ಅಳುವಾ ಭೋಗಿಯ ನೋಡಿಲ್ಲಿ…!

-ಸಂಪಾದಕ

ಸಂಚಿಕೆ ಮುದ್ರಣಕ್ಕೆ ಹೋಗುವ ಅಂತಿಮ ಕ್ಷಣಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು ರಾಜ್ಯ ರಾಜಕೀಯ ಹೊಸ ತಿರುವು ಪಡೆದುಕೊಂಡಿದೆ. ಕೊನೆಗೂ ಬಿ.ಎಸ್.ಯಡಿಯೂರಪ್ಪ ಕಣ್ಣೀರು ಸುರಿಸುತ್ತಾ ಗದ್ಗದಿತರಾಗಿಸಂತೋಷದಿಂದಲೇ ರಾಜಿನಾಮೆ ಕೊಟ್ಟಿದ್ದಾರೆ! ಅವರು ತಮ್ಮ ಸರ್ಕಾರದ ಆಡಳಿತಾವಧಿಯ 2ನೇ ವರ್ಷಾಚರಣೆ ಸಂದರ್ಭದಲ್ಲಿ ಮಾಡಿದ ಭಾಷಣ, ಘೋಷಣೆ ಅಸಂಗತ ನಾಟಕದ ಒಂದು ಅಂಕದಂತೆ ಕಂಡರೆ ಅಚ್ಚರಿಯಿಲ್ಲ. ಅವರ ರಾಜಿನಾಮೆಯ ನೈಜ ಕಾರಣ ಮಾತ್ರ ಕಣ್ಣಿಗೆ ಕಾಣದ ಕೊರೊನಾ ವೈರಾಣು ಇದ್ದಂತೆ.

ಆಡಳಿತದಲ್ಲಿನ ಮಿತಿಮೀರಿದ ಭ್ರಷ್ಟಾಚಾರ, ಮಗನ ಸೂಪರ್ ಸಿಎಂ ವರ್ತನೆ, ಎಪ್ಪತ್ತೈದು ದಾಟಿದ ವಯಸ್ಸು, ವಿರೋಧಿ ಪಕ್ಷಗಳೊಂದಿಗಿನ ಒಡನಾಟ, ಎರಡು ವರ್ಷಗಳ ಹಿಂದಿನ ಒಡಂಬಡಿಕೆ, ಬಿಡುಗಡೆಯಾಗಲು ಸಿದ್ಧವಾಗಿದ್ದ ಸಿಡಿಗಳು, ಶಾಸಕರ ಅಸಮಾಧಾನ, ಕೇಂದ್ರ ನಾಯಕರ ಅಸಹನೆಇವುಗಳಲ್ಲಿ ಯಡಿಯೂರಪ್ಪ ಪದಚ್ಯುತಿಗೆ ನಿಖರ ಕಾರಣ ಯಾವುದು ಎಂಬುದರ ರಹಸ್ಯ ಭೇದಿಸುವ ವ್ಯರ್ಥ ಪ್ರಯತ್ನ ಯಾರಿಗೂ ಬೇಡ. ಅದು ಅವರವರ ಭಾವ, ಭಕುತಿ, ದ್ವೇಷ, ಪ್ರೀತಿ, ಸ್ವಾರ್ಥ, ನೈತಿಕತೆ ನೆಲೆಯಲ್ಲಿ ಅನಾವರಣಗೊಳ್ಳುವ ಸರಳಬಹಿರಂಗ ಸತ್ಯ.

ಅದೇನೇ ಇರಲಿ, ಅಷ್ಟೆಲ್ಲಾ ಹೋರಾಟದ ಹಿನ್ನೆಲೆಯ ಧೈರ್ಯಶಾಲಿ ನಾಯಕ ನಿರ್ಗಮನದ ಸಂದರ್ಭದಲ್ಲಿ ಗಳಗಳ ಅತ್ತಿದ್ದೇಕೆ? ಎಚ್.ಡಿ.ದೇವೇಗೌಡರ ಕುಟುಂಬದ ಸಾರ್ವಜನಿಕವಾಗಿ ಅಳುವ ಅಸ್ತ್ರವನ್ನು ಇವರು ಕಿತ್ತುಕೊಂಡಿದ್ದು ಮಾತ್ರ ಘೋರ ಅನ್ಯಾಯ. ಯಡಿಯೂರಪ್ಪನವರು ತಾವು ಜೈಲಿನಿಂದ ಹೊರಬಂದಾಗ ಬೆರಳುಗಳಲ್ಲಿ ತೋರಿದ ವಿಕ್ಟರಿ ಸಂಕೇತವನ್ನು ಬೇರೆಯವರು ಅಪಹರಿಸಿದರೆ ಸಹಿಸಿಕೊಳ್ಳುವರೇ!

ಯಡಿಯೂರಪ್ಪನವರು ಅಳು ಅಸ್ತ್ರವನ್ನು ಹೈಕಮಾಂಡ್ ಮೇಲೆ ಪ್ರಯೋಗಿಸಿದರೇ…? ನಾಡಿನ ಆರೂವರೆ ಕೋಟಿ ಜನರ ಹೃದಯಗಳಿಗೆ ಗುರಿ ಇಟ್ಟರೇ…? ಅವರು ಮೊದಲೇ ಬತ್ತಳಿಕೆಯಿಂದ ಹೊರಗೆ ತೆಗೆದಿದ್ದ ಕಾವಿ ಅಸ್ತ್ರ ಮತ್ತು ಕಣ್ಣೀರ ದಿವ್ಯಾಸ್ತ್ರ ಯಾರಿಗೆ, ಎಲ್ಲಿಗೆ ನಾಟಬೇಕಿತ್ತೋ ಅಲ್ಲಿಗೆ ಸರಿಯಾಗಿ ನಾಟಿದಂತೆ ಕಾಣಿಸುತ್ತದೆ.

ಭಕ್ತನ ಕಠೋರ ತಪಸ್ಸಿಗೆ ಮೆಚ್ಚಿಯೋ ಬೆಚ್ಚಿಯೋ ದೆಹಲಿಯ ದೇವೇಂದ್ರ ಕಣ್ಣು ತೆರೆಯದೇ, ತಥಾಸ್ತು ಎನ್ನದೇ ಅನ್ಯ ಮಾರ್ಗವಿರಲಿಲ್ಲ. ಬೆಂಗಳೂರಿಗೆ ಬಂದಿಳಿದರು ದೇವೇಂದ್ರನ ಆದೇಶ ಹೊತ್ತ ದೂತರು. ಮತ್ತೆ ವಿಕ್ಟರಿ ಬೆರಳು ಅಲ್ಲಾಡಿಸುತ್ತಾ ಶಾಸಕಾಂಗ ಪಕ್ಷದ ಸಭಾಂಗಣ ಪ್ರವೇಶಿಸಿದ ಯಡಿಯೂರಪ್ಪ ತನ್ನ ಉತ್ತರಾಧಿಕಾರಿಯನ್ನು ತಾನೇ ಪ್ರಸ್ತಾಪಿಸಿ ಪಕ್ಕಾ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆ ಮಾಡಿ(ಸಿ)ಕೊಂಡರು. ರಾಜಾಹುಲಿಯ ಗೆಲುವು ಕಂಡು ಅವರ ವಿರೋಧಿ ಪಾಳೆಯ ತಳಮಳಿಸುವಂತಾಯ್ತು.

ಎಲ್ಲಾ ಬೆಳವಣಿಗೆಗಳನ್ನು ಪ್ರಾಸಬದ್ಧವಾಗಿ ಬಿತ್ತರಿಸುತ್ತಿದ್ದ ಸುದ್ದಿವಾಹಿನಿಗಳನ್ನು ನೋಡುತ್ತಾ ದೇವಲೋಕದಲ್ಲಿ ನಿದ್ದೆಗೆ ಜಾರುವ ಹಂತದಲ್ಲಿದ್ದ ಕುವೆಂಪು ಅವರು ತಾವು ಭೂಲೋಕಲ್ಲಿ ಬರೆದಿದ್ದರೈತಗೀತೆಗೆ ತಿದ್ದುಪಡಿ ಮಾಡಿರೈತನಾಯಕಗೀತೆರಚಿಸಿದರು. ಅಲ್ಲಿಯೇ ತಲೆಯ ಬಿಳಿಗೂದಲು ಸರಿಪಡಿಸಿಕೊಳ್ಳುತ್ತ ಕುಳಿತಿದ್ದ ಸಿ.ಅಶ್ವಥ್ ತಿದ್ದುಪಡಿಗೊಂಡ ಹಾಡಿಗೆ ಹೊಸದಾಗಿ ಸ್ವರಸಂಯೋಜನೆ ಮಾಡಿ ತಮ್ಮ ಎಂದಿನ ಎತ್ತರದ ದನಿಯಲ್ಲಿ, ‘…ಅಳುವಾ ಭೋಗಿಯ ನೋಡಿಲ್ಲಿ…’ ಎಂದು ಹಾಡಲು ಶುರು ಮಾಡಿದರು.

ಲಂಕೇಶ್ ಜೊತೆ ಇಸ್ಪೀಟ್ ಆಡುತ್ತಿದ್ದ ಕವಿ ಸಿದ್ಧಲಿಂಗಯ್ಯ ಅಶ್ವಥ್ ದನಿ ಕೇಳುತ್ತಲೇ ಬಳಿಬಂದು ತಮ್ಮ ನಾಯಕನನ್ನು ಕುರಿತ ಹಾಡು ಕೇಳುತ್ತ ಮೈಮರೆತರು. ಈಗಿನ ಭೂಲೋಕದ ಆಗುಹೋಗುಗಳ ತುಣುಕು ಗಳನ್ನು ತಮ್ಮದೇ ಶೈಲಿಯ ಹಾಸ್ಯ ಸರಣಿಗೆ ಪೋಣಿಸಿಕೊಂಡು ಮನದಲ್ಲೇ ನಗತೊಡಗಿದರು. ಸಿದ್ಧಲಿಂಗಯ್ಯನವರ ಮುಖದಲ್ಲಿನ ತುಂಟನಗು ಗುರುತಿಸಿದ ಅಶ್ವಥ್ ಅವರನ್ನು ಇನ್ನಷ್ಟು ಖುಷಿ ಪಡಿಸಲು, ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ…’ ಹಾಡು ಪ್ರಾರಂಭಿಸಿ ದರು. ಕವಿಯ ಮೊಗದಲ್ಲಿ ನಗೆಯ ಬದಲು ಖೇದ!

Leave a Reply

Your email address will not be published.