ಆಡುವ ಮಕ್ಕಳ ಭವಿಷ್ಯ ಕಾಡುವ ಜಿಜ್ಞಾಸೆಗಳು

ಈ ಸಹಸ್ರಮಾನದ ಮಕ್ಕಳ ಭವಿಷ್ಯವನ್ನು ರೂಪಿಸುವುದು ತಾಂತ್ರಿಕತೆಯ ನಾಗಾಲೋಟದ ಕಾಲಮಾನದಲ್ಲಿ ಸವಾಲಾಗಿದೆ. ಆಡುವ ಮಕ್ಕಳು ಕಾಡುವ ಮಕ್ಕಳಾಗಿದ್ದಾರೆ.

– ಡಾ.ಚಂದ್ರಕಲಾ ಹೆಚ್.ಆರ್.

ವರ್ಷದ 365 ದಿನಗಳು ಒಂದಿಲ್ಲೊಂದು ಆಚರಣೆಯ ಸರಮಾಲೆಯನ್ನು ಹೊದ್ದುಕೊಂಡ ಕ್ಯಾಲೆಂಡರನ್ನು ಗಮನಿಸಿದರೆ ಪ್ರಮುಖ ಆಚರಣೆಗಳು ಸ್ಮರಣಾರ್ಹವಾಗಿವೆ. ಜನೆವರಿ ಎಂದರೆ ಹೊಸವರ್ಷವೆಂದೂ, ಗಣರಾಜ್ಯದ ತಿಂಗಳೆಂದೂ, ಆಗಸ್ಟ್- ಸ್ವಾತಂತ್ರ್ಯ ದಿನವೆಂದೂ, ಸೆಪ್ಟೆಂಬರ್- ಶಿಕ್ಷಕರ ದಿನವೆಂದೂ, ಅಕ್ಟೋಬರ್- ಗಾಂಧೀ ಜಯಂತಿಯೆಂದೂ, ನವೆಂಬರ್ ಎಂದರೆ ನುಡಿಹಬ್ಬ, ಮಕ್ಕಳ ದಿನವೆಂದೂ ಆಚರಿಸುತ್ತಾ ಬಂದಿದ್ದೇವೆ.

ವರ್ಷದಾದ್ಯಂತ ಆಚರಿಸುವ ಈ ಎಲ್ಲಾ ಆಚರಣೆಗಳಿಗಿಂತ ವರ್ತಮಾನದ ಮಹತ್ವದ ಎರಡು ಆಚರಣೆಗಳಿವೆ. ನವೆಂಬರ್ರ್‍ನಲ್ಲಿ ನುಡಿಹಬ್ಬದ ಮತ್ತು ಮಕ್ಕಳ ದಿನದ ಆಚರಣೆಗಳ ಮುಖಾಂತರ ಸಂಭ್ರಮಿಸಬೇಕೋ, ವಿಭ್ರಮಿಸಬೇಕೊ, ಜಾಗೃತಿಯೆಡೆಗೆ ಸಾಗಬೇಕೊ ಎಂಬ ಪ್ರಶ್ನೆಯಿಟ್ಟುಕೊಂಡು ಚರ್ಚಿಸುವ ಅನಿವಾರ್ಯತೆಯಿದೆ. ಇಂತಹ ಆರೋಗ್ಯಪೂರ್ಣ ಚರ್ಚೆಯನ್ನು ಸಮಾಜಮುಖಿ ಪತ್ರಿಕೆ ಕೈಗೆತ್ತಿಕೊಂಡಿದೆ. ಈ ವಿಚಾರವಂತೂ ಪೋಷಕವಲಯವನ್ನು ಮಕ್ಕಳ ಮನೋವಲಯವನ್ನು ಸಾಕಷ್ಟು ಜಿಜ್ಞಾಸೆಗೆ ಒಳಗುಮಾಡುತ್ತದೆ.

ಈ ಸಹಸ್ರಮಾನದ ಮಕ್ಕಳ ಭವಿಷ್ಯವನ್ನು ರೂಪಿಸುವುದು ತಾಂತ್ರಿಕತೆಯ ನಾಗಾಲೋಟದ ಕಾಲಮಾನದಲ್ಲಿ ಸವಾಲಾಗಿದೆ. ಆಡುವ ಮಕ್ಕಳು ಕಾಡುವ ಮಕ್ಕಳಾಗಿದ್ದಾರೆ. ಇಂದಿನ ಮಕ್ಕಳು ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗಿದ್ದಾರಾ ಅಥವಾ ಹೊಣೆಗಾರರಾಗಿದ್ದಾರೆಯೇ ಎಂಬ ಪ್ರಶ್ನೆ ಎತ್ತಿಕೊಳ್ಳಬೇಕಿದೆ.

ನಳನಳಿಸುವ ಪರಿಮಳಪುಷ್ಪಗಳಾಗಬೇಕಾದ ಮಕ್ಕಳ ಕಣ್ಣ ಕಾಂತಿಯು ಕಗ್ಗತ್ತಲೆಗೆ ಹೊಂದಿಕೊಂಡಂತಿದೆ. ಹಿರಿಯರ ಸಲಹೆಗಳ ಅಲಕ್ಷ್ಯ, ಸಂಸ್ಕಾರದ ಕೊರತೆ, ಸಾಂಸ್ಕೃತಿಕ ಸಂದರ್ಭಗಳಿಗೆ ಒಗ್ಗದ ಮಕ್ಕಳ ಮನಸ್ಥಿತಿ, ವಿದೇಶದ ಕನಸು, ಮೋಜಿನ ಜೀವನಕ್ಕೆ ಕೊಡುವ ಆದ್ಯತೆಯ ಕಾರಣಗಳು ಪೋಷಕ ವಲಯದಲ್ಲಿ ಅತಂತ್ರ, ಅನಾಥ ಮನಸ್ಥಿತಿ ಸೃಷ್ಟಿಸುವುದರ ಮುಖೇನ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಲಾಲಿಪಪ್ ಹಿಡಿಯುವ ಕೈಗಳು, ಅಂಗಳದಿ ಆಡಬೇಕಾದ ಮಕ್ಕಳು ಮೊಬೈಲ್ ರಿಂಗಣಕ್ಕೆ ಮನಸೋತಿದ್ದಾರೆ. ಮಕ್ಕಳು pubzi, bluewhale ನಂತಹ ಆಟದ ಗೀಳಿಗೆ ಅಂಟಿಕೊಂಡು ಕರುಳಕುಡಿಗಳನ್ನು ಕಳೆದುಕೊಳ್ಳುತ್ತಿರುವ ಹೆತ್ತೊಡಲ ಸಂಕಟಗಳಿಗೆ ಯಾರು ಹೊಣೆ. ಆಧುನಿಕತೆ ಒಡ್ಡಿರುವ ಗಂಭೀರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇಂತಹ ಪರಿಸ್ಥಿತಿಗೆ ಪೋಷಕರ ಪಾತ್ರವೆಷ್ಟು, ಮಕ್ಕಳ ಪಾತ್ರವೆಷ್ಟು ಎಂಬುದನ್ನು ಚರ್ಚಿಸಬೇಕಾಗಿದೆ.

ಮಕ್ಕಳು ಎಂದರೆ ಉಳ್ಳವರ ಮಕ್ಕಳಷ್ಟೆ ಅಲ್ಲ, ಕೂಲಿಕಾರ್ಮಿಕರ ಮಕ್ಕಳು, ಭಿಕ್ಷೆ ಬೇಡುವ, ವರ್ಕಶಾಪ್‍ಗಳಲ್ಲಿ ಮಸಿ ಮೆತ್ತಿಕೊಂಡ, ಗುಜರಿ ಕಾರ್ಮಿಕ ಮಕ್ಕಳು, ಚಿಂದಿ ಆಯುವ ಮಕ್ಕಳು, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳನ್ನೆಲ್ಲಾ ಸಾರ್ವತ್ರಿಕ ಸಮೀಕ್ಷೆಗೆ ಮತ್ತು ವಿಶ್ಲೇಷಣೆಗೆ ಒಳಪಡಿಸಿದರೆ

ಮನಸ್ಸು ಮಾಗದ, ಬುದ್ಧಿ ಪಕ್ವವಾಗದ ಮಕ್ಕಳನ್ನು ಸಾರ್ವತ್ರಿಕ ಅಧ್ಯಯನಕೊಳ್ಳಪಡಿಸಿದಾಗ -ಮಕ್ಕಳು ಎಂದರೆ ಉಳ್ಳವರ ಮಕ್ಕಳಷ್ಟೆ ಅಲ್ಲ, ಕೂಲಿಕಾರ್ಮಿಕರ ಮಕ್ಕಳು, ಭಿಕ್ಷೆ ಬೇಡುವ, ವರ್ಕಶಾಪ್‍ಗಳಲ್ಲಿ ಮಸಿ ಮೆತ್ತಿಕೊಂಡ, ಗುಜರಿ ಕಾರ್ಮಿಕ ಮಕ್ಕಳು, ಚಿಂದಿ ಆಯುವ ಮಕ್ಕಳು, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳನ್ನೆಲ್ಲಾ ಸಾರ್ವತ್ರಿಕ ಸಮೀಕ್ಷೆಗೆ ಮತ್ತು ವಿಶ್ಲೇಷಣೆಗೆ ಒಳಪಡಿಸಿದರೆ- ಕನಸು ಕಮರಿದ, ಮನಸ್ಸು ಮುದುಡಿದ ಮಕ್ಕಳ ಸಂಖ್ಯೆಯೇ ಹೆಚ್ಚು. ಈ ಮಕ್ಕಳು ಕುಟುಂಬ, ಸಮಾಜದಿಂದ ಅಲಕ್ಷಿತರಾಗಿ ಬಳಪ, ಪೆನ್ನು ಹಿಡಿಯುವ ಕೈಗಳು ಕತ್ತಿ-ಗುರಾಣಿ, ಗನ್ನು ಹಿಡಿದರೆ ಮುಂದೇನಾಗಬಹುದೆಂಬ ಆತಂಕ ನಮ್ಮನ್ನು ಕಾಡಲೇಬೇಕು. ಅಲಕ್ಷಿತ ಮಕ್ಕಳು ಅಪಾಯಕಾರಿಗಳಾದರೆ ದೇಶ ಏನಾಗಬಹುದು? ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬ ಹೇಳಿಕಾರೂಪಗಳು ಎಂತಹ ವಿರೋಧಿ ಪರಿಸರವನ್ನು ಸೃಷ್ಟಿಸಿಬಿಟ್ಟಿವೆ.

ದಿನನಿತ್ಯದ ಮಾಧ್ಯಮಗಳ ಸುದ್ದಿಗಳು ಬೆಚ್ಚಿಬೀಳಿಸುತ್ತಿವೆ. ಆಸ್ತಿಗಾಗಿ ತಂದೆ-ತಾಯಿಯನ್ನು ಕೊಂದ ಮಗ, ಶಾಲಾ ಬಾಲಕ ಸಹಪಾಠಿಗೆ ಶೂಟ್ ಮಾಡಿದ ಸುದ್ದಿಗಳು, ಪ್ರಿಯತಮನೊಂದಿಗೆ ಸೇರಿ ತಂದೆಯ ಕೊಲೆ… ಒಂದೇ, ಎರಡೇ. ಮಕ್ಕಳೇನಾಗುತ್ತಿದ್ದಾರೆ? ಖಾಸಗಿ ಶಾಲೆಗಳಲ್ಲಿ ಡೊನೆಷನ್ ಕೊಟ್ಟು ಓದಿಸಿದ ಮಕ್ಕಳು ಹೀಗೇಕಾಗಿದ್ದಾರೆ? ಉತ್ತರವೆಲ್ಲಿ? ಪೋಷಕರು ಉದ್ಯೋಗ ಗಿಟ್ಟಿಸಿಕೊಳ್ಳುವತನಕವೂ ಹಣದ ಹೊಳೆ ಹರಿಸದೆ, ಭ್ರಷ್ಟಮಾರ್ಗ ತುಳಿಯದೆ ಉದ್ಯೋಗ ಗಿಟ್ಟಿಸಿಕೊಂಡರೆ, ಇಂದು ಭ್ರೂಣಾವಸ್ಥೆಯಲ್ಲಿರುವ ಮಗುವಿನ ನರ್ಸರಿ ಸೀಟನ್ನು ಭದ್ರಪಡಿಸಲು ಲಕ್ಷಗಟ್ಟಲೆ ಹಣದ ಹೊಳೆಹರಿಸಿ, ಶಿಕ್ಷಣದ ಮಾರ್ಕೆಟ್‍ಗೆ ಸ್ಪರ್ಧೆಯ ಸರಕನ್ನಾಗಿಸಿದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ, ಕಸಿಯಲಾಗುತ್ತಿರುವ ವ್ಯವಸ್ಥೆಗೆ ಚಿಕಿತ್ಸೆಯೇ ಕಗ್ಗಂಟಾಗಿದೆ.

ಮನೋವಿಜ್ನಾನಿ ಆಡ್ಲರ್ ಪ್ರಕಾರ ಮಕ್ಕಳ ಮಾನಸಿಕ ಆನಾರೋಗ್ಯ ಮತ್ತು ಅಪರಾಧ ಹೆಚ್ಚಲು ಎರಡು ಮುಖ್ಯ ಕಾರಣಗಳಿವೆ. ಒಂದು, ಮಕ್ಕಳನ್ನು ಅತಿಯಾಗಿ ಮುದ್ದುಮಾಡುವುದು. ಮತ್ತೊಂದು, ಪ್ರೀತಿಯಿಂದ ವಂಚಿತರಾಗಿಸುವುದು. ಇವೆರಡೂ ಪೋಷಕರ ಪಾಲಿಗೆ ಧರ್ಮಸಂಕಟವೇ. ಶಿಸ್ತಿಗೊಳಪಡಿಸಿದರೆ ಆತ್ಮಹತ್ಯೆ ಅಥವಾ ಪಲಾಯನಕ್ಕಿಳಿಯುವ, ಸ್ವಾತಂತ್ರ್ಯವಿತ್ತರೆ ಸ್ವೇಚ್ಚೆಗೆ ತಿರುಗುವ ಮಕ್ಕಳ ಮನೋಭಾವವು ಲಿಂಗಬೇಧವಿಲ್ಲದಂತೆ ರೂಪುಪಡೆಯುತ್ತಿದೆ. ಈ ಅನಾಹುತಗಳಿಗೆ ನಮ್ಮನ್ನು ನಾವೇ ದೂಷಿಸಿಕೊಳ್ಳೋಣವೇ? ಮಾಧ್ಯಮಗಳನ್ನು ದೂಷಿಸೋಣವೇ? ಚಿತ್ರಮಾಧ್ಯಮದ ಆಕರ್ಷಣೆಯೇ?

ಇಂದಿನ ಸಿನಿಮಾದ ಕಥಾವಸ್ತು, ಹಾಡುಗಳು ದಾರಿ ತಪ್ಪಿಸುತ್ತಿದೆಯೇ? ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು ಎಂಬ ಹಾಡನ್ನು ಈಗಿನ ಮಕ್ಕಳಿಗೆ ಪೋಷಕರು ಕೇಳಿಸುತ್ತಿದ್ದಾರೆಯೇ?

ದಿನ ಬೆಳಿಗ್ಗೆಯಾದರೆ ಪತ್ರಿಕೆಯ ಮುಖಪುಟಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಸುದ್ದಿಗಳನ್ನು ಪ್ರಕಟಿಸುತ್ತಿರುವುದು ಮಕ್ಕಳಿಗೆ ಪ್ರೇರಕವಾಗಿರಬಹುದಾ?

ಇಂದಿನ ಸಿನಿಮಾದ ಕಥಾವಸ್ತು, ಹಾಡುಗಳು ದಾರಿ ತಪ್ಪಿಸುತ್ತಿದೆಯೇ? ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು ಎಂಬ ಹಾಡನ್ನು ಈಗಿನ ಮಕ್ಕಳಿಗೆ ಪೋಷಕರು ಕೇಳಿಸುತ್ತಿದ್ದಾರೆಯೇ? ಹೊಡಿಮಗ ಹೊಡಿಮಗ ಬಿಡಬೇಡ ಅವನ ಎಂಬ ಮಚ್ಚು ಸಂಸ್ಕೃತಿಯನ್ನು ಬಿಂಬಿಸುವ ಹಾಡು, ಅಲ್ಲಾಡ್ಸ್ ಅಲ್ಲಾಡ್ಸ್ ಎಂಬ ಅಶ್ಲೀಲಾರ್ಥದ ಹಾಡು ವರ್ಷವಷ್ಟೇ ತುಂಬಿದ ಮಕ್ಕಳ ನಾಲಗೆಯಲ್ಲಿ ಲಾಸ್ಯವಾಡುತ್ತಿದೆ. ಜನಪದ ಹಾಡು, ಕಥೆ, ಗಾದೆ, ಒಗಟುಗಳು, ಗೋವಿನಹಾಡನ್ನು ಕಲಿಯುವ ಆಸಕ್ತಿಯನ್ನೇಕೆ ಮಕ್ಕಳು ತೋರಿಸುತ್ತಿಲ್ಲ.

ಇಂದಿನ ಮಕ್ಕಳಲ್ಲಿ ಮೌಲ್ಯಕುಸಿತದ ಕಾರಣವಾಗಿ ಕುಟುಂಬವನ್ನೇ ಗುರಿಯಾಗಿಸಿ ನೋಡಬಹುದು. ಲಕ್ಷ್ಮಿಧರಾಮಾತ್ಮನ ಶಾಸನದಲ್ಲಿ ತಾಯಿಯು ಮಗುವಿಗೆ ಹಾಲುಣಿಸುವಾಗ ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು ದೇವಾಗಾರಮಂ ನಿರ್ಮಿಸು, ದೀನಾನಾಥರಂ ರಕ್ಷಿಸು, ಸೆರೆಯೊಳ್ ಸಿಲ್ಕಿದರಂ ಪೊರೆ…ಇಂತೀ ಪಾಲನೆರೆದಳ್ ಎಂಬ ಮಾತಿದೆ. ಈಗಿನ ತಾಯಂದಿರು ಪಾಲನೆರೆಯುವ ಸಮಯವಿಲ್ಲದೆ, ಮಗುವನ್ನು ಡೇ-ಕೇರ್‍ಗಳಲ್ಲಿ ಬಿಟ್ಟು ಓಡುವರು (ಅವರಿಗೆ ದುಡಿಮೆ ಅನಿವಾರ್ಯವಾಗಿದೆ). ರಚ್ಚೆಹಿಡಿದ ಮಗುವಿಗೆ ಮೊಬೈಲ್ ನೀಡಿ ಸಂತೈಸುವಾಗ ಮೌಲ್ಯ ಬೋಧಿಸುವವರಾರು? ಸಂಸ್ಕøತಿ ಸಂಸ್ಕಾರದ ವರ್ಗಾವಣೆಯ ಸಾಧ್ಯತೆಯನ್ನು ಚಿಂತಿಸಬೇಕಿದೆ.

ಪರಿಣಾಮವಾಗಿ ಮಕ್ಕಳು ಬಲಿಯಾಗುತ್ತಿದ್ದಾರೆ. ಸುಖೀ ಕುಟುಂಬದ ಪರಿಕಲ್ಪನೆಯಲ್ಲಿ ಒಂದೇ ಮಗುವಿರುವುದರಿಂದಲೂ ಮಕ್ಕಳು ಒಂಟಿತನ, ಖಿನ್ನತೆಗೆ ಬಲಿಯಾಗಿ ಹಲವು ಅಪರಾಧಗಳಿಗೆ ಕಾರಣವಾಗಿರಬಹುದೆಂದು ಅಧ್ಯಯನಗಳೂ ಹೇಳುತ್ತವೆ.

ನೀತಿಕಥೆಗಳು ಇಂದಿನ ಮಕ್ಕಳಿಗೆ ರುಚಿಸುತ್ತಿಲ್ಲ ಮತ್ತು ಕಥೆ ಹೇಳುವ, ಅವರೊಂದಿಗೆ ಆಡುವ ಪುರುಸೊತ್ತು ಪೋಷಕರಿಗಿಲ್ಲ. ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಹಳೆತಲೆಮಾರುಗಳ ಒಡನಾಟ ಇಂದಿನ ಮಕ್ಕಳಿಗೆ ದೊರಕದೆ ಅಜ್ಜಿ-ತಾತಂದಿರ ಪ್ರಭಾವವೇ ಇಲ್ಲವಾಗಿದೆ. ಸಂಬಂಧದ ಬೇರಿನ ಪರಿಚಯವೇ ಇಲ್ಲ. ಐಷಾರಾಮಿ ಜೀವನದ ಸೆಳೆತಕ್ಕೆ ಪೋಷಕರು ಸಿಲುಕಿ ಹಣಗಳಿಕೆಯೊಂದೇ ಉದ್ದೇಶವಾಗಿ ಹೂಡುವಿಕೆಯಲ್ಲಿ ತಲ್ಲೀನರಾಗುತ್ತಿದ್ದಾರೆ. ಪರಿಣಾಮವಾಗಿ ಮಕ್ಕಳು ಬಲಿಯಾಗುತ್ತಿದ್ದಾರೆ. ಸುಖೀ ಕುಟುಂಬದ ಪರಿಕಲ್ಪನೆಯಲ್ಲಿ ಒಂದೇ ಮಗುವಿರುವುದರಿಂದಲೂ ಮಕ್ಕಳು ಒಂಟಿತನ, ಖಿನ್ನತೆಗೆ ಬಲಿಯಾಗಿ ಹಲವು ಅಪರಾಧಗಳಿಗೆ ಕಾರಣವಾಗಿರಬಹುದೆಂದು ಅಧ್ಯಯನಗಳೂ ಹೇಳುತ್ತವೆ.

ಶಿಕ್ಷಣದ ಜೊತೆಗೆ ಭಾಷೆ, ನಾಡು-ನುಡಿಯ ಅಭಿಮಾನ, ಸಂಸ್ಕೃತಿ, ಸೌಹಾರ್ದದ ಚಿಂತನೆಗಳು ಪಠ್ಯದ ಮೂಲಕವಾಗಲಿ, ಎಲ್ಲ ಮಾಧ್ಯಮಗಳ ಮೂಲಕವಾಗಲಿ ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು. ಹಣದ ಹಿಂದೆ ಓಡದಂತೆ ಮಕ್ಕಳನ್ನು ಎಚ್ಚರಿಸಬೇಕಿದೆ. ಸಂವಿಧಾನದಲ್ಲಿ ಮಕ್ಕಳ ಹಿತರಕ್ಷಣೆಗೆ ಅವಕಾಶವಿದೆ. ವಿಶ್ವಸಂಸ್ಥೆ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹತ್ತುಹಲವು ಯೋಜನೆಗಳನ್ನು ರೂಪಿಸುತ್ತಿದೆ. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಪಠ್ಯಗಳು ಸಿದ್ಧವಾಗಲಿ. ದೃಶ್ಯ, ಸಮೂಹ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮಕ್ಕಳ ಸದಭಿರುಚಿಗೆ ತಕ್ಕ ಪರಿಸರವನ್ನು ನಿರ್ಮಿಸಿಕೊಡಬೇಕಿದೆ.

ಅಶಕ್ತ, ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳು ಕುಟುಂಬಕ್ಕೆ, ಸಮಾಜಕ್ಕೆ ಬಾಧಕರಲ್ಲ. ಆದರೆ ಮನೋವೈಕಲ್ಯಕ್ಕೆ ಒಳಗಾದ ಮಕ್ಕಳು ಮಾರಕರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಪೋಷಿಸಬೇಕಿದೆ. ಮಕ್ಕಳ ಚಲನವಲನಗಳನ್ನು ಅವರು ಅರಿಯದಂತೆ ನಿಗಾವಹಿಸಬೇಕಾಗಿದೆ. ಮಕ್ಕಳಿಗೆ ಆಸ್ತಿ ಕೂಡಿಡುವ ಬದಲು ಅವರನ್ನು ನಾಡಿನ ಆಸ್ತಿಯನ್ನಾಗಿ ಬೆಳೆಸುವ, ಹೂಮನಸಿಗೆ ನೀರೆರೆಯುವ ಸಂದರ್ಭಗಳು ನಿರ್ಮಾಣಗೊಳ್ಳಬೇಕಿದೆ.

ಲೇಖಕಿ ಕೃಷ್ಣರಾಜನಗರ ತಾಲೂಕಿನ ಹಂಪಾಪುರ ಗ್ರಾಮದವರು; ಪ್ರಸ್ತುತ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.