ಅಳತೆಗೆ ಸಿಗದ ಅಲೆ ಮತ್ತು ತಲೆಯ ಲೆಕ್ಕ!

ಇನ್ನೊಂದು ಕೊವಿಡ್ ಅಲೆಗೆ ತಯಾರಿ ಎಂದರೆ ಅದಕ್ಕೆ ಸರ್ಕಾರಿ ವ್ಯವಸ್ಥೆ ಸಡಗರದಿಂದಲೇ ಸಜ್ಜುಗೊಳ್ಳುತ್ತದೆ. ತಯಾರಿ ಎಂದರೆ ಖರೀದಿಗಳೆಂಬುದು ಈ ಸಡಗರಕ್ಕೆ ಕಾರಣ. ಅದಕ್ಕಾಗಿ ಕಾದುಕೊಂಡಿರುವವರಿಗೆ ಇಂತಹ ಅವಕಾಶ ಒಂದು ಹಬ್ಬ! ಆದರೆ ನಿಜಕ್ಕೂ ಈ ಅಲೆಗಳು ಅಸ್ತಿತ್ವದಲ್ಲಿ ಇವೆಯೇ?

-ರಾಜಾರಾಂ ತಲ್ಲೂರು

ಕುಂದಾಪುರದ ಕಡೆ ಒಂದು ಮಾತಿದೆ. `ಲೆಕ್ಕ ಪಕ್ಕ, ಪಡಾವಿಗೆ ಸಿಕ್ಕ’

ಹೊರನೋಟಕ್ಕೆ ಭಾರೀ ಲೆಕ್ಕಾಚಾರ ಎಂದು ತೋರಿಬಂದರೂ, ವಾಸ್ತವದಲ್ಲಿ ಟೊಳ್ಳಾಗಿರುವ ಲೆಕ್ಕಾಚಾರಕ್ಕೆ ವ್ಯಂಗ್ಯವಾಗಿ ಹೇಳುವ ಮಾತಿದು. ಕೊರೊನಾ ಜಗನ್ಮಾರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಲೆಕ್ಕಾಚಾರಗಳು ಬಹುತೇಕ ಇದೇ ಸಾಲಿಗೆ ಸೇರುತ್ತವೆ. ಈ ವರ್ಷಾಂತ್ಯಕ್ಕೆ ಜಗನ್ಮಾರಿಯ ಮೂರನೇ ಅಲೆ ಬರಲಿದ್ದು, ಅದು ಪುಟ್ಟ ಮಕ್ಕಳನ್ನು ಕಾಡಲಿದೆ ಎಂಬ ಗುಲ್ಲು ಎದ್ದಿದೆ. ಮಕ್ಕಳನ್ನು ಈ ಮೂರನೇ ಅಲೆಯಿಂದ ರಕ್ಷಿಸಲು ತಯಾರಿಗಳು ಆರಂಭ ಆಗಿವೆ.

ಸೋಂಕಿನ ಅಲೆ ಎಂದರೆ ಏನು?

ಸೋಂಕಿನ ಅಲೆಗೆ ಒಂದು ನಿಖರವಾದ ವೈಜ್ಞಾನಿಕ ವ್ಯಾಖ್ಯಾನ ಇಲ್ಲ. ಆದರೆ ಒಂದು ಸಾಂಕ್ರಾಮಿಕ ಹರಡುವ ಪ್ರಮಾಣ ಏರುತ್ತಾ ಹೋಗಿ, ಒಂದು ಗರಿಷ್ಠ ಮಿತಿಯನ್ನು ತಲುಪಿ, ಅಲ್ಲಿಂದ ಇಳಿಯುತ್ತಾ ಬರುವುದನ್ನು ಒಂದು ಅಲೆ ಎಂದು ಗುರುತಿಸುತ್ತಾರೆ. ಅಲೆಗಳು ಕೆಲವೊಮ್ಮೆ ಮೊದಲೇ ಅನುಮಾನಿಸಬಹುದಾದ ಸೀಸನಲ್ ಏರಿಳಿತಗಳನ್ನು ಹೊಂದಿರುತ್ತವೆ. ಒಂದು ಭೂಪ್ರದೇಶದ ಗಾತ್ರ, ಆ ನಿರ್ದಿಷ್ಟ ರೋಗಾಣುವಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವವರ (ಅಂದರೆ ರೋಗ ಈಗಾಗಲೇ ಬಂದು ವಾಸಿಯಾದವರು) ಸಂಖ್ಯೆಗಳು ಕೂಡ ಈ ಅಲೆಯ ಗಾತ್ರ, ಅವಧಿ ಇತ್ಯಾದಿಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೊರೊನಾ ಮೂರನೇ ಅಲೆ ಎಂದರೆ ನಿಜಕ್ಕೂ ಏನು ಎಂಬುದನ್ನು ವಿವರವಾಗಿ ಗಮನಿಸೋಣ.

ಭಾರತದಲ್ಲಿ ಅಲೆ ಲೆಕ್ಕ

ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಎಂಬುದು ಬಹಳ ಸೀಮಿತವಾದ ವ್ಯವಸ್ಥೆ. ಇಲ್ಲಿನ 136 ಕೋಟಿ ಜನಸಂಖ್ಯೆಗೆ ಒಟ್ಟು ವೈದ್ಯರಿರುವುದೇ 12,55,786. ಅಂದರೆ ವೈದ್ಯ ರೋಗಿ ಅನುಪಾತ 1:1343. ಈ ಸಂಖ್ಯೆಗೆ ದೇಶದಲ್ಲಿರುವ ಆಯುರ್ವೇದ, ಯುನಾನಿ ಇತ್ಯಾದಿ ವಿಭಾಗಗಳ 7.88 ಲಕ್ಷ ವೈದ್ಯರನ್ನು ಸೇರಿಸಿದರೆ, ಆಗ ವೈದ್ಯ ರೋಗಿ ಅನುಪಾತ 1:825 ಇದು ಜೂನ್ 30, 2020ರಂದು ಇದ್ದ ಲೆಕ್ಕಾಚಾರ. ಆರೋಗ್ಯ ಸಚಿವರು ದೇಶದ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ನೀಡಿದ ಮಾಹಿತಿ ಇದು. ಇಂತಹ ಭಾರತದಲ್ಲಿ ಕೊರೊನಾ ಬಂದಾಗ, 2020ರ ಹೊತ್ತಿಗೆ ಸರ್ಕಾರದ ಬಳಿ ಅದನ್ನು ಎದುರಿಸಲು ಏನು ವ್ಯವಸ್ಥೆ ಇತ್ತು ಎಂಬುದನ್ನು (ಬಾಕ್ಸ್ ನೋಡಿ) ಒಮ್ಮೆ ಲೆಕ್ಕ ಹಾಕಿಕೊಳ್ಳಿ.

ಈ ಸಂಖ್ಯೆಗಳಲ್ಲಿ ಈಗ ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳೆರಡರಲ್ಲೂ ಏರಿಕೆಯಾಗಿದೆಯಾದರೂ, ಭಾರತದ ಗಾತ್ರಕ್ಕೆ ಅದು ಎಲ್ಲಿಗೂ ಸಾಲದು. ಮೇಲಾಗಿ ಈ ವ್ಯವಸ್ಥೆಗಳಲ್ಲಿ 65%ಗೂ ಹೆಚ್ಚು ನಗರ ಕೇಂದ್ರಿತ. ಆರೋಗ್ಯ ವ್ಯವಸ್ಥೆ ಅತ್ಯಂತ ಸೀಮಿತವಾಗಿದ್ದಾಗ, ಒಂದು ಸಾಂಕ್ರಾಮಿಕದ ಒತ್ತಡ ಆ ವ್ಯವಸ್ಥೆಯ ಕಂಠಮಟ ಬಂದರೆ, ವ್ಯವಸ್ಥೆ ಕುಸಿಯತೊಡಗುವುದು ಸಹಜ. ಆದರೆ, ಹೀಗೆ ಕುಸಿದದ್ದನ್ನೇ “ಅಲೆ” ಎಂದು ಕರೆಯಲಾದೀತೆ? ಸರ್ಕಾರಕ್ಕೆ ಈ ಜಗನ್ಮಾರಿ ಭಾರತದಲ್ಲಿ ಎಲ್ಲಿ ಎಷ್ಟಿದೆ ಎಂಬುದನ್ನು ಅರಿಯುವುದಕ್ಕಿರುವ ವ್ಯವಸ್ಥೆ ಏನು? ಆ ವ್ಯವಸ್ಥೆಯಿಂದ ಬರುತ್ತಿರುವ ವರದಿಗಳು ಎಷ್ಟರ ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿವೆ? ಈ ಪ್ರಶ್ನೆಗಳನ್ನು ಕೇಳಿಕೊಂಡಾಗ, ಸರ್ಕಾರ ಈ ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಹೇಳಿದ್ದ ಟಿ (ಟೆಸ್ಟ್), ಟಿ (ಟ್ರೇಸ್), ಟಿ (ಟ್ರೀಟ್) ನಿಯಮ ಎಷ್ಟು ಪಾಲನೆ ಆಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ತಪಾಸಣೆಗಳು ಸಮಗ್ರವಾಗಿ ನಡೆಯದಿದ್ದಾಗ, ರೋಗಲಕ್ಷಣಗಳಿಲ್ಲದಿರುವ ಸೋಂಕಿತರು, ಸಣ್ಣಪುಟ್ಟ ಲಕ್ಷಣಗಳಿರುವ ಸೋಂಕು ಪೀಡಿತರು, ಸರ್ಕಾರಿ ಲೆಕ್ಕಾಚಾರದ ಒಳಗೆ ಬಂದಿರುವುದೇ ಇಲ್ಲ. ಸಾಮಾನ್ಯವಾಗಿ ಸೋಂಕು ಮಧ್ಯಮ ಹಂತದಲ್ಲಿರುವ ಅಥವಾ ತೀವ್ರವಾಗುವ ಹಂತಕ್ಕೆ ಹೋದವರು ಮಾತ್ರ ಆರೋಗ್ಯ ವ್ಯವಸ್ಥೆಯ ಸಹಾಯ ಪಡೆಯುತ್ತಿರುವುದು ದೇಶದಾದ್ಯಂತ ಈ ಬಾರಿ ಹೆಚ್ಚಾಗಿ ಕಾಣಿಸುತ್ತಿದೆ. ಕೊರೊನಾ ಸೋಂಕು 85% ಜನರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದೇ ಬಂದು ಹೋಗಿರುತ್ತದೆ ಮತ್ತು 15%ಜನರಲ್ಲಿ ಮಾತ್ರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಒಪ್ಪಿತವಾದ ಸಿದ್ಧಾಂತವನ್ನು ಇಲ್ಲಿ ಅಳವಡಿಸಿ ನೋಡಿದರೆ, ವಾಸ್ತವ ತಿಳಿಯಾಗಿ ಕಾಣಿಸತೊಡಗುತ್ತದೆ.

ಕಳೆದ ಬಾರಿ ಸೋಂಕು ಅಡರುವ ಮೊದಲೇ ಲಾಕ್‍ಡೌನ್ ಆಗಿದ್ದರಿಂದಾಗಿ, ಆಗ ಎಚ್ಚರದಲ್ಲಿದ್ದ ಜನ ಲಾಕ್ ಡೌನ್ ರಿಲೀಸ್ ಆದ ಬಳಿಕ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದು, ಮದುವೆ, ಚುನಾವಣೆ, ಮೇಳ ಎಂದು ಜನ ಸಂದಣಿ ಸೇರಿದ್ದು, ಇವೆಲ್ಲ ಕಾರಣಗಳಿಂದಾಗಿ ಒಂದೇ ಬಾರಿಗೆ 15% ಜನ (ಅರ್ಥಾತ್, ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಮೇಲೆ ಹೇಳಿದ ಜನಸಮುದಾಯ) ಸೋಂಕಿಗೆ ತಮ್ಮನ್ನು ಒಡ್ಡಿಕೊಂಡದ್ದರಿಂದಾಗಿ, ವ್ಯವಸ್ಥೆಗೆ ಕಣ್ಣಿಗೆ ಬೀಳುವ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಕಾಣಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟ.

ಮೊದಲ ವರ್ಷದಲ್ಲಿ, ಲಾಕ್‍ಡೌನ್ ಆರಂಭ ಆದ ಬಳಿಕ ದೈನಂದಿನ ಸೋಂಕು ಏರುಗತಿಯಲ್ಲಿ ಸಾಗಿ, ಅಧಿಕೃತವಾಗಿ ದಿನಕ್ಕೆ ಒಂದು ಲಕ್ಷದಷ್ಟು ಪ್ರಮಾಣಕ್ಕೆ ಹೋಗಿ, ಸೆಪ್ಟಂಬರ್ ಹೊತ್ತಿಗೆ ಕಡಿಮೆಯಾಗತೊಡಗಿತ್ತು. ಆ ಬಳಿಕ ಲಾಕ್‍ಡೌನ್ ರಿಲೀಸ್ ಆರಂಭವಾಯಿತು. ಆದರೆ, ಈ ವರ್ಷ ಮಾರ್ಚ್ ಹೊತ್ತಿಗೆ ಮತ್ತೆ ಸೋಂಕಿನ ಪ್ರಮಾಣ ಏರತೊಡಗಿದ್ದು, ದೈನಂದಿನ ಸೋಂಕು ಅಧಿಕೃತವಾಗಿ 2.5 ಲಕ್ಷ ಮೀರಿದೆ.

ಹಾಗಾಗಿ, ಪ್ರತಿದಿನ ಸಿಗುವ ಸೋಂಕಿತರ, ಗುಣಮುಖರಾದವರ ತಲೆ ಲೆಕ್ಕವು ಕೇವಲ ಸಮಾಧಾನಕರ “ಪ್ಲಾಸೆಬೊ ಪಾಸಿಟಿವ್” ಸುದ್ದಿಯೇ ಹೊರತು ವಾಸ್ತವ ಅಲ್ಲ ಎಂಬುದು ಸ್ಪಷ್ಟ. ಉತ್ತರದ ಹಲವು ರಾಜ್ಯಗಳಲ್ಲಿ ಸರ್ಕಾರದ ಲೆಕ್ಕಪಟ್ಟಿಯಲ್ಲಿರುವ ಸೋಂಕಿತರ ಮತ್ತು ಸಾವಿಗೀಡಾದವರ ಸಂಖ್ಯೆಗೂ, ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೀಡಾದವರ ಸಂಖ್ಯೆಗೂ ಭಾರೀ ವ್ಯತ್ಯಾಸ ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಆ ಸುದ್ದಿ ಹೇಳುತ್ತಿರುವುದು ಇದೇ ವಾಸ್ತವವನ್ನು. ಹಾಗಾಗಿ, 85% ಜನರಲ್ಲಿ ಬಹುತೇಕರನ್ನು ಹೊರಗಿರಿಸಿ, ಕೇವಲ 15% ಜನರ ಅಲೆಯುಬ್ಬರವನ್ನು ಅಲೆ ಎಂದು ಗುರುತಿಸುವುದಾದರೂ ಹೇಗೆ? ಹಾಗಾಗಿ, ಇದು ಹೆಚ್ಚೆಂದರೆ, ಆರೋಗ್ಯ ವ್ಯವಸ್ಥೆಯ ಧಾರಣಸಾಮಥ್ರ್ಯ ಕುಸಿತದ ಸ್ಥಿತಿಯೇ ಹೊರತು ಅಲೆ ಅಲ್ಲ.

ಸೀರಂ ಸರ್ವೇ ಏನು ಹೇಳುತ್ತದೆ?

ಈಗ ಸುಮಾರು ಒಂದೂವರೆ ವರ್ಷದಷ್ಟು ಹಳೆಯದಾಗಿರುವ ಹೊಸ ಕೊರೊನಾ ವೈರಸ್ ಪ್ರಭೇದದ ಅಲೆಗಳ ಲೆಕ್ಕಾಚಾರದಲ್ಲಿರುವ ವೈರುಧ್ಯಗಳು ಬಹಳ ಕುತೂಹಲಕರವಾಗಿವೆ. 136 ಕೋಟಿಗೂ ಮಿಕ್ಕಿ ಜನರಿರುವ ಭಾರತದಲ್ಲಿ ಈವತ್ತಿಗೆ (ಅಂದರೆ 20-05-2021ರಂದು) 2,57,72,440 ಮಂದಿ ಕೊರೊನಾ ಸೋಂಕಿತರಾಗಿದ್ದು, 2,87,122 ಮಂದಿ ಈ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ ಎನ್ನುತ್ತಿದೆ ಅಧಿಕೃತ ಲೆಕ್ಕಾಚಾರ.  ಈ ಅಧಿಕೃತ ಲೆಕ್ಕಾಚಾರವನ್ನು ಹೊರತುಪಡಿಸಿ, ಯಾವುದೇ ಸರ್ಕಾರಿ ಲೆಕ್ಕಾಚಾರಗಳ ವ್ಯಾಪ್ತಿಗೆ ಸಿಗದೆ ಕೂಡ ದೊಡ್ಡ ಸಂಖ್ಯೆಯಲ್ಲಿ ಸೋಂಕು ಈ ಅವಧಿಯೊಳಗೆ ದೇಶದಲ್ಲಿತ್ತು ಮತ್ತು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ ಎಂಬ ವಾಸ್ತವವನ್ನು ಯಾರೂ ಅಲ್ಲಗಳೆಯುತ್ತಿಲ್ಲ.

2021 ಜನವರಿ ಮೊದಲ ವಾರದಲ್ಲಿ ತನ್ನ ಮೂರನೇ ಸೀರಂ ಸಮೀಕ್ಷೆ ನಡೆಸಿದ ಭಾರತೀಯ ವೈಜ್ಞಾನಿಕ ಸಂಶೋಧನಾ ಮಂಡಳಿ (ಐಸಿಎಂಆರ್) ಅದರ ಫಲಿತಾಂಶವನ್ನು ಪ್ರಕಟಿಸಿ, ಭಾರತದಲ್ಲಿ ಈಗಾಗಲೇ ಪ್ರತೀ ಐವರಲ್ಲಿ ಒಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ಅಂದಾಜಿಸಿದೆ. ಅಂದರೆ, ಈಗಾಗಲೇ 18ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಅಂದಾಜು 27 ಕೋಟಿ ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿರಬೇಕು. ಮತ್ತು ಅದೇ ಅನುಪಾತದಲ್ಲಿ ಸಾವೂ ಸಂಭವಿಸಿರಬಹುದು. ಸರ್ಕಾರದ್ದೇ ಆರೋಗ್ಯ ಇಲಾಖೆಯ ಅಧಿಕೃತ ಅಂಕಿಸಂಖ್ಯೆ ಮತ್ತು ಸರ್ಕಾರದ್ದೇ ಮಂಡಳಿಯೊಂದರ ಅಂದಾಜಿನ ನಡುವಿನ ಈ ಅಗಾಧ ಅಂತರವನ್ನು ಹೇಗೆ ಪರಿಗಣಿಸಬೇಕು? ನೆಲಮಟ್ಟದಲ್ಲಿ ವಾಸ್ತವಗಳು ಆರೋಗ್ಯ ಇಲಾಖೆಯ ಲೆಕ್ಕಕ್ಕಿಂತ ಐಸಿಎಂಆರ್ ಮಂಡಳಿಯ ಅಂದಾಜಿಗೇ ಹೆಚ್ಚು ಸಮೀಪದಲ್ಲಿವೆ ಅನ್ನಿಸುವುದಿಲ್ಲವೆ?

ಸಣ್ಣ ಪುಟ್ಟ ಗಾತ್ರದ ದೇಶಗಳಲ್ಲಿ ಜನಸಮುದಾಯದ ನಡುವೆ ಸೋಂಕು ಹರಡಿದಾಗ, ಅದರ ತೀವ್ರತೆಯನ್ನು ಅಲೆಯರೂಪದಲ್ಲಿ ಗೃಹಿಸುವುದು ಸುಲಭ. ಅಂತಹ ಹತ್ತಾರು ದೇಶಗಳ ಗಾತ್ರದ ಭಾರತದಲ್ಲಿ ಪ್ರತಿಯೊಂದು ರಾಜ್ಯದ ಅಲೆಯ ಸ್ವರೂಪವೂ ವಿಭಿನ್ನವಾಗಿರುತ್ತದೆ ಮತ್ತು ಅವನ್ನು ಒಟ್ಟಾಗಿ ಪರಿಗಣಿಸಿ, ಸರಾಸರಿ ಲೆಕ್ಕಾಚಾರಕ್ಕಿಳಿಯುವುದು ಸಂಖ್ಯಾಶಾಸ್ತ್ರೀಯವಾಗಿ ಸಾಧುವಲ್ಲ ಎಂದೇ ಹೇಳಬೇಕಾಗುತ್ತದೆ.

ಉದಾಹರಣೆಗೆ, ದಿಲ್ಲಿ-ಮುಂಬಯಿಗಳಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ತಳೆಯುತ್ತಿರುವಾಗ ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಅಲ್ಲಿನ ವ್ಯವಸ್ಥೆ ಕುಸಿತ ಸುಧಾರಿಸತೊಡಗಿದ ಮೇಲಷ್ಟೇ ಕರ್ನಾಟಕದಲ್ಲಿ ನಿಧಾನಕ್ಕೆ ಪರಿಸ್ಥಿತಿ ಹದಗೆಡತೊಡಗಿತು. ದಿಲ್ಲಿ-ಮುಂಬಯಿಯ ಜನಸಂಖ್ಯೆಯ ಪ್ರಮಾಣದ ಆಧಾರದಲ್ಲಿ ಅದನ್ನು ಇಡಿಯ ದೇಶದ ಕೋವಿಡ್ ಅಲೆ ಎನ್ನುವುದು ಕೂಡ ಸಮರ್ಥನೀಯವಾದ ವಾದ ಅಲ್ಲ. ಇಂದು ಸುಮಾರು 15 ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲೇ ಇದೆ. ಕೇವಲ ಎಂಟು ರಾಜ್ಯಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹಾಗಾಗಿ, ಭೌಗೋಳಿಕ ಗಾತ್ರ ಮತ್ತು ಪ್ರಾದೇಶಿಕ ಏರಿಳಿತಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಸೋಂಕಿನ ಅಲೆ ಲೆಕ್ಕಾಚಾರ ಸಾಧ್ಯವಿಲ್ಲ.

ಹೋಲಿಸಿ ನೋಡಿದರೆ, ಕರ್ನಾಟಕವು ವೈದ್ಯಕೀಯ ವ್ಯವಸ್ಥೆಯಲ್ಲಿ ಸ್ವಲ್ಪ ಮುಂದುವರಿದ ರಾಜ್ಯವಾಗಿ ಪರಿಗಣಿತವಾಗುತ್ತದೆ. ಬಿಹಾರ-ಉತ್ತರಪ್ರದೇಶದಂತಹ ರಾಜ್ಯಗಳ ವೈದ್ಯಕೀಯ ವ್ಯವಸ್ಥೆಯ ಥ್ರೆಷ್‍ಹೋಲ್ಡ್‍ನ್ನು ಕರ್ನಾಟಕದ ವೈದ್ಯಕೀಯ ವ್ಯವಸ್ಥೆಯ ಥ್ರೆಷ್‍ಹೋಲ್ಡಿಗೆ ಹೋಲಿಸುವುದು ಸಾಧ್ಯವಿಲ್ಲ. ಥ್ರೆಷ್‍ಹೋಲ್ಡ್ ದಾಟಿದಾಗ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಗುವುದಾದರೆ, ಆ ಮಾನದಂಡ ಕರ್ನಾಟಕಕ್ಕೂ ಬಿಹಾರಕ್ಕೂ ಬೇರೆಯೇ ಇರಬೇಕು.

ಈಗ ಎರಡನೇ ಅಲೆ ನಡೆಯುತ್ತಿದೆ ಎಂಬ ವಾದವನ್ನೇ ತೆಗೆದುಕೊಂಡರೂ, ಸೀರಂ ಸಮೀಕ್ಷೆಯ ಪ್ರಕಾರ ಐದರಲ್ಲೊಬ್ಬರು ಈಗಾಗಲೇ ಸೋಂಕಿತರಾಗಿರುವ ಸಾಧ್ಯತೆ ಇರುವುದರಿಂದ ಮತ್ತು ಈ ವೈರಸ್ ಮರು ಸೋಂಕು ತಕ್ಷಣ ಕಾಣಿಸಿಕೊಳ್ಳುವುದು ಅಪರೂಪವಾದ ಕಾರಣ, ಸೋಂಕು ತಗುಲುವ ಪ್ರಮಾಣ ಕಡಿಮೆ ಆಗಬೇಕಿತ್ತಲ್ಲ ಎಂಬ ಚರ್ಚೆ ಸಾಂಕ್ರಾಮಿಕ ರೋಗತಜ್ಞರ ನಡುವೆ ನಡೆಯುತ್ತಿದೆ. ಅವರು ಇದಕ್ಕೆ ಕೊಟ್ಟುಕೊಳ್ಳುತ್ತಿರುವ ಸಮಾಧಾನ ಎಂದರೆ, ಮೊದಲ ಅಲೆಯಲ್ಲಿ ನಗರದ ಬಡ ವರ್ಗಕ್ಕೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ತಗುಲಿತ್ತು. ಆದರೆ, ಸೀರಂ ಸಮೀಕ್ಷೆಯ ಸ್ಯಾಂಪಲ್‍ಗಳು ಎಲ್ಲ ವರ್ಗದವರನ್ನೂ ಪರಿಗಣಿಸಿರುವುದರಿಂದ ಹೀಗಾಗಿರಬಹುದು ಎಂಬುದು. ಕಳೆದ ಬಾರಿ ಸೋಂಕಿಗೆ ಒಳಗಾಗಿರದ ನಗರದ ಮಧ್ಯಮ ಮತ್ತು ಸಿರಿವಂತ ವರ್ಗ ಈ ಬಾರಿ ಸೋಂಕಿಗೆ ಒಳಗಾಗಿದ್ದಾರೆ ಎಂಬ ವಾದವನ್ನು ಅವರು ಮುಂದಿಡುತ್ತಿದ್ದಾರೆ. ಇದೇ ವಾದವನ್ನು ಮುಂದುವರಿಸಿ, ಮೂರನೆಯ ಅಲೆಯ ವೇಳೆಗೆ ತೀರಾ ಎಳೆಯರು ಮತ್ತು ಸಣ್ಣ ಮಕ್ಕಳು ಸೋಂಕಿಗೆ ಗುರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲಸಿಕೆ ನೀಡಿಕೆ ಅಭಿಯಾನ ಇನ್ನೂ ವೇಗ ಪಡೆದುಕೊಂಡಿರದಿರುವುದರಿಂದ ಅದರ ಪರಿಣಾಮವನ್ನು ಈ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದು ಭಾರತದಂತಹ ಬೃಹತ್ ಗಾತ್ರದ ದೇಶದಲ್ಲಿ ಕಷ್ಟ.

ಹಾಗಿದ್ದರೆ ಏಕೆ ಅಲೆ ಲೆಕ್ಕಾಚಾರ?

ಈಗ ಮೂರನೇ ಅಲೆಯ ಲೆಕ್ಕಾಚಾರದ ಹಿಂದಿರುವುದು ಅಧಿಕೃತ ಅಂಕಿಸಂಖ್ಯೆಗಳ ಸಂಖ್ಯಾಶಾಸ್ತ್ರೀಯ ಮಾಡೆಲ್. ಮೇ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಭಾರತದಲ್ಲಿ ಇನ್ನೂ ಕೇವಲ 1.8% ಜನ ಮಾತ್ರ ಸೋಂಕಿಗೀಡಾಗಿದ್ದು, 98% ಜನ ಇನ್ನೂ ಬಾಕಿ ಇದ್ದಾರೆ ಎಂದು ಹೇಳಿಕೆ ನೀಡಿದ್ದರು. ಅವರು ಹಾಗೆ ಹೇಳುವಾಗ ಅಧಿಕೃತ ಅಂಕಿಅಂಶಗಳು 2.5 ಕೋಟಿ ಸೋಂಕಿತರನ್ನೂ ಮತ್ತು 2.79 ಲಕ್ಷ ಮರಣಗಳನ್ನೂ ತೋರಿಸುತ್ತಿದ್ದವು.

ಸರ್ಕಾರದ ಈ ಲೆಕ್ಕವನ್ನು ಪರಿಗಣಿಸಿದರೆ, ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದು ಎಷ್ಟು ಅಸಂಬದ್ಧ ಎಂಬುದು ಅರ್ಥ ಆಗುತ್ತದೆ. ಯಾಕೆಂದರೆ 18ವರ್ಷಕ್ಕಿಂತ ಹೆಚ್ಚಿನ ಪ್ರಾಯದವರು ದೇಶದ ಜನಸಂಖ್ಯೆಯ 41%ನಷ್ಟು ಇದ್ದಾರೆ. ಸಿರಿವಂತ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಬೊಜ್ಜಿನ ಸಮಸ್ಯೆ ಇರುವ ಮಕ್ಕಳಿಗಿಂತ ರಕ್ತಹೀನತೆ, ಕಡಿಮೆ ತೂಕದಿಂದ ಬಳಲುವ ಮಕ್ಕಳ ಸಂಖ್ಯೆಯೇ ಹೆಚ್ಚು. ಕೊರೊನಾ ದೇಹದೊಳಗೆ ಬೆಳೆಯಲು-ಸೋಂಕು ತೀವ್ರಗೊಳ್ಳಲು ಕಾರಣವಾಗುವುದು ACE2 ಕಿಣ್ವಗಳೆಂಬುದು ಹೌದಾದರೆ, ಅದು ಇಂತಹ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಎಷ್ಟೆಂದು ವೈದ್ಯಕೀಯ ಪರಿಣತರು ಹೇಳಬೇಕು. ಜೊತೆಗೇ ಈಗಾಗಲೇ ಎಷ್ಟು ಮಕ್ಕಳಿಗೆ ಸರ್ಕಾರಿ ಲೆಕ್ಕಪತ್ರಗಳಿಗೆ ಬಾರದೆ ಸೋಂಕು ಬಂದುಹೋಗಿರಬಹುದೆಂಬುದರ ಅಂದಾಜು ಎಲ್ಲೂ ಇಲ್ಲ.

ನಿಜಕ್ಕೂ ಏನು ತಯಾರಿ ಬೇಕು?

ಇನ್ನೊಂದು ಕೋವಿಡ್ ಅಲೆಗೆ ತಯಾರಿ ಎಂದರೆ ಅದಕ್ಕೆ ಸರ್ಕಾರಿ ವ್ಯವಸ್ಥೆ ಸಡಗರದಿಂದಲೇ ಸಜ್ಜುಗೊಳ್ಳುತ್ತದೆ. ತಯಾರಿ ಎಂದರೆ ಖರೀದಿಗಳೆಂಬುದು ಈ ಸಡಗರಕ್ಕೆ ಕಾರಣ. ಅದಕ್ಕಾಗಿ ಕಾದುಕೊಂಡಿರುವವರಿಗೆ ಇಂತಹ ಅವಕಾಶ ಒಂದು ಹಬ್ಬ. ಈಗಾಗಲೇ ಮಕ್ಕಳಿಗಾಗಿ ಜಿಲ್ಲಾವಾರು ಬೆಡ್/ಐಸಿಯು ವ್ಯವಸ್ಥೆ ಇತ್ಯಾದಿ ಮಾತುಗಳು ಕೇಳಿಬರತೊಡಗಿವೆ. “ಪಾಂಡೆಮಿಕ್ ಅಂದ್ರೆ ಎಲ್ಲರಿಗೂ ಇಷ್ಟ” ಏಕೆಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಈ ವಿಕಾರವನ್ನು ಬಿಟ್ಟು ನಿಜಕ್ಕೂ ತಯಾರಿ ನಡೆಯಬೇಕಾದುದು ಹೀಗೆ:

  • ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳು (ಕನಿಷ್ಠ ಆಪತ್ಕಾಲದ ಸನ್ನಿವೇಶದಲ್ಲಾದರೂ) ರಾಷ್ಟ್ರೀಕರಣಗೊಂಡು ದೇಶದ ಪ್ರತಿಯೊಬ್ಬ ಪ್ರಜೆಗೆ ಆರೋಗ್ಯ ಮತ್ತು ಶಿಕ್ಷಣ ಹಕ್ಕಾಗಿ ಸಿಗಬೇಕು.
  • ಗ್ರಾಮ/ತಾಲೂಕು/ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಬಲಗೊಳ್ಳಬೇಕು. ಅದನ್ನು ಸಂತುಲಿತವಾಗಿ, ಕೋವಿಡ್ ಮಾತ್ರವಲ್ಲದೇ ಯಾವುದೇ ಸನ್ನಿವೇಶದಲ್ಲೂ ಪರಿಸ್ಥಿತಿ ನಿಭಾಯಿಸಲು ಸೂಕ್ತವಾಗುವಂತೆ ಬಲಪಡಿಸಬೇಕು.
  • ಈಗ ಕೋವಿಡ್ ಹೆಸರಲ್ಲಿ ನಡೆಯುವ ರಾಶಿರಾಶಿ ಖರೀದಿಗಳು ನಾಳೆ ಬಳಕೆಯಾಗದೇ ಹಾಳಾಗುವ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ವೆಂಟಿಲೇಟರ್‍ಗಳದು ಈಗ ಅದೇ ಸ್ಥಿತಿ ಆಗುತ್ತಿದೆ. ನಾಳೆ ಆಮ್ಲಜನಕ ಸಾಂದ್ರಕಗಳದೂ ಇದೇ ಕತೆ ಆಗದಿರಲಿ.
  • ಸರ್ಕಾರಿ ವ್ಯವಸ್ಥೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ತುಂಬಬೇಕು ಮತ್ತು ರಾಜಕೀಯ ವ್ಯವಸ್ಥೆ ಅಲ್ಲಿ ದೈನಂದಿನ ವ್ಯವಹಾರಗಳಲ್ಲಿ ತಲೆ ಹಾಕಲು ಸಾಧ್ಯವಾಗದಂತಹ “ಸಿಸ್ಟಮ್” ಒಂದು ರಚನೆ ಆಗಬೇಕು. ಆಗ ಮಾತ್ರ ಸರ್ಕಾರಿ ಆರೋಗ್ಯ ವ್ಯವಸ್ಥೆ ವೈದ್ಯರಿಗೆ ಆಕರ್ಷಕವೆನ್ನಿಸೀತು.
  • ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಳಸುವ ಕುರಿತು ಮಧ್ಯಮ ವರ್ಗಕ್ಕಿರುವ “ಕೀಳರಿಮೆ” ಇಲ್ಲದಾಗಬೇಕು.
  • ವೈದ್ಯಕೀಯ ಶಿಕ್ಷಣ ಖಾಸಗಿ ಮುಷ್ಠಿಯಿಂದ ಹೊರಬಂದು ಹೆಚ್ಚು ಹೆಚ್ಚು ವೈದ್ಯರು ದೇಶಕ್ಕೆ ಲಭ್ಯರಾಗಬೇಕು ಮತ್ತು ವೈದ್ಯ-ರೋಗಿ ಅನುಪಾತ ತಗ್ಗಬೇಕು.

ಒಟ್ಟಿನಲ್ಲಿ, ಶಾಂತಿಕಾಲದಲ್ಲಿ ಸುವ್ಯವಸ್ಥಿತವಾಗಿ ವ್ಯವಹರಿಸುವ ಆರೋಗ್ಯ ವ್ಯವಸ್ಥೆಯೊಂದು ಮಾತ್ರ ಯುದ್ಧಕಾಲದ ಒತ್ತಡಗಳನ್ನು ತಡೆದುಕೊಳ್ಳಬಲ್ಲುದು ಎಂಬುದು ಸುಧಾರಣೆಗೆ ತಳಪಾಯ ಆಗಬೇಕು.

Leave a Reply

Your email address will not be published.