ಅವಸರ ನನ್ನ ಆತ್ಮಕ್ಕೆ…

ನಾನು-
ನನ್ನ ಗತಿಸಿದ ವರ್ಷಗಳ ಎಣಿಸಿ ನೋಡಿದೆ
ಕಳೆದದ್ದಕ್ಕಿಂತ ಜೀವಿಸಲು ಉಳಿದಿರುವವು
ಬಹು ಕಡಿಮೆ ಎಂಬುದನ್ನರಿತೆ.

ನಾನೊಬ್ಬ-
ಮಿಠಾಯಿ ಪಾಕೀಟು ಗೆದ್ದ ಮಗುವಂತೆ
ಮೊದ ಮೊದಲು ಹರ್ಷದಿಂದ ತಿಂದು
ಕೊನೆಗೆ ಮಿಕ್ಕುಳಿದಿರುವವು
ಬಹು ಕಡಿಮೆ ಎಂದರಿತ ಮೇಲೆ
ತೀವ್ರವಾಗಿ ಅವುಗಳ ರುಚಿ ಅನುಭವಿಸಿದೆ.

ನನಗೆ ಸಮಯವಿಲ್ಲ
ಕೊನೆಗಾಣದ ಕಾನೂನು, ಪಧ್ಧತಿ, ವಿಧಾನ,
ಒಳಗೊಳಗಿನ ಕರಾರು, ವ್ಯಾಖ್ಯೆಗಳ
ನಿರರ್ಥಕ ಚರ್ಚೆಗೆ
ಸಮಯವಿಲ್ಲ.

ನನಗಿಲ್ಲ ಸಮಯ
ಮತ್ತು ಸಹನೆ
ವಯಸ್ಸು ದಾಟಿದರೂ
ಮನಸು ಪಕ್ವವಾಗಿರದ
ಅರ್ಥಹೀನರ ಜೊತೆ
ಜೀವನ ವ್ಯರ್ಥವಾಗಿಸುವೆ
ಎಂಬ ತಾಳ್ಮೆ.

ನನಗುಳಿದಿರುವ ಸಮಯ ಓಡುತ್ತಿದೆ
ನನಗೆ ಬೇಕು ಸತ್ವ, ಮತ್ತು ಸಾರ
ನನ್ನಾತ್ಮಕ್ಕೆ ಅವಸರ
ನನ್ನ ಪಾಕೀಟಿನಲ್ಲಿಯ ಮಿಠಾಯಿ
ಅದಾಗಲೇ ಮುಗಿಯ ಬಂದಿದೆ.

ನನಗೆ ಬೇಕು
ನಿಜ ಮನುಷ್ಯರ ಸಾಂಗತ್ಯ
ತಮ್ಮ ತಪ್ಪುಗಳ ಒಪ್ಪಿಕೊಂಡು ನಗುವವರು
ತಮ್ಮ ಗೆಲುವಿನಿಂದ ಉಬ್ಬದವರು
ತಮ್ಮ ಶಿಲುಬೆಯ ಭಾರ ತಾವೇ ಹೊರುವವರು
ಈ ರೀತಿ
ಮಾನವತ್ವದ ಹಿರಿಮೆ ಎತ್ತಿ ಹಿಡಿದವರು
ಸತ್ಯ ಸಾಚಾತನವನ್ನುಳಿಸಿದವರು.

ಅತ್ಯಗತ್ಯವಾದವಷ್ಟೇ
ಜೀವನದಲ್ಲಿ ಉಪಯುಕ್ತವಾಗುವವು
ನನಗೆ ಜೊತೆ ಬೇಕು-
ಬದುಕಲ್ಲಿ ಕಠಿಣ ಪೆಟ್ಟು ತಿಂದೂ
ಮೃದು ಹೃದಯಿಗಳಾಗಿರಲು ಕಲಿಸಿದವರ
ಅಂತರಾತ್ಮವನ್ನು ಆದ್ರ್ರವಾಗಿ ತಟ್ಟಿದವರ.

ಅಹುದು-
ನನಗೆ ಅವಸರ
ಅವಸರವೆನಗೆ ಪಕ್ವತೆ ನೀಡುವ
ತೀವ್ರ ಉತ್ಕಟತೆಯ ಜೊತೆ ಜೀವಿಸಲು
ಉಳಿದ ಮಿಠಾಯಿಯನು
ವ್ಯರ್ಥವಾಗಿಸುವ ಮನಸಿಲ್ಲ ನನಗೆ.

ಗೊತ್ತು-
ಅವು ಮೊದಲುಂಡವುಗಳಿಗಿಂತ
ಬಹು ಅದ್ಭುತ ಅನುಭವ ನೀಡುವವು
ತೃಪ್ತ ಮುಕ್ತಾಯ ನನ್ನ ಧ್ಯೇಯ
ಶಾಂತಿಯಿಂದ ದೂರಾಗುವೆ
ನನ್ನ ಪ್ರೀತಿಸಿದವರಿಂದ
ಮತ್ತು ಆತ್ಮಸಾಕ್ಷಿಯಿಂದ.

ನಮಗಿರುವವು-
ಎರಡು ಜೀವಮಾನಗಳು.
ಇರುವುದೊಂದೇ ಎಂಬುದನು ಅರಿತಾಗ
ಜನುಮಿಸುವದು
ಎರಡನೆಯ ಬದುಕು.

ಪೋರ್ತುಗೀಸ್ ಮೂಲ: ಮಾರಿಯೋ ಪಿಂಟೊ ಅಂದ್ರಾದೆ ಇಂಗ್ಲಿಷಿನಿಂದ ಕನ್ನಡಕ್ಕೆ: ಅರುಂಧತಿ ಸವದತ್ತಿ

*ಮಾರಿಯೊ ಪಿಂಟೊ ಡಿ ಅಂದ್ರಾದೆ (1893-1945) ಒಬ್ಬ ಪೊರ್ತುಗೀಸ್ ಕವಿ, ಕಾದಂಬರಿಕಾರ, ನಿಬಂಧಕಾರ ಮತ್ತು ಸಂಗೀತಜ್ಞ; ಅಂಗೋಲಾದ ಆಧುನೀಕರಣ ಮತ್ತು ನವೋದಯ ಕ್ರಾಂತಿಯ ಹಿಂದಿನ ಪರಮ ಶಕ್ತಿ.

Leave a Reply

Your email address will not be published.