ಆಯುರ್ವೇದದ ವಾಣಿಜ್ಯೀಕರಣ

ಎಲ್ಲರ ಕೈಗೆಟುಕುವಂತಿದ್ದ ಆಯುರ್ವೇದ ಇಂದು ‘ದುಬಾರಿ’ ಚಿಕಿತ್ಸೆಯಾಗಿ ಬದಲಾಗುತ್ತಿದೆ. ಪಂಚಕರ್ಮ ಅಂದರೆ ಕೇವಲ ಮಸಾಜ್ ಎಂಬ ಬಗೆಯಲ್ಲಿ ಚಿತ್ರಿತವಾಗುತ್ತಿದೆ; ಆರೋಗ್ಯ ಪ್ರವಾಸೋದ್ಯಮದ ಭಾಗವಾಗಿದೆ. ಕೇರಳ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಕಡೆ ರೆಸಾರ್ಟ್‍ಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ದುಬಾರಿ ಶುಲ್ಕ ತೆರುವವರ ಸಂಖ್ಯೆ ಕಡಿಮೆಯಿಲ್ಲ.

ಆಯುರ್ವೇದ ಭಾರತೀಯ ಚಿಕಿತ್ಸಾ ಪದ್ಧತಿ. ಕೆಲವರಿಗೆ ಆಯುರ್ವೇದ ಅಂದ್ರೆ ‘ಮನೆಮದ್ದು’, ಇನ್ನು ಕೆಲವರಿಗೆ ‘ಪಂಚಕರ್ಮ’. ಮತ್ತೆ ಕೆಲವರಿಗೆ ಗಿಡಮೂಲಿಕೆಗಳ (ಹರ್ಬಲ್) ಚಿಕಿತ್ಸೆ. ಆದರೆ ಇದು ಅರ್ಧಸತ್ಯ. ಮೂರ್ನಾಲ್ಕು ದಶಕಗಳ ಹಿಂದೆ ಯಾವುದೇ ಕಾಯಿಲೆಯಿರಲಿ ಆಧುನಿಕ ವೈದ್ಯ ಪದ್ಧತಿ ತಕ್ಷಣಕ್ಕೆ ಗುಣಪಡಿಸುತ್ತದೆ. ಆಯುರ್ವೇದ ನಿಧಾನವಾದ್ರೂ ಬೇರು ಸಮೇತ ಗುಣಪಡಿಸುತ್ತೆ ಎಂಬ ಭಾವನೆಯಿತ್ತು. ದೀರ್ಘಕಾಲೀನ ಕಾಯಿಲೆಗಳಿಗೆ ಪಂಚಕರ್ಮ ಚಿಕಿತ್ಸೆ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಮಸಾಜ್ ಸೆಂಟರ್ ಗಳು ಆಯುರ್ವೇದದ ಹೆಸರಿನಲ್ಲಿ ಜನರನ್ನು ಮೋಸಮಾಡುತ್ತಿವೆ. ಎಲ್ಲವೂ ವಾಣಿಜ್ಯೀಕರಣಗೊಂಡ ಇಂದಿನ ದಿನಗಳಲ್ಲಿ ಅಭ್ಯಂಗವನ್ನು ಮಸಾಜ್‍ನ ಹೆಸರಿನಲ್ಲಿ ಮನಬಂದಂತೆ ಹಣಗಳಿಕೆಗೆ ಬಳಸುತ್ತಿರುವುದು ಆಯುರ್ವೇದಕ್ಕೆ ಅಂಟಿದ ಕಳಂಕ. ಸೈಂಧವಲವಣ ಬಳಸುವುದರಿಂದ ಪಾನಿಪೂರಿಯನ್ನು ಆಯುರ್ವೇದ ಪಾನಿಪುರಿ ಅಂತಲೂ ಕೆಲವೆಡೆ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿರುವುದೂ ಇದೆ.

ವೈದ್ಯಕೀಯ ಜ್ಞಾನ ನಮಗೆಲ್ಲ ತಿಳಿದಂತೆ ಜಾನಪದದಲ್ಲಿ ಹಾಸುಹೊಕ್ಕಾಗಿದೆ. ಸ್ಥಳೀಯ ಸಂಪ್ರದಾಯಗಳ, ಮೌಖಿಕ ಪದ್ಧತಿಗಳ ಹಾಗೂ ಇತರ ಹಲವು ಪದ್ಧತಿಗಳ ಅವಿಭಾಜ್ಯ ಅಂಗವಾಗಿದೆ. ಕಾಲಕ್ಕೆ ತಕ್ಕಂತೆ ಈ ಜ್ಞಾನವನ್ನು ವ್ಯವಸ್ಥಿತಗೊಳಸಿದ್ದು ವೈದ್ಯಕೀಯ ಶಾಸ್ತ್ರದ ಪ್ರಗತಿಗೆ ದಾರಿಯಾಯಿತು.

ಇಂದು ನಾವು ‘ಆಯುರ್ವೇದ’ ಎಂದು ಕರೆಯುವ ಪ್ರಾ.ಭಾ. ವೈ.ವಿ. (ಪ್ರಾಚೀನ ಭಾರತೀಯ ವೈದ್ಯವಿದ್ಯೆ) ಹುಟ್ಟಿಕೊಂಡಿದ್ದು ತಾಂತ್ರಿಕರಲ್ಲಿ. ರೋಗ ನಿವಾರಣೆ, ಆರೋಗ್ಯ ಸ್ಥಿರತೆ ತಾಂತ್ರಿಕ ಆಚರಣೆಗಳ ಭಾಗಗಳಾಗಿಯೇ ಹುಟ್ಟಿ ಬೆಳೆದವು. ಎಲ್ಲಾ ಸಾಧನೆಗಳಿಗೂ ಕೇಂದ್ರಬಿಂದು ಶರೀರ. ಇದರ ಸದೃಢತೆ ಅತ್ಯಗತ್ಯ.

ನಮಗೆ ಗೋಚರವಾಗುವ ಎಲ್ಲ ದ್ರವ್ಯಗಳೂ ಪಂಚಮಹಾಭೂತಗಳ ಸಂಘಟನೆಯಿಂದಾಗಿದೆ. ಅಥರ್ವಣವೇದದ ಉಪವೇದವಾದ ಆಯುರ್ವೇದ ವೇದವಷ್ಟೇ ಪ್ರಾಚೀನವಾಗಿದ್ದು ಆಯುರ್ವೇದದ ಮೂಲಸಿದ್ಧಾಂತಗಳೆಲ್ಲವೂ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಮೊದಲಾದ ದರ್ಶನಶಾಸ್ತ್ರಗಳ ಸಿದ್ಧಾಂತದ ಮೇಲೆಯೇ ರೂಪಿಸಲ್ಪಟ್ಟಿವೆ. ಸಿಂಧೂನದಿ ಕಣಿವೆಯ (ಹರಪ್ಪ, ಮೊಹೆಂಜೋದಾರೋ, ಚನ್ಹುದಾರೋ) ಸಂಸ್ಕೃತಿ ಕ್ರಿ.ಪೂ. 1500ರ ಹೊತ್ತಿಗೆ ಅನಿರ್ದಿಷ್ಟ ಕಾರಣದಿಂದ ಹೇಳಹೆಸರಿಲ್ಲದೇ ನಿರ್ನಾಮವಾಯಿತೆಂದು ಚರಿತ್ರಕಾರರ ಮತ. ಅಲ್ಲಿ ದೊರೆತ ಲಿಪಿಗಳನ್ನು ಇನ್ನೂ ಓದಲಿಕ್ಕಾಗಿಲ್ಲವಾದುದರಿಂದ ಅದರ ಕಾಲ ವೇದಗಳಿಗಿಂತಲೂ ಹಿಂದಿನದೆನ್ನುತ್ತಾರೆ. ವೇದಗಳ ಕಾಲ ಕ್ರಿ.ಪೂ. 1200 ರಿಂದ 800ರ ವರೆಗೆ ಎಂದು ನಿರ್ಣಯವಾಗಿದೆ. 

ಆಯುರ್ವೇದದಲ್ಲಿ ಶಲ್ಯ, ಶಲಾಕ್ಯ, ಕಾಯ ಚಿಕಿತ್ಸಾ, ಭೂತ ವಿದ್ಯಾ, ಕೌಮಾರಭೃತ್ಯ. ಅಗದ ತಂತ್ರ ರಸಾಯನ, ವಾಜೀಕರಣ ಎಂಬ ಎಂಟು ವಿಭಾಗಗಳಿವೆ. ಪಶುರೋಗ, ಅಶ್ವಚಿಕಿತ್ಸೆ ಹಾಗೂ ವೃಕ್ಷರೋಗಗಳ ಬಗ್ಗೆಯೂ ಉಲ್ಲೇಖ ದೊರೆಯುತ್ತದೆ. ವೃಕ್ಷರೋಗಗಳ ಬಗ್ಗೆ ವೃಕ್ಷಾಯುರ್ವೇದ ಎಂಬ ಗ್ರಂಥವೂ ಉಪಲಬ್ಧವಿದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಎರಡು ವಿಧದ ಚಿಕಿತ್ಸೆಯಿದೆ (1) ಸಂಶಮನ ಮತ್ತು (2) ಸಂಶೋಧನ ಚಿಕಿತ್ಸೆ. ಸಂಶಮನದಲ್ಲಿ ಔಷಧಿ ಪ್ರಯೋಗದಿಂದ ವಿಕೃತದೋಷಗಳನ್ನು ಅಲ್ಲಿಯೇ ಶಮನಗೊಳಿಸುವುದು. ಸಂಶೋಧನೆ ಅಂದರೆ ಪಂಚಕರ್ಮ ಚಿಕಿತ್ಸೆ, ದೂಷಿತ ದೋಷಗಳನ್ನು ಹೊರಹಾಕುವಂತಹುದು.

ವಂಚಕರಿದ್ದಾರೆ, ಎಚ್ಚರ!

ನೀವು ನಿಧಾನವಾಗಿ ನಡೆಯುತ್ತ ಮಂಡಿನೋವಿನಿಂದ ಬಾಧೆಪಡುತ್ತ ಇದ್ದಲ್ಲಿ ಬಸ್‍ಸ್ಟ್ಯಾಂಡ್, ರೈಲ್ವೆಸ್ಟೇಷನ್, ಮಾಲ್‍ಗಳ ಬಳಿ ನಿಮ್ಮನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬ ಹತ್ತಿರ ಬರುತ್ತಾನೆ. ನಿಮಗೆ ಸಹಾಯ ಮಾಡುತ್ತ ಮಂಡಿನೋವಿನ ಬಗ್ಗೆ ವಿಚಾರಿಸುತ್ತ ಅದಕ್ಕೊಂದು ಔಷಧಿ ನೀಡಲು ಮುಂದಾಗುತ್ತಾನೆ. ನಿಮ್ಮ ಮನೆಗೇ ಬಂದು ಎಣ್ಣೆ ತಯಾರಿಸಿ ಮಂಡಿಗೆ ಹಚ್ಚಿ ಮಾಸಾಜ್ ಮಾಡಿ ವಿಶ್ವಾಸ ಗಳಿಸುತ್ತಾನೆ.

ಎಣ್ಣೆ ತಯಾರಿಸಲು ಬೇಕಾದ ಸಾಮಾಗ್ರಿ ತರಲು ನಿಮ್ಮನ್ನು ಅಂಗಡಿಗೆ ಕರೆದೊಯ್ಯುತ್ತಾನೆ. ಅಲ್ಲಿ ಅವನು ಹೇಳಿದ ವಸ್ತುಗಳನ್ನು ಖರೀದಿಸಿದಾಗ ಬಿಲ್ಲು ರೂ.10,000 ಆಗುತ್ತದೆ. ನಿಮ್ಮ ಹತ್ತಿರ ಹಣವಿಲ್ಲದಿದ್ದರೆ ಅದನ್ನು ಚೆಕ್, ಕಾರ್ಡ್, ಪೇಟಿಮ್ ಯಾವುದೇ ವಿಧಾನದಲ್ಲಿ ಪಡೆಯುವವರೆಗೆ ಬಿಡುವುದಿಲ್ಲ. ನಂತರ ಮಂಡಿನೋವು ಕಡಿಮೆಯಾಗದಿದ್ದಲ್ಲಿ ಅವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ ಬಿಟ್ರೆ ಯಾವುದೇ ವಿಳಾಸ ಇರುವುದಿಲ್ಲ. ಆ ನಂಬರ್ ಸ್ವಿಚ್ ಆಫ್ ಆಗಿರುತ್ತದೆ.

ಇಂತಹ ವ್ಯವಸ್ಥಿತ ವಂಚಕರ ಜಾಲವೇ ಇದೆ, ಎಚ್ಚರದಿಂದಿರಿ.

ಆಯುರ್ವೇದ ಚಿಕಿತ್ಸೆಯಲ್ಲಿ ರೋಗದ ಕಾರಣವನ್ನು ನಿವಾರಿಸಲು ವಿಶಿಷ್ಟ ಗಮನ ಕೊಡಲಾಗುತ್ತದೆ. ಚಿಕಿತ್ಸೆಯಲ್ಲಿ ರೋಗವನ್ನಲ್ಲದೇ ರೋಗಿಯನ್ನೂ ಚಿಕಿತ್ಸಿಸಬೇಕು. ರೋಗಿ ಮತ್ತು ರೋಗ ಎರಡರ ಮಧ್ಯೆ ಸೂಕ್ಷ್ಮ ಅಂತರವಿದೆ. ರೋಗಕ್ಕೆ ಔಷಧಿ ನೀಡಿದರೆ ಸಾಲದು. ಸಹಾನುಭೂತಿಯನ್ನು ತೋರಿಸಬೇಕು. ಹೆಚ್ಚಿನ ಕಾಯಿಲೆಗಳು ಮನೋದೈಹಿಕವಾಗಿರುತ್ತವೆ. ಮನಸ್ಸಿನ ಪಾತ್ರವೂ ಅತಿ ಮುಖ್ಯ. ರೋಗಿಯ ವಾಸಿಸುವ ಪ್ರದೇಶ ಶರೀರಬಲ, ಕಾಲ, ಪ್ರಕೃತಿ ರೋಗಿಯ ವಯಸ್ಸು ಎಲ್ಲವನ್ನೂ ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ.

ಆಯುರ್ವೇದ ಚಿಕಿತ್ಸೆಯ ಮೂಲ ಉದ್ದೇಶ ರೋಗ ನಿವಾರಣೆಗಿಂತ ಹೆಚ್ಚಾಗಿ ಸ್ವಸ್ಥವೃತ್ತವನ್ನು ಪಾಲಿಸುವುದು. ಅಂ ದರೆ ರೋಗ ಬಾರದಂತೆ ನೋಡಿಕೊಳ್ಳುವುದೇ ಮುಖ್ಯ. ದಿನಚರ್ಯೆ, ಋತುಚರ್ಯೆ, ಸದ್ವತ್ತಗಳನ್ನು ಅನುಸರಿಸುವುದರಿಂದ ದೀರ್ಘಕಾಲ ಆರೋಗ್ಯದಿಂದ ಜೀವನ ನಡೆಸಬಹುದು. ದಿನಚರ್ಯೆ ಎಂದರೆ ಪ್ರತಿದಿನ ವ್ಯಕ್ತಿಯು ಅನುಸರಿಸಬೇಕಾದ ಜೀವನ ಕ್ರಮ. ಋತುಮಾನಕ್ಕೆ ತಕ್ಕಂತೆ ದಿನಚರ್ಯೆ ಹೊಂದಿಸಿಕೊಂಡು ಹೋಗುವುದೇ ಋತುಚರ್ಯೆ, ಇನ್ನು ಸದ್ವತ್ತವೆಂದರೆ ಮಾನವನು ಆಚರಿಸಬೇಕಾದ ನೀತಿ ನಿಯಮಗಳು. ನೆರೆಹೊರೆಯವರೊಡನೆ, ಕುಟುಂಬದವರೊಡನೆ, ಸಮಾಜದಲ್ಲಿ ಉತ್ತಮವಾಗಿ ಬದುಕಿ ಬಾಳಲಿಕ್ಕೆ ಬೇಕಾದ ಗುಣಗಳು. 

ಆಯುರ್ವೇದ ಚಿಕಿತ್ಸಾ ಪದ್ಧತಿ ಜಾಗತಿಕ ಮನ್ನಣೆ ಪಡೆಯುತ್ತಿರುವ ಇಂದಿನ ದಿನಗಳಲ್ಲಿ ಈ ಬೆಳವಣಿಗೆ ಆಯುರ್ವೇದ ಪದ್ಧತಿಗೆ ಪೂರಕವೋ ಮಾರಕವೋ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಎಲ್ಲರ ಕೈಗೆಟುಕುವಂತಿದ್ದ ಆಯುರ್ವೇದ ಇಂದು ‘ದುಬಾರಿ’ ಚಿಕಿತ್ಸೆಯಾಗಿ ಬದಲಾಗುತ್ತಿದೆ. ಪಂಚಕರ್ಮ ಅಂದರೆ ಕೇವಲ ಮಸಾಜ್ ಎಂಬ ಬಗೆಯಲ್ಲಿ ಚಿತ್ರಿತವಾಗುತ್ತಿದೆ. ಆರೋಗ್ಯ ಪ್ರವಾಸೋದ್ಯಮದಲ್ಲಿ ಇದು ಒಂದು ಭಾಗವಾಗಿ ಸೇರ್ಪಡೆಯಾಗಿದೆ. ಕೇರಳ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಕಡೆ ರೆಸಾರ್ಟ್‍ಗಳಲ್ಲಿ ತಂಗಿ ‘ಒತ್ತಡ’ ಕಡಿಮೆ ಮಾಡಿಕೊಳ್ಳುವ ಚಿಕಿತ್ಸೆ ಪಡೆದು ದುಬಾರಿ ಶುಲ್ಕ ನೀಡಿ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಯಾವುದೋ ದೇಶದ ಮೂಲೆಯಲ್ಲಿದ್ದ ನಾಗರಿಕ ಭಾರತಕ್ಕೆ ಆಗಮಿಸುವ ಸಂದರ್ಭದಲ್ಲಿ ‘ಆಯುರ್ವೇದ ಚಿಕಿತ್ಸಾ ಕೇಂದ್ರ’ವನ್ನು ಆತನ ಭಾರತದಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಸೇರಿಸಲಾಗಿರುತ್ತದೆ. ಪಂಚತಾರಾ ಸೌಲಭ್ಯ ನೀಡಿ ಆದರಿಸುವ ಎಲ್ಲ ಬಗೆಯ ‘ಆತಿಥ್ಯ’ ನೀಡುವ ಆಸ್ಪತ್ರೆ-ರೆಸಾರ್ಟ್‍ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆಯುರ್ವೇದ ಒಂದು ಉದ್ಯಮವಾಗಿ ಬೆಳೆದುನಿಂತಿದೆ. ಭಾರತದ ಕಾರ್ಪೋರೇಟ್ ಕಂಪನಿಗಳು ಇದಕ್ಕೆ ಹೊರತಲ್ಲ. ತಮ್ಮ ಉದ್ಯೋಗಿಗಳಿಗೆ ಸ್ಟ್ರೆಸ್ ಮ್ಯಾನೇಜ್‍ಮೆಂಟ್‍ನ ಭಾಗವಾಗಿ ‘ಯೋಗಿ’ಗಳನ್ನು ಪರಿಚಯಿಸಲಾಗುತ್ತದೆ.

ಎಲ್ಲವನ್ನೂ ತೊರೆದು ಸನ್ಯಾಸತ್ವ ಸ್ವೀಕರಿಸಿದ ಮಹಾನ್ ಸನ್ಯಾಸಿಯೊಬ್ಬರು ಕಾರ್ಪೋರೇಟ್ ಜಗತ್ತನ್ನು ಮೀರಿಸುವ ನಿಟ್ಟಿನಲ್ಲಿ ಉದ್ಯಮಿಯಾಗಿ ಜಾಹೀರಾತುಗಳಲ್ಲಿ ಆವರಿಸುತ್ತಿರುವುದು ವಿಪರ್ಯಾಸ. ಅರೆಬರೆ ಕಲಿತ ಥೆರಪಿಸ್ಟ್ ಗಳು ತಾವೇ ‘ಸೆಂಟರ್’ ತೆರೆದು ಜನರನ್ನು ಮರಳುಗೊಳಿಸುತ್ತಿರುವುದು ಆಯುರ್ವೇದಕ್ಕೆ ಮಾರಕವಾಗಿದೆ. ಭಾರತೀಯ ವೈದ್ಯಪದ್ಧತಿ ವಿದೇಶಿ ಮಾರುಕಟ್ಟೆಗೆ ಪ್ರವೇಶಿಸಿ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದು ಒಂದೆಡೆಯಾದರೆ ಇನ್ನೊಂದುಕಡೆ ಜನಸಾಮಾನ್ಯನಿಂದ ಆಯುರ್ವೇದ ದೂರವಾಗುತ್ತಿದೆಯೇನೋ ಎಂಬ ಆತಂಕವು ಎದುರಾಗಿದೆ.

ಭಾರತದ ಮಹಾನ್ ಯೋಗಿಯೊಬ್ಬರು ಪುತ್ರಂಜೀವ ಹೆಸರಿನ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಟ್ಟು ಗಂಡು ಮಕ್ಕಳು ಬೇಕೆನ್ನುವವರು ಇದನ್ನು ಸೇವಿಸಿ ಎಂದು ಪ್ರಚಾರ ಮಾಡಿದರು. ಈಗಾಗಲೇ ಭಾರತದಲ್ಲಿ ಹೆಣ್ಣುಭ್ರೂಣ ಹತ್ಯೆಯಿಂದಾಗಿ 1000 ಪುರುಷರಿಗೆ 900+ ಮಹಿಳೆಯರಿದ್ದಾರೆ. 5 ವರ್ಷದೊಳಗಿನ ಮಕ್ಕಳಲ್ಲಿ 1000 ಗಂಡು ಮಕ್ಕಳಿಗೆ 896 ಹೆಣ್ಣುಮಕ್ಕಳಿದ್ದಾರೆ. 1993ರಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾನೂನು ಜಾರಿಯಲ್ಲಿದೆ. ಗರ್ಭಿಣಿಯರಲ್ಲಿ 14 ವಾರಗಳ ನಂತರ ಹೆಣ್ಣು /ಗಂಡೇ ಎಂಬದನ್ನು ನಿರ್ಧರಿಸಲು ಸ್ಕ್ಯಾನಿಂಗ್ ಸಹಾಯ ಮಾಡುತ್ತದೆ. ಜೈಲುಶಿಕ್ಷೆ ಮತ್ತು ದಂಡ ಎಲ್ಲವೂ ಇದ್ದರೂ ಹೆಣ್ಣುಭ್ರೂಣ ಹತ್ಯೆಗಳು ನಡೆಯುತ್ತಲೇ ಇವೆ. ಅಂತಹುದರಲ್ಲಿ ಈ ‘ಯೋಗಿ’ ರಾಜಾರೋಷವಾಗಿ ‘ಪುತ್ರಂಜೀವ’ ಮಾರುಕಟ್ಟೆಗೆ ಬಿಟ್ಟಿರುವುದು ಅತ್ಯಾಶ್ಚರ್ಯಕರ. ಆ ಔಷಧಿ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಆದರೂ ಈ ರೀತಿ ಆಮಿಷವೊಡ್ಡಿ ಜನರನ್ನು ಸೆಳೆಯುವುದು ಅಪರಾಧ ಅಲ್ಲವೇ?

ಅಲೋಪತಿ ವೈದ್ಯ ಪದ್ಧತಿಯಂತೆ ಆಯುರ್ವೇದ ವೈದ್ಯರ ಚಿಕಿತ್ಸೆಯಿಂದ ಮೋಸ ಹೋಗಿದ್ದರೆ ಚಿಕಿತ್ಸೆಗೆ ಹೆಚ್ಚಿನ ಹಣ ವಸೂಲಿ ಮಾಡಿದರೆ ಅವರ ವಿರುದ್ಧ ಗ್ರಾಹಕ ರಕ್ಷಣಾ ವೇದಿಕೆಗೆ ಮೊರೆ ಹೋಗಬಹುದಾಗಿದೆ.

ಬಹುತೇಕ ಜನರಿಗೆ ಆಯುರ್ವೇದ ಔಷಧಿಗಳು ಪಾರ್ಶ್ವ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ಇದೆ. ಔಷಧಿ ಅಂದಮೇಲೆ ಪರಿಣಾಮವಿರುವಂತೆ ಅತಿಯಾದರೆ ಪಾರ್ಶ್ವ ಪರಿಣಾಮಗಳು ಇದ್ದೇ ಇರುತ್ತವೆ. ಔಷಧಿಸಸ್ಯಗಳಾಗಲೀ, ರಸೌಷಧಿಗಳಿರಲೀ ಅಧಿಕವಾದರೆ ಪಾರ್ಶ್ವ ಪರಿಣಾಮ ಬೀರುತ್ತವೆ.

ಬೇವಿನೆಲೆ ಒಳ್ಳೆಯದು ಅಂತ ಸ್ವಾಮೀಜಿ ಹೇಳಿದಕೂಡಲೇ ಪ್ರತಿದಿನ ತಿನ್ನಲು ಶುರು ಮಾಡ್ತಾರೆ. ಪ್ರತಿದಿನ ಬೇವಿನೆಲೆ ತಿಂದರೆ ಲೈಂಗಿಕ ಶಕ್ತಿ ಕುಂಠಿತವಾಗುತ್ತೆ. ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ಆಹಾರವೂ ಅಜೀರ್ಣವಾಗುವಾಗ ಔಷಧಿಯು ಪಾರ್ಶ್ವ ಪರಿಣಾಮ ಬೀರುವುದಿಲ್ಲವೇ?

*ಲೇಖಕಿ ಪ್ರಖ್ಯಾತ ಆಯುರ್ವೇದ ವೈದ್ಯರು, ವೈದ್ಯಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು.

Leave a Reply

Your email address will not be published.