ಆತ್ಮ ನಿರ್ಭರ; ದೇಶ ಬರ್ಬರ!

ಸ್ವಾವಲಂಬನೆಗೆ ಆರ್ಥಿಕ ನೆರವು ಬೇಕಾಗಿದೆ. ಅತಿಯಾದ ಬಡ್ಡಿ ಸಾಲ, ಬಡವರನ್ನು ಸಾಯಿಸುತ್ತದೆ.

–  ಸುನೀಲಕುಮಾರ ಸುಧಾಕರ

ಬೆತ್ತಲೆ ದೇಹದ ಹೊಟ್ಟೆಯ ಹುತ್ತಿನೊಳಗೆ ಹಸಿವಿನ ಹಾವು ಇಟ್ಟುಕೊಂಡು ಕತ್ತಲೆ ಗುಹೆಯೊಳಗೆ ಆದಿ ಮಾನವ ಜೋರಾಗಿ ಬಾಯಿತೆರೆದು ಅರಚಿದ ಆಹಾರಕ್ಕಾಗಿ! ಆಗ ನಾಗರಿಕತೆಯ ಮೊದಲ ಶಬ್ದ ಲೋಕವನ್ನು ವ್ಯಾಪಿಸಿತು! ಹಾಗೇ ಅವನ ಬಾಯಿಯಿಂದ ಸಾಂಕ್ರಾಮಿಕ ರೋಗವೂ ದೇಹವನ್ನು ಸೇರಿತು! ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು, ಆದಿ ಮಾನವರೆಂಬ ಮೂಲ ಸ್ತ್ರೀ ಪುರುಷರಿಂದ ನಾಗರಿಕತೆ ಬೆಳೆಯಿತು. ಚಕ್ರದ ಉಗಮವಾಯಿತು, ಭಾಷೆ, ಬರಹ, ಸಂಕೇತ, ಆಚರಣೆ, ವಿಜ್ಞಾನದ ಉಗಮ, ವಾಹನ ಸೌಕರ್ಯ, ಪ್ರಯಾಣದ ವಾಯು, ಜಲ, ನೆಲ ಮಾರ್ಗಗಗಳು ಜಗದಗಲ, ಜಲದಗಲ, ಮುಗಿಲಗಲ ಹರಡಿದವು. ಜಾಗತೀಕರಣದ ಬಾಗಿಲು ತೆರೆದುಕೊಂಡದ್ದು ಈಗ ಇತಿಹಾಸ.

ಜಾಗತೀಕರಣವೆಂದರೆ ಜಗತ್ತು ಒಂದೇ ಸೂರಿನಡಿ ಮುಕ್ತ ಮಾರುಕಟ್ಟೆಯಲ್ಲಿ ಸ್ವಾವಲಂಬಿ ಎಂಬ ಹೆಸರಿನಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಪರಸ್ಪರ ಮಾರುವುದು ಖರೀದಿಸುವುದು. ಇಲ್ಲಿ ಡಾಲರ್ ಲೆಕ್ಕಕ್ಕೆ ಚಿನ್ನದ ಲೆಕ್ಕಕ್ಕೆ ಮೌಲ್ಯವಿದೆ. ಇತರೆ ದೇಶದ ಕರೆನ್ಸಿಗಳು ತಮ್ಮ ಮೌಲ್ಯ ಕಳೆದುಕೊಂಡು ಕುಸಿದು ಬೀಳುತ್ತವೆ.

ಬಿದ್ದ ಆರ್ಥಿಕತೆಯನ್ನು ಮತ್ತೆ ಎಬ್ಬಿಸಲು ಮನುಷ್ಯ ಹೋರಾಡುತ್ತಾನೆ. ತನ್ನ ದೇಹದ ರಕ್ತವನ್ನು ಬೆವರು ಮಾಡಿ ಶ್ರಮಿಕನಾಗುತ್ತಾನೆ, ಕೃಷಿಕನಾಗುತ್ತಾನೆ, ಮೆದುಳು, ಮನಸನ್ನು ಉಪಯೋಗಿಸಿ ಕ್ರಿಯಾಶೀಲತೆಯ ಹೆಸರಲ್ಲಿ ಉಸಿರು ಹೆಪ್ಪು ಗಟ್ಟುವಂತೆ, ದುಡಿದು ಶ್ರೀಮಂತನಾಗುತ್ತಾನೆ! ಇದರೊಂದಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ದಂಡುಪಾಳ್ಯದಂತಹ ದಂಡು ದೊಡ್ಡದಿದೆ.

ದೇಶ ಇಂತಹ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಶ್ರಮದಿಂದ ದುಡಿಯುವ ಸ್ವಾವಲಂಬಿಯ ಬದುಕಿನ ಗುಣಮಟ್ಟ ದೇಶೀ ಮಟ್ಟದಲ್ಲಿ ಗುರುತಿಸಲ್ಪಡುವುದಿಲ್ಲ! ಹಾಗೇ ಆತನ ಉತ್ಪಾದನೆಯೂ ಸ್ಥಳೀಯವಾಗಿ ಒಳ್ಳೆಯ ಬೆಲೆ ದೊರಕದೆ ಇಲ್ಲೇ ನಷ್ಟಕ್ಕೊಳಗಾಗುತ್ತದೆ. ಶ್ರಮಿಕ ಕಷ್ಟಕ್ಕೊಳಗಾಗುತ್ತಾನೆ, ಮಧ್ಯವರ್ತಿ, ದಲ್ಲಾಳಿಗಳು, ಬಂಡವಾಳಶಾಹಿಗಳ ನಡುವೆ ಸರಕಾರದ ನೆರವಿಲ್ಲದೆ ಸಾಮಾನ್ಯ ಶ್ರಮಿಕ ಸೋಲುತ್ತಾನೆ. ಮತ್ತೆ ಕೆಲವರು ಜಾಗತೀಕರಣದತ್ತ ಮುಖ ಮಾಡಲು ಹಂಬಲಿಸುತ್ತಾರೆ.

ಸ್ಥಳೀಯವಾಗಿ ದೊರೆಯುವ ಉತ್ಪಾದನೆಯನ್ನು ರಫ್ತು ಎಂಬ ಕ್ರಿಯೆಯಿಂದ ಜಾಗತಿಕ ಮಾರುಕಟ್ಟೆಗೆ ರವಾನಿಸುತ್ತಾನೆ. ಪರಿಸ್ಥಿತಿ ಹೀಗಾದರೆ ಸ್ವಾವಲಂಬನೆ ಬೇಕೆ, ಜಾಗತೀಕರಣ ಸಾಕೇ? ಎಂಬ ಮಾತುಗಳನ್ನು ಆಡುವುದರಲ್ಲಿ ಒಂದು ಅರ್ಥವಿದೆ. ಭಾರತೀಯರಿಂದು ಸ್ವದೇಶದಲ್ಲಿ ಬಂಡವಾಳ ಹೂಡಿಕೆಯಲ್ಲಿ ಎಡವುತ್ತಿದ್ದಾರೆ. ಅವರ ಗಮನ ವಿದೇಶದ ಕಡೆಯಿದೆ.

ಬಲಿಷ್ಠರು ಜಾಗತೀಕರಣದ ಭರಾಟೆಯಲ್ಲಿ ಬದುಕುತ್ತಾರೆ. ಜಾಗತಿಕ ಮಾರುಕಟ್ಟೆಯಲ್ಲಿ, ಕೆಲವು ಸ್ವಾವಲಂಬಿ ದೇಶಗಳು ಸಾಂಕ್ರಾಮಿಕ ರೋಗಕ್ಕೆ ಮದ್ದು ಕಂಡು ಹಿಡಿದು ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿವೆ. ಮನುಷ್ಯತ್ವ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾವಹಾರಿಕವಾಗಿ ರಾಕ್ಷಸನಂತೆ ವರ್ತಿಸುತ್ತಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗವನ್ನು ಗೆದ್ದವರು, ಜಾಗತೀಕರಣದ ಯುಗವನ್ನು ಮುಂದುವರೆಸಿಕೊAಡು ಹೋಗುತ್ತಾರೆ.

ಸ್ವಾತಂತ್ರö್ಯ ಬಂದ ನಂತರ ಭಾರತದ ಭವಿಷ್ಯ ಬದಲಾಗಲಿಲ್ಲ. ಗಾಂಧಿಯವರ ಸ್ವದೇಶೀ ಚಳವಳಿ, ದೇಶೀ ಉತ್ಪಾದನೆ, ಸ್ವಾವಲಂಬನೆಗೆ ಪೂರಕವಾಗಲಿಲ್ಲ. ಬ್ರಿಟಿಷರು ಬಿಟ್ಟುಹೋದ ಸಂಸ್ಕೃತಿಯನ್ನು, ಜೀವನ ಶೈಲಿಯನ್ನು, ಶಿಕ್ಷಣ ಪದ್ಧತಿ, ಇಂಗ್ಲಿಷ್ ಬಳಕೆಯ ವ್ಯಾಮೋಹದಲ್ಲಿ ಭಾರತೀಯರು ಜಾಗತೀಕರಣದ ವ್ಯವಸ್ಥೆಗೆ ಹೊಂದಿಕೊAಡು ಜೀವನ ಮಾಡುತ್ತಿರುವುದು ನಿರಂತರವಾಗಿದೆ.

ಜಾಗತೀಕರಣ ಭಾರತಕ್ಕೆ ಮಾರಕವಾಗಿಲ್ಲ. ಪ್ರತಿಯೊಬ್ಬರೂ ಇಂದು ಬಳಸುವ ಆಧುನಿಕ ತಂತ್ರಜ್ಞಾನದ ಪರಿಕರಗಳು, ಜಾಗತಿಕ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಂಡು ಬಳಸುತ್ತಿದ್ದಾರೆ. 90ರ ದಶಕದಲ್ಲಿ ಜಾಗತೀಕರಣದ ವಿರುದ್ಧ ಹೋರಾಟ ಆರಂಭವಾಯಿತು ಎನ್ನಬಹುದು. ಆದರೆ ಅದು ಬುದ್ಧಿಜೀವಿಗಳ ಒಣ ಪ್ರಲಾಪವೆಂಬAತೆ ಬಿಂಬಿಸಲಾಗುತ್ತಿದೆ ಇಂದಿಗೂ!

ಸ್ವಾವಲAಬನೆಗೆ ಆರ್ಥಿಕ ನೆರವು ಬೇಕಾಗಿದೆ. ಅತಿಯಾದ ಬಡ್ಡಿ ಸಾಲ, ಬಡವರನ್ನು ಸಾಯಿಸುತ್ತದೆ. ಬಂಡವಾಳಶಾಹಿಗಳು ವಿದೇಶದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿಯೆಂಬುದು ಮರೀಚಿಕೆಯಾಗಿದೆ. ಸರಕಾರದ ಯೋಜನೆಗಳು ಸ್ವಾವಲಂಬಿಗಳಿಗೆ ತಲುಪುತ್ತಿಲ್ಲ. ಹೀಗಾಗಿ ಭಾರತದ ಎಲ್ಲ ಸಮಸ್ಯೆಗಳು ಹೆಚ್ಚಾಗಿವೆ, ಪರಿಹಾರ ಅಸಾಧ್ಯವಾಗಿದೆ!

ಸ್ವಾವಲಂಬನೆಯ ಕರೆ ಪ್ರಧಾನಿಯಿಂದಲೇ ಬರಬೇಕಾಗಿಲ್ಲ. ಅದು ಪ್ರತಿಯೊಬ್ಬ ಭಾರತೀಯನ ಆತ್ಮದಿಂದಲೇ ಬರಬೇಕು. ದುಡಿಯುವ ಅವಕಾಶಗಳನ್ನು ಸೃಷ್ಟಿಸಿ, ಅದಕ್ಕೆ ಬೇಕಾದ ಬಂಡವಾಳವನ್ನು ದುಡಿಯುವ ಸಮೂಹಕ್ಕೆ ತಲುಪಿಸಿ, ಪ್ರತಿಯೊಂದು ಆರ್ಥಿಕ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಿದಾಗ ಮಾತ್ರ ಸ್ವಾವಲಂಬನೆ ಜೀವನಕ್ಕೆ ಅರ್ಥವಿರುತ್ತದೆ.

ಭಾರತ ದೇಶ ಪರರಾಷ್ಟ್ರಗಳಿಗೆ ಕೈ ಚಾಚದೆ, ತನ್ನ ಸ್ವಂತ ಬಲದಿಂದ ಬದುಕಬೇಕಾದರೆ ಮೊದಲು ಹಸಿದವರ ಹೊಟ್ಟೆ ತುಂಬಿಸಬೇಕು. ಬೀದಿಯಲ್ಲಿ ಬಿದ್ದವರಿಗೆ ಆಶ್ರಯ ಕಲ್ಪಿಸಬೇಕು, ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಕೆಲಸಕ್ಕೆ ತಕ್ಕ ಸಂಬಳ ಸಿಗಬೇಕು, ಅಂದಾಗ ಮಾತ್ರ ಭರತಭೂಮಿಯಲ್ಲಿ ಸ್ವಾವಲಂಬನೆಯ ಕಲ್ಪವೃಕ್ಷ ಚಿಗುರಲು ಸಾಧ್ಯವಾಗುತ್ತದೆ! ಇಲ್ಲದಿದ್ದರೆ ಜಾಗತೀಕರಣದ ಬಾಗಿಲಿಗೆ ಸ್ವಾವಲಂಬನೆಯ ತೋರಣ ಕಟ್ಟಿ, ಹಸಿದವರ ಮುಂದೆ ಉಳ್ಳವರು ಹಬ್ಬ ಮಾಡಿದಂತಾಗುವುದು.

Leave a Reply

Your email address will not be published.