ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ!

ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ವಿಮರ್ಶಿಸಲು ಮಾನದಂಡದ ಅಗತ್ಯವಿದೆ. ಮೂಲಸೌಕರ್ಯಗಳನ್ನು, ಜನರು ದುಡಿದು ಗಳಿಸುವ ಪರಿಸರವನ್ನು ಸೃಷ್ಟಿಸುವುದು ಚುನಾಯಿತ ಸರಕಾರದ ಜವಾಬ್ದಾರಿಯೆನ್ನುವ ಒಂದು ಸಾಮಾನ್ಯ ಮಾನದಂಡದಿಂದ ಸರಕಾರದ ಸಾಧನೆಯನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸಿದ್ದೇನೆ.

ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರಕಾರವನ್ನು ರಚಿಸಿವೆ. ಈ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ವಿಶೇಷ ಭಿನ್ನತೆ ಇಲ್ಲ. ಈ ಪಕ್ಷಗಳು ಏಕೆ ದೇಶದಲ್ಲಿರುವ ಬಹುತೇಕ ಲಿಬರಲ್ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ತೊಂಬತ್ತರ ನಂತರ ವಿಶೇಷ ಭಿನ್ನತೆ ನೋಡಲು ಸಾಧ್ಯವಿಲ್ಲ. ಸಮಷ್ಠಿಯ ಸಂಪನ್ಮೂಲಗಳನ್ನು ಖಾಸಗಿ ಬಂಡವಾಳಿಗರಿಗೆ ನೀಡುವ ಖಾಸಗೀಕರಣ ನೀತಿಗಳನ್ನು, ಖಾಸಗಿ ಬಂಡವಾಳಿಗರ ವ್ಯವಹಾರಗಳನ್ನು ನಿಯಂತ್ರಿಸುವ ಕಾನೂನು ಕಟ್ಟಲೆಗಳನ್ನು ಸಡಿಲಗೊಳಿಸುವ ಉದಾರೀಕರಣ ನೀತಿಗಳನ್ನು ಮತ್ತು ಬಂಡವಾಳದ ಜಾಗತಿಕ ಚಲನೆಗಿರುವ ಅಡ್ಡಿ ಆತಂಕಗಳನ್ನು ದೂರ ಮಾಡುವ ಜಾಗತೀಕರಣ ನೀತಿಗಳನ್ನು ಚುನಾಯಿತ ಸರಕಾರಗಳು ಜಾರಿಗೆ ತರುತ್ತಿವೆ. ಹಾಗಾಗಿ ಸಮ್ಮಿಶ್ರ ಸರಕಾರದ ಅಭಿವೃದ್ಧಿ ಧೋರಣೆಯಲ್ಲಿ ಮೇಲಿನ ನೀತಿಗಳ ದಟ್ಟ ಪ್ರಭಾವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರಕಾರದ ಸಾಧನೆಯನ್ನು ವಿಮರ್ಶೆ ಮಾಡಬೇಕಾಗಿದೆ.

ಸಾಧನೆಯನ್ನು ವಿಮರ್ಶಿಸಲು ಮಾನದಂಡದ ಅಗತ್ಯವಿದೆ. ಮೂಲಸೌಕರ್ಯಗಳನ್ನು ಜನರು ದುಡಿದು ಗಳಿಸುವ ಪರಿಸರವನ್ನು ಸೃಷ್ಟಿಸುವುದು ಚುನಾಯಿತ ಸರಕಾರದ ಜವಾಬ್ದಾರಿಯೆನ್ನುವ ಒಂದು ಸಾಮಾನ್ಯ ಮಾನದಂಡದಿಂದ ಸರಕಾರದ ಸಾಧನೆಯನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸಿದ್ದೇನೆ. ಈ ಮಾನದಂಡದೊಳಗೆ ಸೇರಿಕೊಂಡಿರುವ ಅಂಶಗಳನ್ನು ಪರಿಚಯಿಸಬೇಕಾಗಿದೆ. ಊಟ, ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಇತ್ಯಾದಿಗಳು ಮೂಲಸೌಕರ್ಯಗಳು. ಇವನ್ನು ಪಡೆಯಲು ಆದಾಯ ಬೇಕು. ಆದಾಯ ಗಳಿಕೆಯ ಮೂರು ನ್ಯಾಯಯುತ ಮಾರ್ಗಗಳು- ಕೃಷಿ ಅಥವಾ ವ್ಯಾಪಾರ/ಉದ್ಯಮ ಅಥವಾ ಉದ್ಯೋಗ. ಇವುಗಳಿಂದ ಆದಾಯ ಗಳಿಸಲು ಭೂಮಿ, ಬಂಡವಾಳ, ಸಾರಿಗೆ ಸಂಪರ್ಕ ಅಥವಾ ಶಿಕ್ಷಣ, ಆರೋಗ್ಯಗಳು ಬೇಕು. ಇವೆಲ್ಲವನ್ನು ಸೇರಿಸಿ ಅರ್ಥಿಕ ಪರಿಸರ ಎನ್ನಬಹುದು. ದುಡಿಮೆಗೆ ಆರ್ಥಿಕ ಪರಿಸರ ಇದ್ದರೆ ಸಾಲದು ಸಾಮಾಜಿಕ, ರಾಜಕೀಯ ಹಾಗು ಸಂಸ್ಕೃತಿಕ ಪರಿಸರಗಳೂ ಪೂರಕವಾಗಿರಬೇಕು. ಲಿಂಗ, ಜಾತಿ, ಧರ್ಮ ತಾರತಮ್ಯರಹಿತ ಸಾಮಾಜಿಕ ಪರಿಸರ ದುಡಿದು ಗಳಿಸಲು ಅವಶ್ಯ. ಸಾಮಾಜಿಕ ಪರಿಸರಕ್ಕೂ ರಾಜಕೀಯ ಪಾಲುಗೊಳ್ಳುವಿಕೆಗೂ ನೇರ ಸಂಬಂಧ ಇದೆ.

ಜನರ ಪ್ರಜ್ಞೆಯನ್ನು ರೂಪಿಸುವ ಪ್ರಕ್ರಿಯೆಯ ದೃಷ್ಟಿಯಿಂದ ಸಂಸ್ಕೃತಿಯನ್ನು ನೋಡಿದರೆ ಇಂದು ಶಿಕ್ಷಣ, ಮಠಮಂದಿರಗಳು, ರಾಜಕೀಯ ಪಕ್ಷ ಹಾಗು ಮಾಧ್ಯಮಗಳು ವಹಿಸುವ ಪಾತ್ರವನ್ನು ಕುಟುಂಬ ಸಮುದಾಯಗಳು ವಹಿಸುತ್ತಿಲ್ಲ.

ಅಂದರೆ ಮಹಿಳೆಯರು, ತಳಸ್ತರಕ್ಕೆ ಸೇರಿದ ಜನರು, ಅಲ್ಪಸಂಖ್ಯಾತರು ಹೆಚ್ಚುಹೆಚ್ಚು ರಾಜಕೀಯದಲ್ಲಿ ಪಾಲುಗೊಳ್ಳಲು ಸಾಧ್ಯವಾದರೆ ತಾರತಮ್ಯರಹಿತ ಸಾಮಾಜಿಕ ಪರಿಸರ ಸೃಷ್ಟಿ ಸಾಧ್ಯ. ಜನರ ಪ್ರಜ್ಞೆಯನ್ನು ರೂಪಿಸುವ ಪ್ರಕ್ರಿಯೆಯ ದೃಷ್ಟಿಯಿಂದ ಸಂಸ್ಕೃತಿಯನ್ನು ನೋಡಿದರೆ ಇಂದು ಶಿಕ್ಷಣ, ಮಠಮಂದಿರಗಳು, ರಾಜಕೀಯ ಪಕ್ಷ ಹಾಗು ಮಾಧ್ಯಮಗಳು ವಹಿಸುವ ಪಾತ್ರವನ್ನು ಕುಟುಂಬ ಸಮುದಾಯಗಳು ವಹಿಸುತ್ತಿಲ್ಲ. ಇವು ಪ್ರತಿಪಾದಿಸುವ ಮೌಲ್ಯಗಳು ಜನರ ನ್ಯಾಯ ಅನ್ಯಾಯದ ಕಲ್ಪನೆಗಳನ್ನು, ಮೇಲುಕೀಳಿನ ಪ್ರಶ್ನೆಗಳನ್ನು, ಅಭಿವೃದ್ಧಿ ಅನಭಿವೃದ್ಧಿ ಕಲ್ಪನೆಗಳನ್ನು ರೂಪಿಸುತ್ತವೆ. ಜನರು ದುಡಿದು ಗಳಿಸಲು ಪೂರಕವಾಗುವ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿಸರದೊಂದಿಗೆ ಸಮ್ಮಿಶ್ರ ಸರಕಾರದ ಪಾಲಿಸಿಗಳನ್ನು ಹೋಲಿಸಿ ಸರಕಾರದ ಸಾಧನೆಯನ್ನು ವಿಮರ್ಶಿಸಿದ್ದೇನೆ. ರಾಜ್ಯ ಸರಕಾರದ 2019-20ರ ಬಜೆಟ್, 2018-19ರ ಅರ್ಥಿಕ ಸಮೀಕ್ಷಾ ವರದಿ, ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಚುನಾವಣಾ ಪ್ರಣಾಳಿಕೆ ಮತ್ತು ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಂದ ಮಾಹಿತಿಗಳನ್ನು ಬಳಸಿಕೊಂಡು ಮಿಶ್ರ ಸರಕಾರದ ಸಾಧನೆಯನ್ನು ವಿಮರ್ಶಿಸಲಾಗಿದೆ.

ಪಕ್ಷದ ಚಿಹ್ನೆ, ಚುನಾವಣಾ ಪ್ರಣಾಳಿಕೆ, ನಾಯಕರ ಸಾರ್ವಜನಿಕ ಮಂಡನೆಗಳ ಮೂಲಕ ಜನತಾದಳ ಪಕ್ಷವೂ ಕೃಷಿಕರಪರ ಎಂದು ಬಿಂಬಿಸಲು ಪ್ರಯತ್ನಿಸುತ್ತಲೇ ಇದೆ. ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಹಲವು ಭಾಗ್ಯ ಕಾರ್ಯಕ್ರಮಗಳ ಮೂಲಕ ತಮ್ಮದು ತಳಸ್ತರಪರ ಪಕ್ಷವೆಂದು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿದೆ. 2018ರ ಚುನಾವಣಾ ಪ್ರಣಾಳಿಕೆ ಮತ್ತು 2019-20ರ ಬಜೆಟ್ ಕೂಡ ಇವೇ ಅಂಶಗಳನ್ನು ಬಿಂಬಿಸುತ್ತಿವೆ. ಆರುವತ್ತು ಎಪ್ಪತ್ತರ ದಶಕಗಳಲ್ಲಿ ರಾಜ್ಯದ ಸಂಪನ್ಮೂಲದ ಬಹುಭಾಗವನ್ನು ಕೃಷಿ, ನೀರಾವರಿ ಮತ್ತು ವಿದ್ಯುತ್ ಮೇಲೆ ವಿನಿಯೋಜಿಸಲಾಗುತ್ತಿತ್ತು. ನಂತರದ ದಶಕಗಳಲ್ಲಿ ಮೇಲಿನ ಮೂರು ಕ್ಷೇತ್ರಗಳ ಮೇಲೆ ಮಾಡುವ ವಿನಿಯೋಜನೆ ಕಡಿಮೆಯಾಗುತ್ತಾ ಬಂದಿದೆ. ಆದರೆ 2019-20ರ ಬಜೆಟಲ್ಲಿ ಆರಂಭದ ದಿನಗಳನ್ನು ನೆನಪಿಸುವ ಸಂಪನ್ಮೂಲದ ಎಲೊಕೇಶನ್ ಮಾಡಲಾಗಿದೆ. ರಾಜ್ಯದ ಸಂಪನ್ಮೂಲದ ಅರ್ಧಕ್ಕಿಂತಲೂ ಹೆಚ್ಚಿನ (ಶೇ.53ರಷ್ಟು) ಸಂಪನ್ಮೂಲಗಳನ್ನು ಕೃಷಿ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ನೀಡಲಾಗಿದೆ. ಇದರ ಜೊತೆಗೆ 12650 ಕೋಟಿ ರೂಗಳನ್ನು ಕೃಷಿಕರ (ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಂದ ಪಡೆದ) ಸಾಲಮನ್ನಾಕ್ಕೆ ಎತ್ತಿ ಇಡಲಾಗಿದೆ.

ಕೃಷಿ ಅಭಿವೃದ್ಧಿಗೆ ನೀಡುವ ಸಾರ್ವಜನಿಕ ಸಂಪನ್ಮೂಲದ ಬಹುಭಾಗ ಅಲ್ಪಸಂಖ್ಯೆಯಲ್ಲಿರುವ (ಶೇ.7ರಷ್ಟಿರುವ) ಮಧ್ಯಮ ಮತ್ತು ದೊಡ್ಡ ಕೃಷಿಕರ ಪಾಲಾಗುತ್ತಿದೆ.

ಬೇರೆ ರಾಜ್ಯಗಳ ಮತ್ತು ನಮ್ಮದೇ ರಾಜ್ಯದ ಹಿಂದಿನ ವರ್ಷಗಳ ಸಂಪನ್ಮೂಲ ವಿನಿಯೋಜನೆಗೆ ಹೋಲಿಸಿದರೆ 2019-20ರಲ್ಲಿ ಕೃಷಿ ಕ್ಷೇತ್ರದ ಮೇಲಿನ ಎಲೊಕೇಶನ್ ಹೆಚ್ಚಿದೆ. ಇಷ್ಟೊಂದು ದೊಡ್ಡ ಮೊತ್ತದ ಸಾರ್ವಜನಿಕ ಸಂಪನ್ಮೂಲದ ವಿನಿಯೋಜನೆಯ ಲಾಭ ಪಡೆಯಬೇಕಾದರೆ ಭೂಮಿ ಬೇಕು. ಆದರೆ ನಮ್ಮಲ್ಲಿ ಮೂರನೇ ಒಂದರಷ್ಟು ಕುಟುಂಬಗಳಲ್ಲಿ ಭೂಮಿಯೇ ಇಲ್ಲ. ಇನ್ನುಳಿದ ಮೂರನೇ ಎರಡರಷ್ಟು ಕುಟುಂಬಗಳಲ್ಲಿ ಶೇ.76ರಷ್ಟು ಕುಟುಂಬಗಳು ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳು. ಇವರ ಸ್ವಾಧೀನ ಶೇ.40ರಷ್ಟು ಭೂಹಿಡುವಳಿ ಇದ್ದರೆ ಇನ್ನುಳಿದ ಶೇ.24ರಷ್ಟು ಅರೆ ಮಧ್ಯಮ, ಮಧ್ಯಮ ಮತ್ತು ದೊಡ್ಡ ಕೃಷಿಕರಲ್ಲಿ ಶೇ.60ರಷ್ಟು ಭೂಹಿಡುವಳಿ ಇದೆ. ಸರಕಾರಿ ಲೆಕ್ಕಾಚಾರದ ಪ್ರಕಾರ 5 ಎಕರೆಗಿಂತ ಕಡಿಮೆ ಭೂಹಿಡುವಳಿ ಉಳ್ಳವರು ಸಣ್ಣ ಮತ್ತು ಅತೀ ಸಣ್ಣ ಕೃಷಿಕರು. ಆದರೆ ನಮ್ಮಲ್ಲಿ ಬಹುತೇಕ ಸಣ್ಣ ಮತ್ತು ಅತೀ ಸಣ್ಣ ಕೃಷಿಕರ ಹಿಡುವಳಿ ಒಂದು ಎಕರೆಯ ಆಸುಪಾಸಿನಲ್ಲಿದೆ. ಭೂಹಿಡುವಳಿ ಮತ್ತು ಸರಕಾರಿ ಸವಲತ್ತಿನ ಬಳಕೆ ನಡುವೆ ನೇರ ಸಂಬಂಧ ಇದೆ. ಅಂದರೆ ಹೆಚ್ಚು ಭೂಹಿಡುವಳಿ ಇರುವವರು ಹೆಚ್ಚು ಮತ್ತು ಕಡಿಮೆ ಹಿಡುವಳಿ ಇರುವವರು ಕಡಿಮೆ ಸವಲತ್ತು ಪಡೆಯುವುದು. ಇದರಿಂದ ಕೃಷಿ ಅಭಿವೃದ್ಧಿಗೆ ನೀಡುವ ಸಾರ್ವಜನಿಕ ಸಂಪನ್ಮೂಲದ ಬಹುಭಾಗ ಅಲ್ಪಸಂಖ್ಯೆಯಲ್ಲಿರುವ (ಶೇ.7ರಷ್ಟಿರುವ) ಮಧ್ಯಮ ಮತ್ತು ದೊಡ್ಡ ಕೃಷಿಕರ ಪಾಲಾಗುತ್ತಿದೆ.

ರಾಜ್ಯ ಕರ್ನಾಟಕ. ರಾಜ್ಯದ ಶೇ.79ರಷ್ಟು ಭೂಪ್ರದೇಶವನ್ನು ಬರಸಂಭವನೀಯ ಪ್ರದೇಶವೆಂದು ಗುರುತಿಸಲಾಗಿದೆ. ನೀರಿನ ಕೊರತೆಯಿಂದಾಗಿ ರಾಜ್ಯದ ಶೇ.84ರಷ್ಟು ಪ್ರದೇಶದಲ್ಲಿ ಒಂದೇ ಬಾರಿ ಬಿತ್ತನೆಯಾಗುತ್ತಿದೆ.

ಹಿಂದಿನ ಸರಕಾರಕ್ಕೆ ಹೋಲಿಸಿದರೆ ಸಮ್ಮಿಶ್ರ ಸರಕಾರ ಸಾಂಪ್ರದಾಯಿಕ ನೀರಾವರಿ ಮೇಲೂ ಹೆಚ್ಚಿನ ವಿನಿಯೋಜನೆ ಮಾಡಿದೆ. ಸಾಂಪ್ರದಾಯಿಕ ನೀರಾವರಿ ಮೇಲಿನ ಹೆಚ್ಚಿದ ವಿನಿಯೋಜನೆಯ ಲಾಭ ಕರ್ನಾಟಕದ ಬಹುತೇಕ ಕೃಷಿಕರಿಗೆ ತಲುಪಲು ಸಾಧ್ಯವಿಲ್ಲ. ಏಕೆಂದರೆ ರಾಜಾಸ್ತಾನದ ನಂತರ ಇಡೀ ದೇಶದಲ್ಲಿ ಅತೀ ಹೆಚ್ಚು ಒಣಭೂಪ್ರದೇಶವನ್ನು ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದ ಶೇ.79ರಷ್ಟು ಭೂಪ್ರದೇಶವನ್ನು ಬರಸಂಭವನೀಯ ಪ್ರದೇಶವೆಂದು ಗುರುತಿಸಲಾಗಿದೆ. ನೀರಿನ ಕೊರತೆಯಿಂದಾಗಿ ರಾಜ್ಯದ ಶೇ.84ರಷ್ಟು ಪ್ರದೇಶದಲ್ಲಿ ಒಂದೇ ಬಾರಿ ಬಿತ್ತನೆಯಾಗುತ್ತಿದೆ. ಕರ್ನಾಟಕದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ಪ್ರಮಾಣ 1140ಮಿಮಿ. ಕರ್ನಾಟಕದ ಕೆಲವು ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚು ಮತ್ತು ಬಹುತೇಕ ಭಾಗಗಳಲ್ಲಿ 600ರಿಂದ 700ಮಿಮಿಗಳಷ್ಟು ಮಳೆಯಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಒಣಭೂಪ್ರದೇಶ ಹೊಂದಿರುವ ರಾಜ್ಯ ದೊಡ್ಡ ಮೊತ್ತವನ್ನು ಒಣಭೂಮಿ ಕೃಷಿ ಅಥವಾ ಅಸಾಂಪ್ರದಾಯಿಕ ನೀರಾವರಿ ಮೇಲೆ ವಿನಿಯೋಜಿಸಬೇಕಿತ್ತು. ಆದರೆ ಆ ರೀತಿ ಆಗಿಲ್ಲ. ಸಾಂಪ್ರದಾಯಿಕ ನೀರಾವರಿ ಮೇಲಿನ ವಿನಿಯೋಜನೆ ಒಣಭೂಮಿ ಕೃಷಿ, ಬಡತನ, ವಲಸೆ, ಪ್ರಾದೇಶಿಕ ಅಸಮಾನತೆ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.

ಹಣಕಾಸು, ಸಾರಿಗೆ ಸಂಪರ್ಕ, ವಿದ್ಯುತ್ ಇತ್ಯಾದಿ ಮೂಲಸವಲತ್ತುಗಳ ಅಭಿವೃದ್ಧಿ ಮತ್ತು ವ್ಯಾಪಾರ ಉದ್ದಿಮೆಗಳ ಅಭಿವೃದ್ಧಿ ನಡುವೆ ಸಂಬಂಧ ಇದೆ. ಕೆಲವೊಂದು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಕೇಂದ್ರದ ಜವಾಬ್ದಾರಿ ಹಚ್ಚಿದ್ದರೆ ಇನ್ನು ಕೆಲವು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರದ ಪಾತ್ರ ಹೆಚ್ಚಿದೆ. ವಾಣಿಜ್ಯ ಬ್ಯಾಂಕ್‍ಗಳು ವ್ಯಾಪಾರ ಉದ್ದಿಮೆಗಳ ಹಣಕಾಸು ಅಗತ್ಯಗಳನ್ನು ಪೂರೈಸಿದಷ್ಟು ರಾಜ್ಯದ ಸರಕಾರಿ ಸಂಸ್ಥೆಗಳು ಪೂರೈಸುವುದಿಲ್ಲ. ವಾಸ್ತವ ಹೀಗಿದ್ದರೂ ನಗರ ಪ್ರದೇಶಗಳ ಸಣ್ಣಪುಟ್ಟ ವ್ಯಾಪಾರ ಉದ್ದಿಮೆಗಳಿಗೆ ಹಣಕಾಸು ನೀಡುವ ಯೋಜನೆಯನ್ನು ರಾಜ್ಯ ಸರಕಾರ ಘೋಷಿಸಿದೆ.

ವಿದ್ಯುತ್ ಅಭಿವೃದ್ಧಿ ಕೂಡ ರಾಜ್ಯದ ಜವಾಬ್ದಾರಿ. ವಿದ್ಯುತ್ ಅಭಿವೃದ್ಧಿ ಮೇಲೆ ರಾಜ್ಯ ಸರಕಾರ ಬಜೆಟ್ ಅನುದಾನ ಹೆಚ್ಚಿಸಿದಷ್ಟು ರಸ್ತೆ ಸಾರಿಗೆ ಅಭಿವೃದ್ಧಿ ಮೇಲೆ ಹೆಚ್ಚಿಸಿಲ್ಲ.

ರಸ್ತೆ ಸಾರಿಗೆ ಸುಧಾರಣೆಯಲ್ಲಿ ರಾಜ್ಯದ ಪಾತ್ರ ಇದ್ದಷ್ಟು ರೈಲು, ವಿಮಾನ ಮತ್ತು ಜಲಸಾರಿಗೆ ಸುಧಾರಣೆಯಲ್ಲಿ ಇಲ್ಲ. ವಿದ್ಯುತ್ ಅಭಿವೃದ್ಧಿ ಕೂಡ ರಾಜ್ಯದ ಜವಾಬ್ದಾರಿ. ವಿದ್ಯುತ್ ಅಭಿವೃದ್ಧಿ ಮೇಲೆ ರಾಜ್ಯ ಸರಕಾರ ಬಜೆಟ್ ಅನುದಾನ ಹೆಚ್ಚಿಸಿದಷ್ಟು ರಸ್ತೆ ಸಾರಿಗೆ ಅಭಿವೃದ್ಧಿ ಮೇಲೆ ಹೆಚ್ಚಿಸಿಲ್ಲ. ಕೃಷಿ, ವ್ಯಾಪಾರ, ಉದ್ದಿಮೆಗಳ ಜೊತೆಗೆ ಉದ್ಯೋಗದಿಂದಲೂ ದುಡಿದು ಗಳಿಸಬಹುದು. ಉದ್ಯೋಗದಿಂದ ಗಳಿಸಬೇಕಾದರೆ ಶಿಕ್ಷಣ, ಆರೋಗ್ಯಗಳು ಮುಖ್ಯ. ಶಿಕ್ಷಣದ ಮೇಲೆ ಹಿಂದಿನ ಸರಕಾರಕ್ಕೆ ಹೋಲಿಸಿದರೆ ಹೆಚ್ಚಿನ ಬಜೆಟ್ ಅನುದಾನವನ್ನು ಸಮ್ಮಿಶ್ರ ಸರಕಾರ ಮಾಡಿದೆ. ಆದರೆ ಬೇರೆ ರಾಜ್ಯಗಳ ಶಿಕ್ಷಣದ ಮೇಲಿನ ವಿನಿಯೋಜನೆಗೆ ಹೋಲಿಸಿದರೆ ರಾಜ್ಯದ ವಿನಿಯೋಜನೆ ಕಡಿಮೆ ಇದೆ. ಆರೊಗ್ಯ ಕ್ಷೇತ್ರವನ್ನು ಸಮ್ಮಿಶ್ರ ಸರಕಾರ ಸಂಪೂರ್ಣ ನಿರ್ಲಕ್ಷಿಸಿದಂತಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಮಾಡುವ ವಿನಿಯೋಜನೆಯ ಬಹುಭಾಗ ಉದ್ಯೋಗಿಗಳ ಸಂಬಳಕ್ಕೆ ಹೋಗುತ್ತಿರುವುದರಿಂದ ಕಟ್ಟಡ ನಿರ್ಮಾಣ, ಆಧುನಿಕ ತಂತ್ರಜ್ಞಾನದ ಅಳವಡಿಕೆ, ಉಪಕರಣಗಳ ಕೊರತೆ, ಔಷಧಿ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಈ ಕ್ಷೇತ್ರಗಳು ಎದುರಿಸುತ್ತಿವೆ. ಇವುಗಳ ಜೊತೆಗೆ ಈ ಎರಡೂ ಕ್ಷೇತ್ರಗಳು ಮಾನವ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿವೆ. ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳು ಶೇ.50ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮೇಸ್ಟ್ರುಗಳ ಕೊರತೆಯನ್ನು ಎದುರಿಸುತ್ತಿವೆ.

ವೈದ್ಯರನ್ನು ನೇಮಿಸಲು ಸರಕಾರ ಹಿಂದೇಟು ಹಾಕುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿದ್ಧರಿಲ್ಲ. ಸರಕಾರ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಕಡಿಮೆ ವಿನಿಯೋಜಿಸುವುದರಿಂದ ಖಾಸಗಿ ಬಂಡವಾಳ ಈ ಎರಡೂ ಕ್ಷೇತ್ರಗಳಲ್ಲೂ ಕಾರುಬಾರು ಮಾಡುತ್ತಿದೆ. ಶೇ.70ರಷ್ಟು ಬಿಎ, ಬಿಕಾಂ, ಬಿಎಸ್ಸಿ ಇತ್ಯಾದಿ ಜನರಲ್ ಎಜುಕೇಶನ್ ಸಂಸ್ಥೆಗಳು ಖಾಸಗಿ ಒಡೆತನದಲ್ಲಿದ್ದರೆ ಶೇ.80ಕ್ಕಿಂತಲೂ ಹೆಚ್ಚಿನ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಖಾಸಗಿ ಒಡೆತನದಲ್ಲಿವೆ. ಶೇಕಡಾ 70ರಷ್ಟು ಡಾಕ್ಟರುಗಳು ಇಂದು ಪೇಟೆಪಟ್ಟಣಗಳ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನುರಿತ ಖಾಸಗಿ ಡಾಕ್ಟರುಗಳ ಸೇವೆ ಪೇಟೆಪಟ್ಟಣಗಳಿಗೆ ಸೀಮಿತವಾಗಿರುವುದು ಮಾತ್ರವಲ್ಲ, ದುಬಾರಿ ಕೂಡ ಆಗಿದೆ. ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡಜನರು ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ 7 ಮತ್ತು 2013ರಲ್ಲಿ 6 ಜನ ಮಹಿಳೆಯರು ಚುನಾಯಿತರಾಗಿದ್ದಾರೆ. ಸಮ್ಮಿಶ್ರ ಸರಕಾರ ರಚಿಸಿರುವ ಎರಡೂ ಪಕ್ಷಗಳು ಕೂಡ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಿಸಲು ಪ್ರಯತ್ನಿಸಿಯೇ ಇಲ್ಲ.

ಗ್ರಾಮೀಣ ಪ್ರದೇಶದ ಬಡ ಜನರಿಗೆ ವೈದ್ಯಕೀಯ ಶಿಕ್ಷಣ ಪಡೆದ ಡಾಕ್ಟರುಗಳ ದರ್ಶನವಾಗುವುದು ಪ್ರೈಮರಿ ಹೆಲ್ತ್ ಸೆಂಟರುಗಳಲ್ಲಿ. ಆದರೆ ಇವುಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತರಿಂದ ಇಪ್ಪತ್ತು ಸಾವಿರ ಜನರಿಗೆ ಸೇವೆ ಸಲ್ಲಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಜನರು ತಮ್ಮ ದುಡಿತದ ಬಹುಭಾಗವನ್ನು ಆರೋಗ್ಯ, ಶಿಕ್ಷಣಕ್ಕೆ ಖರ್ಚು ಮಾಡುವ ಸ್ಥಿತಿ ಇದೆ. ಈ ಸ್ಥಿತಿಯನ್ನು ಬದಲಾಯಿಸಲು ಮಿಶ್ರ ಸರಕಾರ ಜಾರಿಗೆ ತಂದ ಆರೋಗ್ಯ ವಿಮೆ ಯೋಜನೆ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ.

ಲಿಂಗ, ಜಾತಿ, ಧರ್ಮ ತಾರತಮ್ಯರಹಿತ ಸಾಮಾಜಿಕ ಪರಿಸರ ದುಡಿದು ಗಳಿಸಲು ಮುಖ್ಯ. ಸಾಮಾಜಿಕ ತಾರತಮ್ಯಕ್ಕೂ ರಾಜಕೀಯ ಪಾಲುಗೊಳ್ಳುವಿಕೆಗೂ ನೇರ ಸಂಬಂಧ ಇದೆ. ಅಂದರೆ ಮಹಿಳೆಯರು, ತಳಸ್ತರಕ್ಕೆ ಸೇರಿದ ಜನರು, ಅಲ್ಪಸಂಖ್ಯಾತರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಪಾಲುಗೊಳ್ಳಲು ಸಾಧ್ಯವಾದರೆ ತಾರತಮ್ಯರಹಿತ ಸಾಮಾಜಿಕ ಪರಿಸರ ಸೃಷ್ಟಿ ಸಾಧ್ಯ. ರಾಜಕೀಯದಲ್ಲಿ ಪಾಲುಗೊಳ್ಳಲು ಸಾಧ್ಯವಾಗುವುದೆಂದರೆ ಚುನಾವಣೆಯಲ್ಲಿ ಆಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗುವುದು. ನಮ್ಮ ರಾಜ್ಯದ ಜನಸಂಖ್ಯೆಯ ಶೇ.49ರಷ್ಟು ಮಹಿಳೆಯಿದ್ದಾರೆ. ಇವರ ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ನಮ್ಮ ವಿಧಾನಸಭೆಯಲ್ಲಿ ಶೇ.49ರಷ್ಟು ಅಥವಾ ಕನಿಷ್ಠ 112 ಮಹಿಳಾ ಶಾಸಕರು ಇರಬೇಕು. ಆದರೆ ವಾಸ್ತವ ಚಿತ್ರಣ ಬೇರೆಯೇ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 7 ಮತ್ತು 2013ರಲ್ಲಿ 6 ಜನ ಮಹಿಳೆಯರು ಚುನಾಯಿತರಾಗಿದ್ದಾರೆ. ಸಮ್ಮಿಶ್ರ ಸರಕಾರ ರಚಿಸಿರುವ ಎರಡೂ ಪಕ್ಷಗಳು ಕೂಡ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಿಸಲು ಪ್ರಯತ್ನಿಸಿಯೇ ಇಲ್ಲ. ದಲಿತ ಬುಡಕಟ್ಟುಗಳಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿಗಳಿದ್ದಾರೆ. ಆದರೆ ಇವರನ್ನು ದಲಿತಬುಡಕಟ್ಟುಗಳ ಪ್ರತಿನಿಧಿಗಳೆನ್ನಲು ಸಾಧ್ಯವಿಲ್ಲ. ಏಕೆಂದರೆ ಇವರ ಚುನಾವಣೆಯಲ್ಲಿ ಕೇವಲ ದಲಿತಬುಡಕಟ್ಟುಗಳು ಮಾತ್ರ ಪಾಲುಗೊಳ್ಳುವುದಿಲ್ಲ, ದಲಿತಬುಡಕಟ್ಟೇತರ ಜನರೂ ಪಾಲುಗೊಳ್ಳುತ್ತಾರೆ.

ಚಾರಿತ್ರಿಕವಾಗಿ ಬಂದಿರುವ ತಾರತಮ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಿಲ್ಲ ಎನ್ನುವುದು ಮಿಶ್ರ ಸರಕಾರ ನಡೆಸುವ ಪಕ್ಷಗಳ ಹೆಗ್ಗಳಿಕೆ. ಹಾಗೆಯೇ ಕಡಿಮೆ ಮಾಡಲು ಕೈಗೊಂಡ ಪ್ರತ್ಯೇಕ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಗದಿರುವುದು ಈ ಸರಕಾರದ ಬಹುದೊಡ್ಡ ವೈಫಲ್ಯವಾಗಿದೆ.

ನಮ್ಮಲ್ಲಿ ಶೇ.16ರಷ್ಟು ಅಲ್ಪಸಂಖ್ಯಾತರಿದ್ದಾರೆ. ಇವರಲ್ಲಿ 11 ಮಂದಿ ಅಥವಾ ಶೇ.5ರಷ್ಟು ಪ್ರತಿನಿಧಿಗಳಿದ್ದಾರೆ. ವರ್ಗದ ದೃಷ್ಟಿಯಿಂದ ನೋಡಿದರೆ ಶೇ.99ರಷ್ಟು ಮಂದಿಯ ಆಸಕ್ತಿಯನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಇಲ್ಲ. 2017-18ರಲ್ಲಿ ಕರ್ನಾಟಕದ ತಲಾ ಆದಾಯ ರೂ.174551 ಇತ್ತು. ಒಂದು ಕುಟುಂಬದಲ್ಲಿ ಐದು ಮಂದಿ ಇದ್ದು ಇಬ್ಬರು ದುಡಿಯುತ್ತಾರೆಂದು ಊಹಿಸಿದರೆ ಕುಟುಂಬದ ವಾರ್ಷಿಕ ಆದಾಯ ರೂ.3.5 ಲಕ್ಷದ ಆಸುಪಾಸಿನಲ್ಲಿರುತ್ತದೆ. ವಾರ್ಷಿಕ 3.5 ಲಕ್ಷ ರುಪಾಯಿ ಆದಾಯ ಇರುವ ಎಂಎಲ್‍ಎಗಳು ಬಿಡಿ ಒಂದು ಕೋಟಿಗಿಂತ ಕಡಿಮೆ ಆದಾಯ ಇರುವ ಎಂಎಲ್‍ಎಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಹೀಗೆ ನಮ್ಮ ಸಮಾಜದ ಶೇ.80ರಷ್ಟು ಜನರ ಆಸಕ್ತಿಗಳನ್ನು ಪ್ರತಿನಿಧಿಸುವ ಜನರು ಮಿಶ್ರ ಸರಕಾರದ ಶಾಸನಸಭೆಯಲ್ಲೂ ಇಲ್ಲ. ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ, ಉದ್ಯಮ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿ ನೀತಿಗಳನ್ನು ರೂಪಿಸುವ ಜಾಗದಲ್ಲಿ ಸಮಾಜದ ಎಲ್ಲರೂ ಪಾಲುಗೊಳ್ಳದಿದ್ದರೆ ಚಾರಿತ್ರಿಕವಾಗಿ ಬಂದಿರುವ ಸಾಮಾಜಿಕ ತಾರತಮ್ಯಗಳು ಮುಂದುವರಿಯುತ್ತವೆ. 

ಇಂದು ಶಿಕ್ಷಣ, ಮಾಧ್ಯಮ, ರಾಜಕೀಯ ಪಕ್ಷಗಳು, ಮಠಮಂದಿರಗಳು ಜನರ ಪ್ರಜ್ಞೆಯನ್ನು ಅಥವಾ ಸಂಸ್ಕೃತಿಯನ್ನು ರೂಪಿಸುತ್ತಿವೆ. ಇವು ‘ನಮ್ಮ ಸಂಸ್ಕೃತಿ’ ಹೆಸರಲ್ಲಿ ಸಂವಿಧಾನ ವಿರೋಧಿ ಮೌಲ್ಯಗಳನ್ನು (ಅಸಮಾನತೆ, ಅಸ್ವಾತಂತ್ರ್ಯ, ಅಭ್ರಾತೃತ್ವ ಮೌಲ್ಯಗಳನ್ನು) ನೇರವಾಗಿ ಮತ್ತು ಪರೋಕ್ಷವಾಗಿ ಜನರ ಪ್ರಜ್ಞೆಯ ಭಾಗ ಮಾಡುತ್ತಿವೆ. ಸಂವಿಧಾನ ವಿರೋಧಿ ಮೌಲ್ಯಗಳು ತಳಸ್ತರದ ಜನರ ಅಭಿವೃದ್ಧಿ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತವೆ. ಈ ಸಂಸ್ಥೆಗಳ ಇಂತಹ ಪ್ರಯತ್ನವನ್ನು ಹತೋಟಿಯಲ್ಲಿಡಲು ಮಿಶ್ರ ಸರಕಾರ ಪ್ರಯತ್ನಿಸಿದ್ದು ವಿರಳ. ಒಟ್ಟಾರೆಯಾಗಿ ಹೇಳುವುದಾದರೆ ಚಾರಿತ್ರಿಕವಾಗಿ ಬಂದಿರುವ ತಾರತಮ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಿಲ್ಲ ಎನ್ನುವುದು ಮಿಶ್ರ ಸರಕಾರ ನಡೆಸುವ ಪಕ್ಷಗಳ ಹೆಗ್ಗಳಿಕೆ. ಹಾಗೆಯೇ ಕಡಿಮೆ ಮಾಡಲು ಕೈಗೊಂಡ ಪ್ರತ್ಯೇಕ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಗದಿರುವುದು ಈ ಸರಕಾರದ ಬಹುದೊಡ್ಡ ವೈಫಲ್ಯವಾಗಿದೆ.

*ಲೇಖಕರು ಮಂಗಳೂರಿನವರು, ಹಂಪಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಪ್ರಕಟಿತ ಕೃತಿಗಳು: ರಾಜಕೀಯ ಬಡತನ, ಪರಿಸರ ಮತ್ತು ಅಭಿವೃದ್ಧಿ, ದೇಶಿಯತೆಯ ನೆರಳಲ್ಲಿ ವಿಕೇಂದ್ರೀಕರಣ, ಸ್ವದೇಶಿ ಒಂದು ವಿಶ್ಲೇಷಣೆ, ಜಂಟಿ ಅರಣ್ಯ ನಿರ್ವಹಣೆ, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧಕರು ಮತ್ತು ಕ್ಷೇತ್ರಕಾರ್ಯ, ಸಂಶೋಧನ ಪ್ರಸ್ತಾವ, ಕರಾವಳಿ ಕರ್ನಾಟಕದ ಕೋಮುವಾದ, ಸಂಶೋಧನೆ ಏನು? ಏಕೆ? ಹೇಗೆ?

One Response to " ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ!

ಡಾ.ಎಂ.ಚಂದ್ರ ಪೂಜಾರಿ

"

Leave a Reply

Your email address will not be published.