ಆನೆಸೊಂಡಿಲ ಜಲ ಬಂಗಾರಮ್ಮ ಕೆರೆಯ ಫಲ

ಹೂಳು ತುಂಬಿದಾಗ ಬರೀ ಹತ್ತು ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿದ್ದ ಬಂಗಾರಮ್ಮ ಕೆರೆಯಲ್ಲೀಗ 2 ಕೋಟಿ ಲೀಟರ್ ನೀರು ಸಂಗ್ರಹವಾಗಿದೆ. ಆನೆಸೊಂಡಿಲು ಕೆರೆಯಲ್ಲಿ 65 ಲಕ್ಷ ಲೀಟರ್ ನೀರು! ಕಾಡೆಮ್ಮೆ, ಜಿಂಕೆ, ಕಾನುಕುರಿ, ನರಿ, ಹಾವು, ಹೀಗೆ ಸಕಲ ಜೀವಿವೈವಿಧ್ಯಗಳಿಗೂ ನೀರಡಿಕೆ ಇಂಗಿಸುತ್ತಾ; ನೂರಾರು ಜನ ಮಕ್ಕಳಿಗೆ ಈಜು ಕಲಿಸುತ್ತಾ ಇರುವ ಬಂಗಾರಮ್ಮ ಕೆರೆಯೀಗ ಮತ್ತೆ ನಳನಳಿಸುತ್ತಿದೆ.

-ಅಖಿಲೇಶ್ ಚಿಪ್ಪಳಿ

ಭೂಮಿಯ ಮೇಲಿರುವ ಅಪಾರ ಜಲರಾಶಿಯಲ್ಲಿ ಸಿಹಿನೀರಿನ ಪ್ರಮಾಣ ಬರೀ 2.5% ಅಷ್ಟೇ. ಇದರಲ್ಲೂ ಸುಮಾರು 1.5% ಜಲರಾಶಿ ಹಿಮದ ರೂಪದಲ್ಲಿದೆ. ಇಡೀ 750 ಕೋಟಿ ಜನಸಂಖ್ಯೆಯ ಪೃಥ್ವಿಯಲ್ಲಿ ಅಗಣಿತ ಸಂಖ್ಯೆಯ ಇತರೆ ಜೀವಿವೈವಿಧ್ಯಗಳೂ ಇವೆ. ಇವೆಲ್ಲವಕ್ಕೂ ಲಭ್ಯವಿರುವುದು ಬರೀ 1% ನೀರಷ್ಟೇ. ಇದನ್ನೆ ಬಳಸಿ ಎಲ್ಲವೂ ಬದುಕಬೇಕು.

2017ರ ಮೇ ಮೂರನೇ ವಾರದಲ್ಲಿ ಸರೋಜ (ನಾಗೇಶ ಹೆಗಡೆಯವರ ತಂಗಿ) ಕರೆ ಮಾಡಿ, ಜಲಕ್ಷಾಮಕ್ಕೆ ಏನಾದರೂ ಮಾಡಿ, ನಿಮ್ಮದೇ ಊರಿನ ಒಂದು ಕೆರೆಯ ಹೂಳನ್ನಾದರೂ ಎತ್ತಿ ಎಂಬ ಸಲಹೆ ನೀಡಿದರು. ಆಗಲೇ ಶಿರಸಿ ಆಸುಪಾಸಿನಲ್ಲಿ ಕೆರೆ ಪುನಶ್ಚೇತನ ಕಾರ್ಯದಲ್ಲಿ ತೊಡಗಿಕೊಂಡ ಶಿವಾನಂದ ಕಳವೆ ಜೊತೆ ಮಾತುಕತೆ ನಡೆದು; ಅವರು ಸಾಗರಕ್ಕೆ ಬಂದು ತಮ್ಮ ಮಾತಿನ ಚಾಟಿ ಬೀಸಿದರು. ಬರೀ ಬಾಯಲ್ಲಿ ನೀರು ಸಂರಕ್ಷಣೆ ಮಾಡಲಾಗುವುದಿಲ್ಲ; ಕೃತಿಯಲ್ಲಿ ತೊಡಗಿಕೊಳ್ಳಿ. ಪವಿತ್ರ ಹೋಟೆಲ್ ಮಾಲೀಕರಾದ ನಾಗರಾಜ್ ಅವರು ಆತಿಥ್ಯವನ್ನೂ ನೀಡಿ; ಕೆರೆ ಕೆಲಸಕ್ಕೆಂದು 25000 ದೇಣಿಗೆಯನ್ನು ಘೋಷಣೆ ಮಾಡಿದರು.

ಸಾಗರ ತಾಲ್ಲೂಕು ಜೀವಜಲ ಕಾರ್ಯಪಡೆ ಎಂಬ ಸಮಿತಿ ಅಲ್ಲಿಯೇ ಜನ್ಮ ತಾಳಿತು. ಅದೇ ದಿನ ಹೂಳೆತ್ತುವ ಕೆರೆಯನ್ನು ಗುರುತಿಸುವ ಕೆಲಸವೂ ಆಯಿತು. ಮೇ 27 2017ರಂದು ಸಾಹಿತಿ ಡಾ.ನಾ.ಡಿಸೋಜ ಮತ್ತು ಆಗಿನ ಉಪವಿಭಾಗಾಧಿಕಾರಿಗಳು ಬಂಗಾರಮ್ಮ ಕೆರೆಗೆ ಬಂದು ಹೂಳೆತ್ತುವ ಕೆಲಸಕ್ಕೆ ಚಾಲನೆಯನ್ನೂ ನೀಡಿದರು. ಅನನುಭವಿ ಇಂಜಿನಿಯರೊಬ್ಬ ಐದು ಲಕ್ಷದಲ್ಲಿ ಹೂಳೆತ್ತುವ ಕೆಲಸ ಮುಗಿಸಬಹುದು ಎಂಬ ಅಂದಾಜು ಪಟ್ಟಿಯನ್ನು ನೀಡಿದ.

ಐದು ಲಕ್ಷ ಒಟ್ಟು ಮಾಡುವುದು ಅಷ್ಟೇನು ಕಷ್ಟವಾಗಲಿಕ್ಕಿಲ್ಲವೆಂದುಕೊಂಡು ಕೆಲಸ ಪ್ರಾರಂಭಿಸಿಯೇ ಬಿಟ್ಟೆವು. ಎರಡು ಹಿಟಾಚಿ; ಹತ್ತಾರು ಟಿಪ್ಪರ್ರುಗಳು ಕೆಲಸ ಶುರು ಮಾಡಿದವು. 600 ವರ್ಷದ ಹಳೆಯದಾದ ಬಂಗಾರಮ್ಮ ಕೆರೆಯಲ್ಲಿ ಸಂಚಿತವಾದ ಅಗಾಧ ಪ್ರಮಾಣದ ಹೂಳೆತ್ತುವುದು ಸುಲಭದ ಕೆಲಸವಲ್ಲವೆಂದು ಎರಡೇ ದಿನಕ್ಕೆ ಅರಿವಾಯಿತು. ಅನನುಭವಿ ಕೆಲಸಗಾರರು, ಬರೀ ಬಾಡಿಗೆಗಾಗಿಯೇ ಬಂದ ಟಿಪ್ಪರ್ ಮಾಲೀಕರು ಇವರನ್ನು ಸಂಭಾಳಿಸುವುದು ಬಾರೀ ಕಷ್ಟದ ಕೆಲಸ.

ನೋಡ ನೋಡುತ್ತಿದ್ದಂತೆ ಜೂನ್ ಪ್ರಾರಂಭವಾಯಿತು. ಮಳೆ ಬೀಳುವ ಮೊದಲೇ ಹೂಳೆತ್ತಿ ಸಾಗಿಸುವ ಧಾವಂತ! ದಿನೇ ದಿನೇ ಹೆಚ್ಚುತ್ತಿರುವ ಗುತ್ತಿಗೆದಾರರ ಬಿಲ್. ತುರ್ತಾಗಿ ರಚಿಸಿಕೊಂಡ ಕಾರ್ಯಪಡೆಯ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಹಣಕಾಸಿನ ವಿಷಯ ಬಂದಾಗ ನಾನಿದ್ದೀನಿ ಎಂದು ಧೈರ್ಯ ಹೇಳುವ ಒಬ್ಬ ಸದಸ್ಯನೂ ಇಲ್ಲ. ಅತ್ತ ಹಣ ಸಂಗ್ರಹಣೆಗೆ ಹೋದರೆ, ಇತ್ತ ಕೆರೆಯ ಕೆಲಸ ನೋಡಿಕೊಳ್ಳುವ ಜವಾಬ್ದಾರಿ ಯಾರದು? ಯಾವುದೇ ಪ್ಲಾನ್ ಇಲ್ಲದೇ ಕೈ ಹಾಕಿದ ಕೆಲಸ ಈಗ ಕುತ್ತಿಗೆಗೆ ಬಂದಿತ್ತು. ಆಗ ಆಪದ್ಭಾಂದವರಂತೆ ಜೊತೆಗೂಡಿದವರು ಸಾಗರದ ಉಪವಿಭಾಗಾಧಿಕಾರಿಯಾದ ನಾಗರಾಜ್ ಸಿಂಗ್ರೇರ್. ಮಳೆ ಪ್ರಾರಂಭವಾಗುವವರೆಗೂ ಕೆಲಸ ನಡೆಯಲಿ; ಹಣಕಾಸಿನ್ನು ಹೇಗೂ ಹೊಂದಿಸಬಹುದು ಎಂಬ ಭರವಸೆಯ ಮಾತುಗಳನ್ನಾಡಿದರು. ಇಷ್ಟು ಹೊತ್ತಿಗೆ ಮಳೆಗಾಲ ಪ್ರಾರಂಭವಾಗುವ ಸೂಚನೆ ಸಿಕ್ಕಿತು. ಒಂದು ಬಾರೀ ಮಳೆಯೂ ಬಂತು. 30%ನಷ್ಟು ಕೆಲಸ ಮುಗಿಸಿ ಸುಮಾರು 13.5 ಲಕ್ಷ ಬಿಲ್ ಮಾಡಿದ ಗುತ್ತಿಗೆದಾರ; ಕೆರೆಯಿಂದ ಮೇಲೆ ಹತ್ತಿದ.

ಕೆಲಸ ಹೇಗೂ ಮಾಡಲಿ; ಒಪ್ಪಿಕೊಂಡ ಮೇಲೆ ಅವರಿಗೆ ಪಾವತಿ ಮಾಡಲೇಬೇಕಲ್ಲ. ಇಷ್ಟೊತ್ತಿಗೆ ಮಳೆಗಾಲ ಪ್ರಾರಂಭವಾಗಿದೆ. ಹಣ ಸಂಗ್ರಹ ಮಾಡಲು ಹೋದರೆ, ಈ ಮಳೆಗಾಲದಲ್ಲಿ ಹೆಂಗೆ ಹೂಳೆತ್ತುವಿರಿ? ಎಂಬ ಸಕಾಲಿಕ ಪ್ರಶ್ನೆಗಳೇ ತೂರಿ ಬರುತ್ತಿದ್ದವು. ತೀರಾ ಗೊತ್ತಿದ್ದವರು. ಐದೋ ಹತ್ತೋ ಸಾವಿರ ಕೊಡುತ್ತಿದ್ದರು. ಸಂಜೆಯ ಹೊತ್ತಿಗೆ ಸಂಗ್ರಹವಾದ ಹಣವನ್ನು ಗುತ್ತಿಗೆದಾರನ ಕೈಮೇಲಿಟ್ಟು; ಮಾರನೇ ದಿನ ಮತ್ತೆ ಪ್ರಯತ್ನ ಮಾಡುತ್ತಿದ್ದೆವು. ಲಿಂಗದಹಳ್ಳಿಯ ಗ್ರಾಮಸ್ಥರು ಒಂದು ಸಭೆ ಸೇರಿ ಒಂದು ಲಕ್ಷ ರೂಪಾಯಿಗಳನ್ನು ಒಟ್ಟು ಮಾಡಿದರು. ಮಳೆಗಾಲ ಮುಗಿದರೂ ಬಾಕೀ ತೀರಲಿಲ್ಲ. ಗುತ್ತಿಗೆದಾರನಿಂದ ದಿನಕ್ಕೆ ಹತ್ತು ಬಾರಿ ಫೋನ್ ಕರೆ ಬರುತ್ತಿತ್ತು. ಒಂದಂತೂ ತೀರ್ಮಾನ ಮಾಡಿದ್ದೆ. ಹೂಳೆತ್ತುವ ಕೆಲಸಕ್ಕೆ ಕೈ ಹಾಕಿಯಾಗಿದೆ. ಇದನ್ನು ಸಮರ್ಥವಾಗಿ ಮುಗಿಸಲೇಬೇಕು. ಹೇಗೆ? ಏನು? ಎತ್ತ? ಯಾವುದೂ ಗೊತ್ತಿಲ್ಲ. ಅನಿಶ್ಚತತೆಯ ಕೆಂಡದ ಮೇಲೆ ಕುಳಿತವನ ಅಸಹಾಯಕ ಸ್ಥಿತಿ ಇದು. 2018 ಬಂತು! ಹಳೇ ಬಾಕಿಯೇ ತಿರುವಳಿ ಆಗದೇ ಇರುವುದರಿಂದ ಮತ್ತೆ ಹೂಳೆತ್ತುವ ಕೆಲಸ ಮುಂದುವರೆಸುವುದು ಸಾಧ್ಯವಿರಲಿಲ್ಲ.

ವೃತ್ತಿಯಲ್ಲಿ ಫೀಸಿಯೋಥೆರಪಿಷ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ನನಗೆ ವಿವಿಧ ರೀತಿಯ ಸೊಂಟ ನೋವು; ಕತ್ತು ನೋವಿಗೆ ಸಂಬಂಧಿಸಿದ ರೋಗಿಗಳು ಬರುತ್ತಾರೆ. ಅವತ್ತು ಡಿಸೆಂಬರ್ 7ನೇ ತಾರೀಖು 2018 ಇರಬೇಕು. ಗುತ್ತಿಗೆದಾರ ಗರಂ ಆಗಿಯೇ ಫೋನ್ ಮಾಡಿ ಹಣ ಕೊಡು ಎಂದು ದಬಾಯಿಸುತ್ತಿದ್ದ. ನಾನೋ ಅತ್ಯಂತ ಸಹನೆಯಿಂದ ಅವನ ಮಾತನ್ನು ಕೇಳಿ; ಅವನಿಗೆ ಸಮಾಧಾನವಾಗುವ ರೀತಿಯಲ್ಲಿ ಉತ್ತರ ಹೇಳುತ್ತಿದ್ದೆ. ನನ್ನ ಫೋನ್ ಸಂಭಾಷಣೆಯನ್ನು ಒಬ್ಬರು ಕೇಳಿಸಿಕೊಳ್ಳುತ್ತಿದ್ದರು. ಅವರ ರೋಗೋಪಚಾರ ಮುಗಿಯಿತು. ಅವರು ಸ್ವಾಭಾವಿಕವಾಗಿ ಕೆರೆಯ ಕುರಿತಾಗಿ ವಿಚಾರಿಸಿದರು. ಎಲ್ಲವನ್ನೂ ವಿವರವಾಗಿ ಹೇಳಿದೆ. ನಿಮ್ಮದು ಪ್ರೋಜೆಕ್ಟ್ ರಿಪೋರ್ಟ್ ಇದೆಯಾ ಎಂದು ಕೇಳಿದರು. ಕಂಪ್ಯೂಟರಿನಲ್ಲಿತ್ತು. ಐದು ನಿಮಿಷದಲ್ಲಿ ತೆಗೆದು ಅವರ ಕೈಗಿಟ್ಟೆ.

ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆ ವ್ಯಕ್ತಿ; ಒಂದು ಚಿಕ್ಕ ಭರವಸೆ ಮೂಡಿಸಿ ಹೋದರು. ಅದಾಗಿ ಇಪ್ಪತ್ತು ದಿನಗಳ ನಂತರ ಒಂದು ಪತ್ರ ಬಂತು; ಅದರಲ್ಲಿ ನಿಮ್ಮ ಕೆರೆ ಕೆಲಸಕ್ಕೆ ಐದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂಬ ಸಂತಸದ ವಿಷಯವಿತ್ತು. 2009ರಲ್ಲಿ ಒಂದು ಸಂಸ್ಥೆಯನ್ನು ಹುಟ್ಟು ಹಾಕಿಕೊಂಡು ಪರಿಸರ ಸಂಬಂಧಿ ಕೆಲಸಗಳನ್ನು ಮಾಡುತ್ತಿದ್ದೆ. ಅದರ ಹೆಸರು ಸ್ವಾನ್ & ಮ್ಯಾನ್ (SWಂಓ & ಒಚಿಟಿ: Sಚಿve-Wiಟಜ-ಂಣmosಠಿheಡಿe-ಓಚಿಣuಡಿe & ಒಚಿಟಿ); ಈ ಸಂಸ್ಥೆಯ ಲೆಕ್ಕ ಪತ್ರಗಳನ್ನು ಕಾಲ ಕಾಲಕ್ಕೆ ಆಡಿಟ್ ಮಾಡಿಸಿ ಇಟ್ಟಿದ್ದೆ. ಕರ್ಣಾಟಕ ಬ್ಯಾಂಕಿನವರು ನೋಂದಣಿಯಾದ ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡುತ್ತಾರೆ; ಸಾಗರ ತಾಲ್ಲೂಕು ಜೀವಜಲ ಕಾರ್ಯಪಡೆ ನೋಂದಣಿಯಾಗಿರಲಿಲ್ಲ ಅಥವಾ ನೋಂದಣಿ ಮಾಡಲು ಯಾರೂ ಮುಂದೆ ಕೂಡಾ ಬರಲಿಲ್ಲ.

ಕರ್ಣಾಟಕ ಬ್ಯಾಂಕ್ ನೀಡಿದ ಹಣವನ್ನು ಬಹಳ ಯೋಜಿತವಾಗಿ ವಿನಿಯೋಗಿಸಬೇಕಿತ್ತು. ಹಲವು ಪ್ರಯತ್ನಗಳ ಮೂಲಕ ಇಷ್ಟರಲ್ಲಿ ಹಳೇ ಗುತ್ತಿಗೆದಾರನ ಬಾಕಿಯನ್ನು ತೀರಿಸಲಾಗಿತ್ತು. 2019ರ ಮಾರ್ಚ್ ತಿಂಗಳಲ್ಲಿ ಒಬ್ಬ ನುರಿತ ಹಿಟಾಚಿ ಚಾಲಕ ಮತ್ತು ಟಿಪ್ಪರ್ ತಂಡವನ್ನು ಗೊತ್ತು ಮಾಡಿದೆವು. ಬಹಳ ನಿಯತ್ತಾಗಿ ಕೆಲಸ ಮಾಡಿದ ಆ ತಂಡ ಸುಮಾರು ಒಂದು ತಿಂಗಳಲ್ಲಿ ಇಡೀ ಬಂಗಾರಮ್ಮ ಕೆರೆಯ ಹೂಳನ್ನೆತ್ತಿ ಕಿಲೋಮೀಟರ್ ಆಚೆ ಸಾಗಿಸಿತು. ಕರ್ಣಾಟಕ ಬ್ಯಾಂಕ್ ನೀಡಿದ ಐದು ಲಕ್ಷ ಸಾಲದೇ ಹೋದರೂ, ವಾಟ್ಸಪ್ ಗುಂಪಿನಲ್ಲಿ ಬಂಗಾರಮ್ಮ ಕೆರೆಯ ಯಶೋಗಾಥೆಯನ್ನು ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಾಕುತ್ತಲೇ ಇದ್ದೆವು. ಜೊತೆಗೆ ಸಾಧ್ಯವಾದರೆ ಅಲ್ಪ ಹಣ ಸಹಾಯವನ್ನು ಮಾಡಿ ಎಂಬ ವಿನಂತಿಯೂ ಇರುತ್ತಿತ್ತು.

ಗುರುತು ಪರಿಚಯ ಇಲ್ಲದವರೂ, ದೂರದ ದೆಹಲಿಯ ಸ್ನೇಹಿತರು, ಸ್ನೇಹಿತರ ಸ್ನೇಹಿತರು ಹೀಗೆ ಒಂದು ಸಾಮಾಜಿಕ ಕೆಲಸಕ್ಕಾಗಿ ಮಿಡಿದರು. ಊರಿನಿಂದ ಹೊರಗೆ ಕೆಲಸ ಮಾಡುವ ಐಟಿ-ಬಿಟಿ ಹುಡುಗರೂ ಕೈ ಜೋಡಿಸಿದರು. ಹೀಗೆ ಯಶಸ್ಸಿನ ಮೊದಲ ಮೆಟ್ಟಿಲನ್ನು ಏರಿದೆವು. ಮೇ 5 2019ರಂದು ಬಂಗಾರಮ್ಮ ಕೆರೆಯ ಮೇಲೆ ಸಾರ್ಥಕ “ಕೆರೆ ಹಬ್ಬ” ಮಾಡಿದೆವು. ಕರ್ಣಾಟಕ ಬ್ಯಾಂಕಿನ ಪ್ರಧಾನ ಕಛೇರಿಯಿಂದ ಖುದ್ದು ಎಂ.ಡಿಯವರು ಆಗಮಿಸಿ; ಕೆರೆ ಕೆಲಸ ನೋಡಿ ಸಂತೋಷ ವ್ಯಕ್ತಪಡಿಸಿದರು. ಅವರು ನೀಡಿದ ಹಣ ಸಾರ್ಥಕವಾಗಿತ್ತು. ಇದೇ ನೆವದಲ್ಲಿ ಬಂಗಾರಮ್ಮ ಕೆರೆಯ ಮೇಲುಗಡೆ ಇದ್ದ, ಆನೆಸೊಂಡಿಲು ಕೆರೆಯನ್ನು ಅವರಿಗೆ ತೋರಿಸಿ, ನೀವು ಕೊಂಚ ಹಣ ನೀಡಿದರೆ, ಈ ಚಿಕ್ಕ ಕೆರೆಯ ಹೂಳನ್ನು ತೆಗೆಯುವ ಇರಾದೆ ಇದೆ ಎಂದು ವಿನಂತಿಸಿಕೊಂಡೆ.

ಮತ್ತೆ ಆನೆಸೊಂಡಿಲು ಗಾತ್ರದ ಜಲಮೂಲವಿರುವ ಆ ಕೆರೆಗೆ ಮತ್ತೆ ಎರಡು ಲಕ್ಷ ಕೊಡುವ ಭರವಸೆ ನೀಡಿದರು. 2020 ಮಾರ್ಚ್ ತಿಂಗಳಲ್ಲಿ ಇಡೀ ಪ್ರಪಂಚ ಲಾಕ್ ಡೌನ್ ಆಗಿ ಮನೆಯಲ್ಲಿ ಕುಳಿತಿತ್ತು. ನಮ್ಮ ತಂಡ ಆನೆಸೊಂಡಿಲು ಕೆರೆಯ ಹೂಳನ್ನು ಎತ್ತುತ್ತಿತ್ತು. ಬರೋಬ್ಬರಿ ಒಂದು ತಿಂಗಳಲ್ಲಿ ಕೆಲಸ ಪೂರೈಸಿದೆವು. ಹೂಳು ತುಂಬಿದಾಗ ಬರೀ ಹತ್ತು ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿದ್ದ ಬಂಗಾರಮ್ಮ ಕೆರೆಯಲ್ಲೀಗ 2 ಕೋಟಿ ಲೀಟರ್ ನೀರು ಸಂಗ್ರಹವಾಗಿದೆ. ಆನೆಸೊಂಡಿಲು ಕೆರೆಯಲ್ಲಿ 65 ಲಕ್ಷ ಲೀಟರ್ ನೀರು! ಕಾಡೆಮ್ಮೆ, ಜಿಂಕೆ, ಕಾನುಕುರಿ, ನರಿ, ಹಾವು, ಹೀಗೆ ಸಕಲ ಜೀವಿವೈವಿಧ್ಯಗಳಿಗೂ ನೀರಡಿಕೆ ಇಂಗಿಸುತ್ತಾ; ನೂರಾರು ಜನ ಮಕ್ಕಳಿಗೆ ಈಜು ಕಲಿಸುತ್ತಾ ಇರುವ ಬಂಗಾರಮ್ಮ ಕೆರೆಯೀಗ ಮತ್ತೆ ನಳನಳಿಸುತ್ತಿದೆ. ಊರಿನ ಎಲ್ಲರ ಬಾವಿಯಲ್ಲೂ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹರಿವು ನಿಲ್ಲಿಸುತ್ತಿದ್ದ ಹಳ್ಳಗಳಲ್ಲಿ ಈಗಲೂ ನೀರು ಹರಿಯುತ್ತಿದೆ.

Leave a Reply

Your email address will not be published.