ಆಗ ‘ಮೇಯರ್ ಮುತ್ತಣ್ಣ’ ಈಗ ‘ಮೇಯರ್ ಸೇಟಣ್ಣ’!

ಇಲ್ಲಿನ ಭಾಷೆ, ಸಂಸ್ಕೃತಿ, ಗಡಿ, ಮನುಷ್ಯ ಸಂಬಂಧಗಳಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಇಲ್ಲದವರಿಗೆ ಮೇಯರ್ ಹುದ್ದೆ ದೊರಕಿದರೆ ಯಾರಿಗೆ ಪ್ರಯೋಜನವಾದೀತು?

ಬೆಂಗಳೂರು ಮಹಾನಗರಪಾಲಿಕೆಯ ಮುಖ್ಯ ಕಚೇರಿಗೆ ಹೋಗುತ್ತಿದ್ದಂತೆ ಅದರ ಹೆಬ್ಬಾಗಿಲಲ್ಲಿ ‘ಕನ್ನಡವೇ ಉಸಿರು ಕನ್ನಡವೇ ಹಸಿರು’ ಎಂಬ ಘೋಷವಾಕ್ಯ ಹಸಿರು ಬಣ್ಣದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ. ಮಹಾನಗರಪಾಲಿಕೆಯ ಕನ್ನಡ ಪರಂಪರೆಯನ್ನು ಇದು ತೋರುತ್ತದೆ. ಇಂತಹ ಮಹಾನಗರಪಾಲಿಕೆಗೆ ಮಾರ್ವಾಡಿಯೊಬ್ಬರು ಮೇಯರ್ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ! ಬಹುತೇಕ ಸ್ಥಳೀಯರು ಮತ್ತು ಕನ್ನಡಿಗರು ಗೌತಮ್ ಕುಮಾರ್ ಜೈನ್ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಕಾರಣಗಳಿವೆ.

27ರ ಮಾರ್ಚ್ 1862 ರಂದು ಬೆಂಗಳೂರು ಮುನಿಸಿಪಲ್ ಬೋರ್ಡ್ ಹೆಸರಲ್ಲಿ ಆರಂಭವಾಗಿ, ಬೆಂಗಳೂರು ಬೆಳೆದಂತೆಲ್ಲ ವಿಸ್ತರಿಸುತ್ತಾ, ಅನೇಕ ಸ್ಥಿತ್ಯಂತರಗಳನ್ನು ಕಂಡು 2006-07ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದ್ದು ಇತಿಹಾಸ.

ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಅನೇಕ ಘಟ್ಟಗಳಲ್ಲಿ ಭಾಗಿಗಳಾಗಿ ಕನ್ನಡ ಪರಂಪರೆಯನ್ನು ನಡೆಸಿಕೊಂಡುಬಂದ ಕನ್ನಡದ ಒಂದು ಸಂಪ್ರದಾಯವಿದೆ. ಇದನ್ನು ಮೊದಲಿನಿಂದಲೂ ಬೆಂಗಳೂರಿಗರಾದ ಹಿಂದಿನವರು ಕಾಪಾಡಿಕೊಂಡು ಬರುತ್ತಿದ್ದರು. ಕೆಂಪೇಗೌಡರ ಈ ಬೆಂಗಳೂರು ಮೂಲತಃ ತಿಗಳ, ಗಾಣಿಗ, ಪದ್ಮಸಾಲಿ, ದೇವಾಂಗ, ತೊಗಟವೀರ, ಬೇಡ, ಬೆಸ್ತ, ಉಪ್ಪಾರ, ವಿಶ್ವಕರ್ಮ, ಪಟ್ಟೇಗಾರ, ಬಲಿಜ, ಸವಿತ, ಕುಂಬಾರ, ಕಮ್ಮಾರ, ಮಡಿವಾಳ, ಕಾಟಿಕ, ಮೊದಲಿಯಾರ್, ಚೆಟ್ಟಿಯಾರ್, ಮಾದಿಗ, ಹೊಲೆಯ, ಕ್ರೈಸ್ತ, ಮುಸ್ಲಿಂ, ಕನ್ನಡ ಜೈನರೇ ಮುಂತಾದ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ನೆಲೆಯಾಗಿತ್ತು. ಇವರೊಂದಿಗೆ ವೈಣಿಕರಾದ ವೀರಶೈವರೂ ಬೆರೆತಿದ್ದರು. ವೀರಶೈವರನ್ನು ಹೊರತುಪಡಿಸಿದರೆ ಮೇಲಿನ ಸಮುದಾಯಗಳ ಮನೆ ಮಾತು ಬಹುತೇಕ ಕನ್ನಡವಾಗಿರಲಿಲ್ಲ!

ತಮ್ಮ ಮನೆಮಾತು ಏನೇ ಆಗಿರಲಿ ಸಾರ್ವಜನಿಕ ವ್ಯವಹಾರದಲ್ಲಿ ಇವರೆಲ್ಲಾ ಅಪ್ಪಟ ಕನ್ನಡ ಭಾಷಿಕರಾಗಿ ಕನ್ನಡವನ್ನೇ ಉಸಿರಾಡುತ್ತ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನೇ ಬಳಸುವವರಾಗಿದ್ದರು. ಹಳೇ ಬೆಂಗಳೂರಾದ ಬಳೇಪೇಟೆ, ಅಕ್ಕಿಪೇಟೆ, ಚಿಕ್ಕಪೇಟೆ, ಮಾಮೂಲ್ ಪೇಟೆ, ತಿಗಳರಪೇಟೆ, ದೇವಾಂಗ ಪೇಟೆ, ಬಿನ್ನಿಪೇಟೆ ಮುಂತಾದ ಇತರೆ ಪೇಟೆಗಳೇ ಇವರ ಮೂಲನೆಲೆ. ಇವರೊಂದಿಗೆ ಬಸವನಗುಡಿ, ಗಾಂಧೀ ಬಜಾರ್, ಮಲ್ಲೇಶ್ವರಂ ಮುಂತಾದೆಡೆ ಬ್ರಾಹ್ಮಣ ಮತ್ತು ತೆಲುಗು ವೈಶ್ಯ ಸಮುದಾಯದವರೂ ನೆಲೆಯೂರಿದ್ದು ಇವರೆಲ್ಲಾ ಒಟ್ಟಾಗಿ ಸೇರಿ ಬೆಂಗಳೂರು ನಗರಪಾಲಿಕೆಯನ್ನು ನಿರಂತರವಾಗಿ ಕನ್ನಡದಲ್ಲೇ ನಡೆಸುತ್ತಾ, ಎಲ್ಲಾ ಜಾತಿಗಳ ನಡುವೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಸಾಮರಸ್ಯ, ಸಮಾನತೆಗಳನ್ನು ಕಾಯ್ದುಕೊಂಡಿದ್ದರು. ಎಲ್ಲರಿಗೂ ಪ್ರಾತಿನಿಧ್ಯ ನೀಡುತ್ತಾ ಬೆಂಗಳೂರನ್ನು ಅಭಿವೃದ್ಧಿಯ ಕಡೆ ನಡೆಸುವುದರೊಂದಿಗೆ ಕನ್ನಡ ಕಟ್ಟುವ ಕೆಲಸವನ್ನೂ ಒಟ್ಟೊಟ್ಟಿಗೆ ನಡೆಸಿಕೊಂಡು ಹೋಗುತ್ತಿದ್ದರು. ಈ ಕಾರಣಕ್ಕೇ ಸುಮಾರು ದಶಕಗಳ ಕಾಲ ಬೆಂಗಳೂರು ಮಹಾನಗರಪಾಲಿಕೆಯ ಮುಂದಾಳತ್ವವನ್ನು ಈ ಕನ್ನಡೇತರ ಮಾತೃಭಾಷಿಕರಾದ ಕನ್ನಡ ಸಮುದಾಯಗಳೇ ನಡೆಸಿಕೊಂಡು ಹೋಗುತಿದ್ದವು.

ಕ್ರಮೇಣ ಶಿಕ್ಷಣ, ಉದ್ಯೋಗ, ವ್ಯಾಪಾರ, ವ್ಯವಹಾರಕ್ಕಾಗಿ ಬೆಂಗಳೂರಿಗೆ ಬರತೊಡಗಿದ ಒಕ್ಕಲಿಗರು, ಕುರುಬರು, ಈಡಿಗರು ಕೂಡ ಈ ಪ್ರಕ್ರಿಯೆಯಲ್ಲಿ ಬರುಬರುತ್ತಾ ಒಂದಾಗಿ ತಾವೂ ಕನ್ನಡ ಕಟ್ಟುವ ಸಂಸ್ಕೃತಿಯಲ್ಲಿ ಭಾಗಿಗಳಾದರು. ಅದೇ ರೀತಿ ಕಂಟೋನ್ಮೆಂಟ್ ಏರಿಯಾದಿಂದ ಬಂದ ತಮಿಳರು ಮತ್ತು ಉರ್ದು ಭಾಷಿಕರೂ ಕೂಡ ಕನ್ನಡ ಸಂಸ್ಕೃತಿಯಲ್ಲೇ ಬೆರೆತುಹೋದರು. ಆದರೆ ಬೆಂಗಳೂರಿಗೆ ಕೇವಲ ವ್ಯಾಪಾರಕ್ಕೆಂದು ಗುಜರಾತ್, ರಾಜಸ್ತಾನಗಳಿಂದ ಬಂದ ಮಾರ್ವಾಡಿಗಳು ಮಾತ್ರ ಅವರ ಆತ್ಮವನ್ನು ಅವರ ರಾಜ್ಯಗಳಲ್ಲೇ ಇಟ್ಟು ವ್ಯಾಪಾರ, ವಾಣಿಜ್ಯ, ವ್ಯವಹಾರಗಳಿಗಾಗಿ ಮಾತ್ರ ತಮ್ಮ ದೇಹಗಳನ್ನು ಇಲ್ಲಿ ಉಳಿಸಿಕೊಂಡರು!

ಇಂದು ಈ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರನ್ನು ಭೂತಗನ್ನಡಿ ಹಾಕಿ ಹುಡುಕಬೇಕು! ಇಂದು ಅತ್ಯುತ್ತಮವಾದ ತರಕಾರಿ, ವಿಧವಿಧವಾದ ಹಣ್ಣು, ಕಬ್ಬು, ಸೊಪ್ಪು, ಹಾಲು, ತುಪ್ಪ, ಬೆಣ್ಣೆ, ಗಿಣ್ಣು ಸಿಗುವುದು ಕೂಡ ಇಲ್ಲೇ! ಇದರರ್ಥ ಬೆಂಗಳೂರಿನ ಎಲ್ಲಾ ಉತ್ತಮವಾದುದು, ಅಮೂಲ್ಯವಾದುದು ಈ ಕನ್ನಡೇತರರಿಗೇ ಸಿಗುತ್ತಿದೆ ಎಂಬುದು. ಯಾಕೆಂದರೆ ಇವರ ಬಳಿ ಯಥೇಚ್ಛ ಹಣವಿದೆ.

ಇವರು ಇಲ್ಲಿ ಗಳಸಿದ ಹಣವನ್ನು ಗುಜರಾತ್, ರಾಜಸ್ತಾನಗಳಲ್ಲಿ ಬಂಡವಾಳ ಹೂಡಿಕೊಂಡರು, ಕನ್ನಡಿಗರ ಹಣ ಅವರ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ನೆರವಾಯಿತು. ಇಲ್ಲೂ ಕೂಡ ಅವರು ತಮ್ಮ ಭಾಷೆಯನ್ನು ಬಿಟ್ಟುಕೊಡಲಿಲ್ಲ! ಅವರು ಎಂದೂ ಕನ್ನಡವನ್ನು ಕಲಿಯಲು ಪ್ರಯತ್ನಿಸಲಿಲ್ಲ. ಅದಿರಲಿ ಇಲ್ಲಿನ ಕನ್ನಡ ಸಂಸ್ಕೃತಿಯೊಂದಿಗೆ ಬೆರೆಯಲೇ ಇಲ್ಲ; ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲೇಯಿಲ್ಲ! ಬರುಬರುತ್ತಾ ಹಳೆಯ ಬೆಂಗಳೂರು ಎನಿಸಿಕೊಂಡ ಅಕ್ಕಿಪೇಟೆ, ಬಳೇಪೇಟೆ, ಮಾಮೂಲ್ ಪೇಟೆ, ತಿಗಳರ ಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಅವೆನ್ಯೂ ರಸ್ತೆ, ಬಿ.ವಿ.ಕೆ.ಐಯ್ಯಂಗಾರ್ ರಸ್ತೆಗಳುಳ್ಳ ಏರಿಯಾಗಳನ್ನು ಆಕ್ರಮಿಸಿಕೊಳ್ಳುತ್ತಾ ಅಲ್ಲಿ ಕಾಲಾಂತರದಿಂದ ನೆಲೆಯಿದ್ದ ಕನ್ನಡಿಗರಾದ ಹಿಂದುಳಿದ ವರ್ಗಗಳನ್ನು ನಿಧಾನಕ್ಕೆ ಅಲ್ಲಿಂದ ಜಾಗ ಖಾಲಿ ಮಾಡಿಸಿದರು!

ತಾವು ನೆಲೆನಿಂತ ಮನೆ, ಮಳಿಗೆ ಮತ್ತು ಜಾಗದಲ್ಲಿ ಬೇರೊಬ್ಬರು ಬಾರದಂತೆ ಕಬ್ಬಿಣದ ಗೇಟುಗಳನ್ನು ಹಾಕಿಕೊಂಡು ಕಟ್ಟೆಚ್ಚರವಹಿಸಿದರು! ತಮ್ಮ ಮನೆ, ಮಳಿಗೆ ಮತ್ತು ಅಂಗಡಿಗಳನ್ನು ಭದ್ರಕೋಟೆಗಳಂತೆ ಕಟ್ಟಿಕೊಂಡರು. ಇಂದು ಈ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರನ್ನು ಭೂತಗನ್ನಡಿ ಹಾಕಿ ಹುಡುಕಬೇಕು! ಇಂದು ಅತ್ಯುತ್ತಮವಾದ ತರಕಾರಿ, ವಿಧವಿಧವಾದ ಹಣ್ಣು, ಕಬ್ಬು, ಸೊಪ್ಪು, ಹಾಲು, ತುಪ್ಪ, ಬೆಣ್ಣೆ, ಗಿಣ್ಣು ಸಿಗುವುದು ಕೂಡ ಇಲ್ಲೇ! ಇದರರ್ಥ ಬೆಂಗಳೂರಿನ ಎಲ್ಲಾ ಉತ್ತಮವಾದುದು, ಅಮೂಲ್ಯವಾದುದು ಈ ಕನ್ನಡೇತರರಿಗೇ ಸಿಗುತ್ತಿದೆ ಎಂಬುದು. ಯಾಕೆಂದರೆ ಇವರ ಬಳಿ ಯಥೇಚ್ಛ ಹಣವಿದೆ.

ಇವರಿಗೆ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಎಷ್ಟು ಅಸಡ್ಡೆ ಮತ್ತು ನಿರ್ಲಕ್ಷ್ಯವಿದೆಯೆಂಬುದಕ್ಕೆ ಒಂದು ಸಣ್ಣ ನಿದರ್ಶನ: ಕಾವೇರಿ ಹೋರಾಟದ ಸಮಯದಲ್ಲಿ ಕನ್ನಡ ಹೋರಾಟಗಾರರ ಒಂದು ಗುಂಪು ಕೃಷ್ಣರಾವ್ ಪಾರ್ಕಿಗೆ ಬಂದು ಕ್ರಿಕೆಟ್ ಆಡುತ್ತಿದ್ದ ಮಾರ್ವಾಡಿ ಹುಡುಗರನ್ನು ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಕೇಳಿದಾಗ ಈ ಹುಡುಗರು ನಿರಾಕರಿಸಿದರು. ಆಗ ಕನ್ನಡ ಹೋರಾಟಗಾರರು ‘ಇದು ನಿಮಗೂ ಸೇರಿದ ಹೋರಾಟ, ನೀವು ಕುಡಿಯುತ್ತಿರುವ ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತಿರುವುದು..’ ಎಂದಾಗ, ಆ ಹುಡುಗರು ಕೊಟ್ಟ ಉತ್ತರ ‘ನಮಗೇನು ಕಾವೇರಿ ನೀರು ಬೇಕಾಗಿಲ್ಲ.. ನಾವು ಮಿನರಲ್ ವಾಟರ್ ಕುಡಿಯುತ್ತೇವೆ’.

ಮತ್ತೊಂದು ವಿಶೇಷವೆಂದರೆ ಹಳೇ ಬೆಂಗಳೂರಿನ ಸಾಂಸ್ಕೃತಿಕ ವೈಭವ ‘ಕರಗ ಮಹೋತ್ಸವ’. ಮೂಲತಃ ಇದು ತಮಿಳು ಭಾಷಿಕರಾದ ತಿಗಳ ಸಮುದಾಯದ ಆಚರಣೆಯಾಗಿದ್ದರೂ ಇಲ್ಲಿನ ಪ್ರತಿಯೊಂದು ಸಮುದಾಯವೂ ಇದು ತಮ್ಮ ಮನೆಯ ಹಬ್ಬವೆಂಬಂತೆ ಸಂಭ್ರಮಿಸುತ್ತಾರೆ. ದೂರದ ಊರುಗಳಿಗೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳು ತವರಿಗೆ ಬಂದು ಕರಗ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ. ಕರಗವನ್ನು ಮುಸ್ಲಿಮರು ತಮ್ಮ ಮಸೀದಿಗಳಿಗೆ ಆಹ್ವಾನಿದರೆ, ಕ್ರೈಸ್ತರ ಚರ್ಚುಗಳೂ ಕರಗಕ್ಕಾಗಿ ಬಾಗಿಲು ತೆರೆಯುತ್ತವೆ. ಆದರೆ ಇಲ್ಲೇ ನೆಲೆಯೂರಿ ಇಲ್ಲಿನವರ ಹಣದಲ್ಲೇ ವ್ಯಾಪಾರ, ವ್ಯವಹಾರ ಮಾಡುತ್ತಾ, ಇಲ್ಲಿನ ರೈತರು ಬೆಳೆದ ಎಲ್ಲಾ ಉತ್ತಮವಾದುದನ್ನೂ ಭೋಜನ ಮಾಡುತ್ತಾ ಉಳಿದಿರುವ ಮಾರ್ವಾಡಿಗಳು ಕರಗದ ಯಾವ ಸನ್ನಿವೇಶದಲ್ಲೂ ಭಾಗಿಯಾಗಲ್ಲ.! ಇಲ್ಲಿನ ಸಂಸ್ಕೃತಿಗೆ ಅವರು ವಿಮುಖರಾಗಿರುವುದಕ್ಕೆ ಇವು ಸಣ್ಣ ಉದಾಹರಣೆಗಳಷ್ಟೆ.

ನಾವು ಕನ್ನಡಪರ ಹೋರಾಟ ಅಂದಾಗಲೆಲ್ಲ ತಮಿಳರ ವಿರುದ್ಧ, ಮಲಯಾಳಿಗಳ ವಿರುದ್ಧ, ಉರ್ದು ಭಾಷಿಕರ ವಿರುದ್ಧ ಕೆಂಗಣ್ಣು ಬಿಟ್ಟು ನೋಡತೊಡಗಿದೆವು. ಆದರೆ ನಾವೆಂದೂ ಈ ಮಾರ್ವಾಡಿಗಳ ಕಡೆ ನೋಡಲೇ ಇಲ್ಲ. ಇವರ ನಯ ನಾಜೂಕುಗಳು ನಮ್ಮನ್ನು ಕೆರಳಿಸಲೇಯಿಲ್ಲ. ಇವರು ನಮ್ಮ ಕೆಲ ಕನ್ನಡ ಹೋರಾಟಗಾರರಿಗೂ ಅನೇಕ ಕಾರಣಗಳಿಗಾಗಿ ಆಪ್ತರಾದರು! ಇವರು ವರ್ಷಕ್ಕೊಮ್ಮೆ ನೀಡುವ ‘ದೀಪಾವಳಿ ಗಿಫ್ಟ್’ ಗಳಿಗೆ ನಮ್ಮ ರಾಜಕಾರಣಿಗಳು, ಅಧಿಕಾರಿವರ್ಗ ಹಲ್ಲುಗಿಂಜಿ ಸರೆಂಡರ್ ಆಗುತ್ತಾರೆ!

ಈಗ ಪ್ರಶ್ನೆ ಇರುವುದೆಂದರೆ ಇವರಿಗೆ ಬೆಂಗಳೂರಿನ ವಾಣಿಜ್ಯ, ವ್ಯಾಪಾರ, ವಹಿವಾಟು ಹೊರತುಪಡಿಸಿದರೆ ಮತ್ತೇನೂ ಬೇಕಿಲ್ಲ. ಇಲ್ಲಿನ ಭಾಷೆ, ಸಂಸ್ಕೃತಿ, ಗಡಿ, ಮನುಷ್ಯ ಸಂಬಂಧಗಳಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಇಲ್ಲದವರಿಗೆ ಮೇಯರ್ ಹುದ್ದೆ ದೊರಕಿದರೆ ಯಾರಿಗೆ ಪ್ರಯೋಜನವಾದೀತು? ಯಾರಿಗೆ ಲಾಭವಾದೀತು? ಮಾರ್ವಾಡಿ ಭಾಷೆಯನ್ನು ಹೊರತುಪಡಿಸಿ ಅವರು ಸ್ಥಳೀಯ ಭಾಷೆ ಕನ್ನಡದ ಬಗ್ಗೆ ಕನಿಷ್ಟ ಪ್ರೀತಿ ತೋರಿ ಮುಖ್ಯವಾಹಿನಿಯಲ್ಲಿ ಬೆರೆತ ಉದಾಹರಣೆಗಳು ತೀರಾ ಕಡಿಮೆ ಅಥವ ಇಲ್ಲವೇ ಇಲ್ಲ.

ಆದ್ದರಿಂದ ಮೇಯರ್ ಹುದ್ದೆಗೆ ಒಬ್ಬ ಮಾರ್ವಾಡಿಯನ್ನು ಆರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಕುರುಡಾದುದಲ್ಲ, ಅಸಂಬದ್ಧವಾದುದಲ್ಲ. ನಿಜಕ್ಕೂ ಇದು ಕನ್ನಡಪರವಾದುದು, ನೈತಿಕವಾದುದು. ಈ ದೇಶದ ಪ್ರಜೆಯಾಗಿ ಯಾವುದೇ ಭಾಷೆ, ರಾಜ್ಯ, ಗಡಿ, ಮತ, ಜಾತಿಯವರಿಗೆ ಇಲ್ಲಿ ಯಾವುದೇ ಹುದ್ದೆ ಅಲಂಕರಿಸುವ ಹಕ್ಕನ್ನು ಸಂವಿಧಾನ ನೀಡಿದೆ, ನಿಜ. ಆದರೆ ವಾಸ್ತವವಾಗಿ ಸ್ಥಳೀಯ ಭಾಷೆ, ಸಂಸ್ಕೃತಿಯಲ್ಲಿ ಎಂದೂ ಬೆರೆಯದ, ಕೇವಲ ಆರ್ಥಿಕ ಸಂಬಂಧಗಳನ್ನು ಹೊರತುಪಡಿಸಿ ಮತ್ಯಾವ ಸಾಮಾಜಿಕ ಸಮಸ್ಯೆಗಳಿಗೂ ಒಟ್ಟಾರೆಯಾಗಿ ಸ್ಪಂದಿಸದ, ಇಲ್ಲಿನ ನೆಲ, ಜಲ, ನುಡಿಗಳಿಗೆ ಕನಿಷ್ಟ ಗೌರವ ನೀಡದ ಸಂಘಟಿತ ಸಮುದಾಯದ ಪ್ರತಿನಿಧಿಯಾದವನು ಇಡೀ ಬೆಂಗಳೂರಿನ ಜನಮಾನಸವನ್ನು ಹೇಗೆ ಪ್ರತಿನಿಧಿಸಬಲ್ಲ…?

*ಲೇಖಕರು ಮೂಲತಃ ಕೋಲಾರದವರು; ವೃತ್ತಿಯಲ್ಲಿ ವಕೀಲರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು, ಬಿ.ಎಸ್.ಪಿ. ಜೊತೆಗೆ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.