ಆತ್ಮನಿರ್ಭರ ಮತ್ತು ವಿದೇಶಿ ವ್ಯಾಪಾರ

ಮುಂಬರುವ ದಿನಗಳಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಬಗ್ಗೆ ನಿರ್ದಿಷ್ಟವಾದ ನೀತಿಯನ್ನು ರೂಪಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆಶಿಸೋಣ. ಅದಿಲ್ಲದಿದ್ದರೆ ಈ ಹಿಂದೆ ಅರಬೆಂದ ರೀತಿಯಲ್ಲಿ ನಿರ್ವಹಿಸಿದ ಮೇಕ್ ಇನ್ ಇಂಡಿಯಾ ನೀತಿಯ ಕಥೆಯಾಗುತ್ತದೆ!

ಹಾ ಜೂನ್ ಚಾಂಗ್ ಅವರು ‘ಅರ್ಥಶಾಸ್ತç: ಬಳಕೆದಾರರ ಕೈಪಿಡಿ’ ಕೃತಿಯ ಅಂತಾರಾಷ್ಟ್ರೀಯ ವ್ಯಾಪಾರ ಅಧ್ಯಾಯವನ್ನು ಕ್ವಿನ್‌ಲಾಂಗ್ ಎಂಬ ಚೈನಾದ ಚಕ್ರವರ್ತಿಯ ಕಥೆಯ ವಿವರಣೆಯಿಂದ ಆರಂಭಿಸುತ್ತಾರೆ. ಬ್ರಿಟನ್‌ನ ಚಕ್ರವರ್ತಿ ಮೂರನೆಯ ಜಾರ್ಜ್ ಅವರು ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಮಾಡಿದÀ ಕೋರಿಕೆಯನ್ನು ಚೈನಾದ ಚಕ್ರವರ್ತಿ ಕ್ವಿನ್‌ಲಾಂಗ್ 1792ರಲ್ಲಿ ತಳ್ಳಿಹಾಕುತ್ತಾನೆ.

ಚೈನಾದೊಂದಿಗಿನ ವಿದೇಶಿ ವ್ಯಾಪಾರದಲ್ಲಿ ಬ್ರಿಟನ್ ಅಪಾರ ವ್ಯಾಪಾರ ಕೊರತೆಯನ್ನು ಅನುಭವಿಸುತ್ತಿತ್ತು (ಒಂದು ದೇಶದ ಆಮದು ವ್ಯಾಪಾರ ಮೌಲ್ಯವು ರಫ್ತು ವ್ಯಾಪಾರ ಮೌಲ್ಯಕ್ಕಿಂತ ಅಧಿಕವಿದ್ದರೆ ಇದನ್ನು ವ್ಯಾಪಾರ ಶಿಲ್ಕು ಖಾತೆಯ ಕೊರತೆ’ ಎನ್ನುತ್ತಾರೆ: ಅನುವಾದಕ). ಏಕೆಂದರೆ ಹೊಸದಾಗಿ ಕಂಡುಕೊAಡ ಚಹಾ ಪುಡಿಯ ಮೋಹಕ್ಕೆ ಒಳಗಾಗಿ ಬ್ರಿಟನ್ ಅದನ್ನು ಚೈನಾದಿಂದ ಹೆಚ್ಚು ಹೆಚ್ಚು ಆಮದು ಮಾಡಿಕೊಳ್ಳುತ್ತಿತ್ತು. ಚೈನಾ ದೇಶವು ಕೇವಲ ಒಂದು ಬಂದರಿನಲ್ಲಿ (ಕ್ಯಾಂಟಾನ್) ಮಾತ್ರ ಬ್ರಿಟನ್‌ಗೆ ವ್ಯಾಪಾರ ಮಾಡಲು ಅವಕಾಶ ನೀಡಿತ್ತು. ಇದರ ಜೊತೆಗೆ ಹೆಚ್ಚು ಬಂದರುಗಳಲ್ಲಿ ವ್ಯಾಪಾರಕ್ಕೆ ಚೈನಾ ಅವಕಾಶ ನೀಡಿದರೆ ತಾನು ಹೆಚ್ಚು ಹೆಚ್ಚು ಸರಕುಗಳನ್ನು ಚೈನಾದಾದ್ಯಂತ ಮಾರಾಟ ಮಾಡಿ ವ್ಯಾಪಾರ ಶಿಲ್ಕು ಖಾತೆಯಲ್ಲಿನ ಕೊರತೆಯನ್ನು ತುಂಬಿಕೊಳ್ಳಬಹುದು ಎಂಬ ಆಶಾ ಭಾವನೆ ಬ್ರಿಟನ್ನಿನ ಚಕ್ರವರ್ತಿಗಿತ್ತು.

ಇಲ್ಲಿ ಚೈನಾ ವಿದೇಶಿ ವ್ಯಾಪಾರವನ್ನು ತಿರಸ್ಕರಿಸಿದ್ದು ನಮಗೆ ಮುಖ್ಯವಲ್ಲ. ಆದರೆ ಬ್ರಿಟನ್ನಿನ ಕೋರಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಲು ಚೈನಾ ನೀಡಿದ್ದ ಕಾರಣ ಬಹಳ ಮುಖ್ಯವಾಗಿದೆ.

‘ಚೈನಾದ ಸರಕುಗಳಾದ ಚಹಾ, ರೇಷ್ಮೆ ಮತ್ತು ಪಿಂಗಾಣಿ ಪಾತ್ರೆಗಳು ಯೂರೋಪಿಯನ್ ದೇಶಗಳ ಬಳಕೆದಾರರಿಗೆ ಅತ್ಯಾವಶ್ಯಕ ಸರಕುಗಳಾಗಿರುವುದರಿಂದ ಅವುಗಳಿಗೆ ಕ್ಯಾಂಟನ್ ಬಂದರಿನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ’ ಎಂಬ ಸತ್ಯವನ್ನು ಬ್ರಿಟನ್‌ನ ಚಕ್ರವರ್ತಿಗೆ ಚೈನಾದ ದೊರೆ ಜ್ಞಾಪಿಸಿಕೊಟ್ಟನು. ಇದು ಚೈನಾ ಯೂರೋಪಿಯನ್ನರಿಗೆ ತೋರುತ್ತಿರುವ ‘ಔದಾರ್ಯದ ಕ್ರಮ’ ಎಂದು ಕ್ವಿನ್‌ಲಾಂಗ್ ಹೇಳಿದರು. 

‘ನಮ್ಮ ಅಲೌಕಿಕ ಸಾಮ್ರಾಜ್ಯದಲ್ಲಿ ಎಲ್ಲ ಸರಕು-ಸರಂಜಾಮುಗಳು ಯಥೇಚ್ಛವಾಗಿವೆ. ನಮ್ಮ ಗಡಿಯೊಳಗೆ ದೊರೆಯದಿರುವ ಸರಕುಗಳೇ ಇಲ್ಲ. ಆದ್ದರಿಂದ ಹೊರಗಡೆಯಲ್ಲಿ ತಯಾರಿಸಿದ ಸರಕುಗಳಿಗೆ ನಮ್ಮ ಸರಕುಗಳನ್ನು ವಿನಿಮಯ ಮಾಡಿಕೊಂಡು ಅವುಗಳನ್ನು ಆಮದು ಮಾಡಿಕೊಳ್ಳವ ಪ್ರಮೇಯ ನಮಗಿಲ್ಲ’ ಎಂದು ಕ್ವಿನ್‌ಲಾಂಗ್ ಘೋಷಿಸಿದ. 

‘ಸ್ವಯಂಪೂರ್ಣತೆ’ ಅಥವಾ ‘ಸ್ವಾವಲಂಬನೆ’ -ಯಾವ ನುಡಿಯನ್ನು ಬಳಸಿದರು ಸದರಿ ನುಡಿಗಳಿಗಿಂತ ಮತ್ತಾವ ನುಡಿಯೂ ಸದರಿ ನೀತಿಯನ್ನು ಅಭಿವ್ಯಕ್ತಿ ಪಡಿಸಲಾಗದು. ಲೇಖಕ ಚಾಂಗ್ ಅವರು ಆವತ್ತು ಪ್ರಚಲಿತವಿದ್ದ ಅಂತಾರಾಷ್ಟ್ರೀಯ ವ್ಯಾಪಾರದ ಬಗ್ಗೆ ಜ್ಞಾನಶಿಸ್ತಿನ ಚೌಕಟ್ಟಿನಲ್ಲಿ ಇದನ್ನು ವಿವರಿಸುತ್ತಿದ್ದಾರೆ. ಇತರೆ ದೇಶಗಳ ಎದುರಾಗಿ ಚೈನಾ ದೇಶವು ಉತ್ಪಾದನೆಯಲ್ಲಿ ‘ಸಂಪೂರ್ಣ ನಿರಪೇಕ್ಷ ಅನುಕೂಲ’ ಸ್ಥಿತಿಯಲ್ಲಿತ್ತು. ಆದ್ದರಿಂದ ಚೈನಾ ದೇಶವು ಇತರೆ ದೇಶಗಳ ವ್ಯಾಪಾರದ ಕೋರಿಕೆಯನ್ನು ತಿರಸ್ಕರಿಸಿದ್ದು ವಿವೇಕಯುತ ತೀರ್ಮಾನವಾಗಿತ್ತು.

ಆದರೆ ಮುಂದೆ ಅಂತಾರಾಷ್ಟ್ರೀಯ ವ್ಯಾಪಾರ ಸಿದ್ಧಾಂತಗಳಲ್ಲಿ ಸುಧಾರಣೆಯಾಗಿ ‘ತುಲನಾತ್ಮಕ ಅನುಕೂಲ’ ಸಿದ್ಧಾಂತವು ಪ್ರಚಲಿತಕ್ಕೆ ಬಂದಿತು. ಈ ಸಿದ್ಧಾಂತದ ಪ್ರಕಾರ ಒಂದು ದೇಶವು ಸ್ವಯಂಪೂರ್ಣತೆಯನ್ನು ಸಾಧಿಸಿಕೊಂಡಿದ್ದರೂ ವಿದೇಶಿ ವ್ಯಾಪಾರವು ಸದರಿ ದೇಶಕ್ಕೆ ಲಾಭಕರ/ಅನುಕೂಲಕರ ಎಂಬುದನ್ನು ತೋರಿಸಿಕೊಟ್ಟಿತು.

ಇದರ ಕಾರಣ ಮೀಮಾಂಸೆ ಹೀಗಿದೆ: ಒಂದು ದೇಶವು ಕೆಲವು ಸರಕುಗಳಿಗೆ ಸಂಬAಧಿಸಿದAತೆ ಇತರೆ ದೇಶಗಳಿಗಿಂತ ಉತ್ತಮ ರೀತಿಯಲ್ಲಿ ಉತ್ಪಾದಿಸುವ ಅನುಕೂಲ ಪಡೆದಿರುತ್ತದೆ. ಯಾವುದನ್ನು ಉತ್ತಮರೀತಿಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲವೋ ಅಂತಹ ಸರಕುಗಳನ್ನು ಉತ್ಪಾದಿಸುವ ವಲಯದಿಂದ ಸಂಪನ್ಮೂಲಗಳನ್ನು ಯಾವುದರಲ್ಲಿ ಉತ್ಪಾದನಾ ಅನುಕೂಲ ಉತ್ತಮವಾಗಿರುತ್ತದೋ ಅಂತಹ ವಲಯಗಳಿಗೆ ವರ್ಗಾಯಿಸುವುದರಿಂದ ಆರ್ಥಿಕತೆಯಲ್ಲಿ ಸುಖಸಮೃದ್ಧಿ ಉತ್ತಮವಾಗುತ್ತದೆ.

ಸ್ವಯಂಪರಿಪೂರ್ಣತೆಯನ್ನು ಸಾಧಿಸಿಕೊಳ್ಳಲಾಗಿದೆ ಎಂದು ಭಾವಿಸಿದ್ದರೂ, ಅಂತಹ ದೇಶಗಳಿಗೂ ವಿದೇಶಿ ವ್ಯಾಪಾರ ಎಷ್ಟು ಮುಖ್ಯ ಎಂಬುದನ್ನು ಮೇಲಿನ ವಿದ್ಯಮಾನವು ತೋರಿಸುತ್ತದೆ. ಯಾವ ದೇಶವು ಸ್ವಯಂಪೂರ್ಣತೆಯನ್ನು ಸಾಧಿಸಿಕೊಂಡಿರುವುದಿಲ್ಲವೂ ಅದಕ್ಕೆ ವಿದೇಶಿ ವ್ಯಾಪಾರ ಸಂಪೂರ್ಣವಾಗಿ ಅಗತ್ಯ.

ಚೈನಾ ದೇಶದ ಅಭಿವೃದ್ಧಿಯನ್ನು ಇದಕ್ಕೆ ನಿದರ್ಶನವಾಗಿ ನೋಡಬಹುದು. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಭಾರತ ಮತ್ತು ಚೈನಾ 1990ರಲ್ಲಿ ಸಮಾನ ಸ್ಥಿತಿಯಲ್ಲಿದ್ದವು. ಭಾರತದ ಜನಸಂಖ್ಯೆಯು ಅಂದು ಚೈನಾದ ಜನಸಂಖ್ಯೆಗಿಂತಲೂ ಕಡಿಮೆಯಿದ್ದುದರಿಂದ ಭಾರತದ ತಲಾ ಜಿಡಿಪಿಯು ಚೈನಾದ ತಲಾ ಜಿಡಿಪಿಗಿಂತ ಉತ್ತಮವಾಗಿತ್ತು.

ಆದರೆ ಕಳೆದ ಮೂರು ದಶಕಗಳಲ್ಲಿ ಚೈನಾದ ಆರ್ಥಿಕತೆಯು ತೀವ್ರಗತಿಯಲ್ಲಿ ಬೆಳೆದಿದೆ. ನಾಗಾಲೋಟದಿಂದ ಬೆಳವಣಿಗೆಯನ್ನು ಸಾಧಿಸಿಕೊಂಡ ಚೈನಾ ಇಂದು ಇಂಗ್ಲೆಂಡಿಗಿಂತ ಉತ್ತಮ ಸ್ಥಾನದಲ್ಲಿದೆ. ಈ ರೀತಿಯ ತೀವ್ರಗತಿ ಬೆಳವಣಿಗೆಯಿಂದಾಗಿ ಇಂದು ಅದು ಭಾರತದ ಆರ್ಥಿಕತೆಯ ಗಾತ್ರಕ್ಕಿಂತ 4 ರಿಂದ 5 ಪಟ್ಟು ದೊಡ್ಡದಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅದು ಅಮೆರಿಕವನ್ನು ಪಲ್ಲಟಗೊಳಿಸಿ ಜಗತ್ತಿನ ಬೃಹತ್ ಆರ್ಥಿಕತೆಯಾಗುವ ಸಾಧ್ಯತೆಯಿದೆ.

ಈ ಎಲ್ಲ ಕಥೆಗಳು ಮತ್ತು ವಿದ್ಯಮಾನಗಳಿಗೂ ಭಾರತಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. 

ಚೈನಾದ ತೀವ್ರಗತಿ ಬೆಳವಣಿಗೆ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳಲ್ಲಿ ಆಂತರಿಕ ಆರ್ಥಿಕತೆಗೆ ಉತ್ತೇಜನ ನೀಡಲು, ವರಮಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಬಡತನವನ್ನು ಹೋಗಲಾಡಿಸಲು ಅದು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ನೀಡಿದ ಮಹತ್ವ ಮತ್ತು ಅದಕ್ಕೆ ತಕ್ಕಂತೆ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡದ್ದು ಕೇಂದ್ರ ಸ್ಥಾನದಲ್ಲಿದೆ. ಜಗತ್ತಿನ ರಫ್ತು-ಆಮದು ವ್ಯಾಪಾರದಲ್ಲಿ ಇದರ ಪಾಲು 1980ರ ದಶಕದಲ್ಲಿ ಶೇ.1 ರಷ್ಟಿದ್ದುದು 2018ರಲ್ಲಿ ಅನುಕ್ರಮವಾಗಿ ಶೇ.13 ಮತ್ತು ಶೇ.11 ರಷ್ಟಾಗಿದೆ. ಇದು ಯೂರೋಪಿಯನ್ ದೇಶಗಳಿಗಿಂತÀ ಅಧಿಕ ಪ್ರಮಾಣವಾಗಿದೆ ಮತ್ತು ಅಮೆರಿಕೆಗೆ ಸಮಸಮವಾಗಿದೆ.

ಇದಕ್ಕೆ ಭಿನ್ನವಾಗಿ ಭಾರತದ ವಿದೇಶಿ ವ್ಯಾಪಾರದ ಸಾಧನೆಯು ಇನ್ನೂ ಶೈಶಾವಸ್ಥೆಯಲ್ಲಿ ತೆವಳುತ್ತಿದೆ. ಉದಾಹರಣೆಗೆ ಜಗತ್ತಿನ ಸರಕುಗಳ ರಫ್ತಿನಲ್ಲಿ ಭಾರತದ ಪಾಲು ಸ್ವಾತಂತ್ರ್ಯ ಬಂದ ಸಂದರ್ಭದ ವರ್ಷಗಳಲ್ಲಿ (1948ರಲ್ಲಿ ಶೇ.2.2) ಯಾವ ಪ್ರಮಾಣದಲ್ಲಿತ್ತೋ ಅದಕ್ಕಿಂತ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ (2018ರಲ್ಲಿ ಶೇ.1.7) ಅದಕ್ಕಿಂತ ಕೆಳಮಟ್ಟದಲ್ಲಿದೆ.

ಏಷ್ಯಾದ ಇತರೆ ಸಹೋದರ ರಾಷ್ಟ್ರಗಳು ವಿದೇಶಿ ವ್ಯಾಪಾರಕ್ಕೆ ಮಹತ್ವ ನೀಡಿದ್ದರೆ ಭಾರತವು ಏಕೆ ಅದರಿಂದ ವಿಮುಖವಾಯಿತು? 

ವಸಾಹತುಶಾಹಿ ಆಡಳಿತದ ಮುಕ್ತ ವ್ಯಾಪಾರ ನೀತಿಗೆ ಪ್ರತಿಯಾಗಿ ಭಾರತ ಅಳವಡಿಸಿಕೊಂಡ ಆರ್ಥಿಕ ರಾಷ್ಟ್ರೀಯತೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ‘ಸ್ವಾವಲಂಬನೆಯನ್ನು ಸ್ವಯಂಪರಿಪೂರ್ಣತೆ ಎಂದು ಆರ್ಥಿಕ ರಾಷ್ಟ್ರೀಯತೆಯ ಸೀಮಿತ ಚೌಕಟ್ಟಿನಲ್ಲಿ ವ್ಯಾಖ್ಯಾನ ಮಾಡಿದ್ದು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಬಗ್ಗೆ ಆಳವಾಗಿ ಬೇರೂರಿದ್ದ ಅತಿಯಾದ ಗುಮಾನಿಗಳು ಕಾರಣ’ ಎಂದು ಸುರೇಶ್ ತೆಂಡುಲ್ಕರ್ ಮತ್ತು ಟಿ.ಎ.ಭವಾನಿ ಅವರು ‘ಅಂಡರ್‌ಸ್ಟಾಡಿಂಗ್ ರಿಫಾರ್ಮ್ಸ್’ ಎಂಬ ಕೃತಿಯಲ್ಲಿ ಹೇಳಿದ್ದಾರೆ.

ಸಮಾಜವಾದದ ಜೊತೆಗೆ ವಸಾಹತುಶಾಹಿ ಕಾಲದ ನಾಯಕತ್ವದಲ್ಲಿ ಖಾಸಗಿ ಉದ್ಯಮಗಳ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳು ಸೇರಿಕೊಂಡು ಆರ್ಥಿಕ ರಾಷ್ಟ್ರೀಯತೆಯು ಭಾರತದ ಅಭಿವೃದ್ಧಿಯ ಸಂಭಾವ್ಯ ಸಾಮರ್ಥ್ಯವನ್ನು ಕೆಲವು ದಶಕಗಳ ಕಾಲ ಹಿಂದೆ ತಳ್ಳಿಬಿಟ್ಟಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ನಂತರ ಮತ್ತೆ ಮತ್ತೆ ‘ಆತ್ಮನಿರ್ಭರ ಭಾರತ್ ಅಭಿಯಾನ್’ ಎಂಬ ಹೊಸ ‘ವಿಷನ್’ ಬಗ್ಗೆ ಮಾತನಾಡುತ್ತಿದ್ದಾರೆ.

ಆದರೆ ಈ ಗುರಿಯನ್ನು ಹೇಗೆ ಸಾಧಿಸಿಕೊಳ್ಳಲಾಗುತ್ತದೆ ಎಂಬುದನ್ನು ಕುರಿತಂತೆ ಯಾವ ನಿರ್ಣಯಾತ್ಮಕ ಕಾರ್ಯನೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಗೋಚರವಾಗದಿರುವುದು ಅನೇಕ ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದು ಸ್ಪಷ್ಟವಾಗಿ ಆಳುವ ಪಕ್ಷದ ವೈಚಾರಿಕ ಪಾಲಕ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ನೀಡುಗಾಲದಿಂದ ಒತ್ತಾಯಿಸುತ್ತಿರುವ ‘ಸ್ವದೇಶಿ’ ಕಡೆಗಿನ ನಡೆಯೇ?

ಕಳೆದ ಕೆಲವು ವರ್ಷಗಳಿಂದ ಭಾರತವು ಹೆಚ್ಚು ಹೆಚ್ಚು ಸಂರಕ್ಷಣಾತ್ಮಕ ನಿಲುವನ್ನು ಪ್ರತಿಪಾದಿಸುತ್ತಿದೆ ಮತ್ತು ಇದಕ್ಕೆ ಪುರಾವೆಯೆಂದರೆ ಅದು ವಿಧಿಸುತ್ತಿರುವ ಅಧಿಕಮಟ್ಟದ ಆಮದು ಸುಂಕಗಳು.

ಭಾರತದ ಮಾರುಕಟ್ಟೆಯೊಳಗೆ ಎಲ್ಲ ಬಗೆಯ ಆಮದು ಸರಕುಗಳು ಎಲ್ಲಿ ಪ್ರವಾಹದೋಪಾದಿಯಲ್ಲಿ (ಚೈನಾದಿಂದ ಉಕ್ಕು, ನ್ಯೂಜಿಲ್ಯಾಂಡ್‌ನಿಂದ ಹಾಲು) ನುಗ್ಗಿಬಿಡುತ್ತವೋ ಎಂಬ ಭಯದಿಂದ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಭಾರತವು ‘ಪ್ರಾದೇಶಿಕ ವಿಸ್ತೃತ ಆರ್ಥಿಕ ಪಾಲುಗಾರಿಕೆ’ ಸಂಘಟನೆಯಿAದ ಹೊರಗಡೆಯಿರುವ ತೀರ್ಮಾನವು ಆತಂಕಕಾರಿ ನಿದರ್ಶನವಾಗಿದೆ. 

ಇವುಗಳಲ್ಲದೆ ಇನ್ನೂ ಅನೇಕ ಸಮಸ್ಯೆಗಳಿವೆ. ಕಳೆದ ವಾರ ಅನೇಕ ಭಾರತೀಯರು ವಿದೇಶಿ ವಿನಿಮಯ ಮೀಸಲು 500 ಮಿಲಿಯನ್ ಡಾಲರ್ ಗಡಿ ದಾಟಿದ್ದನ್ನು ಉತ್ಸವದ ರೀತಿಯಲ್ಲಿ ಆಚರಿಸಿದ್ದು ಇದಕ್ಕೆ ಮತ್ತೊಂದು ನಿದರ್ಶನವಾಗಿದೆ (ಪ್ರಮುಖವಾಗಿ ವಿದೇಶಗಳಿಂದ ನೇರ ಮತ್ತು ಪೋರ್ಟ್ಫೋಲಿಯೋ ಬಂಡವಾಳ ಹರಿದು ಬಂದುದು ಇದಕ್ಕೆ ಕಾರಣವಾಗಿದೆ). ಕಳೆದ ಆರು ವರ್ಷಗಳಿಂದ ಭಾರತಕ್ಕೆ ಅಗಮಿಸುವಂತೆ ಮತ್ತು ಇಲ್ಲಿ ಬಂಡವಾಳ ಹೂಡುವಂತೆ ಅಂತಾರಾಷ್ಟ್ರೀಯ ಬ್ರಾಂಡುಗಳ ಮನವೊಲಿಸಲು ಪ್ರಧಾನಮಂತ್ರಿ ಅವರು ಅಹರ್ನಿಶಿ ಶ್ರಮ ಪಡುತ್ತಿದ್ದಾರೆ. ಆದರೆ ಖುಲ್ಲಂಖುಲ್ಲಾ ಭಾರತೀಯರು ಭಾರತೀಯ ಬ್ರಾಂಡುಗಳನ್ನೇ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಿರುವುದು ಅವರ ‘ಆಹ್ವಾನ’ದ ನೀತಿಗೆ ಪೂರಕವಾಗಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಅಲ್ಪಾವಧಿಯಲ್ಲಿ ಸ್ವಾವಲಂಬನೆಯು ಬಳಕೆದಾರರ ಹಿತಾಸಕ್ತಿಗಳಿಗೆ ಪ್ರತಿಕೂಲವಾಗುತ್ತದೆ. ಏಕೆಂದರೆ ಅವರು ಒಂದೋ ವಿದೇಶಿ ಸರಕುಗಳಿಗೆ ಪ್ರತಿಯಾಗಿ ಭಾರತೀಯ ಸರಕುಗಳನ್ನು ದುಬಾರಿ ಬೆಲೆ ನೀಡಿ ಕೊಳ್ಳಬೇಕು ಅಥವಾ ಸೋವಿ ಬೆಲೆಗೆ ದೊರೆಯುವ ಅತ್ಯುತ್ತಮ ಗುಣಮಟ್ಟದ ಸರಕುಗಳನ್ನು ಅನುಭೋಗಿಸುವ ಅವಕಾಶವನ್ನು ಕಳೆದುಕೊಂಡು ಅಲ್ಪಗುಣಮಟ್ಟದ ಭಾರತೀಯ ಸರಕುಗಳನ್ನು ಕೊಳ್ಳುವುದಕ್ಕೆ ಸೀಮಿತರಾಗಬೇಕು.

ಈ ಅರ್ಥದಲ್ಲಿ, ಇಂದಿನ ಸಂದರ್ಭದಲ್ಲಿ ಸದರಿ ನೀತಿಯು ಭಾರತದ ಈ ಹಿಂದಿನ ಅನೇಕ ನೀತಿಗಳಂತೆ ಉದ್ದಿಮೆದಾರರು ಗ್ರಾಹಕರನ್ನು ದೋಚುವಂತೆ ಮಾಡುತ್ತದೆ. ಏಕೆಂದರೆ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಉದ್ದಿಮೆಗಾರರು ಉತ್ತಮ ರೀತಿಯಲ್ಲಿ ಅಧಿಕಾರಸ್ಥರ/ಆಡಳಿತಗಾರರ ಮೇಲೆ ಒತ್ತಡ ತರಬಲ್ಲರು. ಇದಲ್ಲದೆ, ಎದುರಾಗುತ್ತಿರುವ ಆತಂಕಕಾರಿ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನದಲ್ಲಿ ಮತ್ತೆ ದೇಶವನ್ನು ‘ನಿರ್ದೇಶನ-ನಿಯಂತ್ರಣ’ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಸರ್ಕಾರವು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಉದ್ದೇಶ ‘ಇಲ್ಲಿಯೇ ಉದ್ದಿಮೆ; ಇಲ್ಲಿಯೇ ಉತ್ಪಾದನೆ’ (ಪ್ಲಗ್ ಆಂಡ್ ಪ್ಲೇ) ಎಂಬುದಾಗಿದೆ. ‘ಇಲ್ಲಿಯೇ ಉದ್ಯಮ; ಇಲ್ಲಿಯೇ ಉತ್ಪಾದನೆ’ ಆರ್ಥಿಕತೆ ಎಂಬುದು ಏನೇ ಇರಲಿ, ನಿರ್ದೇಶನ-ನಿಯಂತ್ರಣ ನೀತಿಯ ಅಂಶಗಳನ್ನು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪಾಲುಗೊಳ್ಳಬೇಕೆಂಬ ಆಶಯದ ಜೊತೆ ಬೆರೆಸಬಾರದು. ನಿರ್ದೇಶನ-ನಿಯಂತ್ರಣ ಆರ್ಥಿಕತೆಯನ್ನು ಹೇಗೆ ಚಿಮ್ಮು ಹಲಗೆಯಾಗಿ ಬಳಸಿಕೊಂಡಿತು ಎಂಬುದಕ್ಕೆ ಚೈನಾ ಒಂದು ಮಹತ್ವದ ಉದಾಹರಣೆಯಾಗಿದೆ.

ಸ್ವಾವಲಂಬನೆ ಮತ್ತು ಸ್ವಯಂಪೂರ್ಣತೆ ಎಂಬ ನೀತಿಯ ಚರ್ಚೆಗೆ ಮತ್ತೊಮ್ಮೆ ಬಂದರೆ ಆಧುನಿಕ ಆರ್ಥಿಕತೆಗೆ ಇವೆಲ್ಲ ಅಪೇಕ್ಷಣೀಯ ಗುರಿಗಳಾಗಿವೆ. ಆದರೆ ಇವು ಒಂದೋ ಸಾಧ್ಯವಾಗದ ಅಥವಾ ಕೈಗೆಟುಕದ ರೀತಿಯಲ್ಲಿ ನಮ್ಮ ಉದ್ದೇಶಕ್ಕೆ ವ್ಯತಿರಿಕ್ತವಾಗಿಬಿಡುತ್ತವೆ.

ಇದಕ್ಕೆ ಒಂದು ಪ್ರಚೋದನಕಾರಿ ಉದಾಹರಣೆಯನ್ನು ನೀಡಬಯಸುತ್ತೇನೆ. ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿಕೊಂಡಿರುವುದನ್ನು ಭಾರತವು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ರಾಸಾಯಿನಿಕ ಗೊಬ್ಬರಕ್ಕೆ ಬಂದರೆ ಅದು ಆಹಾರೋತ್ಪಾದನೆಯಲ್ಲಿ ಸಾಧಿಸಿಕೊಂಡಿರುವ ಸಾಧನೆಯಲ್ಲಿ ಒಂದು ಅನಿವಾರ್ಯವಾದ ಕಚ್ಚಾ ಪದಾರ್ಥವಾಗಿದೆ. ಇದರಲ್ಲಿ ಭಾರತವು ಸ್ವಾವಲಂಬಿಯಾಗಿಲ್ಲ. ಇದು ಮೂರು ಬಗೆಯ ನೈಟ್ರೋಜನ್/ಯೂರಿಯಾ (ಸಸಾರಜನಕ), ಫಾಸ್ಪಪರಸ್ ಮತ್ತು ಪೊಟ್ಯಾಷಿಯಮ್‌ಗಳಿಗೂ ಈ ಮಾತು ನಿಜ. ವಾಸ್ತವವೇನೆಂದರೆ ಮುಂದೆಯೂ ಈ ಮೂರು ಸರಕುಗಳಿಗೆ ಸಂಬಂಧಿಸಿದಂತೆ ಸ್ವಾವಲಂಬನೆ ಸಾಧ್ಯವಿಲ್ಲ.

ಏಕೆ ಸಾಧ್ಯವಿಲ್ಲ? ರಸಗೊಬ್ಬರದ ಉತ್ಪಾದನಾ ವೆಚ್ಚದಲ್ಲಿ ಇದರ ಉತ್ಪಾದನೆಗೆ ಅಗತ್ಯವಾದ ಕಚ್ಚಾ ಪದಾರ್ಥ ನೈಸರ್ಗಿಕ ಅನಿಲದ ಪಾಲೇ ಶೇ. 75 ರಿಂದ 80 ರಷ್ಟಿದೆ. ಇತರೆ ಅಗತ್ಯಗಳಿಗೆ ಬೇಕಾದ ಇಂಧನಕ್ಕೆ ಸಂಬಂಧಿಸಿದಂತೆ ಭಾರತದ ಉದ್ದಿಮೆಗಳು ನೈಸರ್ಗಿಕ ಅನಿಲವನ್ನು ಆಂತರಿಕ ಮಾರುಕಟ್ಟೆಯ ಬೆಲೆಗಿಂತ ಎರಡು-ಮೂರು ಪಟ್ಟು ಹೆಚ್ಚು ನೀಡಿ ಆಮದು ಮಾಡಿಕೊಳ್ಳುತ್ತಿವೆ. ಆದರೆ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವನ್ನೆಲ್ಲಾ ಗೊಬ್ಬರದ ಉತ್ಪಾದನೆಗೆ ಹರಿಸಿದರೆ ವಿದ್ಯುತ್ ಉತ್ಪಾದನೆ, ಸಿಎನ್‌ಜಿ ಉತ್ಪಾದನೆಗೆ ಹೊಡೆತ ಬೀಳುತ್ತದೆ.

ಮುಂದಿನ ಕೆಲವು ವಾರ ಅಥವಾ ತಿಂಗಳುಗಳಲ್ಲಿ ‘ಆತ್ಮನಿರ್ಭರ ಭಾರತ ಅಭಿಯಾನ’ದ ಬಗ್ಗೆ ನಿರ್ದಿಷ್ಟವಾದ ನೀತಿಯನ್ನು ರೂಪಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆಶಿಸೋಣ. ಅದಿಲ್ಲದಿದ್ದರೆ ಈ ಹಿಂದೆ ಅರಬೆಂದ ರೀತಿಯಲ್ಲಿ ನಿರ್ವಹಿಸಿದ ಮೇಕ್ ಇನ್ ಇಂಡಿಯಾ ನೀತಿಯ ಕಥೆಯಾಗುತ್ತದೆ. ಈ ಹಿಂದೆ ಸ್ವಾತಂತ್ರö್ಯ ಬಂದ ಸಂದರ್ಭದಲ್ಲಿನ ಆರ್ಥಿಕ ರಾಷ್ಟ್ರೀಯತೆಯು ಉಂಟುಮಾಡಿದಂತೆ ಮುಂದಿನ ದಿನಗಳಲ್ಲಿ ಮೇಲ್ಕಂಡ ಮಹತ್ವದ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯನೀತಿಯು ಭಾರತದ ಆರ್ಥಿಕ ಬೆಳವಣಿಗೆಗೆ ಹಿನ್ನೆಡೆಯನ್ನುಂಟು ಮಾಡುವುದಿಲ್ಲ ಎಂದು ಆಶಿಸೋಣ.

ಮೂಲ: ಇಂಡಿಯನ್‌ಎಕ್ಸ್ ಪ್ರೆಸ್.ಕಾಮ್

 

*ಲೇಖಕರು ದ ಇಂಡಿಯನ್ ಎಕ್ಸ್ ಪ್ರೆಸ್ಪತ್ರಿಕೆಯಲ್ಲಿ ಉಪ ಸಹಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published.