ಅಲ್ ಗೋರ್: ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ

ಮಾನವನ ಸ್ವಾರ್ಥ ಮತ್ತು ದುಷ್ಟತನದಿಂದ ನಿರ್ಮಾಣವಾಗಿರುವ ಪರಿಸರ ವೈಪರೀತ್ಯ ಕುರಿತು ಜಗತ್ತಿಗೆ ಅರಿವು ಮೂಡಿಸಲು ಹೆಣಗಿದ ಅಪರೂಪದ ವ್ಯಕ್ತಿಯ ಹೆಸರು ಅಲ್ ಗೋರ್. ಅಮೆರಿಕದ ರಾಜಕಾರಣಿ ಒಬ್ಬ ಪರಿಸರ ತಜ್ಞರಾಗಿಯೂ ಗುರುತಿಸಿಕೊಂಡಿದ್ದರು; 1993ರಿಂದ 2001ರವರೆಗೆ ಅಮೆರಿಕೆಯ ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಗೋರ್ ಅವರು ಮಾನವ ನಿರ್ಮಿತ ಪರಿಸರ ಅಸಮತೋಲನ ಸರಿಪಡಿಸಲು ಕೈಗೊಂಡ ಕ್ರಮಗಳು ಅವರನ್ನು ನೊಬೆಲ್ ಪ್ರಶಸ್ತಿ ತನಕ ಕೈಹಿಡಿದು ನಡೆಸಿದವು.

ಸಂಚಿಕೆಯಕರ್ನಾಟಕದ ಪರಿಸರ ಸಮತೋಲನಕುರಿತ ಮುಖ್ಯಚರ್ಚೆಗೆ ಪೂರಕವಾಗಿ ಅಲ್ ಗೋರ್ ಅವರು ಡಿಸೆಂಬರ್ 10, 2007 ರಂದು ಓಸ್ಲೋದಲ್ಲಿ ಮಾಡಿದ ಪ್ರಖ್ಯಾತ ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣವನ್ನು ಯಥಾವತ್ ನೀಡುತ್ತಿದ್ದೇವೆ.

ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಮಹಿಳೆಯರೇ ಮತ್ತು ಮಹನೀಯರೇ, ನಾರ್ವೆಯ ಗೌರವಾನ್ವಿತ ನೊಬೆಲ್ ಸಮಿತಿ ಸದಸ್ಯರೇ,

ಇಂದಿನ ನನ್ನ ಭಾಷಣದಲ್ಲಿ ಒಂದು ಸದುದ್ದೇಶವಿದೆ. ಅದು, ನಾನು ಅನೇಕ ವರ್ಷಗಳಿಂದ ನಿರಂತರವಾಗಿ ಸಾಧಿಸಲು ಪ್ರಯತ್ನಿಸುತ್ತಿರುವ ಕಾರ್ಯೋದ್ದೇಶ. ನನಗದನ್ನು ಪೂರ್ಣಗೊಳಿಸಲು, ದೇವರು ಒಂದು ಸೂಕ್ತ ಮಾರ್ಗ ತೋರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೆಲವೊಮ್ಮೆ, ನಮ್ಮ ಭವಿಷ್ಯವು ಯಾವುದೇ ಮುನ್ಸೂಚನೆ ಕೊಡದೆ, ಅಮೂಲ್ಯ ಆದರೆ ನೋವಿನಿಂದ ಕೂಡಿದ ಹೊಸ ದೃಷ್ಟಿಕೋನದೊಂದಿಗೆ  ಎದುರಾಗುತ್ತದೆ. ಸುಮಾರು ನೂರ ಹತ್ತೊಂಬತ್ತು ವರ್ಷಗಳ ಹಿಂದೆ, ಒಬ್ಬ ಹೆಸರಾಂತ ಶ್ರೀಮಂತ ಸಂಶೋಧಕ ತಾನು ಸಾಯುವ ಹಲವಾರು ವರ್ಷಗಳ ಮೊದಲೇ, ಪತ್ರಿಕೆಯಲ್ಲಿ ತನ್ನ ಶ್ರದ್ಧಾಂಜಲಿಯನ್ನು ಓದಿದರು. ಅವರು ಸತ್ತಿದ್ದಾನೆಂದು ತಪ್ಪಾಗಿ ಗ್ರಹಿಸಿದ ಆ ಪತ್ರಿಕೆ, ಅವರ ಸಂಶೋಧನೆ  ‘ಡೈನಮೈಟ್’ನಿಂದಾಗಿ, ಅವರನ್ನು ಬಹಳ ಕಠೋರವಾಗಿ “ಸಾವಿನ ವ್ಯಾಪಾರಿ” ಎಂದು ಹೆಸರಿಸಿತು. ಈ ಖಂಡನೆಯಿಂದ ಆಘಾತಗೊಂಡ ಆ ಸಂಶೋಧಕ, ಅಂದಿನಿಂದ ಪ್ರಪಂಚದಲ್ಲಿ ಶಾಂತಿಸ್ಥಾಪನೆಗಾಗಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರೇ, ಆಲ್ಫ್ರೆಡ್ ನೊಬೆಲ್.

ಈ ಘಟನೆಯ ಏಳು ವರ್ಷಗಳ ನಂತರ, ಆಲ್ಫ್ರೆಡ್  ನೊಬೆಲ್ ತನ್ನ ಹೆಸರಿನ ಈ ಪ್ರಶಸ್ತಿಯನ್ನು ಸ್ಥಾಪಿಸಿದರು.

ಅದೇ ರೀತಿ ಸುಮಾರು ಏಳು ವರ್ಷಗಳ ಹಿಂದೆ, ನನ್ನ ಸ್ವಂತ ರಾಜಕೀಯ ಜೀವನದ ಅಕಾಲಿಕ ಶ್ರದ್ಧಾಂಜಲಿಯಂತಹ ಕಠಿಣ ತೀರ್ಪನ್ನು ನಾನು ಸ್ವೀಕರಿಸಬೇಕಾಯಿತು.  ಆದರೆ, ಆ ಅಸ್ವೀಕಾರಾರ್ಹ ತೀರ್ಪು, ನೋವಿನೊಂದಿಗೆ ಒಂದು ಉಡುಗೊರೆಯನ್ನು ಸಹ ನೀಡಿತು. ಅದೇನೆಂದರೆ, ನನ್ನ ಸದುದ್ದೇಶದ ಸಮಾಜಸೇವೆಯನ್ನು ಕಾರ್ಯಗತಮಾಡಲು ಹೊಸ ಮಾರ್ಗಗಳನ್ನು ಹುಡುಕುವ ಅವಕಾಶ.

ನನ್ನ ಆ ಹುಡುಕಾಟ, ಅನಿರೀಕ್ಷಿತವಾಗಿ ಇಲ್ಲಿಯವರೆಗೆ ನನ್ನನ್ನು ಕರೆತಂದಿದೆ. ಇಂದಿನ ನನ್ನ ಭಾಷಣ, ಈ ಪ್ರಶಸ್ತಿ ಸಮಾರಂಭಕ್ಕೆ ಹೊಂದಿಕೆಯಾಗುತ್ತಿಲ್ಲವೆಂಬ ಅಂಜಿಕೆಯಿದ್ದರೂ, ನನ್ನ ಹೃದಯದ ಅನಿಸಿಕೆಯನ್ನು ಸ್ಪಷ್ಟವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಅರ್ಥಮಾಡಿಕೊಂಡ, ಕೆಲವರಾದರೂ ಖಂಡಿತವಾಗಿಯೂ ‘ನಾವಿದನ್ನು ಮಾಡಬೇಕು’ ಎಂದು ಹೇಳುತ್ತಾರೆಂಬ ವಿಶ್ವಾಸ ನನಗಿದೆ.

ನನ್ನ ಜೀವನದ ಅತ್ಯಂತ ಗೌರವಾನ್ವಿತ ಈ ಪ್ರಶಸ್ತಿಯನ್ನು ಪಡೆದಂತಹ ಪ್ರಖ್ಯಾತ ವಿಜ್ಞಾನಿಗಳು, ಎರಡು ವಿಭಿನ್ನ ಭವಿಷ್ಯದ ಆಯ್ಕೆಯನ್ನು ನಮ್ಮ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಮೊದಲನೆಯದು, ಪುರಾತನ ಕಾಲದ ಸಂತರ ನುಡಿಯಂತೆ ನನ್ನ ಕಿವಿಯಲ್ಲಿನ್ನೂ ಪ್ರತಿಧ್ವನಿಸುತ್ತದೆ. ಅದೇನೆಂದರೆ, “ನಿಮ್ಮ ಮುಂದಿರುವ ಆಯ್ಕೆ-ಜೀವನ ಅಥವಾ ಸಾವು, ಆಶೀರ್ವಾದ ಅಥವಾ ಶಾಪ. ಇವುಗಳಲ್ಲಿ, ನಿಮ್ಮ ಮತ್ತು ಮುಂದಿನ ಜನಾಂಗದ ನೆಮ್ಮದಿಗಾಗಿ ಆರಿಸಿಕೊಳ್ಳಬೇಕಾದುದು-ಜೀವನ.”

ಇಂದು, ಮಾನವ ಜನಾಂಗ ಭೌಗೋಳಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಾವೇನೋ ಸದುದ್ದೇಶಕ್ಕಾಗಿ ಇಲ್ಲಿ ಒಟ್ಟು ಸೇರಿರಬಹುದು. ಆದರೆ, ನಮ್ಮ ನಾಗರಿಕತೆಯಿಂದು, ವಿನಾಶಕಾರಿ ಅಂಶಗಳನ್ನು ಮೈಗೂಡಿಸಿಕೊಂಡು ವಿನಾಶದ ಅಂಚಿನಲ್ಲಿದೆ. ಈ ಹತಾಶೆಯ ನಡುವೆಯೂ, ಆಶಾದಾಯಕ ಸುದ್ದಿಯೊಂದಿದೆ. ಅದೇನೆಂದರೆ, ನಾವು ಈ ಬಿಕ್ಕಟ್ಟನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಸಂಪೂರ್ಣವಾಗಿಯಲ್ಲದಿದ್ದರೂ, ನಾವು ಧೈರ್ಯದಿಂದ, ನಿರ್ಣಾಯಕವಾಗಿ ಮತ್ತು ತ್ವರಿತವಾಗಿ ಸ್ಪಂದಿಸಿದರೆ, ಈ ತುರ್ತು ಪರಿಸ್ಥಿತಿಯ ಪರಿಣಾಮಗಳನ್ನು ನಿಯಂತ್ರಿಸಬಹುದು.

ಆದಾಗ್ಯೂ, ಹೆಚ್ಚಿನ ವಿಶ್ವನಾಯಕರುಗಳು (ಕೆಲವು ಗೌರವಾನ್ವಿತ ನಾಯಕರನ್ನು ಹೊರತುಪಡಿಸಿ), ಅಡಾಲ್ಫ್ ಹಿಟ್ಲರನ ಬೆದರಿಕೆಯನ್ನು ನಿರ್ಲಕ್ಷಿಸಿದ ನಾಯಕರನ್ನು ಕುರಿತು ವಿನ್ಸ್ ಟನ್ ಚರ್ಚಿಲ್ ಹೇಳಿದ ಮಾತಿನಂತೆ, “ಅವರಿನ್ನೂ ಗೊಂದಲದಲ್ಲಿ ಮುಳುಗಿದ್ದಾರೆ, ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ, ಪರಿಹಾರ ಕಾಣದವರಾಗಿದ್ದಾರೆ. ಹಾಗೆಯೇ, ಅವರಲ್ಲಿ ದೃಡತೆಯಿಲ್ಲದ ಚಂಚಲತೆ ಯಿದೆ, ಗಟ್ಟಿತನವಿಲ್ಲದ ದುರ್ಬಲತೆಯಿದೆ, ಒಟ್ಟಿನಲ್ಲಿ ಎಲ್ಲರೂ ನಿಶಕ್ತರಾಗಿ ಕಾಣಿಸುತ್ತಿದ್ದಾರೆ.”

ಈ ಎಲ್ಲಾ ಕಾರಣಗಳಿಂದ, ನಾವಿಂದು ವಾಯುಮಂಡಲಕ್ಕೆ ತೆರೆದ ಒಳಚರಂಡಿಗೆ ಎಸೆದಂತೆ, 70 ಮಿಲಿಯನ್ ಟನ್ ಗಳಷ್ಟು ಮಾಲಿನ್ಯವನ್ನು ಎಸೆದಿದ್ದೇವೆ. ಮುಂದಿನ ದಿನಗಳಲ್ಲಿ, ಇನ್ನೂ ಹೆಚ್ಚಿನ ಪ್ರಮಾಣದ ಮಾಲಿನ್ಯ ಎಸೆಯಲಿದ್ದೇವೆ. ಈ ಮಾಲಿನ್ಯ ಪದರುಗಳು, ಸೂರ್ಯನ ಶಾಖ ಭೂಮಿಗೆ ತಲುಪದಂತೆ ಅಡ್ಡಗೋಡೆಗಳಾಗಿ ಮಾರ್ಪಟ್ಟಿವೆ.

ಇದರ ಪರಿಣಾಮವಾಗಿ, ಭೂಮಿಯ ತಾಪಮಾನ ಹೆಚ್ಚುತ್ತಿದೆ. ತಜ್ಞರು ಹೇಳುವಂತೆ, ಇದೊಂದು ತನ್ನಷ್ಟಕ್ಕೆ ಸರಿಹೋಗುವ ಸಮಸ್ಯೆಯಲ್ಲ. ನಾವಿದನ್ನು ಪರಿಶೀಲಿಸಿದಾಗ, ಈ ಸಮಸ್ಯೆಯ ಮೂಲ ನಾವೇ, ಮತ್ತದನ್ನು ನಾವೇ ಸರಿಪಡಿಸಬೇಕೆಂಬ ವಿಚಾರ ಸ್ಪಷ್ಟವಾಯಿತು.

ಕಳೆದ ಸೆಪ್ಟೆಂಬರ್ 21ರಂದು, ಕೆಲವು ವಿಜ್ಞಾನಿಗಳು, ಉತ್ತರ ಧ್ರುವವು ಸೂರ್ಯನಿಂದ ದೂರ ಸರಿಯುತ್ತಿದೆಯೆಂಬ ಆತಂಕಕಾರಿ ವಿದ್ಯಮಾನ ಬೆಳಕಿಗೆ ತಂದು, ಇದಕ್ಕೆ ಉತ್ತರ ಧ್ರುವದ ಮಂಜುಗಡ್ಡೆಯು “ಶಿಖರದಿಂದ ಜಾರಿ ಬೀಳುತ್ತಿರುವುದು ಕಾರಣ” ಎಂದು ವರದಿ ಮಾಡಿದ್ದಾರೆ. ಒಂದು ಅಧ್ಯಯನದ ಪ್ರಕಾರ, ಅಲ್ಲಿನ ಮಂಜುಗಡ್ಡೆಯು ಇನ್ನು 22 ವರ್ಷಗಳ ಬೇಸಿಗೆಯಲ್ಲಿ ಸಂಪೂರ್ಣವಾಗಿ ಕರಗಿಹೋಗಬಹುದು. ಆದರೆ, ಅಮೆರಿಕಾದ ನೌಕಾಪಡೆಯ ಸಂಶೋಧಕರು ಮಂಡಿಸಿದ ಮತ್ತೊಂದು ಹೊಸ ಅಧ್ಯಯನವು, ಇದು ಕೇವಲ ಇನ್ನು 7 ವರ್ಷಗಳಲ್ಲಿ ಸಂಭವಿಸಬಹುದು ಎಂದು ಎಚ್ಚರಿಸಿದೆ.

ಇಂದಿನಿಂದ ಏಳು ವರ್ಷಗಳು:

ಕಳೆದ ಕೆಲವು ತಿಂಗಳುಗಳಲ್ಲಿ, ನಮ್ಮ ಜಗತ್ತಿನ ಸಮತೋಲನ ತಪ್ಪಿದೆಯೆನ್ನುವ ಸೂಚನೆಗಳನ್ನು ಕಾಣುತ್ತಿದ್ದೇವೆ. ತೀವ್ರ ಬರಗಾಲ, ಜೊತೆಗೆ, ಧ್ರುವಗಳಲ್ಲಿ ಕರಗುತ್ತಿರುವ ಮಂಜುಗಡ್ಡೆಯಿಂದಾಗಿ, ಉತ್ತರ ಹಾಗು ದಕ್ಷಿಣ ಅಮೆರಿಕಾ, ಏಷ್ಯಾ ಮತ್ತು ಆಸ್ಟೆçÃಲಿಯಾದ ಪ್ರಮುಖ ನಗರಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಪ್ರಪಂಚದಾದ್ಯಂತ, ಹತಾಶರಾದ ರೈತಾಪಿವರ್ಗ ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಿದ್ದಾರೆ. ಹೆಪ್ಪುಗಟ್ಟಿದ ಆರ್ಕ್ಟಿಕ್ ಮತ್ತು ತಗ್ಗು ಪ್ರದೇಶದ ಪೆಸಿಫಿಕ್ ದ್ವೀಪಗಳಲ್ಲಿನ ಜನರು, ತಮ್ಮ ದೀರ್ಘಕಾಲದ ವಾಸಸ್ಥಾನಗಳನ್ನು ತ್ಯಜಿಸಿ ಗುಳೆ ಹೊರಾಡುತ್ತಿದ್ದಾರೆ. ಆಕಸ್ಮಿಕ ಕಾಡ್ಗಿಚ್ಚು, ಒಂದು ದೇಶದ ಅರ್ಧ ಮಿಲಿಯನ್ ಜನರನ್ನು ವಸತಿಹೀನರನ್ನಾಗಿಸಿ, ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಇನ್ನೊಂದು ದೇಶದಲ್ಲಿ, ಅದು ಸರ್ಕಾರವನ್ನೆ ಪದಚ್ಯುತಿಗೊಳಿಸಿತು. ಹೀಗೆ, ಹವಾಮಾನ ವೈಪರೀತ್ಯದಿಂದಾಗಿ, ನಿರಾಶ್ರಿತರು ವಿಭಿನ್ನ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯ ಹೊಂದಿರುವ ಜನವಸತಿ  ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಇದರಿಂದಾಗಿ ಸ್ಥಳೀಯರೊಂದಿಗೆ ನಿರಂತರ ಸಂಘರ್ಷ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳಲ್ಲಿ ಉತ್ಪತ್ತಿಯಾಗುವ ಪ್ರಬಲ ಬಿರುಗಾಳಿಗಳು, ನಗರಗಳನ್ನೇ ಬುಡಮೇಲು ಮಾಡುತ್ತಿವೆ. ದಕ್ಷಿಣ ಏಷ್ಯಾ, ಮೆಕ್ಸಿಕೊ ಮತ್ತು ಆಫ್ರಿಕಾದ 18 ದೇಶಗಳಲ್ಲಿ ಭಾರಿ ಪ್ರವಾಹದಿಂದಾಗಿ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಬೇಜವಾಬ್ದಾರಿತನದಿಂದ, ಕಾಡು ನಾಶವಾಗುತ್ತಿದೆ ಮತ್ತು ಹೆಚ್ಚೆಚ್ಚು ಜೀವರಾಶಿಗಳು ವಿನಾಶದ ಅಂಚಿಗೆ ತಳ್ಳಲ್ಪಡುತ್ತಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು, ನಮ್ಮ ಜೀವಜಾಲವನ್ನೇ ಸಂಪೂರ್ಣವಾಗಿ ನಾಶಮಾಡಿದ್ದೇವೆ.

ಆಲ್ಫ್ರೆಡ್  ನೊಬೆಲ್, ಎಂದಿಗೂ ಯುದ್ಧದಲ್ಲಿ ಡೈನಮೈಟನ್ನು ಬಳಸಬೇಕೆಂದು ಉದ್ದೇಶಿಸಿರಲಿಲ್ಲ. ಹಾಗೆಯೇ, ನಾವು ಸಹ ಉದ್ದೇಶಪೂರ್ವಕವಾಗಿ ಪರಿಸರ ವಿನಾಶ ಮಾಡುತ್ತಿಲ್ಲ. ಹೇಗೆ ನೊಬೆಲ್ ತಮ್ಮ ಆವಿಷ್ಕಾರ, ಮಾನವ ಪ್ರಗತಿಗೆ ಪೂರಕವಾಗುತ್ತದೆಯೆಂದು ಆಶಿಸಿದ್ದರೋ, ಅದೇ ರೀತಿ, ನಾವು ಬೃಹತ್ ಪ್ರಮಾಣದಲ್ಲಿ ಕಲ್ಲಿದ್ದಲು, ತೈಲ ಮತ್ತು ಮೀಥೇನನ್ನು ಬಳಸಲು ಪ್ರಾರಂಭಿಸಿದಾಗ, ಮಾನವ ಪ್ರಗತಿಯೇ ನಮ್ಮ ಉದ್ದೇಶವಾಗಿತ್ತು.

ನೊಬೆಲ್ ಜೀವನ ಕಾಲದಲ್ಲಿಯೂ ಸಹ, ಪರಿಸರ ದುರ್ಬಳಕೆಯ ಸಂಭವನೀಯ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಇತ್ತು. ರಸಾಯನಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿ ವಿಜೇತರಲ್ಲೊಬ್ಬರು, “ನಾವು ನಮ್ಮ ಕಲ್ಲಿದ್ದಲು ಗಣಿಗಳನ್ನು, ಗಾಳಿಯಲ್ಲಿ ಆವಿಮಾಡುತ್ತಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದರು. ಅದೇ ರೀತಿ, ಸ್ವಾಂಟೆ ಅರ್ಹೆನಿಯಸ್, ತನ್ನ 10,000 ಸಮೀಕರಣಗಳನ್ನು ಆಧಾರವಾಗಿಟ್ಟುಕೊಂಡು, ನಾವು ಹೀಗೆ ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ದ್ವಿಗುಣಗೊಳಿಸುತ್ತಾ ಹೋದರೆ, ಭೂಮಿಯ ಸರಾಸರಿ ತಾಪಮಾನವು ಎಷ್ಟು ಡಿಗ್ರಿಗಳಷ್ಟು ಹೆಚ್ಚಾಗಬಹುದೆಂದು ಲೆಕ್ಕಹಾಕಿದ್ದರು.

ಇದಾದ ಎಪ್ಪತ್ತು ವರ್ಷಗಳ ನಂತರ, ನನ್ನ ಶಿಕ್ಷಕ ರೋಜರ್ ರೆವೆಲ್ಲೆ  ಮತ್ತವರ ಸಹೋದ್ಯೋಗಿ ಡೇವ್ ಕೀಲಿಂಗ್, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಗಾಲದ ಪ್ರಮಾಣವನ್ನು ನಿಖರವಾಗಿ ದಾಖಲಿಸಲು ಪ್ರಾರಂಭಿಸಿದರು.

ವಿಶೇಷವೆಂದರೆ, ಇಂಗಾಲ ಇನ್ನುಳಿದ ಮಾಲಿನ್ಯಕ್ಕಿಂತ ಭಿನ್ನವಾಗಿದೆ. ಇದೊಂದು ಅಗೋಚರ, ರುಚಿ ಮತ್ತು ವಾಸನೆಯಿಲ್ಲದ ಅನಿಲ. ಈ ಅಂಶದಿಂದಾಗಿಯೇ, ಇಂಗಾಲ ನಮ್ಮ ಹವಾಮಾನಕ್ಕೆ ಎಷ್ಟು ಹಾನಿ ಮಾಡುತ್ತಿದೆ ಎಂಬುದರ ಸತ್ಯಾಂಶವಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಇದರಿಂದಾಗಿ ನಮ್ಮ ಅಸ್ತಿತ್ವಕ್ಕಂತೂ  ಪೆಟ್ಟುಬಿದ್ದಿದೆ. ಮಾತ್ರವಲ್ಲ, ಇದು ಪರಿಹರಿಸಲಸಾಧ್ಯ ಸಮಸ್ಯೆಯೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ.

ಈ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಮಾಡಬೇಕಾದ ಬೃಹತ್ ಪ್ರಮಾಣದ ಬದಲಾವಣೆಗಳನ್ನು ಊಹಿಸಿಕೊಳ್ಳುವುದೂ ಕಷ್ಟ. ಕೆಲವೊಮ್ಮೆ ಸಮಾಜಗಳು, ಮಹಾನ್ ಕಟುಸತ್ಯಗಳನ್ನು ಒಂದು ಕಾಲಘಟ್ಟದವರೆಗೆ ನಿರ್ಲಕ್ಷಿಸಬಹುದು. ಜಾರ್ಜ್ ಆರ್ವೆಲ್ ನಮಗೆ ನೆನಪಿಸಿದಂತೆ: “ಸಾಮಾನ್ಯವಾಗಿ ಒಂದು ಸುಳ್ಳು ನಂಬಿಕೆ, ಘೋರ ವಾಸ್ತವದ ಎದುರು, ಆ ಕ್ಷಣದಲ್ಲಿಯೇ ಅಥವಾ ಸ್ವಲ್ಪಕಾಲದ ನಂತರ, ಸಾಮಾನ್ಯವಾಗಿ, ಯುದ್ಧಭೂಮಿಯಲ್ಲಿ ಮುಖಾಮುಖಿಯಾಗ ಬೇಕಾಗುತ್ತದೆ.”

ಈ ನೊಬೆಲ್ ಪ್ರಶಸ್ತಿಯನ್ನು ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ, ಭೂಮಿ ಮತ್ತು ಮನುಷ್ಯನ ಮುಖಾಮುಖಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಆದರೂ ಸಹ, ನಮ್ಮ ಈ ಹಸ್ತಕ್ಷೇಪದ ದುಷ್ಪರಿಣಾಮವನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೇವೆ.

ವಾಸ್ತವವನ್ನರಿಯದೆ, ನಾವು ಭೂಮಿಯೊಂದಿಗೆ ಸಮರ ಸಾರುತ್ತಲೇ ಇದ್ದೇವೆ. ಪರಿಣಾಮವಾಗಿ, ನಾವೀಗ ಭೂಮಿಯೊಂದಿಗೆ ಹವಾಮಾನ ಯುದ್ಧದಲ್ಲಿ ಬಂಧಿಸಲ್ಪಟ್ಟಿದ್ದೇವೆ. ಇದನ್ನು ‘ಪರಸ್ಪರ ಭರವಸೆಯ ನಾಶ’ವೆಂದು ಹೇಳಬಹುದು.

ಸುಮಾರು ಎರಡು ದಶಕಗಳ ಹಿಂದೆ ವಿಜ್ಞಾನಿಗಳು, ಪರಮಾಣು ಯುದ್ಧವಾದರೆ ಎಷ್ಟು ಪ್ರಮಾಣದಲ್ಲಿ  ಭಗ್ನಾವಶೇಷ ಮತ್ತು ಹೊಗೆ ಗಾಳಿಯಲ್ಲಿ ಬೆರೆಯಬಹುದು,  ಅದು ಹೇಗೆ ಸೂರ್ಯನ ಬೆಳಕು ನಮ್ಮ ವಾತಾವರಣ ಪ್ರವೇಶಿಸದಂತೆ ತಡೆಹಿಡಿಯುತ್ತದೆ ಮತ್ತು “ಪರಮಾಣು ಚಳಿಗಾಲ”ಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದ್ದರು.  ವಿಜ್ಞಾನಿಗಳು ಓಸ್ಲೋ ಸಮಾವೇಶದಲ್ಲಿ ನೀಡಿದ ಈ ಎಚ್ಚರಿಕೆ, ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ ತಡೆಯುವ ವಿಶ್ವಸಂಕಲ್ಪವನ್ನು ದೃಢಗೊಳಿಸಿವೆ.

ವೈಜ್ಞಾನಿಕ ಸಂಶೋಧನೆಗಳು ತಿಳಿಸುವಂತೆ, ಜಾಗತಿಕ ತಾಪಮಾನ ಮಾಲಿನ್ಯವನ್ನು ನಾವೀಗ ತ್ವರಿತ ರೀತಿಯಲ್ಲಿ ಕಡಿಮೆ ಮಾಡದಿದ್ದರೆ, ನಿರಂತರವಾಗಿ ಹೆಚ್ಚುತ್ತಿರುವ ಉಷ್ಣತೆ ಭೂಮಿಯಿಂದ ಹೊರಹೋಗದೆ,  ವಾತಾವರಣದಲ್ಲಿಯೇ ಶಾಶ್ವತವಾಗಿ ಉಳಿದುಕೊಂಡು ‘ಇಂಗಾಲ ಬೇಸಿಗೆ’ಯಲ್ಲಿ ನಾವು ಸಿಲುಕಿಹಾಕಿಕೊಳ್ಳುವ ಅಪಾಯದಲ್ಲಿದ್ದೇವೆ.

ಅಮೇರಿಕದ ಕವಿ ರಾಬರ್ಟ್ ಫ್ರಾಸ್ಟ್ ಹೇಳಿದಂತೆ, ‘ಕೆಲವರು, ಜಗತ್ತಿನ ಅಂತ್ಯ ಬೆಂಕಿಯಿಂದ, ಇನ್ನು ಕೆಲವರು ಮಂಜುಗಡ್ಡೆಯಿಂದ ಅನ್ನುತ್ತಾರೆ. ನಮಗೆ ಯಾವುದಾದರೂ ಅಡ್ಡಿಯಿಲ್ಲ

ಆದರೆ, ನಮ್ಮೆಲ್ಲರ ದುರಾದೃಷ್ಟ ಹಾಗಿರಬೇಕೆಂದೇನೂ ಇಲ್ಲ. ಅದಕ್ಕಾಗಿ ನಾವೀಗ ಭೂಮಿಯೊಂದಿಗೆ ಶಾಂತಿ ಕಾಯ್ದುಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯ ಗಂಭೀರತೆಗೆ ನಮ್ಮ ನಾಗರಿಕತೆಯನ್ನು ಶೀಘ್ರವಾಗಿ ಅಣಿಗೊಳಿಸಬೇಕಾಗಿದೆ. ಇತಿಹಾಸದಲ್ಲಿ ಇಂತಹ ಸನ್ನದ್ಧತೆ, ರಾಷ್ಟ್ರಗಳು ಯುದ್ಧಕ್ಕಾಗಿ ಸಜ್ಜುಗೊಂಡಾಗ ಮಾತ್ರ ಕಂಡುಬಂದಿತ್ತು. ಆಗ ನಾಯಕರುಗಳು ತಮ್ಮ ಉಳಿವಿಗಾಗಿ, ಕೊನೆಯ ಕ್ಷಣದಲ್ಲಿ ಉತ್ತೇಜಕ ಮಾತುಗಳನ್ನಾಡಿ, ಜನರಲ್ಲಿ ಧೈರ್ಯ, ಭರವಸೆ ತುಂಬಿ, ಎದುರಾದ ಸುದೀರ್ಘ ಮತ್ತು ಮಾರಣಾಂತಿಕ ಸವಾಲನ್ನು ಎದುರಿಸಲು ಎಲ್ಲಾ ತ್ಯಾಗಮಾಡಿ, ಹೋರಾಟಗಳನ್ನು ಗೆದ್ದಿದ್ದರು.

ಈಗ ಅಂತಹುದೇ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇದು ದಾರಿ ತಪ್ಪಿಸುವ ಮಾತುಗಳಲ್ಲ.  ಇದರ ಪರಿಣಾಮ ಉಳಿದವರಿಗೆ ಮಾತ್ರ, ನಮಗಲ್ಲವೆಂದು ತಿಳಿಯುವುದು ತಪ್ಪು. ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿಯೂ, ಸಾಮಾನ್ಯ ಜೀವನ ನಡೆಸಬಹುದೆನ್ನುವುದು ಕೇವಲ ಭ್ರಮೆ. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ನಾವು ಸ್ವತಃ ಮಾಡದಿರುವುದನ್ನೂ ಸಹ ಮಾಡಿಸುತ್ತದೆ.

ನನ್ನ ಈ ಕರೆ, ಜಗತ್ತಿನ ಭವಿಷ್ಯದ ರಕ್ಷಣೆಗಾಗಿ. ಈ ಹಿಂದೆ ಎಲ್ಲಾ ವರ್ಗದ ನಾಗರಿಕರು, ಇಂತಹ ಕರೆಗಳಿಗೆ ಧೈರ್ಯ, ಔದಾರ್ಯ ಮತ್ತು ಇಚ್ಚಾಶಕ್ತಿ ಪ್ರದರ್ಶಿಸಿ, ಹೋರಾಡಿದ ಉದಾಹರಣೆಗಳಿವೆ. ಆಗ ಅವರ ಶತ್ರುಗಳು, ಸಾಮಾನ್ಯವಾಗಿ ಜನರು ಸ್ವಯಂಪ್ರೇರಣೆಯಿಂದ ಹೋರಾಟಕ್ಕೆ ಧುಮುಕುವುದಿಲ್ಲವೆಂದು ತಪ್ಪಾಗಿ ಗ್ರಹಿಸಿದ್ದರು.

ಪ್ರಸ್ತುತ, ಹವಾಮಾನ ಬಿಕ್ಕಟ್ಟಿನ ತುರ್ತುಪರಿಸ್ಥಿತಿ ಎದುರಾಗಿದೆ. ಇದೊಂದು ನಿಜವಾದ ಸಾರ್ವತ್ರಿಕ ಸಮಸ್ಯೆ, ಅಂತಿಮ ಕ್ಷಣ. ಈಗ, ಈ ಸವಾಲನ್ನು ನಿರ್ಲಕ್ಷಿಸಿದರೆ ಅಪಾರ ಬೆಲೆ ತೆರಬೇಕಾಗುತ್ತದೆ. ಮಾತ್ರವಲ್ಲ, ಅದು ಸಮರ್ಥನೀಯವಲ್ಲ. ಸದ್ಯಕ್ಕೆ, ನಮ್ಮ ಹಣೆಬರಹ ಬದಲಾಯಿಸುವ ಅವಕಾಶ ನಮ್ಮ ಮುಂದಿದೆ. ಉಳಿದಿರುವ ಪ್ರಶ್ನೆ ಇದೊಂದೇ, ಸಮಯಕ್ಕೆ ಸರಿಯಾಗಿ ಸ್ಪಂದಿಸುವ ಇಚ್ಚಾಶಕ್ತಿ ನಮಗಿದೆಯೇ ಅಥವಾ ಇನ್ನೂ ಭ್ರಮೆಯಲ್ಲಿ ಬಂಧಿಯಾಗಿದ್ದೇವೆಯೇ?

ಮಹಾತ್ಮ ಗಾಂಧೀಜಿ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು, ‘ಸತ್ಯಾಗ್ರಹ’ಎನ್ನುವ ಸಂಕಲ್ಪದ ಮೂಲಕ ಜಾಗೃತಗೊಳಿಸಿದರು.

ಹಾಗೆಯೇ, ವಾಸ್ತವ ಸತ್ಯದ ಅರಿವಿನ ಮೂಲಕ ನಾವು ಈ ಭೂಮಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸಬೇಕಿದೆ. ಸತ್ಯ ನಮ್ಮನ್ನು ಒಂದುಗೂಡಿಸುತ್ತದೆ. ಮಾತ್ರವಲ್ಲ, ಅದಕ್ಕೆ ಸಾಮೂಹಿಕ ಪ್ರಯತ್ನ ಮತ್ತು ಜವಾಬ್ದಾರಿಯ ಮೂಲಕ ‘ನಾನು’ ಮತ್ತು ‘ನಾವು’ ನಡುವಿನ ಅಂತರ ಕಡಿಮೆಮಾಡುವ ಶಕ್ತಿಯಿದೆ.

ಆಫ್ರಿಕದ ಗಾದೆಯೊಂದು ಹೇಳುವಂತೆ, “ನಿನಗೆ ಬೇಗನೆ ಹೋಗಬೇಕಿದ್ದರೆ ಏಕಾಂಗಿಯಾಗಿ ಹೋಗು, ದೂರ ಕ್ರಮಿಸಬೇಕಿದ್ದರೆ ಜೊತೆಯಾಗಿ ಹೋಗು’. ಆದರೆ, ನಾವೀಗ ಬೇಗನೆ ಬಲುದೂರ ಕ್ರಮಿಸಬೇಕಿದೆ.

ಈ ಸಮಸ್ಯೆಗೆ ಉತ್ತರ, ವೈಯಕ್ತಿಕ ಪ್ರಯತ್ನ ಎನ್ನುವ ಕಲ್ಪನೆಯನ್ನು ನಾವು ಮೊದಲು ತ್ಯಜಿಸಬೇಕು. ಇವುಗಳಿಂದ ಉಪಯೋಗವೇನೋ ಇದೆ. ಆದರೆ ಸಾಮೂಹಿಕ ಪರಿಶ್ರಮವಿಲ್ಲದೆ, ನಾವು ಸಾಕಷ್ಟು ದೂರ ಕ್ರಮಿಸಲಾರೆವು. ಈ ನಿಟ್ಟಿನಲ್ಲಿ ನಾವು ಜಗತ್ತನ್ನು ಸಜ್ಜುಗೊಳಿಸಲು, ಕೇವಲ ಸೈದ್ಧಾಂತಿಕ ಅನುಸರಣೆಯ ಸ್ಥಾಪನೆಯಲ್ಲಿಯೇ ಕಾಲಹರಣ ಮಾಡುವುದು ವ್ಯರ್ಥ. ಯಾಕೆಂದರೆ, ಸ್ವಯಂಪ್ರೇರಣೆಯಿಂದ ಹುಟ್ಟುವ ಪ್ರತಿ ಸ್ಪಂದನೆಯಲ್ಲಿಯೂ ಸೃಜನಶೀಲತೆ, ತತ್ವ, ಮೌಲ್ಯ, ಕಾನೂನು ಅಥವಾ ಒಪ್ಪಂದಗಳು ಅಡಕವಾಗಿರುತ್ತವೆ.

ಈ ಹೊಸ ಪ್ರಜ್ಞೆಗೆ, ಇಡೀ ಮಾನವ ಜನಾಂಗವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಯಾಕೆಂದರೆ, ಪರಿಸರ ಸ್ನೇಹಿ ಸಂಶೋಧನೆಗಳಾದ, ವಾಣಿಜ್ಯ ಉದ್ದೇಶಗಳಿಗೆ ಸೌರಶಕ್ತಿ ಬಳಕೆ, ಅಥವಾ ಇಂಗಾಲರಹಿತ ಎಂಜಿನಿನ ಆವಿಷ್ಕಾರ, ಇತ್ಯಾದಿ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುವ ಸಂಶೋಧಕರು ಲಾಗೋಸ್, ಮುಂಬೈ ಅಥವಾ ಮಾಂಟೆವಿಡಿಯೊದ ವಾಸಿಗಳಾಗಿರಬಹುದು. ಹಾಗಾಗಿ ಜಗತ್ತನ್ನು ಬದಲಾಯಿಸುವ ಅವಕಾಶ, ಪ್ರಪಂಚದ ಮೂಲೆ ಮೂಲೆಯ ಉದ್ಯಮಿಗಳು ಮತ್ತು ಸಂಶೋಧಕರಿಗೆ ಸಿಗುವಂತಾಗಬೇಕು.

ಸಾಮಾನ್ಯವಾಗಿ ಯಾವುದೇ ನೈತಿಕ ಉದ್ದೇಶಕ್ಕಾಗಿ ನಾವು ಒಂದುಗೂಡಿದಾಗ ಅದರಲ್ಲಿ ಸ್ಪಷ್ಟತೆ ಮತ್ತು ನೈಜ್ಯತೆ ಇರುತ್ತದೆ. ಹಾಗೆಯೇ, ಆಧ್ಯಾತ್ಮಿಕತೆ ಕೂಡ ನಮ್ಮನ್ನು ಪರಿವರ್ತಿಸಬಹುದು. 1940ರ ದಶಕದಲ್ಲಿ, ಸರ್ವಾಧಿಕಾರವನ್ನು ಪ್ರಪಂಚದಾದ್ಯಂತ ಸೋಲಿಸಿದ ಪೀಳಿಗೆಯು, ಇಂತಹ ಸವಾಲನ್ನು ಎದುರಿಸಲು ಮಾರ್ಷಲ್ ಯೋಜನೆ, ವಿಶ್ವಸಂಸ್ಥೆ ಮತ್ತು ಜಾಗತಿಕ ಸಹಕಾರ ಮುಖ್ಯವೆಂದು ತಿಳಿದು,  ಅದಕ್ಕನುಗುಣವಾಗಿ ನೈತಿಕತೆ ಮತ್ತು ದೂರದೃಷ್ಟಿ ಅಳವಡಿಸಿಕೊಂಡಿತು. ಈ ಹೊಸ ದೃಷ್ಟಿಕೋನದಿಂದಾಗಿ ಯೂರೋಪಿನ ಏಕೀಕರಣವಾಯಿತು, ಮಾತ್ರವಲ್ಲ, ಜರ್ಮನಿ, ಜಪಾನ್, ಇಟಲಿ ಹಾಗು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊರಹೊಮ್ಮಿತು. ಇಂತಹ ದೂರದೃಷ್ಟಿಯ ನಾಯಕರೊಬ್ಬರು, “ನಾವೀಗ ನಕ್ಷತ್ರಗಳನ್ನು ನೋಡಿ ಮುನ್ನೆಡೆಯಬೇಕಿದೆ, ಹಾದುಹೋಗುವ ಹಡಗಿನ ಬೆಳಕಿನಿಂದಲ್ಲ”, ಎಂಬ ಹೇಳಿಕೆ ನೀಡಿದರು.

ಎರಡನೇ ಮಹಾಯುದ್ಧದ ಕೊನೆಯ ವರ್ಷದಲ್ಲಿ, ನೀವು ನೊಬೆಲ್ ಶಾಂತಿ ಪ್ರಶಸ್ತಿಯನ್ನು, ನನ್ನ ಹುಟ್ಟೂರು ಟೆನ್ನೆಸ್ಸೀ ನಿವಾಸಿ, ಕಾರ್ಡೆಲ್ ಹಲ್ ರವರಿಗೆ ಕೊಟ್ಟಿದ್ದೀರಿ. ಅವರನ್ನು ಫ್ರಾಂಕ್ಲಿನ್ ರೂಸ್ವೆಲ್ಟ್ “ವಿಶ್ವಸಂಸ್ಥೆಯ ಪಿತಾಮಹ” ಎಂದು ಬಣ್ಣಿಸಿದ್ದಾರೆ. ನನ್ನ ತಂದೆ ಕೂಡ, ಅವರ ಕಾರ್ಯಬದ್ಧತೆಯಿಂದ ಸ್ಫೂರ್ತಿ ಪಡೆದು, ಮುಂದೆ, ಅಮೆರಿಕಾದ ಕಾಂಗ್ರೆಸ್ ಮತ್ತು ಸೆನೆಟಿನಲ್ಲಿ, ವಿಶ್ವಶಾಂತಿ ಮತ್ತು ಜಾಗತಿಕ ಸಹಕಾರಕ್ಕಾಗಿ ಶ್ರಮಿಸಿದರು.

ನನ್ನ ಹೆತ್ತವರು, ಯಾವಾಗಲೂ ಹಲ್ ಅವರ ಕುರಿತು ಗೌರವ ಮತ್ತು ಮೆಚ್ಚುಗೆಯಿಂದ  ಮಾತನಾಡುತ್ತಿದ್ದರು. ಎಂಟು ವಾರಗಳ ಹಿಂದೆ, ನೀವು ಈ ಬಹುಮಾನವನ್ನು ಘೋಷಿಸಿದಾಗ, ನನ್ನ ಊರಿನ ವೃತ್ತಪತ್ರಿಕೆಗಳು ‘ಕಾರ್ಡೆಲ್ ಹಲ್ ಗೆದ್ದ ಬಹುಮಾನವನ್ನು ನಾನು ಗೆದ್ದಿದ್ದೇನೆ’ ಎಂದು ಪ್ರಕಟಿಸಿದಾಗ, ನಾನು ಭಾವುಕನಾದೆ. ಒಂದು ವೇಳೆ, ನನ್ನ ಹೆತ್ತವರು ಇಂದು ಜೀವಂತವಿದ್ದಿದರೆ ಎಷ್ಟೊಂದು ಸಂತೋಷ ಅನುಭವಿಸುತ್ತಿದ್ದರು ಎಂಬ ಅರಿವು ನನಗಿದೆ.

ನಿರಂಕುಶಾಧಿಕಾರದಿಂದ ಉಂಟಾದ ವಿಶ್ವಬಿಕ್ಕಟ್ಟನ್ನು ಪರಿಹರಿಸಲು, ಹಲ್ ಅವರ ಪೀಳಿಗೆಯು ಹೇಗೆ ನೈತಿಕ ಅಧಿಕಾರ ಕಂಡುಕೊಂಡಿತೋ, ನಾವು ಕೂಡ ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ಅದೇ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಚೀನೀ ಮತ್ತು ಜಪಾನೀ ಭಾಷೆಗಳಲ್ಲಿ ಬಳಸಲಾಗುವ ಕಾಂಜಿ ಲಿಪಿಯಲ್ಲಿ, ‘ಬಿಕ್ಕಟ್ಟು’ ಅನ್ನುವ ಶಬ್ದವನ್ನು ಎರಡು ಚಿಹ್ನೆಗಳೊಂದಿಗೆ ಬರೆಯಲಾಗಿದೆ. ಮೊದಲನೆಯ ಚಿಹ್ನೆಯ ಅರ್ಥ ‘ಅಪಾಯ’, ಎರಡನೆಯದರದ್ದು ‘ಅವಕಾಶ’. ಪ್ರಸಕ್ತ ಸಂದರ್ಭದಲ್ಲಿ, ಇವೆರಡೂ ಮುಖ್ಯ.

ಈ ಪ್ರಸ್ತುತತೆಯಲ್ಲಿ, ಹವಾಮಾನ ಬಿಕ್ಕಟ್ಟಿನ ಅಪಾಯವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ, ಬಹಳ ಸಮಯದಿಂದ ನಿರ್ಲಕ್ಷಿಸಲ್ಪಟ್ಟಿರುವ ಇತರ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸಾಮೂಹಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ, ನೈತಿಕ ಅಧಿಕಾರ ಪಡೆಯಲು ಇದೊಂದು ಸುಸಂದರ್ಭ.

ವಿಶೇಷವಾಗಿ, ನಾವಿಲ್ಲಿ ಹವಾಮಾನ ಬಿಕ್ಕಟ್ಟು ಮತ್ತು ಇನ್ನಿತರ ಸಮಸ್ಯೆಗಳಾದ ಬಡತನ, ಹಸಿವು, ಎಚ್‌ಐವಿ-ಏಡ್ಸ್ ಹಾಗು ಇತರ ಸಾಂಕ್ರಾಮಿಕ ರೋಗಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು. ಈ ಸಮಸ್ಯೆಗಳು ಹೇಗೆ ಜೋಡಣೆಯಾಗಿದ್ದವೆಯೋ, ಪರಿಹಾರಗಳು ಸಹ ಒಂದಕ್ಕೊಂದು ಪೂರಕವಾಗಿವೆ. ಜಾಗತಿಕಮಟ್ಟದಲ್ಲಿ, ಪರಿಸರ ಸಂರಕ್ಷಣೆ ವಿಶ್ವ ಸಮುದಾಯದ ಕೇಂದ್ರೀಕೃತ ತತ್ವವಾಗಬೇಕಿದೆ.

ಹದಿನೈದು ವರ್ಷಗಳ ಹಿಂದೆ, ನಾನು ರಿಯೊ ಡಿ ಜನೈರೊದಲ್ಲಿ ನಡೆದ ‘ಭೂ ಶೃಂಗಸಭೆಯಲ್ಲಿ’ ಈ ಬಗ್ಗೆ ಮಾತಾಡಿದ್ದೇನೆ. ಪುನಃ ಹತ್ತು ವರ್ಷಗಳ ಹಿಂದೆ, ಅದನ್ನು ಕ್ಯೋಟೋ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದೆ. ಈ ವಾರ ಮತ್ತೆ, ವಾಯುಮಾಲಿನ್ಯ ಹೊರಸೂಸುವಿಕೆಯ ಮೇಲೆ ಜಾಗತಿಕ ನಿರ್ಬಂಧ ಹೇರುವ ಬಗ್ಗೆ, ಇದರ ತ್ವರಿತ ಕಡಿವಾಣಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಂಚುವ ಕುರಿತು, ಮತ್ತು ಹೊರಸೂಸುವಿಕೆಯ ವಾಣಿಜ್ಯ ಮಾರುಕಟ್ಟೆ ನಿಯಂತ್ರಿಸುವ ಒಪ್ಪಂದ ಅಳವಡಿಕೆಗೆ ಕಠಿಣಕ್ರಮ ಕೈಗೊಳ್ಳುವಂತೆ, ಬಾಲಿ ಸಮ್ಮೇಳನದ ಪ್ರತಿನಿಧಿಗಳನ್ನು ಒತ್ತಾಯಿಸುತ್ತೇನೆ.

ಈ ಪ್ರಸಕ್ತ ಒಪ್ಪಂದವನ್ನು 2010ರ ಆರಂಭದ ವೇಳೆಗೆ, ಅಂದರೆ, ಪ್ರಸ್ತುತ ಯೋಜನೆಗಿಂತ ಎರಡು ವರ್ಷ ಮುಂಚಿತವಾಗಿ ವಿಶ್ವದೆಲ್ಲೆಡೆ ಜಾರಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ, ನಾವು ಶೀಘ್ರವಾಗಿ ಕಾರ್ಯೋನ್ಮುಖರಾಗಬೇಕಿದೆ.

ಮುಂದಿನ ವರ್ಷದ ಆರಂಭದಲ್ಲಿ, ಪ್ರಸಕ್ತ ಬಾಲಿ ಸಮ್ಮೇಳನದಲ್ಲಿ ಏನು ಸಾಧಿಸಲಾಗಿದೆ ಮತ್ತು ಈ ಬಿಕ್ಕಟ್ಟನ್ನು ಹೇಗೆ ಪರಿಹರಿಸಬೇಕೆಂದು ಚರ್ಚಿಸಲು, ವಿಶ್ವದ ಎಲ್ಲ ರಾಷ್ಟ್ರ ನಾಯಕರು ತಮ್ಮ ವೈಯಕ್ತಿಕ ಜವಾಬ್ದಾರಿಯಿಂದ ಸಭೆ ಸೇರಬೇಕು. ಮಾತ್ರವಲ್ಲ, ಈ ಒಪ್ಪಂದ ಪೂರ್ಣಗೊಳ್ಳುವವರೆಗೆ ಸನ್ನಿವೇಶಕ್ಕೆ ಅನುಗುಣವಾಗಿ, ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ರಾಷ್ಟ್ರ ನಾಯಕರು ಭೇಟಿಯಾಗುವುದು ಒಳ್ಳೆಯದು.

ಇದರೊಂದಿಗೆ, ಇಂಗಾಲವನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸಾಮರ್ಥ್ಯವಿಲ್ಲದ ಯಾವುದೇ ಹೊಸ ಕಲ್ಲಿದ್ದಲು ಉತ್ಪಾದನಾ ಘಟಕಕ್ಕೆ ತಕ್ಷಣ ನಿಷೇಧ ಹೇರಬೇಕಾಗಿದೆ. ಮುಖ್ಯವಾಗಿ, ನಾವು ಇಂಗಾಲದ ಬಳಕೆಯ ಮೇಲೆ ತೆರಿಗೆ ಹಾಕಬೇಕಾಗಿದೆ. ಇದನ್ನು ಪ್ರತಿ ರಾಷ್ಟ್ರದ ಕಾನೂನಿಗೆ ಅನುಸಾರವಾಗಿ ಹೇರಿ, ಜನರಿಗದನ್ನು ಮರುಪಾವತಿ ಮಾಡುವ ಮೂಲಕ, ಮಾಲಿನ್ಯ ಜಾಗೃತಿ ಮೂಡಿಸಬೇಕಿದೆ. ಇದೊಂದು ಅತ್ಯಂತ ಪರಿಣಾಮಕಾರಿ, ಸರಳ ಮಾರ್ಗ.

ಇಂದು, ವಿಶ್ವಕ್ಕೆ ಒಂದು ಒಕ್ಕೂಟದ ಅವಶ್ಯಕತೆಯಿದೆ. ಅದರಲ್ಲೂ ವಿಶೇಷವಾಗಿ, ಭೂಮಿಯು ಸಮತೋಲನ ಕಾಪಾಡಲು ಮಹತ್ತರ ಪಾತ್ರವಹಿಸಬೇಕಾದ ರಾಷ್ಟ್ರಗಳು ಈ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಮತ್ತು ಜಪಾನ್ ಈ ಸವಾಲನ್ನು ನಿರ್ವಹಿಸಲು ತೆಗೆದುಕೊಂಡ ಕ್ರಮಗಳಿಗೆ, ಮತ್ತು ಹವಾಮಾನ ಬಿಕ್ಕಟ್ಟು ಪರಿಹಾರವನ್ನು ತನ್ನ ಮೊದಲ ಆದ್ಯತೆಯನ್ನಾಗಿಸಿರುವ ಆಸ್ಟೆçÃಲಿಯಾದ ಹೊಸ ಸರ್ಕಾರಕ್ಕೆ ನಾನು ವಂದಿಸುತ್ತೇನೆ.

ಆದರೆ ಉತ್ತಮ ಫಲಿತಾಂಶವು, ಎರಡು ಪ್ರಮುಖ ರಾಷ್ಟ್ರಗಳಾದ ಅಮೇರಿಕಾ ಮತ್ತು ಚೀನಾದ ನಿರ್ಣಯಗಳ ಮೇಲೆ ಅವಲಂಬಿತವಾಗಿವೆ. ಆದರೆ, ಸಧ್ಯಕ್ಕಂತೂ ಅವೆರಡು ದೇಶಗಳು ವಿಫಲವಾಗಿವೆ.  ಭಾರತ ಸಹ ವೇಗವಾಗಿ ಅಭಿವೃದ್ಧಿ ಹೊಂದುತ್ತ ಈ ಸಾಲಿಗೆ ಸೇರುತ್ತಿದೆ. ಸಧ್ಯಕ್ಕೆ, ಈ ಎರಡು ದೇಶಗಳು ಅತ್ಯಂತ ಹೆಚ್ಚಿನ ಇಂಗಾಲ ಹೊರಸೂಸುತ್ತಿವೆ. ಈ ನಿಟ್ಟಿನಲ್ಲಿ, ನನ್ನ ದೇಶ ಅಮೇರಿಕಾ ಮುಂದಾಳತ್ವ ವಹಿಸಬೇಕಾಗಿದೆ, ಇಲ್ಲವಾದಲ್ಲಿ, ಇತಿಹಾಸ ಪುಟಗಳಲ್ಲಿ ತನ್ನ ವಿಫಲತೆಯನ್ನು ಬರೆದಿಡಬೇಕಾಗುತ್ತದೆ.

ಈ ಎರಡೂ ದೇಶಗಳು ಬೂಟಾಟಿಕೆ ಬಿಟ್ಟು, ಇತರ ದೇಶಗಳ ಅಪ್ರಬುದ್ಧ ನಡವಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅನುಸರಿಸುವುದನ್ನು ನಿಲ್ಲಿಸಬೇಕು ಮತ್ತು ಜಗತ್ತಿನ ಉಳಿವಿಗಾಗಿ ಕಾರ್ಯಸೂಚಿಯನ್ನು ಅಭಿವೃದ್ಧಿಪಡಿಸಬೇಕು.

ಈ ನಿಟ್ಟಿನಲ್ಲಿ, ಮುಂಬರುವ ವರ್ಷಗಳು ನಾವು ಸೂಕ್ತ ನಿರ್ಣಯ ತೆಗೆದುಕೊಳ್ಳಲೇಬೇಕಾದ ಅಂತಿಮ ಅವಕಾಶ. ನಾವಿದನ್ನು ಮಾಡಿದರೆ, ನಮ್ಮ ಜಗತ್ತಿನ ಭವಿಷ್ಯ ಉಜ್ವಲವಾಗಿರುತ್ತದೆ. ಇದನ್ನು ಬಿಟ್ಟು, ಯಾವುದೇ ಪ್ರಯತ್ನ, ವೆಚ್ಚ ಅಥವಾ ಬದಲಾವಣೆಯಿಲ್ಲದೆ ಪರಿಹಾರ ಸಿಗುತ್ತದೆ ಎಂಬ ಭ್ರಮೆ ಸಲ್ಲದು. ಈಗಾಗಲೇ ವ್ಯರ್ಥಮಾಡಿದ ಅವಕಾಶವನ್ನು ಪುನಃ ಪಡೆದುಕೊಳ್ಳಲು, ನೈತಿಕತೆಯಿಂದ ಮಾತನಾಡಲು ಅರ್ಹತೆ ಪಡೆಯಲು, ಈ ಕೆಳಗಿನವು ನಮ್ಮ ಮುಂದಿರುವ ಕಟು ವಾಸ್ತವ ಸತ್ಯಗಳು:

ನಮ್ಮ ಮುಂದಿನ ದಾರಿ ಬಲು ಕಷ್ಟದಾಯಕ. ವಾಸ್ತವವಾಗಿ, ನಾವು ಕಾರ್ಯಸಾಧ್ಯವೆಂದು ನಂಬಿಕೊಂಡಿರುವ ಪ್ರಸ್ತುತ ಅವಕಾಶಗಳು ಬಹಳ ಕಡಿಮೆ ಮತ್ತು ಅಸ್ಪಷ್ಟವಾಗಿವೆ. ಆದ್ದರಿಂದ, ನಾವು ಅವಕಾಶಗಳ ಗಡಿಗಳನ್ನು ವಿಸ್ತರಿಸಬೇಕಾಗಿದೆ. ಇನ್ನೊಂದು ಮಾತಿನಲ್ಲಿ ವಿವರಿಸುವುದಾದರೆ, ಸ್ಪೇನ್ ದೇಶದ ಕವಿ ಆಂಟೋನಿಯೊ ಮಚಾದೊ ಹೇಳಿದಂತೆ, “ದಾರಿ ಹೋಕ, ನಿನಗಿಲ್ಲಿ ಯಾವುದೇ ಮಾರ್ಗವಿಲ್ಲ. ನೀನು ನಡೆಯುತ್ತಲೇ ದಾರಿ ಮಾಡಬೇಕಾಗಿದೆ.”

ನಾವಿಂದು, ಈ ದಾರಿಯಲ್ಲಿ ಕೊನೆಯ ಅದ್ರಷ್ಟಶಾಲಿಗಳಂತೆ ನಿಂತಿದ್ದೇವೆ. ಆದ್ದರಿಂದ, ನಾನು ಆರಂಭದಲ್ಲಿ ಹೇಳಿದಂತೆ, ಭವಿಷ್ಯದ ಎರಡು ಸಾಧ್ಯತೆಗಳೊಂದಿಗೆ ಭಾಷಣ ಕೊನೆಗೊಳಿಸುತ್ತಿದ್ದೇನೆ- ನಮಗೀಗ ಸ್ಪಷ್ಟವಾದ ಸಾಧ್ಯತೆ ಮತ್ತು ಪ್ರಾರ್ಥನೆಯೊಂದಿಗೆ, ಆ ಎರಡು ಭವಿಷ್ಯಗಳ ನಡುವೆ ಆಯ್ಕೆ ಮಾಡುವ ತುರ್ತಿದೆಯೆಂದು ಸ್ಪಷ್ಟಪಡಿಸುತ್ತೇನೆ.

ನಾರ್ವೆಯ ಶ್ರೇಷ್ಠ ನಾಟಕಕಾರ ಹೆನ್ರಿಕ್ ಇಬ್ಸೆನ್ ಹೀಗೆ ಬರೆಯುತ್ತಾರೆ, “ಈ ದಿನಗಳಲ್ಲಿ, ಯುವಪೀಳಿಗೆ ನನ್ನ ಬಾಗಿಲು ಬಡಿಯುತ್ತಿದೆ.”

ಹಾಗೆಯೇ, ಭವಿಷ್ಯವು ನಮ್ಮ ಮನೆಬಾಗಿಲಿಂದು ತಟ್ಟುತ್ತಿದೆ. ಮುಂದಿನ ಪೀಳಿಗೆ, ನಮಗೆ ಈ ಎರಡು ಪ್ರಶ್ನೆಗಳಲ್ಲಿ ಒಂದನ್ನು ಕೇಳುತ್ತದೆ. ಮೊದಲನೆಯದು: “ನೀವು ಇಷ್ಟು ದಿನ ಏನು ಯೋಚಿಸುತ್ತಿದ್ದಿರಿ, ಯಾಕೆ ಏನೂ ಮಾಡಿಲ್ಲ?”

ಅಥವಾ ಇದನ್ನೂ ಕೇಳಬಹುದು: “ಈ ಬಿಕ್ಕಟ್ಟನ್ನು ಪರಿಹರಿಸಲು ಅಸಾಧ್ಯವೆಂದು ಅನೇಕರು ಹೇಳಿದ್ದರೂ, ಯಶಸ್ವಿಯಾಗಿ ಪರಿಹರಿಸಲು ನೈತಿಕ ಧೈರ್ಯ ಹೇಗೆ ನೀವು ಕಂಡುಕೊಂಡಿರಿ?”

ಈ ಬೃಹತ್ ಪರಿಹಾರ ಕಾರ್ಯ ಆರಂಭಿಸಲು ಅಗತ್ಯವಿರುವ ಎಲ್ಲ ಪರಿಕರಗಳನ್ನು ನಾವು ಹೊಂದಿದ್ದೇವೆ, ಬಹುಶಃ, ರಾಜಕೀಯ ಇಚ್ಚಾಶಕ್ತಿಯನ್ನು ಹೊರತುಪಡಿಸಿ. ಅದೃಷ್ಟವಷಾತ್, ರಾಜಕೀಯ ಇಚ್ಚಾಶಕ್ತಿಯೆನ್ನುವುದು ನವೀಕರಿಸಬಹುದಾದ ಸಂಪನ್ಮೂಲವಾಗಿದೆ.

ಆದುದರಿಂದ, ನಾವೀಗ ಎಲ್ಲಾ ಜೊತೆಯಾಗಿ ಹೇಳೋಣ: “ನಮಗೊಂದು ಸದುದ್ದೇಶವಿದೆ ಮತ್ತು ಇದಕ್ಕಾಗಿ ನಾವೆಲ್ಲಾ ಸಾಮೂಹಿಕ ಇಚ್ಚಾಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತೇವೆ.”

Leave a Reply

Your email address will not be published.