ಆಧುನಿಕ ಸಂವಹನ ವಿಧಾನಗಳು

-ಡಾ.ವಿಷ್ಣು ಎಂ. ಶಿಂದೆ

ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ, ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ.

ಸಂವಹನವು ಒಂದು ಕಲೆ; ಅಭ್ಯಾಸದಿಂದ ಬರುತ್ತದೆ, ಅದು ಕೇವಲ ಹೇಳುವಿಕೆಯಲ್ಲ, ಒಂದು ಅರ್ಥವಲ್ಲ. ಸಂವಹನವು ನಿರೂಪಿಸುವ, ಅರ್ಥೈಸುವ, ತಿಳಿಸುವ ಒಟ್ಟು ಪ್ರಕ್ರಿಯೆ. ನಮ್ಮ ಮೆದುಳು ಏಕಕಾಲದಲ್ಲಿ ಅನೇಕ ಮನೋಕ್ರಿಯೆಗಳನ್ನು ಸಂಘಟಿಸುತ್ತದೆ. ಸಂವಹನವೆನ್ನುವುದು ಮಾತನಾಡುವುದಲ್ಲ. ಇದು ಹೇಳುವ, ವಿಷಯ ಸಂಘಟಿಸುವ ಮತ್ತು ಎದುರಿಗಿರುವ ವ್ಯಕ್ತಿಗೆ ಆ ವಿಷಯವನ್ನು ಸಾಗಿಸುವ ಸಮಗ್ರ ಕ್ರಿಯೆಯಾಗಿದೆ.

ಸಂವಹನಕಾರರಾಗಲು ಸಿದ್ಧ ಮಾದರಿಗಳಿಲ್ಲ. ಉತ್ತಮ ಸಂವಹನಕಾರ ರಾಗಲು ನಾವು ಮಾತನಾಡಲು ಆರಂಭಿಸಬೇಕು. ಆ ನಂತರದಲ್ಲಿ ನಾವು ಏನು ಸಂವಹನ ಮಾಡಿದೆವೆಂದು ಪರೀಕ್ಷಿಸಲು ಸಾಧ್ಯ. ನಾವು ಸಂವಹನ ಮಾಡಿದ ಶಬ್ದ, ಮಾತು, ಸನ್ನೆ ಹಾಗೂ ಸಂವೇದನೆಯ ಕುರಿತು ಮರುಪರಾಮರ್ಶನ ಮಾಡಿಕೊಳ್ಳಬೇಕು. ಇದರಿಂದ ಸಂವಹನವು ಸಾಧ್ಯವಾಗುತ್ತದೆ.

ಯಾವುದು ಪ್ರಯೋಗಿಸಲು ಸಾಧ್ಯವೋ, ಸುಧಾರಿಸಲು ಸಾಧ್ಯವೋ, ಯಾವುದು ಅಭ್ಯಾಸದಿಂದಲೇ ಸಾಧಿಸಬಹುದೋ ಅದನ್ನು ಕಲೆ ಅಥವಾ ಕೌಶಲ ಎನ್ನಲಾಗುವುದು. ಭಾಷೆಯು ಸಂವಹನದ ಮುಖ್ಯ ಭಾಗವಾಗಿದೆ. ಆದ್ದರಿಂದ ನಾವು ಆಲಿಸುವ ಹಾಗೂ ಮಾತನಾಡುವ ಕೌಶಲವನ್ನು ಕರಗತಗೊಳಿಸಬೇಕು.

ಇಂದು ಬಹುಪಾಲು ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸಂವಹನದಲ್ಲಿ ವಿಫಲಗೊಳ್ಳುತ್ತಿರುವುದು ಅವರು ಹೊಂದಿರುವ ಆಲಿಸುವಿಕೆಯ ಸಂವಹನದ ಕೊರತೆಯಿಂದ ಎಂಬುದನ್ನು ಮನಗಾಣ ಬೇಕು. ಅದಲ್ಲದೆ ಶಾಲೆ, ಕಾಲೇಜು ಹಾಗೂ ಉನ್ನತ ಶಿಕ್ಷಣ ಕ್ರಮದಲ್ಲಿ ಆಲಿಸುವಿಕೆಯನ್ನು ಹೆಚ್ಚಿಸಬೇಕು. ಉದಾಹರಣೆಗಾಗಿ -ಉಪನ್ಯಾಸ, ಚರ್ಚಾಗೋಷ್ಠಿ, ವಿಚಾರ ಸಂಕಿರಣ, ಸಂಗೀತ, ನಾಟಕ, ಜನಪದ ಗೀತೆ ಹೀಗೆ ವಿವಿಧ ಸಹಪಠ್ಯ ಚಟುವಟಿಕೆಗಳ ಮೂಲಕ ಇದನ್ನು ವಿಕಸನಗೊಳಿಸಬೇಕು.

ಸಂವಹನವು ಮಾತನಾಡುವ ಕ್ರಿಯೆಯಾಗಿದೆ. ಮಾತನಾಡುವುದೆಂದರೆ ಎನನ್ನೋ ಹೇಳಿಬಿಡುವುದಲ್ಲ. ಬುದ್ಧನನ್ನು, ಮಹಾವೀರನನ್ನು ಇಂದಿಗೂ ನೆನಪಿಸುತ್ತಾರೆ. ಯೇಸು ಕ್ರಿಸ್ತನ ನುಡಿಗಳಿಗೆ ಮಹತ್ವವಿದೆ. ಬಸವಣ್ಣನವರ ನುಡಿಯನ್ನು ಯಾರು ಸಹ ತಿರಸ್ಕರಿಸಲಾಗದು. ಏಕೆಂದರೆ ಅವರೆಲ್ಲರೂ ತೂಕಬದ್ಧವಾದ, ಸ್ಪಷ್ಟವಾದ ನುಡಿಗಳನ್ನು ಆಡಿದರು. ಆದುದರಿಂದಲೇ ಅವರ ಮಾತುಗಳು ತತ್ವಗಳಾದವು.

ಅಭ್ಯಾಸದಿಂದ ಮಾತುಗಾರಿಕೆ

ಸಂವಹನದ ಮುಖ್ಯ ಕೌಶಲ ಮಾತುಗಾರಿಕೆಯು ತಾನಾಗಿ ಬರಲಾರದು. ನಮ್ಮ ವiಕ್ಕಳು, ಶಾಲಾಕಾಲೇಜು ವಿದ್ಯಾರ್ಥಿಗಳು ನಿರರ್ಗಳವಾಗಿ ಮಾತನಾಡಲಾರರು ಏಕೆ? ಉನ್ನತ ಶಿಕ್ಷಣದಲ್ಲಿ ಬರುವ ಸಂಶೋಧನಾ ವಿದ್ಯಾರ್ಥಿಗಳು ಸಹ ಒಮ್ಮೆಲೆ ಸ್ಪಷ್ಟವಾಗಿ, ನಿರರ್ಗಳವಾಗಿ ವಿಷಯ ಮಂಡಿಸಲಾಗದಷ್ಟು ಅಸಮರ್ಥರಾಗಿದ್ದಾರೆ. ಇದಕ್ಕೆ ಕಾರಣಗಳನ್ನು ನಾವು ಪತ್ತೆ ಹಚ್ಚಬೇಕಾಗಿದೆ.

ಸಂದರ್ಶನಗಳು, ಸ್ಪರ್ಧೆಗಳು, ಕಾರ್ಯಕ್ರಮಗಳು ಮುಂತಾದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಸೂಕ್ತವಾಗಿ ಮಾತನಾಡಲು ಸಾಧ್ಯವಾಗದೆ ವಿಫಲರಾಗುವುದನ್ನು ನೋಡುತ್ತೇವೆ. ಇದಕ್ಕೆ ಉಪಕ್ರಮಗಳನ್ನು ಅನುಸರಿಸುವುದು ಅಗತ್ಯವಿದೆ. ನಾವು ಸಾಮಾಜಿಕ ವಲಯದಲ್ಲಿ ಬರುವುದರಿಂದಲೂ ಎರಡು ಕ್ಷೇತ್ರಗಳ ಕುರಿತು ಗಮನ ಹರಿಸಬೇಕು.

  1. ಯಾಂತ್ರಿಕ ಜಗತ್ತು (Machine World)
  2. ಮಾನವ ಜಗತ್ತು (Human World)

ನಮ್ಮ ಸುತ್ತಲಿನ ಯಂತ್ರ ಪರಿಕರಗಳು ತಮ್ಮದೇ ಆದ ಒಂದು ಜಗತ್ತನ್ನು ಸೃಷ್ಟಿಸಿವೆ. ಅದರಂತೆ ಸಂವಹನದ ಮುಖ್ಯಭಾಗವಾದ ಮಾನವ ಜಗತ್ತಿನ ಬಗ್ಗೆ ನಾವು ಗಮನಹರಿಸಲು ಸಂವಹನದ ಕೌಶಲಗಳನ್ನು ತಿಳಿಯಬಹುದು. ಯಾಂತ್ರಿಕವಾದ ಜಗತ್ತು ಅನಿವಾರ್ಯವಾಗಿ ನಿರ್ದಿಷ್ಟಗೊಳಿಸಿದ ಸಂವಹನ ಮಾರ್ಗದರ್ಶನದ ಮೂಲಕ ಕಡ್ಡಾಯವಾಗಿ ನಾವು ತಿಳಿಯುವಂತೆ ಮಾಡುತ್ತದೆ. ಉದಾಹರಣೆಗಾಗಿ ಒಂದು ಕಂಪ್ಯೂಟರ್ ಕೊಂಡರೆ ಅದನ್ನು ಬಳಕೆ ಮಾಡಬೇಕಾದ ಉಪಕ್ರಮವನ್ನು ನಾವು ಅದರ ಜೊತೆಯಲ್ಲಿ ನೀಡುವ ಕೈಪಿಡಿಯ ಮೂಲಕ ಕಡ್ಡಾಯವಾಗಿ ತಿಳಿಯಲೇಬೇಕಾಗುತ್ತದೆ. ಇಲ್ಲದೆ ಹೋದರೆ ನಾವು ಅದನ್ನು ಬಳಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಯಾಂತ್ರಿಕ ಜಗತ್ತನ್ನು ಬಹುಬೇಗ ಕಲಿಯುತ್ತೇವೆ ಮತ್ತು ಸಂವಹನ ಬೆಳೆಸುತ್ತೇವೆ.

ಮಾನವ ಜಗತ್ತಿನ ಪ್ರಮುಖ ಅಂಶವಾದ ಸಂವಹನದ ಬಗ್ಗೆ ಯಾಂತ್ರಿಕ ಜಗತ್ತಿನಷ್ಟು ಶಿಷ್ಟಕ್ರಮಗಳು ಇಲ್ಲದೆ ಇರುವುದರಿಂದ, ಮಾನವನು ತನ್ನ ಪರಿಸರ ಪ್ರಭಾವದಂತೆ ಸಂವಹನವನ್ನು ಕರಗತಗೊಳಿಸಿಕೊಳ್ಳುತ್ತಾನೆ. ಉದಾಹರಣೆಗೆ, ಹಳ್ಳಿಯ ಶಾಲೆಯೊಂದರಲ್ಲಿ ಕಲಿಯುವ ವಿದ್ಯಾರ್ಥಿಗಳು ಅಲ್ಲಿ ದೊರೆಯುವ ಭಾಷಾಪ್ರಭಾವಕ್ಕೆ ತಕ್ಕಂತೆ ಜ್ಞಾನಅನುಭವ ಬೆಳೆಸಿಕೊಳ್ಳುತ್ತಾರೆ. ಅದೇ ವಯೋಮಾನದ ನಗರ ಕೇಂದ್ರಿತ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ವಿಭಿನ್ನ ಬಗೆಯ ಜ್ಞಾನ ಅನುಭವಗಳು ಬೆಳವಣಿಗೆಯಾಗುವುದನ್ನು ನಾವು ತಿಳಿಯಬಹುದು. ಇವುಗಳಲ್ಲದೆ ಹಳ್ಳಿಯಿಂದ ನಗರಕ್ಕೆ ಅಥವಾ ನಗರದಿಂದ ಹಳ್ಳಿಗೆ ವಲಸೆಗೊಳ್ಳುವ ವಿದ್ಯಾರ್ಥಿಯಲ್ಲಿ ಸಂವಹನದ ಉಪಕ್ರಮಗಳು ವಿಕಾಸವಾಗುವುದರಲ್ಲಿ ವ್ಯತ್ಯಾಸಗಳಿರುವುದನ್ನು ಶಿಕ್ಷಣ ಕ್ರಮದಲ್ಲಿ ಗಮನಿಸಬಹುದು.

ಆಲಿಸುವುದು ಬಹಳ ಕಷ್ಟದ ಕಾರ್ಯ. ಏಕೆಂದರೆ ನಮ್ಮ ಮನಸ್ಸು ಆಲಿಸುವಲ್ಲಿ ಕೇಂದ್ರೀಕರಣಗೊಳ್ಳುವುದು ಕಷ್ಟಕರ. ಮನಸ್ಸು ಆಲಿಸುವಿಕೆಯಲ್ಲಿ ತೊಡಗಿಸುವಿಕೆಯಲ್ಲಿ ತರಬೇತಿ ಹೊಂದಿಲ್ಲ. ಏಕೆಂದರೆ ನಾವು ಓದುವುದನ್ನು ಅಭ್ಯಾಸ ಮಾಡಿದ್ದೆವೆ. ಆದರೆ ಆಲಿಸುವಿಕೆಯನ್ನು ಅಲ್ಲ.

ನಾವು ಮಾತನಾಡುತ್ತೇವೆ, ಓದುತ್ತೇವೆ. ಆದರೆ ಕಡಿಮೆ ಕೇಳುತ್ತೇವೆ. ಹಾಗಾಗಿ ಸಂವಹನದಲ್ಲಿ ಆಲಿಸುವಿಕೆಯು ಅತೀ ಮುಖ್ಯವಾಗಿದೆ. ಮನಸ್ಸು ಸದಾ ವರ್ತಮಾನದಲ್ಲಿ ಇರದೆ ಭೂತಕಾಲ ಅಥವಾ ಭವಿಷ್ಯತ್ ಕಾಲಕ್ಕೆ ವರ್ಗಗೊಳ್ಳುತ್ತಲೆ ಇರುತ್ತದೆ. ಹಾಗಾಗಿ ನಾವು ಶಾಲೆ ಅಥವಾ ಕಾಲೇಜಿನಲ್ಲಿ ಆಲಿಸುವಿಕೆಯ ತರಬೇತಿಯನ್ನು ಪಡೆದಿಲ್ಲ.

ಪ್ರತಿಯೊಬ್ಬರು ಆಲಿಸುವಿಕೆಯನ್ನು ಕಲಿಯಲೇಬೇಕು. ವಾದ್ಯ ಸಂಗೀತವನ್ನು ಪ್ರತಿದಿನ ಒಂದಷ್ಟು ವೇಳೆಯಾದರೂ ಆಲಿಸಿರಿ. ಶಬ್ದ ಸಂಗೀತಕ್ಕಿಂತ ವಾದ್ಯ ಸಂಗೀತವು ಮನಸ್ಸಿಗೆ ಬೇಗ ತಾಗುತ್ತದೆ. ಮನಸ್ಸನ್ನು ಆಲಿಸುವಿಕೆಗೆ ಸಿದ್ಧಗೊಳಿಸಬೇಕು. ಇದು ಅತ್ಯಂತ ಸುಲಭ ಮಾರ್ಗವಾಗಿದೆ. ಮನಸ್ಸನ್ನು ಆಲಿಸಲು ಸಿದ್ಧಗೊಳಿಸಬೇಕಾದರೆ ಕೆಲವು ಅಭ್ಯಾಸ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಾಗಲಿ, ಸಾಮಾಜಿಕ ಸನ್ನಿವೇಶದಲ್ಲಾಗಲಿ ಆಲಿಸುವಿಕೆಯ ಕೌಶಲದಲ್ಲಿ ತರಬೇತಿ ಇಲ್ಲ. ಇದನ್ನು ಗಮನಿಸಬೇಕಾಗಿದೆ.

ನಾವು ಈಗಾಗಲೇ ಚರ್ಚಿಸಿದ ಸಂವಹನ ಕ್ರಮಗಳು ರೂಢಿಗತವಾದವುಗಳಾಗಿವೆ. ಆದರೆ ಇಂದು ಮಾಹಿತಿ ಸಂವಹನ ತಂತ್ರಜ್ಞಾನದ ಅಳವಡಿಕೆಯಿಂದ ಸಂವಹನದಲ್ಲಿ ಹೊಸ ಸಾಧ್ಯತೆಗಳು ಬಂದಿವೆ. ಸಾಂಪ್ರ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ. ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ.

ಆಧುನಿಕ ಜನವರ್ಗವು ಹೆಚ್ಚು ಗಣಕ ವಿಜ್ಞಾನ ಆಧಾರಿತ ಹೊಸ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ವಿದ್ಯುನ್ಮಾನ ಮಾಧ್ಯಮ, ಬಹುಮಾಧ್ಯಮ ತಂತ್ರಜ್ಞಾನ, ಬಹುಸಂಪರ್ಕ ತಂತ್ರಜ್ಞಾನ ಆನ್ ಲೈನ್ ಶಿಕ್ಷಣ ಕ್ರಮಗಳು, ಡಿಜಿಟಲ್ ತಂತ್ರಜ್ಞಾನ ಹೀಗೆ ಹೊಸ ತಂತ್ರಜ್ಞಾನದ ಪರಿಣಾಮದಿಂದಾಗಿ ಸಂವಹನÀ ಜಗತ್ತು ವಿಸ್ತಾರಗೊಂಡಿದೆ.

ಹೊಸ ವಿಧಾನಗಳು

ಹಳೆಯ ಕಾಲದಲ್ಲಿ ಸಂವಹನವು ಬಹುಪಾಲು ಏಕಮುಖವಾಗಿತ್ತು. ಇಂದು ಸಂವಹನವು ಬಹುಮುಖತ್ವ ಹೊಂದಿದೆ. ಪ್ರತಿಯೊಬ್ಬರು ತನ್ನದೆಯಾದ ಸಂವಹನ ಕ್ರಮಗಳನ್ನು ಹೊಂದಿದ್ದಾರೆ. ಅವರ ಕೈಯಲ್ಲಿ ಸ್ಮಾರ್ಟ್ ಫೋನ್ ಬಂದಿದೆ. ಅದು ಒಂದು ಹೊಸ ಜಗತ್ತನ್ನು ಸೃಷ್ಟಿಸಿದೆ. ಯಾಂತ್ರಿಕ ಜಗತ್ತು ವ್ಯಾಪಕವಾದ ಸಂಪರ್ಕ ಜಾಲವನ್ನು ಹೊಂದಿದ್ದು ಪ್ರತಿಯೊಬ್ಬರು ಸಂವಹನಕ್ಕಾಗಿ ಸಂದೇಶಕಾರರನ್ನು ಕಾಯಬೇಕಾಗಿಲ್ಲ.

  1. ಸ್ವಯಂ ಸಂವಹನದ ವಿಧಾನಗಳು

ಇಂದು ಸ್ವಯಂ ಕಲಿಕೆ, ಸ್ವಯಂ ವಿಶ್ಲೇಷಣೆ ಹಾಗೂ ಸ್ವಯಂ ಸಂವಹನ ನಿರ್ವಹಣೆಯನ್ನು ನಡೆಸಬಹುದಾಗಿದೆ. 24 ಗಂಟೆಗಳ ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಈಗ ರೂಪಿಸಲಾಗಿದೆ. ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶ ಅಥವಾ ಮಾಹಿತಿಯನ್ನು ಸಂದೇಶಕಾರರು ನಿರ್ಧರಿಸುತ್ತಿದ್ದರು. ಆದರೆ ಇಂದು ಸಂವಹನವನ್ನು ಸ್ವಯಂ ನಿರ್ವಹಿಸುವ ಕ್ರಮ ಬಂದಿದೆ.

  1. ದೃಶ್ಯಾತ್ಮಕ ಸಂವಹನದ ಪ್ರಾಮುಖ್ಯ

ಹಿಂದೆ ಮೌಖಿಕ ಸಂವಹನವೇ ಪ್ರಧಾನವಾಗಿತ್ತು. ಆದರೆ ಇಂದು ಅನೇಕ ಮಾಧ್ಯಮಗಳು ಲಭ್ಯವಾಗಿರುವುದರಿಂದ ಹೊಸ ತಲೆಮಾರಿನ ಸುಮಾರು 60 ಪ್ರತಿಶತಗಿಂತಲೂ ಹೆಚ್ಚು ಜನ ದೃಶ್ಯಾತ್ಮಕ ಸಂವಹನ ಬಳಸುತ್ತಿದ್ದಾರೆ. ಹಾಗಾಗಿ ಸಂವಹನವು ಹೆಚ್ಚು ಸಂಕೇತಗಳ ಮೂಲಕ ನಡೆಯುತ್ತದೆ. ಚಿತ್ರ, ಘಟನೆ, ಭಾವಚಿತ್ರವು ಒಂದೆರಡು ಕ್ಷಣಗಳಲ್ಲಿ ಲಕ್ಷಾಂತರ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಇದು ಸಂವಹನದ ಹೊಸ ಸಾಧ್ಯತೆಯಾಗಿದೆ.

  1. ಸಾಮಾಜಿಕ ಮಾಧ್ಯಮ

ಸಂವಹನವು ಇಂದು ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‍ಅಪ್, ಫೇಸ್ ಬುಕ್, ಟ್ವಿಟರ್ ಹೀಗೆ ತುಂಬಾ ಸುಧಾರಿತವಾಗಿದೆ. ಸಾಮಾಜಿಕ ಜಾಲತಾಣಗಳು ಜನರಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿವೆ. ಈ ಸಂವಹನಕ್ಕೆ ಗಡಿಗಳಿಲ್ಲ. ಈ ಸಂವಹನಕ್ಕೆ ವೇಳೆಯ ಮಿತಿಇಲ್ಲ. ಜಾತಿ, ಜನಾಂಗ, ದೇಶ, ಭಾಷೆ ಇವಾವುಗಳ ಮಿತಿಯಿಲ್ಲ. ಹಾಗಾಗಿ ಸಾಮಾಜಿಕ ಸಂವಹನ ಜಗತ್ತನ್ನು ಕಿರಿದುಗೊಳಿಸಿದೆ.

  1. ಪರ್ಯಾಯ ಮಾಧ್ಯಮಗಳು

ಆಧುನಿಕ ಜಗತ್ತಿನಲ್ಲಿ ಸಂವಹನಕ್ಕೆ ಒಂದೇ ಮಾರ್ಗವಿಲ್ಲ. ಪರ್ಯಾಯ ಮಾರ್ಗಗಳಿವೆ. ಹಿಂದೆ ನಾವು ಸಂವಹನಕ್ಕಾಗಿ ಕೆಲವೆ ಮಾಧ್ಯಮಗಳನ್ನು ಅವಲಂಬಿಸಿದ್ದೆವು. ಇಂದು ಸಂವಹನ ವೇಗಗೊಂಡಿದೆ. ಏಕೆಂದರೆ ಒಂದು ಸಂವಹನ ಕ್ರಿಯೆಗೆ ಹಲವು ಪರ್ಯಯ ಸೌಲಭ್ಯಗಳು ಲಭ್ಯವಾಗುತ್ತಿದೆ. ಉದಾಹರಣೆಗೆ ಪತ್ರ ಬರೆಯುವ ಕ್ರಿಯೆಗೆ ಪರ್ಯಾಯವಾಗಿ ಸಂದೇಶ, ವಾಟ್ಸ್ ಆಪ್, ವಾಟ್ಸ್ ಆಪ್‍ಫೋನ್, ಚಿತ್ರ ರವಾನೆ, ಇಮೇಲ್, ವಿಡಿಯೊ ರವಾನೆ ಹೀಗೆ ಹಲವು ಪರ್ಯಾಯಗಳು ಲಭ್ಯವಾಗಿವೆ.

  1. ಹೊಸ ತಲೆಮಾರಿನ ಮಾಧ್ಯಮಗಳು

ಇಂದಿನ ಹೊಸ ತಲೆಮಾರು ತಂತ್ರಜ್ಞಾನ ಜಗತ್ತಿನಲ್ಲಿ ಹುಟ್ಟಿ ಬೆಳೆದಿದೆ. ಹಳೆಯ ತಲೆಮಾರಿನವರು ಸಂವಹನ ತಂತ್ರಜ್ಞಾನಕ್ಕೆ ತೆರೆದುಕೊಂಡದ್ದು ಬಹಳ ತಡವಾಗಿ, ಆದರೆ ಸಂವಹನದ ಸೌಲಭ್ಯ ಪಡೆದಿದ್ದಾರೆ. ಆದ್ದರಿಂದ ಅವರು ಸಂವಹನಕ್ಕೆ ಹೊಸಹೊಸ ಸಂವಹನ ಮಾಧ್ಯಮಗಳನ್ನು ಬಳಸುತ್ತಾರೆ. ಅತ್ಯಂತ ಕ್ರಿಯಾಶೀಲವಾಗಿ, ಸ್ವಾವಲಂಬನೆಯಿಂದ ತಂತ್ರಜ್ಞಾನವನ್ನು ಸಂವಹನಕ್ಕೆ ಬಳಸುತ್ತಾರೆ.

  1. ಏಕಕಾಲದಲ್ಲಿ ಬಹುಸಂವಹನ

ಹಿಂದಿನ ಕಾಲದಲ್ಲಿ ಸಂವಹನಕ್ಕೆ ಮಿತಿಗಳಿದ್ದುದರಿಂದ ಏಕಮುಖ ಸಂವಹನ ಅಥವಾ ಏಕಮಾರ್ಗ ಸಂವಹನ ಸಾಧ್ಯತೆಗಳಿದ್ದವು. ಇಂದು ಹೊಸ ತಲೆಮಾರಿನವರು ಏಕಕಾಲದಲ್ಲಿಯೇ ಬಹು ಮಾಧ್ಯಮದ ಸಂವಹನ ಸಂಪರ್ಕಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ಇಮೇಲ್ ನಲ್ಲಿರುವಾಗಲೇ ಫೇಸ್ ಬುಕ್, ಅದರಂತೆ ಹಲವು ವೆಬ್‍ಸೈಟ್‍ಗಳನ್ನು ತೆರೆಯುತ್ತಾರೆ. ಸಂಪರ್ಕಗಳನ್ನು ತಾವೇ ನಿಯಂತ್ರಿಸುತ್ತಾರೆ. ವೇಳೆ ಹಾಗೂ ಸಂಪನ್ಮೂಲಗಳನ್ನು ಅತ್ಯಂತ ಉತ್ತಮವಾಗಿ ಬಳಸುತ್ತಾರೆ.

  1. ಚಲನಶೀಲ ಸಂವಹನ

ಸಂವಹನವು ಹಿಂದಿನ ದಿನಗಳಲ್ಲಿ ಸ್ಥಿರವಾಗಿತ್ತು. ಕೆಲ ದೇಶಗಳಲ್ಲಿ ಅದು ಕ್ರಿಯಾಶೀಲವಾಗಿದ್ದರೆ, ಇನ್ನೂ ಕೆಲವು ಸ್ಥಳಗಳಲ್ಲಿ ಸಂವಹನ ಹಿಂದುಳಿದ ವ್ಯವಸ್ಥೆಯಾಗಿತ್ತು. ಕೆಲ ಪ್ರದೇಶಗಳಲ್ಲಿ ಸಂವಹನ ತಂತ್ರಜ್ಞಾನದ ಸ್ಪರ್ಶವು ಆಗಿರಲಿಲ್ಲ. ಇದರಿಂದ ಜಗತ್ತಿನಲ್ಲಿ ಸಂವಹನಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಭಿನ್ನತೆ ಮನೆ ಮಾಡಿತ್ತು. ಆದರೆ ಇಂದು ಸಂವಹನವು ಚಲನಶೀಲವಾಗಿರುವುದರಿಂದ ಅದರ ಸಾಧ್ಯತೆಗಳು ಅಪಾರವಾಗಿವೆ. ಸಂವಹನವು ವ್ಯಕ್ತಿಯ ಜೊತೆಯಲ್ಲಿ ಸಂಚರಿಸುವುದರಿಂದ ವ್ಯಕ್ತಿಯು ಸಂವಹನದ ಜೊತೆಯಲ್ಲಿ ಇರುತ್ತಾರೆ. ಕ್ಷಣಾರ್ಧದಲ್ಲಿ ತಮ್ಮನ್ನು ಸಂಪರ್ಕಿಸುವವರಿಗೆ ಪ್ರತಿಕ್ರಿಯೆ ನೀಡುತ್ತಾರೆ.

  1. ಮಿತ ವೆಚ್ಚದ ಸಂವಹನ

ಆಧುನಿಕ ಸಂವಹನ ಮಾಧ್ಯಮಗಳು ಅತ್ಯಂತ ಮಿತವೆಚ್ಚದಲ್ಲಿ ಲಭ್ಯವಾಗುತ್ತಿವೆ. ಆರಂಭಿಕ ಹಂತದಲ್ಲಿ ತಂತ್ರಜ್ಞಾನದ ಅಳವಡಿಕೆ ಕಷ್ಟಕರ ಹಾಗೂ ವೆಚ್ಚದಾಯಕವೆಂದೆನಿಸಿತ್ತು. ಆದರೆ ಇಂದು ಬಹುಮಾಧ್ಯಮ ಹಾಗೂ ತಂತ್ರಜ್ಞಾನ ಸ್ಪರ್ಧೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಂವಹನ ಸಾಧ್ಯತೆಗಳು ಲಭ್ಯವಾಗುತ್ತಿವೆ. ಸ್ಮಾರ್ಟ್ ಫೋನ್, ಇಂಟರ್ ನೆಟ್, ಸಿಮ್, ಅಂತರಜಾಲ ಸಂಪರ್ಕಸಾಧನಗಳು ಈಗ ಸುಲಭವಾಗಿ, ಸುಧಾರಿತವಾಗಿ ಲಭ್ಯವಾಗುತ್ತಿವೆ.

*ಲೇಖಕರು ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.