ಆತ್ಮವಂಚನೆಯ ಪ್ರಸಂಗಗಳು

ಎಷ್ಟೋ ಸಂದರ್ಭಗಳಲ್ಲಿ ಅಪ್ರಿಯವಾದ ಸತ್ಯವನ್ನು ಆಡಲು ಇಷ್ಟಪಡದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳುವವರ ಸಂಖ್ಯೆ ದೊಡ್ಡದು. ಅಂತಹವರಲ್ಲಿ ನೀವೂ ಒಬ್ಬರಾ…?!

ಪ.ರಾಮಕೃಷ್ಣ ಶಾಸ್ತ್ರಿ

ಒಂದು ದೊಡ್ಡ ಸಮಾರಂಭಕ್ಕೆ ಹೋಗಿದ್ದೀರಿ. ನಿಮ್ಮ ಹತ್ತಿರ ಕುಳಿತವರು ಭೈರಿಗೆಯ ಹಾಗೆ ಏನಾದರೊಂದು ಮಾತನಾಡುತ್ತ ನಿಮ್ಮ ಕಿವಿಯನ್ನು ಕೊರೆಯುವರು. ಮಾತನಾಡುತ್ತಾರೆ, ಮಾರನಾಡುತ್ತಾರೆ, ಮಾತನಾಡುತ್ತಾರೆ. ನಿಮ್ಮನ್ನು ತುಟಿ ತೆರೆಯಲು ಬಿಡದೆ ಮಾತನಾಡುತ್ತಾರೆ. ಹಳಿ ತಪ್ಪುತ್ತಿರುವ ಸಂಸ್ಕತಿಯ ಬಗೆಗೆ, ಇಂದಿನ ಹುಡುಗಿಯರ ಲಂಗ ಮೊಣಕಾಲು ದಾಟಿ ಮೇಲೇರುತ್ತಿರುವ ಬಗೆಗೆ, ಯುವಕರು ದಾರಿ ತಿಳಿಯದೆ ಪೇಚಾಡುತ್ತಿರುವ ಬಗೆಗೆ, ನರೇಂದ್ರ ಮೋದಿ ಮಾಡಿದ ಒಳ್ಳೆ ಕೆಲಸಗಳ ಬಗೆಗೆ, ಸಿದ್ಧರಾಮಯ್ಯನ ಬ್ರಹ್ಮದ್ವೇಷದ ಬಗೆಗೆ ಗೀಗಿ ಪದದಂತೆ ಹಲವಾರು ವಿಷಯಗಳಲ್ಲಿ ಅವರದೇ ಆದ ತರ್ಕಗಳನ್ನು ಅರ್ಜುನನ ಬತ್ತಳಿಕೆಯಿಂದ ಹೊರಬರುವ ಬಾಣಗಳ ಹಾಗೆ ಹೇಳುತ್ತಲೇ ಇದ್ದಾರೆ.

ಖಂಡಿತ ಆ ವಿಷಯ ನಿಮಗೆ ಬೇಕಾಗಿಲ್ಲ. ಮಾತನಾಡಲು ಬಿಟ್ಟರೆ ಅವರಿಗಿಂತ ಚೆನ್ನಾಗಿ ಈ ವಿಷಯ ಮಾತನಾಡಲು ನಿಮಗೆ ಗೊತ್ತಿದೆಯಾದರೂ ಬಾಯ್ತೆರೆಯಲು ಅವರು ಬಿಡುವುದಿಲ್ಲ. ನೀವು ಬಾಯಾಕಳಿಸಿದರೂ ನಿಮ್ಮ ನಿರಾಸಕ್ತಿ ಅವರಿಗೆ ಗೊತ್ತಾಗುವುದಿಲ್ಲ. ಮೊಬೈಲು ತೆರೆದು ಆಗಾಗ ವಾಟ್ಸ್ ಆ್ಯಪ್‍ಗೆ ಬಂದಿರಬಹುದಾದ ಹೊಸ ಸಂದೇಶಗಳ ಬಗೆಗೆ ನೀವು ವೀಳ್ಯದೆಲೆಗೆ ಸುಣ್ಣ ಹಚ್ಚಿದಂತೆ ಮೊಬೈಲ್ ಪರದೆಯ ಮೇಲೆ ಬೆರಳಾಡಿಸುತ್ತ ಹುಡುಕುತ್ತಿದ್ದರೂ ನೀರೊಳಗಿಂದ ತೆಗೆದ ಮೀನಿನ ಹಾಗೆ ಒದ್ದಾಡುತ್ತೀರಿ. ನಿಮ್ಮ ದುರಿತವನ್ನು ಅವರು ಅರ್ಥ ಮಾಡಿಕೊಳ್ಳದೆ ಅವರ ವಾಗ್ ಪ್ರೌಢಿಮೆಯನ್ನು ನಿಮ್ಮ ಕಿವಿಗಳಲ್ಲಿ ಕಬ್ಬಿಣದ ಕಡಲೆಯ ಹಾಗೆ ಬಿತ್ತುತ್ತಿರುವಾಗ ಮನಸ್ಸಿನೊಳಗೆ ಅವರಿಗೆ ನೀವು ಹಿಡಿಶಾಪ ಹಾಕುತ್ತಿದ್ದಿರಿ, ಹೌದಾ?

ಮಧ್ಯೆ ಮಧ್ಯೆ ಅವರು, `ನನ್ನ ಮಾತಿನಿಂದ ನಿಮಗೆ ಬೋರ್ ಆಯಿತೆ?’ ಎಂದು ಹಲವು ಸಲ ಕೇಳಿದಾಗಲೂ ನೀವು ಏನು ಹೇಳಿದಿರಿ? `ಛೇ ಛೇ ಇಲ್ಲವಲ್ಲ! ಎಷ್ಟು ಕುಷಿಯಾಗುತ್ತದೆ ನಿಮ್ಮ ಮಾತು ಕೇಳುವುದಕ್ಕೆ! ಬಹಳ ಚೆನ್ನಾಗಿ ವಿಷಯವನ್ನು ಹೇಳಿದಿರಿ, ತುಂಬ ಒಳ್ಳೆಯದಿತ್ತು’ ಅಂತ ದೇಶಾವರಿ ನಗು ಸೂಸುತ್ತ ಹೇಳಿದ ನಿಮ್ಮಲ್ಲಿ ಅವರು, `ಹಾಗಿದ್ದರೆ ನಾನು ಯಾವ ವಿಷಯವೆಲ್ಲ ಮಾತನಾಡಿದೆ?’ ಎಂದು ಕೇಳಿಬಿಟ್ಟರೆ ಉತ್ತರ ನಿಮ್ಮ ಬಳಿ ಇರಲಿಕ್ಕಿಲ್ಲ. ಯಾಕೆಂದರೆ ಅವರ ಒಂದು ಮಾತನ್ನೂ ಕೇಳಿಸಿಕೊಳ್ಳದೆ ಮನಸ್ಸಿನ ಮೂಲೆಯಲ್ಲಿ ಅವರಿಗೆ ಶಾಪ ಮಾತ್ರ ಹಾಕುತ್ತಿದ್ದ ನೀವು ಈಗ ಕೊಟ್ಟಿರುವುದು ಆತ್ಮವಂಚನೆಯ ಉತ್ತರ ಅಲ್ಲವೆ! `ನಾನು ಯಾರ ಮುಲಾಜಿಗೂ ಸಿಲುಕಿ ಸುಳ್ಳು ಹೇಳುವವನಲ್ಲ. ಸತ್ಯವನ್ನು ನಿಷ್ಠುರವಾಗಿ ಹೇಳಿಬಿಡುತ್ತೇನೆ’ ಎನ್ನುತ್ತಿದ್ದವರು, `ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬಂತೆ ಇಲ್ಲಿ ಅಪ್ರಿಯವಾದ ಸತ್ಯ ಹೇಳಿದರೆ ನಿಷ್ಠುರವಾಗುತ್ತದೆಂದು ಸುಮ್ಮನೆ ಅವರ ಸಂತೋಷಕ್ಕಾಗಿ ಹೇಳಿದ ಅಪ್ಪಟ ಸುಳ್ಳಿನಿಂದಾಗಿ ಅವರಿಗೆ ಅವರದೇ ಮಾತಿನ ಶಕ್ತಿಯ ಮೇಲೆ ತುಂಬ ವಿಶ್ವಾಸ ಬಂದು ಇನ್ನಷ್ಟು ಜನರ ಜೀವ ಹಿಂಡಲು ನೀವು ಪರೋಕ್ಷ ಅರ್ಹತಾಪತ್ರ ನೀಡಿದ ಹಾಗೆ ಆಗಲಿಲ್ಲವೆ?

`ಹೇಗಿತ್ತು ಸ್ಯಾಕ್ಸೋಫೋನ್? ಇಲ್ಲೇ ಹತ್ತಿರದವರು. ತುಂಬ ಪ್ರಸಿದ್ಧರು. ಕುಂದನಲಾಲ್ ಸೈಗಲ್ ಇದನ್ನು ಕೇಳಿ ಭಾವೋತ್ಕರ್ಷದಿಂದ ಕುಣಿದಾಡಿದರಂತೆ’ ಎಂದಾಗ ನೀವು ಹರಳೆಣ್ಣೆ ಕುಡಿದ ಮುಖ ಮಾಡಿ, `ಏನೂ ಚೆನ್ನಾಗಿರಲಿಲ್ಲ, ಭಯಾನಕ ಅನುಭವವಾಯಿತು.

ಇನ್ನು ಅದೇ ಸಮಾರಂಭ ಅದ್ಧೂರಿಯಾಗಬೇಕೆಂದು ಯಜಮಾನರು ಸ್ಯಾಕ್ಸೋಫೋನ್ ವಾದನದ ವ್ಯವಸ್ಥೆಗೆ ಎಷ್ಟೋ ಸಾವಿರ ಮುಗಿಸಿದ್ದಾರೆ. ಸೌಂಡ್ ಬಾಕ್ಸ್ ಹಾಕಿಸಿ ಒಂದು ಮೈಲು ದೂರದಲ್ಲಿದ್ದವರಿಗೂ ಅವರ ಅದ್ಧೂರಿತನ ಸಶಬ್ದವಾಗಿ ತಲುಪುವಂತೆ ಮಾಡಿ ಅವರ ಕಿವಿಗಳಲ್ಲಿ ತಿಂಗಳಾನುಗಟ್ಟಲೆಯಿಂದ ರಾಶಿ ಬಿದ್ದ ಕೂಳೆ ಹೊರಬಂದು ಸ್ವಚ್ಛವಾಗುವಂತೆ ಮಾಡಿದ್ದಾರೆ. ನಿಮಗಂತೂ ಅದರಿಂದ ಭಯಂಕರ ಹಿಂಸೆಯಾಗಿದೆ. ಯಾರಾದರೂ ಬಂದು, `ಹೇಗಿದ್ದೀರಿ?’ ಎಂದು ವಿಚಾರಿಸಿದರೆ, `ಚೆನ್ನಾಗಿದ್ದೇನೆ’ ಎಂಬ ಉತ್ತರವನ್ನು ಅವರ ಕಿವಿಯೊಳಗೆ ತೂರಿಸಲು ನಿಮ್ಮ ಗಂಟಲಿನ ಸರ್ವಶಕ್ತಿಯನ್ನೂ ಬಳಸಬೇಕಾಗಿ ಬಂದಿದೆ. ಆದರೂ ಮನೆ ಯಜಮಾನರು, `ಹೇಗಿತ್ತು ಸ್ಯಾಕ್ಸೋಫೋನ್? ಇಲ್ಲೇ ಹತ್ತಿರದವರು. ತುಂಬ ಪ್ರಸಿದ್ಧರು. ಕುಂದನಲಾಲ್ ಸೈಗಲ್ ಇದನ್ನು ಕೇಳಿ ಭಾವೋತ್ಕರ್ಷದಿಂದ ಕುಣಿದಾಡಿದರಂತೆ’ ಎಂದಾಗ ನೀವು ಹರಳೆಣ್ಣೆ ಕುಡಿದ ಮುಖ ಮಾಡಿ, `ಏನೂ ಚೆನ್ನಾಗಿರಲಿಲ್ಲ, ಭಯಾನಕ ಅನುಭವವಾಯಿತು. ಮದುವೆ, ಮುಂಜಿಯಂತಹ ಫಂಕ್ಷನುಗಳಲ್ಲಿ ಇದನ್ನೆಲ್ಲ ಇಟ್ಟುಕೊಂಡರೆ ಯಾರಲ್ಲೂ ಏನೂ ಮಾತನಾಡಲಾಗುವುದಿಲ್ಲ’ ಎಂದು ನೇರ, ನಿಷ್ಠುರ, ನಿರಂತರ ಸತ್ಯವನ್ನು ದೇವರಾಣೆ ಹೇಳುವುದಿಲ್ಲ.

ಧರ್ಮರಾಯರಂತಹ ನೀವು ಸಭೆಯಲ್ಲಿ ಕುಳಿತ ಒಂದಿಬ್ಬರು ಕಲಾರಸಿಕರ ಹೊರತು ಉಳಿದ ಎಲ್ಲರಿಗೂ ತಾಳಲಾಗದ ವೇದನೆಯಾಗಿದೆಯೆಂಬುದು ಗೊತ್ತಿದ್ದುಕೊಂಡೂ ಅಪ್ಪಟ ಸುಳ್ಳೇ ಹೇಳಿದಿರಿ ತಾನೆ! `ವಾದನ ಅಮೋಘವಾಗಿತ್ತು. ನಾನು ಸದ್ಯ ಎಲ್ಲಿಯೂ ಇಷ್ಟು ಒಳ್ಳೆಯ ವಾದನ ಕೇಳಿಯೇ ಇಲ್ಲ. ಕದ್ರಿ ಗೋಪಾಲನಾಥರನ್ನು ಬಿಟ್ಟರೆ ಬೇರೆ ಯಾರೂ ಈ ಕ್ಷೇತ್ರದಲ್ಲಿ ಇಲ್ಲ ಅಂದುಕೊಂಡಿದ್ದೆ. ಆದರೆ ಇವರಿನ್ನೂ ಯುವಕರು ನೋಡಿ. ಅವರ ಪ್ರಾಯಕ್ಕಾಗುವಾಗ ಅಷ್ಟೇ ಪ್ರಸಿದ್ಧಿಗೆ ಬರುವ ಲಕ್ಷಣಗಳಿವೆ. ಅದರಲ್ಲಿಯೂ ವಾತಾಪಿ ಗಣಪತಿಂ ಕೀರ್ತನೆಗೆ ಹಂಸಧ್ವನಿ ರಾಗದಲ್ಲಿ ಜೀವ ತುಂಬಿದರಲ್ಲ, ನಾನು ಮೈಮರೆತುಬಿಟ್ಟೆ!’ ಅನ್ನುತ್ತೀರಿ.

ಎಂಥ ಕಲಾವಿಮರ್ಶಕರು ಮಾರಾಯ್ರೇ ನೀವು! ಆದರೆ ಅವರು ಈ ಕೀರ್ತನೆಯನ್ನು ನುಡಿಸಿದ್ದರೋ ಇಲ್ಲವೋ ಎಂಬುದು ನಿಮಗೂ ಗೊತ್ತಿಲ್ಲ. ಮನೆ ಯಜಮಾನರಂತೂ ಯೋಚಿಸಿಯೂ ಇರಲಿಕ್ಕಿಲ್ಲ. ಅವರಿಗೆ ಹಣ ಖರ್ಚು ಮಾಡಿದ್ದಕ್ಕೆ ನಾಲ್ಕು ಜನ ಹೊಗಳಿದರೆ ಸಮಾಧಾನ. ಸತ್ಯವನ್ನು ನೇರವಾಗಿ ಹೇಳುತ್ತೇನೆ ಅಂತ ನೀವು ಹರಿಶ್ಚಂದ್ರನ ಪಾರ್ಟು ಮಾಡಿ, `ಇದನ್ನೆಲ್ಲ ಸಮಾರಂಭಗಳ ಮಧ್ಯೆ ಇಡಬಾರದು’ ಎಂದು ಬುದ್ಧಿ ಹೇಳಲು ಹೊರಟರೆ ಅವರು ನಿಮ್ಮ ಬಗೆಗೆ ಅದೆಂತಹ ದುರ್ಭಾವನೆ ತಳೆಯಬಹುದೆಂಬುದು ಗೊತ್ತಿದ್ದ ನೀವು, ಮನೆಗೆ ಬಂದ ಮೇಲೆ ಹೆಂಡತಿಯ ಮುಂದೆ, `ಪಿಟ್ಟಾಸಿ ಮನುಷ್ಯ. ಊಟಕ್ಕೆ ಬರೇ ಹತ್ತು ರೂಪಾಯಿ ಊಟ ದಕ್ಷಿಣೆ ಕೊಟ್ಟ. ಅವನಿಗೇನು ಬೇಕಾದಷ್ಟಿದೆ. ಐವತ್ತು ರೂಪಾಯಿ ಕೊಡಬಹುದಿತ್ತು. ಆದರೆ ಮಂಟಪ ಡೆಕೋರೇಷನ್, ಕಿವಿ ಕೊರೆಯುವ ವಾದ್ಯಕ್ಕೆ ಲಕ್ಷಗಟ್ಟಲೆ ಮುಗಿಸಿದ್ದಾನೆ’ ಎಂದು ಬೈಯುವಾಗ ಯಜಮಾನನಲ್ಲಿ ನೀವಾಡಿದ ಮಾತು ಆತ್ಮವಂಚನೆಯದು ಎಂದು ನಿಮಗನಿಸುತ್ತದೆಯೋ ಇಲ್ಲವೊ?

ನಯವಿನಯಗಳಿಂದ ಪ್ರತಿಯೊಬ್ಬನ ಮುಂದೆಯೂ ಬಾಗಿ, `ಸಾವಕಾಶವಾಗಿ ಊಟ ಮಾಡಿ’ ಎಂದು ಉಪಚರಿಸಿ, `ಹೇಗಾಗಿದೆ, ಊಟ ಮಾಡುವ ಹಾಗೆ ಉಂಟೋ?’

ಊಟಕ್ಕೆ ಕುಳಿತಿದ್ದೀರಿ. ಬೇಕು ಅಂತ ಇಷ್ಟಪಟ್ಟು ಹಾಕಿಸಿಕೊಂಡ ಪದಾರ್ಥಗಳನ್ನು ತಿನ್ನದೆ ಎಲೆಯ ಮೂಲೆಯಲ್ಲಿ ಗೋರಿ ಕಟ್ಟಿದ್ದೀರಿ. ಮನೆ ಯಜಮಾನನ ನಾಟಕೀಯ ಪ್ರವೇಶವಾಗುತ್ತದೆ. ಕೈಯಲ್ಲಿ ಕೊಂಬುಗಿಂಡಿಯಿದೆ. ನಯವಿನಯಗಳಿಂದ ಪ್ರತಿಯೊಬ್ಬನ ಮುಂದೆಯೂ ಬಾಗಿ, `ಸಾವಕಾಶವಾಗಿ ಊಟ ಮಾಡಿ’ ಎಂದು ಉಪಚರಿಸಿ, `ಹೇಗಾಗಿದೆ, ಊಟ ಮಾಡುವ ಹಾಗೆ ಉಂಟೋ?’ ಎಂದು ಕೇಳುತ್ತಾನೆ. ನಿಮ್ಮ ಎಲೆಯ ತುದಿಯಲ್ಲಿ ದೊಡ್ಡ ಪರಿತ್ಯಕ್ತ ತಿನಸುಗಳ ಗೋರಿ ಕಟ್ಟಿದ್ದರೂ, `ಬಹಳ ಚೆನ್ನಾಗಿದೆ, ಒಂದಕ್ಕಿಂತ ಒಂದು ಉತ್ಕಷ್ಟವಾಗಿದೆ. ಮೃಷ್ಟಾನ್ನ ಭೋಜನ!’ ಎಂದು ಹೊಗಳುವವರು ಮನೆಗೆ ಹೋದ ಬಳಿಕ, `ಒಂದು ಸಾಂಬಾರು ಇತ್ತು, ಖಾರ ಅಂದ್ರೆ ಖಾರ! ತಿನ್ನಲಿಕ್ಕಾಗದೆ ಬಿಟ್ಟೆ. ಅವಿಲಿಗೆ ಉಪ್ಪೇ ಹಾಕಿರಲಿಲ್ಲ. ಇದ್ದ ಉಪ್ಪನ್ನೆಲ್ಲ ವಡೆಗೆ ಸುರಿದಿದ್ದಾರೆ. ವಡೆ ತಿಂದ ಮೇಲೆ ಬಾಯಾರಿಕೆ ನೀಗಲಿಕ್ಕೆ ಒಂದು ಕೆರೆ ನೀರು ಕುಡೀಬೇಕಾಗಿತ್ತು’ ಎಂದು ಒಂದು ಪದಾರ್ಥಕ್ಕೂ ಅಂಕ ಹಾಕದೆ ಟೀಕಿಸುವುದಿಲ್ಲವೆ? ಸತ್ಯ ಹೇಳಿ, ಇದು ಆತ್ಮವಂಚನೆಯೇ ತಾನೆ?

ನೀವು ಹಣ ಕೊಟ್ಟು ಪುಸ್ತಕಗಳನ್ನು ಓದುವವರಲ್ಲ ಎಂಬುದು ನಿಮಗೆ ಖಂಡಿತ ಗೊತ್ತಿದೆ. ನಿಮಗೊಬ್ಬ ಯುವ ಕವಿ ಬಹಳ ಕಷ್ಟದಲ್ಲಿ ಹೊರತಂದ ತನ್ನ ಕವನ ಸಂಕಲನವನ್ನು ಉಚಿತವಾಗಿ ಅರ್ಪಿಸಿದಾಗ ಎಂತಹ ಸಾಹಿತ್ಯ ಸರಸ್ವತಿಯ ಆರಾಧಕರೋ ಎಂಬ ಹಾಗೆ ಫೋಸು ಕೊಟ್ಟು ಅದನ್ನು ತೆಗೆದುಕೊಳ್ಳುತ್ತೀರಿ. ಸ್ವಲ್ಪ ಹೊತ್ತಿನ ಬಳಿಕ ಅವನು ನಿಮ್ಮ ಬಳಿಗೆ ಬಂದು, `ಸರ್, ಪುಸ್ತಕ ನೋಡಿದಿರೋ? ಹೇಗುಂಟು?’ ಅಂತ ಕೇಳುತ್ತಾನೆ. ನೀವು ಒಂದೆರಡು ಪುಟ ಬಿಡಿಸಿ ಮುನ್ನುಡಿ ಯಾರು ಬರೆದಿದ್ದಾರೆ ಎಂದು ನೋಡಿ ಹಾಗೆಯೇ ಮುಚ್ಚಿಟ್ಟಿದ್ದರೂ ನನಗೆ ಕವಿತೆಗಳೆಂದರೆ ಇಷ್ಟವಾಗುವುದಿಲ್ಲ, ಅದರ ಉಪಮೆಗಳು ಅರ್ಥವಾಗುವುದಿಲ್ಲ ಎಂಬ ಸತ್ಯವನ್ನು ಹೇಳುವುದಿಲ್ಲ. `ಬಹಳ ಚೆನ್ನಾಗಿದೆ ಕಣಯ್ಯ. ಹೊಸಬರು ಬರೆದದ್ದು ಅಂತ ಗೊತ್ತಾಗುವುದೇ ಇಲ್ಲ. ಅಡಿಗರು, ನರಸಿಂಹಸ್ವಾಮಿ ಇವರ ಹಾಗೆ ಉತ್ತಮ ಕವಿಯಾಗುವ ಎಲ್ಲ ಲಕ್ಷಣಗಳೂ ನಿನ್ನಲ್ಲಿ ಇವೆ. ಅದರಲ್ಲಿ ಕಾಮವನ್ನು ಹಾವಿಗೆ ಹೋಲಿಸಿದ್ದು, ಬಯಕೆ ತೀರಿಸಿಕೊಳ್ಳಲು ಹುಡುಗಿ ಕೆಂಡವನ್ನು ಅಪ್ಪಿಕೊಂಡದ್ದು ಅದ್ಭುತ ಕಲ್ಪನೆ ಕಣಯ್ಯ’ ಎಂದು ಹೊಗಳುವ ಮೂಲಕ ಅವನು ಇನ್ನಷ್ಟು ಅರ್ಥವಾಗದ ಕವನಗಳನ್ನೇ ಬರೆದು ನಿಮ್ಮಂಥವರಿಗೆ ಧರ್ಮಾರ್ಥ ಕೊಡುತ್ತ ಹಣ ಕೊಟ್ಟು ಕೊಂಡವರ ಜೀವ ಹಿಂಡಲಿ ಎಂದು ಹರಸಿಬಿಡುತ್ತೀರಲ್ಲ! ಇದು ಆತ್ಮವಂಚನೆಯೆಂದು ನಿಮಗನಿಸದೆ? ಅಸಲು ಸಂಗತಿಯೆಂದರೆ ನೀವು ಹೇಳಿದ ಯಾವ ಉಪಮೆಯನ್ನೂ ಅವನು ಬರೆದಿರಲಿಲ್ಲ.

ಮದುವೆಯಂತಹ ಸಮಾರಂಭಗಳಿಗೆ ಹೋಗುವಾಗ ಯಾರನ್ನೂ ಕಾಯುವುದಿಲ್ಲ. ಹಿಂತಿರುಗುವಾಗ ಮಾತ್ರ ಕಾರಿನಲ್ಲಿ ಬಂದ ಗುರುತಿನವರು ಇದ್ದಾರೋ ಅಂತ ಜರಡಿ ಹಿಡಿಯುವ ಅಭ್ಯಾಸ ನಿಮ್ಮ ಹಾಗೆ ಹೆಚ್ಚಿನವರಿಗೆ ಗೊತ್ತಿದೆ. `ಕಾರಿನಲ್ಲಿ ಎಷ್ಟು ಜನ ಬಂದಿದ್ದೀರಿ? ವಾಪಾಸು ಹೋಗುವಾಗ ನನಗೊಂದಿಷ್ಟು ಜಾಗ ಇರಬಹುದೇ?’ ಎಂದು ಕೇಳಿ ಅವರು ಒಪ್ಪಿದರೆ ಅವರೆಲ್ಲಿಯೂ ತಪ್ಪಿಸಿಕೊಳ್ಳದ ಹಾಗೆ ಜೊತೆಗೇ ನೀವೂ ಇರುತ್ತೀರಿ. ಅವರು ತುಂಬ ದಾಕ್ಷಿಣ್ಯವಾದಿ. ಕಾರಿನಲ್ಲಿ ಐದು ಜನಕ್ಕಿಂತ ಹೆಚ್ಚಿನವರಿಗೆ ಸ್ಥಳಾವಕಾಶ ಇಲ್ಲದಿದ್ದರೂ ನಿಮ್ಮನ್ನು ಬಿಡಲಿಕ್ಕಾಗದೆ ಕಷ್ಟಪಟ್ಟು ಜಾಗ ಮಾಡಿಕೊಡುತ್ತಾರೆ. ಇಳಿಯುವಾಗ ನಿಮಗೆ ಸೊಂಟನೋವು ಬಂದಿರುತ್ತದೆ. ಮೊಣಕಾಲು ತುಂಬ ನೋವು ಕೊಟ್ಟಿರುತ್ತದೆ. ಯಜಮಾನರು, `ತುಂಬ ಕಷ್ಟವಾಯಿತು ಅನಿಸುತ್ತೆ. ಜನ ಜಾಸ್ತಿ ಇತ್ತಲ್ಲ’ ಎಂದಾಗ ನೀವು ಹದಿನಾರರ ಅಭಿಮನ್ಯುವಾಗಿ ಯಾವ ನೋವನ್ನೂ ತೋರ್ಪಡಿಸದೆ, `ಕಷ್ಟವೇ? ಇಲ್ಲವಲ್ಲ. ನಾನು ಹೇಗೂ ಅಡ್ಜೆಸ್ಟ್ ಆಗುತ್ತೇನೆ. ಕಷ್ಟ ಅಂತ ಸ್ವಲ್ಪವೂ ಅನಿಸ್ಲೇ ಇಲ್ಲ’ ಎಂದು ಕೊಚ್ಚಿಕೊಂಡವರು ಮೊಣಕಾಲಿನ ನೋವಿನ ನಿವಾರಣೆಗೆ ಬರುವಾಗಲೇ ಪೆಯಿನ್ ಕಿಲ್ಲರ್ ಹಿಡ್ಕೊಂಡು ಬರುತ್ತೀರಿ.

ದಾಕ್ಷಿಣ್ಯಕ್ಕೆ ಒಪ್ಪಿಕೊಂಡರೆ ಹೀಗೆಲ್ಲ ಆಗುತ್ತದೆ’ ಎಂದು ಕಾರಿನ ಮಾಲಕನಿಗೆ ಹಿಡಿಶಾಪ ಹಾಕಿರುವುದು ಆತ್ಮವಂಚನೆ ಎಂಬುದು ನಿಮಗೆ ಗೊತ್ತೇ ಇದೆ ತಾನೆ? ಕಾರಿನ ಮಾಲಕನೂ ಸಮ್ಮನಿದ್ದಿರಬಹುದು ಎಂದು ಭಾವಿಸಿದಿರಾ?

ಮೆಡಿಕಲ್ ಅಂಗಡಿಯವನು ಪರಿಚಿತನಾಗಿದ್ದರೆ, `ಆ ಕರ್ಮದವನ ಕಾರಿನಲ್ಲಿ ಬಂದದ್ದು ನೋಡಿ. ಕಾಲು ಲಗಾಡಿ. ಬೇಡ ಅಂದ್ರೂ ಕೇಳದೆ ದೊಡ್ಡಸ್ಥಿಕೆಗೆ ಕಾರಿನಲ್ಲಿ ಹತ್ತಿಸಿಕೊಂಡರು. ದಾಕ್ಷಿಣ್ಯಕ್ಕೆ ಒಪ್ಪಿಕೊಂಡರೆ ಹೀಗೆಲ್ಲ ಆಗುತ್ತದೆ’ ಎಂದು ಕಾರಿನ ಮಾಲಕನಿಗೆ ಹಿಡಿಶಾಪ ಹಾಕಿರುವುದು ಆತ್ಮವಂಚನೆ ಎಂಬುದು ನಿಮಗೆ ಗೊತ್ತೇ ಇದೆ ತಾನೆ? ಕಾರಿನ ಮಾಲಕನೂ ಸಮ್ಮನಿದ್ದಿರಬಹುದು ಎಂದು ಭಾವಿಸಿದಿರಾ? ಇಲ್ಲಪ್ಪ, ಅವನು, `ಹತ್ತು ರೂಪಾಯಿ ಕೊಟ್ಟು ಸಾವಕಾಶ ಮನೆಗೆ ಹೋಗಬಹುದಿತ್ತು ಅವನಿಗೆ. ಆದರೂ ಶನಿಯ ಹಾಗೆ ನಮ್ಮ ಕಾರಿಗೇ ವಕ್ಕರಿಸಿದ್ದಾನೆ. ಈಗಿನ ಕಾರುಗಳಲ್ಲಿ ಅಂಬಾಸಡರ್ ಕಾರು ತರಹ ಲೆಕ್ಕಕ್ಕಿಂತ ಹೆಚ್ಚು ಜನ ಹಾಕಲಿಕ್ಕೆ ಆಗುವುದಿಲ್ಲ. ಆದರೂ ಬೇಸರವಾಗುವುದು ಬೇಡ ಅಂತ ಹತ್ತಿಸಿಕೊಂಡೆ’ ಎಂದು ಹೇಳಿಯೇ ಹೇಳಿರುತ್ತಾನೆ. ಅವನದೂ ಒಂಥರಾ ಆತ್ಮವಂಚನೆಯ ಡೈಲಾಗ್.

ಸಮಾರಂಭಕ್ಕೆ ನೀವು ಹೋದಾಗ ಮನೆ ಯಜಮಾನ ತುಂಬ ಹರ್ಷಪಡುತ್ತಾನೆ. `ನೀವು ಬಂದದ್ದು ನನಗೆ ತುಂಬ ಸಂತೋಷವಾಗಿದೆ. ನನ್ನ ಭಾಗ್ಯ ಅಂದುಕೊಳ್ಳುತ್ತೇನೆ’ ಎಂದು ಹೊಗಳಿದರೆ ಮಿಥಿಲೆಗೆ ಮಳೆ ಸುರಿಸಲು ಬಂದ ಋಷ್ಯಶೃಂಗ ತಾನು ಎಂಬ ಹೆಮ್ಮೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ ಆ ಯಜಮಾನ ಬಂದಿರುವ ಎಲ್ಲರ ಬಳಿಯೂ ಇದೇ ಮಾತನ್ನು ಹೇಳಿದ್ದಾನೆಂಬುದನ್ನು ನೀವು ಗಮನಿಸಿದರೆ ಹತ್ತರ ಜೊತೆಗೆ ಹನ್ನೊಂದು ತಾನೆಂಬ ಸತ್ಯ ನಿಮಗೆ ಗೊತ್ತಾಗುತ್ತದೆ. ಯಜಮಾನನೂ ಆತ್ಮ ವಂಚನೆ ಮಾಡಿಬಿಟ್ಟ ಅಲ್ಲವೆ!

ಪಕ್ಕದ ಮನೆಯವನು ಧರ್ಮಕ್ಕೆ ಕೊಟ್ಟ ಹಲಸಿನ ಹಣ್ಣು ರುಚಿಯಾಗಿರಲಿಲ್ಲ, ಅದು ಬಿಳುವನ ಹಣ್ಣಾಗಿದ್ದುದರಿಂದ ನೀವಾಗಲಿ, ನಿಮ್ಮ ಹೆಂಡತಿಯಾಗಲಿ ತಿನ್ನುವುದಿಲ್ಲ ಎಂಬ ಸತ್ಯವನ್ನು ಹೊರಗೆ ಬರದಂತೆ ಬೇಲಿ ಹಾಕಿ, ಅದೆಲ್ಲವನ್ನೂ ತಿಂದುದು ಹಟ್ಟಿಯಲ್ಲಿರುವ ಹಸು ಎಂಬ ಗೋಪ್ಯವನ್ನು ಮರೆಮಾಚಿ, `ತುಂಬ ಚೆನ್ನಾಗಿತ್ತು ಹಣ್ಣು. ಎಂತಹ ಸಿಹಿ, ಪರಿಮಳ!’ ಎಂದು ಕಾವ್ಯಾತ್ಮಕವಾಗಿ ವರ್ಣಿಸಿದ್ದೀರಲ್ಲ, ಸತ್ಯ ಹೇಳಿ ಇದು ಆತ್ಮವಂಚನೆ ತಾನೆ? ಆ ಬಡಪಾಯಿ ಅದೇ ಜಾತಿಯ ಇನ್ನೊಂದು ಹಣ್ಣನ್ನು ಹೆಗಲಿನಲ್ಲಿ ಹೊತ್ತುಕೊಂಡು ಮನೆ ಬಾಗಿಲಿಗೆ ಬರುವಂತೆ ಮಾಡಿದಿರಲ್ಲವೆ?

“ಇಷ್ಟು ಜನ ಈ ಮಹಾಶಯರ ಕೃತಿಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ಇದು ಬರೇ ಬೊಗಳೆ. ಇವರಿಗೆಲ್ಲ ಒಂದಷ್ಟು ಗೌರವಧನ ಸಿಗುತ್ತದೆ.

ದೊಡ್ಡ ಸಾಹಿತಿಯೊಬ್ಬರ ಸಾಹಿತ್ಯ ಕೃತಿಗಳ ಬೃಹತ್ ಕಮ್ಮಟ ಇಡೀ ದಿನ ನಡೆಯಲಿಕ್ಕಿತ್ತು. ಒಬ್ಬೊಬ್ಬ ವಿದ್ವಾಂಸರೂ ಅವರ ಕೃತಿಗಳಿಂದ ಎತ್ತಿಕೊಂಡ ಒಂದೊಂದು ಪಾತ್ರವನ್ನು ವಿಶ್ಲೇಷಣೆ ಮಾಡಿ ಓದಿದವರಿಗೆ ಯಾರಿಗೂ ಅರ್ಥವಾಗಿರದ ವಿಷಯಗಳನ್ನು ಗುರುತಿಸಿ ಸಭಾಸದರ ಮುಂದೆ ಪರ್ವತಾಕೃತಿಯಲ್ಲಿ ಮಂಡಿಸುತ್ತ ಇದ್ದರು. ಮಧ್ಯಾಹ್ನ ಭೋಜನ ವಿರಾಮದ ಬಳಿಕ ಸಂವಾದ ಕಾರ್ಯಕ್ರಮ. ಅದನ್ನು ನಡೆಸಿಕೊಡಲಿದ್ದವರು ಓರ್ವ ಘಟಾನುಘಟಿ ಪಂಡಿತರು. ಒಳಗೆ ಪರದೆಯ ಹಿಂದೆ ಕುಳಿತುಕೊಂಡು ಅವರು ನನ್ನೊಂದಿಗೆ, “ಇಷ್ಟು ಜನ ಈ ಮಹಾಶಯರ ಕೃತಿಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ಇದು ಬರೇ ಬೊಗಳೆ. ಇವರಿಗೆಲ್ಲ ಒಂದಷ್ಟು ಗೌರವಧನ ಸಿಗುತ್ತದೆ. ಸತ್ತ ಎಮ್ಮೆಗೆ ಹತ್ತು ಲೀಟರ್ ಹಾಲು ಎಂಬ ಹಾಗೆ ಇಲ್ಲದ ಗುಣಗಳನ್ನು ಆರೋಹಣ ಮಾಡುತ್ತ ಇದ್ದಾರೆ. ಓದಿ ನೋಡಿದರೆ ಅವರು ಬರೆದ ಕೃತಿಗಳಲ್ಲಿ ಇವರು ಹೇಳುವ ಒಂದು ಗುಣವೂ ಇಲ್ಲ. ಆದರೆ ಹೆಸರಿದೆ, ವಶೀಲಿಯಿದೆ. ಹೀಗಾಗಿ ಪತ್ರಿಕೆಗಳೂ ಕಣ್ಮುಚ್ಚಿ ಅವರ ಬರಹಗಳನ್ನು ಪ್ರಕಟಿಸುತ್ತವೆ.’’ ಎಂದು ಚಿದಂಬರ ರಹಸ್ಯವನ್ನು ಒಡೆಯುತ್ತಿರುವ ಧಾಟಿಯಲ್ಲಿ ಹೇಳಿದರು.

“ಹಾಗಿದ್ದರೆ ಸಂಜೆ ಸಂವಾದ ಕಾರ್ಯಕ್ರಮ ನೀವು ನಡೆಸಿಕೊಡುವವರು. ಇವರ ಕೃತಿಗಳು ಜೊಳ್ಳು ಎಂಬುದನ್ನು ಹೇಳುತ್ತೀರಾ?’’ ಎಂದು ಕೇಳಿದೆ. “ಖಂಡಿತ ಇಲ್ಲ. ನನಗೆ ಇಂತಹ ಕಾರ್ಯಕ್ರಮಗಳಿಗೆ ಸಂಭಾವನೆ ಕೊಡುತ್ತಾರೆ. ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತೇನೆ. ನಾನು ಸತ್ಯವಂತನಾಗ್ತೇನೆ ಅಂತ ಇರುವುದನ್ನು ಹೊರಗೆ ಹಾಕಲಿಕ್ಕೆ ಹೋದರೆ ನಾಳೆ ನನ್ನನ್ನು ಯಾರೂ ಕರೆಯುವುದಿಲ್ಲ. ಹೀಗಾದರೆ ಹೊಟ್ಟೆಗೆ ತಣ್ಣೀರಿನ ಗೋಣಿಚೀಲ ಹಾಕಿಕೊಂಡು ಮಲಗಬೇಕಷ್ಟೇ’’ ಎಂದರು ಅವರು.

ಎಷ್ಟೋ ಸಂದರ್ಭಗಳಲ್ಲಿ ಅಪ್ರಿಯವಾದ ಸತ್ಯವನ್ನು ಆಡಲು ಇಷ್ಟಪಡದೆ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ ಅಲ್ಲವೆ!

Leave a Reply

Your email address will not be published.