ಫ್ಯಾಸಿಸಂನ ಅಂಗ ರಚನೆಯ ಛೇದನ

ದಿ ಅನಾಟಮಿ ಆಫ್ ಫ್ಯಾಸಿಸಂ ಗ್ರಂಥದಲ್ಲಿ ಲೇಖಕ ರಾಬರ್ಟ್ ಓ ಪ್ಯಾಕ್ಸ್ಟನ್ ಫ್ಯಾಸಿಸಂನ ವಿವಿಧ ಪ್ರ್ರಕ್ರಿಯೆಗಳು ಮತ್ತು ಹಂತಗಳನ್ನು ಗಂಭೀರವಾದ ಅಧ್ಯಯನಕ್ಕೊಳಪಡಿಸುತ್ತಾರೆ. ಈ ಅಧ್ಯಯನದಲ್ಲಿ ಫ್ಯಾಸಿಸಂನ ರೂಪುತಳೆಯುವಿಕೆ, ನೆಲೆಯೂರುವಿಕೆ, ಅಧಿಕಾರದ ಗದ್ದುಗೆ ಏರಿಕೆ, ಅಧಿಕಾರ ಚಲಾಯಿಸುವಿಕೆ, ದೀರ್ಘಕಾಲೀನ ಕ್ರಾಂತಿಕಾರಕತೆ ಹಾಗೂ ಅದರ ಹೊಸ ಅವತಾರಗಳು ಮತ್ತು ವಂಶಾವಳಿಗಳನ್ನು ಒಳಗೊಂಡಿವೆ.

ಧುನಿಕ ಕಾಲಮಾನದ ಪ್ರಮುಖ ಅನ್ವೇಷಣೆ ಫ್ಯಾಸಿಸಂ. ಇದು ಈ ಕಾಲಘಟ್ಟದ ಪ್ರಮುಖ ದುಃಖದ ಮೂಲವೂ ಆಗಿದೆ. ಪ್ರಜಾತಂತ್ರ ಬೆಳೆದು ಹರಡುತ್ತಿದ್ದಂತೆಯೇ ಯೂರೋಪಿನಲ್ಲಿ ಕಾರ್ಮಿಕ ರಂಗಗಳು ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ ಹೆಚ್ಚೆಚ್ಚು ಮತಗಳನ್ನು ಕ್ರೋಢಿಕರಿಸತೊಡಗುತ್ತವೆ. ಆಗ ಕಾರ್ಮಿಕರಂಗದ ವಿರುದ್ಧ ಹೋರಾಡಲು ಬಲಿಷ್ಟ ಬಂಡವಾಳಶಾಹಿಗಳು ಕಟ್ಟಿದ ಅತೀ ಪ್ರತಿಗಾಮಿ, ಉದ್ರೇಕಿತ, ರಾಷ್ಟ್ರಭಕ್ತ ಸಾಮ್ರಾಜ್ಯಶಾಹಿ ಮನಸ್ಥಿತಿಯ ಅರೆಸೇನೆಯೆಂದು ಬೀಸುಬೀಸಾಗಿ ಫ್ಯಾಸಿಸಂನ್ನು ಅರ್ಥೈಸುವುದು ಅಸಾಧ್ಯ

ಫ್ಯಾಸಿಸಂ ಪ್ರಕ್ರಿಯೆ ದೇಶದಿಂದ ದೇಶಕ್ಕೆ ಭಿನ್ನವಾಗಿ ಪ್ರಕಟಗೊಳ್ಳುತ್ತದೆ. ಉದ್ರೇಕಿತ ಜನಜಂಗುಳಿಗಳಿಗೆ ದಿಕ್ಸೂಚಿ ಭಾಷಣ ನೀಡುವ ನಾಯಕರು, ಶಿಸ್ತುಬದ್ಧವಾಗಿ ಕವಾಯತು ಮಾಡುವ ಯುವಜನತೆ, ಅಲ್ಪಸಮುದಾಯದವರನ್ನು ಹಿಂಸಿಸುವ ಕ್ರಾಂತಿಕಾರಿಗಳು, ಅನಿರೀಕ್ಷಿತವಾಗಿ ನಡೆಯುವ ದಾಳಿಗಳೆಂದು ಅಧಿಕಾರವಿಲ್ಲದಿರುವಾಗ ಬಿಂಬಿಸಲ್ಪಡುತ್ತದೆ. ಆದರೆ ಅಧಿಕಾರದ ಗದ್ದುಗೆ ಲಭಿಸಿದ ನಂತರ ಬೇರೆಯೇ ರೂಪದಲ್ಲಿ ಕಾಣುವ ಸಮುದಾಯಗಳ ಹೊರಗಡೆ ವ್ಯಕ್ತಿಗಳಿಗೆ ಹಕ್ಕುಗಳಿಲ್ಲ, ಪೌರತ್ವವೆಂದರೆ ಸಾಂವಿಧಾನಿಕ ಹಕ್ಕು ಬಾಧ್ಯತೆಗಳಲ್ಲ ಎಂದು ಪ್ರತಿಪಾದಿಸಲಾಗುತ್ತದೆ. ಈ ಬೆಳವಣಿಗೆಗಳು ಫ್ಯಾಸಿಸ್ಟರು ನಡುವಿನಲ್ಲಿರುವವರಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸುತ್ತವೆ. ವೇಗದ ಕಾರು, ವಿಮಾನಗಳನ್ನು ಪ್ರೀತಿಸುವ, ಪ್ರಚಾರಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊರೆಹೋಗುವ ಇವರ ಸತ್ವವನ್ನು ಆಧುನಿಕತೆ ಪ್ರತಿರೋಧದಲ್ಲಿ ಹುಡುಕುವುದು ಹಾಗೂ ಆಧುನಿಕ ನಿರಂಕುಶತೆಯಲ್ಲಿ ಅರಸುವುದು ಪೊಳ್ಳುತನವಾಗುತ್ತದೆ.

ಆಧುನಿಕ ಪ್ರಚಾರದ ತಂತ್ರಗಳನ್ನು ಫ್ಯಾಸಿಸ್ಟ್ ಪ್ರಜ್ಞೆ ಆವಾಹಿಸಿಕೊಳ್ಳುತ್ತದೆ. ಕೈಗಾರಿಕೀಕರಣದ ಶೋಷಣೆಯ, ಭೂಮಂಡಲೀಕರಣದ ಮತ್ತು ಕೃಷಿಪಲ್ಲಟಗಳ ಬಲಿಪಶುಗಳನ್ನು, ಏಕಕಾಲದಲ್ಲಿ ಒಳಗೊಳ್ಳುತ್ತದೆ. ಏರುನಾಟಕೀಯ ಘಟನೆಗಳೊಂದಿಗೆ, ಜನಸಾಮಾನ್ಯರ ಪ್ರತಿನಿತ್ಯದ ನೋವುಗಳನ್ನು ಯಾರಿಗೂ ಕಾಡದಂತೆ ಮರೆಗೆ ಸರಿಸುತ್ತದೆ. ಇದು ಇಪ್ಪತ್ತನೆಯ ಶತಮಾನದ ವಿಜ್ಞಾನ ಮತ್ತು ಔಷಧಿ ಕ್ಷೇತ್ರಗಳಲ್ಲಾದ ಸಂಶೋಧನೆಗಳನ್ನು ಗ್ರೆಗರ್ ಮೆಂಡಲ್‍ರವರ ‘ತಳಿವಿಜ್ಞಾನ’ ಹಾಗೂ ಚಾಲ್ರ್ಸ್‍ಡಾರ್ವಿನ್‍ರ ‘ಬಲಿಷ್ಟರ ಬಾಳುವಿಕೆಯ’ ತತ್ವಗಳನ್ನು ಮೈಗೂಡಿಸಿಕೊಂಡಿದೆ.

ಜನಸಾಮಾನ್ಯರ ಬೆಂಬಲವಿಲ್ಲದೆ ಫ್ಯಾಸಿಸಂ ಬೆಳೆಯುವುದೇ ಇಲ್ಲ. ಜನತೆ ಅಲ್ಪಕೆಡುಕುಗಳನ್ನು ಒಪ್ಪಿಕೊಳ್ಳುತ್ತಾ, ಅತಿರೇಕಗಳೆಡೆ ಕಣ್ಣು ಹಾಯಿಸದೆ ಬೆಳೆಯುತ್ತಾ, ಪರ್ವತಾಕಾರ ತಳೆಯುವ ಪರಿಣಾಮಗಳು ವಿಮರ್ಶೆಯ ವಿವೇಕವನ್ನು ಕೊಲ್ಲುತ್ತವೆ. ಬುದ್ಧಿಜೀವಿಗಳನ್ನು ಅಣಕಿಸುತ್ತಾ, ಉದಾರವಾದಿ ಮೌಲ್ಯಗಳ ಮೇಲೆ ದಾಳಿ ಮಾಡುತ್ತಾ, ಜನಜಂಗುಳಿಗೆ ಭಾವನಾತ್ಮಕ ಉದ್ರೇಕತೆಯ ಖುಷಿ ನೀಡುತ್ತದೆ. ಗುಂಪುಗಳಿಗಾಗಿ ವ್ಯಕ್ತಿಗತ ಕಾಳಜಿಗಳನ್ನು ಪರಿತ್ಯಜಿಸುವ ವಿಧಾನ ಅಂತಿಮವಾಗಿ ಯುದ್ಧದ ವೈಭವೀಕರಣದಲ್ಲಿ ಕೊನೆಯಾಗುತ್ತದೆ.

ಹಂಚುವಿಕೆಯಲ್ಲ ಗುರುತಿಸುವಿಕೆ

ಯಾವ ಬಿಕ್ಕಟ್ಟುಗಳಿಗೆ ಪರಿಹಾರವಾಗಿ ಫ್ಯಾಸಿಸಂ ಹುಟ್ಟಿ ಬೆಳೆದಿದೆ? ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸಿದ ಕಾರ್ಮಿಕರ ವಲಸೆ, ಕೃಷಿಪಲ್ಲಟಗಳು, ಮಾರುಕಟ್ಟೆ ಅತಿರೇಕಗಳ ಬಿಕ್ಕಟ್ಟುಗಳಿಗೆ ಪರಿಹಾರವಾಗಿ ಬೆಳೆದಿದೆಯೇ? ಮಹಾಯುದ್ಧಗಳ ನಂತರ ಆಡಳಿತದ ಸವಾಲುಗಳನ್ನು ಎದುರಿಸಲು ವಿಫಲವಾದ ಉದಾರವಾದಿ ಪ್ರಭುತ್ವದ ಸೋಲುಗಳು ಇದಕ್ಕೆ ಕಾರಣವೇ? ಯುದ್ಧ ನಂತರದಲ್ಲಿ ಸೃಷ್ಟಿಯಾಗುವ ನಿರುದ್ಯೋಗ, ಬೆಲೆಯೇರಿಕೆ, ಸಾಮಾಜಿಕ ಸಂಘರ್ಷಗಳು, ಉದ್ರೇಕಿತ ಭಾವನೆಗಳು ಹಾಗೂ ಅಲ್ಪಶಿಕ್ಷಿತ ಬಡವರ ಮತದಾನದ ಹಕ್ಕುಗಳಿಂದಾಗಿ ಉಂಟಾಗುವ ಪರಿಣಾಮಗಳಿಂದಾಗಿ ಫ್ಯಾಸಿಸಂ ಬೆಳೆದಿದೆಯೇ?

ಯೂರೋಪಿನಲ್ಲಿ ಯುವಕರು ಉದ್ಯೋಗವಿಲ್ಲದಾಗ ಎಡ ಅಥವಾ ಬಲ ರಂಗಗಳನ್ನು ಸೇರಲು ಸಿದ್ಧರಿರುತ್ತಾರೆ ಎಂದು ಭಾವಿಸೋಣ. ಇಂಥ ಸಂದರ್ಭದಲ್ಲಿ ವರ್ಗ ಸಂಘರ್ಫಗಳನ್ನು ಮೀರುವ ದಾರಿಯೊಂದಿದ್ದರೆ ಅದೇ ಉಗ್ರ ರಾಷ್ಟ್ರೀಯತೆಯ ಮೂಲಕ ಮುನ್ನೆಲೆಗೆ ಬಂದದ್ದು ಗುರುತಿಸುವಿಕೆಯ ರಾಜಕಾರಣ. ಹಂಚುವಿಕೆಯ ರಾಜಕಾರಣಕ್ಕಿಂತ ಗುರುತಿಸುವಿಕೆಯ ರಾಜಕಾರಣ ಆಕರ್ಷಕ. ಇದು ಜನರನ್ನು ಅವರ ಸಾಮಾನ್ಯ ಸಾಮಥ್ರ್ಯಕ್ಕಿಂತ ಹೆಚ್ಚು ಸಾಧಿಸುವಂತೆ ಒತ್ತಾಯಿಸುತ್ತದೆ. ಅಧೀನರ ಮೇಲೆ ಯಜಮಾನಿಕೆಯನ್ನು ಚಲಾಯಿಸುವ ಅವಕಾಶವನ್ನು ನೀಡುತ್ತದೆ. ಒತ್ತಾಯದಿಂದ ಹಾಗೂ ಬಲದಿಂದ ಅನ್ಯರನ್ನು ಮುಗಿಸುವ ದಾರಿಯನ್ನು ಹಿಡಿಸುತ್ತದೆ. ಜನಜಂಗುಳಿ ಯುವಕರಲ್ಲಿ ಬಲಿಪಶು ಪ್ರಜ್ಞೆ ಬೆಳೆಸಿದರೆ ಅವರನ್ನು ಸುಲಭವಾಗಿ ಪಳಗಿಸಬಹುದು ಎನ್ನುವ ತಂತ್ರವನ್ನು ಫ್ಯಾಸಿಸಂ ಕಂಡುಕೊಳ್ಳುತ್ತದೆ. ಸಾಂಪ್ರದಾಯಿಕ ಐಕ್ಯತೆಯ ಪತನ, ನಗರೀಕರಣದ ವಿಸ್ತರಣೆ, ವಲಸೆ, ಕೈಗಾರಿಕಾ ಸಂಘರ್ಫಗಳು, ಆಂತರಿಕ ನಿಷೇಧರಹಿತ ವ್ಯಕ್ತಿತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಷ್ಟ್ರಗಳ ಹೊರಗಿನ ಹಾಗೂ ಒಳಗಿನ ಶತ್ರುಗಳನ್ನು ತೋರಿಸಿ ಜನಮನ ಪಲ್ಲಟಗೊಳಿಸಲು ಸುಲಭ ಸಾಧ್ಯವಾಗುತ್ತದೆ. ನಾಶದ ಅನುಭವಗಳ ನಶೆಯೇರಿಸಿ ಶೂನ್ಯವನ್ನೇ ಸೃಷ್ಟಿಸುವ ಕನಸುಗಳ ಕನವರಿಕೆಯ ಕಾಲ ಇದರಿಂದಾಗಿ ಪ್ರಧಾನವಾಗುತ್ತದೆ.

ಭಾವನಾತ್ಮಕ ಮೂಲದ್ರವ್ಯಗಳು

ಫ್ಯಾಸಿಸಂ ಬೆಳವಣಿಗೆಯ ಭಾವನಾತ್ಮಕ ಮೂಲದ್ರವ್ಯಗಳೆಂದು ಈ ಮುಂದಿನ ಅಂಶಗಳನ್ನು ಗುರುತಿಸಬಹುದು. ಒಂದು, ಪರಹಾರಗಳೇ ಇಲ್ಲವೆನ್ನುವ ಸರ್ವವ್ಯಾಪಿ ಬಿಕ್ಕಟ್ಟಿನ ಬಿಂಬಿಸುವಿಕೆ. ಎರಡು, ವ್ಯಕ್ತಿ ಹಕ್ಕುಗಳಿಗಿಂತ ಸಾಮೂದಾಯಿಕ ಆಸ್ಮಿತೆಗಳೇ ಮೇರು ಎನ್ನುವ ಪ್ರತಿಪಾದನೆ. ಮೂರು, ವ್ಯಕ್ತಿಯ ಸಮೂದಾಯವೇ ನಿರಂತರ ಬಲಿಪಶುವೆನ್ನುವ ಪ್ರಜ್ಞೆ. ನಾಲ್ಕು, ವ್ಯಕ್ತಿವಾದಿ ಉದಾರವಾದದಿಂದ, ವರ್ಗ ಸಂಘರ್ಷಗಳಿಂದ, ವಲಸೆಗಳಿಂದ ಮತ ಸಮೂದಾಯಗಳು ಅವನತ್ತಿಯತ್ತ ಸಾಗುತ್ತವೆಂಬ ಭಯ. ಐದು, ಸಮ್ಮತಿ ಅಥವಾ ಹಿಂಸೆಯ ಮೂಲಕ ಶುದ್ಧ ಸಮೂದಾಯಗಳ ಐಕ್ಯತೆಯ ಅವಶ್ಯಕತೆ. ಆರು, ರಾಷ್ಟ್ರೀಯ ನಾಯಕರ ಸೃಷ್ಟಿ ಹಾಗೂ ಅವರಿಂದ ಮಾತ್ರ ಮತ ಸಮೂದಾಯಗಳ ರಕ್ಷಣೆ ಸಾಧ್ಯವೆನಿಸುವ ಭ್ರಮೆಯ ಉತ್ಪಾದನೆ. ಏಳು, ಜನಸಂಕಲ್ಪದ ಜಯವನ್ನು ಹಿಂಸೆಯ ಸೊಬಗನ್ನು ಸಮುದಾಯಗಳ ಶ್ರೇಷ್ಟತೆಗೆ ಬಳಸುವುದು. ಎಂಟು, ಸಾರ್ವತ್ರಿಕ ವೈಚಾರಿಕತೆಗಿಂತ ನಾಯಕರ ದಮ್ಮು ಪ್ರಣೀತ ತೀರ್ಮಾನಗಳೇ ಶ್ರೇಷ್ಟವೆನ್ನುವ ನಂಬಿಕೆ. ಕೊನೆಯದಾಗಿ, ಡಾರ್ವಿನ್ ಪ್ರತಿಪಾದಿಸಿದ ಬಲಶಾಲಿಗಳ ಬಾಳ್ವಿಕೆಯ ವಿಚಾರದಿಂದ ಪ್ರೇರಿತವಾದ ಸಮುದಾಯಗಳ ಯಜಮಾನಿಕೆಯ ಹಕ್ಕು. ಜನಮಾನಸದ ಪಲ್ಲಟಗಳನ್ನೇ ಸೃಷ್ಟಿಸುವ ಭಾವನಾತ್ಮಕ ಅತಿರೇಕಗಳ ಚಾರಿತ್ರಿಕ ಬೆಳವಣಿಗೆಗಳನ್ನು ಅರ್ಥೈಸುವುದು ಸರಳವಲ್ಲ.

ಜನಸಮೂಹ ರಾಷ್ಟ್ರೀಕರಣ

1880ರ ದಶಕದಲ್ಲಿ ಬೃಹತ್ ಉಗಿ ಹಡಗುಗಳ ಬಳಕೆಯಿಂದಾಗಿ ಯೂರೋಪಿನ ದೇಶಗಳಲ್ಲಿ ಆಹಾರ ಉತ್ಪನ್ನಗಳ ಸುಲಭ ಸಾಗಾಟ ಮತ್ತು ಲಭಿಸುವಿಕೆ ಯೂರೋಪಿನ ಭೂಮಾಲಿಕ ಶಕ್ತಿಗಳಿಗೆ ಮಾರ್ಮಘಾತ ನೀಡುತ್ತದೆ. ಗ್ರಾಮೀಣ ಪ್ರದೇಶಗಳಿಂದ ನಿರಾಶ್ರಿತರು ನಗರಗಳಿಗೆ ವಲಸೆ ಹೋಗುವಾಗ ಅಗ್ಗದ ಆಹಾರ ಲಭ್ಯತೆಯೂ ಪ್ರಮುಖ ಅವಶ್ಯಕತೆಯಾಗುತ್ತದೆ. ವಿಶ್ವ ಮಾರುಕಟ್ಟೆಯ ವಸ್ತುಗಳು ಯುರೋಪಿನಲ್ಲಿ ಲಭಿಸುವಾಗ ಕುಶಲಕರ್ಮಿಗಳಿಗೆ ಕೆಲಸದ ಕೊರತೆಯ ಬಿಸಿ ತಟ್ಟುತ್ತದೆ. ಈ ತೆರನಾದ ಆರ್ಥಿಕ ಬಿಕ್ಕಟ್ಟು, ವಲಸೆ, ಯುವಕರಲ್ಲಿ ಸ್ವನಿಯಂತ್ರಣರಹಿತತೆಯ ಅಂತರ್ಯವನ್ನು ರೂಪಿಸುತ್ತದೆ. ಇಂಥ ಸಂದರ್ಭದಲ್ಲಿ ಬೆಳೆಯುವ ರಾಜಕೀಯ ಭಾಷಣಗಳ ಪ್ರವೃತ್ತಿ ಸ್ವನಿಯಂತ್ರಣರಹಿತತೆಯನ್ನು ಇನ್ನೂ ಅತಿರೇಕಗಳಿಗೆ ದಾಟಿಸುತ್ತದೆ. ಅನುತ್ತೀರ್ಣ ಕಲಾ ವಿದ್ಯಾರ್ಥಿಯಾದ ಹಿಟ್ಲರ್, ಗಡೀಪಾರದ ಶಾಲಾ ಶಿಕ್ಷಕ ಮುಸಲೋನಿ, ನಿರುದ್ಯೋಗಿ ಕಾಲೇಜು ಪದವೀಧರ ಗೋಬಲ್ಸ್‍ರವರು ದಣಿದ ಆಳುವ ವರ್ಗದ ರಾಜಕೀಯವನ್ನು ವಿರೋಧಿಸಿ, ಎಡ ಪಂಥೀಯ ರಾಜಕೀಯಕ್ಕೆ ಪರ್ಯಾಯವಾಗಿ ಅತಿರೇಕದ ರಾಷ್ಟ್ರೀಯತೆಯನ್ನು ಬೆಳೆಸುತ್ತಾರೆ. ಅವಶ್ಯಕತೆಯಿದ್ದಾಗ ಹಿಂಸೆಯನ್ನು ಸಹಿಸಬೇಕು ಎನ್ನುವ ಮೌಲ್ಯವನ್ನು ಪ್ರತಿಪಾದಿಸುತ್ತಾರೆ. ಅಧಿಕಾರ ದೊರೆತ ಮೇಲೆ ಬಣ್ಣ ಬದಲಾಯಿಸುವ ಉಸರವಳ್ಳಿಗಳಾಗಿ ರಾಜಕೀಯದಲ್ಲಿ ನೆಲೆಯೂರುತ್ತಾರೆ. ಮೂಲ ಆಶಯಗಳನ್ನು ಕಳೆದುಕೊಂಡು ಲಾಭ ಮಾಡುವವರ ಅಂಗರಕ್ಷಕನಾಗಿ ಫ್ಯಾಸಿಸಂ ಪರಿವರ್ತನೆಯಾಗುತ್ತದೆ.

ವಿಶ್ವ ಮಾರುಕಟ್ಟೆಯ ಭಾಗವಾದ ಕೃಷಿ, ಅದನ್ನೇ ಅವಲಂಬಿಸಿರುವ ರಾಷ್ಟ್ರಗಳಲ್ಲಿ ಉತ್ಪನ್ನಗಳ ಬೆಲೆಗಳು ಕುಸಿಯವಂತೆ ಮಾಡುತ್ತದೆ. ಅಗ್ಗದ ಆಹಾರ ಲಭ್ಯತೆ ನಗರಗಳಿಗೆ ವಲಸೆ ಬಂದ ಜನರ ಪ್ರಮುಖ ಬೇಡಿಕೆಯಾಗುತ್ತದೆ. ಕೃಷಿ ಸಮೂದಾಯಗಳಲ್ಲಿನ ಬಿಕ್ಕಟ್ಟು ವಿಶ್ವ ಮಾರುಕಟ್ಟೆಯ ಆರ್ಥಿಕ ನೀತಿಗಳನ್ನು, ನಗರ ವಲಸೆಗಳನ್ನು ದ್ವೇಷಿಸಿ ಉಗ್ರರಾಷ್ಟ್ರೀಯತೆಯ ರಾಜಕಾರಣಕ್ಕೆ ದಾರಿಮಾಡುತ್ತದೆ. ನಗರದ ವ್ಯಾಪಾರಿ ವರ್ಗಗಳು ಈ ಬೆಳವಣಿಗೆಗಳಿಗೆ ಸಾಂಗತ್ಯ ನೀಡುತ್ತವೆ. ಕೃಷಿಯನ್ನೇ ಅವಲಂಬಿಸಿದ ಜರ್ಮನಿಯ ಒಂದು ಪ್ರಾಂತ್ಯ(SchlewigHelstein) 64% ಮತಗಳನ್ನು ನ್ಯಾಝಿ ಪಕ್ಷಕ್ಕೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿಗಳಿಗೆ, ಶಾಂತಿಪಾಲಕರಿಗೆ, ವಿದೇಶಿಯರಿಗೆ, ವಲಸೆಗಾರರಿಗೆ ಯಾವಾಗಲೂ ದಾಳಿ ಮಾಡಲು ಸಜ್ಜಾಗಿರುವ ವೈರಿಗಳಲ್ಲಿ ಭಯ ಹಾಗೂ ಬೆಂಬಲಿಗರಲ್ಲಿ ಅಭಿಮಾನ ಹುಟ್ಟಿಸುವ ಕಾರ್ಯಪಡೆ ಸಿದ್ಧವಾಗುತ್ತದೆ. ಉದಾರವಾದಿ ಪ್ರಭುತ್ವಗಳ ಮಾರ್ಯಾದೆ ಹರಣ, ಎಡರಂಗದ ಪರಿಧಿಯ ಹೊರಗೆ ಪ್ರತಿರೋಧದ ರಾಜಕೀಯವನ್ನು ಬೆಳೆಸುತ್ತದೆ. ಫ್ಯಾಸಿಸ್ಟ್ ಹಿಂಸೆಗೆ ಗೌರವ ದೊರಕುವಂತೆ ಮಾಡುತ್ತದೆ. ಹೀಗೆ ಫ್ಯಾಸಿಸ್ಟ್ ರಾಜಕೀಯ ಅಭದ್ರ ಜನಜಂಗುಳಿಯನ್ನು ರಾಷ್ಟ್ರೀಕರಣಗೊಳಿಸುತ್ತದೆ. ಸಂಪತ್ತಿನ ಸಮಾನ ಹಂಚುವಿಕೆಗಾಗಿ ಪ್ರತಿರೋಧದ ರಾಜಕಾರಣ ತೆರೆಮರೆಗೆ ಸರಿಯುತ್ತದೆ. ವಿಶ್ವ ಮಾರುಕಟ್ಟೆಯ, ನಗರೀಕರಣದ ವಲಸೆಯ ಹೊಡೆತಗಳಿಗೆ ತತ್ತರಿಸಿದ ಸ್ಥಳೀಯ ಜನರ ಗಾಯಗೊಂಡ ಪ್ರಜ್ಞೆ ಗುರುತಿಸುವಿಕೆಯ ರಾಜಕಾರಣವಾಗಿ ರಾಷ್ಟ್ರೀಕರಣದ ರೂಪದಲ್ಲಿ ಮುನ್ನೆಲೆಗೆ ಬರುತ್ತದೆ.

ಎಲ್ಲರನ್ನೂ ಹಿಡಿದಿಡುವ ಕಲೆ

ಸಮಾಜವಾದಿ ಪ್ರತಿರೋಧದ ರಾಜಕಾರಣ ಬಂಡವಾಳಶಾಹಿ ಶೋಷಣೆಯ ನೆಲೆಗಳನ್ನು ವಿಶ್ಲೇಷಿಸುತ್ತ್ತಾ ಜನರಾಜಕಾರಣದ ನೆಲವನ್ನು ಹದಗೊಳಿಸುತ್ತಿರುವಾಗ, ರಾಜಕೀಯ, ಸ್ಥಳೀಯ ಕೃಷಿ ಬಿಕ್ಕಟ್ಟುಗಳು, ಮತ ನಂಬಿಕೆಗಳ ಪಲ್ಲಟಗಳು ರಾಷ್ಟೀಯತೆಯ ಆಕ್ರೋಶವಾಗಿ ಹರಳುಗೊಳ್ಳುವುದನ್ನು ಗಮನಿಸುವುದಿಲ್ಲ. ಬದಲಾಗಿ ರಾಷ್ಟ್ರೀಯತೆಯ ಆಕ್ರೋಶಗಳನ್ನು ತನ್ನ ಸೈದ್ಧಾಂತಿಕ ಪರಧಿಯಿಂದ ಹೊರದಬ್ಬುತ್ತದೆ. ಎಡರಂಗದ ರಾಜಕೀಯ, ವರ್ಗ ಸಂಘರ್ಷಗಳ ಸಿದ್ಧಾಂತಗಳ ಪ್ರಭಾವದಿಂದ ಪಳಗಿದಾಗ, ಕಾರ್ಮಿಕ ಮನಸ್ಥಿತಿಯಲ್ಲಿ ಲೀನವಾಗಿರುವ ಅತಿರೇಕದ ರಾಷ್ಟ್ರೀಯತೆಯ ಭಾವನೆಗಳು ಎಡರಂಗದ ಪ್ರತಿರೋಧದಿಂದ ಹೊರಹಾಕಲ್ಪಡುತ್ತವೆ. ಎಡರಂಗದ ರಾಜಕೀಯದಲ್ಲಿ ರಾಷ್ಟ್ರೀಯತೆ ಸುಳ್ಳು ಪ್ರಜ್ಞೆಯೆಂದು ಸರಳೀಕರಿಸಲ್ಪಡುತ್ತದೆ. ಇದೇ ಸಮಯದಲ್ಲಿ ಸಂಪ್ರದಾಯ ಶರಣು ಮಹಾಜನರಿಗೆ ಮತ್ತು ಮಧ್ಯಮ ಮಾರ್ಗವನ್ನು ಪ್ರತಿಪಾದಿಸುವ ಉದಾರವಾದಿಗಳಿಗೂ ಜನಜಂಗುಳಿ ಮನಸ್ಥಿತಿಯ ಮೇಲೆ ನಿಯಂತ್ರಣ ತಪ್ಪುತ್ತದೆ. ಮಾರುಕಟ್ಟೆಯ ಬಿಕ್ಕಟ್ಟುಗಳು ಪ್ರಭುತ್ವದ ಮಧ್ಯಪ್ರವೇಶಿಸುವಿಕೆಯನ್ನು ನಿರೀಕ್ಷಿಸುತ್ತಿರುವಾಗ, ಫ್ಯಾಸಿಸ್ಟ್ ರಾಜಕಾರಣ ರಾಷ್ಟ್ರೀಯತೆಯ ಆಸ್ಮಿತೆಯ ರಾಜಕೀಯವನ್ನು ರದ್ದುಪಡಿಸದೆ ಅದನ್ನು ನಿರ್ವಹಿಸಲು ಕಲಿಯುತ್ತದೆ. ಜನಜಂಗುಳಿ ಶಕ್ತಿಯನ್ನು ಎಡರಂಗದ ವಿರುದ್ಧ ಬಳಸಲು ಕಲಿಯುತ್ತದೆ. ಸಮಾಜಗಳಲ್ಲಿ ಎದ್ದುನಿಂತರೆ ಸೈನಿಕ ಸಂಘಟನೆಗಳು ಹಾಗೂ ಜನಪ್ರಿಯ ನಾಯಕರ ವರ್ಚಸ್ಸಿನಿಂದ ಜನಜಂಗುಳಿಯನ್ನು ಪಳಗಿಸುವ ಕಲೆಯನ್ನು ಫ್ಯಾಸಿಸ್ಟ್ ಶಕ್ತಿಗಳು ಕರಗತ ಮಾಡಿಕೊಳ್ಳುತ್ತವೆ.

The Anatomy of Fascism

Robert O Paxton

New Delhi: Penguin Books, 2005

ಜನರ ಆಕ್ರೋಶವನ್ನು ಉಗ್ರ ರಾಷ್ಟ್ರೀಯತೆಯಾಗಿ ಬದಲಾಯಿಸಿ ಅಂತಾರಾಷ್ಟ್ರೀಯ ಮೌಲ್ಯಗಳನ್ನು ಅಪಹಾಸ್ಯಕ್ಕೀಡು ಮಾಡುತ್ತದೆ. ಎಲ್ಲರನ್ನೂ ಹಿಡಿದಿಡುವ, ಆಕರ್ಷಿಸುವ ಪಕ್ಷಗಳನ್ನು ಕಟ್ಟಲಾಗುತ್ತದೆ. ನಿರುದ್ಯೋಗಿಗಳ ಆಕ್ರೋಶ ಆತಂಕಗಳನ್ನು ಅವರು ಶೋಷಿತರೆಂಬ ಅರಿವನ್ನು ಬೆಳೆಸಿಕೊಳ್ಳುವ ಮೊದಲೇ ರಾಷ್ಟ್ರೀಕರಣಗೊಳಿಸಿ ಧ್ರುವೀಕರಣ ಗೊಳಿಸುವುದು ಫ್ಯಾಸಿಸ್ಟ್ ರಾಜಕೀಯದ ಮರ್ಮವಾಗಿದೆ. ಅಧಿಕಾರದಲ್ಲಿರುವ ಶಕ್ತಿಗಳು ಫ್ಯಾಸಿಸ್ಟ್ ಜೊತೆ ಕೈ ಜೋಡಿಸಿದಾಗ ಅದು ಇನ್ನೂ ಬೆಳೆಯುತ್ತದೆ. ಸಂಪ್ರದಾಯ ಶರಣರು ಫ್ಯಾಸಿಸಂ ವಿರುದ್ಧ ತಮ್ಮ ಶಕ್ತಿಯನ್ನು ಬಳಸಲು ನಿರಾಕರಿಸಿದಾಗ, ಹಾಗೂ ಕಾರ್ಮಿಕ ವರ್ಗವನ್ನು ಅಧಿಕಾರದಿಂದ ಹೊರಗಿಡಲು ಇದು ಅವಶ್ಯಕವೆಂದು ಮನಗಂಡಾಗ ಫ್ಯಾಸಿಸಂ ಬೆಳೆದು ಪ್ರಜಾತಂತ್ರಗಳು ನಿರಂಕುಶ ಪ್ರಭುತ್ವಗಳಾಗಿ ಬದಲಾಗುತ್ತವೆ. ಹೀಗೆ ಉದಾರವಾದಿ ಹಾಗೂ ಸಂಪ್ರದಾಯ ಶರಣರ ಅರಿವಿನ ಪೊಳ್ಳುತನದಿಂದಾಗಿ ರಾಷ್ಟ್ರೀಯ ಅವಮಾನವೆನ್ನುವ ರಾಜಕಾರಣ ಮುನ್ನೆಲೆಗೆ ಬರುತ್ತದೆ. ಆಗ ಕಾರ್ಮಿಕರು ಎಡರಂಗದತ್ತ ಚಲಿಸದಂತೆ ಮಾಡುವ ಮಂತ್ರ ಫ್ಯಾಸಿಸ್ಟ್ ಶಕ್ತಿಗಳಿಗೆ ಲಭಿಸುತ್ತದೆ. ಕ್ಯಾಥೋಲಿಕ್ ಚರ್ಚಿನ ಧರ್ಮಗುರು ಪೋಪ್ ಹನ್ನೊಂದನೆಯ ಪಿಯುಷ್ ಎನ್ನುವವರು ಫ್ಯಾಸಿಸ್ಟ್‍ಗಳಿಗಿಂತ ಕಮ್ಯುನಿಸ್ಟರೇ ಹೆಚ್ಚು ಅಪಾಯಕಾರಿಗಳೆಂದು ಪ್ರತಿಪಾದಿಸಿರುವುದನ್ನು ಇಲ್ಲಿ ಪೂರಕವಾಗಿ ಗುರುತಿಸಬೇಕಾಗುತ್ತದೆ.

ಒಟ್ಟಂದದಲ್ಲಿ ಜನ ಆಕ್ರೋಶಗಳನ್ನು ರಾಷ್ಟ್ರೀಯತೆಯಾಗಿಸಿ, ಜನ ಮನಸ್ಥಿತಿಯ ಪಲ್ಲಟ, ಸಂಪ್ರದಾಯ ಶರಣರ, ಉದಾರವಾದಿಗಳ, ಸಮಾಜವಾದಿ ವಿವೇಕ ಪ್ರಿಯರ “ಚಲ್‍ತಾ ಹೈ” ಧೋರಣೆಗಳು ಫ್ಯಾಸಿಸಂ ಬೆಳವಣಿಗೆಯ ವೇಗವರ್ಧನೆಯನ್ನು ಹೆಚ್ಚಿಸುತ್ತವೆ. ವ್ಯಕ್ತಿಯನ್ನು ಸಮುದಾಯಕ್ಕೆ ಶರಣಾಗಿಸಿ, ಸಮುದಾಯಗಳನ್ನು ಪ್ರಭುತ್ವಗಳಿಗೆ ಸಮೀಕರಸಿ, ವ್ಯಕ್ತಿಯ ಒಳಿತು ಸಮುದಾಯಗಳ ಒಳಿತಿನಲ್ಲಿದೆ ಎನ್ನುವ ಭ್ರಮೆ ಸಾಮಾನ್ಯ ಜ್ಞಾನವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಒಗ್ಗಟ್ಟನ್ನು ಮುರಿದು ಅವರ ಮನಸ್ಥಿತಿಯಿಂದ ಸಮಾನ ಹಂಚುವಿಕೆ ತುಡಿತಗಳನ್ನು ಮರೆಯಾಗಿಸಿ, ಬಿಂಬಿತ ವೈರಿಗಳ ವಿರುದ್ಧ ಗುರುತಿಸುವಿಕೆಗಾಗಿ ಕಾದಾಡುವ ಮನಸ್ಥಿತಿಯನ್ನು ರಾಷ್ಟ್ರೀಯತೆಯೆಂಬ ಲೇಪನದೊಂದಿಗೆ ಬೆಳೆಸಲಾಗುತ್ತದೆ.

ಮಹಿಳೆಯರಿಗೆ ಹೆರಿಗೆ ಪುರುಷರಿಗೆ ಯುದ್ಧ

ಫ್ಯಾಸಿಸಂ ಪ್ರತಿಪಾದಿಸಿದ ಹೊಸ ಪೌರತ್ವದ ಕಲ್ಪನೆಯಲ್ಲಿ ವ್ಯಕ್ತಿ ಸಮೂದಾಯಿಕ ಒಳಿತಿನಲ್ಲಿ ಭಾಗವಹಿಸಬೇಕು ಎನ್ನುವ ನಿಲುವು, ಕಾರ್ಮಿಕ ಎಡರಂಗದ ನಿಲುವುಗಳಾದ ಮಾನವ ಹಕ್ಕುಗಳು, ಕಾನೂನಿನ ಆಡಳಿತ ಮತ್ತು ಅಂತರಾಷ್ಟ್ರೀಯ ಶಾಂತಿಗೆ ವಿರುದ್ಧವಾಗಿರುತ್ತವೆ. ಯುದ್ಧದಿಂದ ಕಾಂತ್ರಿಕಾರಿ ತೇಜಸ್ಸು ಮೂಡುತ್ತದೆ. ಯುದ್ಧದಿಂದ ಸಮಾಜ ಗಟ್ಟಿಯಾಗುತ್ತದೆ, ಸಹಜ ಸ್ಥತಿಯಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಯುದ್ಧ ಸಮಯದಲ್ಲಿ ಬಗೆಹರಿಸಬಹುದು ಎನ್ನುವ ಧೋರಣೆ ಬೆಳೆಯುತ್ತದೆ. ಮಹಿಳೆಯರಿಗೆ ಹೆರಿಗೆ ಇರುವಂತೆ ಪುರಷರಿಗೆ ಯುದ್ಧವೆನ್ನುವ ಮುಸಲೋನಿಯವರ ಹೇಳಿಕೆ ಹಂತಹಂತವಾಗಿ ಸಮೂದಾಯಗಳನ್ನು ಸಮೂಹ ಹತ್ಯೆಗಳಿಗೆ ಸಜ್ಜುಗೊಳಿಸುತ್ತದೆ. ಆಡಳಿತವನ್ನು ನಡೆಸಬೇಕಾದ ಪ್ರಭುತ್ವದ ಮೇಲೆ ಪಕ್ಷದ ನಿಯಂತ್ರಣ ಬೆಳೆದು ಪಕ್ಷದ ಮೇಲೆ ಪ್ರಭುತ್ವಕ್ಕೆ ಇರಬೇಕಾದ ನಿಯಂತ್ರಣ ಕಳೆದುಕೊಳ್ಳುತ್ತದೆ. ಆಗ ವ್ಯಕ್ತಿ ಪಕ್ಷವಾಗಿ, ಪಕ್ಷ ಪ್ರಭುತ್ವವಾಗಿ, ಪ್ರಭುತ್ವ ಸಾವಿನ ಹೆರಿಗೆಯ ಸೂಲಗಿತ್ತಿಯಾಗಬೇಕಾಗುತ್ತದೆ.

ಫ್ಯಾಸಿಸಂ ಎಂದರೊಂದು ಸಂಕೀರ್ಣ…

ಫ್ಯಾಸಿಸಂ ಎನ್ನುವುದೊಂದು ಮಾದರಿಯ ರಾಜಕೀಯ ವರ್ತನೆ. ಸಂಪ್ರದಾಯಬದ್ಧ ಮಹಾಜನರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡು, ಪ್ರಜಾತಾಂತ್ರಿಕ ಹಕ್ಕುಗಳಿಗೆ ತಿಲಾಂಜಲಿ ನೀಡುವುದು. ಮುಕ್ತಿಗಾಗಿ ಹಿಂಸೆಯನ್ನು ನೀತಿ-ನ್ಯಾಯಗಳ ಚೌಕಟ್ಟಿಲ್ಲದೆ ಬಳಸಿ, ಆಂತರಿಕ ಶುದ್ಧೀಕರಣ ಮತ್ತು ಬಾಹ್ಯ ವಿಸ್ತರಣೆಯನ್ನು ಸಾಧಿಸುವುದೇ ಫ್ಯಾಸಿಸಂ. ಕಲ್ಪಿತ ಸಮುದಾಯಗಳ ನಂಬಿಕೆಗಳ ಶ್ರೇಷ್ಟತೆ ಮತ್ತು ಶರಣತೆಯೇ ಇತರೆಲ್ಲ ಹಕ್ಕುಗಳಿಗಿಂತ ಮಿಗಿಲಾದುದೆಂದು ಪ್ರತಿಪಾದಿಸುವುದು. ಪ್ರಜ್ಞಾಪೂರ್ವಕವಾಗಿ ಹೆಣೆದ ಬಲಿಪಶು ಪ್ರಜ್ಞೆ ಹಾಗೂ ಸಮುದಾಯಗಳ ಬಿಂಬಿತ ವೈರಿಗಳ ಮೇಲೆ ನೇರದಾಳಿ, ವ್ಯಕ್ತಿಕೇಂದ್ರಿತ ಹಕ್ಕುಗಳ ಭಯ, ವರ್ಗ ಸಂಘರ್ಫದ ಕುರಿತ ಭಯ, ವಿದೇಶಿ ಪ್ರಭಾವ, ಸಮಾಜ ಅವನತಿಗೆ ಸರಿಯುತ್ತಿದೆ ಎನ್ನುವ ಪ್ರತಿಪಾದಿತ ನಂಬಿಕೆ, ಶುದ್ಧ ಸಮುದಾಯದ ಐಕ್ಯತೆಯ ಮರು ಉತ್ಪಾದನೆ. ಅಧಿಕಾರದ ಮೂಲಕ ಸಮುದಾಯಗಳನ್ನು ಬಿಡುಗಡೆಗೊಳಿಸುತ್ತಾರೆಂಬ ನಂಬಿಕೆಯ ಮೇಲೆ ನಾಯಕರ ಅರಾಧನೆ, ಜನಸಾಮಾನ್ಯರ ವಿವೇಕಕ್ಕಿಂತ ಮಿಗಿಲಾಗಿ ನಾಯಕರ ಶ್ರೇಷ್ಠತೆಯಲ್ಲಿ ನಂಬಿಕೆ. ಗುಂಪಿನ ಒಳಿತಿಗಾಗಿ ನಡೆಯುವ ಹಿಂಸೆಯ ಸೊಬಗಿನ ವೈಭವೀಕರಣ. ಬಿಂಬಿತ ವೈರಿಗಳ ಮೇಲೆ ಯಜಮಾನಿಕೆ. ಆಯ್ದ ಜನರ ಅಧಿಕಾರವೆಂದು ಭಾವಿಸುವ ಡಾರ್ವಿನ್‍ನ ಸಂಘರ್ಷದ ತರ್ಕಗಳ ಆಧಾರದಲ್ಲಿ ಫ್ಯಾಸಿಸ್ಟ್ ವರ್ತನೆಯ ಮೂಲಗಳು ನಿಂತಿವೆ. ವೈರಿಗಳನ್ನು ಕಾನೂನಿನ ಪರಿಧಿಯನ್ನು ದಾಟಿ ಕಾಡಬಹುದೆಂಬ ಮನಸ್ಥಿತಿ ಹಾಗೂ ಆ ತೆರನಾಗಿ ಕಾಡುವ ಶಕ್ತಿಗಳ ಇರುವಿಕೆ ಜತೆಗೆ ಇವೆಲ್ಲವನ್ನು ಸಹಿಸಿಕೊಳ್ಳುವ ಮನಸ್ಥಿತಿ ಮತ್ತು ವರ್ತನೆಗಳ ಗುಚ್ಛವೇ ಫ್ಯಾಸಿಸಂ.

*ವಿದ್ಯಾಧರ ರೈ ಎಮ್.ಆರ್. ಅವರು ದಕ್ಷಿಣ ಕನ್ನಡದ ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು. ಐವನ್ ಏಫ್.ಲೋಬೊ. ಅವರು ದಕ್ಷಿಣ ಕನ್ನಡದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು.

Leave a Reply

Your email address will not be published.