ಆನ್‌ಲೈನ್ ಶಿಕ್ಷಣ: ವರವೋ? ಶಾಪವೋ?

ಕೇಳುಗರಿಗೆ ಉಪಕರಣಗಳು ಬೇಕು, ಹೇಳುವವರಿಗೆ ಪ್ರೋತ್ಸಾಹವೂ ಬೇಕು!

ತಂತ್ರಜ್ಞಾನವು ಜಗತ್ತನ್ನು ಒಂದು ಪುಟ್ಟ ಗ್ರಾಮವನ್ನಾಗಿಸುತ್ತಿದೆ. ಇದರಿಂದ ಜಗತ್ತು ಬೆರಳಿನ ತುದಿಯಲ್ಲಿದೆ. ಸಂಶೋಧನಾತ್ಮಕವಾಗಿ ಹೇಳುವುದಾದರೆ ಬಹಳ ಹಿಂದಿನಿಂದ ಸಂಪಾದಿಸಿದ ಜ್ಞಾನಕ್ಕೆ ಹೋಲಿಸಿದರೆ 1700ರಲ್ಲಿ ಜ್ಞಾನ ದ್ವಿಗುಣವಾಯಿತು. 1900ರಲ್ಲಿ ಹಿಂದೆ ಇರುವ ಜ್ಞಾನಕ್ಕೆ ಹೋಲಿಕೆ ಮಾಡಿದರೆ ಮತ್ತೆ ದ್ವಿಗುಣವಾಯಿತು. ಹೊಸ ಅನ್ವೇಷಣೆಯ ಮೂಲಕ 1950ರಲ್ಲಿ ಮತ್ತೆ ಹಿಂದಿನ ಎಲ್ಲಾ ಜ್ಞಾನ ದ್ವಿಗುಣವಾಯಿತು. ಇದು ಮುಂದುವರೆಯುತ್ತಾ ಮುಂದೆ 20 ಅಥವಾ 15 ವರ್ಷಗಳಿಗೊಮ್ಮೆ ಹಿಂದಿನ ಜ್ಞಾನ ದ್ವಿಗುಣಗೊಳ್ಳುತ್ತಾ ಬಂದಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನಾವು ನಾಲ್ಕು ತಲೆಮಾರುಗಳನ್ನು ಪಟ್ಟಿ ಮಾಡಬಹುದು. 

  1. 1966-76ರವರೆಗಿನ X -ತಲೆಮಾರು (Generation-X)
  2. 1977-93 ರವರೆಗಿನ Y -ತಲೆಮಾರು (Generation-Y)
  3. 1994-2010 ರವರೆಗಿನ Z-ತಲೆಮಾರು (ಉeಟಿeಡಿಚಿಣioಟಿ-Z)
  4. 2010 ರಿಂದ ಮೇಲ್ಪಟ್ಟ ಆಲ್ಫಾ-ತಲೆಮಾರು (Generation-Alfa)

ಹಂತ ಹಂತವಾಗಿ ತಂತ್ರಜ್ಞಾನ ಆಧಾರಿತ ಜ್ಞಾನ ಹೆಚ್ಚುತ್ತಾ ಬಂದಿದೆ. ಆಲ್ಫಾ ತಲೆಮಾರಿನ ಮಕ್ಕಳನ್ನು ತಂತ್ರಜ್ಞಾನಾಧಾರಿತ ಮಕ್ಕಳು ಎಂದು ಕರೆಯಲಾಗುವುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ತ್ವರಿತಗತಿಯಲ್ಲಿ ಮುಂದುವರೆಯುತ್ತಿದ್ದು ಜೆನ್ ಆಲ್ಫಾದ ಮಗು ಶಾಲೆಗೆ ಬರುವುದಕ್ಕೆ ಮುಂಚಿತವಾಗಿಯೇ ಮನೆಯಲ್ಲಿ ಮೊಬೈಲ್‌ಗಳನ್ನು ಆಟದ ಸಾಮಾಗ್ರಿಯಾಗಿ, ಮನೋರಂಜನ ಉಪಕರಣವಾಗಿ ಬಳಸುತ್ತ ಕಲಿಯುತ್ತಿರುತ್ತಾರೆ. ಆದ್ದರಿಂದ ಇವರಿಗೆ ಆನ್‌ಲೈನ್ ಶಿಕ್ಷಣ ವರವಾಗಿದೆ. ಸ್ವಲ್ಪಮಟ್ಟಿಗೆ ಸ್ಮಾರ್ಟ್ಫೋನ್ ಬಳಸುವ ಜ್ಞಾನವಿರುವ ಜೆನ್-ವೈ ಮತ್ತು ಜೆನ್-ಝಡ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ದಕ್ಕಬಹುದು. ಆದರೆ ಎಲ್ಲಾ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ಹೇಳಲಾಗುವುದಿಲ್ಲ.

ಮುಂದುವರೆದ ರಾಷ್ಟ್ರಗಳು ಮೊಬೈಲ್, ಟ್ಯಾಬ್, ಲ್ಯಾಪ್, ಕಂಪ್ಯೂಟರ್‌ಗಳಿಗೆ ಅಂತರ್ಜಾಲ ಸೌಕರ್ಯಗಳನ್ನು ಬಳಸಿಕೊಂಡು ಎಂ-ಕಲಿಕೆ (ಮೊಬೈಕ್ ಕಲಿಕೆ) ಇ-ಕಲಿಕೆ (ಎಲೆಕ್ಟ್ರಾನಿಕ್ ಕಲಿಕೆ) ಯು-ಕಲಿಕೆ, ಇಮೇಲ್, ಅಂತರ್ಜಾಲ ವೇದಿಕೆ, ವಿಕಿಪೀಡಿಯಾ, ಬ್ಲಾಗ್, ದೂರ ಸಮಲೋಚನೆಗಳು, ಇ-ಗ್ರಂಥಾಲಯ ಇತ್ಯಾದಿಗಳನ್ನು ಶಿಕ್ಷಣಕ್ಕೆ ಅನ್ವಯಿಸಿಕೊಂಡು ಬೋಧನೆ ಮತ್ತು ಕಲಿಕೆಯನ್ನು ಪರಿಣಾಮಕಾರಿಗೊಳಿಸುತ್ತಾ ಸಾಗುತ್ತಿವೆ. ಆದರೆ ನಮ್ಮ ರಾಷ್ಟ್ರ/ರಾಜ್ಯದಲ್ಲಿ (ಕೆಲವು ರಾಜ್ಯಗಳನ್ನು ಬಿಟ್ಟು) ಈ ರೀತಿಯ ಕಲಿಕೆ ತುಂಬಾ ಕಡಿಮೆ.

ನಮ್ಮಲ್ಲಿ ಈ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ವೃತ್ತಿಪರ ಕೋರ್ಸ್ಗಳಲ್ಲಿ ನೋಡುತ್ತೇವೆ. ಆದರೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿಯು ಶಿಕ್ಷಣಕ್ಕೆ ಸಂಬAಧಿಸಿದAತೆ ವಿದ್ಯಾರ್ಥಿಗಳಿಗೆ ಟ್ಯಾಬ್, ಲ್ಯಾಪ್, ಕಂಪ್ಯೂಟರ್‌ಗಳನ್ನು ನೀಡಿಲ್ಲ. ಈ ಸೌಲಭ್ಯ ಇತ್ತೀಚಿನ ಶಾಲೆಗಳಲ್ಲಿ ಇದ್ದರೂ ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳವ ಶಾಲೆಗಳ ಸಂಖ್ಯೆ ಕಡಿಮೆ. ಒಂದು ಸಂಶೋಧನೆಯ ಪ್ರಕಾರ ನಮ್ಮ ದೇಶದಲ್ಲಿ 44% ಸ್ಮಾರ್ಟ್ಫೋನ್‌ಗಳನ್ನು ಉಪಯೋಗಿಸಿದರೆ, 44% ಕೀಪ್ಯಾಡ್ ಮೊಬೈಲ್‌ಗಳನ್ನು ಉಪಯೋಗಿಸುತ್ತಾರೆ. ಉಳಿದ 12% ಮೊಬೈಲ್ ಬಳಕೆಯೇ ಮಾಡದಿರುವ ಜನರನ್ನ ನೋಡುತ್ತೇವೆ. ಇನ್ನು ಸ್ಮಾರ್ಟ್ಫೋನ್ ಇದ್ದು ಅದಕ್ಕೆ ನೆಟ್‌ಪ್ಯಾಕ್ ಹಾಕಿಸದಿರುವುದು 4-6% ಕಂಡುಬರುತ್ತದೆ.

ಹಾಗಾದರೆ 60-62%ರಷ್ಟು ಅಂದರೆ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದ ವಂಚಿತರಾಗುತ್ತಾರೆ (ಸರ್ಕಾರಿ ಶಾಲೆಯ ಮಕ್ಕಳೆ ಹೆಚ್ಚು). ಆದ್ದರಿಂದ ಇದು ಶಾಪವಾಗಿದೆ. ಇನ್ನುಳಿದ 40% ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಕೇಳುತ್ತಾರೆ ಎಂದರೂ ಎರಡು ತರಗತಿಗಳನ್ನು ಕೇಳಿದರೆ ಸಾಕು ಇರುವ ಒಂದುವರೆ ಜಿಬಿ ನೆಟ್‌ಪ್ಯಾಕ್ ಖಾಲಿಯಾಗುತ್ತದೆ ಮೂರನೇ ತರಗತಿಗೆ ಕೇಳಲು ನೆಟ್‌ಪ್ಯಾಕ್ ಉಳಿದಿರುವುದಿಲ್ಲ.

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸೂಕ್ತ ಉಪಕರಣಗಳ ಸೌಲಭ್ಯವನ್ನಾದರೂ ಕೊಡಿಸಬೇಕಲ್ಲ! ಅದೂ ಇಲ್ಲ. ಸರ್ಕಾರಿ ಶಾಲೆಗಳ ಶಿಕ್ಷಕರು ಇದ್ದರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ದೊಡ್ಡ ಮಟ್ಟದ ಖಾಸಗಿ ಶಾಲೆಯ ಶಿಕ್ಷಕರಿಗೆ ಕಲಿಸಲು ಪ್ರೋತ್ಸಾಹ ದೊರೆಯುತ್ತಿರುತ್ತದೆ. ಆದರೆ ಸಾಮಾನ್ಯ ಖಾಸಗಿ ಶಾಲಾ-ಕಾಲೇಜ್‌ಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಸರಿಯಾದ ಸಂಬಳವಿಲ್ಲದೆ ಕಂಗಾಲಾಗಿರುತ್ತಾರೆ. ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿ ಪರಿಣಮಿಸಿದೆ ಇನ್ನು ಆನ್‌ಲೈನ್ ತರಗತಿ ಮಾಡಲು ನೆಟ್‌ಪ್ಯಾಕ್ ಎಲ್ಲಿಂದ ಬರಬೇಕು?

ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮದು ಮುಂದುವರೆಯುತ್ತಿರುವ ರಾಷ್ಟ್ರ. ನಮ್ಮ ದೇಶದಲ್ಲಿ (ಸರ್ಕಾರ) ಶಿಕ್ಷಣಕ್ಕೋಸ್ಕರ ಖರ್ಚು ಮಾಡುವುದು ತುಂಬಾ ಕಡಿಮೆ. ನಮ್ಮ ಎಲ್ಲಾ ಶಾಲಾ-ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್, ಲ್ಯಾಪ್, ಪಿಸಿಗಳನ್ನು ನೀಡುವುದರ ಮೂಲಕ ಎಂ-ಕಲಿಕೆ, ಇ-ಕಲಿಕೆ, ಯು-ಕಲಿಕೆ, ಇಮೇಲ್, ಅಂತರ್ಜಾಲ ವೇದಿಕೆ, ವಿಕಿಪೀಡಿಯಾ, ಬ್ಲಾಗ್, ದೂರ ಸಮಲೋಚನೆಗಳು, ಅಂತರ್ ಕ್ರಿಯಾತ್ಮಕ ಬಿಳಿಹಲಗೆ, ಇ-ಗ್ರಂಥಾಲಯ ಮುಂತಾದವುಗಳನ್ನು ಶಿಕ್ಷಣಕ್ಕೆ ಅನ್ವಯಿಸಿಕೊಂಡು ಬೋಧನೆ ಮತ್ತು ಕಲಿಕೆಯನ್ನು ಈ ಹಿಂದೆ ಮಾಡಿದ್ದರೆ ಇಂದು ಆನ್‌ಲೈನ್ ತರಗತಿಗಳು ಸುಲಭವಾಗಿ ಯಶಸ್ಸು ಕಾಣಬಹುದಿತ್ತು.

ಇದೆಲ್ಲವನ್ನು ನೋಡಿದರೆ 65% ರಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದ ವಂಚಿತರಾಗುತ್ತಾರೆ. ಇದಕ್ಕೆ ಪರಿಹಾರ ಒಂದೇ; ವಿದ್ಯಾರ್ಥಿಗಳಿಗೆ ಉಪಕರಣಗಳ ಸೌಲಭ್ಯ ನೀಡುವುದು. ಶಿಕ್ಷಕರಿಗೆ ಆರ್ಥಿಕ ಸಹಾಯ ನೀಡಿ ಕಲಿಸುವಂತೆ ಪೋತ್ಸಾಹಿಸುವುದು. ಇಲ್ಲವೇ ಶಿಕ್ಷಣಕ್ಕೆಂದೆ ಟಿವಿಯ (70% ಜನ ಈ ಸೌಲಭ್ಯ ಹೊಂದಿರುತ್ತಾರೆ) 2 ಚಾನೆಲ್‌ಗಳನ್ನು ಪ್ರಸಾರ ಮಾಡುವುದು. ಇದರ ಮೂಲಕ ಸ್ಪಲ್ಪ ಮಟ್ಟಿಗಾದರೂ ಸುಧಾರಿಸಬಹುದು.

*ಲೇಖಕರು ಕೊಟ್ಟೂರಿನ ತುಂಗಭದ್ರಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.