ಅವನತಿಗೆ ಇನ್ನಷ್ಟು ಕಾರಣಗಳು…

– ಪದ್ಮರಾಜ ದಂಡಾವತಿ

ಕನ್ನಡ ಸಾಹಿತಿಗಳು ಹಾಗೂ ಚಳವಳಿಗಾರರು ಅಪ್ಪಟ ಅಪ್ರಾಮಾಣಿಕರು. ಅವರು ಬರೆದ ಪುಸ್ತಕವನ್ನು ಅವರ ಮಕ್ಕಳು ಓದುತ್ತಾರೆಯೇ ಎಂದು ನೀವು ಕೇಳಿ ನೋಡಿ. ಖಂಡಿತ ಓದುವುದಿಲ್ಲ.

ನಾನು ಪದವಿ ವರೆಗೆ ಹಟ ಹಿಡಿದು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹಾಗೆ ನಾನು ಕನ್ನಡ ಮಾಧ್ಯಮದಲ್ಲಿ ಹಟ ಹಿಡಿದು ಓದಲು ಕುವೆಂಪು, ದೇಜಗೌ ಮತ್ತು ಹಾ.ಮಾ.ನಾಯಕರು ಕಾರಣ. ಆದರೆ, ನಾನು 60ರ ದಶಕದಲ್ಲಿ ಓದಿದ ನಮ್ಮ ಊರಿನ ಕನ್ನಡ ಪ್ರಾಥಮಿಕ ಶಾಲೆ ಈಗಲೂ ಅದೇ ಹಳೆಯ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿ ಓದುವ ಮಕ್ಕಳಿಗೆ, ಕಲಿಸುವ ಶಿಕ್ಷಕರಿಗೆ ಒಂದು ಶೌಚಾಲಯವಿಲ್ಲ. ಮಕ್ಕಳಿಗೆ ಬೆಂಚುಗಳು ಇಲ್ಲ, ಕಂಪ್ಯೂಟರು ದೂರದ ಮಾತು. ನಮ್ಮ ಊರಿನ ಹೆಸರನ್ನು ಬೇಕೆಂದೇ ಬರೆದಿಲ್ಲ. ಏಕೆಂದರೆ ನೀವು ಓದಿದ ಊರಿನ ಸರ್ಕಾರಿ ಶಾಲೆಯ ಸ್ಥಿತಿ ಇದಕ್ಕಿಂತ ಬೇರೆ ಇರಲು ಸಾಧ್ಯವಿಲ್ಲ.

ಆ ಹಳೆಯ ಶಾಲೆಯ ಆಸುಪಾಸು ಈಗ ಭವ್ಯ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತಿವೆ. ಅಲ್ಲಿ ಕಲಿಸುವ ಶಿಕ್ಷಕರಿಗೆ ನೆಟ್ಟಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ನನಗೆ ಗೊತ್ತು. ನಮ್ಮ ಊರಿನಿಂದ ನೂರು ಕಿಲೋಮೀಟರ್ ದೂರದಲ್ಲಿ, ಹಿಂದಿನ ಸರ್ಕಾರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಒಬ್ಬರು ಕಟ್ಟಿದ ಇಂಗ್ಲಿಷ್ ಮಾಧ್ಯಮ ಶಾಲೆ ವಿಶಾಲ ಪರಿಸರದಲ್ಲಿ ತಲೆಯೆತ್ತಿದೆ. ನಮ್ಮ ಊರಿನ ಕೂಸುಗಳೆಲ್ಲ ಅಲ್ಲಿಗೇ ಓದಲು ಹೋಗುತ್ತವೆ.

ನಾನು ಏನು ಹೇಳಲು ಬಯಸುತ್ತಿರುವೆ ಎಂದರೆ ನಮ್ಮನ್ನು ಆಳುವವರು ಒಂದು ಕಡೆ ಸರ್ಕಾರಿ ಶಾಲೆಗಳು ನಮ್ಮ ಕಣ್ಣ ಮುಂದೆಯೇ ಸಾಯುವಂತೆ ನಿಧಾನ ವಿಷ ಉಣಿಸುತ್ತಿದ್ದಾರೆ; ಇನ್ನೊಂದು ಕಡೆ ಅವರೇ ನೇರವಾಗಿ ಅಥವಾ ಪರೋಕ್ಷವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದಾರೆ. ಅಮಾಯಕ ಜನರು ಆಕರ್ಷಕವಾಗಿ ಕಾಣುವುದರ ಕಡೆಗೆ ಧಾವಿಸುತ್ತಿದ್ದಾರೆ.

70ರ ದಶಕದಲ್ಲಿಯೇ ಪಿಯುಸಿ ಮೊದಲನೇ ವರ್ಷಕ್ಕೆ ಬಂದಾಗ ನೀವು ಯಾವ ಮಾಧ್ಯಮದಲ್ಲಿ ಮುಂದೆ ಓದುವುದು ಎಂದು ಆಯ್ಕೆ ಮಾಡಬೇಕಿತ್ತು. ಆ ವೇಳೆಗಾಗಲೇ ವೃತ್ತಿಶಿಕ್ಷಣ ನಮ್ಮ ಕಣ್ಣು ಸೆಳೆಯಲು ಆರಂಭಿಸಿತ್ತು. ಮುಂದೆ 80ರ ದಶಕದಲ್ಲಿ ಎನ್.ಆರ್.ನಾರಾಯಣಮೂರ್ತಿ ಅವರಂಥವರು ಕರ್ನಾಟಕದಲ್ಲಿ ಐ.ಟಿ. ಉದ್ಯಮ ಆರಂಭಿಸಿದರು. ಕಳೆದ ನಲವತ್ತು ವರ್ಷಗಳಲ್ಲಿ ಕರ್ನಾಟಕ ಐ.ಟಿ. ಉದ್ಯಮದಲ್ಲಿ ಮುಂಚೂಣಿಯಲ್ಲಿ ಇದೆ. ನಾವು ಎಂಥ ಎಂಜಿನಿಯರುಗಳನ್ನು ಸೃಷ್ಟಿಸಿದ್ದೇವೆ ಎಂಬುದು ಬೇರೆ ಮಾತು. ಆದರೆ, ಎಂಜಿನಿಯರಿಂಗ್ ಓದಿದರೆ ಒಂದಿಪ್ಪತ್ತು ಸಾವಿರ ಪಗಾರದ ನೌಕರಿ ಸಿಗುತ್ತದೆ ಎಂಬುದು ಖಾತ್ರಿಯಾಯಿತು. ವಿದೇಶಕ್ಕೆ ಹೋಗುವ ಬಾಗಿಲುಗಳು ಬಹಳ ಸುಲಭವಾಗಿ ತೆರೆದುಕೊಂಡುವು. ಕನ್ನಡ ಶಾಲಾ ಮಾಸ್ತರರ ಮಗನಾದ ನಾರಾಯಣಮೂರ್ತಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪರವಾಗಿ ಮಾತನಾಡಿದರು. 80ರ ದಶಕದಲ್ಲಿಯೇ ಅದೀಪ್ ಚೌಧರಿ ಎಂಬ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಪ್ರಾಥಮಿಕ ಒಂದನೇ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಇರಬೇಕು ಎಂದು ಪ್ರತಿಪಾದಿಸಿದರು. ಹಾ.ಮಾ.ನಾಯಕರು ಚೌಧರಿ ವಿರುದ್ಧ ಕೆಂಡಕಾರಿದ್ದರು.

70ರ ದಶಕದಲ್ಲಿ ನಾನು ಬಿ.ಎ. ಓದುತ್ತಿದ್ದೆ. ನಿಮಗೆ ಮೊದಲೇ ಹೇಳಿದಂತೆ ಕನ್ನಡ ಮಾಧ್ಯಮದಲ್ಲಿಯೇ ಮಾನವಿಕ ವಿಜ್ಞಾನ ವಿಷಯಗಳನ್ನೂ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದೆ. ಆದರೆ, ಆಗಲೇ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳು ಸಿಗುತ್ತಿದ್ದುವು. ಈಗಲೂ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರ ಬರೆದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಎರಡು ಕಾರಣ ಇರಬೇಕು: ಒಂದು, ಮಾತೃಭಾಷಾ ಮಾಧ್ಯಮದಲ್ಲಿ ಕಲಿತರೆ ವಿಷಯದ ಗ್ರಹಿಕೆ ಚೆನ್ನಾಗಿ ಇರುತ್ತದೆ ಹಾಗೂ ಮಾತೃಭಾಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭ ಎಂಬ ತಲೆತಲೆಮಾರುಗಳಿಂದ ಸಾಬೀತಾದ ಸಂಗತಿ ಸುಳ್ಳು ಇರಬಹುದು. ಅಥವಾ ಮಾತೃಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳ ಬಗ್ಗೆ ನಮ್ಮ ಮೌಲ್ಯಮಾಪಕರಿಗೆ ತಾತ್ಸಾರ ಇರಬೇಕು. ಎರಡನೇ ಕಾರಣ ನಿಜ ಎಂದು ಮಕ್ಕಳಿಗೂ ತಿಳಿಯುತ್ತದೆ. ಇದು ಮಾತೃಭಾಷಾ ಮಾಧ್ಯಮದ ವಿರುದ್ಧದ ವ್ಯವಸ್ಥಿತ ಹುನ್ನಾರವಲ್ಲದೇ ಮತ್ತೇನು?

ದಾಮ್ಲೆ ಅವರು ಹೇಳಿದ ಹಾಗೆ ಕನ್ನಡ ಸಾಹಿತಿಗಳು ಹಾಗೂ ಚಳವಳಿಗಾರರು ಅಪ್ಪಟ ಅಪ್ರಾಮಾಣಿಕರು. ಅವರು ಬರೆದ ಪುಸ್ತಕವನ್ನು ಅವರ ಮಕ್ಕಳು ಓದುತ್ತಾರೆಯೇ ಎಂದು ನೀವು ಕೇಳಿ ನೋಡಿ. ಖಂಡಿತ ಓದುವುದಿಲ್ಲ. ಬಹಳ ಕಡಿಮೆ ಜನ ಕನ್ನಡ ಲೇಖಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಾರೆ. ಕನ್ನಡ ಚಳವಳಿಗಾರರು ಪರಭಾಷೆಯ ಸಿನಿಮಾ ಪ್ರದರ್ಶನದ ವಿರುದ್ಧ ಹೋರಾಡುತ್ತಾರೆ. ಆದರೆ, ತೀರಾ ಈಚೆಗೆ ರಜನೀಕಾಂತ್ ನಟಿಸಿದ ಸಿನಿಮಾವನ್ನು ಒಂದಲ್ಲ, ಎರಡಲ್ಲ ಹದಿನಾಲ್ಕು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಿನಿಮಾದ ವಿತರಕರಾದ ಎಚ್.ಡಿ.ಗಂಗರಾಜು ಅವರಿಗೆ ಇದು ಹೇಗೆ ಸಾಧ್ಯವಾಯಿತು ಎಂದು ಅವರಿಗೇ ಕೇಳಿ ನೋಡಿ. ಕನ್ನಡ ಶಾಲೆಗಳು ಉದ್ಧಾರವಾಗಬೇಕು, ಅಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಸಿಕ್ಕ ಸವಲತ್ತುಗಳೆಲ್ಲ ಸಿಗಬೇಕು ಎಂದು ಕಳೆದ ಆರು ದಶಕಗಳಲ್ಲಿ ಒಂದಾದರೂ ಚಳವಳಿ ನಡೆಯಲಿಲ್ಲ. ಏಕಿರಬಹುದು? ಸನ್ನಿ ಲಿಯೋನ್ ಹೊಸ ವರ್ಷ ಬೆಂಗಳೂ ರಿಗೆ ಬಂದು ಕುಣಿಯಬಾರದು ಎಂದೂ ಕನ್ನಡ ಚಳವಳಿಗಾರರು ಹೋರಾಟ ಮಾಡುತ್ತಾರೆ. ಕೆಲಸವಿಲ್ಲದ ನಮ್ಮ ಪಡ್ಡೆ ಹುಡುಗ ರಿಗೆ ಕನ್ನಡ ಚಳವಳಿ ಏಕೆ ಆಕರ್ಷಕವಾಗಿ ಕಾಣುತ್ತಿರಬಹುದು ಎಂಬುದರ ಸೂಚನೆ ಇಲ್ಲಿ ಇದೆ!

ನಾವು ಅನುಸರಿಸುತ್ತಿರುವುದು ತೀವ್ರವಾದ ಅಸಮಾನ ಶಿಕ್ಷಣ ವ್ಯವಸ್ಥೆ; ಹಾಗೂ ನಮ್ಮದು ಶ್ರೇಣೀಕರಣ ಇರುವ ಸಮಾಜ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳು ನೇರವಾಗಿ ಅಮೆರಿಕೆಗೆ ಹೋಗುತ್ತಾರೆ ಎಂದು ದುರ್ಬಲ ವರ್ಗಗಳ ನಾಯಕರು ನಂಬಿದ್ದಾರೆ. ಕನ್ನಡ ಮಾಧ್ಯಮದ ಪರವಾಗಿ ಇರುವವರು ವಂಚಕರು ಎಂಬ ಭಾವನೆಯೂ ಅವರಲ್ಲಿ ಇದೆ! ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳಿಸಿ ನಮ್ಮ ಮಕ್ಕಳು ಕನ್ನಡ ಮಾಧ್ಯಮದ ಶಾಲೆಗಳಿಗೆ ಹೋಗಬೇಕು ಎಂದು ಹೇಳಲು ಇವರು ಯಾರು ಎಂದು ಅವರು ಕೇಳುತ್ತಿದ್ದಾರೆ. ಇವರು ‘ಬಹುಸಂಖ್ಯಾತರು’ ಎಂದು ಸರ್ಕಾರದಲ್ಲಿ ಇದ್ದವರಿಗೆ ತಿಳಿದಿದೆ. ಚುನಾವಣೆಯ ಮೇಲೆ ಕಣ್ಣು ಇಟ್ಟಿರುವ ರಾಜಕೀಯ ಪಕ್ಷಗಳು ಯಾರ ಪರವಾಗಿ ಇರಬೇಕು?

ಒಟ್ಟಿನಲ್ಲಿ ಕಳೆದ 50-60 ವರ್ಷಗಳಲ್ಲಿ ನಾವು ಒಬ್ಬ ಶ್ರೇಷ್ಠ ವಿಜ್ಞಾನಿಯನ್ನು, ಸಮಾಜ ಶಾಸ್ತ್ರಜ್ಞನನ್ನು, ಕವಿಯನ್ನು ಅಥವಾ ಕಥೆಗಾರನನ್ನು ಸೃಷ್ಟಿಸಲಿಲ್ಲ (ಈಗ ಇರುವ ಇಂಥ ಪ್ರತಿಭಾನ್ವಿತರೆಲ್ಲ 70 ವರ್ಷ ದಾಟಿದವರು ಅಥವಾ ಆಸುಪಾಸಿನವರು). ಏಕೆಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಕುಂಡದಲ್ಲಿ ಬೆಳೆದ ಗಿಡಗಳು: ಅವರಿಗೆ ಕೆಳಗೆ ಬೇರುಗಳು ಇಲ್ಲ. ಮೇಲೆ ಟೊಂಗೆಗಳು ಇಲ್ಲ. ಕುವೆಂಪು ಇದನ್ನೇ ಸಾರಿ ಸಾರಿ ಹೇಳಿದರು. ಯಾರು ಕೇಳುತ್ತಾರೆ? ನವೆಂಬರ್ ತಿಂಗಳಲ್ಲಿ ಕನ್ನಡದ ಶ್ರಾದ್ಧಾ ಮಾಡುವ ದಿನ ದೂರವಿದೆ ಎಂದು ನನಗೆ ಅನಿಸಿಲ್ಲ.

Leave a Reply

Your email address will not be published.