ಆನ್ ಲೈನ್ ಯುಗದಲ್ಲಿ ಪೋಷಕರ ಹೊಣೆ

ಶಿಕ್ಷಣದ ನೆಪದಲ್ಲಿ ಮಕ್ಕಳ ಕೈಗೆ ಗ್ಯಾಜೆಟ್ ಕೊಡುವ ಮೊದಲು ಅದರ ಬಳಕೆ ಬಗ್ಗೆ ತಿಳಿಹೇಳುವುದು, ನಿಯಂತ್ರಿಸುವುದು ಇಂದಿನ ಪೋಷಕರ ಎದುರಿರುವ ಬಹುದೊಡ್ಡ ಸವಾಲು.

–  ಬಾಲಚಂದ್ರ ಬಿ.ಎನ್.

ಸಾಮಾಜಿಕ ಸಂಪರ್ಕ, ಮನರಂಜನೆ, ಶಿಕ್ಷಣ, ಮಾರುಕಟ್ಟೆ ಇವು ಗಾಜೆಟ್‌ಗಳಿಂದ ಇರುವ ನಾಲ್ಕು ಬಹುಮುಖ್ಯ ಉಪಯೋಗಗಳು. ಈ ಉಪಯೋಗಗಳನ್ನು ಯಾವ ವಯೋಮಾನದವರು ಎಷ್ಟು ಬಳಸಬೇಕೆಂದು ಮಿತಿ ಹೇರಬೇಕಿರುವುದೇ ಇಂದಿನ ಬಹುಮುಖ್ಯ ಸಮಸ್ಯೆಗಳಲ್ಲೊಂದು. ಆದರೆ ಸಣ್ಣ ಮಕ್ಕಳಿಗೆ ಶಿಕ್ಷಣದ ನೆಪದಲ್ಲಿ ಸ್ಮಾರ್ಟ್ ಫೋನ್‌ಗಳನ್ನೋ ಅಥವಾ ಟ್ಯಾಬ್, ಕಂಪ್ಯೂಟರ್‌ಗಳನ್ನೋ ಕೈಗೆ ಕೊಡುವ ಮೊದಲು ಅದರ ಅಗತ್ಯವನ್ನು ಒತ್ತಿ ಹೇಳಬೇಕಾಗಿರುವುದು ಇಂದಿನ ಪೋಷಕರ ಮೇಲಿರುವ ಬಹುದೊಡ್ಡ ಹೊಣೆಗಾರಿಕೆ.

ಬರೀ ಇಷ್ಟರಿಂದಲೇ ತಮ್ಮ ಹೊಣೆಗಾರಿಕೆ ಮುಗಿಯಿತೆಂದು ಭಾವಿಸುವುದು ತಪ್ಪಾದರೂ ಶೇ. 70-80ರಷ್ಟು ಸಮಸ್ಯೆಗಳನ್ನು ಮೂಲದಲ್ಲೇ ಪರಿಹರಿಸಬಹುದೆಂಬುದೂ ಸತ್ಯ. ಮಿಕ್ಕಂತೆ ಶಾಲೆಗಳಲ್ಲೂ ಮೊಬೈಲ್ ಬಳಕೆಯ ಕುರಿತು ಒಂದು ಶಿಷ್ಟಾಚಾರವನ್ನು ರೂಢಿಸಿಬೇಕೆಂಬುದು ಶಿಕ್ಷಣ ತಜ್ಞರ ಮತ್ತು ಮನೋವಿಜ್ಞಾನಿಗಳ ಅಭಿಪ್ರಾಯ.

ಮೊದಲನೆಯದಾಗಿ ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಗಾ ಇಡುವುದು. ಎರಡನೆಯದು ಅದರ ಸಾಧಕ ಬಾಧಕಗಳನ್ನು ವಿವರಿಸುವುದು, ಮೂರನೆಯದು ತಿಳಿವಳಿಕೆ ಹೇಳುವುದಕ್ಕಿಂತ ಪೋಷಕರೇ ಮಕ್ಕಳಿಗೆ ಮಾದರಿಯಾಗುವುದು ಸದ್ಯದ ಪರಿಸ್ಥಿತಿಯಲ್ಲಿರುವ ಪರಿಹಾರೋಪಾಯಗಳು. ಇವುಗಳ ಹೊರತಾಗಿ ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ನಿರಾಕರಿಸುವುದಾಗಲೀ, ನಿಷೇಧಿಸುವುದಾಗಲೀ ಸಾಧ್ಯವಿಲ್ಲ.

ಮಗುವಿಗೆ ಬಾಹ್ಯ ಒತ್ತಡದಿಂದಾಗಲೀ, ಘರ್ಷಣೆಯಿಂದಾಗಲೀ ಅಥವಾ ಭಿನ್ನಾಭಿಪ್ರಾಯಗಳಿಂದಾಗಲೀ ಸಮಸ್ಯೆಗಳುಂಟಾಗುವ ಸನ್ನಿವೇಶ ಎದುರಾದಲ್ಲಿ ಆ ಸನ್ನಿವೇಶವನ್ನೇ ಸಮಸ್ಯೆ ಎಂದು ಭಾವಿಸುವುದು ಸಾಮಾನ್ಯವಾಗಿ ಪೋಷಕರು ಮಾಡುವ ಮೊದಲ ತಪ್ಪು. ಭಾವನೆಗಳನ್ನು ನಿಯಂತ್ರಿಸುವುದು, ಸನ್ನಿವೇಶವನ್ನು ಎದುರಿಸುವುದು, ಚರ್ಚೆಯ ಮೂಲಕ ಒಮ್ಮತಕ್ಕೆ ಬರುವುದು ಪೋಷಕರು ಮಕ್ಕಳಿಗೆ ಕಲಿಸಲೇಬೇಕಾಗಿರುವ ಪಾಠಗಳಾಗಿದೆ. ಆದರೆ ಒತ್ತಡ ಮತ್ತು ಸಮಯದ ಕೊರತೆಯಿಂದಾಗಿ ಪೋಷಕರಿಗೆ ಮಕ್ಕಳೊಡನೆ ಆತ್ಮೀಯತೆಯ ಭಾವ ಕಡಿಮೆಯಾಗುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಹೀಗಾಗಿ ಯಾವುದೇ ಭಾವನಾತ್ಮಕ ಸಮಸ್ಯೆಗಳು ಎದುರಾದಲ್ಲಿ ಮಕ್ಕಳು ಏಕಾಂಗಿಯಾಗಿ ಅದನ್ನು ಎದುರಿಸುವುದೇ ಕಷ್ಟವಾಗುತ್ತಿದೆ.

ಈ ಸಂದರ್ಭದಲ್ಲಿ ಪೋಷಕರ ಶಿಕ್ಷಣ ಅಷ್ಟೇನೂ ಗಣನೀಯ ಪಾತ್ರ ವಹಿಸುವುದಿಲ್ಲ. ಆದರೆ ಸಂಹವನ, ಬಾಂಧವ್ಯ ಎಂಬುದು ಬಹುಮುಖ್ಯ ಪಾತ್ರ ವಹಿಸುತ್ತದೆ. ಹೆಣ್ಣು ಮಕ್ಕಳೊಡನೆ ತಂದೆ ಮತ್ತು ಗಂಡು ಮಕ್ಕಳೊಡನೆ ತಾಯಿ ನಿರಂತಕವಾಗಿ ಸಂಹವನ ನಡೆಸುವುದು ಅತ್ಯಗತ್ಯ. ಮಗುವಿಗೆ ಉಸಿರುಗಟ್ಟಿಸದಂತಹ ಒಂದು ಅನುಕೂಲಕರ ಚೌಕಟ್ಟು ನಿರ್ಮಿಸುವುದು, ನಿರಂತರವಾಗಿ ಮಗುವಿನ ಬೆಳವಣಿಗೆಯ ಬಗ್ಗೆ ನಿಗಾ ವಹಿಸುವುದು, ಮಕ್ಕಳ ಆಶೋತ್ತರಗಳ ಬಗ್ಗೆ ಚರ್ಚಿಸುವುದು, ಅವರ ಸ್ನೇಹಿತರ ಬಳಗದ ಬಗ್ಗೆ ಮಾಹಿತಿ ಪಡೆಯುವುದು ಮುಂತಾದವುಗಳನ್ನು ಎಲ್ಲ ಪೋಷಕರೂ ಮಾಡಬಹುದು.

ಗೊತ್ತಿಲ್ಲದೇ ತಪ್ಪು ಮಾಡಿದಾಗ ಮಕ್ಕಳು ಅದನ್ನು ತಿದ್ದಿಕೊಳ್ಳುವ ಬಗೆ, ತಿಳಿದೂ ತಪ್ಪುಗಳನ್ನು ಮಾಡಿದಾಗ ಅದರಿಂದ ಮುಂದೇ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತಿಳಿವಳಿಕೆ ನೀಡುವುದು ಪೋಷಕರ ಆದ್ಯ ಕರ್ತವ್ಯ. ಸಣ್ಣಪುಟ್ಟ ಸುಳ್ಳುಗಳನ್ನು ಹೇಳುವುದು, ಕದಿಯುವುದು, ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು ಈಗಿನ ಮಕ್ಕಳಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಲಕ್ಷಣಗಳು. ಹಾಗೆಂದು ಇವುಗಳನ್ನು ಅಪರಾಧಗಳೆಂದು ಪರಿಗಣಿಸುವ ಅವಶ್ಯಕತೆಯಿಲ್ಲ.

ಕೆಲವೊಮ್ಮೆ ಪೋಷಕರು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡರೂ ಮಕ್ಕಳೂ ಹಾದಿ ತಪ್ಪುವ ಸಾಧ್ಯತೆಗಳಿಲ್ಲದಿಲ್ಲ. ಮಕ್ಕಳ ಒತ್ತಡ ಮತ್ತು ಭಾವನಾತ್ಮಕ ಸಮಸ್ಯೆಗಳು ಅವರ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳ ನಿದ್ರೆ, ಊಟತಿಂಡಿ ಹಾಗೂ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ಮಕ್ಕಳು ಸಮಸ್ಯೆಯಲ್ಲಿದ್ದಾರೆ ಎಂದು ಸುಲಭವಾಗಿ ಭಾವಿಸಬಹುದು. ಇದೇ ರೀತಿ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ, ನಿಯಮಿತ ವಿಶ್ರಾಂತಿ, ಅನುಕೂಲಕರ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಭಾವನಾತ್ಮಕ ಸಂಘರ್ಷಗಳಿಗೆ ಈಡಾಗುವ ಸಂದರ್ಭ ಕಡಿಮೆ.

ತೀರಾ ಮಿತಿ ಮೀರಿದ ಸಂದರ್ಭಗಳಲ್ಲಿ ಮಕ್ಕಳು ಪೋಷಕರೊಡನೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಹಿಂಜರಿಯುವಂತಹ ಸಂದರ್ಭ ಎದುರಾದಲ್ಲಿ ಆಪ್ತ ಸಮಾಲೋಚಕರ ಸಂದರ್ಶನ ಪಡೆಯುವುದು ಅವಶ್ಯಕ. ಆಗಾಗ ಮಕ್ಕಳ ಮೇಲೆ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಹೊರಿಸುವುದು, ಸ್ವತಂತ್ರö ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರೇಪಿಸುವುದು, ಒತ್ತಡಗಳನ್ನು ನಿಭಾಯಿಸುವುದನ್ನು ಕಲಿಸುವುದರಿಂದ ಮಕ್ಕಳು ದೈಹಿಕವಾಗಿ ಬೌದ್ಧಿಕವಾಗಿ ಬಲಿಷ್ಠವಾಗಲು ಸಹಕಾರಿ.

ಬಾಂಧವ್ಯ ಏರ್ಪಡಿಸಿಕೊಳ್ಳುವುದು, ಮಕ್ಕಳಿಗೆ ಚೌಕಟ್ಟನ್ನು ನಿರ್ಮಿಸುವುದು ಹಾಗೂ ಸೂಚನೆಗಳನ್ನು ನೀಡುವುದು, ಸ್ವಾತಂತ್ರ್ಯ ನೀಡುವುದು… ಹೀಗೆ ಕೆಲವು ನಿಯಮಗಳ ಮೇಲೆ ಪೋಷಕತ್ವ ವಿಭಾಗಿಸಬಹುದು.

ಹಳೆಯ ಕಾಲದಲ್ಲಿದ್ದ ಸಂಪೂರ್ಣ ಅಧಿಕಾರಿ ಪೋಷಕತ್ವ (ಅಥಾರಿಟೇರಿಯನ್) ವಾತಾವರಣದಲ್ಲಿ ಬೆಳೆಯುವ ಮಕ್ಕಳು ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಭಯ ಸ್ವಭಾವ ಹೆಚ್ಚಾಗಿರುತ್ತದೆ. ಪ್ರಾಬಲ್ಯಕಾರಿ (ಡಾಮಿನೆಂಟ್) ಪೋಷಕತ್ವದಲ್ಲಿ ತಾಯ್ತಂದೆಯರ ಮಾತೇ ಅಂತಿಮ. ಹೀಗೆ ಬೆಳೆಯುವ ಮಕ್ಕಳು ಒತ್ತಡಕ್ಕೆ ಒಳಗಾಗುವ ಸಂಭವ ಹೆಚ್ಚು.  ಅನುಮೋದಕ ಪೋಷಕತ್ವ (ಪರ್ಮಿಸಿವ್)ದಲ್ಲಿ ನಿಯಮಗಳಿಲ್ಲ, ಪ್ರೀತಿಗೂ ಕೊರತೆಯಿಲ್ಲ. ಈಗಿನ ಕಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪೋಷಕತ್ವದಿಂದ ಮಕ್ಕಳು ಹಠಮಾರಿ ಮಕ್ಕಳಾಗಿ ಬೆಳೆಯುವ ಸಂಭವವೇ ಹೆಚ್ಚು. ನಿರ್ಲಕ್ಷ್ಯ ಪೋಷಕತ್ವ (ನೆಗ್ಲೆಟ್)ದಲ್ಲಿ ಹೇಳುವವರಾಗಲೀ ಕೇಳುವವರಾಗಲೀ ಇರುವುದಿಲ್ಲ. ಇಂತಹ ಮಕ್ಕಳು ಹಾದಿ ತಪ್ಪುವ ಸಂಭವನೀಯತೆ ಅತಿ ಹೆಚ್ಚು.

 

 

 

Leave a Reply

Your email address will not be published.