ಆನೆ ಬಂದವು ‘ದಾರಿ’ಬಿಡಿ!

-ರಾಘವೇಂದ್ರ ಬೆಟ್ಟಕೊಪ್ಪ

ಆನೆ ನಡೆದದ್ದೇ ದಾರಿ’ ಎಂಬ ಗಾದೆ ಮಾತೊಂದಿದೆ. ಆನೆ ನಡೆದಲ್ಲಿ ದಾರಿ ಆಗುತ್ತದೆ ಎಂಬುದು ಅದರ ಅರ್ಥ. ಆದರೆ, ಇಲ್ಲಿ ಆನೆ ನಡೆದ ದಾರಿಯನ್ನು ಸಂರಕ್ಷಿಸಲು ಸ್ವತಃ ಅರಣ್ಯ ಇಲಾಖೆ ಜವಾಬ್ದಾರಿ ಹೊತ್ತಿದೆ. ಆನೆ ದಾರಿ ಉಳಿಸಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!

ಉತ್ತರ ಕನ್ನಡ ಜಿಲ್ಲೆಯ ಆನೆಗಳು ಇನ್ನೇನು ಭತ್ತದ ಫೈರು ಬರುವ ವೇಳೆಗೆ ಹಾಲುಭತ್ತ ತಿನ್ನಲು ಗದ್ದೆಗೆ ದಾಂಗುಡಿ ಇಡುತ್ತವೆ. ಕಾಡಿನಲ್ಲಿ ಆಹಾರದ ಕೊರತೆ ಆದಾಗ ತೋಟಗಳಿಗೂ ನುಗ್ಗಿ ಹಾನಿ ಮಾಡುತ್ತವೆ. ಕಳೆದ ವರ್ಷವಂತೂ ಶಿರಸಿ, ಸಿದ್ದಾಪುರ ಅರಣ್ಯ ವಲಯದಲ್ಲೂ ಪ್ರಥಮ ಬಾರಿಗೆ ದಾಂಧಲೆ ನಡೆಸಿದವು. ಮುಂಡಗೋಡ, ಯಲ್ಲಾಪುರ, ಜೋಯಿಡಾ, ಹಳಿಯಾಳ, ಬನವಾಸಿ ಭಾಗದಲ್ಲಿ ಆನೆ ದಾಳಿ, ಹಾವಳಿ ಇದ್ದೇ ಇದೆ.

ಆನೆ ಹಾವಳಿಗೆ ಕಾರಣ ಏನಿರಬಹುದು? ಕೇವಲ ಆಹಾರದ ಕೊರತೆಯಾ? ಅಥವಾ ಗಜಗಳಿಗೆ ಅಗತ್ಯವಾದ ಸ್ಥಳದಲ್ಲಿ ಮನುಷ್ಯ ಕೃಷಿ, ಮನೆ ಮಾಡಿಕೊಂಡಿದ್ದು ಕಾರಣವಾಯಿತಾ? ಇಂತಹ ಮಿಲಿಯನ್ ಡಾಲರ್ ಪ್ರಶ್ನೆಗಳ ಮಧ್ಯೆ ಸ್ವತಃ ಅರಣ್ಯ ಇಲಾಖೆ ಹೊಸ ಪ್ರಯೋಗ ಆರಂಭಿಸಿದೆ.

ಆನೆಗಳ ಹಿಂಡು ಸಂಚರಿಸುವ ಸ್ಥಳಕ್ಕೆ ‘ಕಾರಿಡಾರ್’ ಎನ್ನುತ್ತಾರೆ. ಈ ಕಾರಿಡಾರ್ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಈ ಬಾರಿಯ ವನ್ಯಜೀವಿ ಸಪ್ತಾಹದ ಭಾಗವಾಗಿ ಅಭಿಯಾನ ಹಮ್ಮಿಕೊಂಡಿದೆ.

೧೮ನೇ ಶತಮಾನದಲ್ಲಿ ಮಳೆಗಾಲದ ಮರುದಿನದ ಬಳಿಕ ಆನೆಗಳ ಹಿಂಡು ಮೈಸೂರು ಅರಣ್ಯ ಭಾಗದಿಂದ ಸೊರಬ, ಬನವಾಸಿ, ಮುಂಡಗೋಡ, ಯಲ್ಲಾಪುರ, ಭಗವತಿ ಮಾರ್ಗವಾಗಿ ದಾಂಡೇಲಿ ಅರಣ್ಯ ಭಾಗಕ್ಕೆ ಬರುತ್ತಿದ್ದವು. ದಾಂಡೇಲಿ ಕಾಡು ಅವುಗಳ ಪಾಲಿನ ರೆಸಾರ್ಟ್ ಆಗಿತ್ತು. ಪ್ರತೀ ವರ್ಷ ಇದೇ ದಾರಿಯಲ್ಲಿ ಬಂದು ಹೋಗಿ ಮಾಡುತ್ತಿದ್ದವು. ಆನೆಗಳ ಮೊಮ್ಮಕ್ಕಳಿಗೂ ಹಿರಿಯರು ನಡೆದು ಬಂದ ದಾರಿಯ ನೆನಪು ಇರುತ್ತದಂತೆ! 

ಆದರೆ, ಸ್ವಾತಂತ್ರ್ಯಾನಂತರ ಆನೆ ಕಾರಿಡಾರ್ ಕಟ್ಟಾಯಿತು. ನದಿಗಳಿಗೆ ಅಣೇಕಟ್ಟುಗಳು ಬಂದವು. ರಸ್ತೆಗಳು ಆದವು. ನಗರಗಳು ಬೆಳೆದವು. ಆನೆ ಓಡಾಡುತ್ತಿದ್ದ ಮಾರ್ಗದಲ್ಲಿ ಮನುಷ್ಯನ ಓಡಾಟ, ಮೋಟಾರು ಸದ್ದುಗಳು ಗುಂಯ್ ಗುಟ್ಟಿದವು. ಆನೆಯ ಇಷ್ಟದ ತಗ್ಗಿನ ಜಾಗಗಳು ಕೃಷಿ ಭೂಮಿಗಳಾದವು.

ಇದರ ಪರಿಣಾಮವಾಗಿ ಸಂಚಾರಿಸುವ ಆನೆಗಳನ್ನು ಜನ ಓಡಿಸಲು ಆರಂಭಿಸಿದರು. ಎಲ್ಲಿ ಓಡಿದರೂ, ಅಡ್ಡಾಡಿದರೂ ಜಾಗಟೆ, ಪಟಾಕಿ ಹೊಡೆದು ಬೆದರಿಸಿದರು. ಗಜಗಳು ನಡೆದಾಡುತ್ತಿದ್ದ ಸ್ವಚ್ಛಂದ ದಾರಿ ಕಟ್ಟಾಗಿ ಹೋಯಿತು. ಆನೆ ವಲಸೆಗಳ ಮಾರ್ಗದಲ್ಲಿ ಕಾಡಿನ ನಾಶ, ಅತಿಕ್ರಮಣ ಈ ಸಮಸ್ಯೆಗೆ ಸೇರಿತು.

ದಾಂಡೇಲಿ ಕಾಡಿನ ಆನೆಗಳ ದಾಳಿ ಹೆಚ್ಚಾದಾಗ, ಭತ್ತದ ಗದ್ದೆಗೆ ಬಂದು ನುಗ್ಗಿದಾಗ, ಅಡಿಕೆ ತೋಟ ಧ್ವಂಸ ಮಾಡಿದಾಗ ಯಾಕೆ ಹೀಗೆ ಮಾಡುತ್ತಿವೆ ಎಂಬ ಪ್ರಶ್ನೆ ಎದ್ದಿತು. ಆಗ ದಿ.ಪಿ.ಡಿ.ಸುದರ್ಶನ್ ಎರಡು ನೂರು ವರ್ಷ ಕಳೆದರೂ ಆನೆಗಳಿಗೆ ತಮ್ಮ ಕುಲ ಸಂಜಾತರ ಜೊತೆ ಸೇರುವ ಬಯಕೆ ಆಗಿರಬೇಕು ಎಂದು ಹೇಳಿದ್ದರು.

ಕುಲ ಸಂಜಾತರ ಜೊತೆ ಸೇರಿಸಲು ಈಗ ಕಾರಿಡಾರ್ ಉಳಿದಿಲ್ಲ. ಆ ಮಾರ್ಗದಲ್ಲಿ ಮರಳಿ ಬರಲು ಹೋದರೆ ಆನೆಗಳ ಮಾರ್ಗ ಕಟ್ಟಾಗಿದೆ. ಜನರೂ ಹೋಗಲು ಬಿಡುತ್ತಿಲ್ಲ. ಈಗಿರುವ ಆನೆಗಳ ಹಿಂಡನ್ನು ಹಿಡಿದು ಸಾಗಾಟ ಮಾಡುವುದೂ ಸುಲಭವಲ್ಲ. ಈ ಕಾರಣದಿಂದ ದಾಂಡೇಲಿ ಆನೆಗಳು ದೂರದ ಶಿರಸಿ ಭಾಗದ ಅರೆಬರೆ ಕಾಡಿಗೂ ಬಂದುಹೋಗುತ್ತಿವೆ. ಭತ್ತದ ಗದ್ದೆ, ತೋಟಕ್ಕೆ ಬಂದು ದಾಳಿ ಮಾಡುವ ಕಾಲವೂ ಹತ್ತಿರ ಆಗುತ್ತಿದೆ ಎಂಬ ಆತಂಕ ರೈತರಲ್ಲಿದೆ.

ಆನೆಗಳ ಸಂತಾನೋತ್ಪತ್ತಿ ಹಾಗೂ ಅವುಗಳ ಆರೋಗ್ಯ ವರ್ಧನೆಯ ಕಾರಣದಿಂದ ಅವುಗಳ ಕಾರಿಡಾರ್ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕಾರಿಡಾರ್ ಸಂರಕ್ಷಣೆಗೆ ಮುಂದಾಗಿದೆ. ಆನೆಗಳ ಸುಸ್ಥಿರ ಜೀವನ ಕಲ್ಪಿಸಲು ಆನೆ ಕಾರಿಡಾರ್ ಉಳಿಸುವುದು ಅನಿವಾರ್ಯ. ಮಾನವ, ಆನೆಗಳ ಸಂಘರ್ಷ ತಪ್ಪಿಸಲು ಇದೊಂದು ಸಹಜ ಮಾರ್ಗ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ. ‘ಈ ಕಾರಿಡಾರ್‌ನಲ್ಲಿ ಆನೆಗಳ ಸುರಕ್ಷತೆಗೂ ಕ್ರಮ ಆಗಬೇಕು, ಆನೆಗಳ ವಲಸೆ ದಾರಿಗೆ ಚಾರಿತ್ರಿಕ ಇತಿಹಾಸವಿದೆ’ ಎಂಬುದು ವನ್ಯಜೀವಿ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಅಭಿಪ್ರಾಯ.

ದೇಶಮಟ್ಟದಲ್ಲಿ ೧೩೮ ವಿವಿಧ ರಾಜ್ಯದೊಳಗಿನ, ೨೮ ಅಂತರ ರಾಜ್ಯದ, ೧೭ ಅಂತರಾಷ್ಟ್ರೀಯ ಆನೆ ಕಾರಿಡಾರ್ ಗುರುತಿಸಲಾಗಿದೆ. ಆನೆಗಳನ್ನು ಉಳಿಸಿ, ಮನುಷ್ಯ ಕೂಡ ಸಹಜೀವನ ನಡೆಸಲು ಆನೆ ಕಾರಿಡಾರ್ ಉಳಿಸುವದೊಂದೇ ಮಾರ್ಗ. ಅಂಥ ಕಾರ್ಯವನ್ನು ಹೇಗೆ ಆಗುಮಾಡುವುದು ಎಂಬ ಸವಾಲನ್ನು ಸ್ವೀಕರಿಸುವುದು ಅನಿವಾರ್ಯ.

Leave a Reply

Your email address will not be published.