ಅಶೋಕ ಚಕ್ರ ಸಾರುವ ಇಪ್ಪತ್ನಾಲ್ಕು ಗುಣಗಳು ಎಲ್ಲಿ?

ಕೇವಲ ಇಪ್ಪತ್ತು ವರ್ಷಗಳಲ್ಲಿ ಬೇರೂರಿದ ಜಾಗತೀಕರಣದ ಫಲವನ್ನು ಉಂಡು ತೇಗುತ್ತಿರುವ ಭಾರತೀಯ ಸಮಾಜ ಬದಲಾಗುವುದಕ್ಕೆ ಸಾವಿರಾರು ವರ್ಷಗಳು ಹಿಡಿಸುವುದಿಲ್ಲ. ಏಕೆಂದರೆ, ಜಾಗತೀಕರಣವನ್ನು ಹುಟ್ಟುಹಾಕಿದ ಪಾಶ್ಚಾತ್ಯದೇಶಗಳಲ್ಲೇ ಈಗ ಗಮನಾರ್ಹ ಬದಲಾವಣೆಗಳಾಗುತ್ತಿವೆ.

– ಡಾ.ವಿನತೆ ಶರ್ಮ

ಭಾರತ ದೇಶದ ಸಂಸ್ಕೃತಿಯ ಅವಲಕ್ಷಣಗಳು ಕಳೆದ 2000 ದಿಂದ 3000 ವರ್ಷಗಳಿಂದಲೂ ಮನೆಮಾಡಿಕೊಂಡಿವೆ ಎಂದು ಯಾರೇ ಹೇಳಿದರೂ ಆಶ್ಚರ್ಯವಾಗುತ್ತದೆ. ಯಾಕೆಂದರೆ ಮೂರು ಮತ್ತು ಎರಡು ಸಾವಿರ ವರ್ಷಗಳ ನಡುವೆ ಇದ್ದಂಥ ಸಂಸ್ಕೃತಿಗಳ ಬಗ್ಗೆ, ಅವುಗಳಲ್ಲಿ ಅತ್ಯಂತ ಹೆಸರುವಾಸಿಯಾದ ಮೌರ್ಯರ ಕಾಲದ ಸುವರ್ಣಯುಗದ ಬಗ್ಗೆ ನಾವು ಚರಿತ್ರೆ ಪುಸ್ತಕಗಳಲ್ಲಿ ಓದಿದ್ದೀವಿ.

ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಮೌರ್ಯ ವಂಶಜನಾದ ಅಶೋಕ ಚಕ್ರವರ್ತಿ ಬೌದ್ಧ ಧರ್ಮದಲ್ಲಿ ಅಡಕವಾಗಿರುವ ಅಹಿಂಸಾ ದಾರ್ಶನಿಕತೆಯನ್ನು ಎತ್ತಿಹಿಡಿದು ಆನಂತರ ತನ್ನ ಭರತಖಂಡ ಆಳ್ವಿಕೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದನ್ನು ನಾವು ಓದಿಕೊಂಡಿದ್ದೀವಿ. ತಾನೇ ಸ್ವತಃ ಕೈಗೊಂಡಿದ್ದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಯುದ್ಧ, ಅಗೌರವ ಮತ್ತು ಅಮಾನವೀಯತೆಗಳನ್ನು ತ್ಯಜಿಸಿ, ಪಶ್ಚಾತ್ತಾಪಪಟ್ಟು ಈ ಮಹಾನ್ ಚಕ್ರವರ್ತಿ ಮುಂದೆ ಅವಿರತ ದುಡಿಮೆಯಿಂದ ಶಾಂತಿ ಸ್ಥಾಪನೆಯನ್ನು ಮಾಡಿದ್ದು ನಮಗೆ ಗೊತ್ತು. ಆತ ಪ್ರಯಾಣಿಕರು, ದಾರಿಹೋಕರಿಗಾಗಿ ರಸ್ತೆಗಳಲ್ಲಿ ಸಾಲು ಮರಗಳನ್ನು ನೆಡಿಸಿದ್ದ, ಪ್ರಾಣಿಗಳ ಶುಶ್ರೂಷೆಗಾಗಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದ, ಕುಡಿಯುವ ನೀರಿನ ಬಾವಿಗಳನ್ನು ತೋಡಿಸಿದ್ದ. ಅಶೋಕನ ಕಾಲದಲ್ಲೇ ನಳಂದ ಮತ್ತು ತಕ್ಷಶಿಲಾ ವಿದ್ಯಾಲಯಗಳು ಆರಂಭವಾದವು.

ನಮ್ಮ ಭಾರತ ದೇಶದ ಹೆಮ್ಮೆಯ ಲಾಂಛನವಾದ ಕೇಸರಿ, ಬಿಳಿ, ಹಸಿರು ಬಾವುಟದ ಮಧ್ಯೆ ಇರುವುದು ಅಶೋಕ ಚಕ್ರ. ಈ ಚಕ್ರದಲ್ಲಿರುವುದು ಅಶೋಕ ಚಕ್ರವರ್ತಿ ಪ್ರತಿಪಾದಿಸಿದ ಮತ್ತು ನಾವು ಮನುಜಕುಲವೆಲ್ಲಾ ಹೀಗಿರಬೇಕು ಎಂದು ಸಾರಿ ಹೇಳಿದ ಇಪ್ಪತ್ತನಾಲ್ಕು ಗುಣಗಳನ್ನು ಪ್ರತಿನಿಧಿಸುವ ಗೆರೆಗಳು. ಇದು ಇಡೀ ಪ್ರಪಂಚಕ್ಕೇ ಮಾದರಿಯಾಗುವಂಥ ಸಂದೇಶ. ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕತ ಅಮಾತ್ರ್ಯ ಸೆನ್ ಮತ್ತು ಅವರ ವಿದ್ವಾಂಸ ಸ್ನೇಹಿತರು (ವಿಶ್ವಮಟ್ಟದಲ್ಲಿ ಪ್ರಖ್ಯಾತರಾದವರು; ಪಾಶ್ಚಾತ್ಯದೇಶದವರು) ಅಶೋಕ ಚಕ್ರವರ್ತಿ ಪ್ರತಿಪಾದಿಸಿದ ಮನುಜ ಗುಣಗಳ ಬಗ್ಗೆ, ಶಾಂತಿ, ಅಹಿಂಸೆ ಮತ್ತು ಸಹಿಷ್ಣುತೆಗಳ ಸಂದೇಶದ ಬಗ್ಗೆ ತುಂಬಾ ಗೌರವಪೂರ್ವಕವಾಗಿ ಮಾತನಾಡಿದ್ದಾರೆ, ಬರೆದಿದ್ದಾರೆ. ಸಂದೇಶವನ್ನು ಹರಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮಕಾಲೀನ ಕಾಲಘಟ್ಟದಲ್ಲಿ ಅನೇಕ ಪಾಶ್ಚಾತ್ಯರು ಚಕ್ರವರ್ತಿ ಅಶೋಕನ ಕೆಲಸಗಳಿಂದ ಪ್ರಭಾವಿತರಾಗಿ ಅವನ್ನು ಮುಂದುವರೆಸಿದ್ದಾರೆ.

ಯಾವ ಭಾರತೀಯ ಸಂಸ್ಕೃತಿ ನಮ್ಮನ್ನು ಹಿಂದುಳಿಯುವಂತೆ ಮಾಡಿದೆ? ಯಾವ್ಯಾವ ವಿಷಯಗಳಲ್ಲಿ ಭಾರತೀಯರು ಹಿಂದುಳಿದಿದ್ದಾರೆ? ಹಿಂದುಳಿದಿರುವುದು ಮತ್ತು ಅಭಿವೃದ್ಧಿ ಹೊಂದಿರುವುದನ್ನು ಯಾವ ಮಾಪನದಿಂದ ಅಳೆದು ಹೋಲಿಸಲಾಗುತ್ತಿದೆ?

ದುರಾದೃಷ್ಟವೆಂದರೆ ಭಾರತದಲ್ಲಿ ಇಂದು ಅಶೋಕನ ಕೆಲಸಗಳನ್ನು, ನಮ್ಮ ರಾಷ್ಟ್ರ ಧ್ವಜದಲ್ಲಿರುವ ಸಂದೇಶವನ್ನು ಮರೆತಿದ್ದೀವಿ ಅಥವಾ ಮರೆತಂತೆ ನಟಿಸುತ್ತಿದ್ದೀವಿ. ಈ ನಟನೆ ಯಾಕೆ, ಎಲ್ಲಿಂದ ಪ್ರೇರೇಪಿತವಾಗಿ ಹುಟ್ಟಿಬಂದಿದೆ? ಅದರ ವಾಸ್ತವಿಕ ಪ್ರಸ್ತುತತೆ ಎಷ್ಟು, ಹೇಗಿರಬೇಕು?

ನಮ್ಮ ಹಿಂದುಳಿದಿರುವಿಕೆಗೆ ಭಾರತೀಯ ಸಂಸ್ಕೃತಿ ಕಾರಣವಾಗಿರುವುದು ಎನ್ನುವುದಾದರೆ ಆ ಸಂಸ್ಕೃತಿ ಏನು, ಅದರ ಲಕ್ಷಣಗಳೇನು ಅನ್ನುವುದನ್ನ ನಾವು ವಿಶ್ಲೇಷಿಸಬೇಕಾಗುತ್ತದೆ. ಭಾರತೀಯ ಸಂಸ್ಕೃತಿ ಯಾವತ್ತಿಗೂ ಬಹುತ್ವವನ್ನು ಬಿಂಬಿಸುತ್ತದೆ. ದ್ರಾವಿಡರು, ಮೂಲನಿವಾಸಿಗಳು, ಬುಡಕಟ್ಟು ಜನಸಮುದಾಯಗಳು ಮತ್ತು ಆರ್ಯರು ಎಂಬಂತೆ ಭಾರತದ ನೆಲ ಮತ್ತು ಜೀವನದೃಷ್ಟಿ ಸಮಷ್ಟಿಯನ್ನು ಎತ್ತಿಹಿಡಿಯುತ್ತದೆ. ಬಹುಹಿಂದಿನ ರಾಮಾಯಣ, ಮಹಾಭಾರತ ಮತ್ತು ಚರಿತ್ರೆ ದಾಖಲಿಸಿರುವ ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ ಭಾರತೀಯ ಕಾಲಘಟ್ಟಗಳು ಹೇಳುವುದು ಈ ನೆಲದಲ್ಲಿ ಹುಟ್ಟಿದ ಬಹುಮುಖೇನ ಉಪಸಂಸ್ಕೃತಿಗಳನ್ನು, ಧರ್ಮಗಳನ್ನು, ನಂಬಿಕೆ-ಆಚರಣೆಗಳನ್ನು, ಭಾಷೆಗಳನ್ನು ಮತ್ತು ಆಚಾರ-ವಿಚಾರಗಳನ್ನು. ಭಾರತಕ್ಕೆ ಭೇಟಿಕೊಡುವ ಜನರು ಪ್ರತಿ ರಾಜ್ಯದಲ್ಲೂ, ರಾಜ್ಯಗಳ ಜಿಲ್ಲೆಗಳಲ್ಲಿರುವ ಸ್ಥಳೀಯ ಬಹು ಮತ್ತು ಉಪ-ಸಂಸ್ಕೃತಿಗಳನ್ನು ನೋಡಿ ಬೆರಗಾಗುತ್ತಾರೆ. ಭಾರತೀಯ ಯೋಗಪದ್ಧತಿ, ಆಯುರ್ವೇದ, ಧ್ಯಾನ, ಸಂಗೀತ, ನೃತ್ಯ, ಆಹಾರ, ಬುದ್ಧತತ್ವಗಳನ್ನು ಬೆಂಬಲಿಸುತ್ತಾರೆ.

ಆ ಹಿನ್ನೆಲೆಯಲ್ಲಿ ನೋಡುವುದಾದರೆ ಯಾವ ಭಾರತೀಯ ಸಂಸ್ಕೃತಿ ನಮ್ಮನ್ನು ಹಿಂದುಳಿಯುವಂತೆ ಮಾಡಿದೆ? ಯಾವ್ಯಾವ ವಿಷಯಗಳಲ್ಲಿ ಭಾರತೀಯರು ಹಿಂದುಳಿದಿದ್ದಾರೆ? ಹಿಂದುಳಿದಿರುವುದು ಮತ್ತು ಅಭಿವೃದ್ಧಿ ಹೊಂದಿರುವುದನ್ನು ಯಾವ ಮಾಪನದಿಂದ ಅಳೆದು ಹೋಲಿಸಲಾಗುತ್ತಿದೆ? ಹಿಂದುಳಿದಿರುವುದು (ಪ್ರಗತಿ ಕಾಣದ) ಮತ್ತು ಮುಂದೆ ಸಾಗಿರುವುದು (ಅಭಿವೃದ್ಧಿ ಹೊಂದಿದ) ಅನ್ನುವ ಆಲೋಚನೆಯೇ ಅತ್ಯಂತ ವಿವಾದಾಸ್ಪದವಾದದ್ದು.

ಪ್ರಸ್ತುತ ಕಾಲದಲ್ಲಿ ಆರ್ಥಿಕಮಟ್ಟ, ಆರೋಗ್ಯ, ವೈಜ್ಞಾನಿಕ ಪ್ರಗತಿಗಳನ್ನ ಗಣನೆಯಲ್ಲಿಟ್ಟುಕೊಂಡು ಒಂದು ದೇಶದ ಪ್ರಗತಿಯನ್ನು ಅಳೆಯಲಾಗುತ್ತಿದೆ. ಆದರೆ ಈ ದೃಷ್ಟಿಕೋನ ನಿಧಾನವಾಗಿ ಬದಲಾಗುತ್ತಿದೆ.

ಯಾವೊಂದು ಸಮಾಜವನ್ನು ನಾವು ಮತ್ತೊಂದರ ಜೊತೆಗಿಟ್ಟು ಹೋಲಿಸಲು ಕಷ್ಟ. ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಅಸ್ಮಿತೆಯಿರುತ್ತದೆ. ಹಾಗಾದರೆ ಹೋಲಿಕೆ ಯಾವುದರ ಬಗ್ಗೆ? ಒಂದು ದೇಶದ ಆರ್ಥಿಕ ಸ್ಥಾನಮಾನವೇ, ಅದರ ಸಂಸ್ಕೃತಿಯೇ, ಅಥವಾ ಕೆಲವೊಂದು ನಿರ್ದಿಷ್ಟ ವಿಷಯಕ್ಷೇತ್ರಗಳಲ್ಲಿ ಅದು ವಿಶ್ವಮಟ್ಟದಲ್ಲಿ ಸಾಧಿಸುವ ಸಾಧನೆಯೇ? ಒಂದು ದೃಷ್ಟಿಯಿಂದ ನೋಡಿದರೆ ಪ್ರಸ್ತುತ ಕಾಲದಲ್ಲಿ ಆರ್ಥಿಕಮಟ್ಟ, ಆರೋಗ್ಯ, ವೈಜ್ಞಾನಿಕ ಪ್ರಗತಿಗಳನ್ನ ಗಣನೆಯಲ್ಲಿಟ್ಟುಕೊಂಡು ಒಂದು ದೇಶದ ಪ್ರಗತಿಯನ್ನು ಅಳೆಯಲಾಗುತ್ತಿದೆ. ಆದರೆ ಈ ದೃಷ್ಟಿಕೋನ ನಿಧಾನವಾಗಿ ಬದಲಾಗುತ್ತಿದೆ.

ಉದಾಹರಣೆಗೆ, 2019ರಲ್ಲಿ ಭಾರತದೊಂದಿಗೆ ಭೂತಾನ್ ದೇಶವನ್ನು ಹೋಲಿಸಿದರೆ ಭಾರತಕ್ಕಿಂತಲೂ ಭೂತಾನ್ ದೇಶವೇ ಹೆಚ್ಚು ಅಭಿವೃದ್ಧಿ ಹೊಂದಿರುವುದು ಎಂದು ತಜ್ಞರು ಹೇಳುತ್ತಾರೆ. ಐರೋಪ್ಯದೇಶಗಳಲ್ಲಿ ಖಂಡದ ಉತ್ತರ ನೆತ್ತಿಯಲ್ಲಿರುವ ಸ್ಕಾಂಡಿನೇವಿಯನ್ ರಾಷ್ಟ್ರಗಳಾದ ನಾರ್ವೆ, ಸ್ವೀಡನ್, ಫಿನ್ಲ್ಯಾಂಡ್ ದೇಶಗಳು ಇತರೆ ಐರೋಪ್ಯರಾಷ್ಟ್ರಗಳಿಗಿಂತಲೂ ಬಹು ಮುಂದುವರೆದಿವೆ ಎಂದು ಹೇಳುತ್ತಾರೆ. ಮುಂದಿನ ದಶಕಗಳಲ್ಲಿ ಜಾರಿಗೆ ಬರುವ ವಿಶ್ವಸಂಸ್ಥೆಯ Sustainable Development Goals ಪ್ರಕಾರ ಪ್ರಗತಿಯೆಂದರೆ ಆರ್ಥಿಕ ಸ್ಥಾನಮಾನವಷ್ಟೇ ಅಲ್ಲ; ಒಂದು ದೇಶದ ಜನರ ದೈಹಿಕ ಮತ್ತು ಮಾನಸಿಕ ಅರೋಗ್ಯ ಸ್ಥಿತಿ, ಪ್ರಕೃತಿಯ ಬಗ್ಗೆ ಇರುವ ಕಾಳಜಿ ಮತ್ತು ರಕ್ಷಣೆ, ಮಹಿಳೆ ಮತ್ತು ಮಕ್ಕಳ ಹಕ್ಕುಗಳು, ಅವರಿಗಿರುವ ಸಮಾನತೆ, ವಿಶೇಷ ಸಾಮಥ್ರ್ಯವುಳ್ಳವರ ಹಕ್ಕುಗಳು ಮತ್ತು ಸಮತೆ, ಬಡತನದ ನಿರ್ಮೂಲನ ಇಂಥ ಅಂಶಗಳನ್ನಿಟ್ಟುಕೊಂಡು ಅದರ ಅಭಿವೃದ್ಧಿಯನ್ನು ಅಳೆಯಬೇಕು ಎಂಬ ಮಾತಿಗೆ ಹೆಚ್ಚು ಮನ್ನಣೆಯಿದೆ.

‘ಭಾರತೀಯ ಸಂಸ್ಕೃತಿಯು ಅರ್ಹತೆ, ಪ್ರಾಮಾಣಿಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸೋತಿದೆ ಹಾಗೂ ಈ ಕಾರಣದಿಂದ ದೇಶದಲ್ಲಿನ ವೈಜ್ಞಾನಿಕ ಸಂಶೋಧನೆಯು ಶೈಶವಾವಸ್ಥೆಯಲ್ಲಿದೆ, ಎಂದು ನಾರಾಯಣಮೂರ್ತಿಗಳು ಹೇಳಿರಬಹುದು. ಹಾಗೆ ಹೇಳುವಾಗ ಅವರು ಒಂದು ನಿರ್ದಿಷ್ಟ ಹಿನ್ನೆಲೆಯ ಬಗ್ಗೆ, ಅದರಲ್ಲೂ ಭಾರತದ ವೈಜ್ಞಾನಿಕ ಸಂಶೋಧನಾ ಕ್ಷೇತ್ರವನ್ನು, ಆ ಒಂದು ಕ್ಷೇತ್ರದ ಕಾರ್ಯಕ್ಷಮತೆಯನ್ನು (performance) ಕುರಿತು ಆಲೋಚಿಸುತ್ತಿದ್ದರು ಅನ್ನಿಸುತ್ತದೆ. ಹಾಗೆ ಆಲೋಚಿಸುವಾಗ ಅವರು ಅಭಿವೃದ್ಧಿ ಹೊಂದಿರುವ ಪಾಶ್ಚಾತ್ಯದೇಶಗಳಲ್ಲಿನ ಕ್ಷೇತ್ರ ಕಾರ್ಯಕ್ಷಮತೆಯ ಜೊತೆಗೆ ಭಾರತೀಯರ ಕಾರ್ಯಕ್ಷಮತೆಯನ್ನು ಇಟ್ಟು ಹೋಲಿಸಿ ನೋಡಿದ್ದಾರೇನೋ.

ಆದರೆ ಈ ಹೋಲಿಕೆಯಲ್ಲಿರುವ ಒಂದು ಅಪಾಯವೆಂದರೆ ಅಭಿವೃದ್ಧಿ ಹೊಂದಿರುವ ಹಲವಾರು ಪಾಶ್ಚಾತ್ಯದೇಶಗಳು ಕ್ಯಾಪಿಟಲಿಸ್ಟ್(capitalist) ಸಮಾಜಗಳು. ಹದಿನೆಂಟನೇ ಶತಮಾನದಲ್ಲಾದ ಕೈಗಾರಿಕಾ ಕ್ರಾಂತಿ ನಂತರದ ಶತಮಾನಗಳಲ್ಲಿ ಬಂಡವಾಳಶಾಹಿ ದೇಶಗಳು ತಮ್ಮ ಲಾಭ, ಸ್ವಹಿತಾಸಕ್ತಿ, ಮತ್ತೊಬ್ಬರನ್ನು ಬಳಸಿಕೊಂಡು ತಾನು ಏಣಿಯ ತುತ್ತತುದಿಯನ್ನು ಮುಟ್ಟಬೇಕು, ಇತರರ ಸಂಪನ್ಮೂಲಗಳನ್ನು ಬಳಸಿಕೊಂಡು ತನ್ನನ್ನು ಮಾತ್ರ ಉದ್ಧಾರಮಾಡಿಕೊಳ್ಳಬೇಕು ಎನ್ನುವ ಗುಣಗಳನ್ನು ರೂಢಿಸಿಕೊಂಡು ಬೆಳೆದು ಬದಲಾಯಿಸಿದ ದೇಶಸಮಾಜಗಳು. ಇಲ್ಲಿ cut-throat competition ಎನ್ನುವ ಮಂತ್ರದ ಅಡಿಪಾಯವಿದೆ.

ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಹುಟ್ಟಿದ ಹೊಸ ಯಂತ್ರಗಳ ಕಾರ್ಖಾನೆಗಳಿಗೆ ಬೇಕಿದ್ದ ಕೆಲಸಗಾರರನ್ನು ತಯಾರು ಮಾಡಲು ಓದು-ಬರಹ-ಕನಿಷ್ಠ ಗಣಿತ ಎಂಬ ಸೂತ್ರವನ್ನಾಧರಿಸಿದ ಶಿಕ್ಷಣ ಪದ್ಧತಿ ಮತ್ತು ಮಾಲಿಕ-ಕೆಲಸಗಾರ ಎಂಬ ಹೊಣೆಗಾರಿಕೆಗೆ ಸಿಕ್ಕ ಹೊಸ ಭಾಷ್ಯ ಬಂಡವಾಳಶಾಹಿ ದೇಶಗಳನ್ನು ಆರ್ಥಿಕವಾಗಿ ಮುನ್ನೆಡೆಸಿತು, ಎನ್ನುವುದನ್ನು ನಾವು ಗಮನಿಸಬೇಕು.

ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಹುಟ್ಟಿದ ಹೊಸ ಯಂತ್ರಗಳ ಕಾರ್ಖಾನೆಗಳಿಗೆ ಬೇಕಿದ್ದ ಕೆಲಸಗಾರರನ್ನು ತಯಾರು ಮಾಡಲು ಓದು-ಬರಹ-ಕನಿಷ್ಠ ಗಣಿತ ಎಂಬ ಸೂತ್ರವನ್ನಾಧರಿಸಿದ ಶಿಕ್ಷಣ ಪದ್ಧತಿ ಮತ್ತು ಮಾಲೀಕ-ಕೆಲಸಗಾರ ಎಂಬ ಹೊಣೆಗಾರಿಕೆಗೆ ಸಿಕ್ಕ ಹೊಸ ಭಾಷ್ಯ ಬಂಡವಾಳಶಾಹಿ ದೇಶಗಳನ್ನು ಆರ್ಥಿಕವಾಗಿ ಮುನ್ನಡೆಸಿತು, ಎನ್ನುವುದನ್ನು ನಾವು ಗಮನಿಸಬೇಕು. ಇಂತಹ ಅಭಿವೃದ್ಧಿ ನಡೆಯುತ್ತಿದ್ದ ಕಾಲಘಟ್ಟದಲ್ಲಿಯೇ ಹಲವು ಪಾಶ್ಚಾತ್ಯ ದೇಶಗಳು (ಬ್ರಿಟನ್, ಫ್ರಾನ್ಸ್, ಸ್ಪೇನ್, ಬೆಲ್ಜಿಯಂ, ಡೆನ್ಮಾರ್ಕ್, ಪೋರ್ಚುಗಲ್ ಮುಂತಾದವು) ಏಷ್ಯಾ, ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ದೇಶಗಳನ್ನು ಆಕ್ರಮಿಸಿ, ಅವುಗಳಲ್ಲಿನ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಯಥೇಚ್ಛವಾಗಿ ತಮ್ಮಿಷ್ಟದಂತೆ ಬಳಸಿಕೊಂಡು ತಮ್ಮ ಆರ್ಥಿಕತೆಯನ್ನು ವಿಶ್ವಮಟ್ಟದಲ್ಲಿ ಮುಂದೆ ತಂದುಕೊಂಡಿವೆ.

ಇಂದು ಈ ‘ಮುಂದುವರೆದ ಅಥವಾ ಅಭಿವೃದ್ಧಿ’ ದೇಶಗಳ ಕರೆನ್ಸಿ (ಡಾಲರು, ಪೌಂಡ್, ಯುರೋ ಇತ್ಯಾದಿ) ಹೆಚ್ಚು ಬೆಲೆಬಾಳುತ್ತದೆ. ಆ ವಿಷಯ ಹಾಗಿರಲಿ. ಈ ದೇಶಗಳ ‘ಅಭಿವೃದ್ಧಿ’ ಗಮನವಿರುವುದು ಆರೋಗ್ಯ, ಇಂಧನ ಉತ್ಪಾದನೆ, ಮಿಲಿಟರಿ, ವಿಜ್ಞಾನ, ಹೊಸ ಔಷಧಗಳ ತಯಾರಿಕೆ, ಹೆಚ್ಚು ಬೆಳೆ ಉತ್ಪಾದನೆಗೆ ಬೇಕಿರುವ ರಾಸಾಯನಿಕಗಳ ಆವಿಷ್ಕಾರ, ಹೊಸ ಬೆಳೆ ತಳಿಗಳ ಆವಿಷ್ಕಾರ ಮುಂತಾದವು. ಈ ಬಹುಪಾಲು ದೇಶಗಳಲ್ಲಿ ಜನಸಂಖ್ಯೆ ಕಡಿಮೆ; ನೀರು, ಆಹಾರ, ತಲೆಮೇಲೊಂದು ಸೂರು ಎಂಬುದರ ಬಗ್ಗೆ ಚಿಂತೆಯಿಲ್ಲ. ಅಧಿಕಾರ, ವ್ಯವಸ್ಥೆ ಮೇಲಿನ ಹತೋಟಿ ಇಲ್ಲಿ ಬಹು ಮುಖ್ಯವಾಗುತ್ತದೆ. ಬಹುಪಾಲು ಆಡಳಿತ ಮತ್ತು ಸಾರ್ವಜನಿಕ ವ್ಯವಸ್ಥೆಗಳು ಪಾರದರ್ಶಕವಾಗಿದ್ದು ಅಪ್ರಾಮಾಣಿಕತೆ, ಭ್ರಷ್ಟಾಚಾರಕ್ಕೆ ಹೆಚ್ಚಿನ ಅವಕಾಶಗಳಿಲ್ಲ.

ಆದರೆ, ‘ಪ್ರಾಮಾಣಿಕತೆ, ಅರ್ಹತೆ ಆಧಾರದ ಆಯ್ಕೆ, ದೇಶದ ಬಗ್ಗೆ ಹೆಮ್ಮೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಚುರುಕುತನಗಳು ಅಭಿವೃದ್ಧಿ ಹೊಂದಿದ ದೇಶಗಳ ಗುಣಗಳಾಗಿವೆ’, ಎಂದು ಹೇಳುವ ಜನರು ಅಂತಹ ದೇಶಗಳ ಮೇಲ್ವರ್ಗದ ಜನರ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾದ ವಸ್ತುಸ್ಥಿತಿಯ ಅರಿವಾಗಬೇಕೆಂದರೆ ಆ ದೇಶಗಳ ಸಮಾಜದ ಕೆಳಸ್ತರದ ಜನರನ್ನು ಮಾತನಾಡಿಸಬೇಕು, ಅವರೊಂದಿಗೆ ಕೈಜೋಡಿಸಿ ಕೆಲಸಮಾಡಬೇಕು. ಆ ದೇಶಗಳ ಮೂಲನಿವಾಸಿಗಳು ಇಂದಿಗೂ ಪಡುತ್ತಿರುವ ಕಷ್ಟಗಳನ್ನು, ಅಸಮಾನತೆಯನ್ನು, ಅವಮಾನವನ್ನು, ತಾರತಮ್ಯವನ್ನು ಕಣ್ಣಾರೆ ಕಂಡು ಅರಿಯಬೇಕು.

ಪ್ರಾಮಾಣಿಕರಾಗಿದ್ದರೂ, ತಮ್ಮ ನೆಲದ ಬಗ್ಗೆ ಅಭಿಮಾನ, ಹೆಮ್ಮೆಯಿದ್ದರೂ ಆಕ್ರಮಿಸಿಬಂದು, ತಳವೂರಿದ ಬಿಳಿಯರಿಗೆ ಮಾನ್ಯತೆಯಿದೆ ಎಂಬುವುದು ಸರ್ವವಿಧಿತ. ಬಿಳಿಯರ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಹೋರಾಡಲಾರದೆ ಹತಾಶರಾಗುವ ಜನರೇ ಹೆಚ್ಚು. ಬಿಳಿಯರೊಳಗೇ ಅನೇಕರು ಶಾಲೆಮುಗಿಸಿದ ಪ್ರಮಾಣಪತ್ರ, ಕಾಲೇಜು, ಯೂನಿವರ್ಸಿಟಿಯಿಂದ ಪಡೆದ ಡಿಗ್ರಿ, ಡಿಪ್ಲೊಮಾ ಸರ್ಟಿಫಿಕೇಟ್ ಗಳಿಗೆ ಬೆಲೆಕೊಡುವ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ, ದ್ವೇಷಿಸುತ್ತಾರೆ.  ಪಾಶ್ಚಾತ್ಯ ದೇಶಗಳ ಸ್ಪರ್ಧಾತ್ಮಕ ಮನೋಭಾವ ಹುಟ್ಟುಹಾಕಿರುವ ಮನೋರೋಗಗಳ ಬಗ್ಗೆ, ಕ್ರಮೇಣ ಬೆಳಕಿಗೆ ಬರುತ್ತಿರುವ ಮಾನಸಿಕ ಅನಾರೋಗ್ಯ ಸ್ಥಿತಿಗತಿಗಳ ಬಗ್ಗೆ ಸರ್ಕಾರಗಳು ಮತ್ತು ಜನರು ತೀವ್ರ ಗಮನ ಕೊಡುತ್ತಿದ್ದಾರೆ.

ಉದಾಹರಣೆಗೆ, ಕಳೆದ ಹತ್ತು ವರ್ಷಗಳಲ್ಲಿ ಆಸ್ಟ್ರೇಲಿಯಾ ದೇಶದ ಸಮಾಜವನ್ನು ಕಾಡುವ ಕಿರಿಯರ ಆತ್ಮಹತ್ಯೆ, homelessness, ಅವಕಾಶವಂಚಿತರಿಗೆ ವಿಶೇಷ ತರಬೇತಿಯಾಧಾರಿತ ಉದ್ಯೋಗ, ಮುಂತಾದ ವಿಷಯಗಳಿಗೆ ಹಣವನ್ನು ಹೂಡಲಾಗುತ್ತಿದೆ. ಬೇರೆ ದೇಶಗಳ ಮೇಲೆ ಮಾಡುವ ಯುದ್ಧಗಳು ನಮಗೆ ಬೇಕಿಲ್ಲ, ಗಣಿಗಾರಿಕೆಯನ್ನು ನಿಲ್ಲಿಸೋಣ, ನಮ್ಮ ಜೀವನಮಟ್ಟವನ್ನು ಮೊದಲು ಅಭಿವೃದ್ಧಿ ಪಡಿಸಿಕೊಳ್ಳೋಣ, ನಮ್ಮ ಪರಿಸರವನ್ನು ರಕ್ಷಿಸಿಕೊಳ್ಳೋಣ, ಎಂದೆಲ್ಲಾ ಜನರು ಮಾತನಾಡುತ್ತಾ ಸರ್ಕಾರಗಳ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ಅವರ ಮಾತಿನಲ್ಲಿ ಸ್ಪರ್ಧೆಯ ಮನೋಭಾವವಿಲ್ಲ. ಪರಸ್ಪರ ಕಾಳಜಿ, ಪ್ರಾಮಾಣಿಕತೆಯಿದೆಯಷ್ಟೆ.

ಭಾರತದ ಮಟ್ಟಿಗೆ ಹೇಳುವುದಾದರೆ ಪರಸ್ಪರ ಕಾಳಜಿ, ಪ್ರಾಮಾಣಿಕತೆ ಮತ್ತು ತಮ್ಮ ಸಮಾಜವನ್ನು ಮುನ್ನಡೆಸುವುದು ಎಂಬ ವಿಚಾರಗಳಲ್ಲಿ ದೇಶ ಹಿಂದೆ ಬೀಳುತ್ತಿದೆ. 1947ರ ಸ್ವಾತಂತ್ರ್ಯ ನಂತರದ ದಶಕಗಳಲ್ಲಿ ಭಾರತ ಸರ್ಕಾರಗಳು ಸೋಷಿಯಲಿಸ್ಟ್ ಮೌಲ್ಯಗಳನ್ನು ಅನುಸರಿಸುತ್ತಾ, ದೇಶದ ಪ್ರಗತಿಗೆ ಅವಶ್ಯವಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಿತ್ತು. ಕೆಲಮಟ್ಟಿಗೆ ಅದು ಸಾಧ್ಯವಾಗಿದೆ.

ಆದರೆ ಕ್ರಮೇಣ ದೇಶ ಮತ್ತು ಸಮುದಾಯ ಭಾವನೆ ನಶಿಸಿ ಇಂದು ತಾನು, ತನ್ನ ಸ್ವಾರ್ಥ ಎಂಬಂತಾಗಿದೆ. ಸರ್ವಮಾರ್ಗಗಳನ್ನೂ ಬಳಸಿಕೊಂಡು ಹೇಗೋ ಏನೋ ಅಂತೂ ಅಧಿಕಾರವಿರುವ ಪಟ್ಟವನ್ನು ಆಕ್ರಮಿಸಿಕೊಂಡರೆ ಸಾಕು ತಮ್ಮ ಜೀವನ, ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲರ ಜೀವನವೂ ಸುಗಮವಾಗಿಬಿಡುತ್ತದೆ ಎಂಬ ನಂಬಿಕೆ ಬೇರೂರಿದೆ. ಕಪಟ, ಸುಳ್ಳ, ಕಳ್ಳ, ಕೊಲೆಗಾರರು, ನೀಚರು, ಮಾರಕ ಆಯುಧಗಳನ್ನು ಹಿಡಿಯಿರಿ ಎಂದು ಹುರಿದುಂಬಿಸುವವರು, ಹೆಣ್ಣೆಂದರೆ ತನ್ನ ಭೋಗದ ವಸ್ತು ಎನ್ನುವ ಅತ್ಯಾಚಾರಿಗಳು ಇಂದು ದೇಶವನ್ನು ಹಿಡಿದು ಅಲ್ಲಾಡಿಸುತ್ತಿದ್ದಾರೆ.

ಹಿಂದಿನ ಇತಿಹಾಸದಲ್ಲಿ ನಾವು ಓದಿದ್ದು ಹೊರದೇಶಗಳಿಂದ ಭಾರತಕ್ಕೆ ಬಂದು ಕೊಳ್ಳೆಹೊಡೆದದ್ದನ್ನು. ಆದರೆ ಇಂದು ನೋಡುತ್ತಿರುವುದು ಅಪ್ರಾಮಾಣಿಕ ಭಾರತೀಯರೇ ತಮ್ಮ ದೇಶದೊಳಗೇ ಆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಕ್ರವರ್ತಿ ಅಶೋಕ ಹೇಳಿದ್ದ ಇಪ್ಪತ್ತನಾಲ್ಕು ಗುಣಗಳು ಕಣ್ಮರೆಯಾಗಿವೆ. ದೇಶದ ಬಗ್ಗೆ ನಿರ್ಲಕ್ಷ್ಯ, ಸ್ವಾರ್ಥ, ನಿರ್ಲಜ್ಜೆ ಮನೆಮಾಡಿವೆ. ಈ ನಿಟ್ಟಿನಲ್ಲಿ ಭಾರತ ದೇಶ ಹಿಂದುಳಿದ ದೇಶವೇ ಹೌದು. ಒಟ್ಟಾರೆ ಆಡಳಿತ ವರ್ಗದ, ಹಣವುಳ್ಳವರ, ಕಾರ್ಪೊರೇಟ್ ವಲಯದ, ಧರ್ಮಪ್ರತಿಪಾದಕರ, ಸಣ್ಣಪುಟ್ಟದೊಡ್ಡ ರಾಜಕಾರಣಿಗಳ, ಎಲ್ಲರ ಮನಃಸ್ಥಿತಿಯೂ ಅಶೋಕ ಹೇಳಿದ್ದ ಲಕ್ಷಣಗಳನ್ನು ಬಿಂಬಿಸುತ್ತಿಲ್ಲ. ಪರಸ್ಪರ ಕಾಳಜಿ, ಪ್ರಾಮಾಣಿಕತೆ ಮತ್ತು ತಮ್ಮ ಸಮಾಜವನ್ನು ಮುನ್ನಡೆಸುವುದು ಎನ್ನುವುದು ಇವರಿಗೆ ಬೇಕಿಲ್ಲವಾಗಿದೆ.

ಆದರೆ, ಬರೇ ವೈಜ್ಞಾನಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಒಳ್ಳೆಯ ಕೆಲಸಗಳು ಹಿಂದಿನಂತೆ ಇಂದಿಗೂ ನಡೆಯುತ್ತಿವೆ. ನಿರ್ಲಜ್ಜರಿರುವ ಭಾರತದಲ್ಲೇ ಅನೇಕ ಗೌರವಾನ್ವಿತರೂ, ಪ್ರತಿಭಾವಂತರೂ, ಬದಲಾವಣೆಗಾಗಿ ಅವಿರತ ದುಡಿಯುತ್ತಿರುವವರೂ, ಪಾರದರ್ಶಕ ವ್ಯವಸ್ಥೆಗಾಗಿ ಪಣ ತೊಟ್ಟವರೂ ಇದ್ದಾರೆ. ಕೇವಲ ಇಪ್ಪತ್ತು ವರ್ಷಗಳಲ್ಲಿ ಬೇರೂರಿದ ಜಾಗತೀಕರಣದ ಫಲವನ್ನು ಉಂಡು ತೇಗುತ್ತಿರುವ ಭಾರತೀಯ ಸಮಾಜ ಬದಲಾಗುವುದಕ್ಕೆ ಸಾವಿರಾರು ವರ್ಷಗಳು ಹಿಡಿಸುವುದಿಲ್ಲ. ಏಕೆಂದರೆ, ಜಾಗತೀಕರಣವನ್ನು ಹುಟ್ಟುಹಾಕಿದ ಪಾಶ್ಚಾತ್ಯದೇಶಗಳಲ್ಲೇ ಈಗ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಸಮಾಜಗಳ ಬುಡ ಅಲ್ಲಾಡುತ್ತಿದೆ. ಅದು ಪ್ರಗತಿಯ ಸೂಚಕವೇ ಹೌದು.

*ಲೇಖಕಿ ಬೆಂಗಳೂರಿನವರು, ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ; ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ, ಸಾಮಾನ್ಯ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ದಿಕ್ಕುಗಳಲ್ಲಿ ಕೆಲಸ ಮಾಡುತ್ತಾರೆ. ಬರವಣಿಗೆ, ಊರು ಸುತ್ತಾಟ, ಅಧ್ಯಯನ ಇತ್ಯಾದಿಗಳು ಇಷ್ಟ. 

Leave a Reply

Your email address will not be published.