಾಸ ಕುಸಿಯಿತು. ನಿರ್ಬಂಧಗಳು ಮತ್ತಷ್ಟೂ ಬಿಗಿಯಾದವು. ಬಡವರತ್ತ ದೇಶದ ಸಂಪತ್ತು ಮುಖಮಾಡಬೇಕೆಂದು ಆಶಿಸಿದ್ದರಲ್ಲಿ ತಪ್ಪೇನು ಇರಲಿಲ್ಲ. ಆದರೆ ಅಲ್ಲೊಂದು ಸಮಸ್ಯೆ ಇತ್ತು. ಮರುಹಂಚಿಕೆಗೆ ಬೇಕಾದಾಗುವಷ್ಟು ಸಂಪತ್ತು ಆಗಲೂ ದೇಶದಲ್ಲಿ ಸೃಷ್ಟಿಯಾಗಿರಲಿಲ್ಲ. ಇಲ್ಲದ ಸಂಪತ್ತನ್ನು ಮರು ಹಂಚಿಕೆ ಮಾಡಲು ಹೊರಟ ಕಾರಣ ಮತ್ತು ಅದಕ್ಕೆ ಪೂರಕವಾಗಿ ಖಾಸಗಿ ರಂಗವನ್ನು ಇನ್ನಷ್ಟೂ ಅದುಮಿ ಹಿಡಿದ ಕಾರಣ ಆಗತಾನೆ ಚಿಗುತುಕೊಳ್ಳುತಿದ್ದ ಸಂಪತ್ತಿನ ಸೃಷ್ಟಿಯ ಮೊಳಕೆಗಳೆಲ್ಲಾ ಕಮರಿದವು. ದೇಶದ ಆರ್ಥಿಕ ಚರಿತ್ರೆಯಲ್ಲೇ ಬೆಳವಣಿಗೆಯ ದರ ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲಾಯಿತು. ನಂತರದ್ದು ವರ್ಣರಂಜಿತ ಇತಿಹಾಸ. ವ್ಯಾಪಕ ಅಸಮಾಧಾನ. ಪ್ರತಿಭಟನೆ. ತುರ್ತುಪರಿಸ್ಥಿತಿ. ಇಂದಿರಾ ಗಾಂಧಿಯವರಿಗೆ ಸೋಲು. ಮೊತ್ತ ಮೊದಲ ಕಾಂಗ್ರೆಸ್ಸೇತರ ಸರಕಾರ. ರಾಜಕೀಯ ಅಸ್ಥಿರತೆ.

ಮತ್ತೆ ಎಲ್ಲವೂ ತಿಳಿಯಾಗಿ, ಮರಳಿ 1980ರಲ್ಲಿ ಅಧಿಕಾರ ಹಿಡಿದ ಇಂದಿರಾ ಗಾಂಧಿ ಸರಕಾರ ಅದಾಗಲೇ ಹಳೆಯ ತಪ್ಪುಗಳನ್ನು ಅರಿತಿತ್ತು. ಇನ್ನೊಂದು ದಶಕದ ನಂತರ ಬರಲಿದ್ದ ಆರ್ಥಿಕ ಉದಾರೀಕರಣಕ್ಕೆ ಭಾರತೀಯ ಆರ್ಥಿಕತೆಯನ್ನು ಹದಗೊಳಿಸುವ ಕೆಲಸ ಪ್ರಾರಂಭವಾಗಿಯೇ ಬಿಟ್ಟಿತ್ತು. ನಾಲ್ಕುವರ್ಷಗಳ ನಂತರ ಆಕಸ್ಮಿಕವಾಗಿ ಅಧಿಕಾರ ವಹಿಸಿಕೊಂಡ ರಾಜೀವ್ ಗಾಂಧಿ ಉದಾರೀಕರಣದ ಮೊದಲ ಬೀಜಗಳನ್ನು ಬಿತ್ತಿದರು. ಅಷ್ಟೇ ಆಕಸ್ಮಿಕವಾಗಿ ಆರು ವರ್ಷಗಳ ನಂತರ ಅಧಿಕಾರ ವಹಿಸಿಕೊಂಡ ಪಿ.ವಿ.ನರಸಿಂಹರಾವ್ ಉದಾರೀಕರಣ ನೀತಿಗಳ ಪೂರ್ಣಾವಧಿ ವ್ಯವಸಾಯವನ್ನು ಉದ್ಘಾಟಿಸಿಯೇ ಬಿಟ್ಟರು.

ಅದಾಗಿ ಮೂವತ್ತು ವರ್ಷಗಳಾಗುತ್ತಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಮೂರು ದಶಕಗಳಲ್ಲಿ ಭಾರತದ ಸಂಪತ್ತು ಹೆಚ್ಚಿದೆ. ಇತ್ತೀಚೆಗಿನ ವರದಿ ಪ್ರಕಾರ ಭಾರತ ವಿಶ್ವದ ಏಳನೆಯ ಅತೀ ದೊಡ್ಡ ಅರ್ಥ ವ್ಯವಸ್ಥೆ. ಇನ್ನೊಂದು ರೀತಿಯಲ್ಲಿ ಲೆಕ್ಕಹಾಕಿದರೆ ಮೂರನೆಯ ಅತೀ ದೊಡ್ಡ ಅರ್ಥ ವ್ಯವಸ್ಥೆ. ಭಾರತ ಪ್ರಪಂಚದಲ್ಲಿ ಅತೀ ಹೆಚ್ಚು ಬೆಳವಣಿಗೆಯ ದರ ದಾಖಲಿಸುತ್ತಿರುವ ದೇಶ. ಕೊರೋನಾ ಸ್ಥಿತ್ಯಂತರಗಳಿಂದಾಗಿ ಭಾರತದ ಅಭಿವೃದ್ಧಿ ದರ ಪಕ್ಕದ ಬಾಂಗ್ಲಾದೇಶದ ದರಕ್ಕಿಂತಲೂ ಸದ್ಯಕ್ಕೆ ಕುಸಿದಿದೆ ಎನ್ನುವ ಅಂಶವನ್ನು ಸ್ವಲ್ಪ ಬದಿಗಿರಿಸಿ ನೋಡಿದರೆ ಕೆಲವೇ ವರ್ಷಗಳಲ್ಲಿ ದರ ಚೀನಾದ ದರವನ್ನು ಮೀರಿಸಲಿದೆ ಎನ್ನುವ ಲೆಕ್ಕಾಚಾರವಿದೆ. ಚೀನಾದ ಅರ್ಥವ್ಯವಸ್ಥೆ ನಿಶ್ಚಲತೆ (sಣಚಿgಟಿಚಿಣಟಿ) ಹಂತಕ್ಕೆ ಬಂದು ನಿಂತಿದೆ. ಭಾರತದ ಅರ್ಥವ್ಯವಸ್ಥೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕಂಡ ಕುಸಿತದ ಹೊರತಾಗಿಯೂ ಮೈಕೊಡವಿ ಎದ್ದು ನಿಲ್ಲುವ ಹಂತದಲ್ಲಿ ಇದೆ.

ಸಂಪತ್ತು ಹೊಸದಾಗಿ ಎಲ್ಲಿ ಸೃಷ್ಟಿಯಾಯಿತು, ಯಾರಿಗೆ ಸೃಷ್ಟಿ ಆಯಿತು ಮುಂತಾದ ಸಮಾನತೆಯ ಕುರಿತಾದ ಪ್ರಶ್ನೆಗಳನ್ನು ನಾವು ಕೇಳಬಹುದು. ಹಾಗೆಯೇ ಬಡತನ ಎಲ್ಲಿ ಇಳಿಯಿತು, ಯಾವ ಆಯಾಮದಲ್ಲಿ ಇಳಿಯಿತು ಎಂಬಿತ್ಯಾದಿ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎತ್ತಬಹುದು. ದೇಶದಲ್ಲಿ ಕೇವಲ ಶೇಕಡಾ 20ರಷ್ಟು ಜನ ಮಾತ್ರ ಬಡವರಾಗಿ ಉಳಿದಿದ್ದಾರೆ ಎನ್ನುವ ಅಧಿಕೃತ ಹೇಳಿಕೆಗಳನ್ನು ಒಪ್ಪಿಕೊಂಡರೂ ಈಗ ಸುಮಾರು 21 ಕೋಟಿ ಬಡವರಿದ್ದಾರೆ ಮತ್ತು ಅದು 1950ರಲ್ಲಿ ಇದ್ದ ಬಡವರ ಸಂಖ್ಯೆಗೆ ಸಮಾನವಾಯಿತು ಎಂದು ವಾದಿಸಬಹುದು. ಬಡತನ ಇಳಿಯುತಿದ್ದರೆ ಬಡತನದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಯಾಕೆ ಹೆಚ್ಚುತ್ತಿದೆ ಎಂದೂ ಕೇಳಬಹುದು. ಎಲ್ಲಾ ವಾದಗಳಿಗೆ ಅವಕಾಶ ಇದೆ ಎನ್ನುವುದನ್ನು ಒಪ್ಪಿಕೊಂಡ ನಂತರವೂ ಉದಾರೀಕರಣೋತ್ತರ ಭಾರತದಲ್ಲಿ ಒಂದು ಹೊಸ ಶ್ರೀಮಂತಿಕೆ ಹುಟ್ಟಿಕೊಂಡು ಬೆಳೆದು ನಿಂತಿದೆ ಎನ್ನುವ ಸತ್ಯವನ್ನು ನಿರಾಕರಿಸುವಂತಿಲ್ಲ.

ಹಾಗಾಗಿ 1991ರಿಂದೀಚೆಗೆ ಭಾರತ ಒಂದು ಹೊಸ ಶ್ರೀಮಂತಿಕೆ ಮತ್ತು ಅದೇ ಹಳೆಯ ಬಡತನ ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದೆ. ಬಡತನವನ್ನು ಭಾರತೀಯರಷ್ಟು ಪ್ರಬುದ್ಧವಾಗಿ, ಭಾರತೀಯರಷ್ಟು ಸಹನಶೀಲರಾಗಿ ನಿಭಾಯಿಸಿದ ಇನ್ನೊಂದು ಸಮಾಜ ಬಹುಶಃ ಇರಲಾರದು. ಆದರೆ ಹೊಸ ಶ್ರೀಮಂತಿಕೆಯ ವಿಷಯದಲ್ಲಿ ಹೀಗೆಲ್ಲಾ ಹೇಳಲು ಸಾಧ್ಯವಿಲ್ಲ. ಅದು ದಿಢೀರ್ ಆಗಿ ಬಂದದ್ದು. ಅದಕ್ಕೆ ಭಾರತದ ಮಣ್ಣು ಮತ್ತು ಭಾರತದ ಮನಸ್ಸು ಇನ್ನೂ ಹದವಾದಂತೆ ಕಾಣುವುದಿಲ್ಲ.

ಹೊಸ ಅರ್ಥ ನೀತಿ ಒಂದಷ್ಟು ಮಂದಿಗೆ ನ್ಯಾಯಯುತವಾದ ರೀತಿಯಲ್ಲಿ ಸಂಪತ್ತು ಗಳಿಸಲು ಅನುವು ಮಾಡಿಕೊಟ್ಟಿತು. ಅಷ್ಟೇ ಮಂದಿಗೆ ವಾಮ ಮಾರ್ಗದಲ್ಲಿ ಅದನ್ನು ಸಂಪಾದಿಸುವುದಕ್ಕೂ ದಾರಿ ಮಾಡಿಕೊಟ್ಟಿತು. ಹೊಸ ಅರ್ಥ ನೀತಿಯ ಜತೆಗೆ ಕಾಣಿಸಿಕೊಂಡ ಆರ್ಥಿಕ ಹಗರಣಗಳ ಪರ್ವ ಮುಂದುವರಿದಿದೆ. ಹೊಸ ಸಂಪತ್ತು ತರಹೇವಾರಿ ಕಾರುಗಳ ರೂಪದಲ್ಲಿ ರಸ್ತೆಗಿಳಿದಾಗ ಅಲ್ಲಿದ್ದದ್ದು ಹದಿನೆಂಟನೆಯ ಶತಮಾನದ ಮಟ್ಟದ ರಸ್ತೆಗಳು. ಹೊಸ ತೆಲೆಮಾರಿನ ಕಾರುಗಳು ಹಳೆತಲೆಮಾರಿನ ರಸ್ತೆಗಳೊಂದಿಗೆ ನಡೆಸುತ್ತಿರುವ ಸರಸವಿರಸದಾಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಇದ್ದ ಸ್ಥಳವೂ ಇಲ್ಲದಾಯಿತು. ಹೊಸ ಸಂಪತ್ತಿನಿಂದಾಗಿ ಭಾರತೀಯರೇ ಭಾರತೀಯ ಭೂಮಿಯ ಮೇಲೆ ಹೊಸ ಸಾಮ್ರಾಜ್ಯಶಾಹಿಗಳಾದರು. ಭೂಮಿಯ ಬೆಲೆ ಹೆಚ್ಚಿತು. ಭೂಮಿ ಬಡವರಿಂದ, ಕೃಷಿಯಿಂದ, ಹಸಿರಿನಿಂದ ದೂರಾಗತೊಡಗಿತು. ಭೂಮಿಯ ಒಡೆತನಕ್ಕೆ ಬಡವರಿಗೆ ಭದ್ರತೆ ಎಂಬುದೇ ಇಲ್ಲದ ಸ್ಥಿತಿ ಬಂತು.

ಉದಾರೀಕರಣೋತ್ತರ ಭಾರತದ ಬಡತನವನ್ನು ಕೂಡಾ ಹಿಂದಿನ ಬಡತನಕ್ಕಿಂತ ಭಿನ್ನವಾಗಿ ನೋಡಬೇಕಾಗುತ್ತದೆ. ಯಾಕೆಂದರೆ. ಬಡತನದ ಬಗ್ಗೆ ಭಾರತೀಯ ಮನಸ್ಸುಗಳು ಶತಶತಮಾನಗಳಿಂದ ಬೆಳೆಸಿಕೊಂಡು ಬಂದಿರುವ ಒಂದು ಸಹನೀಯ ಸಂಬಂಧ ಉದಾರೀಕರಣೋತ್ತರ ಭಾರತದಲ್ಲಿ ಶಿಥಿಲವಾಗುತ್ತಾ ಇದೆ. ಬಹುಶಃ ಬಡವರ ಬದುಕಿನ ಸುತ್ತಮುತ್ತ ಆವರಿಸಿರುವ ಹೊಸ ಸಿರಿವಂತಿಕೆ, ಅದು ಸೃಷ್ಟಿಸಿದ ಜೀವನಶೈಲಿ, ಶ್ರಮ ಮತ್ತು ವಿರಾಮದ ಬಗ್ಗೆ ಅದು ಹುಟ್ಟುಹಾಕಿರುವ ಹೊಸ ದೃಷ್ಟಿಕೋನ ಇತ್ಯಾದಿಗಳೆಲ್ಲವೂ ಇನ್ನೂ ಬಡವರಾಗಿಯೇ ಉಳಿದುಕೊಂಡವರ ಬದುಕನ್ನು ಹೆಚ್ಚು ದುರ್ಬರಗೊಳಿಸುತ್ತಿದೆ. ಹಲವಾರು ರೈತರ ಆತ್ಮಹತ್ಯೆಯ ಪ್ರಕರಣದ ಆಳಕ್ಕಿಳಿದು ನಡೆಸಿದ ಅಧ್ಯಯನಗಳ ಪ್ರಕಾರ ರೈತರಿಗೆ ಬದುಕಿನಲ್ಲಿ ಬೇಸರ ಮೂಡಿಸುತ್ತಿರುವುದು ಒಕ್ಕಲುತನ ಹೇರುವ ಬಡತನಕ್ಕಿಂತ ಹೆಚ್ಚಾಗಿ ಸುತ್ತಲ ಪರಿಸರದಲ್ಲಿ ಹೆಚ್ಚುತ್ತಿರುವ ಹೊಸ ಸಿರಿತನ. ಅದನ್ನು ಆಶಿಸಿ ಅಥವಾ ಅನುಕರಿಸಿ ಸೋತ ಕಾರಣಕ್ಕೆ ಸಾವಿಗೆ ಶರಣಾದ ರೈತರ ಕತೆ ಅಧಿಕೃತ ಕಡತಗಳಲ್ಲಿ ದುಂದುವೆಚ್ಚದ, ಕುಡಿತದ ಪ್ರಕರಣಗಳಾಗಿ ದಾಖಲಾಗಿಬಿಡುತ್ತವೆ.

ಶ್ರೀಮಂತಿಕೆಯ ವಿಜೃಂಭಣೆ ಮತ್ತು ಬಡತನದ ನಿರಾಕರಣೆ ಉದಾರೀಕರಣೋತ್ತರ ಭಾರತದ ಚರಿತ್ರೆಯಲ್ಲಿ ಎದ್ದು ಕಾಣುವ ಅಂಶ. ವಿಜೃಂಭಣೆ ಮತ್ತು ನಿರಾಕರಣೆ ತುರೀಯ ಹಂತವನ್ನು ತಲುಪಿದ್ದು 2014ರಿಂದೀಚೆಗೆ. ನಂತರ ಬಡತನದ ಬಗ್ಗೆ ಹೇಳಿದರೆ ಅದು ಆಳುವ ನಾಯಕತ್ವದ ಅಣಕವಾಗಬಹುದು ಅಂತಲೂ, ಶ್ರೀಮಂತಿಕೆಯ ಬಗ್ಗೆ ಹೇಳಿದೇ ಉಳಿದರೆ ಆಳುವ ನಾಯಕತ್ವದ ಸಾಧನೆಯ ವಿರುದ್ಧ ಪಕ್ಷಪಾತೀ ನಿಲುವು ತಳೆದಂತಾಗಬಹುದು ಎಂಬ ಹೊಸ ಸಾರ್ವಜನಿಕ ನಿಲುವೊಂದು ಹಾಗೆ ಬೇರುಬಿಟ್ಟಿತು. ಅದು ಎಷ್ಟರ ಮಟ್ಟಿಗೆ ಸಾಂಸ್ಥಿಕರಣಗೊಂಡುಬಿಟ್ಟಿತು ಎಂದರೆ ಸರಕಾರ ಅಧಿಕೃತ ಅಂಕಿ ಅಂಶಗಳನ್ನೇ ತಿರುಚಲುತೊಡಗಿತು, ತಿರುಚಲು ಸಾಧ್ಯವಾಗದೆ ಹೋದ ಅಂಕಿ ಅಂಶಗಳನ್ನು ಅಡಗಿಸಿಡತೊಡಗಿತು.

1991 ಆರ್ಥಿಕ ಸುಧಾರಣೆಯ ಪರ್ವ ಪ್ರಾರಂಭವಾದ ನಂತರ ಕೇಂದ್ರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಸರಕಾರಗಳು ಉದ್ಯಮಗಳನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಉದ್ಯಮಿಗಳ ಮುಂದೆ ಮಂಡಿಯೂರಿ ಕುಳಿತು ಬೇಡುತ್ತಿವೆ. ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಜಾಗತಿಕ ಹೂಡಿಕೆದಾರರ ಸಮಾವೇಶಗಳನ್ನು ರಾಜ್ಯ ಸರಕಾರಗಳು ಸ್ಪರ್ಧೆಗೆ ಬಿದ್ದವರಂತೆ ಗೌಜಿಗದ್ದಲ ಸಹಿತ ನಡೆಸುತ್ತವೆ. ಸರಕಾರಗಳು ಉದ್ಯಮಗಳನ್ನು ಆಕರ್ಷಿಸಲು ಮುಗಿಬೀಳುತ್ತಿರುವುದು ಹೇಗಿದೆ ಅಂದರೆ ಒಂಥರಾ ಬೀದಿ ಬದಿಯ ವ್ಯಾಪಾರಿಗಳು ಗಿರಾಕಿಗಳನ್ನು ನಮ್ಮ ನಮ್ಮ ಬಳಿ ಬನ್ನಿ ಎಂದು ಕೂಗಿ ಕರೆಯುವಂತೆ ಇದೆ. ಹೀಗೆ ಚುನಾಯಿತ ಸರಕಾರಗಳು ಮಾರಾಟಗಾರರ ಪಾತ್ರ ನಿರ್ವಹಿಸಬೇಕಾಗಿ ಬಂದದ್ದು ಸರಕಾರೀ ವ್ಯವಸ್ಥೆ ಕಂಡ ಚಾರಿತ್ರಿಕ ಪಲ್ಲಟಗಳಲ್ಲಿ ಒಂದು.

ಒಂದೆಡೆ ಸರ್ಕಾರಗಳು ಉದ್ಯಮಗಳನ್ನು ಮತ್ತು ಬಂಡವಾಳವನ್ನು ಆಕರ್ಷಿಸಲು ಇಷ್ಟೆಲ್ಲಾ ಕಸರತ್ತು ನಡೆಸುತ್ತಿರುವಾಗಲೇ ಇನ್ನೊಂದೆಡೆ ಯಥಾಪ್ರಕಾರ ಉದ್ಯಮಗಳು ಮತ್ತು ಉದ್ಯಮಶೀಲತೆ ತರಹೇವಾರಿ ನಿರ್ಬಂಧಗಳ ನಡುವೆ ಸಿಲುಕಿ ನಲುಗುತ್ತಲೇ ಉಳಿದದ್ದು, ಒಂದೆಡೆ ಸರ್ಕಾರಗಳು ಹೊಸ ಹೂಡಿಕೆದಾರರಿಗೆ ಕೆಂಪು ಹಾಸು ಹಾಸುತ್ತಾ ಇರುವಾಗಲೇ ಇನ್ನೊಂದೆಡೆ ಅದೇ ವ್ಯವಸ್ಥೆ ತನ್ನ ಪಾಳೆಗಾರಿಕೆ ಮನೋಭಾವದ ಕಟ್ಟಳೆಗಳಲ್ಲಿ ಉದ್ಯಮಗಳನ್ನು ಪೀಡಿಸುತ್ತಲೇ ಉಳಿದದ್ದು ಸಮಕಾಲೀನ ಭಾರತದ ವ್ಯಂಗ್ಯಗಳಲ್ಲಿ ಒಂದು.

ಸರಕಾರಗಳನ್ನೇ ಖರೀದಿಸಬಲ್ಲ ದೊಡ್ಡ ದೊಡ್ಡ ಉದ್ಯಮಗಳು ನಿರ್ಬಂಧಗಳನ್ನು ಕಾಲಿನಡಿ ಕೊಡವಿ ತಮ್ಮ ಹಾದಿಯನ್ನು ತಾವೇ ನಿರ್ಮಿಸಿ ಮುಂದುವರಿದರೆ ಸಾಮಾನ್ಯ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳನ್ನು ವ್ಯವಸ್ಥೆ ಹಿಂಡಿ ಹಿಪ್ಪೆ ಮಾಡುತ್ತದೆ. ಬಹುಶಃ ಸ್ಥಳೀಯ ಸರಕಾರಗಳಿಂದ ಹಿಡಿದು ಕೇಂದ್ರ ಸರಕಾರದ ವರೆಗೆ ಎಲ್ಲಾ ಹಂತಗಳ ಅಧಿಕಾರಶಾಹಿಯ ಜತೆ ಸೆಣಸಬೇಕಾಗಿರುವುದು ಉದ್ಯಮ ರಂಗದಲ್ಲಿ ಇರುವವರು ಮಾತ್ರ. ಎಲ್ಲಾ ಹಂತದ ಸರ್ಕಾರಗಳು ತಮ್ಮ ಚಾಳಿ ಮತ್ತು ಶೈಲಿಗಳನ್ನು ಬದಲಿಸುವ ತನಕ ವ್ಯವಸ್ಥೆ ಉದ್ಯಮಸ್ನೇಹಿ ಆಗಲು ಸಾಧ್ಯವಿಲ್ಲ. ದೊಡ್ಡ ಉದ್ಯಮಗಳಿಗೆ ಲಾಬಿಗಳಿರುತ್ತವೆ. ಅವುಗಳ ಪ್ರತಿನಿಧಿಗಳು ಅಧಿಕಾರ ಸೌಧದ ಎಂತೆಂತಹ ನಿರ್ಬಂಧಿತ ಪ್ರದೇಶಗಳಿಗೂ ಮುಕ್ತ ರಹದಾರಿ ಹೊಂದಿರುತ್ತಾರೆ. ಸಣ್ಣಮಧ್ಯಮ ಉದ್ಯಮಗಳು ಸರಕಾರೀ ಮಂದಿಯಿಂದ ಹಿಡಿದು, ಸ್ಥಳೀಯ ಪುಡಾರಿಗಳಿಂದ ಹಿಡಿದು, ಪೆಲೀಸರ ತನಕ ಎಲ್ಲರೊಂದಿಗೂ ಸೆಣಸಿ ಸೆಣಸಿ ವ್ಯವಹಾರ ನಡೆಸಬೇಕಿದೆ.

ಭಾರತದ ಉದ್ಯಮ ಜಗತ್ತು ಯಾವತ್ತೂ ಸರಕಾರದ ಕುರಿತು ದೊಡ್ಡ ಧ್ವನಿಯಲ್ಲಿ ದೂರುವುದಿಲ್ಲ. ಸರಕಾರೀ ವ್ಯವಸ್ಥೆ ಸೃಷ್ಟಿಸುವ ಕಷ್ಟಗಳ ವಿರುದ್ಧ ಸೆಣಸುವುದಕ್ಕಿಂತ ಅವುಗಳ ಜತೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಕಡಿಮೆ ನಷ್ಟ ಎನ್ನುವ ಭಾರತೀಯ ಸತ್ಯವನ್ನು ಅದು ತಲೆತಲೆ ಮಾರುಗಳಿಂದ ಅರ್ಥೈಸಿಕೊಂಡಿದೆ. ಭಾರತದಲ್ಲಿ ದಿನನಿತ್ಯದ ಆಡಳಿತ ನಡೆಯುವುದು ಅದರ ಲಿಖಿತ ಸಂವಿಧಾನದ ಆಧಾರದಲ್ಲಿ ಅಲ್ಲ. ಅದು ನಡೆಯುವುದು ಇಂತಹ ಲಕ್ಷ ಲಕ್ಷ ವಿವಿಧ ಹಿತಾಸಕ್ತಿಗಳ ನಡುವಣ ಒಪ್ಪಂದದ ಮೂಲಕ. ಬದಲಾದಷ್ಟೂ ಬದಲಾಗದೆ ಉಳಿಯುವ, ಉದ್ಯಮ ಸ್ನೇಹಿಯಾಗಲು ಪ್ರಯತ್ನಿಸುತ್ತಲೇ ಉದ್ಯಮ ವಿರೋಧಿಯಾಗಿಯೇ ಉಳಿಯುವ ಭಾರತದ ಸರಕಾರೀ ವ್ಯವಸ್ಥೆಯ ಮಧ್ಯೆ ಬೆಳೆದ ಆರ್ಥಿಕ ವ್ಯವಸ್ಥೆಯ ಪ್ರಾಮಾಣಿಕತೆಯ ಬಗ್ಗೆ ಮಾತ್ರ ಯಾರೂ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.