ಅಶಾಶ್ವತದ ಕಡೆಗೆ ಸಾಗಲಿ ಕ್ರಾಂತಿ!

ಸೋಂಕುರೋಗದ ಪೂರ್ವಸ್ಥಿತಿಗೆ, ಸ್ನೇಹ, ಪ್ರೀತಿಯ ಪರಿಸರಕ್ಕೆ, ಎಲ್ಲ ಬಗೆಯ ಸುಂದರಪರಿಸರಕ್ಕೆ ಹಿಮ್ಮರಳುವ ಸುಸಂದರ್ಭ ಒದಗಿಬರುವಂತಾಗಲಿ.

ಕೊರೊನಾ ಮಹಾಮಾರಿಗೆ ವಿಶ್ವವೇ ತಲ್ಲಣಿಸುತ್ತಿದ್ದು ಜನಜೀವನದ ಸಮಗ್ರ ಪರಿವರ್ತನೆಗೆ ಕಾರಣವಾಗಿದೆ. ಮುಟ್ಟುವ, ತಟ್ಟುವ, ಕೂಡುವ, ಕಲೆಯುವ, ಸ್ಪರ್ಶನೀತಿಗಳೆಲ್ಲ ಅಂತರದ ಪರಿಧಿಯೊಳಗೆ ನಲುಗಿವೆ. ಈ ಅಂತರವು ಆರೋಗ್ಯ, ಸ್ವಚ್ಛತೆ, ಶಿಸ್ತಿನ ಪಾಠವನ್ನೆ ಕಲಿಸಿದ್ದರೂ, ಪ್ರತಿ ಸಂಬಂಧವನ್ನು ಅಪನಂಬಿಕೆಯ, ಎಚ್ಚರಿಕೆಯ ನೆಲೆಗಳಲ್ಲಿ ಪರಿಭಾವಿಸಿ ಆತ್ಮೀಯತೆಗೆ ಬರಗಾಲ ಬಂದಂತಿದೆ. ಈ ಸಂದರ್ಭವು ಎರಡು ಪ್ರಶ್ನೆಗಳೊಂದಿಗೆ ತೂಗುತ್ತದೆ. ಮುಂಬರುವ ದಿನಗಳೂ ಅಂತರದ ಪರಿಧಿಯೊಳಗೆ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆಯೇ? ಎಲ್ಲರೊಳಗೊಂದಾಗಿ ಬದುಕುವ ಸುಂದರ ದಿನಗಳು ಬರುತ್ತವೆಯೇ? ಎಂಬ ಆತಂಕದ ಪ್ರಶ್ನೆಗೆ ಉತ್ತರ ಅಸ್ಪಷ್ಟವಾಗಿಯೇ ಇದೆ. ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳು ಆನ್ ಲೈನ್ ಕ್ರಾಂತಿಗೆ ಒತ್ತುಕೊಟ್ಟಿವೆ.

ಶೈಕ್ಷಣಿಕ ವರ್ಷದ ಕಾಲುಭಾಗದ ಅವಧಿಯನ್ನು ಸೋಂಕುರೋಗ ಕಬಳಿಸಿದ್ದರ ಫಲವಾಗಿ ಶಾಲಾ-ಕಾಲೇಜುಗಳು ಆನ್ ಲೈನ್ ತರಗತಿಗೆ ಒತ್ತುಕೊಡುವ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ಜೀವಂತಿಕೆಯಿದೆ ಎಂಬುದನ್ನು ಸಾಬೀತುಪಡಿಸಿವೆ. ಜೊತೆಗೆ ಪೋಷಕರಿಂದ ಶುಲ್ಕ ವಸೂಲಾತಿಗೆ ಆನ್‌ಲೈನ್ ಶಿಕ್ಷಣ ಪರ್ಯಾಯ ಮಾರ್ಗ ಒದಗಿಸಿದೆ. ಇದರ ಬೆನ್ನಲ್ಲೇ ಈ ವಿಧಾನ ಮಕ್ಕಳನ್ನು ಮಾನಸಿಕ ಖಿನ್ನತೆಗೆ ದೂಡಬಹುದೆಂಬ ಮನಶಾಸ್ತçಜ್ಞರ ಎಚ್ಚರಿಕೆಗೆ ಓಗೊಟ್ಟ ಸರ್ಕಾರ ಪ್ರಾಥಮಿಕ ಶಾಲೆಗಳಿಗೆ ವಿನಾಯಿತಿ ಕೊಟ್ಟಿದೆ.

ಪದವಿಪೂರ್ವ, ಸ್ನಾತಕ, ಸ್ನಾತಕೋತ್ತರ ಶಿಕ್ಷಣವು ಆನ್‌ಲೈನಾಧಾರಿತವಾಗಿದೆ. ಆಫ್‌ಲೈನ್ ತರಗತಿಗಳೇ ಅರ್ಥವಾಗದಿರುವಾಗ ಆನ್‌ಲೈನ್ ತರಗತಿಗಳ ಬಗೆಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ತೃಪ್ತಿದಾಯಕವಾಗಿಲ್ಲದ ವರದಿಯೊಂದಿಗೆ ಮೊಬೈಲ್ ಬಳಕೆಗೆ ವಿದ್ಯಾರ್ಥಿಗಳು ಜೋತುಬಿದ್ದಿದ್ದಾರೆ. ಸೋಂಕುರೋಗ ತಹಬಂಧಿಗೆ ಬಾರದ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷಾರಂಭವಾಗದೆ ಆನ್‌ಲೈನ್ ಬೋಧನಾಕ್ರಾಂತಿ ಶಾಶ್ವತವಾಗುವುದಾದರೆ ಕಲಿಕೆ ಮತ್ತು ಬೋಧನೆ ಪರಿಣಾಮಕಾರಿಯಾಗುವುದೇ? ಕಲಿಕಾಸಕ್ತಿ ಕಡಿಮೆಯಾಗುವ ಆತಂಕವೂ, ಅಡ್ಡಪರಿಣಾಮಗಳ ನಿಯಂತ್ರಣವೂ ಒಂದು ಸವಾಲಾಗುವ ಕಾಲ ಸನ್ನಿಹಿತವಾಗಿದೆ. ಕಟ್ಟಡ, ಬೋಧನೋಪಕರಣಗಳು, ಗ್ರಂಥಾಲಯ, ಸರ್ಕಾರ ಶಿಕ್ಷಣಕ್ಕೆ ಹೂಡಿರುವ ಬಂಡವಾಳವು ಆನ್‌ಲೈನ್ ಕ್ರಾಂತಿಯ ಓಘದಲ್ಲಿ ಅನುಪಯುಕ್ತತೆಯ ಕಡೆಗೆ ಸಾಗುವುದೇ ಎಂಬ ಜಿಜ್ಞಾಸೆಯನ್ನು ಹುಟ್ಟುಹಾಕುತ್ತಿದೆ.

ಜ್ಞಾನಕೋಶಕ್ಕೆ ತೆರೆದುಕೊಳ್ಳದ ಮಕ್ಕಳ ಮೊಬೈಲ್ ಹ್ಯಾಂಗಿಂಗ್ ಬಾಧೆಯಿಂದ ಶಿಕ್ಷಣ ಕ್ಷೇತ್ರದ ಮಾತಿರಲಿ, ವೈದ್ಯಲೋಕವು ಆನ್‌ಲೈನ್ ಕ್ರಾಂತಿಗೆ ಒಡ್ಡಿಕೊಂಡಿರುವುದು ಸ್ವಾನುಭವಕ್ಕೆ ಬಂದಿದೆ. ಸೋಂಕುರೋಗದ ಪೂರ್ವದಲ್ಲಿ ಚರ್ಮವೈದ್ಯರಿಂದ ತಪಾಸಣೆಗೊಳಪಟ್ಟಿದ್ದೆ. ಮೊನ್ನೆ ಕ್ಲಿನಿಕ್‌ನಿಂದ ಆನ್‌ಲೈನ್ ಚಿಕಿತ್ಸೆಗಾಗಿ ಕರೆಬಂತು. ಅರೆ ಹೇಗೆ ಆನ್ಲೈನ್ ಚಿಕಿತ್ಸೆ? ಮುಖದ ಎರಡು ಭಾಗದ ಫೋಟೊ ತೆಗೆದು ವಾಟ್ಸಾಪ್ ಮಾಡಿದರೆ, ಆನ್ಲೈನ್ ಪೇಮೇಂಟ್ ಮಾಡಿದರೆ ಮುಂದಿನ ಚಿಕಿತ್ಸೆ ಏನೆಂದು ಸಲಹೆ ಮಾಡುತ್ತಾರೆ! ರೋಗಿಗಳ ಕಾಳಜಿಯೋ? ಹಣಕ್ಕಾಗಿ ಆನ್‌ಲೈನ್ ಚಿಕಿತ್ಸಾಪೀಡನೆಯೊ? ಪರಿಣಾಮಕಾರಿ ಚಿಕಿತ್ಸೆ ಸಾಧ್ಯವೇ? ಎಂಬ ಪ್ರಶ್ನೆಗಳು ಕಾಡುತ್ತವೆ.

ಸಾಹಿತ್ಯ, ಔದ್ಯೋಗಿಕ ಕ್ಷೇತ್ರಗಳೂ ಆನ್‌ಲೈನ್ ಕ್ರಾಂತಿಗೆ ಸಂಪೂರ್ಣವಾಗಿ ತೆರೆದುಕೊಂಡಿವೆ. ಸೆಮಿನಾರ್ ಬದಲಿಗೆ ವೆಬಿನಾರ್ ಗಳು, ಉಪನ್ಯಾಸಗಳು, ಸಂವಾದಗಳು, ಪಾಲ್ಗೊಳ್ಳುವಿಕೆ, ಇ-ಸರ್ಟಿಫಿಕೆಟ್‌ಗಳು, ಔದ್ಯೋಗಿಕ ಉನ್ನತಿಗೆ, ಬೌದ್ಧಿಕ ಬೆಳವಣಿಗೆಗೆ ಪ್ರಯೋಜನಕಾರಿಯಾಗುವ ಕಾರಣದಿಂದ ಈ ಕ್ರಾಂತಿಯನ್ನು ಒಗ್ಗಿಸಿಕೊಳ್ಳಬೇಕಾಗಿದೆ. ಒಂದು ವಿಧದಲ್ಲಿ ಸಮಯ, ಶ್ರಮ, ಅಲೆದಾಟವನ್ನು ತಪ್ಪಿಸುವ ಸುಲಭವಿಧಾನಕ್ಕೆ ಝೂಮ್ ಆಪ್ ಮುಖೇನ ಪದೋನ್ನತಿಗಾಗಿ ಆರಂಭವಾಗಿರುವ ಫ್ಯಾಕಲ್ಟಿ ಡೆವೆಲಪ್ಮೆಂಟ್ ಕಾರ್ಯಕ್ರಮಗಳು ಔದ್ಯೋಗಿಕ ವಲಯಕ್ಕೆ ಒತ್ತಾಸೆಯಾಗಿರುವುದರಿಂದ ಶಾಶ್ವತವಾಗಿ ವೆಬಿನಾರ್ ಅಲೆ ಉಳಿಯುವುದಿದೆ.

ಇತ್ತೀಚೆಗೆ ಆನ್ಲೈನ್ ಕವಿಗೋಷ್ಠಿಯು ಆಫ್ ಲೈನ್ ಮಾದರಿಯಲ್ಲಿಯೇ ನಡೆದು ಯಶಸ್ವಿಯಾದ ಉದಾಹರಣೆಗೆ ನಾನೇ ಸಾಕ್ಷಿಯಾಗಿದ್ದೇನೆ. ಕತೆ ಕೇಳು ಕಂದಾ ಇತ್ಯಾದಿ ಆನ್ ಲೈನ್ ಕಥಾಸಾಹಿತ್ಯಕ್ಕೆ ತೆರೆದುಕೊಳ್ಳುತ್ತಿವೆ. ಇದು ಸುಲಭವಿಧಾನವಾಗಿ ಸಾಹಿತ್ಯವಲಯವನ್ನು ಪುನಶ್ಚೇತನಗೊಳಿಸುತ್ತಿದೆ. ಸಾಹಿತ್ಯಿಕ ವಲಯದ ಈ ಕ್ರಾಂತಿ ಶಾಶ್ವತವಾಗುಳಿದರೆ ಬಾಧಕವಿಲ್ಲ.

ಸಾಮಾಜಿಕ, ಸಾಂಸ್ಕೃತಿಕ ರಂಗವೂ ಆನ್ ಲೈನ್ ಕ್ರಾಂತಿಗೆ ತೆರೆದುಕೊಂಡಿದೆ. ಮಗನ ಮದುವೆಯಲ್ಲಿ ಪಾಲ್ಗೊಳ್ಳದ ಪೋಷಕರು ವಿಡಿಯೋಕಾಲ್ ಮಾಡುವುದರ ಮುಖೇನ ಹರಸಿದ್ದ ಉದಾಹರಣೆಗಳಿವೆ. ಆನ್ ಲೈನ್ ಮೂಲಕ ತಲಾಖ್ ನೀಡಿದ ಸುದ್ದಿಗಳಿವೆ. ಸೋಂಕುರೋಗ ಹೊಸ ಪರಿವರ್ತನೆಗೆ ಹಾದಿ ಮಾಡಿಕೊಟ್ಟು ದುಂದುವೆಚ್ಚಕ್ಕೆ ಕಡಿವಾಣ ಹಾಕಿರುವುದಾದರೂ, ಕನಸುಗಳನ್ನು, ಸಂವೇದನೆಗಳನ್ನು ಕಸಿದುಕೊಂಡಿದೆ. ಹಬ್ಬ ಹರಿದಿನ, ಜಾತ್ರೆಗಳು ನಿಂತಿವೆ. ದೈವ ಸಂಬಂಧಿ ಕಾರ್ಯಗಳಿಗೆ ಆನ್ ಲೈನ್ ಕ್ರಾಂತಿಯಾಗದಿರುವುದು ಆಸ್ತಿಕ ಸಮೂಹಕ್ಕೆ ನಿರಾಶೆಯುಂಟುಮಾಡಿದೆ.

ಸಮಾಜಮುಖಿ ಪತ್ರಿಕೆಯ ಸಂಯುಕ್ತ ಸಂಚಿಕೆ ಪಿಡಿಎಫ್ ನಲ್ಲಿ ಓದುಗವಲಯವನ್ನು ಮುಟ್ಟಿರುವುದಾದರೂ ಪ್ರತಿ ಪುಟವನ್ನು ಝೂಮ್ ಮಾಡಿ, ಕಣ್ಣುಕಿನಿಸಿ ಓದಿದ ಪರಿ ಮುದ್ರಿತ ಸಂಚಿಕೆಯನ್ನು ಕೈತುಂಬಾ ಹಿಡಿದು, ಪುಟತಿರುಗಿಸಿ ಮತ್ತೆ ಮತ್ತೆ ಓದುವ ಸುಖ ಕೊಟ್ಟೀತೇ?

ಪ್ರವಾಸೋದ್ಯಮ ಕ್ಷೇತ್ರವು ಆನ್ ಲೈನ್ ಕ್ರಾಂತಿಗೆ ಇಳಿದರೆ ರಸಾನುಭೂತಿ ಸಾಧ್ಯವೇ ಎಂಬ ಆಲೋಚನೆಯು ಹಾದುಹೋಗುತ್ತದೆ. ಆನ್ ಲೈನ್ ಕ್ರಾಂತಿ ಶಾಶ್ವತವಾಗುಳಿದರೆ ಪ್ರತಿಯೊಬ್ಬರೂ ಮೊಬೈಲ್ ಬಳಸುವ ಸಂದರ್ಭಗಳಿಂದ ಮೊಬೈಲ್‌ಗಳಿಗೆ ಬೇಡಿಕೆಯಾಗಬಹುದು. ಇದು ಮಾನಸಿಕ ಅನಾರೋಗ್ಯಕ್ಕೆ ಹಾದಿಯಾಗಬಹುದು. ಸೋಂಕುರೋಗದ ಪೂರ್ವಸ್ಥಿತಿಗೆ, ಸ್ನೇಹ, ಪ್ರೀತಿಯ ಪರಿಸರಕ್ಕೆ, ಎಲ್ಲ ಬಗೆಯ ಸುಂದರಪರಿಸರಕ್ಕೆ ಹಿಮ್ಮರಳುವ ಸುಸಂದರ್ಭ ಒದಗಿಬರುವಂತಾಗಲಿ. ಆನ್ ಲೈನ್ ಕ್ರಾಂತಿ ಅಶಾಶ್ವತತೆಯ ಕಡೆಗೆ ಸಾಗಲಿ.

*ಲೇಖಕರು ಮೈಸೂರಿನಲ್ಲಿ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.