ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’

ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ನವೆಂಬರ್ 8 ರಿಂದ 10 ರವರೆಗೆ ಆನೆಗೊಂದಿ ಪರಿಸರದಲ್ಲಿ ಮೂರು ದಿನಗಳ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿತು.

ಕರ್ನಾಟಕವನ್ನು ಪ್ರವಾಸಿಗರು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಮಾಜಮುಖಿ ಪತ್ರಿಕೆ ಬಳಗ ಈ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಸಂಡೂರು, ಮೇಲುಕೋಟೆ, ಕೊಡಗು, ಬನವಾಸಿ, ಮಲೆಮಹದೇಶ್ವರ ಪರಿಸರದ ಯಶಸ್ವೀ ನಡಿಗೆಯ ನಂತರ 6ನೇ ನಡಿಗೆಯಾಗಿ ಕೊಪ್ಪಳ ಜಿಲ್ಲೆಯ ಆನೆಗೊಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಪ್ರದೇಶದ ಜನಜೀವನ, ಕಲೆ, ಆಹಾರ, ಸಂಸ್ಕತಿ, ಭಾಷೆ, ಇತಿಹಾಸ, ಪರಿಸರ, ಸ್ಥಳೀಯ ಸಮಸ್ಯೆಗಳನ್ನು ನಡೆದಾಡಿ ತಿಳಿಯುವುದು, ಅನೌಪಚಾರಿಕವಾಗಿ ಅಧ್ಯಯನ ಮಾಡುವುದು ಈ ತಂಡದ ಧ್ಯೇಯೋದ್ದೇಶ.

ಜೂನ್ 8ರ ಬೆಳಿಗ್ಗೆ 9:30ಕ್ಕೆ ಗಂಗಾವತಿಯ ಹೋಟೆಲ್ ಲಲಿತ ಮಹಲ್ ಆವರಣದಲ್ಲಿ ‘ಗಂಗಾವತಿ ಚಾರಣ ಬಳಗ’ದ ಸಂಚಾಲಕರಾದ ಡಾ.ಶಿವಕುಮಾರ್ ಮಾಲೀಪಾಟೀಲರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸಮಾಜಮುಖಿ ಬಳಗದ ಜಯರಾಮ್ ರಾಯಪುರ ಅವರು ಪತ್ರಿಕೆಯ ಚಿಂತನೆ, ಚಟುವಟಿಕೆಗಳನ್ನು ವಿವರಿಸಿದರು. ನಂತರ ನಡಿಗೆ ತಂಡ ಆನೆಗುಂದಿ ತಲುಪಿ ರಂಗನಾಥಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಹಗಲುವೇಷ ಕಲಾಪ್ರದರ್ಶನ ವೀಕ್ಷಿಸಿತು; ಆನೆಗೊಂದಿ ಪರಿಸರದಲ್ಲಿ ನಡೆದಾಡಿತು. ಈ ಸಂದರ್ಭದಲ್ಲಿ ಆನೆಗೊಂದಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಮಾರಿ ಅಂಜನಾದೇವಿ ಮತ್ತು ಸದಸ್ಯರು ಜೊತೆಗೂಡಿದರು. ನಂತರ ಚಿಂತಾಮಣಿ, ಘನತ್ಯಾಜ್ಯ ವಿಲೇವಾರಿ ಘಟಕ, ಬಾಳೆಯ ನಾರಿನಿಂದ ತಯಾರಿಸುವ ಹಲವು ಬಗೆಯ ಗೃಹೋಪಯೋಗಿ ವಸ್ತುಗಳ ಕರಕುಶಲ ಕಲೆಯನ್ನು ವೀಕ್ಷಿಸಿ ದುರ್ಗಾ ಬೆಟ್ಟದ ಮೇಲಿನ ವಾಲಿಯ ಗುಹೆ ಮತ್ತು ಕೋಟೆಗೆ ಭೇಟಿ ನೀಡಲಾಯಿತು. ಚಿಕ್ಕರಾಂಪುರದಲ್ಲಿ ಊಟದ ನಂತರ ಪಂಪಾ ಸರೋವರ ವೀಕ್ಷಿಸಿ ಆಂಜನಾದ್ರಿ ಬೆಟ್ಟದ ಮೇಲೆ ನಯನ ಮನೋಹರ ಸೂರ್ಯಾಸ್ತಕ್ಕೆ ತಂಡ ಸಾಕ್ಷಿಯಾಯ್ತು. ಸಂಜೆ ಹೋಟೆಲ್ ಲಲಿತ್ ಮಹಲ್ ಸಭೆಯಲ್ಲಿ ಆನೆಗೊಂದಿ ಪರಿಸರದ ಚರಿತ್ರೆ ಮತ್ತು ಸಂಸ್ಕತಿಯ ಮೇಲೆ ಡಾ.ಶರಣಬಸಪ್ಪ ಕೋಲ್ಕರ್ ಉಪನ್ಯಾಸ ನೀಡಿದರು. ಸ್ಥಳೀಯರಾದ ಗಂಗಾವತಿ ಪ್ರಾಣೇಶ್ ತಮ್ಮ ಎಂದಿನ ಶೈಲಿಯಲ್ಲಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿ, ನಡಿಗೆ ಪರಿಕಲ್ಪನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆನೆಗುಂದಿ ನಡಿಗೆ…

ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
                 ಮನದಲ್ಲಿ ಮರುಕಳಿಸುತ್ತಿವೆ ಅವವೇ ಚಿತ್ರಗಳು
                 ಕಿವಿಯಲ್ಲಿ ರಿಂಗಣಿಸುತ್ತಿವೆ ಅವವೇ ಮಾತುಗಳು
                 ಕಣ್ಣಮುಂದೆ ತೇಲುತ್ತಿವೆ ಅವವೇ ಪಾತ್ರಗಳು
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
                ಕುಂತಲ್ಲು ನಿಂತಲ್ಲು ಕಲ್ಲುಕಲ್ಲುಗಳದೇ ಸದ್ದು
                ಕನಸಿನಲ್ಲು ನಡೆಯುತ್ತಿದ್ದೆ ಎದ್ದು-ಬಿದ್ದು
                ಬಂಡೆಗಳ ಸೀಳಿ ಮುನ್ನಡೆಯುತ್ತಿದ್ದೆ ಎಲ್ಲರ ಗೆದ್ದು
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
                ಹಿರಿಯರು-ಕಿರಿಯರು ಸಹಸಂಗಾತಿಗಳಿಲ್ಲಿ
               ಹೆಣ್ಣು-ಗಂಡು ಬೇಧವಿಲ್ಲ ಹೆಜ್ಜೆಹಾಕುವಲ್ಲಿ
               ಕೈಹಿಡಿದು ಹತ್ತಿಸಿ-ಜಾರಿಸಿ ದಡಮುಟ್ಟಿಸಿದರಿಲ್ಲಿ
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
               ರೊಟ್ಟಿ-ಎಣ್ಣೆಗಾಯಿ ಚಟ್ನಿ ಕೆನೆಮೊಸರು
              ನಾಲಿಗೆಯಲ್ಲಿ ನೀರೂರಿಸುತ್ತಿದೆ ಕಾಳು-ಪಲ್ಯಗಳ ಹೆಸರು
              ಬೇಡವೆಂದರೂ ಬಡಿಸುತ್ತಿದ್ದರು ಮೇಲೊಂದು ಕೊಸರು
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
               ರಾಮ, ಕುಮಾರರಾಮ, ವಾಲಿ-ಸುಗ್ರೀವರ ತಾಣಗಳಿವು
                ಹಗಲುವೇಷ, ಬಯಲಾಟ ಆದಿಮಕಲೆಯ ಕುರುಹುಗಳಿವು
               ನೆಲಮೂಲಿಗರ ಬದುಕ ಚರಿತೆಯ ಬಯಲುಗೊಳಿಸಿದವು
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
              ಸ್ವಾತಂತ್ರ್ಯಕ್ಕೆ ಹೋರಾಡಿದ ಜನಪದ ನಾಯಕರ ನಾಡಿದು
              ಚೆನ್ನಮ್ಮ, ರಾಯಣ್ಣ, ಭರಮಪ್ಪ, ಹಲಗಲಿ ಬೇಡರ ಬೀಡಿದು
               ವೀರರು ಹರಿಸಿದ ನಿಟ್ಟುಸಿರ ನೆತ್ತರಿನ ಗುರುತಿದು
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
             ಈ ನೆಲದಲ್ಲಿ ನಡೆದಾಡಿದ ಕಾಲುಗಳೇ ಪುಣ್ಯ, ದೇಹವೇ ಧನ್ಯ
             ಹೃಣ್ಮನಗಳನ್ನು ತಣಿಸಿದ ಕಣ್ಣುಗಳೇ ಮಾನ್ಯ, ಮನಸ್ಸು ಮೌನ
             ಚಿತ್ತ ಅತ್ತಿತ್ತ ಅಲುಗದಂತೆ ಹಿಡಿದಿಟ್ಟ ಭೂಮ್ತಾಯಿಗೆ ನಮನ
ಆನೆಗುಂದಿ ನಡಿಗೆ
ಹೊತ್ತು ತರದಿರು ನೆನಪ ಅಡಿಗಡಿಗೆ…
             ಬೇಗ ಬಂದುಬಿಡು ಏಳರ ನಡಿಗೆ
            ಸಿದ್ಧವಾಗುತ್ತೇವೆ ಜೋಡಿಸಿಕೊಂಡು ಉಡುಗೆ-ತೊಡುಗೆ
            ಸಂಭ್ರಮದಿ ಸಾಗುತ್ತೇವೆ ಸಮಾಜಮುಖಿ ಸಂಗಾತಿಗಳೆಡೆಗೆ…

-ಡಾ.ವಿಜಯಲಕ್ಷ್ಮಿ ಮನಾಪುರ, ಮೈಸೂರು.

ಎರಡನೇ ದಿನ ಬೆಳಿಗ್ಗೆ ಪ್ರಗತಿಪರ ರೈತ ವೆಂಕಪ್ಪ ಕಟ್ಟೀಮನಿ ಅವರ ದಾಳಿಂಬೆ ತೋಟಕ್ಕೆ ಭೇಟಿ. ನಂತರ ಚಿಕ್ಕಬೆಣಕಲ್‍ನ ಮೊರಿಯರ ಬೆಟ್ಟಕ್ಕೆ ಪಯಣ. ಅಲ್ಲಿ ಬೃಹತ್ ಶಿಲಾಯುಗದ ಮಾನವನ ಆದಿಮ ಚಿತ್ರಕಲೆಯನ್ನು ತೋರಿಸಿದ ಡಾ.ಮೋಹನ್ ಆ ಕಾಲದ ಬಂಡೆಚಿತ್ರಗಳು, ಗವಿಚಿತ್ರಗಳು, ಕುಟ್ಟುಚಿತ್ರಗಳು ಮತ್ತು ವರ್ಣಚಿತ್ರಗಳ ಮಾಹಿತಿ ನೀಡಿ, ಆ ಕಾಲದ ಬದುಕಿನ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಸಿದರು; ಆದಿ ಮಾನವನ ಸಮಾಧಿಗಳನ್ನು ಕುರಿತ ಮಾರ್ಮಿಕ ವಿಚಾರಗಳನ್ನು ಹೊರಹಾಕಿದರು.

ಸ್ವಲ್ಪವೂ ಆಯಾಸವಿಲ್ಲದೆ ಬೆಟ್ಟ ಹತ್ತಿಳಿದ ತಂಡ ಹೇಮಗುಡ್ಡಕ್ಕೆ ಬಂದು ಸ್ವಲ್ಪಹೊತ್ತು ಅಲ್ಲಿಯೇ ವಿಶ್ರಮಿಸಿತು. ಸಂಜೆ ಪಬ್ಲಿಕ್ ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜಮುಖಿ ಕನ್ನಡ ರಾಜ್ಯೋತ್ಸವ ಸಂಚಿಕೆಯನ್ನು ಗಂಗಾವತಿಯ ಖ್ಯಾತ ಮಕ್ಕಳ ತಜ್ಞ ಡಾ.ಅಮರ್ ಪಾಟೀಲ್ ಬಿಡುಗಡೆ ಮಾಡಿದರು; ಸುದ್ದಿ ಚಿಂತನ ಪತ್ರಿಕೆ ಸಂಪಾದಕ ಸಿ.ಎಚ್.ನಾರಿನಾಳ್, ಮಾಜಿ ಸಂಸದ ಶಿವರಾಮಗೌಡ, ಎಮ್.ಸರ್ವೇಶ, ಮಹಾಬಲೇಶ ಹಾಸಿನಾಳ, ಶಾವಿ ಮೈಲಾರಪ್ಪ, ಐಲಿ ನಾರಾಯಣಪ್ಪ, ಮಾಂತಗೊಂಡ ಮಹಾದೇವಪ್ಪ ಭಾಗವಹಿಸಿದ್ದರು. ನಂತರ ಗಂಗಾವತಿಯ ಶ್ರೀನೀಲಕಂಠೇಶ್ವರ ಸಾಂಸ್ಕøತಿಕ ಕಲಾ ವೇದಿಕೆಯಿಂದ ‘ಗಿರಿಜಾ ಕಲ್ಯಾಣ’ ಬಯಲಾಟ ಪ್ರದರ್ಶನ.

ದಿನಾಂಕ 10ರಂದು ಬೆಳಿಗ್ಗೆ ಕುಮ್ಮಟದುರ್ಗದ ಕುಮಾರರಾಮನ ಬೆಟ್ಟಕ್ಕೆ ಚಾರಣ. ತಂಡ ಕುಮಾರರಾಮನ ಕುಮ್ಮಟ (ಹಳೇ ಊರು), ಹಾಲಬಾವಿ, ಕುದುರೆಕಲ್ಲು, ಹೋಲಿಕೆರಾಮ ಸ್ಥಳಗಳಲ್ಲಿ ನಡೆಯುತ್ತಾ ಬೆಟ್ಟ ಹತ್ತಿತು. ಚರಿತ್ರೆಯಲ್ಲಿ ರಾಜನನ್ನು ದೇವರೆಂದು ಪೂಜಿಸುವ ಪರಿಪಾಟ ಇರುವ ಈ ಸ್ಥಳ ವಿಶೇಷವಾಗಿದೆ. ವಿಜಯನಗರ ಸಮ್ರಾಜ್ಯಕ್ಕೆ ಮೂಲದಲ್ಲಿ ಇಂತಹದೊಂದು ಬಹುದೊಡ್ಡ ಸಾಮ್ರಾಜ್ಯ ಈ ನೆಲದಲ್ಲಿ ಕಟ್ಟಲ್ಪಟ್ಟಿತ್ತೆಂಬುದಕ್ಕೆ ಬಹಳಷ್ಟು ಸಾಕ್ಷ್ಯಾಧಾರಗಳಿದ್ದರು ಈ ಜಾಗ ಹಾಳು ಬಿದ್ದಿರುವುದು ಖೇದಕರ. ನೆಲಸಮವಾದ ಕುಮಾರರಾಮನ ಅರಮನೆ, ನಿಧಿಗಳ್ಳರ ಹಾವಳಿಗೆ ತುತ್ತಾದ ಅಲ್ಲಿನ ಜೈನ ಬಸದಿಗಳು, ಸದಾಕಾಲ ನೀರಿನ ದಾಹ ತಣಿಸುವ ಬೆಟ್ಟದ ಮೇಲಿನ ಬಾವಿ, ಬೊಲ್ಲನ ಕೊಳ್ಳ ಇವೆಲ್ಲವನ್ನು ನೋಡಿ ನಡಿಗೆ ತಂಡ ಅಷ್ಟೆತ್ತರ ಏರಿದ ದಣಿವನ್ನೇ ಮರೆತಿತ್ತು. ತಂಡದ ಹಿರಿಯ ಸದಸ್ಯರಾದ 85 ವರ್ಷದ ಶಿವಶಂಕರ ಹಿರೇಮಠರು ಸ್ಮಾರಕದ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದರು.

ಸಮಾಜಮುಖಿ ಬಳಗಕ್ಕೆ ಅನುಕೂಲ ಆಗಲೆಂದು ಜಬ್ಬಲಗುಡ್ಡದ ಗ್ರಾಮಪಂಚಾಯತ್ ಸದಸ್ಯರಾದ ವೆಂಕಟೇಶ ಈಳಿಗೇರ್ ಅವರು ಮಣ್ಣು ಹಾಕಿಸಿ ರಸ್ತೆ ಸರಿಪಡಿಸಿದ್ದರು. ನಂತರ ಇಟಗಿಯ ಮಹಾದೇವ ದೇವಾಲಯದ ವೀಕ್ಷಣೆ. ಅಲ್ಲಿಯೇ ಸಭೆ ನಡೆದು ಸರ್ವಸದಸ್ಯರು ಆನೆಗೊಂದಿ ನಡಿಗೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೊಪ್ಪಳದಲ್ಲಿ ಹೋಳಿಗೆ ಊಟ ಮಾಡುವುದರೊಂದಿಗೆ ನಡಿಗೆ ಮುಕ್ತಾಯಗೊಂಡಿತು. ನಡಿಗೆಯ ಸ್ಥಳೀಯ ಸಂಚಾಲಕರಾದ ಡಾ.ಜಾಜಿ ದೇವೇಂದ್ರಪ್ಪ, ಡಾ.ರಾಜಶೇಖರ್ ನಾರಿನಾಳ್, ಸೋಮಶೇಖರಗೌಡ ಮತ್ತು ರಮೇಶ ಗಬ್ಬೂರ್ ಅವರು ಮೂರು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ವರದಿ: ರಮೇಶ್ ಗಬ್ಬೂರ
ಚಿತ್ರಗಳು: ದೀಕ್ಷಾ ಭಂಡಾರ್ಕರ್

 

‘ಮೊರಿಯರ ಗುಡ್ಡ’ಕ್ಕೆ ಬೇಕಿದೆ ರಕ್ಷಣೆ!

ಸಮಾಜಮುಖಿ ಬಳಗದ ಸದಸ್ಯರು ‘ಆನೆಗುಂದಿ ನಡಿಗೆ’ಯ ಭಾಗವಾಗಿ ಚಿಕ್ಕಬೆಣಕಲ್ಲು ಬಳಿಯ ಮೊರಿಯರ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನ ಬೃಹತ್ ಶಿಲಾಯುಗದ ಕುರುಹುಗಳನ್ನು ಅವಲೋಕಿಸಿದರು. ಈ ಕುರಿತ ಪರಿಸರ ಟಿವಿಯ ಮಂಜುನಾಥ ಗುಡ್ಲನೂರ ಅವರ ವರದಿ ವೀಕ್ಷಿಸಲು ಕೆಳಗಿನ ಕೋಡ್ ಸ್ಕ್ಯಾನ್ ಮಾಡಿ: 

 

One Response to " ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’

ರಮೇಶ್ ಗಬ್ಬೂರ

"

Leave a Reply

Your email address will not be published.