ಆಕಾಶವಾಣಿಯ ಪ್ರಾದೇಶಿಕ ಅಸ್ಮಿತೆ ಉಳಿಸುವುದು ಹೇಗೆ? ಯಾರು?

-ಸಿ.ಯು.ಬೆಳ್ಳಕ್ಕಿ

ನಮ್ಮ ದೇಶದಲ್ಲಿ ಬಾನುಲಿ ಪ್ರಸಾರ ಆರಂಭಗೊಂಡು ಎಂಟು ದಶಕಗಳು ಕಳೆದಿವೆ. ಸ್ಥಳೀಯ ಭಾಷೆ, ಕಲೆ, ಸಂಸ್ಕೃತಿ, ಪ್ರತಿಭೆಗಳನ್ನು ಪೆÇೀಷಿಸುವಲ್ಲಿ ಬಾನುಲಿ ಪಾತ್ರ ಅನನ್ಯ. ಇಂತಹ ಪ್ರಭಾವಶಾಲಿ ವಿಕೇಂದ್ರೀಕೃತ ಪ್ರಸಾರಕ್ಕೆ ಕಾರಣವಾದ ಆಕಾಶವಾಣಿ, ಇಂದು ಪ್ರಸಾರ ಭಾರತಿಯ ತಪ್ಪು ನಿರ್ಧಾರದಿಂದ ದೇಶೀ ದನಿ-ಬನಿ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದೆ. ಮರು ಬ್ರಾಂಡಿಂಗ್ ಹೆಸರಿನಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳಿಗೆ ಕತ್ತರಿ ಹಾಕುವ, ಸಿಬ್ಬಂದಿ ಕಡಿತ ಮಾಡುವ ಕಾರ್ಯಸೂಚಿ ಇದರಲ್ಲಡಗಿದೆ.

ನಮ್ಮ ದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಪಾರ ವ್ಯಾಪ್ತಿ, ಸ್ಥಳೀಯ ಪ್ರಸ್ತುತತೆ, ಆತ್ಮೀಯತೆ, ಅತಿ ಕಡಿಮೆ ವೆಚ್ಚ, ಸರಳತೆ -ಈ ವೈಶಿಷ್ಟ್ಯಗಳಿಂದ ಇಂದಿಗೂ ಬಾನುಲಿ ಎಲ್ಲರ ಕೈಗೆಟುಕಬಲ್ಲ ಮಾಧ್ಯಮ. ಭಾರತದಲ್ಲಿ ಬಾನುಲಿ ಎಂದರೆ ಪ್ರಧಾನವಾಗಿ ಸಾರ್ವಜನಿಕ ಸೇವಾ ಪ್ರಸಾರಕ್ಕೆ ಮೀಸಲಾದ ಆಕಾಶವಾಣಿಯೇ ಆಗಿದೆ. ಸ್ವಾತಂತ್ರ್ಯ ನಂತರ ನಮ್ಮ ದೇಶದ ದೃಷ್ಟಿಯಿಂದ ಅತಿ ಅವಶ್ಯ, ಅನಿವಾರ್ಯವಾದ ಆಕಾಶವಾಣಿಯ ಜಾಲ ವಿಸ್ತರಣೆ ಯೋಜಿತ ರೀತಿಯಲ್ಲಿ ಆರಂಭವಾಯಿತು.

ನಮ್ಮ ದೇಶದ ನೂರಾರು ಪ್ರಮುಖ ಹಾಗೂ ಉಪಭಾಷೆ, ಹಲವಾರು ಸಾಂಸ್ಕೃತಿಕ, ಭೌಗೋಳಿಕ, ಆರ್ಥಿಕ ವಿಭಿನ್ನತೆ, ಅಗತ್ಯ – ಇವುಗಳನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನತೆಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಸಾರ್ವಜನಿಕ ಸೇವಾ ಪ್ರಸಾರ ಹಾಗೂ ವಿಕೇಂದ್ರೀಕೃತ ಪ್ರಸಾರಕ್ಕೆ ಒತ್ತುನೀಡಲಾಯಿತು. ರಾಷ್ಟ್ರವಿಭಜನೆಯ ನಂತರ ಭಾರತದಲ್ಲಿದ್ದ ಆಕಾಶವಾಣಿ ಕೇಂದ್ರಗಳ ಸಂಖ್ಯೆ ಕೇವಲ ಆರು. ಈಗ ಅವುಗಳ ಸಂಖ್ಯೆ 279. ಆಕಾಶವಾಣಿ ಇಂದು `ಪ್ರಸಾರ ಭಾರತಿ’ಯ ಅಧೀನದಲ್ಲಿದ್ದು ಸಾರ್ವಜನಿಕ ಸೇವಾ ಪ್ರಸಾರಕ್ಕೆ ಮೀಸಲಾದ ವಿಶ್ವದ ಒಂದು ಬೃಹತ್ ಪ್ರಸಾರ ಜಾಲವಾಗಿದೆ.

ಸ್ಥಳೀಯ ಪ್ರಸ್ತುತತೆ ಆಕಾಶವಾಣಿಯ ದೊಡ್ಡ ಶಕ್ತಿಯಾಗಿದೆ. 23 ಪ್ರಮುಖ ಹಾಗೂ 179 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಆಕಾಶವಾಣಿ ಸ್ಥಳೀಯವಾಗಿ ಹೆಚ್ಚು ಪ್ರಸ್ತುತ, ಜನಪ್ರಿಯ. ಕೇಂದ್ರೀಕೃತ ಬಾನುಲಿ, ಟಿವಿ ಪ್ರಸಾರದಲ್ಲಿ ಸ್ಥಳೀಯ ಅಗತ್ಯ, ಬೇಕು-ಬೇಡಗಳಿಗೆ ಹೆಚ್ಚಿನ ಅವಕಾಶಗಳಿರುವುದಿಲ್ಲ. ಅದು ಪ್ರಧಾನವಾಗಿ ಏಕಮುಖವಾಗಿರುತ್ತದೆ. ತಮ್ಮದೇ ಪ್ರದೇಶದಲ್ಲಿ ತಮ್ಮ ಅಗತ್ಯಕ್ಕನುಗುಣವಾಗಿ, ತಮ್ಮದೇ ಭಾಷೆ, ಭಾಷಾ ಶೈಲಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುವುದರಿಂದ ಅವುಗಳಲ್ಲಿ ಭಾಗವಹಿಸುವ ಅವಕಾಶಗಳು ಅಲ್ಲಿನ ಜನರಿಗೇ ದೊರೆಯುತ್ತದೆ. ಇದು ವಿಕೇಂದ್ರೀಕೃತ ಪ್ರಸಾರದ ಪ್ರತಿಫಲ.

ವಿಕೇಂದ್ರೀಕೃತ ಪ್ರಸಾರ

ಆಕಾಶವಾಣಿ ಜನರಿಗೆ ಆತ್ಮೀಯ ಸಂಗಾತಿಯಾಗಿ, ಮಾರ್ಗದರ್ಶಕನಾಗಿ ನಿಜವಾದ ಅರ್ಥದಲ್ಲಿ ಜನಮಾಧ್ಯಮವಾಗಿದೆ. ಇದಕ್ಕೆ ಪ್ರಮುಖ ಕಾರಣ ನಿಸ್ಸಂದೇಹವಾಗಿ ವಿಕೇಂದ್ರೀಕೃತ ಪ್ರಸಾರ. ಕರ್ನಾಟಕದಲ್ಲಿ ಮಾತನಾಡುವ ಪ್ರಮುಖ ಭಾಷೆ ಕನ್ನಡವೇ ಆದರೂ ಮಾತನಾಡುವ ಶೈಲಿ ಬೇರೆಬೇರೆ ಭಾಗಗಳಲ್ಲಿ ಭಿನ್ನವಾಗಿದೆ. ಹಳೆಯ ಮೈಸೂರು, ಧಾರವಾಡ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದ ಮಾತಿನ ಶೈಲಿಯಲ್ಲಿ ಬಹಳಷ್ಟು ಭಿನ್ನತೆಯನ್ನು ಕಾಣುತ್ತೇವೆ. ಹಾಗೆಯೇ ಅಲ್ಲಿನ ಕೃಷಿ, ಬೆಳೆ, ಜನಪದ, ಸಂಗೀತ, ಸಂಸ್ಕೃತಿ ಭಿನ್ನವಾಗಿದೆ. ಆಕಾಶವಾಣಿ ಧಾರವಾಡ ಉತ್ತರ ಕರ್ನಾಟಕವನ್ನು, ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳು ದಕ್ಷಿಣ ಕರ್ನಾಟಕವನ್ನು, ಮಂಗಳೂರು ಕೇಂದ್ರ ಕರಾವಳಿ ಕರ್ನಾಟಕ ಹಾಗೂ ಭದ್ರಾವತಿ ಕೇಂದ್ರ ಮಲೆನಾಡನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಪ್ರೈಮರಿ ಚಾನೆಲ್‍ಗಳೆಂ

ದು ಗುರುತಿಸಲಾಗುತ್ತಿದೆ.

 

 

 

 

ಸ್ಥಳೀಯ ಪ್ರಸಾರವನ್ನು ಇನ್ನೂ ಬಲಪಡಿಸುವ ಉದ್ದೇಶದಿಂದ 1980ರ ದಶಕದಲ್ಲಿ ಆಕಾಶವಾಣಿ ದೇಶಾದ್ಯಂತ ಸ್ಥಳೀಯ ಬಾನುಲಿ ಕೇಂದ್ರಗಳನ್ನು ಸ್ಥಾಪಿಸುವ ಮಹತ್ವದ, ಶ್ಲಾಘನೀಯ ನಿರ್ಧಾರ ತೆಗೆದುಕೊಂಡಿತು. ಅದಕ್ಕನುಗುಣವಾಗಿ 76 ಸ್ಥಳೀಯ ಕೇಂದ್ರಗಳು ಅಸ್ತಿತ್ವಕ್ಕೆ ಬಂದವು. ಕರ್ನಾಟಕದಲ್ಲಿ ಚಿತ್ರದುರ್ಗ, ಹೊಸಪೇಟೆ, ರಾಯಚೂರು, ಕಾರವಾರ, ಹಾಸನ, ಮಡಿಕೇರಿ, ವಿಜಯಪುರ ಹಾಗೂ ಬಳ್ಳಾರಿ ಇಂತಹ ಸ್ಥಳೀಯ ಆಕಾಶವಾಣಿ ಕೇಂದ್ರಗಳು. ಇವುಗಳ ಪ್ರಸಾರ ವ್ಯಾಪ್ತಿ ಆಯಾ ಜಿಲ್ಲೆಗಳಿಗೇ ಸೀಮಿತ. ಸ್ಥಳೀಯ ಜನರ ಅಗತ್ಯ, ಸಮಸ್ಯೆಗಳಿಗೆ ಪ್ರಥಮ ಆದ್ಯತೆ. ಸ್ಥಳೀಯ ಪ್ರತಿಭೆಗಳಿಗೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ, ದ್ವಿಮುಖ ಸಂವಹನ, ಹೊರಾಂಗಣ ಧ್ವನಿಮುದ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ವಿಕೇಂದ್ರೀಕೃತ ಸ್ಥಳೀಯ ಪ್ರಸಾರದ ಉನ್ನತ ಉದ್ದೇಶವಾಗಿದ್ದವು.

 

ಸ್ಥಳೀಯ ಕಲಾವಿದರಿಗೆ ಪೆÇ್ರೀತ್ಸಾಹ

ಶಾಸ್ತ್ರೀಯ ಹಾಗೂ ಜನಪದ ಸಂಗೀತವನ್ನು ಉಳಿಸಿ ಬೆಳೆಸುವಲ್ಲಿ ಆಕಾಶವಾಣಿಯ ಪಾತ್ರ ಮಹತ್ತರದಾದದ್ದು. ಆಕಾಶವಾಣಿ 

ಕೇಂದ್ರಗಳು ತಮ್ಮ ಕೇಂದ್ರಗಳ ಪರಿಮಿತಿಯಲ್ಲಿ ಬರುವ ಸಂಗೀತ, ನಾಟಕ ಪ್ರತಿಭೆಗಳಿಗೆ ಧ್ವನಿಪರೀಕ್ಷೆ ನಡೆಸಿ, ಉತ್ತೀರ್ಣರಾದ ಕ

ಲಾವಿದರಿಗೆ ನಿಯಮಿತವಾಗಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸುತ್ತವೆ. 500ಕ್ಕೂ ಹೆಚ್ಚು ಜನಪದ ತಂಡಗಳ ಮೂರು ಸಾವಿರಕ್ಕೂ ಹೆಚ್ಚು ಅನುಮೋದಿತ ಕಲಾವಿದರನ್ನು ಹೊಂದಿರುವ ಆಕಾಶವಾಣಿ ಧಾರವಾಡ ಸಂಗೀತದ ಕಣಜವಾಗಿದೆ.

ಇದೇ ರೀತಿ ದೇಶದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಸಾವಿರಾರು ಸಂಗೀತ ಕಲಾವಿದರು ಸಂಗೀತ ಕಾರ್ಯಕ್ರಮಗಳಲ್ಲಿ, ನಾಟಕ ಕಲಾವಿದರು ನಿಲಯಗಳಿಂದ ಪ್ರಸಾರವಾಗುವ ನಾಟಕಗಳಲ್ಲಿ ಭಾಗವಹಿಸುತ್ತಿದ್ದಾರೆ. ಆಕಾಶವಾಣಿ ತನ್ನ 55 ಸಾವಿರಕ್ಕೂ ಹೆಚ್ಚು ಸಂಗೀತ ಕಲಾವಿದರಿಗೆ ಒಂದು ಬೃಹತ್ ವೇದಿಕೆಯನ್ನೊದಗಿಸಿದೆ.  ವಿಕೇಂದ್ರೀಕೃತ ಪ್ರಸಾರದಿಂದಲೇ ಇಷ್ಟೊಂದು ಕಲಾವಿದರು, ಅನುಮೋದಿತ ಕಲಾವಿದರಾಗಲು, ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಯಿತು ಎನ್ನುವುದರಲ್ಲಿ ಸಂದೇಹವಿಲ್ಲ.

ಬಡತನ, ಗ್ರಾಮೀಣ ಹಿನ್ನೆಲೆಯಿಂದ ಬಂದ ಜನಪದ ಕಲಾವಿದರು ಕೇಂದ್ರೀಕೃತ ಪ್ರಸಾರದಲ್ಲಿ ಅವಕಾಶ ಪಡೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ದೇಶಾದ್ಯಂತ ಆಕಾಶವಾಣಿ ಕೇಂದ್ರಗಳು ಸಾವಿರಾರು ಕಲಾವಿದರ ಸಂಗೀತ, ನಾಟಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಅವುಗಳ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿ, ಅವರು ಬದುಕು ಕಟ್ಟಿಕೊಳ್ಳುವಂತೆ ಮಾಡಿವೆ.

ಹಸಿರು ಕ್ರಾಂತಿಗೆ ಅನನ್ಯ ಕೊಡುಗೆ

ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಆಕಾಶವಾಣಿಯ ಕೊಡುಗೆ ಅಪೂರ್ವವಾಗಿದೆ. 1965ಕ್ಕಿಂತ ಮುನ್ನ ಎಲ್ಲ ಕೇಂದ್ರಗಳಿಂದ ಕೃಷಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಅದೊಂದು ಕೇಂದ್ರೀಕೃತ ಪ್ರಸಾರವಾಗಿತ್ತು. ಕರ್ನಾಟಕದಲ್ಲಿ ಬೆಂಗಳೂರು ಆಕಾಶವಾಣಿಯಿಂದ ಮಾತ್ರ ಗ್ರಾಮೀಣ ಜನರಿಗಾಗಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಅವುಗಳನ್ನು ಧಾರವಾಡ ಆಕಾಶವಾಣಿ ಸಹಪ್ರಸಾರ ಮಾಡುತ್ತಿತ್ತು. ಆ ಪ್ರಸಾರಕ್ಕೆ ಸ್ಥಳೀಯ ಕೇಳುಗರ ಪ್ರತಿಕ್ರಿಯೆ ನೀರಸವಾಗಿತ್ತು. ಅವರಿಗೆ ಬೇಕಿಲ್ಲದ, ತಿಳಿಯದ ವಿಷಯಗಳನ್ನು, ಅವರಿಗೆ ಅಪರಿಚಿತವಾದ ಭಾಷಾ ಶೈಲಿಯಲ್ಲಿ ಪ್ರಸಾರಮಾಡಲಾಗುತ್ತಿತ್ತು.

1965ರಿಂದ ಆಕಾಶವಾಣಿಯಲ್ಲಿ ಕೃಷಿ ಹಾಗೂ ಗ್ರಾಮೀಣ ಪ್ರಸಾರ ಹೊಸತನವನ್ನು ಪಡೆದುಕೊಂಡು ಗ್ರಾಮೀಣ ಜನತೆಗೆ ಕೃಷಿ ಮಾಹಿತಿ, ಶಿಕ್ಷಣ ಜೊತೆಗೆ ಮನರಂಜನೆಯನ್ನು ಒದಗಿಸುವ ಮೂಲ ಉದ್ದೇಶದಿಂದ `ಹೊಲ-ಮನೆ’ ವಿಭಾಗಗಳನ್ನು ಸ್ಥಾಪಿಸಲಾಯಿತು. ಇಂದು ದೇಶದ ಬಹುತೇಕ ಆಕಾಶವಾಣಿ ಕೇಂದ್ರಗಳಲ್ಲಿ ಹೊಲ-ಮನೆ ವಿಭಾಗದಡಿ ಕೃಷಿರಂಗ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. 1970-80ರ ದಶಕಗಳು ಗ್ರಾಮೀಣ ಹಾಗೂ ಕೃಷಿ ಕಾರ್ಯಕ್ರಮಗಳ ಯಶಸ್ವಿ ಜನಪ್ರಿಯ ಪ್ರಸಾರದ ಪರ್ವಕಾಲ. ಹಸಿರು ಕ್ರಾಂತಿಗೆ, ನಂತರದ ಕೃಷಿ- ಗ್ರಾಮೀಣಾಭಿವೃದ್ಧಿಗೆ ಆಕಾಶವಾಣಿ ನೀಡಿದ ಕೊಡುಗೆ ಗಮನಾರ್ಹ. ಇದೊಂದು ಸ್ಥಳೀಯ ವಿಕೇಂದ್ರೀಕೃತ ಪ್ರಸಾರದ ಅಪ್ಪಟ ಯಶೋಗಾಥೆಗೆ ಒಳ್ಳೆಯ ನಿದರ್ಶನವಾಗಿದೆ.

ವಿಶೇಷ ಶ್ರೋತೃ ಕಾರ್ಯಕ್ರಮ ಪ್ರಸಾರ ಆಕಾಶವಾಣಿಯ ವೈಶಿಷ್ಟ್ಯವಾಗಿದೆ. ಆಕಾಶವಾಣಿ ಅನೇಕ ವಿಶೇಷ ಶ್ರೋತೃಗಳ ಗುಂಪುಗಳನ್ನು ಸೃಷ್ಟಿಸಿಕೊಂಡು ಅವರವರ ಅವಶ್ಯಕತೆಗಳಿಗೆ ಅನುಗುಣವಾಗಿ, ಅವರಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕೃಷಿ ಹಾಗೂ ಗ್ರಾಮೀಣ ಜನರಿಗೆ, ಯುವಜನರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಕೈಗಾರಿಕಾ ಕಾರ್ಮಿಕರಿಗೆ, ಸೈನಿಕರಿಗೆ, ಬುಡಕಟ್ಟು ಜನರಿಗೆ, ಭಾಷಾ ಅಲ್ಪಸಂಖ್ಯಾತರಿಗೆ ಪ್ರಸಾರಗೊಳ್ಳುವ ಕಾರ್ಯಕ್ರಮಗಳು ವಿಶೇಷ ಶ್ರೋತೃ ಕಾರ್ಯಕ್ರಮಗಳಾಗಿವೆ. ಈ ವಿಶಿಷ್ಟ ಶ್ರೋತೃವೃಂದದ ಆಸೆ-ಆಕಾಂಕ್ಷೆಗಳಿಗೆ, ಅವರ ಪ್ರತಿಭೆಯ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದೇ ಈ ವಿಶೇಷ ಕಾರ್ಯಕ್ರಮದ ಮುಖ್ಯ ಉದ್ದೇಶ.

ಸಾಮಾನ್ಯ ಕಾರ್ಯಕ್ರಮಗಳಲ್ಲಿ ಮೂಡಿಬರುವ ಎಲ್ಲ ಪ್ರಕಾರಗಳನ್ನೊಳಗೊಂಡ ವಿಶಿಷ್ಟ ಶ್ರೋತೃ ಕಾರ್ಯಕ್ರಮಗಳು `ಮರಿ ನಿಲಯ’ವೇ ಆಗಿರುತ್ತವೆ. ಇವೆಲ್ಲ ಕಾರ್ಯಕ್ರಮಗಳು ಆಯಾ ಕೇಂದ್ರದಲ್ಲೇ ನಿರ್ಮಾಣಗೊಂಡು, ಅಲ್ಲಿಂದಲೇ ಪ್ರಸಾರವಾದಾಗ ಮಾತ್ರ ಅವುಗಳ ಪ್ರಸಾರ ಉದ್ದೇಶ ಈಡೇರಲು ಸಾಧ್ಯ. ಇಂತಹ ವಿಶೇಷ ಶ್ರೋತೃ ಕಾರ್ಯಕ್ರಮಗಳನ್ನು ಪ್ರಧಾನ ಕೇಂದ್ರದಿಂದ ಸಹಪ್ರಸಾರ ಮಾಡಿದರೆ ಸ್ಥಳೀಯ ಶ್ರೋತೃಗಳು ಅವಕಾಶಗಳಿಂದ ವಂಚಿತರಾಗುತ್ತಾರೆ. ಪ್ರಸಾರ ಅರ್ಥಹೀನವಾಗುತ್ತದೆ.

ಜನರ ನಿರ್ಲಕ್ಷ್ಯ

ನಮ್ಮ ದೇಶದಲ್ಲಿ ಬಾನುಲಿ ಪ್ರಸಾರ ಆರಂಭಗೊಂಡು ಎಂಟು ದಶಕಗಳು ಸಂದರೂ ಅದರ ಅಗಾಧ ಶಕ್ತಿಯ ಸಂಪೂರ್ಣ, ಸಮರ್ಪಕ ಬಳಕೆ ಆಗದೆ ಇರುವುದು ದುರದೃಷ್ಟಕರ. ದೇಶದ ಅಭಿವೃದ್ಧಿಯಲ್ಲಿ ಆಕಾಶವಾಣಿಯ ಕೊಡುಗೆಗಳಿಗೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಬೃಹತ್ ಪ್ರಸಾರ ಜಾಲ ಹೊಂದಿ, ಸಮರ್ಪಕ ಸಾರ್ವಜನಿಕ ಸೇವಾ ಪ್ರಸಾರ ಹಾಗೂ ವಿಕೇಂದ್ರೀಕೃತ ಪ್ರಸಾರದತ್ತ ದಾಪುಗಾಲು ಹಾಕಿರುವ ಆಕಾಶವಾಣಿ, ಪ್ರಸಾರ ಭಾರತಿಯ ಹಾಗೆಯೇ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದೇ ಹೇಳಬೇಕಾಗುತ್ತದೆ.

ಇಂತಹ ಪ್ರಭಾವಶಾಲಿ ವಿಕೇಂದ್ರೀಕೃತ ಪ್ರಸಾರಕ್ಕೆ ಕಾರಣವಾದ ಆಕಾಶವಾಣಿ, ಪ್ರಸಾರ ಭಾರತಿಯ ತಪ್ಪು ನಿರ್ಧಾರ, ಅಧಿಕಾರಶಾಹಿ ನಿರ್ಲಕ್ಷ್ಯದಿಂದ ಕೇಂದ್ರೀಕೃತ ಪ್ರಸಾರದತ್ತ ಸಾಗುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಇದರಿಂದ ಹಿನ್ನಡೆಯೇ ಆಗಿದೆ.

ಆಕಾಶವಾಣಿ ನಮ್ಮ ದೇಶಕ್ಕೆ ಅನಿವಾರ್ಯ. ಅದನ್ನು ಉಳಿಸಿ, ಅದರ ಮೂಲ ಉದ್ದೇಶ ಈಡೇರಿಸುವ ಕೆಲಸವಾಗಬೇಕಿದೆ. ಈ ಜವಾಬ್ದಾರಿ ಯಾರದು? ಪ್ರಸಾರ ಭಾರತಿಯದ್ದೇನೋ ನಿಜ. ಅದಕ್ಕೆ ಮಿಗಿಲಾಗಿ ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಷ್ಟೇ ಅಲ್ಲ, ಹಕ್ಕು ಕೂಡ. ಹೀಗಾದಾಗ ಮಾತ್ರ ಆಕಾಶವಾಣಿಯ ಅಗಾಧ ಶಕ್ತಿ, ಸಾಮಥ್ರ್ಯಗಳ ಸಮಗ್ರ ಬಳಕೆಯಾದೀತು.

*ಲೇಖಕರು ಆಕಾಶವಾಣಿಯ ನಿಲಯದ ನಿರ್ದೇಶಕರು (ವಿಶ್ರಾಂತ); ಆಕಾಶವಾಣಿ-ಜನಮಾಧ್ಯಮ, ರೇಡಿಯೋ ಲೋಕ, ಕೇಳುವ ಕೌತುಕ, ಬಾನುಲಿದ ಬೇಂದ್ರೆ ಬೆರಗು ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ಧಾರವಾಡದಲ್ಲಿ ವಾಸ.

Leave a Reply

Your email address will not be published.