ಆಧುನಿಕ ಯುಗದಲ್ಲಿ ಸಾಕಾರಗೊಂಡ ಹಳಗನ್ನಡ ಸಾಹಿತ್ಯ ಕಲ್ಪನೆಗಳು

ಇಂದಿನ ವಿಜ್ಞಾನ, ತಂತ್ರಜ್ಞಾನ, ಮನೋವಿಜ್ಞಾನ, ತತ್ವಶಾಸ್ತ್ರ, ರಾಜಕೀಯಶಾಸ್ತ್ರಗಳ ಎಳೆಗಳು ಹಳಗನ್ನಡ ಕಾವ್ಯಗಳಲ್ಲಿ ಕಲ್ಪನೆಗಳಾಗಿ ಪ್ರಕಟಗೊಂಡಿದ್ದವೇ…?

ಡಾ.ಜಿ.ಆಶಾ

ರಾಮಾಯಣ ಹಾಗೂ ಮಹಾಭಾರತ ಪುರಾಣ ಕಥೆಗಳು, ಹಳಗನ್ನಡದ ಕಾವ್ಯರಚನೆಯ ಮೂಲ ಆಕರ ವಸ್ತುವಿಷಯಗಳಾಗಿವೆ. ಈ ಕಥೆಗಳು ನಮಗೆ ಮೇಲ್ನೋಟಕ್ಕೆ ದೈವಿಕವ್ಯಕ್ತಿಗಳ ಜೀವನ ಕಥೆಗಳಾಗಿ ತೋರಿದರೂ, ಸಾಮಾನ್ಯ ಮಾನವರೊಡನೆ, ಕೆಲವು ಸಂದರ್ಭಗಳಲ್ಲಿ ರಾಕ್ಷಸರೊಂದಿಗೆ ಬೆರೆತು, ಅಂದಂದಿನ ಮೌಲ್ಯಗಳನ್ನು, ರೀತಿನೀತಿ ಸಂಸ್ಕøತಿಗಳನ್ನು ಪರಿಚಯಿಸುವುದರ ಜೊತೆಗೆ, ಸರ್ವಕಾಲಕ್ಕೂ ಇಷ್ಟವೆನಿಸುವ ಒಳನೋಟಗಳನ್ನು ಬಿತ್ತರಿಸಿವೆ. ಇವು ರಾಜನೀತಿ, ತತ್ವಜ್ಞಾನ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯದ ವಿಶಿಷ್ಟ ಅಂಶಗಳನ್ನು ಲೌಕಿಕ, ಧಾರ್ಮಿಕ ಕೃತಿಗಳ ಮೂಲಕ ತಿಳಿಯಪಡಿಸಿರುವ ಕೃತಿಗಳಾಗಿವೆ. ಇಂದು ವಿಜ್ಞಾನ, ತಂತ್ರಜ್ಞಾನಗಳ ಫಲವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕೆಲವು ಆವಿಷ್ಕಾರಗಳ ಸುಳಿವನ್ನು ಅಂದಿನ ಸಾಹಿತ್ಯದಲ್ಲಿ ದಾಖಲಾಗಿರುವುದನ್ನು ಕಾಣಬಹುದು.

ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’ದಲ್ಲಿ ರಾವಣನ ಬಳಿ ಪುಷ್ಪಕ ವಿಮಾನ ಇತ್ತು ಎಂಬುದು ಒಂದು ಅಂಶ. ಅದರಲ್ಲಿ ಕುಳಿತು ಅವನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಕರೆದೊಯ್ಯುತ್ತಿದ್ದ ‘ಪುಷ್ಪಕವಿಮಾನ’ದ ಪರಿಕಲ್ಪನೆ, ಅಂದು ಕವಿ ಕಂಡ ಇಂದಿನ ಆಧುನಿಕ ಜಗತ್ತಿನ ಮುನ್ಸೂಚನೆ ಎಂದು ಹೇಳಬಹುದು. ಮುಂದೊಂದು ದಿನ ಇಂಥ ವಿಮಾನದ ಆವಿಷ್ಕಾರವಾದರೂ ಅಚ್ಚರಿಯಿಲ್ಲ! ಏಕೆಂದರೆ ನಮ್ಮ ಹಳಗನ್ನಡ ಸಾಹಿತ್ಯದ ಕವಿಸೃಷ್ಟಿಯಲ್ಲಿ ಈಗಾಗಲೇ ಆ ಕಲ್ಪನೆ ಬಂದುಬಿಟ್ಟಿದೆ.

ಇನ್ನು ‘ಮಹಾಭಾರತ’ ಕಥೆಯಲ್ಲಿ ನಿರೂಪಿತವಾಗಿರುವ ಅಂಶಗಳು- ಇಂದಿನ ವಿಜ್ಞಾನ, ತಂತ್ರಜ್ಞಾನ, ಮನೋವಿಜ್ಞಾನ, ತತ್ವಶಾಸ್ತ್ರ, ರಾಜಕೀಯಶಾಸ್ತ್ರಗಳ ಎಳೆಗಳು ಅಂದೇ ಆಲೋಚನೆಗಳಾಗಿ ಪ್ರಕಟಗೊಂಡಿವೆ.

ನೂರೊಂದುಜನ ಕೌರವರ ಜನನಕ್ಕೆ ಕಾರಣವಾದ ಅಂದಿನ ಪ್ರಸಂಗವನ್ನು (ಪಂಪಭಾರತ-ಪ್ರಥಮಆಶ್ವಾಸ 131ನೇ ಪದ್ಯ) ಗಮನಿಸಬಹುದು. ತನಗಿಂತ ಮೊದಲೇ ಕುಂತಿ ಮಕ್ಕಳನ್ನು ಹೆತ್ತಳೆಂದು ಗಾಂಧಾರಿ ಹೊಟ್ಟೆಯನ್ನು ಕಿವುಚಿಕೊಂಡಾಗ, ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದವು. ವ್ಯಾಸಮಹರ್ಷಿ ಅವುಗಳನ್ನು ಘಮಘಮಿಸುವ ತುಪ್ಪದ ಕೊಡದಲ್ಲಿ ಸುರಕ್ಷಿತವಾಗಿಡಿಸಿದನು. ಸಮಸ್ತ ಲೋಕಕ್ಕೆ ಆಶ್ಚರ್ಯವುಂಟಾಗುವ ಹಾಗೆ ಅವು ಅಲ್ಲಿ ಬೆಳೆದವು. ಇಂದಿನ ಪ್ರನಾಳಶಿಶು ಕಲ್ಪನೆ, ಇನ್‍ಕ್ಯೂಬೇಟರ್ ನಲ್ಲಿ ಅವಧಿ ಮುಗಿಯುವವರೆಗೆ ಇಡುವ ಆಧುನಿಕ ವಿಜ್ಞಾನ ಪದ್ಧತಿಯ ಆಲೋಚನೆಯು ಆಗ ನಮ್ಮ ವ್ಯಾಸನಲ್ಲಿತ್ತೇ…?

ಕುರುಕ್ಷೇತ್ರ ಭೂಮಿಯಲ್ಲಿ ಹದಿನೆಂಟು ದಿನಗಳ ಮಹಾಭಾರತ ಯುದ್ಧದ ಚಿತ್ರಣವನ್ನು, ಹಸ್ತಿನಾಪುರದ ಅರಮನೆಯಲ್ಲಿಯೇ ಕುಳಿತು ‘ಸಂಜಯ’ ಕುರುಡ ಧೃತರಾಷ್ಟ್ರನಿಗೆ, ದೂರದೃಷ್ಟಿಯಿಂದ ಸಚಿತ್ರವಾಗಿ ವಿವರಿಸಿ ಹೇಳುತ್ತಾ ಹೋಗುತ್ತಾನೆ. ಅದನ್ನು ಅಂಧಧೃತರಾಷ್ಟ್ರ ಕೇಳುತ್ತಾ ನೋಡುತ್ತಾ ಹೋಗುತ್ತಾನೆ. ಈ ಕಲ್ಪನೆ ಇಂದಿನ ದೂರದರ್ಶನಕ್ಕೆ ಎಷ್ಟೊಂದು ಹತ್ತಿರ!

ಯುದ್ಧಗಳ ವರ್ಣನೆಯಲ್ಲಿ ಬರುವ ಬಾಣಪ್ರಯೋಗಗಳ ವಿವರಗಳಲ್ಲಿ ಒಬ್ಬಬಿಟ್ಟ ಬಾಣ ಆಕಾಶದೆತ್ತರಕ್ಕೆ ಚಿಮ್ಮಿ ಮತ್ತೆ ಕೆಳಗಿಳಿದು, ಮಳೆಯನ್ನು, ಗಾಳಿಯನ್ನು, ಅಗ್ನಿಯನ್ನು, ಸೃಷ್ಟಿಸುವ ಕ್ರಿಯೆಯನ್ನು ಗಮನಿಸಬಹುದು. ಆ ಪ್ರಯೋಗಿಸಿದ ಬಾಣಗಳ ಲೋಹಗಳು, ಮೋಡಗಳ ಉಜ್ಜುವಿಕೆ, ಅಲ್ಲಿಯೇ ಉತ್ಪತ್ತಿಯಾದ ರಾಸಾಯನಿಕಕ್ರಿಯೆಯು ಆಗ್ನೇಯಾಸ್ತ್ರ, ವರುಣಾಸ್ತ್ರ, ವಾಯವ್ಯಾಸ್ತ್ರಗಳ ಪರಿಕಲ್ಪನೆಯಲ್ಲಿ ಕಾಣಸಿಗುತ್ತದೆ.

ಏಕ, ದ್ವಿ, ಪಂಚ, ದಶಮ ನವ, ಏಕಾದಶ… ಮುಂತಾದವಲ್ಲದೆ 18 ದಿನಗಳ ಯುದ್ಧ, 18 ಅಕ್ಷೋಹಿಣಿ ಸೈನ್ಯ… ಇವೆಲ್ಲ ಸಂಖ್ಯಶಾಸ್ತ್ರದ ಪರಿಕಲ್ಪನೆಯನ್ನು ತಂದುಕೊಡುತ್ತದೆ.

ಇಂದ್ರಪ್ರಸ್ಥದ ವರ್ಣನೆಯಲ್ಲಿ ಹಗಲಿನಲ್ಲಿ ಸೂರ್ಯನ ಬೆಳಕಿನಿಂದಲೂ ಇರುಳಿನಲ್ಲಿ ಪ್ರತಿಫಲಿತ ಬೆಳಕಿನಿಂದಲೂ ಅರಮನೆ ಝಗಝಗಿಸುತ್ತಿತ್ತು, ಎಂಬುದನ್ನು ಗಮನಿಸಬಹುದು. ಸೂರ್ಯಕಿರಣಗಳು ಬಿದ್ದು, ಅರಮನೆಯ ಕಂಬಗಳು, ಗಾಜುಗಳ ಮೇಲೆ ಪ್ರತಿಫಲಿಸಿ, ಬೆಳಕನ್ನು ಪಸರಿಸುತ್ತಿದ್ದ ಈ ಕಲ್ಪನೆ ‘ಸೋಲಾರ್ ಎನರ್ಜಿ’ ಆಗಿ ಬಳಕೆಗೆ ಬಂದಿದೆ.

ರಾಮಾಯಣ ಮಹಾಭಾರತದಂತಹ ಧಾರ್ಮಿಕ ಕೃತಿಗಳ ಹಿನ್ನೆಲೆಯಲ್ಲಿ ರಚಿತವಾಗಿರುವ, ಕಥೆಗಳು, ಕೇವಲ ಧಾರ್ಮಿಕ ಕೃತಿಗಳಾಗಿರದೆ, ಅವು ರಾಜಕೀಯ, ತತ್ವಶಾಸ್ತ್ರ, ಖಗೋಳಶಾಸ್ತ್ರ, ಲೋಹಶಾಸ್ತ್ರ, ರಾಜನೀತಿ, ತಂತ್ರಜ್ಞಾನ, ವಿಜ್ಞಾನಗಳ ಪರಿಕಲ್ಪನೆಗಳಾಗಿವೆ. ಆ ಸಾಹಿತ್ಯ ಕಲ್ಪನೆಗಳು ಇಂದಿನ ನವಯುಗದ ಸಂಶೋಧನೆಗಳಾಗಿ, ವಾಸ್ತವಗಳಾಗಿ ನಮ್ಮೆದುರಿಗಿವೆ. ವಿಧುರನ ನೀತಿ, ಕೃಷ್ಣನ ರಾಜತಾಂತ್ರಿಕ ನೀತಿ, ಶಕುನಿಯ ಕುತಂತ್ರಗಳು ಪ್ರಸ್ತುತ ರಾಜಕೀಯದ ಮುಖ್ಯ ಅಂಶಗಳಾಗಿ ಹಳಗನ್ನಡ ಕಾವ್ಯಗಳನ್ನು ನೆನಪಿಸುತ್ತವೆ.

Leave a Reply

Your email address will not be published.