ಅಷ್ಟಭಾಷಾ ಕವಿ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನಂ

ಹರಿಹರ ಕವಿಯ ಪಂಪಾಶತಕ, ಪಂಪಾಕ್ಷೇತ್ರರಗಳೆ, ಹಿರಿಯೂರು ರಂಗಕವಿಯ ವಿರೂಪಾಕ್ಷಶತಕಗಳಂತೆ ಹಂಪಿಯ ವಿರೂಪಾಕ್ಷನನ್ನು, ಆ ಪರಿಸರದ ಭೌಗೋಳಿಕ ಪರಿಸರವನ್ನು ಕುರಿತು ಮಹತ್ವದ ಸಂಗತಿಗಳನ್ನು ಬಿಚ್ಚಿಡುವ ಕೃತಿಯಿದು.

ಡಾ.ಕೆ.ರವೀಂದ್ರನಾಥ

ಕನ್ನಡದಲ್ಲಿ ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ನಾಮವಿಜ್ಞಾನ ಇಂದು ಒಂದು ಶಾಸ್ತ್ರವಾಗಿ ಬೆಳೆದು ಬಂದಿದೆ. ಆದರೆ ಈ ಶಾಸ್ತ್ರ ಒಂದು ಕಾಲಕ್ಕೆ “ಸ್ಥಳ ಮಹಾತ್ಮೆಗಳು” ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಮೈಸೂರು ಅರಸರ ಕಾಲಘಟ್ಟದಲ್ಲಿ ತಲಕಾವೇರಿಮಾಹಾತ್ಮ್ಯೆ, ಕಕುದ್ಗಿರಿಮಾಹಾತ್ಮ್ಯೆ, ಶ್ರೀ ಪರ್ವತಮಾಹಾತ್ಮ್ಯೆ, ಬಿಳಿಗಿರಿ ರಂಗಮಾಹಾತ್ಮ್ಯೆ ಇತ್ಯಾದಿ ಹತ್ತಾರು ಕೃತಿರಚನೆಯಾಗುವುದರ ಮೂಲಕ “ಸ್ಥಳಮಹಾತ್ಮೆಯ” ಸುಗ್ಗಿಕಾಲವೆನಿಸಿತ್ತು.

ಒಂದು ಸ್ಥಳವನ್ನು ಕುರಿತು ಮಾಹಾತ್ಮ್ಯೆಗಳು ಹುಟ್ಟಿಕೊಂಡಿರುವುದಕ್ಕೆ ಪ್ರಾಚೀನ ಸಾಹಿತ್ಯದಲ್ಲಿ ಅನೇಕ ನಿದರ್ಶನಗಳಿವೆ. ಉಳುವಿಮಹಾತ್ಮ್ಯ ಇದು ಸೋದೆ ಸದಾಶಿವರಾಯ ಕೃತಿ. ಕಲ್ಯಾಣ ಕ್ರಾಂತಿಯಿಂದ ಚದುರಿಹೋದ ಶರಣರು ಉಳುವಿಕಡೆಗೆ ಯಾವ ಮಾರ್ಗವಾಗಿ ಬಂದರೆಂಬುದನ್ನು ತಿಳಿಸುವ ಈ ಕೃತಿ ‘ದಂಡಿನದಾರಿ’ ಯನ್ನು ತನ್ನೊಡಲಲ್ಲಿ ಇರಿಸಿಕೊಂಡ ಐತಿಹಾಸಿಕ ಕಾವ್ಯ. ಅದೇರೀತಿ ಹರಿಹರ ಕವಿಯ ಪಂಪಾಶತಕ, ಪಂಪಾಕ್ಷೇತ್ರರಗಳೆ, ಹಿರಿಯೂರು ರಂಗಕವಿಯ ವಿರೂಪಾಕ್ಷಶತಕಗಳಂತೆ ಹಂಪಿಯ ವಿರೂಪಾಕ್ಷನನ್ನು, ಆ ಪರಿಸರದ ಭೌಗೋಳಿಕ ಪರಿಸರವನ್ನು ಕುರಿತು ಮಹತ್ವದ ಸಂಗತಿಗಳನ್ನು ಬಿಚ್ಚಿಡುವ ಕೃತಿಯೆಂದರೆ ಅಷ್ಟಭಾಷಾ ಕವಿ ಚಂದ್ರಶೇಖರನ ‘ಪಂಪಾಸ್ಥಾನವರ್ಣನಂ’.

ಕ್ರಿ.ಶ 1430ರಲ್ಲಿ ರಚನೆಯಾದ ಈ ಕೃತಿ ಚಂಪೂ ಪ್ರಕಾರದಲ್ಲಿದೆ. ಹೀಗಿದ್ದೂ ಆಶ್ವಾಸಗಳಿಲ್ಲ್ಲ -61 ಪದ್ಯಗಳಿಂದ 34 ಗದ್ಯಗಳಿಂದ ಕೂಡಿದ ಈ ಕೃತಿ ಚಂಪೂಖಂಡಕಾವ್ಯ.

ಚಂದ್ರಶೇಖರ ಕವಿಯ ಇತಿವೃತ್ತ: ಪಂಪಾಸ್ಥಾನ ವರ್ಣನಂ ಕೃತಿಯ ಕರ್ತೃ ಚಂದ್ರಶೇಖರನ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಆದರೆ ಈತ ವಿಜಯನಗರದ ಪ್ರೌಢದೇವರಾಯನ ಆಸ್ಥಾನದಲ್ಲಿ ಕವಿಯೆಂಬುದನ್ನು ಕಾವ್ಯದ ಆಂತರಿಕ ಉಲ್ಲೇಖಗಳಿಂದ ತಿಳಿಯಲು ಸಾಧ್ಯವಿದೆ. ಈ ಕವಿಗೆ ಪ್ರೇರಣೆಯೆಂದರೆ ಮಹಾಕವಿ ಹರಿಹರ. ಹರಿಹರನ ಗಿರಿಜಾ ಕಲ್ಯಾಣದ ಸಂಧಿ 8 ಪದ್ಯ 53ರ ಈ ಕೆಳಗಿನ ಪದ್ಯ ನೇರವಾಗಿ ಕೃತಿಯಲ್ಲಿ ಬಳಕೆಯಾಗಿದೆ.

ಪೊಗೆದುದು ಪೊತ್ತಿದತ್ತು ಕಿಡಿಯಿಟ್ಟುದು ನಾಲಗೆ ದೋರೆದತ್ತು ಬಾನ್

ಗೊಗೆದುದು ನೀಳ್ದುದೆಣ್ದೆಸೆಗೆ ಹೊಂಬೆಳಗಂ ಹರಡಿತ್ತು ದಂ ಧಗಿಲ್

ಧಗಿಲೆನುತಾರ್ದುದಟ್ಟಿದುದು ಮುಟ್ಟಿತು ಸುಟ್ಟಿತು ತಿಂದು ತೇಗಿದ

ತ್ತಗಿಯದೆ ನಿಂದ ಪೂಗಣೆಯನಂ ಪಣೆಗಣ್ಣಿರಿ ಪೆಂಪೆಯಾಳ್ದಾನಾ

ಅಂದರೆ ಚಂಪೂ ಕಾವ್ಯ ಪರಂಪರೆಯನ್ನೂ, ಶಂಕರಶತಕ ಎಂಬ ಇನ್ನೊಂದು ಕೃತಿಯನ್ನು ಬರೆಯುವುದರ ಮೂಲಕ ಶತಕಪರಂಪರೆಯನ್ನು ಹರಿಹರನಂತೆ ಮುಂದುವರೆಸಿದ ಕವಿ ಚಂದ್ರಶೇಖರ. ಚಂದ್ರಶೇಖರ ಕವಿಯ ಗುರು ಗುರುರಾಯ. ಈತನ ಪ್ರೇರಣೆಯಿಂದಲೇ ಶ್ರೀವಿರೂಪಾಕ್ಷಸ್ಥಾನ ಅಥವಾ ಪಂಪಾಸ್ಥಾನ ವರ್ಣನಂ ಹಾಗೂ ‘ಶಂಕರಶತಕ’ ಹೆಸರಿನ ಎರಡು ಕೃತಿಗಳನ್ನು ರಚಿಸಿದ್ದೇನೆಂದು ಕವಿ ಹೇಳಿಕೊಂಡಿದ್ದಾನೆ.

ಸೊರಹುತಲಿಂದ್ರ ಚಂದ್ರನಿವನೆಂಬ ನರಸ್ತುತಿಯಲ್ಲಿ ಚಂದ್ರಶೇ

ಖರ ಕವಿರಾಜ| ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ಬೀಜಮಾಗೆ ಶಂ

ಕರ ಶತಕ ಪ್ರಬಂಧಮನೆ ಪೇಳಿದನೆಂದುಪದೇಶವಿತ್ತಮ

ದ್ಗುರು ಗುರುರಾಯ ನಿಚ್ಚವಡೆ ತೀರ್ಚುವೆನಚ್ಚರಿ ಪೆರ್ಚುವಂದದಿಂ||

ಎಂಬ ಶಂಕರ ಶತಕದ 6ನೇ ಪದ್ಯದಲ್ಲಿ ಹಾಗೂ

ಆ ಗುರುರಾಯನೆನ್ನನೊಲವಿಂ ನಡೆನೋಡುತೆ ಬಾ ವಚಸ್ಸುಧಾ

ಸಾಗರ ಚಂದ್ರಶೇಖರ ಕವೀಶ್ವರ ನೀಂ ನೆಗಳ್ದಷ್ಟಭಾಷೆಗ

ಳ್ಗಾಗರಮಾದ ಕನ್ನಡದ ಬಿನ್ನಾಣಮಂ ನೆರೆ ತೋರವೇಳ್ವುದಿಂ

ಪಾಗಿರೆ ಹಂಪೆಯಾಳ್ದನೆಸೆವೋಲಗಮಂ ರಚಿಸೆಂದನಳ್ತಿಯಿಂ||

ಎಂಬ ಪಂಪಾಸ್ಥಾನ ವರ್ಣನಂ ಕೃತಿಯ ಪದ್ಯ 11 ರಿಂದ ತಿಳಿದುಬರುತ್ತದೆ. ಈ ಪ್ರೌಢರಾಯನ ಸಭೆಯಲ್ಲಿ ಗುರುರಾಯ ಮಂತ್ರಿಯಾಗಿ, ಜ್ಞಾನಿಯಾಗಿ, ದಾನಿಯಾಗಿ, ವಿವಿಧ ಭಾಷಾ ವಿಶೇಷ ವಿಖ್ಯಾತ ಕವಿಕುಲಕಲ್ಪ ಭೂಜನಂ ಮಾನಿನೀ ಮಾನಸ ಮಾನಪಹರಣ ಮಾನವಮೀನಾಂಕಮೆನಿಸಿ ನೆಗಳ್ತೆವೆತ್ತ ಗುರುರಾಯ ಮಂತ್ರಿಯೊ

ಪ್ಪುತ್ತಿರ್ಪನಂತಲ್ಲದೆಯು (ಪಂಪಾಸ್ಥಾನ ವರ್ಣನಂ ವಚನ 8) ಎಂದು ವರ್ಣಿಸಿಕೊಂಡ ಈತನಿಗೆ ‘ರಾಯಭಂಡಾರಿ ನಾರಾಯಣ’ ಎಂಬ ಬಿರುದು ಇತ್ತಂತೆ.

ಈ ಗುರುರಾಯ ಯಾರು ಎಂಬುದಕ್ಕೆ ವಿದ್ವಾಂಸರಲ್ಲಿ ಜಿಜ್ಞಾಸೆಗಳಿವೆ. ಡಾ.ಎಸ್.ಶ್ರೀಕಂಠಶಾಸ್ತ್ರಿಗಳು ಕ್ರಿ.ಶ. 1458ರಲ್ಲಿ ರಚನೆಯಾಗಿರುವ ಶಾಸನದಲ್ಲಿ ಗುರುವಪ್ಪನೆಂಬ ಹೆಸರಿನಿಂದ ಬಾರಕೂರಿನಲ್ಲಿ ಆಳುತ್ತಿದ್ದ ಬಗ್ಗೆ ಉಲ್ಲೇಖವಿದೆ. ಆತನೇ ಚಂದ್ರಶೇಖರ ಕವಿಯ ಕಾವ್ಯಪ್ರೇರಣೆಗೆ ಕಾರಣನಾದ ಗುರುರಾಯನಿರಬಹುದೆಂದು ಊಹಿಸುತ್ತಾರೆ (Indian Antiquary voI LVII-1928 page 71-85). ಈ ಕೃತಿಯನ್ನು ಸಂಪಾದಿಸಿದ ವಿದ್ವಾನ್ ಶಿವಮೂರ್ತಿ ಶಾಸ್ತ್ರಿಗಳು ಜಕ್ಕಣಾಚಾರ್ಯನೇ ಗುರುರಾಯನಾಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯವನ್ನು ನಿರಾಕರಿಸಿದ ವಿದ್ವಾಂಸರಾದ ಸಿ.ಮಹಾದೇವಪ್ಪನವರು ಕ್ರಿ.ಶ.1520ರಲ್ಲಿ ರಚನೆಯಾಯಿತ್ತೆನ್ನಲಾದ ವೈಭೋಗ ರಾಜಸ್ಥಾನ ಎಂಬ ಚಂಪೂಕಾವ್ಯ ರಚನೆಗೆ ಒದಗಿಸಿದ ಸಂದರ್ಭವನ್ನು ವಿವರಿಸುತ್ತಾ “ಹಿಂದೆ ಗುರುರಾಯನ ಆಜ್ಞೆಯಿಂದ ಚಂದ್ರಕವಿ ವಿರೂಪಾಕ್ಷಸ್ಥಾನ ರಚಿಸಿದಂತೆ ನೀನೂ ನಾನಾಲಂಕಾರ ಚಿತ್ರಭಾವರಸಗಳಿಂದ ವೈಭೋಗ ರಾಜಸ್ಥಾನವನ್ನು ರಚಿಸಬೇಕೆಂದು” ಎಂಬ ಹೇಳಿಕೆಯಲ್ಲಿ ಗುರುರಾಯ ಎಂಬ ಉಲ್ಲೇಖ ಸ್ಪಷ್ಟವಾದ ಹಿನ್ನೆಲೆಯಲ್ಲಿ ಹಾಗೂ ಪ್ರಭುಗ ಮತ್ತು ಮಲ್ಲಣಾರ್ಯನಂಥ ಕವಿಗಳು ಜಕ್ಕಣಾಚಾರ್ಯನೇ ಗುರುರಾಯ ಆಗಿದ್ದರೆ ಅವರು ಉಲ್ಲೇಖಿಸುತ್ತಿದ್ದರು ಎಂದು ಹೇಳಿ ಗುಬ್ಬಿ ಮಲ್ಲಣಾರ್ಯನ ವೀರಶೈವ ಪುರಾಣದಲ್ಲಿ ಗುರುರಾಯನೆಂದು ಕರೆಯದೆ ಭಂಡಾರಿ ಜಕ್ಕಪ್ಪನೆಂದು ಕರೆದಿರುವುದನ್ನು ಉಲ್ಲೇಖಿಸಿ ವಿದ್ವಾನ್ ಬಿ.ಶಿವಮೂರ್ತಿಶಾಸ್ತ್ರಿಗಳ ಅಭಿಪ್ರಾಯವನ್ನು ತಳ್ಳಿಹಾಕುತ್ತಾರೆ.

ವೀರಪ್ರತಾಪ ದೇವರಾಯನ ಕಾಲದ 1447ರ ಕುಂದಾಪುರದ ಸಮೀಪದ ಕೋಟಿನಾಥ ದೇವಾಲಯದಲ್ಲಿನ ಶಾಸನದ ಉಲ್ಲೇಖ (SII 9 part II NO 451) ಪ್ರಕಾರ “ದೇವರಾಯ ಮಹಾರಾಯರ ಹೆಸರ ಧರ್ಮವಾಗಿ ಭಂಡಾರದ ಗುರುರಾಯ ಒಡೆಯರು ಶ್ರೀ ಕೋಟಿನಾಥ ದೇವರಿಗೆ ದರುಶನಕೆ ಬಂದಲ್ಲಿ ಮಾಡಿದ ಧರ್ಮದ ವಿವರವೂ’’ ಎಂಬ ಉಲ್ಲೇಖದಿಂದ ಭಂಡಾರದ ಗುರುರಾಯ ಒಡೆಯ ಹಾಗೂ ಗುರುರಾಯ ಮಂತ್ರಿ ಒಬ್ಬನೇ ಎಂದು ತೀರ್ಮಾನಿಸುತ್ತಾರೆ. ಈತ ಭಂಡಾರದ ಸಚಿವನಾಗುವ ಮೊದಲು ಗೋವೆ ಚಂದ್ರಗುತ್ತಿಯನ್ನಾಳುತ್ತಿದ್ದನೆಂಬ ಅಭಿಪ್ರಾಯವನ್ನು ಶೃಂಗೇರಿಯ 1430ರ ಶಾಸನ (MAR 1934 NO 27P 193) ಹಾಗೂ ಶಿಕಾರಿಪುರದ (E C VOI 7 SK 40) ಶಾಸನಗಳಿಂದ ಪ್ರಮಾಣಿಕರಿಸುತ್ತಾರೆ.

ಮುಖ್ಯವಾಗಿ ಈ ಗುರುರಾಯ ಕಾವ್ಯರಚನೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಂತೆ ತೋರುತ್ತದೆ. ಗುರುರಾಜನ ಹೆಸರಿನಲ್ಲಿ “ಷಟ್ಸ್ಥ್‍ಲ ಜ್ಞಾನ ಚಾರಿತ್ರ” ಎಂಬ ಕೃತಿ ಈತನದೇ ಆಗಿರಬೇಕೆಂದು ವಿವರಿಸುತ್ತಾರೆ. ಆದರೂ ಲಕ್ಕಣ್ಣನಂತೆ, ಜಕ್ಕಪ್ಪನಂತೆ ಇತರೆ ಆ ಪರಿಸರದ ಅಧಿಕಾರಿಗಳಂತೆ ಗುರುರಾಯನ ಉಲ್ಲೇಖ ಕಾವ್ಯೋಕ್ತ ಸ್ಮರಣೆಗಳು ಇಲ್ಲದಿರುವುದು ಸೋಜಿಗವೇ ಸರಿ.

ಪಂಪಾಸ್ಥಾನವರ್ಣನಂ ಕೃತಿ ವಿರೂಪಾಕ್ಷನ ಓಲಗ, ಪೂಜಾವೈಭವ, ಪಂಪಾಕ್ಷೇತ್ರದ ಸುತ್ತಲಿನ ವಿವರಗಳು, ತುಂಗಭದ್ರಾನದಿಯ ಹಿರಿಮೆ, ದೇವರಾಜೇಂದ್ರನ ಒಡ್ಡೋಲಗ, ವಿರೂಪಾಕ್ಷಸ್ಥಾನದ ಗಾಯಕ, ವಾದಕ, ನರ್ತಕಿಯರ ರಾಗರಮ್ಯಗಳನ್ನು, ವಾದ್ಯವಿಶೇಷಗಳನ್ನು ಕವಿ ಚಂದ್ರಶೇಖರ ವರ್ಣಿಸಿದ್ದಾನೆ. “ಬೆಳದಿಂಗಳ ರಸಸೋನೆಯಂತೆ ಇಂಗಡಲಿನ ಅಮೃತ ರಸಧಾರೆಯಂತೆ, ಮನ್ಮಥನ ಇಕ್ಷುಜಾಪದ ರೋಮಾಂಚಕ ಧ್ವನಿಯಂತೆ ಸಂಗೀತದ ಹೊನಲು ಹರಿದುಬಂತೆಂದು” ಹೇಳುವಲ್ಲಿ ವಿಜಯನಗರದ ಕಲಾಪ್ರಪಂಚದ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ಪಂಪಾ ಕ್ಷೇತ್ರದ ವ್ಯಾಪ್ತಿಯನ್ನು ತಿಳಿಸುವ ಈ ಕೃತಿ “ಸಾರ್ಧಯೋಜನ ವಿಸ್ತಾರದಿಂ ಸಾರ್ಧಯೋಜನಾಯಾಮದಿಂ ಪವಣ್ಬಡೆದು ಪೂರ್ವ ದಕ್ಷಿಣ ಪಶ್ಚಿಮೋತ್ತರ ದ್ವಾರಂಗಳಲ್ಲಿ ಕಿನ್ನರೇಶ್ವರ, ಜಂಭುಕೇಶ್ವರ, ಸೋಮೇಶ್ವರ ವಾಣಿಭದ್ರೇಶ್ವರೆಂಬುವರೇ ಪರಿವಿಡಿಯಿಂ ದ್ವಾರಪಾಲಕರಾಗಿ ನೆಲೆಸಿರೆ ತನಗಧಿದೇವತೆಯಾಗಿ ಪಂಪಾಭವಾನಿ ಪಾಲಿಸುತಿರ್ಪುದರಿಂ ಪಂಪಾಕ್ಷೇತ್ರವೆಂಬ ಪೆಸರಂ ಪಡೆದು ಆವಡೆಯಲಿ ನೋಳ್ಬಡಂ ಅನೇಕ ಸಿದ್ಧಲಿಂಗಗಳಿಂ ಅನಂತತೀರ್ಥಗಳಿಂ, ಅರಣ್ಯ ಪುಣ್ಯಾಶ್ರಮಗಳಿಂ, ಅಗಾಧ ಕುಂಡಗಳಿಂ ಅಮಲ ಕಮಲಾಕರಣಗಳಿಂ ಅನುಪಮ ತಪೋವನಗಳಿಂ ಅತ್ಯಂತ ಪಾವನವಾಗಿರ್ಪುದು” ಎಂದು ಕವಿ ಹೇಳುತ್ತಾನೆ. ಗಂಗೆ, ಯಮುನೆ, ಸರಸ್ವತಿಯರು ತುಂಗಭದ್ರೆಗೆ ಸಾಟಿಯಲ್ಲ! ಇದು ಹಂಪೆಗೆ ಅಲಂಕಾರವಾದುದು. ಇದರ ದಕ್ಷಿಣ ದಿಕ್ಕಿಗೆ ಮೋಕ್ಷದ ಏಳ್ಗೆಯಂತಿರುವ ಮಾಲ್ಯವಂತ, ಮತಂಗ, ಹೇಮಕೂಟ ಶಿಖರತ್ರಯಗಳು ನಿಂತಿವೆಯಂತೆ. ಅದೇರೀತಿ ವಿವಿಧ ಪಾವನತೀರ್ಥಗಳು ಮತಂಗ ಬೆಟ್ಟದಲ್ಲಿವೆಯಂತೆ.

ಋಣಮೋಚನ ಯಕ್ಷಮುಖಾಗಣಿತವಾದ ಮಹಾತೀರ್ಥರಿಂದ ಮಾಲ್ಯವಂತ ಬೆಟ್ಟ ಶೋಭಿಸುತ್ತದೆ. ಹೇಮವರ್ಣದಿಂದ ಮೆರೆಯುವ ಹೇಮಕೂಟ ಪರ್ವತ ಮೆರೆಯುತ್ತಿದೆ. ಕುಸುರಿ ಕೆಲಸಗಳಿಂದ ಮಾಡಿದ ಮಣಿಗಳಿಂದೊಪ್ಪುವ ಸೂಳೆಗೇರಿ ಓಲಗದಲ್ಲಿ “ವೇಳೆಯರಿತು ಕರವೆತ್ತಿ ಕರೆವ ಸೂಳಾಯತದವರ ಧ್ವನಿಕೇಳಿಸುತ್ತಿತ್ತಂತೆ” ಪೊಸಮಿಂಡರ್ ನಡೆನೋಡೆ ಕಣ್ಬೆಗೆವ ಮತ್ತಂ ಮೇಳದಿಂ ಮಾತನಾಡಿಸೆ… ಏರು ಜವ್ವನದ, ಮೀರುವ ಲಾವಣ್ಯದ, ತೋರು ವಿಲಾಸದ, ಮೊಲೆಯ ಪೊಗರೇರುವ ಗೆಳತಿಯರನ್ನು ಮುಟ್ಟಲು ಇಚ್ಛಿಸಿದರೆ, ಮುಟ್ಟಿದಡೆ ಮೈದೆಗೆವ, ನುಡಿಸಿದೊಡೆ ನಾಚುವ ಕಿರುವೆಂಡಿರ ತಂಡ ಇತ್ತಂತೆ. ಪಂಪಾಕ್ಷೇತ್ರದಲ್ಲಿ ನಡೆಯುವ ಶಿವರಾತ್ರಿ ಮುಂತಾದ ಹಬ್ಬಗಳ ವರ್ಣನೆಯನ್ನು ಕವಿ ಮಾಡಿದ್ದಾನೆ.

ಒಟ್ಟಿನಲ್ಲಿ ಪಂಪಾಕ್ಷೇತ್ರದ ಭೌಗೋಳಿಕ ಸ್ವರೂಪವನ್ನು ತಿಳಿದುಕೊಳ್ಳಲು ಈ ಕೃತಿ ಪ್ರಮುಖ ಆಕರವಾಗಿದೆ. ಪಿ.ವಿಷ್ಣುತೀರ್ಥರಂಥ ಆಧುನಿಕ ವಿದ್ವಾಂಸರ ‘ಪಂಪಾಮಾಹಾತ್ಮ್ಯೆ’ ಕೃತಿಗೆ ಚಂದ್ರಶೇಖರ ಕವಿಯ ಈ ಕೃತಿ ಆಕರವಾಗಿರಬೇಕು. ವಿಶೇಷವಾಗಿ ಹರಿಹರನ ಪಂಪಾಶತಕ, ಅನುಪಲಬ್ದ ಕೃತಿಯಾದ 1650ರ ಹಿರಿಯೂರು ರಂಗಕವಿಯ ವಿರೂಪಾಕ್ಷಶತಕ ಕೃತಿಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವುದರಿಂದ ಪಂಪಾಕ್ಷೇತ್ರದ ಪೌರಾಣಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿರೂಪಿಸಬಹುದಾಗಿದೆ. ಈ ಕೃತಿಯನ್ನು 1955ರಲ್ಲಿ ಶರಣಸಾಹಿತ್ಯ 21ನೇ ಗ್ರಂಥ ಮಾಲೆಯಾಗಿ ವಿದ್ವಾನ್ ಬಿ.ಶಿವಮೂರ್ತಿಶಾಸ್ತ್ರಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ.

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.

Leave a Reply

Your email address will not be published.