ಅವನೌವ್ನ ಏನ ಸಿಂಗಾಪುರಾ…!

‘ಎಪ್ಪಾ ಲೇ, ಎಪ್ಪಾ ಲೇ, ಎಲ್ಲೆದಿಯೋ…?’ ಮಗನ ಕೂಗಿಗೆ ಅಪ್ಪನ ಉತ್ತರ, ‘ಲೇ ಮಂಗಸೂಳೀ ಮಗನಾ, ಡ್ಯಾಡೀ ಅನ್ನಲೇ ಭೋಸುಡ್ಕೆ..!’ 

ಚೂಟಿ ಚಿದಾನಂದ

 

ನಮ್ಮ ಸಂಗ್ಯಾ ಹಳ್ಳಿ ಊರಾಗ ರೈತನ ಮಗ. ಮನೀ ತುಂಬ ಜನ್ರಿಗಿಂತ ದನಗಳು ತುಂಬಿದ್ವು. ಸಂಗ್ಯಾ ಸಣ್ಣವನಿದ್ದಾಗಿಂದ ಸಗಣ್ಯಾಗ ಬಿದ್ದು ಒದ್ದಾಡಿ ಬೆಳದಾವ. ಅವ್ರವ್ವ ನನ ಮಗ ಸಾಲಿ ಕಲೀಲಿ ಅಂತಾ ಸಾಲೀಗೆ ಕಳ್ಸತಿದ್ಲು. ಅವ್ರಪ್ಪ ಬ್ಯಾಡಲೆ ಮಗನಾ ಹೊಲಕ್ಕ ನಡೀ, ಕುಂಟೀ ಹೊಡಿ ಅಂತಿದ್ದ.

ಅವ್ರವ್ವ ಹಟಮಾರಿ ಅಂದ್ರ ಹಟಮಾರಿ. ನಾ ಸಂಗ್ಯಾನ ಸಾಲೀಗೆ ಕಳ್ಸಾಕಿ ನೋಡು ಅಂತಾ ಮಗ್ಗಲ ಊರಾಗಿನ ಸಾಲೀಗೆ ಸರ‍್ಸಿ ಸಾಲಿ ಮಾಸ್ತರ ಕಾಲಿಗೆ ಬಿದ್ದು ನನ್ನ ಮಗನ್ನ ಚೊಲೋ ಓದ್ಸಿರಿ ಸಾರ್, ಸುಗ್ಗಿಗೆ ನಿಮ್ಮ ಮನೀಗೆ ಜೋಳಾ ತಂದಕೊಡ್ತೀನಿ ಅಂದಿದ್ಲು. ಸಂಗ್ಯಾನ ಬಕ್ಕಣ ತುಂಬಾ ಬೆಲ್ಲದಚ್ಚು ತುಂಬಿ, ಕೆನಿ ಮೊಸರು ಹಾಕಿ ನಾದಿದ ನವಣೆಕ್ಕಿ ಅನ್ನದ ಬುತ್ತಿಗಂಟು ಕೊಟ್ಟು ಸಾಲೀಗೆ ಕಳ್ಸತಿದ್ಲು. ಸಂಗ್ಯಾ ನಾಕ ನಾಕು ಬಿಸಿ ಬಿಸಿ ರೊಟ್ಟಿ, ಕೆಂಪನಚಟ್ನಿ ಕೆನಿ ಮೊಸರು ತಿಂದು ಸಾಲಿಗೆ ಮೂರು ಮೈಲಿ ನಡಕೊಂಡು ಹೋಗಾದ್ರಾಗ ಸುಸ್ತಾಗ್ತಿದ್ದ.

ಸಂಗ್ಯಾ ಸಾಲ್ಯಾಗ ಕುಂತ ಹತ್ತ ನಿಮಿಷಕ್ಕ ಗೊರ್ಕಿ ಹೊಡಿಯಾಕ ಶುರು ಮಾಡ್ತಿದ್ದ. ಪಾಪ ಅದ್ರಾಗ ಅವ್ನದೇನು ತಪ್ಪೈತೆ, ಅವ ತಿಂದ ರೊಟ್ಟಿ

ಕೆನಿ ಮೊಸ್ರು ತಮ್ಮ ಕೆಲ್ಸ ಶುರು ಮಾಡ್ತಿದ್ವು. ಶಾಲಿ ಮಾಸ್ತರ ಅವ್ನ

ಹೊಡ್ದು ಎಬಸ್ತಿದ್ರು. ಹಿಂಗ ಹತ್ತು ವರ್ಷದಾಗ 7ನೇ ಇಯತ್ತ ಪಾಸ ಮಾಡಿದ.

ಸಂಗ್ಯಾನ ಅವ್ವನ ಕಾಟಕ್ಕ ಅವರಪ್ಪ ಬ್ಯಾರೆ ಊರಿನ ಹೈಸ್ಕೂಲಿಗೆ ಸೇರಿಸ್ದ. ಅದಾ ಊರಿನ ಕಾಲೇಜದಾಗ ಪಿ.ಯು.ಸಿ. ಪಾಸಾದ, ದೂರದ ಊರಿನ್ಯಾಗ ಓದಿ ಸಾಫ್ಟವೇರ್ ಇಂಜಿನಿಯರ್ ಆದ, ದೊಡ್ಡೂರಾಗ ನೌಕರೀನು ಸಿಕ್ತು. ದೊಡ್ಡ ಊರಿನ್ಯಾಗ ಸಾಫ್ಟ್ವೇರ್ ಇಂಜಿನಿಯರ್ ನೌಕ್ರಿ ಅಂದ್ರ ನಾ ಮುಂದ ತಾ ಮುಂದ ಅಂತಾ ಹೆಣ್ಣು ಕೊಡೋರು ಬೆಲ್ಲಕ್ಕ ನೊಣ ಮುಕ್ರೀದ್ಯಾಂಗ ಮುಕ್ಕ್ರಾಕ ಹತ್ತಿದ್ರು. ಊರ ಹತ್ಯಾಗಿನ ದೌಳೇರ (ಹಣವಂತರು) ಮನಿಯ ಬೆಳ್ಳಾನ ಹುಡುಗೀನ ಮದ್ವಿ ಆದ. ಮದ್ವಿ ಆದ ಎಳ್ಡಾವರ್ಸದಾಗ ಆ ಶಿವ ಅವ್ರೀಗೆ ಒಂದು ಗಂಡು, ಒಂದು ಹೆಣ್ಣು ಮಕ್ಳನ ಕರುಣಿಸಿದ.

ಸಂಗ್ಯಾ ಕೆಲ್ಸ ಮಾಡ್ತಿದ್ದ ಕಂಪಿನೇರು ಸಂಗ್ಯಾನ 6 ತಿಂಗ್ಳು ಸಿಂಗಾಪುರಕ್ಕ ಕೆಲ್ಸದ ಮ್ಯಾಲೆ ಕಳ್ಸಿದ್ರು. ಸಂಗ್ಯಾನ ಮಕ್ಳ ಸಾಲಿಗೆ ಸೂಟಿ ಇತ್ತು, ಸಂಗ್ಯಾನ ಮಾವ ಸಿಂಗಾಪುರಕ್ಕ ಹೋಗಿಬರೋ ಖರ್ಚ ನಾ ಕೊಡ್ತೀನಿ ಅಂದ. ಅದ್ಕಾ ಸಂಗ್ಯಾ ಹೆಂಡ್ತಿ ಮಕ್ಳನ ರ‍್ಕೊಂಡು ಸಿಂಗಾಪುರಕ್ಕ ಹೋದ. ಸಿಂಗಾಪುರದಾಗ ಎಲ್ಲರೂ ಇಂಗ್ಲೀಸ್ ಮಾತಾಡ್ತಾರ ಅದ್ಕಾ ನೀವೂ ಇಂಗ್ಲೀಸ್‌ದಾಗ ಮಾತಾಡ್ಬೇಕು. ಲೇ ಎಪ್ಪಾ ಅಂತಾ ಕೂಗೋಬದ್ಲು ಡ್ಯಾಡಿ ಅನ್ಬೇಕು, ಬೇ ಎವ್ವಾ ಅನ್ನೋಬದ್ಲು ಮಮ್ಮೀ ಅನ್ಬೇಕು ಅಂತಾ ಮಕ್ಳಿಗೆ ಹೇಳ್ಕೊಟ್ಟ. ಹೇ ನಿನಗ ಹೇಳ್ತೀನಿ ಅಂತಾ ಹೆಂಡ್ತಿ ಕಡೆ ನೋಡ್ಕೋಂತಾ, ನೀ ನನಗ, ಏ ಏನಾ ಅನ್ನೋಬದ್ಲು ಡರ‍್ಲಿಂಗ ಅನ್ಬೇಕು, ಗೊತ್ತಾತಿಲ್ಲಾ? ಅಂದ. ಎಲ್ರೂ ಹೂಂ ಅಂತಾ ತೆಲಿ ಹಾಕಿದ್ರು.

ಸಂಗ್ಯಾ ಒಂದು ದಿನ ಹೆಂಡ್ತಿ ಮಕ್ಳನ್ನ ರ‍್ಕೊಂಡು ಸಿಂಗಾಪುರ ಸಿಟಿ ನೋಡಾಕ ಸಿಟಿ ಬಸ್ಸಿನ್ಯಾಗ ಹೊಂಟ. ಒಂದು ಕಡೆ ಬಸ್ ಹತ್ಬೇಕರ ಬಸ್ಸಿನ್ಯಾಗ ಸಂಗ್ಯಾ ಮುಂದ ಹೋದ, ಮಕ್ಳು ಹಿಂದ ಉಳುದ್ರು, ಮಗ ಹೆದ್ರಿಕೊಂಡು ಎಪ್ಪಾ ಲೇ, ಎಪ್ಪಾ ಲೇ, ಎಲ್ಲೆದಿಯೋ ಅಂತಾ ಅತಗೋಂತಾ ಕೂಗಾಕಹತ್ತಿದ. ಅದನ್ನ ಕೇಳಿ ಸಂಗ್ಯಾಗ ಕೆಂಡಾಮಂಡ್ಲ ಸಿಟ್ಟು ಬಂತು. ಲೇ ಮಂಗಸೂಳೀ ಮಗನಾ, ನಿನ್ನವ್ನ ಡ್ಯಾಡೀ ಅನ್ನಲೇ ಭೋಸುಡ್ಕೆ ಅಂತಾ ಬೈದು, ನಾ ಮುಂದೆ ಅದೀನಿ ಬಾರಲೆ ಅಂತಾ ರ‍್ದ.

ಪಾಪ ಸಂಗ್ಯಾ ಹಾಂಗ ಬೈದಿದ್ರ್ಯಾಂಗ ಏನೂ ತಪ್ಪಿಲ್ಲ. ಯಾಕಂದ್ರ ನಮ್ಮಕಡೀಗೆ ಮಾತಿಗೆ ಮೊದ್ಲ ನೌನ ಹಚ್ಚೆ ಮಾತಾಡ್ತಾರ. ಯಾರಿಗಾದ್ರೂ ಏನಾರ ನೋವಾತಂದ್ರ ಇಲ್ಲ ಸಿಟ್ಟು ಬಂತಪಾ ಅಂದ್ರ ಆವಾಗ ಸಟಕ್ನಾ ಅವ್ರ ಹುಟ್ಟು ಭಾಷ್ಯಾಗ ಬೈಗಳು ತಾನಾ ತಾನಾಗೇ ಹೊರಗ ಬರೋದು ಮಾಮೂಲಿ.

ಸಂಗ್ಯಾ ಸಿಂಗಪೂರ್ದಿಂದ ತಮ್ಮೂರಿಗೆ ಬಂದ. ಊರಿನ ಮಂದೆಲಾ ನೋಡಾಕ ಬಂದ್ರು. ಸಿಂಗಾಪರ‍್ದಾಗ ಅದು ಹಾಂಗೈತಿ, ಇದು ಹೀಂಗೈತೆ, ಅವನೌವ್ನ ಸುಮ್ನ ಗುಂಡಿ ಒತ್ತಿದ್ರ ಸಾಕಪ್ಪಾ ಎಲ್ಲ ಕೆಲ್ಸನಾ ಮಿಸೀನ ಮಾಡ್ತಾವ ಅಂತಾ ಹೇಳ್ತಿದ್ದ ಸಂಗ್ಯಾ. ನಡೂಕ ಒಬ್ಬ ಮುತ್ಯಾ ಕೇಳ್ದ, ‘ಎಪ್ಪಾ ಉಣ್ಣೋದು ಮಕ್ಕಣೋದು ಹ್ಯಾಂಗೋ… ಅವುನ್ನೂ ಮಿಸೀನ ಮಾಡ್ತಾವೇನು?’

ಅಷ್ಟ್ರಾಗ ಸಂಗ್ಯಾನ ಮಗ ಎದ್ದು, ‘ಸತ್ರೂ ಸಿಂಗಾಪುರಕ್ಕ ಹೋಗಬರ‍್ದು, ಅವನೌವ್ನ ಅದೇನು ಸಿಂಗಾಪುರಾನೋ ಏನೊ…!’ ಅಂದಾ. ಯಾಕ್ಲೇ ಪಾಪ್ಯಾ ಹಾಂಗ ಅಂತೀ ಅಂತಾ ಅವರಜ್ಜ ಕೇಳ್ದ. ‘ಆ ಊರಾಗ ಅಲ್ಲಿ ಉಚ್ಚಿ ಹೊಯ್ಯಿಬ್ಯಾಡ, ಇಲ್ಲಿ ಉಚ್ಚಿ ಹೊಯ್ಯಬ್ಯಾಡ ಅಂತಾರ, ಅವನೌವ್ನ ಉಚ್ಚಿ ಜೋರಾದ್ರ ಏನ ಮಾಡ್ಬೇಕು?’ ಅಂದ ಸಂಗ್ಯಾನ ಮಗ!

Leave a Reply

Your email address will not be published.