ಆನೆಗಳ ಸಂಗಾತ

ಜಗತ್ತಿನ ಹಲವಾರು ಕಡೆಗಳಲ್ಲಿ ಆನೆಗಳು ಕೊಲೆಗಾರರಾಗಿ ಮಾರ್ಪಾಡಾಗುತ್ತಿವೆ. ಆಹಾರಕ್ಕೆಂದು ಅಲೆಯುತ್ತ, ತಡೆ ಒಡ್ಡಿದವರ ಮೇಲೆ ಮಾಡುವ ದಾಳಿಯಲ್ಲ ಇದು. ಉದ್ದೇಶಪೂರ್ವಕವಾಗಿ ನಡೆಸುವ ಹತ್ಯೆ ಮತ್ತು ಹಿಂಸೆ. ಇದಕ್ಕೆ ಕಾರಣ ಹುಡುಕುತ್ತ ದೀರ್ಘ ಸಂಶೋಧನೆ ನಡೆಸಿದ ಪ್ರಾಣಿತಜ್ಞರ ವರದಿಗಳನ್ನು ಆಧರಿಸಿ ದ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್‌ಗಾಗಿ 2006ರಲ್ಲಿ ಬರೆದ ಈ ಲೇಖನದಲ್ಲಿ ಚಾರ್ಲ್ಸ್ ಸೀಬರ್ಟ್ ಪ್ರಾಣಿ ಮತ್ತು ಮನುಷ್ಯರ ಮಾನಸಿಕತೆಯಲ್ಲಿ ಸಾಮ್ಯವಿದೆಯೇ ಎನ್ನುವ ಪ್ರಶ್ನೆಯ ವಿಶ್ಲೇಷಣೆ ಮಾಡಿದ್ದಾರೆ.

ಬಾಲ್ಯದಲ್ಲಿ ವಿಪರೀತ ಹಿಂಸೆಯನ್ನು ಕಣ್ಣಾರೆ ಕಂಡವರು ನಮ್ಮ ಸಿನೆಮಾಗಳಲ್ಲಿ ಹಿಂಸಾಚಾರಿಯಾಗುವುದನ್ನು ತೋರಿಸುತ್ತಾರಲ್ಲ. ಅದೇ ರೀತಿಯಲ್ಲಿ, ಆನೆಗಳೂ ಸಹ ಬಾಲ್ಯದಲ್ಲಿ ಕಂಡು ಅನುಭವಿಸಿದ ದೌರ್ಜನ್ಯ, ಹಿಂಸೆಗಳಿಂದಾಗಿ ಅಸ್ವಾಭಾವಿಕ ಹಿಂಸಾಚಾರ ಪ್ರದರ್ಶಿಸುತ್ತಿವೆ ಎನ್ನುವುದು ಸಂಶೋಧಕರ ತೀರ್ಮಾನ. ಅದಕ್ಕಿಂತ ಮುಖ್ಯವಾಗಿ, ಸಂಶೋಧಕರು ಕಂಡುಕೊಂಡಿದ್ದೇನೆಂದರೆ, ಸೂಕ್ತ ಚಿಕಿತ್ಸೆಯ ಮೂಲಕ ಮಾನವರಂತೆ ಪ್ರಾಣಿಗಳನ್ನೂ ಸಹ ಗುಣಪಡಿಸಬಹುದು. ಆನೆಗಳಿಗೆ ಮಾನವರೇ ಪೋಷಕರಾಗಿ ಆಪ್ತ ಒಡನಾಟ ಒದಗಿಸಿ ಮಾನಸಿಕ ಗಾಯಗಳನ್ನು ವಾಸಿಮಾಡಿದ ಪ್ರಯೋಗಗಳು ಹೊಸ ಸಾಧ್ಯತೆಗಳನ್ನು ಸೂಚಿಸುತ್ತವೆ ಎಂದು ತೊರಿಸಿಕೊಡುತ್ತಾರೆ ಸೀಬರ್ಟ್..

ಚಾರ್ಲ್ಸ್ ಸೀಬರ್ಟ್
ಸಂಗ್ರಹಾನುವಾದ: ಕಮಲಾಕರ ಕಡವೆ

“ನಾವು ಎಲ್ಲೂ ಹೋಗೋ ಹಾಗಿಲ್ಲ” ನನ್ನ ಡ್ರೈವರ್ ನೆಲ್ಸನ್ ಒಕೆಲ್ಲೊ ಪಿಸುಗುಟ್ಟಿದ. ಜೂನಿನ ಒಂದು ಮುಂಜಾನೆ, ನೈರುತ್ಯ ಉಗಾಂಡಾದ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನದಲ್ಲಿ, ಜೀಪಿನ ಎದುರಿನ ಸೀಟುಗಳಲ್ಲಿ ನಾವು ಕುಳಿತಿದ್ದೆವು. ನಮ್ಮ ಎಡಕ್ಕೆ ಇದ್ದ ಹುಲ್ಲುಗಾವಲಲ್ಲಿ ಮೇಯುತ್ತಿದ್ದ ಒಂದು ಗಂಡಾನೆಯನ್ನು ವೀಕ್ಷಿಸಲು ನಾವು ಗಾಡಿ ನಿಲ್ಲಿಸಿದ್ದೆವು.

ಮುಂಜಾನೆಯಿಂದ ಒಂದಕ್ಕಿಂತ ಹೆಚ್ಚು “ಪುಂಡ” (ಅಂದರೆ, ಹಿಂಡಿನ ಹಿರಿಯಾನೆ ಜೊತೆ ಸೆಣೆಸಿ, ಸೋತು, ಹಿಂಡಿನಿಂದ ಬೇರ್ಪಟ್ಟ ಒಂಟಿ ಆನೆ) ಆನೆಗಳನ್ನು ದಾರಿಯಲ್ಲಿ ಕಂಡಿದ್ದೆವು. ಆದರೆ ಈ ಗಂಡಾನೆ ಪುಂಡನಾಗಲೀ, ಏಕಾಕಿಯಾಗಲೀ ಆಗಿರಲಿಲ್ಲ, ಬದಲಿಗೆ ಅದು 30 ಆನೆಗಳ ಹಿಂಡಿನ ಸದಸ್ಯನಾಗಿತ್ತು. ಸುತ್ತಲಿನ ಮರಮಟ್ಟುಗಳ ಹಿಂದಿಂದ ಆನೆಗಳ ಹಿಂಡು ಹೊರಬಂದ ಹಾಗೆ ನೆಲ ಕಂಪಿಸಿತು. ಗಾಳಿ ಮಟ್ಟವಾಗಿಸಿದ ಹುಲ್ಲುಗಾವಲಿನಗುಂಟ, ನೀರಿಲ್ಲದ ಪುರಾತನ ಸಮುದ್ರವೊಂದರಲ್ಲಿ ತೇಲುತ್ತಿರುವ ತಿಮಿಂಗಲಗಳಂತೆ, ತಮ್ಮೆಲ್ಲ ಘನ ಗಾತ್ರದ ಹೊರತಾಗಿಯೂ, ಸದ್ದಿರದೆ, ಲಘು ಹೆಜ್ಜೆಗಳನಿಟ್ಟು ನಮ್ಮನ್ನು ದಾಟಿ ಹೋಗುತ್ತಿರುವ ಆನೆಗಳನ್ನು ನೋಡುತ್ತ ನಾವು ಕುಳಿತೇ ಇದ್ದೆವು.

ತರುವಾಯ, ಅಕೇಶಿಯಾ ಮರಗಳ ಪೊದೆಗಳ ಮರೆಯಿಂದ ಗಾಡಿಯ ಎದುರಿನಲ್ಲಿಯೇ ಅವತರಿಸಿತು ಒಂದು ಬೃಹತ್ ಹೆಣ್ಣಾನೆ – “ಮಾಹಾಮಾತೆ” (ಮೆಟ್ರಿಯಾರ್ಕ್), ಒಕೆಲ್ಲೊ ಸಣ್ಣ ದನಿಯಲ್ಲಿ ಹೇಳಿದ. ಅವಳ ನಾಲ್ಕು ಭಾರಿ ಕಾಲುಗಳ ನಡುವೆ ಹಾಯಾಗಿ ಆಡುತ್ತ, ಮೇಯುತ್ತ, ಒಂದು ಮರಿಯಾನೆಯಿತ್ತು. ಆನೆಗಳಿಗೆ ಅಕೇಶಿಯಾ ಎಲೆಗಳೆಂದರೆ ಇಷ್ಟ. ಕೆಳಮುಖ ಜೋಲುತ್ತಿದ್ದ ಅಕೇಶಿಯಾ ರೆಂಬೆಗಳನ್ನು ಜಗ್ಗ ತೊಡಗಿದ ಹಾಗೆ ಮರಿಯಾನೆ, ಮಹಾಮಾತೆ ಅದರ ರಕ್ಷಣೆಗೆ ನಿಂತುಕೊಂಡಿತು. ಅದರ ವಿಶಾಲ ದೇಹದ ಹಿಂಭಾಗ ರಸ್ತೆಗೆ ತಡೆ ಹಾಕಿತ್ತು. ಹಿಂಡಿನ ಇತರ ಆನೆಗಳು ಸ್ವಲ್ಪವೇ ದೂರದಲ್ಲಿ ಪೊದೆಗಳ ಒಳಹೊರಗೆ ಅಲೆಯುತ್ತಿದ್ದವು.  

ಹದಿನೈದು ನಿಮಿಷಗಳು ಉರುಳಿದವು. ಒಕೆಲ್ಲೊ ಜೀಪಿನ ಎಂಜಿನ್ನನ್ನು ಗರ‍್ರೆನಿಸಿ ನಿಧಾನ ಕೊಂಚ ಮುಂದಕ್ಕೆ ನಡೆಸಿದ. ಮಹಾಮಾತೆ ಬಗ್ಗಲಿಲ್ಲ, ಇದ್ದಲ್ಲಿಂದ ಕದಲಲಿಲ್ಲ. ಅದರ ಕಣ್ಣಿನ ಬಿಳಿ, ಅದರ ದಂತದ ಹಾಗೆಯೇ ಹೊಳೆಯುತ್ತಿತ್ತು. ಆ ಹೆಣ್ಣಾನೆಯ ಪಕ್ಕದಿಂದ ಗಾಡಿ ದಾಟಿಸುವ ಇರಾದೆ ಇದೆಯಾ ಎಂದು ನಾನು ಒಕೆಲ್ಲೋನ ಕೇಳಿದೆ. “ಇಲ್ಲ” ಅವನೆಂದ, ಗಾಬರಿಯಲ್ಲಿ ತಲೆ ಅಲ್ಲಾಡಿಸುತ್ತ, “ಕೆಣಕಿದರೆ ಕೆಟ್ಟ ಹಾಗೆಯೇ. ನಾವಿಲ್ಲೇ ಇರುವುದು ಒಳಿತು”.

ಆನೆ-ಮಾನವರ ನಡುವೆ ಶಾಂತಿಯುತ ಸಂಬಂಧ ಇರುವ ಕಾಲದಲ್ಲಿಯೂ ಆ ಮಹಾಮಾತೆ ತಾನಾಗಿ ಹೋಗುವುದಕ್ಕೆ ಕಾಯುವುದೇ ಗುರುತರವೆಂದು ನಾನು ಬಗೆಯುತ್ತಿದ್ದೆ. ಇತ್ತೀಚೆಗಂತೂ ಆನೆ-ಮಾನವರ ನಡುವೆ ಸಂಬಂಧ ಹದಗೆಟ್ಟಿತ್ತು. ನಾನು ಬರುವ ಎರಡು ದಿನಗಳ ಹಿಂದಷ್ಟೇ ಕಜಿಂಗಾ ಎಂಬ ಮೀನುಗಾರರ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬಳನ್ನು ಆನೆಯೊಂದು ಸಾಯಿಸಿತ್ತು. ಎರಡು ತಿಂಗಳ ಹಿಂದೆ ಉದ್ಯಾನದ ಉತ್ತರದಲ್ಲಿ ಕಟ್ವೆ ಎಂಬ ಹಳ್ಳಿಯಲ್ಲಿ ಯುವ ಆನೆಯೊಂದು ಒಬ್ಬಾತನ ಮೇಲೆ ಪ್ರಾಣಾಂತಿಕ ಹಲ್ಲೆ ಮಾಡಿತ್ತು. ಆಫ್ರಿಕಾದ ಅನೆಗಳು ತಮ್ಮ ಉದ್ದನೆಯ ದಂತವನ್ನು ಕಾಡಿನ ದಟ್ಟ ಪೊದೆಗಳಲ್ಲಿ ಮೇಯಲು ಬಳಸುತ್ತವೆ. ಕುಸ್ತಿಪಟುಗಳಂತೆ ಸಂತ್ರಸ್ತರನ್ನು ಒಂದು ಕಾಲಲ್ಲಿ ಮೆಟ್ಟಿ ಹಿಡಿದು, ಅದೇ ಆಯುಧವನ್ನು ತಿವಿಯಲು ಬಳಸುವುದು ಸಹ ತಿಳಿದಿರುವ ಸಂಗತಿ. ಎರಡು ವರ್ಷಗಳ ಹಿಂದೆ ಮರ್ಕಿಸನ್ ಫಾಲ್ಸ್ ರಾಷ್ಟ್ರೀಯ ಉದ್ಯಾನದಲ್ಲಿ ಒಬ್ಬ ಭಾರತೀಯ ಪ್ರವಾಸಿಯನ್ನು ಇದೇ ರೀತಿಯಲ್ಲಿ ಆನೆಯೊಂದು ಸಾಯಿಸಿತ್ತು.

ಇವೆಲ್ಲ ಕೇವಲ ಬಿಡಿ ಬಿಡಿ ಘಟನೆಗಳಾಗಿರಲಿಲ್ಲ. ಆಫ್ರಿಕಾ, ಭಾರತ, ಆಗ್ನೇಯ ಏಶಿಯಾದ ಕಾಡುಗಳಲ್ಲಿ ತಮ್ಮ ಅಳಿದುಳಿದ ವಾಸ್ತವ್ಯಗಳ ಬಳಿ ಆನೆಗಳು ಹಳ್ಳಿಗಳನ್ನು, ಬೆಳೆಗಳನ್ನು ನಾಶಮಾಡುವುದು, ಮಾನವರ ಮೇಲೆ ಹಲ್ಲೆಮಾಡಿ ಕೊಲ್ಲುವುದು ನಡೆದಿದೆ. ಇದು ಯಾವ ಪ್ರಮಾಣದಲ್ಲಿ ಹೆಚ್ಚಿದೆಯೆಂದರೆ 1990ರ ಕಾಲದಲ್ಲಿ, ಈ ಸಮಸ್ಯೆಯ ಅಧ್ಯಯನಕ್ಕೆಂದು ಆನೆಗಳ ಸಂಶೋಧಕರು “ಆನೆ-ಮಾನವ ಸಂಘರ್ಷ” ಎಂಬ ಹೊಸ ಅಂಕಿಅಂಶದ ಪ್ರಭೇದವನ್ನೇ ಶುರು ಮಾಡಿದ್ದಾರೆ. ಭಾರತದ ಜಾರ್ಖಂಡದಲ್ಲಿ ಇಸವಿ 2000-2004ರ ಮಧ್ಯೆ 300 ಜನರು ಆನೆಗಳಿಂದ ಹತರಾಗಿದ್ದಾರೆ.

ಅಸ್ಸಾಂನಲ್ಲಿ 1994-2006ರ ಅವಧಿಯಲ್ಲಿ 605 ಜನರನ್ನು ಆನೆಗಳು ಕೊಂದಿವೆ. ಅದರಲ್ಲಿ 239 ಜನರು 2001ರ ನಂತರದ ಅವಧಿಯಲ್ಲಿ ಹತರಾದವರು. ಅದೇ ಅವಧಿಯಲ್ಲಿ 265 ಆನೆಗಳನ್ನು ಕೊಲ್ಲಲಾಗಿದೆ. ಅವುಗಳಲ್ಲಿ ಹೆಚ್ಚಿನವು, ಉದ್ರಿಕ್ತ ಹಳ್ಳಿಗರು ಮುಯ್ಯಿ ತೀರಿಸಲು ನಡೆಸಿದ ದಾಳಿಯಲ್ಲಿ ಮರಣಕ್ಕೀಡಾದವು. ಆಫ್ರಿಕಾದಲ್ಲಿ ಜಾಂಬಿಯಾದಿಂದ ಟಾಂಜಾನಿಯಾದವರೆಗೆ, ಉಗಾಂಡಾದಿಂದ ಸಿಯೆರಾ ಲಿಯೋನ್‌ವರೆಗೆ ಆನೆ-ಮಾನವ ಸಂಘರ್ಷಗಳು ದಿನಂಪ್ರತಿ ಆಗುತ್ತಿರುವ ವರದಿಗಳಿವೆ. ಕಳೆದ ವರ್ಷ ಸಿಯೆರಾ ಲಿಯೋನ್‌ನಲ್ಲಿ, ಪ್ರಚೋದನೆ ಇಲ್ಲದೆಯೇ ಆನೆಗಳು ಮಾಡುತ್ತಿದ್ದ ಹಲ್ಲೆಗಳಿಂದ ಪಾರು ಮಾಡಲು ಹಳ್ಳಿಗಳನ್ನು ತೆರವುಗೊಳಿಸಿ 300 ಜನರನ್ನು ಸುರಕ್ಷಿತ ಜಾಗಗಳಿಗೆ ಸಾಗಿಸಲಾಯಿತು.    

ಇಂತಹ ಘಟನೆಗಳಲ್ಲಿ ಆಗುತ್ತಿರುವ ಹೆಚ್ಚಳ ಆತಂಕಕಾರಿಯಾಗಿದ್ದರೆ, ಅದಕ್ಕಿಂತಲೂ ಹೆಚ್ಚು ಆತಂಕ ಆನೆಗಳ ಆಕ್ರಮಣಶೀಲತೆಯಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ವಿಕೃತಿಯ ಕುರಿತಾಗಿದೆ. 1990ರ ನಂತರದ ಕಾಲದಲ್ಲಿ, ದಕ್ಷಿಣ ಆಫ್ರಿಕಾದ ಪಿಲಾನ್ಸಬರ್ಗ್ ರಾಷ್ಟ್ರೀಯ ಉದ್ಯಾನ ಮತ್ತು ಹ್ಲುಹ್ಲುವೆ-ಮೊಫೊಲೊಜಿ ಮೀಸಲು ಅರಣ್ಯ ಪ್ರದೇಶಗಳಲ್ಲಿ, ಯುವ ಗಂಡಾನೆಗಳು ಖಡ್ಗಮೃಗಗಳ ಮೇಲೆ ಅತ್ಯಾಚಾರ ಎಸಗಿವೆ, ಅಥವಾ ಕೊಂದಿವೆ.

“ಪ್ಯಾಚಿಡರ್ಮ್” ಎಂಬ ಪತ್ರಿಕೆಯಲ್ಲಿ 2001ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಈ ತರಹದ ಅಸ್ವಾಭಾವಿಕ ವರ್ತನೆ ಈ ಪ್ರದೇಶದ ಹಲವಾರು ಮೀಸಲು ಅರಣ್ಯಗಳಿಂದ ವರದಿಯಾಗಿದೆ. ಸಫಾರಿ ಗಾಡಿಗಳಲ್ಲಿರುವ ಜನರ ಮೇಲೆ ಹಲ್ಲೆ ಮಾಡುತ್ತಿದ್ದ ಮತ್ತು 63 ಖಡ್ಗಮೃಗಗಳನ್ನು ಹತ್ಯೆಮಾಡಿದ ಮೂರು ಯುವ ಆನೆಗಳನ್ನು 2005ರ ಜುಲೈ ತಿಂಗಳಲ್ಲಿ ಪಿಲಾನ್ಸಬರ್ಗನಲ್ಲಿ ಅಧಿಕಾರಿಗಳು ಗುಂಡಿಟ್ಟು ಕೊಂದರು. ದಕ್ಷಿಣ ಆಫ್ರಿಕಾದ ಅಡ್ಡೋ ರಾಷ್ಟ್ರೀಯ ಉದ್ಯಾನದಲ್ಲಿ 90% ಗಂಡಾನೆಗಳ ಸಾವಿಗೆ ಇತರ ಗಂಡಾನೆಗಳೇ ಕಾರಣ ಎನ್ನುವುದು ಕಂಡುಬಂದಿದೆ. ಸುಸ್ಥಿರ ಆನೆ-ಸಮುದಾಯದಲ್ಲಿ ಈ ಬಗೆಯ ಸಾವು 6% ದಷ್ಟು ಮಾತ್ರ ಇರುವುದು ಸಾಮಾನ್ಯ.

ಒರೆಗಾನ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಲ್ಲಿ ಮಾನಸಶಾಸ್ತ್ರಜ್ಞರಾಗಿರುವ ಗೇ ಬ್ರಾಡಶಾ ತಮ್ಮ ಪುಸ್ತಕದಲ್ಲಿ ನಮೂದಿಸಿರುವ ಹಾಗೆ ಆನೆಗಳನ್ನು ಪೂಜಿಸುವ ಭಾರತದಲ್ಲಿ, ಇತ್ತೀಚೆಗೆ ಪತ್ರಿಕೆಯೊಂದು ತನ್ನ ಶೀರ್ಷಿಕೆಯಲ್ಲಿಯೇ “ಅನೆಗಳೊಂದಿಗೆ ಸಂಘರ್ಷ ತಪ್ಪಿಸಲು ಅನೆಗಳನ್ನು ಪೂಜಿಸಬೇಡಿ” ಎಂದು ಎಚ್ಚರಿಕೆ ಕೊಟ್ಟಿತ್ತು. “ಆನೆ-ಮಾನವರ ನಡುವಿನ ಸಂಬಂಧ ವಿಪರೀತ ಬದಲಾಗಿದೆ ಎಂದು ಎಲ್ಲರೂ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಿದ್ದಾರೆ” ಎನ್ನುತ್ತಾರೆ ಬ್ರಾಡಶಾ. ನಾವೀಗ ಕಾಣುತ್ತಿರುವುದು ಒಂದು ಅಸಾಧಾರಣ ಸ್ಥಿತಿ. ಶತಮಾನಗಳ ಕಾಲ ಹೆಚ್ಚುಕಮ್ಮಿ ಶಾಂತಿಯುತ ಸಹಬಾಳ್ವೆ ಹಂಚಿಕೊಂಡಿದ್ದ ಆನೆಗಳು ಮತ್ತು ಮಾನವರ ನಡುವೆ ಈಗ ವೈಷಮ್ಯ ಮತ್ತು ಹಿಂಸೆ ಸಹಜವಾಗಿಬಿಟ್ಟಿದೆ. ಆನೆಗಳ ವಿರುದ್ಧ ಮಾನವರು ತೋರುವ ಹಿಂಸೆ ಉದ್ದೇಶಪೂರ್ವಕವೆಂಬುದೇನೋ ನಿಜ. ಇತ್ತೀಚೆಗೆ ಕಂಡುಬಂದಿರುವ ಹಾಗೆ, ಆನೆಗಳ ವರ್ತನೆಯಲ್ಲಿಯೂ ಒಂದು ಬಗೆಯ ಉದ್ದೇಶಪೂರ್ವಕ ಹಿಂಸೆಯಿದೆ.

ಆನೆಗಳ ಜೀವನಶೈಲಿಯ ಅಧ್ಯಯನದಲ್ಲಿ ತಮ್ಮ ಜೀವಮಾನವನ್ನೇ ಕಳೆದಿರುವ ಅನೇಕ ಜೀವಶಾಸ್ತ್ರಜ್ಞರು ಹಾಗೂ ಪ್ರಾಣಿ ತಜ್ಞರ ಪ್ರಕಾರ, ಈ ದಾಳಿಗಳ ಸಂಖ್ಯೆ ಮತ್ತು ರೀತಿ ಅದೆಷ್ಟು ಅಸ್ವಾಭಾವಿಕವೆಂದರೆ, ಅವುಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಅರ್ಥ ಮಾಡಿಕೊಲ್ಲುವುದು ಅಸಾಧ್ಯ. ಆನೆಗಳ ಸಂಶೋಧಕರ ಪ್ರಕಾರ, ಆಕ್ರಮಣಶೀಲತೆಗೆ ಮುಖ್ಯ ಕಾರಣ ಯುವ ಆನೆಗಳಲ್ಲಿನ ಟೆಸ್ಟೊಸ್ಟೆರೊನ್ ಮಟ್ಟದಲ್ಲಿನ ಹೆಚ್ಚಳ ಮತ್ತು ನೆಲ ಹಾಗೂ ಆಹಾರಕ್ಕಾಗಿ ಆನೆ-ಮಾನವರ ನಡುವಿನ ಘರ್ಷಣೆ.

2005ರಲ್ಲಿ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾದ ಪ್ರಬಂಧದಲ್ಲಿ ಬ್ರಾಡಶಾ ಮತ್ತು ಅವರ ಸಹ-ಸಂಶೋಧಕರು ಆನೆಗಳ ಪ್ರಭೇದ ಮಾನಸಿಕ ಒತ್ತಡಕ್ಕೆ (ಸ್ಟ್ರೆಸ್) ಒಳಗಾಗಿದೆ ಎಂದು ಸೂಚಿಸುತ್ತಾರೆ. ದಶಕಗಳ ಕಾಲದಿಂದ ನಡೆದಿರುವ ಹತ್ಯೆಗಳಿಂದಾಗಿ ಆನೆ-ಸಮುದಾಯಗಳನ್ನು ಜೋಡಿಸುವ ಸೂಕ್ಷ್ಮ ತಂತುಗಳು ಧ್ವಂಸವಾಗಿವೆ. ಆನೆಗಳ ಹಿಂಡುಗಳಲ್ಲಿ ಸಾಂಪ್ರದಾಯಿಕವಾಗಿ ಯುವ ಆನೆಗಳನ್ನು ಪಾಲಿಸುವ ವ್ಯವಸ್ಥೆಗಳು ಅಸ್ತವ್ಯಸ್ಥವಾಗಿರುವುದರಿಂದ ಅವು ಹೆಚ್ಚು ಹೆಚ್ಚು ಹಿಂಸಾತ್ಮಕವಾಗುತ್ತಿವೆ. ಆನೆಗಳ ಸಂಸ್ಕೃತಿಯ ವಿನಾಶವನ್ನು ನಾವೀಗ ಕಾಣುತ್ತಿದ್ದೇವೆ.

ಬಹುಕಾಲದಿಂದ ಸ್ಪಷ್ಟವಾಗಿರುವ ಸಂಗತಿಯೆಂದರೆ ನೆಲವಾಸಿ ಪ್ರಾಣಿಗಳ ಅನೇಕ ಪ್ರಭೇದಗಳು ಮಾನವರೊಂದಿಗಿನ ತಮ್ಮ ಸಂಘರ್ಷದಲ್ಲಿ ಸೋಲುತ್ತಿದ್ದಾರೆ. ಆದರೆ, ಪ್ರಾಣಿವರ್ಗದಲ್ಲಿ ತುಂಬ ವಿಶಿಷ್ಟ ಸಂವೇದನೆ ಉಳ್ಳ, ಆಳ ಕುಟುಂಬ ಪ್ರಜ್ಞೆಯ, ದೀರ್ಘಕಾಲೀನ ಸ್ಮೃತಿಶಕ್ತಿ ಹೊಂದಿರುವ ಆನೆ ಈ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಿಲ್ಲ. ಅದು ತನ್ನ ಅಂತ್ಯಕ್ಕೆ ಮುನ್ನ ಕೊನೆಯ ಕದನಕ್ಕೆ ಸಜ್ಜಾದಂತಿದೆ. ಈ ಭೀಷಣ ಬೆಳವಣಿಗೆಯನ್ನು ಮಾನಸಿಕ ತಜ್ಞರೂ ಸೇರಿದಂತೆ ವಿವಿಧ ಕ್ಷೇತ್ರದ ವಿಜ್ಞಾನಿಗಳು ಬಹಳ ಗಂಭೀರವಾಗಿ ಪರಿಗಣಿಸತೊಡಗಿದ್ದಾರೆ.  

ಹಾಗಾದರೆ, ಸಾಂಪ್ರದಾಯಿಕವಾಗಿ ಸೌಮ್ಯ ಪ್ರಾಣಿಯೆಂಬ ಹೆಗ್ಗಳಿಕೆ ಉಳ್ಳ ಆನೆ ಯಾಕೆ ವ್ಯಗ್ರವಾಗಿದೆ? ಯುವ ಆನೆಗಳು ಶಿಕಾರಿ ಪ್ರಾಣಿಗಳಂತೆ ಯಾಕೆ ಹಿಂಸಾಪ್ರಿಯರಾಗಿದ್ದಾವೆ? ಯಾವುದೇ ಪ್ರಚೋದನೆ ಇಲ್ಲದೆಯೂ ಆನೆಗಳು ಉಗ್ರ ದಾಳಿ ಮಾಡುವ ಪ್ರವೃತ್ತಿ ಹೇಗೆ ಬೆಳೆಸಿಕೊಂಡಿದ್ದಾವೆ? ಇವೇ ಮೊದಲಾದ ಪ್ರಶ್ನೆಗಳು ಪ್ರಾಣಿಶಾಸ್ತ್ರಜ್ಞರನ್ನೂ, ಜನಸಾಮಾನ್ಯರನ್ನೂ ಕಾಡುತ್ತಿವೆ.

ಉಗಾಂಡಾದ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನದ ಉತ್ತರದಲ್ಲಿರುವ ಕ್ಯಾಂಬಾರಾದ ನಿವಾಸಿ ಬ್ಯಾಮುಕಾಮ ಆನೆಗಳು ಯಾಕೆ ಇಷ್ಟು ಉಗ್ರ ದಾಳಿ ಮಾಡತೊಡಗಿವೆ ಎಂದು ಚಿಂತಿತನಾಗಿದ್ದಾನೆ. ಅವರ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಆನೆಗಳ ದಾಳಿಯಲ್ಲಿ ಅದೆಷ್ಟೋ ಗುಡಿಸಲುಗಳು ನಾಶವಾಗಿದ್ದವು. ಹಾಗಾಗಿ, ಊರಿನ ಸುತ್ತ ಆಳ ಕಂದಕ ತೋಡಲಾಗಿದೆ. ಬ್ಯಾಮುಕಾಮನ ಹಾಗೆಯೇ, ಕ್ಯಾಲಿಫೋರ್ನಿಯಾದ ಸಂಶೋಧಕಿ ಗೇ ಬ್ರಾಡಶಾ ಕೂಡ ಇದೇ ಸಮಸ್ಯೆ ಕುರಿತು ಆಸಕ್ತಳಾಗಿದ್ದಳು: ಆಫ್ರಿಕಾ ಮತ್ತು ಏಶಿಯಾಗಳಲ್ಲಿ ಆನೆಗಳ ಅಸಾಧಾರಣ ವರ್ತನೆ ಸಹನೆಯ ಅಂತ್ಯವನ್ನು ಸೂಚಿಸುತ್ತದೆಯೇ?

ಡಾಫ್ನೆ ಶೆಲ್ದ್ರಿಕ್, ಸಿಂಥಿಯಾ ಮಾಸ್ ಇತ್ಯಾದಿ ಪ್ರಸಿದ್ಧ ಸಂಶೋಧಕರ ಮತ್ತು ಅಲನ್ ಸ್ಕೋರ್-ನಂತಹ ಮಾನಸಿಕ ಶಾಸ್ತ್ರಜ್ಞರ ಸಹಾಯದೊಂದಿಗೆ, ಬ್ರಾಡಶಾ ಆನೆಗಳ ವರ್ತನೆಯನ್ನು ಅರಿಯಲು, ಸಾಂಪ್ರದಾಯಿಕ ಸಂಶೋಧನೆಯ ಜೊತೆ ಮಾನವ ನರವಿಜ್ಞಾನ ಮಾನಸಿಕ ಆಘಾತ ಕುರಿತು ಒದಗಿಸಿರುವ ಒಳನೋಟಗಳನ್ನು ಬಳಸುವ ಪ್ರಯತ್ನ ಮಾಡಿದರು. ಕೀನ್ಯಾದ ಅಂಬೊಸೆಲಿ ರಾಷ್ಟ್ರೀಯ ಉದ್ಯಾನದಂತ ಹೆಚ್ಚುಕಡಿಮೆ ಸುಸ್ಥಿರ ಸ್ಥಿತಿಯಲ್ಲಿರುವ ಆನೆಗಳ ಸಮುದಾಯವನ್ನು ತುಲನಾತ್ಮಕ ಚೌಕಟ್ಟಾಗಿ ಬಳಸಿ, ಬ್ರಾಡಶಾ ಮತ್ತವರ ಸಹೋದ್ಯೋಗಿಗಳು ದಕ್ಷಿಣ ಆಫ್ರಿಕಾದ ಪಿಲಾನ್ಸಬರ್ಗ್ ಮತ್ತು ಉಗಾಂಡಾದ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನದಂಥ ಪ್ರದೇಶದಲ್ಲಿ ಕಂಡು ಬರುವ ಆನೆಗಳ ಸಮುದಾಯವನ್ನು ವಿಶ್ಲೇಷಿಸಿದರು. ಅವರ ಸಂಶೋಧನೆ ಆನೆಸಮುದಾಯಗಳ ನಿರ್ವಹಣೆಯಲ್ಲಿ ಉಂಟಾಗಿರುವ ವ್ಯಾಪಕ ವ್ಯತ್ಯಯದ ಚಿತ್ರವನ್ನು ನಮ್ಮ ಮುಂದಿಡುತ್ತದೆ.

ಅವರಷ್ಟಕ್ಕೆ ಅವು ಬಾಳುತ್ತಿದ್ದರೆ, ಆನೆಗಳು ಅತ್ಯಂತ ಸಾಮಾಜಿಕ ಜೀವಿಗಳು. ಇಡೀ ಆನೆ ಹಿಂಡೇ ಒಂದು ವಿಶಾಲ ಆನೆಯಿದ್ದಂತೆ -ಪರಸ್ಪರರ ಜೊತೆ ಸಂಕೀರ್ಣ ಸಂಬಂಧ ಮತ್ತು ಬದ್ಧತೆ ಉಳ್ಳ ಒಂದು ಸೂಕ್ಷ್ಮ ಜೀವಿ. ತಾಯಿ, ಅಜ್ಜಿ, ಚಿಕ್ಕಮ್ಮ-ದೊಡ್ಡಮ್ಮಂದಿರು, ಸ್ನೇಹಿತೆಯರನ್ನು ಒಳಗೊಂಡ ಹೆಣ್ಣಾನೆಗಳ ಅಕ್ಕರೆಯ ಪಾಲಕತಂಡದೊಳಗೆ ಮರಿ ಆನೆಗಳನ್ನು ಬೆಳೆಸಲಾಗುತ್ತದೆ. ಈ ಸಂಬಂಧಗಳನ್ನು ಅವು ತಮ್ಮ ಸರಿಸುಮಾರು 70 ವರ್ಷಗಳ ಜೀವಿತಾವಧಿಯಲ್ಲಿ ಸಕ್ರಿಯವಾಗಿ ಉಳಿಸಿಕೊಳ್ಳುತ್ತವೆ.

ಸುಮಾರು ಎಂಟು ವರ್ಷಗಳವರೆಗೆ ಮರಿ ಆನೆಗಳು ತಮ್ಮ ತಾಯಿಯ ಹದಿನೈದು ಮೀಟರುಗಳ ಸುತ್ತಲಿನಲ್ಲಿಯೇ ಇರುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಆ ನಂತರ ಸ್ವಲ್ಪ ಕಾಲದವರೆಗೆ ಯುವ ಹೆಣ್ಣಾನೆಗಳು ಮಾತೆಯರ ಗುಂಪಿನಲ್ಲಿಯೂ, ಯುವ ಗಂಡಾನೆಗಳು ಗಂಡು ಆನೆಗಳ ಗುಂಪಿನಲ್ಲಿಯೂ ಇದ್ದು ಬೆಳೆಯುತ್ತವೆ. ತರುವಾಯ ಪ್ರೌಢ ಆನೆಗಳಾಗಿ ಹಿಂಡನ್ನು ಸೇರುತ್ತವೆ.    

ಆನೆಯೊಂದು ನಿಧನವಾದಾಗ ಅದರ ಕುಟುಂಬದ ಆನೆಗಳು ತೀವ್ರ ಶೋಕಾಚರಣೆ ಮತ್ತು ಶವ ಹೂಳುವ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತವೆ. ವಾರಗಟ್ಟಲೆ ಶವದ ಬಳಿ ಜಾಗರಣೆ ಮಾಡುತ್ತ ಮಣ್ಣು, ಮಟ್ಟಿಗಳಿಂದ ಶವವನ್ನು ಮುಚ್ಚುತ್ತವೆ. ವರ್ಷಾನುಗಟ್ಟಲೆ ಅದರ ಮೂಳೆಯಿರುವ ಜಾಗಕ್ಕೆ ಭೇಟಿ ಕೊಟ್ಟು, ತಮ್ಮ ಸೊಂಡಿಲಿನಿಂದ ಮೂಳೆಯನ್ನು ಸವರುತ್ತವೆ. ಆನೆಗಳು ತಲೆಯ ಕೆಳ ಪಾರ್ಶ್ವದ ದವಡೆಯನ್ನು ತಾಗಿಸಿ ಪರಸ್ಪರರನ್ನು ಮಾತನಾಡಿಸುವಂತೆ ಮೃತ ಆನೆಯ ಮೂಳೆಯ ದವಡೆ ಪಾರ್ಶ್ವವನ್ನು ಸಹ ಪಾಳಿಯಲ್ಲಿ ತಿಕ್ಕುತ್ತವೆ.

ಕುಟುಂಬದ ಯಾವುದೇ ಆನೆ ಅಪಾಯದಲ್ಲಿದ್ದರೂ ಸಹ ಇತರ ಎಲ್ಲ ಆನೆಗಳಿಗೂ ಅದರ ಅರಿವಾಗುತ್ತದೆ. ಆನೆಗಳು ಬಳಸುವ ವಿಸ್ತ್ರತ ಸಂವಹನ ವ್ಯವಸ್ಥೆ ಅವುಗಳ ಈ ಏಕತೆಗೆ ಒತ್ತಾಸೆಯಾಗಿದೆ. ಹತ್ತಿರದಲ್ಲಿರುವಾಗ ಅವು ಬಗೆಬಗೆಯ ಸದ್ದಿನ ಬಳಕೆ ಮಾಡುತ್ತವೆ-ಅತಿ ಕಡಿಮೆ ಆವರ್ತನದ ಘೀಳಿನಿಂದ ಹಿಡಿದು, ದೊಡ್ಡ ಸದ್ದಿನ ಚೀತ್ಕಾರ, ಕಹಳೆಯವರೆಗೆ. ಅಷ್ಟೇ ಅಲ್ಲದೆ ಸೊಂಡಿಲು, ತಲೆ, ದೇಹ, ಬಾಲಗಳನ್ನು ಅಲ್ಲಾಡಿಸುವುದು, ಬಗೆಬಗೆಯ ದೃಶ್ಯ ಸಂಜ್ಞೆಗಳನ್ನು ಸಹ ಬಳಸುತ್ತವೆ. ಅಪಾಯ ಎದುರಾದರೆ, ದಾರಿಯಲ್ಲಿ ಅನಿರೀಕ್ಷಿತ ಬದಲಾವಣೆಯಾದರೆ ಅಥವಾ (ಆನೆಗಳಿಗೆ ಮಹತ್ವದ ವಿಷಯವಾದ) ಕುಟುಂಬದ ಸದಸ್ಯರು ಸಾವಿಗೀಡಾದರೆ ಸಂಜ್ಞೆ ಕೊಡಲು ಮೈಲುಗಟ್ಟಲೆ ದೂರದಲ್ಲಿ ಗ್ರಹಿಸಬಹುದಾದ ಕ್ಷೀಣ ಧ್ವನಿಯ (ಸಬ್-ಸೋನಿಕ್) ಕಂಪನಗಳನ್ನು ಬಳಸುತ್ತವೆ. ಇಂತಹ ವಿವಿಧ ವಿನ್ಯಾಸದ ಕಂಪನಗಳನ್ನು ಗ್ರಹಿಸಲು ಅವರ ಕಾಲುಗಳಲ್ಲಿ ಸೆನ್ಸರ್‌ಗಳಿರುತ್ತವೆ.

ಹಲವಾರು ದಶಕಗಳಿಂದ ಆನೆಗಳ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸರಕಾರಗಳು ನಡೆಸುವ ಕಲ್ಲಿಂಗ್ ಎಂಬ ಹತ್ಯೆ, ಅವುಗಳ ನೈಸರ್ಗಿಕ ವಾಸ್ತವ್ಯದಿಂದ ಬೇರೆ ಪ್ರದೇಶಗಳಿಗೆ ಪುನರ್ವಸತಿಗಾಗಿ ಕಳಿಸುವುದು, ದಂತಗಳ್ಳರಿಂದ ಅವಿರತ ಬೇಟೆ, ವಾಸ್ತವ್ಯದ ಮೂಲನೆಲೆಗಳ ಪ್ರದೇಶ ಕುಗ್ಗುತ್ತಿರುವುದು ಇವೆಲ್ಲವುಗಳಿಂದಾಗಿ ಆನೆ-ಸಮಾಜವನ್ನು ಹಿಡಿದಿಡುವ ಸಾಂಪ್ರದಾಯಿಕ ತಂತುಗಳು ಹರಿದು ಹೋಗಿದೆಯೆಂದು ಬ್ರಾಡಶಾ ಮತ್ತವಳ ಸಹೋದ್ಯೋಗಿಗಳ ಅಧ್ಯಯನದ ತೀರ್ಮಾನ. ಹಿರಿಯ ಮಾತೆಯರು ಮತ್ತು ಪಾಲನೆ ಮಾಡುವ ಹೆಣ್ಣಾನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಂತೆಯೇ, ಯುವ ಗಂಡಾನೆಗಳನ್ನು ಹದ್ದುಬಸ್ತಿನಲ್ಲಿಡುವ ಪ್ರೌಢ ಗಂಡಾನೆಗಳ ಸಂಖ್ಯೆಯೂ ಕ್ಷೀಣಿಸಿದೆ. ಬ್ರಾಡಶಾ ನಡೆಸಿದ ಸಂಶೋಧನೆಯ ಪ್ರಕಾರ ಜಾಂಬಿಯಾ ಮತ್ತು ಟಾಂಜಾನಿಯಾದ ಕೆಲಭಾಗಗಳಲ್ಲಿ ಪ್ರೌಢ ಹೆಣ್ಣಾನೆಗಳೇ ಇಲ್ಲದ ಹಿಂಡುಗಳು ಕಂಡು ಬಂದಿವೆ. ಉಗಾಂಡಾದಲ್ಲಿ 15ರಿಂದ 25ರ ವಯಸ್ಸಿನ ಹೆಣ್ಣಾನೆಗಳಿರುವ ಹಿಂಡುಗಳು ಹಂಗಾಮಿಯಾಗಿ ಗುಂಪುಗಳಲ್ಲಿರುತ್ತವೆ. ಆದರೆ ಅವುಗಳ ನಡುವೆ ಕುಟುಂಬ ಸಂಬಂಧ ಇರಲಿಲ್ಲ. 

ಇಂತಹ ಸಾಮಾಜಿಕ ಕ್ಷೋಭೆಗಳ ಫಲವಾಗಿ, ಅನುಭವವಿಲ್ಲದ, ವಯಸ್ಸಿನಲ್ಲಿ ಕಿರಿಯ ತಾಯಂದಿರು ಮರಿಆನೆಗಳ ಪಾಲನೆಪೋಷಣೆಯ ಪೂರ್ಣ ಜವಾಬ್ದಾರಿ ಹೊತ್ತಿವೆ. ಸಾಂಪ್ರದಾಯಿಕ ಆನೆಜೀವನದಲ್ಲಿ ದೊರೆಯುವ ಬೆಂಬಲ ವ್ಯವಸ್ಥೆ ಇಲ್ಲದ ಪರಿಸ್ಥಿತಿಯಲ್ಲಿ ತನ್ನ ಪೋಷಕರ ಹತ್ಯೆಯನ್ನು ಕಂಡ ಅನಾಥ ಆನೆಗಳು ಯೌವನಕ್ಕೆ ಕಾಲಿಡುತ್ತಿವೆ. ಬ್ರಾಡಶಾ ಹೇಳುವಂತೆ, “ಯುವ ಆನೆಗಳ ಮಿದುಳಿನ ಮತ್ತು ವರ್ತನೆಯ ಸಾಮಾನ್ಯ ಬೆಳವಣಿಗೆಗೆ ಹಿರಿಯ ಆನೆಗಳ ಅನುಪಸ್ಥಿತಿ, ತಮ್ಮ ಕುಟುಂಬದ ಇತರ ಆನೆಗಳ ಹತ್ಯೆಗಳು ಧಕ್ಕೆಯುಂಟು ಮಾಡುತ್ತವೆ.”

ಬ್ರಾಡಶಾ ಮತ್ತವರ ಸಹೋದ್ಯೋಗಿಗಳು ಸಂಗ್ರಹಿಸಿರುವ ವಿವರಗಳಲ್ಲಿ ಏನಾದರೂ ಕಮ್ಮಿ ಇದ್ದಿದ್ದರೆ, ಅವರ ತೀರ್ಮಾನಗಳನ್ನು ಮಾನವ ಕೇಂದ್ರಿತ ಊಹೆಗಳು ಎಂದು ನಾವು ಭಾವಿಸಿ ಬಿಡುತ್ತಿದ್ದೆವೇನೋ! ಆಘಾತಕ್ಕೆ ಒಳಗಾದ ಮಾನವರಲ್ಲಿಯೂ ಕಂಡು ಬರುವ ಅಸ್ವಾಭಾವಿಕ ಹೆದರಿಕೆ, ಸಮಾಜವಿರೋಧಿ ನಡವಳಿಕೆ, ಅನಾಸಕ್ತಿ ಮತ್ತು ಅತಿ-ವ್ಯಗ್ರತೆ ಮುಂತಾದ ಅಸ್ವಸ್ಥತೆಯನ್ನು ಸೂಚಿಸುವ ವರ್ತನೆಗಳು, ಸಾಮಾನ್ಯವಾಗಿ ಹಿಂಡುಗಳ ಬಲಿದಾನ, ಪೋಷಕ ಹಿರಿಯಾನೆಗಳ ಹತ್ಯೆಗಳನ್ನು ಕಂಡ ಅನಾಥ ಆನೆಗಳಲ್ಲಿಯೂ ಕಂಡುಬರುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಖಡ್ಗಮೃಗಗಳನ್ನು ಕೊಂದ ಯುವ ಗಂಡಾನೆಗಳೆಲ್ಲವೂ ಸಹ ತಮ್ಮ ಕುಟುಂಬದ ಹತ್ಯೆಯನ್ನು ಕಣ್ಣಾರೆ ಕಂಡವುಗಳೇ ಆಗಿದ್ದವು. ಅವುಗಳ ಪುನರ್ವಸತಿಯ ತಯಾರಿ ಆಗುವವರೆಗೆ ಈ ಆನೆಗಳನ್ನು ಹತ್ಯೆಯಾದ ಆನೆಗಳ ದೇಹಕ್ಕೆ ಕಟ್ಟಿ ಹಾಕಲಾಗುತ್ತಿತ್ತು. ಹೀಗೆ ಪುನರ್ವಸತಿಗೆಂದು ಬೇರೆ ಪ್ರದೇಶಕ್ಕೆ ಕಳಿಸಲಾದ ಆನೆಗಳಿಗೆ ಸಾಂಪ್ರದಾಯಿಕ ಆನೆಕುಟುಂಬದ ಬೆಂಬಲಗಳು ಸಿಗುತ್ತಿರಲಿಲ್ಲ, ಎಂದು ಬ್ರಾಡಶಾ ಮತ್ತು ಸ್ಕೋರ್ ವಿವರಿಸುತ್ತಾರೆ. ಹಾಗೆಂದೇ ಅವರು ಆನೆಗಳಲ್ಲಿ ಹೆಚ್ಚಾಗುತ್ತಿರುವ ಹಿಂಸಾತ್ಮಕ ನಡವಳಿಕೆ ಮತ್ತು ಅವು ಅನುಭವಿಸುವ ಮಾನಸಿಕ ಒತ್ತಡ, ಆತಂಕಗಳಿಗೆ ನಂಟು ಇದೆ ಎಂದು ವಾದಿಸುತ್ತಾರೆ. ಇದನ್ನು ವಿವರಿಸಲು ಅವರು “ಘಾಸಿಗೊಂಡ ಆನೆಗಳು” ಎಂಬ ಸಿದ್ಧಾಂತವನ್ನು ನಮ್ಮ ಮುಂದಿಡುತ್ತಾರೆ.   

ಆನೆಗಳ ಮುರಿದು ಹೋದ ಸಾಮಾಜಿಕ ವ್ಯವಸ್ಥೆಯ ಅಭಾವವನ್ನು ತುಂಬಿಕೊಡಲು ಅನೇಕ ಉದ್ಯಾನಗಳ ಅಧಿಕಾರಿಗಳು ಮಾಡಿರುವ ಸಣ್ಣಪುಟ್ಟ ಪ್ರಯತ್ನಗಳು ಕೂಡ ಬ್ರಾಡಶಾ ಅವರ “ಘಾಸಿಗೊಂಡ ಆನೆಗಳು” ಸಿದ್ಧಾಂತಕ್ಕೆ ಪೂರಕವಾಗಿವೆ. ದಕ್ಷಿಣ ಆಫ್ರಿಕಾದ ಪಿಲಾನ್ಸಬರ್ಗ ಮತ್ತು ಅಡ್ಡೋ ಪ್ರದೇಶಗಳ ಉದ್ಯಾನ ಅಧಿಕಾರಿಗಳು ಹೀಗೆ ಅಸ್ತವ್ಯಸ್ತಗೊಂಡ ಹಿಂಡುಗಳ ಜೊತೆ ಹಿರಿಯ ಗಂಡಾನೆಗಳನ್ನು ಸೇರಿಸಿದಾಗ, ಯುವ ಆನೆಗಳ ಮೊಂಡುತನದ ನಡವಳಿಕೆ ಕಮ್ಮಿಯಾದದ್ದು ವರದಿಯಾಗಿದೆ.

ಬ್ರಾಡಶಾ ಮತ್ತವಳ ಸಹೋದ್ಯೋಗಿಗಳ ಪ್ರಕಾರ, “ಘಾಸಿಗೊಂಡ ಆನೆಗಳ” ಒಗಟನ್ನು ಬಿಡಿಸಲು ಸಹಾಯಕವಾಗುವ ಮಾಹಿತಿ ನಮಗೆ ನರವಿಜ್ಞಾನದಲ್ಲಿ ಸಿಗುತ್ತದೆ. ವಿಜ್ಞಾನಿಗಳು ಮನಸ್ಸಿನ ದೈಹಿಕ ರೂಪವನ್ನು ಅರ್ಥಮಾಡಿಕೊಳ್ಳಲು ಘಾಸಿಗೊಂಡ ನರಕೋಶಗಳ, ಅವುಗಳ ನಡುವೆ ರಾಸಾಯನಿಕಗಳ ಪೂರೈಕೆಯಲ್ಲಿನ ಅಸಮರ್ಪಕತೆಗಳ ನಕ್ಷೆ ತಯಾರಿಸುತ್ತಾರೆ. ಆಘಾತಕ್ಕೆ ಸಂಬಂಧಿಸಿದ ಬಹುಪಾಲು ವೈಜ್ಞಾನಿಕ ಜ್ಞಾನವು ಮಾನವರ ಮೇಲೆ ನಡೆಸಿದ ಸಂಶೋಧನೆಗಳನ್ನೇ ಅವಲಂಬಿಸಿವೆಯಾದರೂ, ಇತ್ತೀಚೆಗೆ ಆನೆಗಳ ನರಕೋಶಗಳ ಅಧ್ಯಯನವೂ ನಡೆಯುತ್ತಿದೆ.

2006ರಲ್ಲಿ ಮೊಟ್ಟ ಮೊದಲು ಆನೆಯ ಮೆದುಳಿನ ಎಮ್.ಆರ್.ಆಯ್. ಮಾಡಲಾಗಿದ್ದು, ಸ್ಮೃತಿಶಕ್ತಿಯ ಸ್ಥಾನವನ್ನು ಮತ್ತು ಭಾವನೆಗಳನ್ನು ನಿರ್ದೇಶಿಸುವ ಲಿಂಬಿಕ್ ವ್ಯವಸ್ಥೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಮಾನಸಿಕ ಒತ್ತಡದಿಂದಾಗಿ ಆನೆಗಳು ತೋರುವ ಅಸ್ವಾಭಾವಿಕ ನಡವಳಿಕೆಯ ಕುರಿತು ಅಲನ್ ಸ್ಕೋರ್ ಮತ್ತು ಬ್ರಾಡಶಾ ನರಜೀವವಿಜ್ಞಾನದ ಆಧಾರದ ಮೇಲೆ ವಿವರವಾಗಿ ಬರೆದಿದ್ದಾರೆ.    

“ಮಾನವರಂತೆ, ಆನೆಗಳಲ್ಲಿಯೂ ಮೆದುಳಿನ ಭಾವನಾತ್ಮಕ ಬೆಳವಣಿಗೆಗೆ ತಾಯಿಯ ಒಡನಾಟ ಬಹುಮುಖ್ಯ. ಬಾಲ್ಯದಲ್ಲಿಯ ಅನುಭವಗಳು ಧನಾತ್ಮಕವಾಗಿದ್ದಾಗ, ಭಾವನೆಗಳ ಹತೋಟಿ, ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ, ಸಮುದಾಯದ ಜೊತೆ ಸಂವಹನ, ಇತರರ ಕುರಿತು ಅನುಕಂಪ ಇವೆಲ್ಲ ಪ್ರಬಲವಾಗಿರುತ್ತವೆ. ಭಾವನೆಗಳನ್ನು ಸಂಸ್ಕರಿಸುವ ಮೆದುಳಿನ ಭಾಗಗಳ ಜರೂರಿ ಮಂಡಲಗಳ ನಾಶಕ್ಕೆ ನೇರ ಕಾರಣವೆಂದರೆ ಬಾಲ್ಯದಲ್ಲಿ ಅನುಭವಿಸಿದ ದೌರ್ಜನ್ಯ ಮತ್ತು ನಿರ್ಲಕ್ಷ್ಯ” ಎನ್ನುತ್ತಾರೆ ಸ್ಕೋರ್. “ಕೆಲವೇ ಕೆಲವು ಲಕ್ಷಣಗಳನ್ನು ಹೊರತುಪಡಿಸಿದರೆ, ಮೆದುಳಿನ ರಚನೆ ಮತ್ತು ಬಾಲ್ಯದಲ್ಲಿ ಅದರ ಬೆಳವಣಿಗೆ ಮಾನವರಲ್ಲಿ ಮತ್ತು ಆನೆಗಳಲ್ಲಿ ಸರಿಸಮಾನವಾಗಿವೆ. ಹಾಗಾಗಿಯೇ, ಆನೆಗಳು ಕೂಡ ಹಿಂಸಾತ್ಮಕ ಅನುಭವದ ಹಿನ್ನೆಲೆಯಿರುವ ಮಾನವರು ವರ್ತಿಸುವಂತೆಯೇ ವರ್ತಿಸುತ್ತವೆ.

ವೈಜ್ಞಾನಿಕ ವಿವರಗಳ ಹೊರತಾಗಿ, ಈ ಮಾಹಿತಿಗೆ ಇರುವ ಅರ್ಥ ಏನು? “ಆನೆಗಳಂತೆ ಅನ್ಯ ಜೀವಿಗಳಲ್ಲಿ ನಾವು ಹುಟ್ಟುಹಾಕುತ್ತಿರುವ ಮಾನಸಿಕ ಆಘಾತದ ಕುರಿತು ನಮ್ಮ ಪ್ರತಿಕ್ರಿಯೆ ಏನು? ಇದು ಜ್ಞಾನ ಅಥವಾ ಕಲ್ಪನೆಯ ಪ್ರಶ್ನೆಯಲ್ಲ. ಇದೊಂದು ರಾಜಕೀಯ ಪ್ರಶ್ನೆ” ಎನ್ನುತ್ತಾರೆ ಬ್ರಾಡಶಾ.

ಉಗಾಂಡಾದ ಅನಾಥ ಗಂಡಾನೆಗಳು ಮತ್ತು ಅಕೋಲಿ ಸಮುದಾಯದ ಅನಾಥ ಯುವಕರ ನಡುವಿನ ಸಾಮ್ಯತೆಯ ಕುರಿತು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಈವ್ ಆಹ್ಬೆ ಲಂಡನ್ನಿನಲ್ಲಿ ಪ್ರಾಣಿಜೀವ ವಿಜ್ಞಾನಿಯಾಗಿದ್ದಾರೆ ಮತ್ತು ವನ್ಯಜೀವಿ-ನಿರ್ವಹಣೆಯ ಸಲಹಾಗಾರಳಾಗಿಯೂ ಕೆಲಸ ಮಾಡುತ್ತಾರೆ. ಉಗಾಂಡಾದ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನದಲ್ಲಿ ವರ್ಷಾನುಗಟ್ಟಲೆ ನಡೆದ ಅನಿಯಂತ್ರಿತ ಬೇಟೆಯಿಂದಾಗಿ ಚಿಕ್ಕದಾದ ಆನೆಗಳ ಹಿಂಡುಗಳನ್ನು ಆಹ್ಬೆ ಆಂತರಿಕ ಯುದ್ಧದಲ್ಲಿ ತಮ್ಮ ಕುಟುಂಬ, ಹಳ್ಳಿಗಳನ್ನು ಕಳೆದುಕೊಂಡ ಅಕೋಲಿ ಸಮುದಾಯದ ಹುಡುಗರ ಜೊತೆ ಹೋಲಿಸಿ ಸಂಶೋಧನೆ ಮಾಡಿದಳು. ಇದು ಅತ್ಯಂತ ಮಾನವ ಕೇಂದ್ರಿತ ದೃಷ್ಟಿಯೇ ಹೌದು ಎನ್ನುತ್ತಾಳೆ ಆಹ್ಬೆ.

ಉಗಾಂಡಾದಲ್ಲಿ ಈದಿ ಅಮಿನ್ ನಡೆಸಿದ ನರಮೇಧದ ಕಾಲದಲ್ಲಿ, ಆಹ್ಬೆಯ ಕುಟುಂಬ ಕೀನ್ಯಾ ದೇಶಕ್ಕೆ ಓಡಿ ಹೋಗುತ್ತಾರೆ. ಅಲ್ಲಿ ನಿರಾಶ್ರಿತರಾಗಿ ಜೀವಿಸುತ್ತಾರೆ. ಈದಿ ಅಮಿನ್‌ನ ಸರ್ವಾಧಿಕಾರಿ ಆಡಳಿತ ಕೊನೆಗೊಂಡಾಗ ಅವರು ಉಗಾಂಡಾಕ್ಕೆ ವಾಪಸಾಗುತ್ತಾರೆ. ಆಹ್ಬೆ 1982ರಲ್ಲಿ ಮೊದಲಬಾರಿ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನಕ್ಕೆ ಬಂದಾಗ 4000 ಸಂಖ್ಯೆಯಲ್ಲಿದ್ದ ಆನೆಗಳಲ್ಲಿ 150 ಮಾತ್ರ ಉಳಿದಿದ್ದವು. ಆನೆಗಳ ಹತ್ಯೆ ಮುಖ್ಯವಾಗಿ ನಡೆದದ್ದು, ಉಗಾಂಡಾ ಮತ್ತು ಟಾಂಜಾನಿಯ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ.

ಈದಿ ಅಮಿನನನ್ನು ಪದಚ್ಯುತಿಗೊಳಿಸಿದ ಈ ಯುದ್ಧದ ಕಾಲದಲ್ಲಿ ಎರಡೂ ಕಡೆಯ ಸೈನಿಕರು ಆನೆಗಳ ದಂತದ ಕಳ್ಳಸಾಗಾಣಿಕೆಯಲ್ಲಿ ತೊಡಗಿಕೊಂಡು, ಗ್ರೆನೇಡು ಹಾಕಿ ಆನೆಗಳ ಹಿಂಡುಗಳನ್ನು ಕೊಲ್ಲುತ್ತಿದ್ದರು. ಆಹ್ಬೆಯ ಅಧ್ಯಯನದ ಪ್ರಕಾರ ಆ ಉದ್ಯಾನದ ಕೊನೆಯ ಆನೆಗಳು ಒಬ್ಬರನ್ನೊಬ್ಬರು ಬಿಟ್ಟು ದೂರವಾಗುತ್ತಿರಲಿಲ್ಲ, ಒಟ್ಟೊಟ್ಟಿಗೆ ಸಾಗುತ್ತಿದ್ದವು. ಸುಮಾರು 62ರ ವಯಸ್ಸಿನ ಏಕಾಕಿ ಹಿರಿಯ ಹೆಣ್ಣಾನೆ ಉಳಿದಿತ್ತು. ಅರಣ್ಯದ ಬೇರೆಬೇರೆ ಕಡೆ ಅಡಗಿಕೊಂಡು ಬದುಕುಳಿದ ಆನೆಗಳನ್ನು ಈ ಮಾತೆ ಒಗ್ಗೂಡಿಸಿದಳು. ಅವಳ ನಿಧನದವರೆಗೂ ಹಿಂಡನ್ನು ಒಟ್ಟಾಗಿ ಇರಿಸಿಕೊಂಡು ಆನೆಗಳ ಸಂಖ್ಯೆ ನಿಧಾನವಾಗಿ ಹೆಚ್ಚಲು ಕಾರಣಳಾದಳು. ತನ್ನ “ನನ್ನ ಜನರು ಮತ್ತು ನನ್ನ ಆನೆಗಳು” ಎಂಬ ಕೃತಿಯಲ್ಲಿ ಆಹ್ಬೆ ತನ್ನ ಅಕೋಲಿ ಸಮುದಾಯದಲ್ಲಿ ತಾಯಿಯ ಪ್ರಾಧಾನ್ಯ ಕುರಿತು ವಿವರಿಸುತ್ತಾಳೆ.  

ಈದಿ ಅಮಿನ್‌ನ ದುರಾಡಳಿತದ ತರುವಾಯವೂ ಉಗಾಂಡಾದ ಜನರ ಮತ್ತು ಆನೆಗಳ ಮೇಲಿನ ಹಿಂಸೆಯೇನೂ ಕಮ್ಮಿ ಆಗಲಿಲ್ಲ. ಹಲವು ವರ್ಷಗಳವರೆಗೆ, ಸರಕಾರ ಮತ್ತು ವಿರೋಧಿ ಗುಂಪುಗಳ ನಡುವೆ ಸಂಘರ್ಷ ಮುಂದುವರಿಯಿತು. ಜೊಸೆಫ ಕೋನಿ ಎಂಬ ಲಾರ್ಡ್ಸ್ ರೆಸಿಸ್ಟನ್ಸ್ ಆರ್ಮಿಯ ಮುಂದಾಳು ಅಕೋಲಿ ಹಳ್ಳಿಗಳಿಂದ ಹದಿಹರಯದ ಹುಡುಗರನ್ನು ತನ್ನ ಸೈನಿಕರನ್ನಾಗಿ ಹಿಂಸಾತ್ಮಕವಾಗಿ ಸೇರಿಸಿಕೊಳ್ಳುತ್ತಿದ್ದ. ಹಾಗೆ ಮಾಡುವಾಗ, ಕೆಲವೊಮ್ಮೆ ಆ ಹುಡುಗರ ಎದುರಿನಲ್ಲಿಯೇ ಅವರ ಹಿರಿಯರನ್ನು ಹಿಂಸಿಸಿ ಕೊಲ್ಲುತ್ತಲೂ ಇದ್ದ. ಈಗ ಅವನ ಗುಂಪು ಸೋತಿದ್ದರೂ ಸಹ ಮರ್ಕಿನ್ಸನ್ ಫಾಲ್ಸ್ ಉದ್ಯಾನ ಮತ್ತು ಗರಂಬಾ ಉದ್ಯಾನದ ಗುಡ್ಡಗಳಲ್ಲಿದ್ದುಕೊಂಡು ಆನೆಗಳ ದಂತ ಸಾಗಣೆಯಲ್ಲಿ ತೊಡಗಿಕೊಂಡು ಆನೆಗಳ ಹತ್ಯೆ ಮುಂದುವರಿಸಿದ್ದಾನೆ.

“ನಾನು ಅಕೋಲಿ ಜನರು ಮತ್ತು ಆನೆಗಳಿಗೆ ಆದ ಸ್ಥಿತಿಯನ್ನು ಮತ್ತೆ ಅಭ್ಯಾಸ ಮಾಡತೊಡಗಿದೆ. ಇಬ್ಬರ ನಡುವೆ ಇರುವ ಸಾಮ್ಯತೆ ಅದೆಷ್ಟು ಅಂದರೆ ಇದು ಕಾಕತಾಳೀಯ ಮಾತ್ರ ಅನಿಸಬಹುದು. ಹಿಂದೆ ಅಕೋಲಿಯಲ್ಲಿ ಹಳ್ಳಿಗಳಿದ್ದವು. ಈಗ ಉತ್ತರ ಉಗಾಂಡಾದಲ್ಲಿ ಹಳ್ಳಿಗಳೇ ಇಲ್ಲ, ಇನ್ನೂರರಷ್ಟು ನಿರಾಶ್ರಿತರ ಶಿಬಿರಗಳಿವೆ. ಎಲ್ಲರೂ ಈ ಶಿಬಿರಗಳಲ್ಲಿಯೇ ಜೀವಿಸುತ್ತಾರೆ. ಅವರ ನಡುವೆ ಹಿರಿಯರು ಉಳಿದಿಲ್ಲ. ಅಮಿನ್‌ನ ಕಾಲದಲ್ಲಿ ಒಮ್ಮೆ, ನಂತರದ ಅಂತರ್ಯುದ್ಧದಲ್ಲಿ ಮತ್ತೊಮ್ಮೆ ಉತ್ತರ ಉಗಾಂಡಾದಲ್ಲಿ ನಡೆದ ಮಾರಣಹೋಮದಲ್ಲಿ ಹಿರಿಯರೆಲ್ಲ ನಾಶವಾದರು.

ಅಲ್ಲಿರುವ ಎಲ್ಲ ಕುಟುಂಬಗಳೂ ಸಹ ಮುರಿದು ಹೋದವುಗಳೇ. ತಂದೆ ಇಲ್ಲ, ತಾಯಿ ಇಲ್ಲ; ಮಕ್ಕಳೇ ಪಾಲಕರೂ ಕೂಡ. ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿಯ ಹುಡುಗರು ಅಂಡಲೆಯುವ ಗುಂಪುಗಳನ್ನು ಕಟ್ಟಿಕೊಂಡು ಹಿಂಸಾಚಾರದಲ್ಲಿ ತೊಡಗಿರುತ್ತಾರೆ. ಇದೇ ಪರಿಸ್ಥಿತಿ ಆನೆಗಳಲ್ಲಿಯೂ ಇದೆ. ಬಹಳಷ್ಟು ಜನ ಹೀಗೆ ಮಾನವರನ್ನು ಮತ್ತು ಆನೆಗಳನ್ನು ಒಂದೇ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದನ್ನು ಮಾನವಕೇಂದ್ರಿತ ಯೋಚನೆಯೆಂದು ಹೆದರುತ್ತಾರೆ. ಆದರೆ, ನಾನು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲವೆನ್ನುವುದು ಎಲ್ಲರಿಗೂ ತಿಳಿದಿದೆ. ಆನೆಗಳ ದಾಳಿಗಳನ್ನು ನಾನು ವಿವರಿಸುವದನ್ನು ಕೇಳಿದವರು ಪ್ರಾಣಿಗಳು ಮಾನವರಂತೆ ತೋಚುತ್ತವೆ ಎನ್ನುತ್ತಾರೆ. ಆದರೆ, ಮಾನವರೂ ಪ್ರಾಣಿಗಳೇ ತಾನೆ ಎನ್ನುತ್ತಾಳೆ ಆಹ್ಬೆ.  

ಅಮೆರಿಕದ ಟೆನ್ನಿಸ್ಸಿಯಲ್ಲಿರುವ ಆನೆಗಳ ಅಭಯಾರಣ್ಯವು 2700 ಎಕರೆಗಳಲ್ಲಿರುವ ಪುನರ್ವಸತಿ ಕೇಂದ್ರ ಮತ್ತು ನಿವೃತ್ತ ಆನೆಗಳಿಗಾಗಿರುವ ಸೌಲಭ್ಯ ಕೇಂದ್ರ. ಈ ಅಭಯಾರಣ್ಯವು ಅಮೆರಿಕದ ಹಲವು ಭಾಗಗಳ ಪ್ರಾಣಿಸಂಗ್ರಹಾಲಯ ಅಥವಾ ಸರ್ಕಸಗಳಲ್ಲಿದ್ದು ಭಾವನಾತ್ಮಕವಾಗಿ, ಮಾನಸಿಕವಾಗಿ ಘಾಸಿಗೊಂಡ ಆನೆಗಳಿಗಾಗಿ ಕಲ್ಪಿಸಿರುವ ಆಶ್ರಯ. ಬಂಧಿತ ಆನೆಗಳು ದೀರ್ಘಕಾಲದಿಂದ ದರ್ಶಿಸುತ್ತ ಬಂದಿರುವ ಅಸಹಜ ನಡವಳಿಕೆಯನ್ನು ಈಗ ಅರಣ್ಯದ ಆನೆಗಳೂ ದರ್ಶಿಸುತ್ತಿರುವುದರಿಂದ, ಪ್ರಾಯಶಃ ಆಘಾತಕ್ಕೊಳಗಾದ ಆನೆಗಳಲ್ಲಿ ಧನಾತ್ಮಕ ಬದಲಾವಣೆ ತರುವ ಪ್ರಯತ್ನದ ಮಾದರಿಯನ್ನು ಸಹ ಬಂಧಿತ ಆನೆಗಳ ಸಂದರ್ಭದಲ್ಲಿಯೇ ಕಾಣುವುದರಲ್ಲಿ ಅಸಹಜವೇನೂ ಇಲ್ಲ.

ಟೆನ್ನಿಸ್ಸಿಯ ಈ ಕೇಂದ್ರದಲ್ಲಿರುವ 19 ಆನೆಗಳಲ್ಲಿ 40ರ ವಯಸ್ಸಿನ, ಐದು ಟನ್-ತೂಕದ ಏಶಿಯಾದ ಆನೆ ಮಿಸ್ಟಿಯದು ಅತ್ಯಂತ ನೋವಿನ ಕತೆ. 1966ರಲ್ಲಿ ಮರಿಯಾಗಿದ್ದಾಗ ಅದನ್ನು ಭಾರತದಲ್ಲಿ ಬಂಧಿಸಲಾಯಿತು. ಮೊದಲ ಹತ್ತು ವರ್ಷಗಳಲ್ಲಿ ಮಿಸ್ಟಿ ಅಮೆರಿಕದ ಅನೇಕ ಸರ್ಕಸ್ಸುಗಳ ಅಧೀನದಲ್ಲಿತ್ತು. 1980ರ ದಶಕದಲ್ಲಿ ಕ್ಯಾಲಿಫೋರ್ನಿಯಾದ ಒಂದು ಪ್ರಾಣಿಸಂಗ್ರಹಾಲಯ ಮಿಸ್ಟಿಯನ್ನು ಕೊಂಡುಕೊಂಡಿತು. 1983ರ ಜುಲೈ 25ರಂದು ಚೈನುಗಳನ್ನು ಹೇಗೋ ಮುರಿದು, ಉದ್ಯಾನದಿಂದ ಹೊರಬೀಳಲು ಅತ್ತಿತ್ತ ವ್ಯಗ್ರವಾಗಿ ಓಡತೊಡಗಿದ ಮಿಸ್ಟಿಯನ್ನು ಹಿಡಿಯಲು ಬಂದ ಉದ್ಯಾನದ ಒಬ್ಬ ಪ್ರಾಣಿತಜ್ಞನನ್ನು ಅದು ಸೊಂಡಿಲಿನಿಂದ ಎತ್ತಿ ಬೀಸಿ ಒಗೆದು ಸಾಯಿಸಿತು.

ಈ ಘಟನೆಯ ತರುವಾಯ ಮಿಸ್ಟಿಯನ್ನು ಸರ್ಕಸ್ಸು ಪ್ರಾಣಿಗಳ ತರಬೇತು ಸಂಸ್ಥೆಯಾದ ಹಾಥರ್ನ್ ಕಾರ್ಪೋರೇಶನ್ನಿಗೆ ಕಳಿಸಲಾಯಿತು. ಇದು ಪ್ರಾಣಿಗಳ ಆರೈಕೆಯ ಬಗೆಗೆ ಬೆಳೆಯುತ್ತಿರುವ ಮಾನವೀಯ ಅರಿವಿನ ಫಲ ಎಂದೇ ಹೇಳಬೇಕು. ಯಾಕೆಂದರೆ ಇದೇ ಘಟನೆ ಹಿಂದಿನ ಕಾಲದಲ್ಲಿ ಆದಾಗ, ಮಾನವರು ತಕ್ಷಣ ಸೇಡು ತೀರಿಸಿಕೊಳ್ಳುತ್ತಿದ್ದರು. ಇದೇ ಟೆನ್ನಿಸ್ಸಿಯಲ್ಲಿ 1916ರಲ್ಲಿ ಮೇರಿ ಹೆಸರಿನ ಒಂದು ಏಶಿಯಾದ ಆನೆ ಹೋಟೆಲ್ಲಿನ ಕರ್ಮಚಾರಿಯನ್ನು ಸಾಯಿಸಿದಾಗ, ಇಡೀ ಪಟ್ಟಣ ಆ ಆನೆಯ ಕೊಲೆಗೆ ಕರೆಕೊಟ್ಟಿತ್ತು. ಹಾಥರ್ನ ಕಾರ್ಪೋರೇಶನ್ನಿನಲ್ಲಿಯೂ ಮಿಸ್ಟಿ ಅನೇಕ ತರಬೇತುದಾರರನ್ನು ಹಾಯಲು ಎಣಿಸುತ್ತಿತ್ತು. 2003ರಲ್ಲಿ ಪ್ರಾಣಿ ಕಲ್ಯಾಣ ಕಾಯಿದೆ ಬಂದ ನಂತರ ಹಾಥರ್ನ ಕಾರ್ಪೋರೇಶನ್ನು ಮಿಸ್ಟಿಯನ್ನು “ಆನೆಯ ಅಭಯಾರಣ್ಯ”ಕ್ಕೆ ಬಿಟ್ಟುಕೊಟ್ಟರು. ಅಭಯಾರಣ್ಯಕ್ಕೆ ತರುವಾಗಲೂ ಕೂಡ ಮಿಸ್ಟಿ ಬಂಧನದಿಂದ ಪಾರಾಗಿ ಹೋಗಲು ಪ್ರಯತ್ನ ಮಾಡಿತ್ತು.

“ಆನೆಗಳ ಅಭಯಾರಣ್ಯ”ದ ಸ್ಥಾಪಕ ಕ್ಯಾರಲ್ ಬಕ್ಲೀ ಹೇಳುವಂತೆ, ಮಿಸ್ಟಿ ಹಾಥರ್ನಗೆ ಬಂದ ನಂತರವೂ ವಿಪರೀತ ವ್ಯಗ್ರ ಮಾನಸಿಕತೆಯನ್ನು ತೋರುತ್ತಿದ್ದಳು. ಅವಳ ಕಾಲಿನ ಚೈನನ್ನು ಬಿಡಿಸಲು ಯತ್ನಿಸುತ್ತಿದ್ದ ಹಾಥರ್ನ ಕಾರ್ಪೊರೇಶನ್ನಿನ ಮಾಲೀಕ ಅಂಕುಶದಿಂದ ತಿವಿದಾಗ, ಮಿಸ್ಟಿ ಸೊಂಡಿಲಿನಿಂದ ಬೀಸಿ ಎಸೆದಳು. ಆದರೆ, ನಾನು ಅಭಯಾರಣ್ಯದಲ್ಲಿ ಬಕ್ಲೀಯೊಂದಿಗೆ ಮಿಸ್ಟಿಯನ್ನು ಕಾಣಲು ಹೋದಾಗ, ತುಂಬ ಸೌಮ್ಯತೆಯಲ್ಲಿ ಕಿವಿಗಳನ್ನು ಬೀಸುತ್ತ ನಿಂತಿತ್ತು. ನೋಡಿದರೆ, ಈ ಆನೆ ಯಾರನ್ನಾದರೂ ಸಾಯಿಸಿದೆ ಎಂದು ನಂಬಲು ಅಸಾಧ್ಯವಾಗಿತ್ತು.

ಟೆನ್ನಿಸ್ಸಿಯ ಅಭಯಾರಣ್ಯದಲ್ಲಿ ಎರಡು ವರ್ಷಗಳ ಕಾಲ ವಾಸದಲ್ಲಿರುವ ಮಿಸ್ಟಿಗೆ, ಕ್ಷಯ ರೋಗಕ್ಕಾಗಿ ಚಿಕಿತ್ಸೆಯ ಜೊತೆಗೆ, ಮಾನಸಿಕ ಚಿಕಿತ್ಸೆಯನ್ನೂ ಮಾಡಲಾಗುತ್ತಿತ್ತು. ಅರಣ್ಯದಲ್ಲಿ ಬಂಧಿಸಿದ ಆನೆಗಳನ್ನು ತಾಯಿಯಿಂದ ಬೇರ್ಪಡಿಸಲು ತಾಯಿ ಆನೆಯ ಹತ್ಯೆ ಮಾಡಲಾಗುತ್ತದೆ. ಬಂಧಿತ ಆನೆಯನ್ನು ದೂರ ಅಪರಿಚಿತ ಪ್ರದೇಶದಲ್ಲಿ ಪ್ರದರ್ಶನಕ್ಕಾಗಿಯೋ, ಕೆಲಸಕ್ಕಾಗಿಯೋ ಹಚ್ಚಲಾಗುತ್ತದೆ. ಈ ಆನೆಗಳು ಸದಾ ಒಬ್ಬಂಟಿಯಾಗಿ ಬಂಧನದಲ್ಲಿರುತ್ತವೆ. ಆನೆಗಳಂತಹ ಸಮಾಜ ಜೀವಿಗೆ ಈ ಏಕಾಂತ ಸಜೀವ ಸಾವಿನಂತಿರುತ್ತದೆ.

ಆನೆಗಳೂ ನಮ್ಮ ಹಾಗೆ ನೊಂದುಕೊಳ್ಳುತ್ತವೆ ಎನ್ನುವುದನ್ನು ಹೇಗೆ ನಾವು ಈಗೀಗ ಅರಿತುಕೊಂಡಿದ್ದೇವೋ, ಹಾಗೆಯೇ, ಆನೆಗಳೂ ನಮ್ಮಂತೆಯೇ ಗುಣಮುಖವಾಗುತ್ತವೆ ಎಂದು ಸಹ ಕಲಿಯುತ್ತಿದ್ದೇವೆ. ಟೆನ್ನಿಸ್ಸಿಯ ಆನೆಗಳ ಅಭಯಾರಣ್ಯದ ಅನನ್ಯ “ನಿಷ್ಕ್ರಿಯ ನಿಯಂತ್ರಣ” ಎಂಬ ಚಿಕಿತ್ಸೆಯ ಪದ್ಧತಿಯನ್ನು ಪ್ರಚುರಪಡಿಸಲು ಮಿಸ್ಟಿ ಒಳ್ಳೆಯ ಉದಾಹರಣೆಯಾಗಿದ್ದಾಳೆ. ಆಘಾತೋತ್ತರ ಮಾನಸಿಕ ಒತ್ತಡದ ಅಸ್ವಸ್ಥತೆಯನ್ನು (post-traumatic stress disorder)ಎದುರಿಸುತ್ತಿರುವ ಮಾನವರ ಚಿಕಿತ್ಸೆಯಲ್ಲಿ ಬಳಸುವ ವಿಧಾನವನ್ನು ಅವಲಂಬಿಸಿರುವ ಈ ಚಿಕಿತ್ಸಾ ಪದ್ಧತಿಯು, ಆನೆಗಳು ಮಾಹಿತಿಯನ್ನು ಹೇಗೆ ಸ್ವೀಕರಿಸಿ, ಹೇಗೆ ಒತ್ತಡಕ್ಕೆ ಪ್ರತಿಕ್ರಿಯಿಸುತ್ತವೆ ಎನ್ನುವ ತಿಳಿವಳಿಕೆಯ ಮೇಲೆ ಅವಲಂಬಿಸಿದೆ.

ಈ ಪ್ರಾಬಲ್ಯರಹಿತ ಪದ್ಧತಿಯಲ್ಲಿ ಪ್ರಾಣಿ ತರಬೇತಿಯಲ್ಲಿ ಸಾಮಾನ್ಯವಾಗಿ ಮಾಡುವಂತೆ, ಆನೆಗಳ ಮೇಲೆ ಯಾವುದೇ ಶಿಸ್ತನ್ನು ಹೇರಲಾಗುವುದಿಲ್ಲ, ಯಾವುದೇ ಬಗೆಯಲ್ಲಿ ಶಿಕ್ಷಿಸಲಾಗುವುದಿಲ್ಲ, ಆಹಾರ ನಿರಾಕರಿಸಲಾಗುವುದಿಲ್ಲ. ಆನೆಗಳಿಗೆ ಆಯ್ಕೆಯ ಸ್ವಾತಂತ್ರ್ಯ ಮತ್ತು ಸುರಕ್ಷಿತ ಭಾವನೆ ಒದಗಿಸಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತದೆ. ಮಾನವ ಟ್ರೌಮಾ ಚಿಕಿತ್ಸೆಯಲ್ಲಿಯೂ ಇದೇ ಬಗೆಯ ತಂತ್ರದ ಪ್ರಯೋಗ ಮಾಡಲಾಗಿದೆ. ಹಾಗೆಯೇ ಸತತ ಸಾಮಾಜಿಕ ಒಡನಾಟ ಒದಗಿಸಲಾಗುತ್ತದೆ.

ಟೆನ್ನಿಸ್ಸಿ ಅಭಯಾರಣ್ಯಕ್ಕೆ ಬರುತ್ತಲೇ ಮಿಸ್ಟಿಗೆ ಇಲ್ಲಿನ ಭಿನ್ನ ಪರಿಸರದ ಅರಿವಾಯಿತು ಎಂದು ಕಾಣುತ್ತದೆ, ಯಾಕೆಂದರೆ ಬಂದ ಎರಡನೆಯ ದಿನಕ್ಕೇ ಕಾಲಲ್ಲಿದ್ದ ಚೈನನ್ನು ಬಿಡಿಸಲು ಬಂದವರಿಗೆ ಅದು ಏನೇನೂ ವಿರೋಧ ವ್ಯಕ್ತಪಡಿಸಲಿಲ್ಲ. ಬಂದ ತರುವಾಯ ಹಲವು ತಿಂಗಳುಗಳ ಕಾಲ ಕ್ಷಯ ರೋಗದ ಚಿಕಿತ್ಸೆಗಾಗಿ ಪ್ರತ್ಯೇಕವಾಗಿರಿಸಲಾದ ಮಿಸ್ಟಿಯನ್ನು ಜನರೇ ಕುಟುಂಬದ ಸದಸ್ಯರಂತೆ ಪೋಷಣೆ ಮಾಡಿದರು. ಬಕ್ಲೀ ಹೇಳುತ್ತಾರೆ, “ನಾವು ದಿನದ ಚಿಕಿತ್ಸೆಯ ನಂತರ ಅವಳ ಕೊಟ್ಟಿಗೆಯಲ್ಲಿಯೇ ನಿಂತು ಅವಳನ್ನು ಬಾಯಿತುಂಬಾ ಹೊಗಳುತ್ತಿದ್ದೆವು. ಅದಕ್ಕೆ ಅವಳು ಸಂತೋಷದಿಂದ ಕಂಪಿಸುತ್ತಿದ್ದಳು, ಅವಳೊಂದಿಗೆ ಇಡೀ ಕೊಟ್ಟಿಗೆಯೂ ಸಹ”.

ಮಿಸ್ಟಿಯ ಮತ್ತು ಅವಳಂತ ಅಸಂಖ್ಯ ಆನೆಗಳ ಬಂಧನದ ಹಿನ್ನೆಲೆಯಲ್ಲಿ ನೋಡಿದಾಗ, ಅವಳು ಗುಣಮುಖಿಯಾದ ಕತೆ, ಎಷ್ಟು ನೋವಿನದೋ ಅಷ್ಟೇ ಹೃದಯಸ್ಪರ್ಶಿಯೂ ಆಗಿದೆ. ಯಾಕೆಂದರೆ ಈಗ ನಮ್ಮ ಅರಿವಿಗೆ ಬಂದಿರುವ ಹಾಗೆ, ಅವಳು ಮತ್ತು ಇತರ ಆನೆಗಳು ಸಂಕಟ ಅನುಭವಿಸಿದ್ದಾರೆ -ನಮ್ಮಿಂದಾಗಿ ಮತ್ತು ನಮ್ಮಂತೆಯೇ ಇರುವುದರಿಂದಾಗಿ. ವಿಯೆಟ್ನಾಮ್ ಯುದ್ಧದ ಕಾಲದಲ್ಲಿ ಮನುಷ್ಯರು ಅನುಭವಿಸುವ ಮಾನಸಿಕ ಆಘಾತ ದೈಹಿಕ ಊನತೆಯನ್ನು ಉಂಟುಮಾಡಬಲ್ಲದು ಎಂದು ಗೊತ್ತಿರಲಿಲ್ಲ. ಮನಸು ದೇಹಕ್ಕೆ ಹೊರತಾದ ಅಂಗವಲ್ಲ, ಹಾಗಾಗಿಯೇ ದೇಹದ ಯಾವುದೇ ಭಾಗದಂತೆ ಅದಕ್ಕೂ ಸಹ ಗಾಯವಾಗಲು ಸಾಧ್ಯ ಎನ್ನುವ ವಿಚಾರವೇ ಜನರಿಗೆ ಅಪರಿಚಿತವಾಗಿತ್ತು.

ಈಗ ನಾವು, ಇಂತಹುದೇ ಒಂದು ಗಹನ ಕಲ್ಪನೆಯ ಜಿಗಿತವನ್ನು ಮಾಡಬೇಕಿದೆ -ನಮ್ಮಂತೆಯೇ ಇತರ ಪ್ರಾಣಿಗಳೂ ಸಹ ನಮ್ಮಷ್ಟೇ ಸೂಕ್ಷ್ಮವಾಗಿ, ಸಂಕೀರ್ಣವಾಗಿ ಘಾಸಿಗೊಳ್ಳಬಹುದು. ಈ ಜ್ಞಾನ ನಮ್ಮ ಮೇಲೆ ಆರೋಪಿಸುವ ಜವಾಬ್ದಾರಿ ಎಂದರೆ, ಪ್ರಾಣಿಗಳ ಅಸಹಜ ವರ್ತನೆ ಅಪರೂಪದ ತತ್-ಕ್ಷಣದ ಪ್ರತಿಕ್ರಿಯೆಯಲ್ಲ, ಬದಲಾಗಿ ಬಂಧನ ಮತ್ತು ದೌರ್ಜನ್ಯದ ವಿರುದ್ಧ ಅವು ತೋರುವ ವಿರೋಧ ಎನ್ನುವ ತಿಳಿವಳಿಕೆ.  

ನಮ್ಮೊಂದಿಗೆ ಅವುಗಳಿಗೆ ಯಾವುದೇ ಭವಿಷ್ಯವಿಲ್ಲ. ನಾವು ಎದುರಿಸಬೇಕಾದ ಪ್ರಶ್ನೆಯೆಂದರೆ, ಭೂಮಿ ಮೇಲಣ ಅತ್ಯಂತ ಸೂಕ್ಷ್ಮ ಮನಸ್ಸಿನ ಹಾಗೂ ಅತ್ಯಂತ ಅರ್ಪಣಾ ಸ್ವಭಾವದ ಆನೆಗಳಿಲ್ಲದ ಭವಿಷ್ಯ ನಮಗೆ ಬೇಕಿದೆಯಾ? ನಗರಗಳಲ್ಲಾಗಲೀ, ಅರಣ್ಯಗಳಲ್ಲಾಗಲೀ ಆನೆಗಳ ಆರೈಕೆ, ಸಂರಕ್ಷಣೆಗೆ ಬಳಸುವ ಪದ್ಧತಿಗಳ ಕುರಿತು ಈಗ ನಿಸರ್ಗಪ್ರಿಯರಿಂದ ಹಿಡಿದು ನರವಿಜ್ಞಾನಿಗಳವರೆಗೆ ಎಲ್ಲರಿಗೂ ಆಸಕ್ತಿ ಇದೆ. ಆನೆಗಳ ಬಾಳ್ವೆಯ ಅನೇಕ ಅಂಶಗಳು, ಆಶಯಗಳು, ಅರ್ಪಣೆಗಳು, ಅವರ ದುರ್ಬಲತೆ, ಅವರ ಬಲಾಢ್ಯತೆ, ಇವೆಲ್ಲವೂ ನಮಗೆ ನಮ್ಮನ್ನೇ ನೆನಪಿಸುತ್ತವೆ. ಹಾಗಾಗಿ, ಎಲ್ಲೆಡೆ ಆನೆಗಳು ಇತ್ತೀಚೆಗೆ ತೋರುತ್ತಿರುವ ಹಿಂಸಾಚಾರವನ್ನು ನಾವು ಉಪೇಕ್ಷೆ ಮಾಡುವಂತಿಲ್ಲ. ಇತರ ಪ್ರಾಣಿಗಳ ಸಂರಕ್ಷಣೆಗೆ ನಾವು ಮಾನವೀಯ ಮೌಲ್ಯದ ಕಲ್ಪನೆಯಡಿಯಲ್ಲಿ ಯೋಚಿಸುತ್ತೇವೆಯಾದರೂ ಸಹ, ವಿರೋಧಾಭಾಸವೆಂದರೆ, ಅವುಗಳನ್ನು ಸಂರಕ್ಷಿಸಲು ನಾವು ನಮ್ಮ ಮಾನವಕೇಂದ್ರಿತ ದೃಷ್ಟಿಕೋನದ ಹೊರಹೋಗಿ, ಬಹುಜೀವಿ ಅನುಕಂಪವನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಬ್ರಾಡಶಾ ಸೂಚಿಸುವಂತೆ ತ್ವರಿತವಾಗಿ ಮತ್ತು ವ್ಯಾವಹಾರಿಕ ನೆಲೆಯಲ್ಲಿ ಈಗ ಮಾಡಬೇಕಿರುವುದೆಂದರೆ ಆನೆಗಳ ಸಮುದಾಯ, ಮಾನಸಿಕತೆ ಮತ್ತು ಭಾವನೆಗಳ ಕುರಿತು ಕಲಿತ ಮಾಹಿತಿಯನ್ನು ಆಧರಿಸಿದ ತಿಳಿವಳಿಕೆಯನ್ನು ಆನೆಗಳ ಸಂರಕ್ಷಣೆಯ ಯೋಜನೆಗಳಲ್ಲಿ ಬಳಸುವುದು. ಆನೆಗಳ ನೈಸರ್ಗಿಕ ನೆಲೆಗಳನ್ನು ಪುನರ್‌ಸ್ಥಾಪಿಸುವುದು ಮತ್ತು ಅವುಗಳ ಹತ್ಯೆ ಅಥವಾ ಚಂಚಲಗೊಳಿಸುವ ಯೋಜನೆಗಳನ್ನು ಕೊನೆಗಾಣಿಸುವುದು ಸಹ ಅವಶ್ಯಕ.

ಬ್ರಾಡಶಾ ಇದನ್ನು ಬಹಳ ಸರಳವಾಗಿ ಹೇಳುತ್ತಾರೆ: “ನಮಗೆ ಆನೆಗಳು ಬೇಕೆಂದಾದರೆ, ನಾವು ಮಾಡಬೇಕಿರುವುದು ಇಷ್ಟೇ -ಅವರೊಂದಿಗೆ ಸಹಬಾಳ್ವೆಯನ್ನು ಕಲಿತುಕೊಳ್ಳುವುದು. ಸಂರಕ್ಷಣೆ ಒಂದು ಹೆಜ್ಜೆಯಾದರೆ, ಆನೆಗಳ ಜೊತೆಯಲ್ಲಿ ಬದುಕುವುದರ ಬಗೆಗೆ ಜನರಲ್ಲಿ ಅರಿವು ಮೂಡಿಸುವುದು ಇನ್ನೊಂದು ಹೆಜ್ಜೆ. ಆನೆಗಳ ಜೊತೆ ಸಮರಕ್ಕಿಳಿಯದೆ ಅವರ ನೆಲದ ಮೇಲೆ, ಅವರೊಂದಿಗೆ ಬದುಕುವುದನ್ನು ಕಲಿಯುವುದು ಅವಶ್ಯವಾಗುತ್ತದೆ.”   

ಹೊಸದಾಗಿ ಹೊಮ್ಮುತ್ತಿರುವ ಆನೆಗಳೊಂದಿಗಿನ ನಮ್ಮ ಒಡಂಬಡಿಕೆಯ ಇನ್ನೊಂದು ಭಾಗವನ್ನು ಸೂತ್ರೀಕರಿಸುವುದು ಕಷ್ಟದ ಕೆಲಸ. ಅದಕ್ಕೆ, ನಮ್ಮನ್ನು ಮತ್ತು ಪ್ರಾಣಿಗಳನ್ನು ನಾವು ಹೇಗೆ ನೋಡುತ್ತೇವೆ ಎನ್ನುವಲ್ಲಿಯೇ ಮೂಲಭೂತವಾದ ಬದಲಾವಣೆಯ ಅಗತ್ಯವಿದೆ. ಮಾನವಕೇಂದ್ರಿತ ತಿಳಿವಳಿಕೆಯಿಂದ ಹೊರಬಂದು, ಬ್ರಾಡಶಾ ಹೇಳುವ ಬಹುಜೀವಿಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಇದಕ್ಕೆ ಸೂಕ್ತ ನಿದರ್ಶನವೊಂದು, ಕೀನ್ಯಾದ ಡೇವಿಡ್ ಶೆಲ್‌ಡ್ರಿಕ್ ವನ್ಯಜೀವಿ ಸಂಸ್ಥೆಯು ಅನಾಥ ಮತ್ತು ಘಾಸಿಗೊಂಡ ಆನೆಗಳಿಗಾಗಿ ಮಾಡುತ್ತಿರುವ ಕಾರ್ಯಯೋಜನೆಯಲ್ಲಿ ನಮಗೆ ಸಿಗುತ್ತದೆ.

ಈ ಸಂಸ್ಥೆಯಲ್ಲಿ ಮಾನವ ಪೋಷಕರು ಅನಾಥ ಮರಿ ಆನೆಗಳಿಗೆ ಪರ್ಯಾಯ ಪೋಷಕರಾಗಿ ಕೆಲಸ ಮಾಡುತ್ತಾರೆ. ಅವುಗಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕ್ರಮೇಣ ಪುನರ್‌ಸ್ಥಾಪಿಸಿ (restoring), ಅರಣ್ಯದ ಹಿಂಡುಗಳಲ್ಲಿ ಸೇರಿಸುತ್ತಾರೆ. ಮಾನವ ಪೋಷಕರು ತಮ್ಮ ಆರೈಕೆಯಲ್ಲಿರುವ ಆನೆಗಳ ಜೊತೆ ದೀರ್ಘ ಕಾಲ ವ್ಯಯಿಸುತ್ತಾರೆ, ಕೆಲವೊಮ್ಮೆ ರಾತ್ರಿಹೊತ್ತಿನಲ್ಲಿಯೂ ಅವರ ಬಳಿಯಲ್ಲಿಯೇ ನಿದ್ದೆ ಮಾಡುತ್ತಾರೆ. ಏಕೈಕ ಮಾನವ ಪೋಷಕನೊಂದಿಗೆ ಮಾತ್ರ ಸಂಬಂಧ ಬಲವಾಗಿ, ಇತರರ ಜೊತೆ ಬೆರೆಯಲಾರದ ಸ್ಥಿತಿಯನ್ನು ತಪ್ಪಿಸಲು, ಪಾಳಿ ಬದಲಿಸುತ್ತ ಬೇರೆ ಬೇರೆ ಪೋಷಕರು ಆನೆಗಳ ಆರೈಕೆ ಮಾಡುತ್ತಾರೆ.

ಈವರೆಗೆ ಈ ಸಂಸ್ಥೆ 60 ಆನೆಗಳ ಅರೈಕೆ ಪೂರ್ಣಗೊಳಿಸಿ ಅರಣ್ಯದಲ್ಲಿ ಆನೆಗಳ ಹಿಂಡುಗಳಿಗೆ ಸೇರಿಸಿದೆ. ಅವುಗಳಲ್ಲಿ ಕೆಲವು ಆನೆಗಳು, ಅರಣ್ಯದಲ್ಲಿ ಹುಟ್ಟಿದ ಮರಿಗಳನ್ನು ತಮ್ಮ ಮಾನವ ಪೋಷಕರಿಗೆ ಪರಿಚಯಿಸುವುದಕ್ಕೆಂದು ಆಗೀಗ ಸಂಸ್ಥೆಗೆ ಭೇಟಿ ಕೊಡುತ್ತವೆ. ಬ್ರಾಡಶಾ ಅವರ ಬಹುಜೀವಿ ಪ್ರಜ್ಞೆಯನ್ನು ಈ ಆನೆಗಳಂತೂ ಪ್ರದರ್ಶಿಸುತ್ತಿವೆ ಎನಿಸುತ್ತದೆ.

ಬ್ರಾಡಶಾ ಹೇಳುತ್ತಾರೆ, “ಪರಂಪರಾಗತವಾಗಿ, ಮಾನವರಿಗೆ ಗುಣಮುಖರಾಗಲು ನಿಸರ್ಗ ಸಹಾಯ ಮಾಡಿದೆ. ಈಗ, ತಮ್ಮನ್ನು ತಾವು ವಾಸಿ ಮಾಡಿಕೊಳ್ಳುವುದರ ಜೊತೆಯಲ್ಲಿಯೇ ಮಾನವರು ಇತರ ಪ್ರಾಣಿಗಳಿಗೂ ವಾಸಿಯಾಗಲು ಸಹಾಯ ಮಾಡಬಹುದು. ಪರಸ್ಪರರಿಗೆ ಲಾಭದಾಯಕವಾದ ಅಂತರಜೀವಿ ಸಂಸ್ಕೃತಿಯ ಆರಂಭವಾಗಿ ಡೇವಿಡ್ ಶೆಲ್‌ಡ್ರಿಕ್ ಸಂಸ್ಥೆ ಮತ್ತು ಅಭಯಾರಣ್ಯವನ್ನು ಕಾಣಬಹುದು.”

Leave a Reply

Your email address will not be published.