ಆಕ್ಟ್-1978: ಇದು ನಮ್ಮದೇ ಕಥೆ!

-ಶರೀಫ್ ಕಾಡುಮಠ

ಲಾಕ್ ಡೌನ್ ಬಳಿಕ ಥಿಯೇಟರಿನಲ್ಲಿ ಬಿಡುಗಡೆಗೊಂಡ ಮೊತ್ತಮೊದಲ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ ಆಕ್ಟ್-1978. ಇದು ಸಾಮಾಜಿಕ ವ್ಯವಸ್ಥೆಗೆ, ಅದನ್ನು ಹಾಳುಗೆಡವಿದ ಅಧಿಕಾರಿಗಳ, ರಾಜಕೀಯ ನಾಯಕರ ಮುಖಕ್ಕೆ ಕನ್ನಡಿ ಹಿಡಿಯುತ್ತದೆ.

ದೇಹಕ್ಕೆ ಕಟ್ಟಿಕೊಂಡ ಆತ್ಮಾಹುತಿ ಬಾಂಬ್, ಒಂದು ಕೈಯಲ್ಲಿ ಪಿಸ್ತೂಲ್, ಇನ್ನೊಂದು ಕೈಯಲ್ಲಿ ವಾಕಿಟಾಕಿ ಹಿಡಿದು ಕುರ್ಚಿಯಲ್ಲಿ ಕೂತ ಆಕೆಯ ಮುಂದೆ ನೆಲದಲ್ಲಿ ಅಲುಗದೆ ಮುದುಡಿ ಕೂತವರೆಲ್ಲ ಸರ್ಕಾರಿ ಕಚೇರಿ ಉದ್ಯೋಗಿಗಳು… ಕ್ಷಣಕ್ಷಣವೂ ಕೌತುಕ, ಆತಂಕ, ಈಗೇನಾಗುತ್ತದೋ ಏನೋ ಎಂಬ ಅಸಾಧ್ಯ ಕುತೂಹಲ… ಎದೆಬಡಿತ ಹೆಚ್ಚಿಸುವ ಸೂಕ್ತ, ಸೂಕ್ಷ÷್ಮ ಸಂಗೀತ… ಆಕೆಯ ಕೈಯ ಗನ್ನು, ಕಣ್ಣ ನೋಟ ಎತ್ತ ಸಾಗುತ್ತದೆ ಎಂದು ನೋಡನೋಡುತ್ತಲೇ ಸೀಟಿನ ತುದಿ ತಲುಪಿರುತ್ತೀರಿ ನೀವು!

ಮಂಸೋರೆ ಎಂಬ ಯಶಸ್ವಿ ನಿರ್ದೇಶಕ ಆಕ್ಟ್-1978 ಚಿತ್ರವನ್ನು ಕಟ್ಟಿಕೊಟ್ಟ ಬಗೆಯಿದು. ಲಾಕ್ ಡೌನ್ ಬಳಿಕ ಥಿಯೇಟರಿನಲ್ಲಿ ಬಿಡುಗಡೆಗೊಂಡ ಮೊತ್ತ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಹೊಂದಿರುವ ಆಕ್ಟ್-1978, ಸಾಮಾಜಿಕ ವ್ಯವಸ್ಥೆಗೆ, ಅದನ್ನು ಹಾಳುಗೆಡವಿದ ಅಧಿಕಾರಿಗಳ, ರಾಜಕೀಯ ನಾಯಕರ ಮುಖಕ್ಕೆ ಕನ್ನಡಿ ಹಿಡಿದ ಸಿನಿಮಾ. ಜನಸಾಮಾನ್ಯರ ಸಮಸ್ಯೆಗಳನ್ನೇ ಜೀವಂತವಾಗಿರಿಸಿಕೊAಡು ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳು ವಿಳಂಬವಾಗುತ್ತಲೇ ದಿನ, ತಿಂಗಳು ವರ್ಷಗಳೇ ಕಳೆಯುವ ನಿಜ ಚಿತ್ರಣವನ್ನು ತೆರೆ ಮೇಲೆ ತೋರಿಸಿದ ರೀತಿ ಪರಿಣಾಮಕಾರಿ.

1978ರ ಕರ್ನಾಟಕ ಸಿವಿಲ್ ಸರ್ವಿಸ್ ಆಕ್ಟ್, ಸರ್ಕಾರಿ ಕೆಲಸದಲ್ಲಿರುವವರ ವಿರುದ್ಧ ಏಕಾಏಕಿ ಕ್ರಮ ಜರುಗಿಸಲು ಅಥವಾ ಕರ್ತವ್ಯದ ನಿರ್ಲಕ್ಷ÷್ಯದ ಕಾರಣದಿಂದ ಅವರನ್ನು ಕೆಲಸದಿಂದ ತಕ್ಷಣ ಕಿತ್ತುಹಾಕಲು ಅವಕಾಶ ನೀಡದೆ ಅವರಿಗೆ ರಕ್ಷಣೆ ನೀಡುತ್ತದೆ. ಇದೇ ಒಂದು ಕಾಯ್ದೆಯನ್ನು ಮುಂದಿಟ್ಟುಕೊAಡು ಇಡೀ ಸರ್ಕಾರಿ ವ್ಯವಸ್ಥೆಯ ಅಧಿಕಾರಿಗಳು ಜನರ ಮುಂದೆ ದರ್ಪ ತೋರಿಸುತ್ತಾರೆ ಎನ್ನುವುದು ತೆರೆಮರೆಯ ಸತ್ಯ. ಆದರೆ ಈ ಕಾಯ್ದೆಯ ಒಂದೆಡೆ ಇಂತಹ ತಡೆಯನ್ನು ಮೀರಿಯೂ ಒಂದು ನಿರ್ಧಾರವನ್ನು ಕೈಗೊಳ್ಳಬಹುದು ಎಂಬ ವಿಷಯವನ್ನು ಮುನ್ನೆಲೆಗೆ ತಂದಿದ್ದು ಈ ಸಿನಿಮಾ. ಈ ಕಾರಣಕ್ಕಾಗಿಯೇ ಆಕ್ಟ್-1978 ಸಿನಿಮಾ ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಒಳಗೊಳಗೇ ಬಿಸಿ ಮುಟ್ಟಿಸಿರುವುದು ವಾಸ್ತವ ಎನ್ನಬಹುದು.

ಕಥಾನಾಯಕಿ ಗೀತಾಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟಿ ಯಜ್ಞಾ ಶೆಟ್ಟಿ. ಯಜ್ಞಾ ಅಭಿನಯ, ಬಹುಷಃ ಆ ಪಾತ್ರಕ್ಕೆ ಅವರ ಹೊರತು ಬೇರೆ ನಟಿಯರನ್ನು ಊಹಿಸುವುದೂ ಕಷ್ಟ ಎನ್ನುವ ಮಟ್ಟಿಗೆ ಪ್ರಬುದ್ಧವಾಗಿದೆ.

ತನ್ನ ಅವಶ್ಯಕತೆಗಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ, ಅವಮಾನ ಎದುರಿಸಿ ದಿನಗಳೆಯುತ್ತಿದ್ದ ಗರ್ಭಿಣಿಯೊಬ್ಬಳು ಒಂದು ದಿನ ಇಡೀ ವ್ಯವಸ್ಥೆಯನ್ನು ತನ್ನ ಕಾಲಬುಡದಲ್ಲಿ ಕೂರಿಸುವ ರೋಚಕ ಕಥಾನಕ, ಕೊನೆಯವರೆಗೂ ಕುತೂಹಲದಿಂದಲೇ ಸಾಗುತ್ತ ಕಣ್ಣು ತೇವಗೊಳಿಸುವುದು ನಿಜ.

ಆಕ್ಟ್-1978 ಸಿನಿಮಾ, ಆರಂಭದಿAದಲೇ ಗಂಭೀರತೆ ಮತ್ತು ಹಾಸ್ಯವನ್ನು ಜೊತೆ ಜೊತೆಯಾಗಿಸುತ್ತಲೇ ಸಾಗಿದೆ. ಆದರೆ ಹಾಸ್ಯ ಎಲ್ಲೂ ಗಂಭೀರತೆಗೆ ಅಡ್ಡಿಬಂದಿಲ್ಲ ಎನ್ನುವುದೇ ವಿಶೇಷ. ಒಂದು ಸಿನಿಮಾದ ಕಥೆ ಹೆಣೆಯುವಾಗ ಗಮನಿಸಬೇಕಾದ ಬಹಳ ಸೂಕ್ಷ÷್ಮ ಸಂಗತಿಗಳಲ್ಲಿ ಇದೂ ಕೂಡ ಒಂದು

ಗಂಭೀರ ಕಥೆಯೊಳಗೆ ಹಾಸ್ಯವನ್ನು ತುರುಕಿದರೆ ಪ್ರೇಕ್ಷಕ ಅದನ್ನು ಸುಲಭವಾಗಿ ಬೇರ್ಪಡಿಸಬಲ್ಲ. ಗಂಭೀರತೆಯ ಜೊತೆಜೊತೆಗೆ ಹಾಸ್ಯವನ್ನು ಮಿಳಿತಗೊಳಿಸುವುದೇ ಒಂದು ಸವಾಲಿನ ಕೆಲಸ. ಹಾಸ್ಯವಿಲ್ಲದೆ ಬರಿ ಗಂಭೀರತೆಯಿAದ ಕೂಡಿದ ಸಿನಿಮಾ ಮಾಡಬಾರದೆಂದಿಲ್ಲ. ಆದರೆ ಪ್ರೇಕ್ಷಕನಿಗೆ ಅದು ಬೇಕಿಲ್ಲ ಎನ್ನುವಷ್ಟು ನಿರ್ಲಕ್ಷ÷್ಯ. ಆಕ್ಟ್ -1978 ಚಿತ್ರದಲ್ಲಿ ಹಾಸ್ಯದ ಧಾಟಿ, ಕಥೆಯ ಗಂಭೀರತೆ, ಸಂದೇಶದ ಗಾಢತೆ ಎಲ್ಲವೂ ಪ್ರೇಕ್ಷಕನನ್ನು ಗಟ್ಟಿಯಾಗಿ ಕೂರಿಸಿಬಿಡುತ್ತದೆ.

ನಯಾಪೈಸೆಯ ಲಂಚ ಕೊಡುವುದಕ್ಕೂ ಸಿದ್ಧವಿರದ ಗೀತಾಳ ನಿರ್ಧಾರವೇ ಆಕೆಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಅಲೆದಾಡುವಂತೆ ಮಾಡುತ್ತದೆ. ಲಂಚ ನೀಡುವಂತೆ ಹಲವರು ಸಲಹೆ ನೀಡಿದರೂ ಆಕೆ ತನ್ನ ನಿರ್ಧಾರ ಬದಲಿಸುವುದಿಲ್ಲ. ಆಕೆಯ ಜೊತೆಗೊಬ್ಬ ನ್ಯಾಯಕ್ಕಾಗಿ ಹೋರಾಡುತ್ತ ಬಂದು, ಕೊನೆಗೆ ಮಾತೇ ಬಿಟ್ಟು ಮೌನವಾಗಿರುವ ವೃದ್ಧ (ಬಿ.ಸುರೇಶ) ಕೂಡಾ ಇದ್ದಾನೆ. ಗೀತಾ ತೆಕ್ಕೆಗೆ ತೆಗೆದುಕೊಂಡ ಆ ಕಚೇರಿಗೆ ಸಮೀಪದಲ್ಲೇ ಗಾಂಧಿ ವೇಷಧಾರಿ ವೃದ್ಧನೊಬ್ಬ ಕುಳಿತುಕೊಂಡು ಮೌನ ಪ್ರತಿಭಟನೆ ಶುರುಮಾಡಿ ಅದಾಗಲೇ ವರ್ಷವಾಗುತ್ತ ಬಂದಿತ್ತು. ಅತ್ತಿತ್ತ ಹೋಗುವವರೆಲ್ಲ ಆತನನ್ನು ಪ್ರತಿಮೆ ಎಂದೇ ಭಾವಿಸಿ ಮುಂದೆ ಸಾಗಿದಂತೆ ಬಿಂಬಿಸಲಾಗಿದೆ.

ಒಂದೆಡೆ ಪೊಲೀಸ್ ಅಧಿಕಾರಿ (ಪ್ರಮೋದ್ ಶೆಟ್ಟಿ) ಗೀತಾಗೆ, ತಾನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುವಾಗ, `ಈ ಹೊತ್ತಿಗೆ ಇದೇ ಸರಿ’ ಎಂದು ಗೀತಾ ಹೇಳುತ್ತಾಳೆ. ಈ ಮಾತು ಕ್ರಾಂತಿಕಾರಕ ಬದಲಾವಣೆಯನ್ನು ಬಯಸುವುದರ ಜೊತೆಜೊತೆಗೆ ಪರೋಕ್ಷವಾಗಿ ಮೌನ ಪ್ರತಿಭಟನೆಯಿಂದ ನ್ಯಾಯ ಸುಲಭವಲ್ಲ ಎಂಬುದನ್ನೂ ಸೂಚಿಸಿದಂತಿದೆ. ಈ ಸಂಭಾಷಣೆಯ ಮೂಲಕವೇ ಅಲ್ಲಿನ ದೃಶ್ಯಗಳು, ಗೀತಾಳ ಪಾತ್ರ ಭಗತ್ ಸಿಂಗ್‌ನನ್ನು ನೆನಪಿಸುತ್ತದೆ. ನಿದ್ದೆಯಲ್ಲಿರುವ ಸರ್ಕಾರವನ್ನು ಬಡಿದೆಚ್ಚರಿಸಲಿಕ್ಕಾಗಿ ಒಂದು ಬೃಹತ್ ಸದ್ದಿನ ಅಗತ್ಯವಿದೆ ಎಂದ ಭಗತ್ ಸಿಂಗ್, ಬಹುಷಃ ಗೀತಾಳ ಪಾತ್ರಕ್ಕೆ ಮಂಸೋರೆ ಅವರಿಗೆ ಪ್ರೇರಣೆಯಾಗಿರಲೂಬಹುದು.

ಈ ನಡುವೆ ಸುದ್ದಿ ವಾಹಿನಿಗಳ ದೊಂಬರಾಟವನ್ನೂ ಈ ಚಿತ್ರ ಚೆನ್ನಾಗಿ ಬಿಂಬಿಸಿದೆ. ಸುದ್ದಿಗಾಗಿ ಒತ್ತಡ ಹೇರುವ ಕಚೇರಿಯವರು, ಈ ಒತ್ತಡಕ್ಕೆ ಸಿಕ್ಕುಹಾಕಿಕೊಂಡು ಏನೇನೋ ಕಥೆ ಕಟ್ಟಿ, ಗೀತಾಳನ್ನು ನಕ್ಸಲ್ ಹಿನ್ನೆಲೆಯಿಂದ ಬಂದವಳು ಎನ್ನುತ್ತಾ ಕ್ಯಾಮೆರಾ ಮುಂದೆ ಅರಚುವ ಪ್ರತಿನಿಧಿ, ಪ್ರಸ್ತುತ ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆಯನ್ನು ಹುಡುಕಾಡದೆ ಬ್ರೇಕಿಂಗ್ ನ್ಯೂಸ್‌ನ ಹುಚ್ಚಿನಲ್ಲಿ ಸುಳ್ಳು ಸುದ್ದಿ ಹರಡುವ ಪರಿಸ್ಥಿತಿಯನ್ನು ಚೆನ್ನಾಗಿ ಚಿತ್ರಿಸಿದೆ.

ಗೃಹಸಚಿವರ ಪಾತ್ರದಲ್ಲಿ ಅಚ್ಯುತ್ ಕುಮಾರ್, ಮುಖ್ಯಮಂತ್ರಿಯಾಗಿ ಅವಿನಾಶ್, ಅಡ್ವೊಕೇಟ್ ಆಗಿ ಹಿರಿಯ ನಟ ದತ್ತಣ್ಣ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಯಾವುದೇ ಸಂಭಾಷಣೆಯೇ ಇಲ್ಲದೆ, ನಟ ಬಿ.ಸುರೇಶ ತಮ್ಮ ಪಾತ್ರವನ್ನು ನಿಭಾಯಿಸಿದ ರೀತಿ ವಿಶೇಷ. ಅಲ್ಲದೆ ಸಹನಟ ನಟಿಯರಾಗಿ ಕಾಣಿಸಿಕೊಂಡ ಎಲ್ಲರೂ ಲೀಲಾಜಾಲವಾಗಿ ನಟಿಸಿರುವುದು ಚಿತ್ರದ ಹರಿವಿಗೆ ತಕ್ಕನಾಗಿದೆ. ಹಾಸ್ಯನಟನಾಗಿ ಬೆಂಜಮಿನ್ ಪಾತ್ರ ನಿಭಾಯಿಸಿದ ರಘು ಶಿವಮೊಗ್ಗ ಪ್ರೇಕ್ಷಕರ ಮನಗೆದ್ದಿದ್ದಾರೆ. ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅಷ್ಟೊಂದು ಸೂಕ್ತ ಎನಿಸಿಲ್ಲ. ಅಲ್ಲದೆ ಸಂಚಾರಿ ವಿಜಯ್ ಅವರಿಗೆ ಸಣ್ಣ ಪಾತ್ರವೊಂದನ್ನು ಒದಗಿಸಲಾಗಿದೆ. ಇವರಿಬ್ಬರ ಪಾತ್ರಗಳನ್ನು ಅದಲು ಬದಲು ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಚಿತ್ರದ ಕಥೆ ರಚಿಸಿದವರು ಟಿ.ಕೆ.ದಯಾನಂದ್ ಹಾಗೂ ವೀರೇಂದ್ರ ಮಲ್ಲಣ್ಣ. ಕಥೆಯ ಗಟ್ಟಿತನ ಹಾಗೂ ನಿರ್ದೇಶನದ ಬಿಗಿ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿಸಿದೆ. ಜೊತೆಗೆ ಸತ್ಯ ಹೆಗಡೆ ಅವರ ಬೆರಗುಗೊಳಿಸುವ ಸಿನಿಮಾಟೊಗ್ರಫಿ, ಕ್ಷಣ ಕ್ಷಣಕ್ಕೂ ಪ್ರೇಕ್ಷಕರನ್ನು ಎಚ್ಚರಿಸುವ, ಸಂವೇದನೆಯನ್ನು ಸೂಕ್ಷ÷್ಮವಾಗಿ ತಲುಪಿಸುವ ರೊನಾಡ ಬಕ್ಕೇಶ್ ಅವರ ಸಂಗೀತ ಈ ಸಿನಿಮಾದ ಮೆರುಗು.

ಒಂದಿಷ್ಟು ಭರವಸೆ, ಬಹಳಷ್ಟು ಆತಂಕ ಹೊತ್ತುಕೊಂಡು ಸ್ಟಾರ್ ನಟನಿಲ್ಲದ ಅಥವಾ ನಾಯಕನೇ ಇಲ್ಲದ, ನಾಯಕಿಯೊಬ್ಬಳನ್ನು ಮುಖ್ಯವಾಗಿಸಿಕೊಂಡ ಸಿನಿಮಾವನ್ನು ಈ ಕೇಡುಗಾಲದಲ್ಲಿ ಥಿಯೇಟರಿನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಲೂ ಎದೆಗಾರಿಕೆ ಬೇಕು. ಅಂತಹ ಎದೆಗಾರಿಕೆಯನ್ನು ತೋರಿದ್ದು ನಿರ್ಮಾಪಕ ದೇವರಾಜ್ ಆರ್.

ಈ ಸಿನಿಮಾದ ಆರಂಭದ ದೃಶ್ಯಗಳು ಮನಸೆಳೆಯುತ್ತವೆ. ಅದಕ್ಕೆ ತಕ್ಕಂತೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಹಾಡು ಒಂದು ಬಗೆಯ ಸಂಭ್ರಮವನ್ನೇ ಸೃಷ್ಟಿ ಮಾಡುತ್ತದೆ. ವಿಶೇಷ ಎಂದರೆ ಇದಾದ ನಂತರ ಚಿತ್ರದಲ್ಲಿ ಎಲ್ಲಿಯೂ ಹಾಡು ಕಾಣಿಸುವುದಿಲ್ಲ. ಹಾಡು, ನೃತ್ಯ, ಫೈಟಿಂಗ್ ಇವ್ಯಾವ ರೆಕ್ಕೆಗಳೂ ಇಲ್ಲದೆ ಚಂದನವನದ ಆಗಸದಲ್ಲಿ ಈ ಸಿನಿಮಾ ಹಾರಿದ ಬಗೆ ಸ್ಫೂರ್ತಿದಾಯಕ.

ಕಲಾತ್ಮಕ ಸಿನಿಮಾ ಎಂಬ ಪ್ರಕಾರವನ್ನು ಬದಿಗೆ ಸರಿಸಿ ಬ್ರಿಡ್ಜ್ ಸಿನಿಮಾಗಳ ಕಡೆಗೆ ನಿರ್ದೇಶಕ ಮಂಸೋರೆ ಹೆಚ್ಚು ಗಮನ ಹರಿಸಿದ್ದು, ಆಕ್ಟ್-1978 ಸಿನಿಮಾದಲ್ಲಿ ಗಮನಿಸಬಹುದು. ಈ ಚಿತ್ರದ ಯಶಸ್ಸಿನ ಹಿಂದೆಯೇ ಮಂಸೋರೆ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿರುವುದು ವಿಶೇಷ. ತಮ್ಮ ಚಿತ್ರಕ್ಕೆ ಅಭಿಮಾನಿಗಳಿಂದ ದೊರೆತ ಬೆಂಬಲ ಆವರಿಗೆ ಸ್ಫೂರ್ತಿ. ಹಾಗೆಯೇ ಮಂಸೋರೆ ಘೋಷಿಸಿದ ಮುಂದಿನ ಚಿತ್ರ `ಅಬ್ಬಕ್ಕ’ ಚಿತ್ರದ ಪೋಸ್ಟರ್ ಕೂಡಾ ಬಹಳ ಕುತೂಹಲ ಹುಟ್ಟಿಸಿದೆ. ತಮ್ಮ ಮೂರು ಸಿನಿಮಾಗಳಲ್ಲಿಯೂ ಮಂಸೋರೆ ಆಯ್ದುಕೊಂಡ ವಿಷಯ ವಸ್ತು ಒಂದಕ್ಕೊAದು ಭಿನ್ನವಾದದ್ದು. ಅಲ್ಲದೆ ಮೂರೂ ಸಿನಿಮಾಗಳಲ್ಲಿ ಸ್ಟಾರ್ ನಟರಿಲ್ಲ. ನಾತಿಚರಾಮಿ, ಆಕ್ಟ್-1978 ಸಿನಿಮಾಗಳಲ್ಲಿ ನಾಯಕಿಯದ್ದೇ ಪ್ರಧಾನ ಪಾತ್ರ. ನಟಿಯರಿಗೆ ಮಂಸೋರೆ ಕೊಟ್ಟ ಸ್ಥಾನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಯರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಮಂಸೋರೆ ಆಯ್ಕೆ ಒಂದು ಮಾದರಿ.

ಹಳ್ಳಿಯ ಸಾಮಾನ್ಯನೊಬ್ಬ ಬೆಂಗಳೂರಿನAತಹ ಬೃಹತ್ ನಗರ ನಡುವೆ ಸಿಕ್ಕು ನಲುಗುವ ನೈಜ ಕಥೆಯನ್ನು ಸಿನಿಮಾವಾಗಿಸಿದ ಮಂಸೋರೆ ಒಬ್ಬ ಸೂಕ್ಷö್ಮ ಮನಸ್ಸಿನ ಸಂವೇದನಾಶೀಲ ವ್ಯಕ್ತಿಯೂ ಹೌದು. ಅವರ ಎರಡನೇ ಚಿತ್ರ, `ನಾತಿಚರಾಮಿ’ಯಲ್ಲಿ ಸ್ತಿçÃವಾದದ ವಸ್ತು ವಿಷಯವನ್ನು ಅವರು ಸ್ಪರ್ಶಿಸಿದ ರೀತಿ ಬೆರಗುಗೊಳಿಸುವಂಥದ್ದು. ಆಕ್ಟ್-1978 ಸಿನಿಮಾ ಬಿಡುಗಡೆಗೂ ಮುನ್ನ ಹಲವಾರು ಪ್ರಯೋಗಶೀಲ ಪ್ರಮೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವ ಮಂಸೋರೆ, ಆ ಮೂಲಕ ಕಾನೂನಿನ ಸರಳ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು. ಲಂಚ, ಭ್ರಷ್ಟಾಚಾರ ಮೋಸಕ್ಕೆ ಸಂಬAಧಿಸಿ ಜನಜಾಗೃತಿಯ ಅಭಿಯಾನದಂತೆ ಈ ಪ್ರಮೋಗಳು ಪರಿಣಾಮ ಬೀರಿದ್ದವು. ಒಟ್ಟಿನಲ್ಲಿ ಆಕ್ಟ್-1978 ಸಿನಿಮಾ ಮಂಸೋರೆ ಅವರನ್ನು `ಜನರ ನಿರ್ದೇಶಕ’ನಾಗಿ ಮಾಡಿದೆ.

ಸಿನಿಮಾ ಬೀರಿದ ಪ್ರಭಾವ

ಆಕ್ಟ್-1978 ಬಿಡುಗಡೆಯಾಗಿ ಒಂದೆರಡು ವಾರಗಳಿಂದ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಓಡುತ್ತಿರುವಾಗಲೇ ಕರ್ನಾಟಕ ರಾಜ್ಯ ಸರ್ಕಾರ ಒಂದು ಸುತ್ತೋಲೆಯನ್ನು ಹೊರಡಿಸಿತು. `ಸರ್ಕಾರಿ ಸೇವೆಯು ಸಾರ್ವಜನಿಕ ಸೇವೆಯಾಗಿರುವುದರಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಗೆ ಬರುವ ಸಾರ್ವಜನಿಕ ರೊಂದಿಗೆ ಅಧಿಕಾರಿಗಳು ಸೌಜನ್ಯ ಯುತವಾಗಿ ಸಮಾಧಾನದಿಂದ ವರ್ತಿಸಬೇಕು ಹಾಗೂ ತಾರತಮ್ಯ ಮಾಡದೆ ಬಂದವರೆಲ್ಲರಿಗೂ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಬೇಕು ಎಂದು ಎಲ್ಲಾ ಸರ್ಕಾರಿ ಇಲಾಖೆ ಸಿಬ್ಬಂದಿ ಅಧಿಕಾರಿಗಳಿಗೆ ಸೂಚಿಸಿದೆ.

ಈ ಬದಲಾವಣೆಗೆ ಕಾರಣವಾಗಿದ್ದು ಆಕ್ಟ್-1978 ಸಿನಿಮಾ ಎಂದು ಈ ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಹೇಳಬಲ್ಲರು. ಆ ಮಟ್ಟಿಗೆ ಸಾರ್ವಜನಿಕರಲ್ಲಿ ಆಕ್ಟ್-1978 ಮೂಡಿಸಿದ ಎಚ್ಚರ ಮತ್ತು ಸರ್ಕಾರಿ ವಲಯಕ್ಕೆ ಬಿಸಿ ತಟ್ಟಿಸಿದ ರೀತಿ ಎರಡೂ ಶೀತಲವಾಗಿಯೇ ವರ್ತಿಸಿದೆ ಎನ್ನಬಹುದು.

ಪ್ರಶಸ್ತಿ ವಿಜೇತ ನಿರ್ದೇಶಕರ ಸವಾಲು

ಮಂಸೋರೆ ಒಬ್ಬ ಯಶಸ್ವಿ ನಿರ್ದೇಶಕ ಎನ್ನುವುದಕ್ಕೆ ಅವರ ಈ ಹಿಂದಿನ- ಹರಿವು, ನಾತಿಚರಾಮಿ- ಎರಡು ಚಿತ್ರಗಳ ಜೊತೆಗೆ ಈ ಸಿನಿಮಾ ಕೂಡ ಸಾಕ್ಷಿ. ಹಿಂದಿನ ಎರಡೂ ಸಿನಿಮಾಗಳು ರಾಷ್ಟç ಪ್ರಶಸ್ತಿ ಪಡೆದವು. ಅದರಲ್ಲೂ ನಾತಿಚರಾಮಿ ಸಿನಿಮಾಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ದಕ್ಕಿತ್ತು. ಈ ಬಗ್ಗೆ ಟೀಕೆ ಕೂಡ ಕೇಳಲಾರಂಭಿಸಿತ್ತು. ಆದರೆ ನಾತಿಚರಾಮಿ ಸಿನಿಮಾದ ಸೂಕ್ಷ÷್ಮಗಳನ್ನು ಗಮನಿಸಿದರೆ ಎಲ್ಲಾ ಪ್ರಶಸ್ತಿಗಳೂ ಅರ್ಹವಾಗಿಯೇ ಲಭಿಸಿದೆ ಎನ್ನುವುದನ್ನು ಅಂದಾಜಿಸಬಹುದು.

ಪ್ರಶಸ್ತಿ ವಿಜೇತ ನಿರ್ದೇಶಕರ ಸಿನಿಮಾ ಎನ್ನುವಾಗ ಹೆಚ್ಚಿನ ನಿರ್ಮಾಪಕರೂ ದೂರ ಉಳಿಯುತ್ತಾರೆ, ಪ್ರೇಕ್ಷಕರೂ ದೂರ ಉಳಿಯುತ್ತಾರೆ. ಈ ಸವಾಲುಗಳನ್ನು ಎದುರಿಸುವುದೇ ನಿರ್ದೇಶಕರಿಗೆ ಮತ್ತೊಂದು ಸವಾಲು. ಆಕ್ಟ್-1978 ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ನಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಮೊದಲೇ ಗಂಭೀರ ಕಥಾವಸ್ತು ಹೊಂದಿರುವ ಸಿನಿಮಾ ಆಗಿರುವುದರಿಂದ, ಅದಕ್ಕೂ ಮುಖ್ಯವಾಗಿ ಲಾಕ್ ಡೌನ್ ಬಳಿಕ ಚೇತರಿಕೆ ಕಾಣುತ್ತಿರುವ ವ್ಯವಸ್ಥೆಯ ನಡುವೆ ಥಿಯೇಟರ್‌ನಲ್ಲಿ ರಿಲೀಸ್ ಮಾಡುವ ಬಗ್ಗೆ ಯೋಚಿಸಿರಲಿಲ್ಲ. ಒಟಿಟಿಯಲ್ಲಿ ಈ ಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ. ಕಾರಣ, ಈ ಚಿತ್ರದಲ್ಲಿ ಯಾವುದೇ ಸ್ಟಾರ್ ನಟ ಇಲ್ಲ. ಇದೇ ಕಾರಣಕ್ಕೆ ಆಕ್ಟ್-1978 ಚಿತ್ರ ಥಿಯೇಟರ್‌ನಲ್ಲಿ ಬಿಡುಗಡೆ ಕಂಡಿತು. ಆ ಮೂಲಕ ಇತರ ಸಿನಿಮಾಗಳ ತಂಡಕ್ಕೂ ಥಿಯೇಟರ್ ರಿಲೀಸ್ ಮಾಡಬಹುದು ಎಂಬ ಸೂಚನೆಯನ್ನು ಕೊಟ್ಟಿತು.

Leave a Reply

Your email address will not be published.