ಅಲ್ಲಮನ ವಚನಗಳ ಸಮರ್ಥ ಇಂಗ್ಲಿಷ್ ಅವತರಣಿಕೆ: “ಗಾಡ್ ಈಸ್ ಡೆಡ್, ದೆರ್ ಈಸ್ ನೋ ಗಾಡ್”

ದೇವದೇವನ್ ಅವರ ಈ ಅನುವಾದಗಳು ಮೂಲ ವಚನಗಳ ಅರ್ಥಕ್ಕೆ ಮತ್ತು ಅರ್ಥದ ಆಳ ವಿಸ್ತಾರಗಳಿಗೆ ಅಪಚಾರ ಎಸಗುವ ಹಾಗಿಲ್ಲ ಎನ್ನುವುದು ಈ ಅನುವಾದಿತ ಸಂಕಲನದ ಗರಿಮೆ.

ಕನ್ನಡದ ನುಡಿಪರಂಪರೆಯನ್ನು ಸಮೃದ್ಧಗೊಳಿಸಿದ ಸಾಹಿತ್ಯ ಚಳವಳಿಗಳಲ್ಲಿ ಅಗ್ರಗಣ್ಯ ಸ್ಥಾನ ಸಿಗುವುದು ವಚನ ಚಳವಳಿಗೆ. ಕನ್ನಡ ಆಡುವ ಪ್ರದೇಶಗಳುದ್ದಕ್ಕೂ ಸುಮಾರು ಒಂದು ಸಹಸ್ರಮಾನ ಕಾಲದಿಂದ ವಚನಗಳು ಜನಮಾನಸದಲ್ಲಿ ಕಾಯಮ್ಮಾಗಿವೆ. ವಚನಗಳು ಹೊಮ್ಮಿ ಬಂದ ಸಾಮಾಜಿಕ, ರಾಜಕೀಯ ಸನ್ನಿವೇಶ ಅಸಾಧಾರಣ ಬದಲಾವಣೆಗಳ ಕಾಲಮಾನ ಎನ್ನುವುದು ನಮ್ಮನ್ನು ಕುತೂಹಲಗೊಳಿಸಿದರೆ, ವಚನಗಳು ಪ್ರಸ್ತುತಗೊಳಿಸುವ ಧಾರ್ಮಿಕ ಮತ್ತು ತಾತ್ವಿಕ ವಿಚಾರಗಳು ನಮ್ಮನ್ನು ಕಂಗೆಡಿಸುವಷ್ಟು ಸಂಕೀರ್ಣತೆ, ನಾವೀನ್ಯ ಮತ್ತು ತಾರ್ಕಿಕ  ಪ್ರಾಬಲ್ಯಗಳನ್ನು ಹೊಂದಿವೆ. ಜಗತ್ತಿಗೆ ಕನ್ನಡ ನಾಡು ಅರ್ಪಿಸಿರುವ ಮೌಲಿಕ ಕೊಡುಗೆಗಳಲ್ಲಿ ವಚನಗಳು ಸರ್ವಶ್ರೇಷ್ಠ ಅಂದರೆ ಉತ್ಪ್ರೇಕ್ಷೆ ಆಗಲಾರದು. ಹಾಗಾಗಿ, ಬಹಳ ಕಾಲದಿಂದ ಅಳಿವಿರದ ಕನ್ನಡದ ಈ ಆಸ್ತಿಯನ್ನು ಜಗದ ಮುಂದಿಡಲು ಕನ್ನಡಿಗರು ಅವುಗಳ ಭಾಷಾಂತರದಲ್ಲಿ ಪದೇಪದೇ ತೊಡಗಿಕೊಂಡಿದ್ದಾರೆ.

ಅಂಥ ಭಾಷಾಂತರಗಳಲ್ಲಿ 1973ರಲ್ಲಿ ಎ.ಕೆ.ರಾಮಾನುಜನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಹೊರತಂದ Speaking Of Siva ಶೀರ್ಷಿಕೆಯ, ನಾಲ್ಕು ಪ್ರಮುಖ ವಚನಕಾರರ ಆಯ್ದ ವಚನಗಳ ಅನುವಾದಗಳಿದ್ದ ಸಂಕಲನವೂ ಒಂದು. ಇದು ಬಹಳ ಪ್ರಸಿದ್ಧಿ ಪಡೆಯಿತು. ಪ್ರಾಯಶಃ ಆ ಪ್ರಸಿದ್ಧಿಗೆ ಮುಖ್ಯ ಕಾರಣಗಳು ಎರಡು:

ಮೊದಲನೆಯದಾಗಿ, ರಾಮಾನುಜನ್ ಈ ಪುಸ್ತಕಕ್ಕೆ ಬರೆದ ಪರಿಚಯಾತ್ಮಕ ಪ್ರಬಂಧದಲ್ಲಿ ವಚನ ಸಂಪ್ರದಾಯವನ್ನು ವಿಶದವಾಗಿ ವಿವರಿಸಿದ್ದರು. ವಚನಗಳ ಕಾಲ, ದೇಶ, ಇತಿಹಾಸ ಅಲ್ಲದೇ ಈ ಕಾವ್ಯಪ್ರಕಾರದ ರಚನಾವಿನ್ಯಾಸವನ್ನು ಸಹ ಅವರು ವಿಸ್ತಾರವಾಗಿ ವರ್ಣಿಸಿದ್ದರು.

God Is Deಂd, There Is No God:

The Vachanas of Allama Prabhu
ಲೇಖಕರು:  ಮನು ವಿ. ದೇವದೇವನ್

ಪ್ರಕಾಶಕರು:  ಸ್ಪೀಕಿಂಗ್ ಟೈಗರ್

ಪುಟಗಳು: 299

ಬೆಲೆ: ರೂ.499

ಎರಡನೆಯದಾಗಿ, ರಾಮಾನುಜನ್ನರ ಅನುವಾದ 12ನೇ ಶತಮಾನದ ಕವನಗಳನ್ನು 1970ರ ಕಾಲಮಾನದ ಕಾವ್ಯಶೈಲಿಗೆ ಹೊಂದುವಂತೆ -ಅಂದರೆ, ಮಾಡರ್ನಿಸ್ಟ್ ಅದರಲ್ಲೂ ಇಮೇಜಿಸ್ಟ್ ಕಾವ್ಯದ ನುಡಿಗಟ್ಟಿಗೆ -ಅನುವಾದಿಸಿದ್ದರು. ಆದುದರಿಂದ, ಈ ಸಂಕಲನದ ಕವನಗಳು ಓದುಗರಿಗೆ ಅದಾವುದೋ ಓಬೀರಾಯನ ಕಾಲದ ರಚನೆಗಳಂತೆ ತೋರುವ ಬದಲು, ಸಮಕಾಲೀನ ಶೈಲಿ, ದೃಷ್ಟಿಕೋನ ಉಳ್ಳ, ತುಂಬ ಶಿಷ್ಟ ಹಾಗೂ ಶ್ರೇಷ್ಠ ಕಾವ್ಯದ ಉದಾಹರಣೆಗಳಾಗಿ ಕಂಡವು. ಈ ಎರಡನೆಯ ಅಂಶವನ್ನು ತದನಂತರದ ಅನುವಾದ ತಜ್ಞರು -ಉದಾಹರಣೆಗೆ ತೇಜಸ್ವಿನಿ ನಿರಂಜನ ತಮ್ಮ Siting Translation ಎಂಬ ಕೃತಿಯಲ್ಲಿ- ಟೀಕಿಸಿದ್ದೂ ಉಂಟು.

ಎಚ್.ಎಸ್.ಶಿವಪ್ರಕಾಶ 2010ರಲ್ಲಿ ರಾಮಾನುಜನ್ನರಿಗಿಂತ ಹೆಚ್ಚು ವಚನಕಾರರ ಆಯ್ದ ವಚನಗಳ ಅನುವಾದಗಳನ್ನು I Keep Vigil of Rudra ಎಂಬ ಕೃತಿಯಲ್ಲಿ ಸಂಪಾದಿಸಿ ಪ್ರಕಟಿಸಿದರು. ಈ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಶಿವಪ್ರಕಾಶ ಒಟ್ಟಾರೆ ವಚನ ಚಳವಳಿಯ ಐತಿಹಾಸಿಕ, ಸಾಮಾಜಿಕ ಆಯಾಮಗಳು, ಸಾಹಿತ್ಯಿಕ ಸಂದರ್ಭ, ಪಠ್ಯಗಳ ಪ್ರಸರಣ ಮುಂತಾದ ಸಮಗ್ರ ವಿವರಣೆಗಳನ್ನು ಕೊಡುತ್ತಾರೆ. ಶಿವಪ್ರಕಾಶರ ವಿವರಣೆ ಮತ್ತು ರಾಮಾನುಜನ್ನರ ವಿವರಣೆಯಲ್ಲಿ ಇರುವ ಮುಖ್ಯ ಭಿನ್ನತೆ ಎಂದರೆ, ಶಿವಪ್ರಕಾಶ ವಚನಗಳನ್ನು ಒಂದು ಜೀವಂತ ಪರಂಪರೆಯ ಅಭಿವ್ಯಕ್ತಿ ಮಾಧ್ಯಮವಾಗಿ ನೋಡುತ್ತಾರೆ ಮತ್ತು ವಚನಗಳನ್ನು ದಕ್ಷಿಣ ಭಾರತದ ಕಾವ್ಯ ಪರಂಪರೆಯ ಸಂದರ್ಭದಲ್ಲಿಟ್ಟು ವರ್ಣಿಸುತ್ತಾರೆ.

ರಾಮಾನುಜನ್ ವಚನಗಳನ್ನು ಅವುಗಳ ಇಂಗ್ಲಿಷ್ ಓದುಗರ ಹತ್ತಿರ ಒಯ್ಯಲಿಕ್ಕೆ ಸಹಾಯವಾಗುವ ಬಗೆಯಲ್ಲಿ ಅನುವಾದಿಸಿದ್ದರೆ. ಶಿವಪ್ರಕಾಶರ ಅನುವಾದಗಳು ಮೂಲ ವಚನಗಳ ವಿಶಿಷ್ಟ ಧ್ವನಿ ಇಂಗ್ಲಿಷ್ ಭಾಷೆಯಲ್ಲಿ ಅನುರಣನಗೊಳ್ಳುವ ಹಾಗಿವೆ. ಇವೆರಡೂ ಕೃತಿಗಳ ಇನ್ನೊಂದು ವಿಶೇಷತೆ ಎಂದರೆ, ಇವು ಇಂಗ್ಲಿಷಿನಲ್ಲಿ ವಚನಗಳನ್ನು ಸುಲಭ ಓದಿಗೆ -ಕಬ್ಬಿಣದ ಕಡಲೆ ಆಗಿಸದೆ- ಗ್ರಾಹ್ಯವಾಗುವಂತಾಗಿಸಿರುವುದು. ಈ ಎರಡು ಅನುವಾದಗಳು ಇಂಗ್ಲಿಷಿನ ಮೂಲಕ ವಿಶ್ವದೆಲ್ಲೆಡೆಯ ಓದುಗರಿಗೆ ವಚನಗಳನ್ನು ಲಭ್ಯವಾಗಿಸಿವೆ.

ಇತ್ತೀಚಿನ ಭಾಷಾಂತರ ಹಾಗೂ ವಿದ್ವತ್ತಿನ ಪ್ರಕಟನೆಗಳನ್ನು ಗಮನಿಸಿದರೆ ವಚನಗಳಿಗೆ ಕನ್ನಡೇತರ ಓದುಗರು ಅಪಾರವಾಗಿದ್ದಾರೆ ಎಂಬ ಸೂಚನೆ ಸಿಗುತ್ತದೆ. ಎಂದೇ, ವಚನಗಳ ಸಂಕಲನಗಳಿಂದ ಮುಂದೆ ಹೋಗಿ ಪ್ರತ್ಯೇಕ ವಚನಕಾರರ ಆಯ್ದ ವಚನಗಳ ತರ್ಜುಮೆಗೊಂಡ ಕೃತಿಗಳು ಬೆಳಕು ಕಾಣುತ್ತಿವೆ. 2017ರಲ್ಲಿ ವಿನಯ ಚೈತನ್ಯ ಅಕ್ಕ ಮಹಾದೇವಿಯವರ ವಚನಗಳ ಅನುವಾದವನ್ನು ಪ್ರಕಟಿಸಿದರೆ, 2019ರಲ್ಲಿ ಮನು ದೇವದೇವನ್ ಅವರ ಅಲ್ಲಮಪ್ರಭು ವಚನಗಳಿಗೆ ಮುಡಿಪಾದ ಅನುವಾದಿತ ಸಂಗ್ರಹ ಪ್ರಕಟವಾಗಿದೆ. ಸ್ಪೀಕಿಂಗ್ ಟೈಗರ್ ಪ್ರಕಾಶನ ಸಂಸ್ಥೆ ಹೊರತಂದಿರುವ ” God Is Dead, There Is No God: The Vachanas of Allama Prabhu” ಗ್ರಂಥದಲ್ಲಿ ಅಲ್ಲಮನ 250 ವಚನಗಳ ಇಂಗ್ಲಿಷ್ ಅನುವಾದ ಮಾಡಿದ್ದಾರೆ ದೇವದೇವನ್.

ಈ ಲೇಖಕರು ಕನ್ನಡಕ್ಕೆ ಹೊಸಬರಲ್ಲ: ಈಗಾಗಲೇ ಕನ್ನಡದಲ್ಲಿ ಒಂದು ಕವನ ಸಂಕಲನ (“ಖಂಡವಿದೆಕೊ ಮಾಂಸವಿದೆಕೊ”) ಮತ್ತು ಒಂದು ಐತಿಹಾಸಿಕ ಗ್ರಂಥ (‘ಪೃಥ್ವಿಯಲ್ಲೊದಗಿದ ಘಟವು”) ಹೊರತಂದಿರುವ ದೇವದೇವನ್ ಭಾರತದ ಪ್ರಮುಖ ಇತಿಹಾಸಕಾರರಲ್ಲಿ ಒಬ್ಬರು. ಇಂಗ್ಲಿಷಲ್ಲಿ ಅವರು ಪ್ರಕಟಿಸಿರುವ ಕೃತಿಗಳು “ಅ ಪ್ರಿ-ಹಿಸ್ಟರಿ ಆಫ್ ಹಿಂದೂಯಿಸಂ” ಮತ್ತು “ದಿ ಅರ್ಲಿ ಮಿಡೀವಲ್ ಒರಿಜಿನ್ಸ್ ಆಫ್ ಇಂಡಿಯಾ”.

“ಗಾಡ್ ಇಸ್ ಡೆಡ್” ಎಂಬ ಶೀರ್ಷಿಕೆಯಡಿ ಅಲ್ಲಮನ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ದೇವದೇವನ್ ಪುಸ್ತಕದ ಮುನ್ನುಡಿಯಲ್ಲಿ ವಚನ ಚಳವಳಿಯ ಐತಿಹಾಸಿಕ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಓದುಗರಿಗೆ ಪರಿಚಯಿಸುತ್ತಾರೆ. ಜೊತೆಗೆ, ವಚನಗಳ ರಚನಾ ಪ್ರಕಾರದ ಬಗೆಗೆ ತಮ್ಮದೇ ಅನನ್ಯ ವಾದವನ್ನು ಮಂಡಿಸುತ್ತ, ಅನೇಕ ಶತಮಾನಗಳ ಕಾಲ ಮೌಖಿಕ ಮಾಧ್ಯಮದಲ್ಲಿ ಪ್ರಸರಣೆಯಿಲ್ಲಿದ್ದ ಅವು ಮುಕ್ತ ಛಂದ ರೂಪವನ್ನು ಕ್ರಮೇಣ ಪಡೆದಿರಬಹುದು ಎಂದೂ, ಮೂಲತಃ ದ್ವಿತೀಯಾಕ್ಷರ ಪ್ರಾಸವುಳ್ಳ ತ್ರಿಪದಿಗಳ ರೂಪದ ರಚನೆಗಳು ಆಗಿದ್ದಿರಬಹುದು ಎಂದು ಅವರು ವಾದಿಸುತ್ತಾರೆ. ಈ ವಾದವನ್ನು ಪುಷ್ಟೀಕರಿಸಲು ಅವರು ಎರಡು ವಚನಗಳನ್ನು ಸ್ವಲ್ಪ ಪುರ‍್ರಚಿಸಿ ತೋರಿಸುತ್ತಾರೆ; ಅವರ ಮೊದಲ ಉದಾಹರಣೆ ಅಲ್ಲಮನ ಈ ವಚನ:

ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ.

ಮತ್ತೆ ದೇವರ ಪೂಜಿಸುವರಾರೂ ಇಲ್ಲ.

ಉತ್ತರಾಪಥದ ದಶನಾಡಿಗಳಿಗೆ,

ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು?

ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ!

ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು

ಇದನ್ನು ದೇವದೇವನ್ ಮರುರೂಪಿಸಿ, ಅದು ಮೂಲತಃ ತ್ರಿಪದಿ ಆಗಿದ್ದಿರಲು ಸಾಧ್ಯವೆಂದು ಸೂಚಿಸುತ್ತಾರೆ:

ಅರಗು ದೇಗುಲದಲ್ಲಿ

ಉರಿಯ ಲಿಂಗವ ಕಂಡೆ

ಗೊರವ ಪೂಜಿಸದೆತ್ತಲಾಡುತಿಹನೋ?

 

ಉತ್ತರ ಪಥದಲ್ಲಿ

ತತ್ವಶಾಸ್ತ್ರಗಳನ್ನು

ಸುತ್ತಿಮುತ್ತಿದ ಮಾಯೆ ಎತ್ತಲಿಹುದೋ?

 

ಮರನೊಳಡಗಿದ ಕಿಚ್ಚು

ಮರನ ಸುಟ್ಟದ ಕಂಡೆ

ಗೊರವ ಗೊಗ್ಗೇಶ್ವರನೊಳಾಡುತೊಹನೋ?

ವಚನ ಪರಂಪರೆಯ ಮೂಲಸ್ವಭಾವವನ್ನು ಅವರು ಗುರುತಿಸಿರುವುದು ಹೀಗೆ: ದೇವಾಲಯ, ತೀರ್ಥಯಾತ್ರೆಗಳ ವಿರೋಧ ಮತ್ತು ಪಾರಂಪರಿಕ ಸಂಬಂಧಗಳ ಕಡೆ ಅಸಡ್ಡೆ. ಅಲ್ಲಮನ ವ್ಯಕ್ತಿ ಚಿತ್ರದಲ್ಲಿಯೂ, ಶರಣರ ಸಾಮಾಜಿಕ-ರಾಜಕೀಯ ಕ್ರಾಂತಿಯ ವಿಷಯದಲ್ಲಿಯೂ ದೇವದೇವನ್ ಸಂತಚರಿತೆಗಳ ಮೇಲೆ ಅವಲಂಬಿಸಿದ ಕಥನಗಳ ಮೀರಿದ, ಐತಿಹಾಸಿಕ ಮೂಲಗಳ ಆಧಾರದ ಮೇಲೆ ಪರ್ಯಾಯ ಕಥನ ಮುಂದಿಡುತ್ತಾರೆ.

ಅಲ್ಲಮ ತನ್ನ ವಚನಗಳಲ್ಲಿ ಪ್ರಯೋಗಿಸಿರುವ “ಗೊಗ್ಗೇಶ್ವರ” ಎಂಬ ನಾಮ ಅವನ ಊರಾದ ಬಳ್ಳಗಾವಿಯ ದೈವ ಮತ್ತು ಅಲ್ಲಿನ ದೇವಾಲಯದಲ್ಲಿ ಡೋಲುವಾದಕನಾಗಿದ್ದ ಅಲ್ಲಮ ಸಹಜವಾಗಿ ತನ್ನ ದೈವ ಗೊಗ್ಗೇಶ್ವರನ ನಾಮದಲ್ಲಿ ವಚನ ರಚಿಸಿದ್ದಾಗಿಯೂ, “ಗುಹೇಶ್ವರ” ಮತ್ತಿತರ ನಾಮಗಳು ಗೊಗ್ಗೇಶ್ವರ ಶಬ್ದದ ಅಪಭ್ರಂಶಗಳು ಎಂದು ಅವರ ವಾದ. ಹಾಗೆಯೇ, ಕರ್ನಾಟಕದಲ್ಲಿ ಜನಜನಿತವಾದ, ಕನ್ನಡ ಸಾಹಿತ್ಯದಲ್ಲಿಯೂ ಪ್ರಸ್ಥಾಪಿತವಾದ, ಕಲ್ಯಾಣದ ಕ್ರಾಂತಿಯ ಕುರಿತು ಸಹ, ದೇವದೇವನ್ ಶಂಕೆ ವ್ಯಕ್ತಪಡಿಸುತ್ತ, ಬಸವಣ್ಣನ ಅನುಯಾಯಿ ಮುಯ್ಯಿ ತೀರಿಸಿಕೊಳ್ಳಲು ಬಿಜ್ಜಳನ ಕೊಲೆ ಮಾಡಿದ ಎನ್ನಲು ಯಾವ ಆಧಾರವೂ ಇಲ್ಲವೆನ್ನುತ್ತಾರೆ.

ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರವಾಗುವ ಕೃತಿಗಳಲ್ಲಿ, ಅದರಲ್ಲಿಯೂ ಪುರಾತನ ಕೃತಿಗಳಲ್ಲಿ ಇರುವ ಒಂದು ಸಾಮಾನ್ಯ ಸಮಸ್ಯೆ ಎಂದರೆ ಸ್ಪಷ್ಟತೆಯ ಕೊರತೆ. ಅಲ್ಲಮನ ವಚನಗಳು ಬೆಡಗಿನ ರಚನೆಗಳು ಮತ್ತು ತುಂಬ ಸಾಂಕೇತಿಕ ಮಹತ್ವ ಹೊಂದಿರುವಂತವು. ಆದಾಗ್ಯೂ ದೇವದೇವನ್ ಇಂಗ್ಲಿಷ್ ಓದುಗರಿಗೆ ಸುಲಭಗ್ರಾಹ್ಯವಾಗುವಂತೆ ನೇರ ಹಾಗೂ ನಿರ್ದಿಷ್ಟ ಶಬ್ದ, ವಾಕ್ಯ ರಚನೆ ಮತ್ತು ಗೊಂದಲರಹಿತ ಪದಪುಂಜಗಳ ಬಳಕೆಗಳುಳ್ಳ ಅನುವಾದ ಮಾಡಿದ್ದಾರೆ. ಅವರ ಈ ಅನುವಾದಗಳು ಮೂಲ ವಚನಗಳ ಅರ್ಥಕ್ಕೆ ಮತ್ತು ಅರ್ಥದ ಆಳ ವಿಸ್ತಾರಗಳಿಗೆ ಅಪಚಾರ ಎಸಗುವ ಹಾಗಿಲ್ಲ ಎನ್ನುವುದು ಈ ಅನುವಾದಿತ ಸಂಕಲನದ ಗರಿಮೆ.

Leave a Reply

Your email address will not be published.