ಅಲಾಸ್ಕಾದಲ್ಲಿ ಕರಗುತ್ತಿರುವ ಮಂಜು ಜಗತ್ತಿಗೆ ಎಚ್ಚರಿಕೆಯ ಗಂಟೆ

ಉತ್ತರ ಅಮೆರಿಕಾದ ಗಡಿನಾಡಾಗಿರುವ ಅಲಾಸ್ಕಾ ವಿಷಮಸ್ಥಿತಿಯಲ್ಲಿರುವ ಜಾಗತಿಕ ತಾಪಮಾನದ ಅಸ್ಥಿರ ಚಿಹ್ನೆಗಳಿಗೆ ಸೂಚನೆಯಾಗಿದೆ.

ಇತ್ತೀಚೆಗಿನ ಅಲಾಸ್ಕಾದ ಬೇಸಿಗೆಗಳು ಹಿಂದಿನ ಬೇಸಿಗೆಗಳ ಹಾಗಿಲ್ಲ. ಅಲ್ಲೀಗ ಬೇಸಿಗೆಯಲ್ಲಿ ಹೊಗೆಯಿಂದ ಮಸುಕಾದ ಆಕಾಶವನ್ನು ಹಾಗೂ ತೊಟ್ಟಿಕ್ಕುತ್ತಿರುವ ಹಿಮನದಿಗಳನ್ನು ನೋಡಬಹುದು. ಸತ್ತ ಸಲ್ಮನ್ ಮೀನುಗಳು ಹಾಗೂ ಹೊರತೆಗೆದ ವಾಲ್‍ರಸ್‍ಗಳನ್ನು ಕಾಣಬಹುದು. ವಿಜ್ಞಾನಿಗಳಿಗೆ ಈ ಬದಲಾವಣೆಗಳಿಗಿಂತ ಕಣ್ಣಿಗೆ ಕಾಣದ ಜಗತ್ತಿನ ಅಪಾಯ ಸ್ಥಿತಿಗೆ ಮುನ್ಸೂಚನೆ ನೀಡುವ ಇನ್ನೂ ಹಲವು ಬದಲಾವಣೆಗಳು ಅಲಾಸ್ಕಾದಲ್ಲಾಗುತ್ತಿರಬಹುದೆಂಬ ಚಿಂತೆಯಿದೆ. ವಿಷಪೂರಿತ ಪಾಚಿ ಹೂವುಗಳಿಂದ ಹಿಡಿದು ಉತ್ತರಕ್ಕೆ ಹೊಸ ರೋಗಗಳನ್ನು ತರುವ ಕೀಟಗಳು ಕೆಲವು ಉದಾಹರಣೆಗಳಷ್ಠೆ.

ಈ ಬೇಸಿಗೆಯಲ್ಲಿ ಅಲಾಸ್ಕಾದ ದಕ್ಷಿಣ ಭಾಗದಲ್ಲಿ ಆವರಿಸಿಕೊಂಡಿದ್ದ ಬಿಸಿ-ಒಣ ಗಾಳಿಯ ಗೋಪುರ ನಿಗದಿತ ಸಮಯದಲ್ಲಿ ಕರಗಲು ನಿರಾಕರಿಸಿತು. ಕೆನಾಯಿ ಪರ್ಯಾಯ ದ್ವೀಪದಲ್ಲಿ ಸಿಡಿಲು ಬಡಿದಾಗ ಎಂತಹ ಕಾಡ್ಗಿಚ್ಚು ಉದ್ಭವಿಸಿತ್ತೆಂದರೆ ಅಂತಹದೊಂದು ಕಾಡ್ಗಿಚ್ಚು ಅಲ್ಲಿನ ನಿವಾಸಿಗಳ ಸ್ಮೃತಿಪಟಲದಲ್ಲಿರಲಿಲ್ಲ. ಅಲಾಸ್ಕಾದ ಬೆಂಕಿ ಋತು ಸಾಮಾನ್ಯವಾಗಿ ಆಗಸ್ಟ್ 1 ರಂದು ಕೊನೆಯಾಗುತ್ತದೆ. ಆದರೆ ಈ ಬಾರಿ ಸ್ವಾನ್ ಸರೋವರದಲ್ಲಿ ಬೆಂಕಿ ಇನ್ನೂ ಉರಿಯುತ್ತಿದ್ದು ಕೇವಲ ಶೇಕಡ 37ರಷ್ಟನ್ನು ಮಾತ್ರ ನಂದಿಸಲಾಗಿದೆ.

ಆರ್ಥಿಕ ವ್ಯವಸ್ಥೆಗೆ ಮುಖ್ಯವಾಗಿರುವ ಮೀನುಗಳ ಉತ್ಪತ್ತಿ ಕಡಿಮೆಯಾಗುತ್ತಿದೆ. ಅಲಾಸ್ಕಾದಲ್ಲಿನ ಹೊಳೆಗಳು ಬೆಚ್ಚಗಾಗುತ್ತಿದ್ದು ಅವು ಮೀನುಗಳ ಸಂತಾನಾಭಿವೃದ್ಧಿಗೆ ಅನುಕೂಲಕರವಾಗಿಲ್ಲ.

ಹಲವಾರು ಹಿಮನದಿಗಳು ತಮ್ಮ ಗಾತ್ರಗಳ ಅರ್ಧದಷ್ಟು ಕಡಿಮೆಯಾಗಿವೆ. ಪ್ರತಿಯೊಂದು ಹನಿಯು ಸಾಗರದೆಡೆಗೆ ಸಾಗುತ್ತದೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರಕಾರ ಅಲಾಸ್ಕಾದಲ್ಲಿ ಕರಗುತ್ತಿರುವ ಹಿಮನದಿಗಳು ಗ್ರೀನ್‍ಲ್ಯಾಂಡ್ ಅಥವಾ ಅಂಟಾರ್ಟಿಕಕ್ಕಿಂತ ಹೆಚ್ಚಾಗಿ ಸಮುದ್ರ ಮಟ್ಟ ಹೆಚ್ಚಾಗಲು ಕಾರಣವಾಗುತ್ತಿವೆ. ಅಲ್ಲಿನ ಆರ್ಥಿಕ ವ್ಯವಸ್ಥೆಗೆ ಮುಖ್ಯವಾಗಿರುವ ಮೀನುಗಳ ಉತ್ಪತ್ತಿ ಕಡಿಮೆಯಾಗುತ್ತಿದೆ. ಅಲಾಸ್ಕಾದಲ್ಲಿನ ಹೊಳೆಗಳು ಬೆಚ್ಚಗಾಗುತ್ತಿದ್ದು ಅವು ಮೀನುಗಳ ಸಂತಾನಾಭಿವೃದ್ಧಿಗೆ ಅನುಕೂಲಕರವಾಗಿಲ್ಲ.

ಆತಂಕದ ಸಂಗತಿಯೆಂದರೆ ಅಲಾಸ್ಕಾದಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿ ತಾಪಮಾನ ಹೆಚ್ಚಾಗುತ್ತಿದೆ. ಅಲ್ಲಿ ಸರ್ಕಾರೇತರ ಸಂಸ್ಥೆಯೊಂದರ ವಿಜ್ಞಾನ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಸೂ ಮೌಗರ್ ಎಂಬಾಕೆ ಕಳೆದ ಎರಡು ದಶಕಗಳಿಂದ ಹೊಳೆಗಳಲ್ಲಿನ ತಾಪಮಾನ ಅಳೆಯುತ್ತಿದ್ದಾರೆ. ಆಕೆ ಹೇಳುತ್ತಾರೆ, ‘ಈ ಬಾರಿ ನಾವು ನೋಡಿದ ಉಷ್ಣಾಂಶ ನಾವು 2069 ರಲ್ಲಿ ಸಂಭವಿಸುವುದೆಂದು ನಿರೀಕ್ಷಿಸಿದ್ದೆವು. ನಾವು 50 ವರ್ಷ ಮುಂದಿದ್ದೇವೆ!’

ಸಿಹಿ ನೀರಿನಲ್ಲಿ ಮಾತ್ರ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿಲ್ಲ. ಅಲ್ಲಿ ಸಮುದ್ರದಲ್ಲಿನ ಜೀವಿಗಳ ಅಧ್ಯಯನ ಮಾಡುವ ಸಮುದ್ರಶಾಸ್ತ್ರಜ್ಞರಿಗೆ ಹಿಂದೆ ಅವರ ಕೆಲಸ ಮಾಡಲು ಐಸ್‍ಬ್ರೇಕರ್‍ಗಳು ಬೇಕಾಗುತ್ತಿತ್ತು. ಆದರೆ ಈ ಬಾರಿ ಅವರಿಗೆ ಹಿಮನದಿಗಳು ಕ್ಷೀಣಿಸಿ ನೀರು ಆವೃತ್ತವಾಗಿದ್ದರಿಂದ ಐಸ್‍ಬ್ರೇಕರ್‍ಗಳ ಅವಶ್ಯಕತೆಯಿರಲಿಲ್ಲ. ಸಾಗರದಲ್ಲಿನ ಉಷ್ಣಾಂಶ ಬದಲಾವಣೆ ಮಾದರಿಗಳಲ್ಲಿ ತೀವ್ರ ಬದಲಾವಣೆಗಳಾದರೆ ಅದು ಪ್ಲಾಂಕ್ಟನ್ ಜೀವ ಸಮೂಹಗಳ ಜೀವನಚಕ್ರದಲ್ಲಿ ಬದಲಾವಣೆಗೆ ಕಾರಣವಾಗಿ ಆಹಾರ ಸರಪಣಿಯ ಮೇಲೂ ಪ್ರಭಾವ ಬೀರುತ್ತದೆ.

ಲೋಯರ್ 48 ಪ್ರದೇಶಕ್ಕೆ ಪ್ರಯಾಣ ಮಾಡುವವರು ಜೊತೆಗೆ ನಾಯಿಯನ್ನು ಕರೆದುಕೊಂಡು ಹೋದರೆ, ಹಿಂತಿರುಗುವಾಗ ಉಣ್ಣೆ ಹುಳುಗಳನ್ನು ತಮ್ಮ ಜೊತೆಗೆ ತರುವ ಸಾಧ್ಯತೆಯುಂಟು. ಐತಿಹಾಸಿಕವಾಗಿ, ರಕ್ತ ಹೀರುವ, ಲೈಮ್ ರೋಗವನ್ನು ಹರಡುವ ಉಣ್ಣೆ ಹುಳುಗಳು ಅಲಾಸ್ಕಾದ ಹವಾಮಾನದಲ್ಲಿ ಬದುಕುಳಿಯುತ್ತಿರಲಿಲ್ಲ.

ತಾಪಮಾನ ಹೆಚ್ಚಾಗುತ್ತಿರುವ ಯು.ಎ.ಎಸ್. ನಲ್ಲಿ ಈಗ ಲೈಮ್ ರೋಗ ಹೆಚ್ಚಾಗಿದೆ. ಈ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಾಮಾನ್ಯವಾಗಿ ಕಪ್ಪು ಕಾಲುಗಳ ಉಣ್ಣೆ ಹುಳು ಹರಡುತ್ತದೆ (ಚಿಗಟ ಹಾಗೂ ಸೊಳ್ಳೆಗಳು ಸಹ ಹರಡುತ್ತವೆ). ಈಗ ಅಲಾಸ್ಕಾದಲ್ಲಿ ಲೈಮ್ ರೋಗ ಹರಡಬಹುದೆಂಬ ಭೀತಿಯಿದೆ. ಲೋಯರ್ 48 ಪ್ರದೇಶಕ್ಕೆ ಪ್ರಯಾಣ ಮಾಡುವವರು ಜೊತೆಗೆ ನಾಯಿಯನ್ನು ಕರೆದುಕೊಂಡು ಹೋದರೆ, ಹಿಂತಿರುಗುವಾಗ ಉಣ್ಣೆ ಹುಳುಗಳನ್ನು ತಮ್ಮ ಜೊತೆಗೆ ತರುವ ಸಾಧ್ಯತೆಯುಂಟು. ಐತಿಹಾಸಿಕವಾಗಿ, ರಕ್ತ ಹೀರುವ, ಲೈಮ್ ರೋಗವನ್ನು ಹರಡುವ ಉಣ್ಣೆ ಹುಳುಗಳು ಅಲಾಸ್ಕಾದ ಹವಾಮಾನದಲ್ಲಿ ಬದುಕುಳಿಯುತ್ತಿರಲಿಲ್ಲ. ಆದರೆ ಈಗ ತಾಪಮಾನ ಹೆಚ್ಚಾಗುತ್ತಿರುವುದರಿಂದ ಅವು ಬದುಕುಳಿಯುತ್ತವೆ ಹಾಗೂ ಅಲಾಸ್ಕಾದ ವನ್ಯಜೀವಿಗಳಲ್ಲಿ ಸೇರಿಕೊಳ್ಳುವ ಸಾಧ್ಯತೆಯುಂಟು.

ಇನ್ನೊಂದು ಅಧ್ಯಯನದ ಪ್ರಕಾರ ಹಳದಿ ಜಾಕೆಟ್ ಕಣಜ ರಾಣಿಯರು (ಯೆಲ್ಲೋ ಜಾಕೆಟ್ ವ್ಯಾಸ್ಪ್ ಕ್ವೀನ್ಸ್) ಅಮೆರಿಕಾದ ಉತ್ತರ ತುದಿಯ ಊರಾದ ಬ್ಯಾರೋದಲ್ಲಿ ಅಷ್ಠೆನೂ ತೀವ್ರವಲ್ಲದ ಈಗಿನ ಚಳಿಗಾಲದಲ್ಲಿ ಬದುಕುಳಿಯುತ್ತಿವೆ. ಪರಿಣಾಮ ಈ ಕಣಜಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಯ ತುರ್ತು ಕೊಠಡಿಗಳಿಗೆ ಭೇಟಿ ಮಾಡುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಶೇಕಡ 600 ರಷ್ಟು ಹೆಚ್ಚಾಗಿದೆ.

ದಶಕಗಳಿಂದ ತಾಪಮಾನದ ಏರಿಕೆ ಕುರಿತು ನೀಡುತ್ತಿರುವ ಎಚ್ಚರಿಕೆಗಳು ಕುರುಡು ಕಿವಿಗಳ ಮೇಲೆ ಬೀಳುತ್ತಿದ್ದು, ಈಗ ಲಭ್ಯವಿರುವ ಮಾಹಿತಿಗಳು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿ ಕ್ರಮಗಳಿಗೆ ಕಾರಣವಾಗಬಹುದೆಂದು ವಿಜ್ಞಾನಿಗಳು ಆಶಾದಾಯಕರಾಗಿದ್ದಾರೆ. ಈಗಾಗಲೇ ಕೈಮೀರಿರುವ ಪರಿಸ್ಥಿತಿ ಇನ್ನಷ್ಟು ವಿಷಮಸ್ಥಿತಿಗೆ ಜಾರುವ ಮುನ್ನ ವ್ಯಾಪಕವಾಗಿ ತೀವ್ರತರದ ಕ್ರಮಗಳನ್ನು ಇಂದೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇಡೀ ಜಗತ್ತಿಗಿದೆ.
-ಎಂ.ಕೆ.ಆನಂದರಾಜೇ ಅರಸ್

Leave a Reply

Your email address will not be published.