ಆರಕ್ಕೇಳದ ಮೂರಕ್ಕಿಳಿಯದ ಸರ್ಕಾರ ಕಾಣದ ಅಡಿಗಲ್ಲು-ರಿಬನ್ ಕಟ್!

ಯಡಿಯೂರಪ್ಪನವರ ಸಾಧನೆ ಕಳಪೆ ಏನಲ್ಲ. ಆದರೆ, ಉತ್ತಮ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಭಿನ್ನಮತೀಯರು ಮತ್ತು ಪಕ್ಷಾಂತರಿಗಳನ್ನು ನಿಭಾಯಿಸಿ ಕಾಲದೂಡುವುದು ಹೇಗೆನ್ನುವ ನಿಟ್ಟಿನಲ್ಲಿ ಅವರ ಸಾಧನೆ ರಾಜಕೀಯ ಶಾಸ್ತದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅಧ್ಯಾಯ!

-ರಮಾನಂದ ಶರ್ಮಾ

ಅತಿವೃಷ್ಟಿ, ಭಿನ್ನಮತ ಮತ್ತು ಕೋವಿಡ್ ಮಧ್ಯೆ ಗದ್ದುಗೆ ಏರಿದ ಯಡಿಯೂರಪ್ಪನವರಿಗೆ ಸಿಂಹಾಸನ ಮುಳ್ಳಿನ ಹಾಸಿಗೆ ಆಗಿದೆಯೇ ವಿನಾ, ಒಂದೇ ಒಂದು ದಿನ ಹೂವಿನ ಹಾಸಿಗೆಯಾಗಲಿಲ್ಲ. ವಿಪರ್ಯಾಸವೋ ಅಥವಾ ವಿಚಿತ್ರವೋ, ಅಧಿಕಾರ ಸ್ವೀಕರಿಸಿದ ದಿನದಿಂದ ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವ ವದಂತಿಗಳ ಮಧ್ಯೆ ನ್ಯೂಸ್ ಚಾನೆಲ್ ಗಳು ಅವರ ರಾಜೀನಾಮೆ ದಿನಾಂಕನ್ನು ಸದಾ ಘೋಷಿಸುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಮತ್ತು ಸಂದಿಗ್ಧತೆಯಲ್ಲಿ ಅವರ ಇನಿಂಗ್ಸ್ ಅರಂಭವಾಯಿತು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ವಿಶೇಷ ಅಧ್ಯಾಯ ಎನ್ನಬಹುದು.

ಸ್ವಪಕ್ಷೀಯರೇ ಕಾಲೆಳೆಯುತ್ತಿರವಾಗ, ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಹಸ್ತ ಸಿಗದಿರುವಾಗ, ರಾಜ್ಯದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ರಾಜ್ಯದ ಹಿತದೃಷ್ಟಿಯಲ್ಲಿ ಪರಿಣಾಮಕಾರಿ ಹೋರಾಟದ ಬದ್ಧತೆ ತೋರಿಸದಿರುವಾಗ ಯಡಿಯೂರಪ್ಪನವರು, ಇಷ್ಟುದಿನ ಬಂಡಿ ಉರುಳಿಸುತ್ತಿರುವುದೇ ಒಂದು ಸಾಧನೆ ಎನ್ನಬಹುದು. ಹಲವು ತಿಂಗಳ ಕಾಲ ಅವರಿಗೆ ಸಚಿವ ಸಂಪುಟವೇ ಇಲ್ಲದೇ one man army ಯಂತೆ ರಾಜ್ಯಾದ್ಯಂತ ಈ ಇಳಿವಯಸ್ಸಿನಲ್ಲಿ ಕಾಲಿಗೆ ಚಕ್ರ ಸುತ್ತಿಕೊಂಡಿರುವಂತೆ ಅಡ್ಡಾಡಿ ರಾಜ್ಯಭಾರ ಮಾಡಿರುವುದು ಸಣ್ಣ ಸಾಹಸವಲ್ಲ ಮತ್ತು ಸಾಧನೆಯೂ ಅಲ್ಲ.

ನೈಸರ್ಗಿಕ ವಿಪತ್ತು, ಮುಖ್ಯವಾಗಿ ನೆರೆಹಾವಳಿ ಸಮಯದಲ್ಲಿ ಅವರು ಏಕಾಂಗಿಯಾಗಿ ಸೆಣೆಸಿದ್ದನ್ನು ಅವರ ಕಟ್ಟಾ ವಿರೋಧಿಗಳು ಕೂಡಾ ಕೊಂಡಾಡು ತ್ತಾರೆ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಷಯದಲ್ಲಿ ಪಕ್ಷದ ವರಿಷ್ಠರು ಆಟವಾಡಿಸುತ್ತಿರುವಾಗ, ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವ ವಿಷಯ ಎಂದು ಹೇಳುತ್ತಲೇ ವರಿಷ್ಠರು ಇವರ ಕೈ ಕಟ್ಟಿಹಾಕಿದಾಗಲೂ, ಸ್ವತಃ ಮುಂಗೋಪಿಯಾದರೂ ತಾಳ್ಮೆ ಕಳೆದುಕೊಳ್ಳದೇ ಅನಿವಾರ್ಯತೆಯನ್ನು ನಿಭಾಯಿಸಿದ್ದು ಮತ್ತು ಕೊನೆಗೆ ಸಚಿವ ಪದವಿಯನ್ನು ಕೊಡುತ್ತೇನೆಂದು ಎಲ್ಲರನ್ನೂ ಸಂತೈಸಿ ಪೀಠ ಉಳಿಸಿಕೊಂಡಿದ್ದು ಅವರ ಸಾಧನೆಯ ವಿಶೇಷತೆ. ಅವರ ಸಾಧನೆಯ ಅಂಕಿಅಂಶಗಳು ಏನೇ ಇರಲಿ, ಅವರ ಅಧಿಕಾರದಲ್ಲಿ ಬದುಕುಳಿಯುವ ತಂತ್ರವು (art of survival) ಜನತೆಯಿಂದ ಬಹುಪರಾಕು ಗಳಿಸಿದೆ. 75 ವಸಂತಗಳನ್ನು ದಾಟಿದವರು ರಾಜಕೀಯ ಅಧಿಕಾರ ಹೊಂದಬಾರದು ಎನ್ನುವ ಪಕ್ಷದ ತತ್ವಸಿದ್ಧಾಂತ ಆದ್ವಾಣಿ ಮತ್ತು ಮುರಳಿ ಮನೋಹರ ಜೋಷಿಯಂತವರನ್ನು ಗದ್ದುಗೆಯಿಂದ ದೂರ ಇರಿಸಿದಾಗ, ಇವರು ಗದ್ದುಗೆ ಏರಿದ್ದು ಸಾಧಾರಣ ಸಾಧನೆ ಅಲ್ಲ ಎನ್ನಬಹುದು.

ಅವರು ಅಂದುಕೊಂಡಷ್ಟು ಸಾಧಿಸಿಲ್ಲ ಎನ್ನುವುದು ಸತ್ಯವಾದರೂ, ಅವರಿಗೆ ಸಾಧಿಸಲು ಬೇಕಾದ ವಾತಾವರಣ ಮತ್ತು ಸಪೋರ್ಟ್ ಇರಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರ ಸುಮಾರು ಎರಡು ವರ್ಷದ ಆಡಳಿತದಲ್ಲಿ ಸುಮಾರು ಒಂದೂವರೆ ವರ್ಷ ಪೂರ್ಣ ಪ್ರಮಾಣದ ಸಚಿವ ಸಂಪುಟವೇ ಇರಲಿಲ್ಲ. ಭಿನ್ನಮತೀಯ ಚಟುವಟಿಕೆಗಳ ನಿಯಂತ್ರಣ ಮತ್ತು ಸಚಿವ ಸಂಪುಟ ವಿಸ್ತರಣೆ-ಪುನರಚನೆ ಬಗೆಗೆ ಅವರ ಶಕ್ತಿ ವ್ಯಯವಾಗಿದ್ದು ಸಾರ್ವಜನಿಕ ರಹಸ್ಯ. ಹಾಗೆಯೇ ಅವರು “ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು” ಎಂದು ಸದಾ ಜಪಿಸುತ್ತಿದ್ದರೂ ಅವರ ಕಾರ್ಯ ವೈಖರಿಯಲ್ಲಿ ಅದು ಎದ್ದು ಕಾಣಲಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಎಚ್.ಎಂ.ಟಿ. (ಹಾಸನ- ಮಂಡ್ಯ-ತುಮಕೂರು) ಮಂತ್ರಿಮಂಡಳ ಎಂದು ಅಪಾದಿಸುತ್ತಿದ್ದರು. ಈಗ ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲೆ ಮುಖ್ಯಮಂತ್ರಿ ಎನ್ನುವ ಅರೋಪ ಕೇಳಿಬರುತ್ತಿದೆ. ಶಿವಮೊಗ್ಗಾ ಜಿಲ್ಲೆಯ ಪ್ರತಿನಿಧಿಯಾಗಿ ಅವರು ಆ ಜಿಲ್ಲೆಗೆ ಪುನಃ ಪುನಃ ಭೇಟಿ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಅವರು at the drop of a hat ಶಿವಮೊಗ್ಗಾ ಜಿಲ್ಲೆಯಲ್ಲಿ ಕಾಣುತ್ತಾರೆ. ಒಂದು ಸಣ್ಣ ಸಮಾರಂಭದಲ್ಲೂ ಅವರ ಉಪಸ್ಥಿತಿ ಕಾಣುತ್ತದೆ ಎನ್ನುವ ಟೀಕೆ ಕೇಳಿಬರುತ್ತಿದೆ. ಅವರು ಎಲ್ಲಾ 31 ಜಿಲ್ಲೆಗಳಿಗೆ ಭೇಟಿ ನೀಡಿರುವ ಬಗೆಗೆ ಸಂದೇಹ ಇದೆ.

ರಾಜ್ಯದಲ್ಲಿ ಅದೆಷ್ಟೋ ರೈಲು ಯೋಜನೆಗಳು ನಿರ್ಮಾಣದ ವಿವಿಧ ಹಂತದಲ್ಲಿದ್ದು, ಅನುದಾನಕ್ಕಾಗಿ ಮತ್ತು ಕಾನೂನು ಹೋರಾಟದಿಂದ ಮುಕ್ತಿಗಾಗಿ ಕಾಯುತ್ತಿರುವಾಗ, ಶಿವಮೊಗ್ಗಾ-ಶಿಕಾರಿಪುರ-ರಾಣಿಬೆನ್ನೂರು ಮಾರ್ಗ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಹಾಗೆಯೇ ದಶಕಗಳಿಂದ ನೆನೆಗುದಿಗೆಗೆ ಬಿದ್ದ ಶಿವಮೊಗ್ಗಾ ವಿಮಾನ ನಿಲ್ದಾಣದಲ್ಲಿ ಸದ್ಯದಲ್ಲಿಯೇ ವಿಮಾನ ಹಾರಿದರೆ, ವಿಜಾಪೂರ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಬಿದ್ದು ತಿಂಗಳಾಗಿದೆ. ಈ ಜಿಲ್ಲೆಯಲ್ಲಿ ಬೆಂಗಳೂರಿನ ಕಿದ್ವಾಯಿ ಮಾದರಿಯಲ್ಲಿ ಒಂದು ಕ್ಯಾನ್ಸರ್ ಆಸ್ಪತ್ರೆ, ಆಯುರ್ವೇದ ವಿಶ್ವವಿದ್ಯಾಲಯ, ವರ್ತುಲ ರಸ್ತೆ, ರೈಲು ಮೇಲು ಸೇತುವೆ ಆಗುತ್ತಿವೆ. ಬೆಸ್ಕಾಮ್, ಹೆಸ್ಕಾಮ್ ಮತ್ತು ಮೆಸ್ಕಾಮ್ ಮಾದರಿಯಲ್ಲಿ ಶಿಸ್ಕಾಮ್ ಕೂಡಾ ಬರುತ್ತಿದೆ. ಅವರಿಗೆ ಶಿವಮೊಗ್ಗಾ ರಾಣಿಬೆನ್ನೂರು ರೈಲು ಮಾರ್ಗದ ಅಗತ್ಯ ಕಂಡು ಬಂದಿತೇ ವಿನಾ ಹಿನ್ನಾಡಿನ ಅಭಿವೃದ್ಧಿಗೆ ಕಾರಣವಾಗಬಲ್ಲ ತಾಳಗುಪ್ಪಾ ಹೊನ್ನಾವರ ರೈಲು ಯೋಜನೆ ಕಾಣಲಿಲ್ಲ ಎನ್ನುವ ಟೀಕೆ ಕೇಳಿಬರುತ್ತಿದೆ. ಹೊಸ ಜಿಲ್ಲೆಗಳ ರಚನೆಯ ವಿಷಯ ಮುನ್ನೆಲೆಗೆ ಬಂದಾಗ ಶಿಕಾರಿಪುರ ಜಿಲ್ಲೆ ಅದ್ಯತೆಯಲ್ಲಿ ಅಗಬಹುದು ಎನ್ನುವ ಮಾತೂ ಕೇಳಿಬರುತ್ತಿದೆ.

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಯಾವಾಗಲೂ ರಾಜ್ಯವನ್ನು ‘ಬರ’ ಕಾಡುತ್ತಿತ್ತಂತೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸದಾ ‘ಅತಿವೃಷ್ಟಿ’ ಕಾಡುತ್ತದೆ ಎನ್ನುವಲ್ಲಿ ಅರ್ಥವಿದೆ. ಅವರು ಇದನ್ನು ನಿಭಾಯಿಸುವುದರಲ್ಲಿ ಸುಸ್ತಾಗಿದ್ದಾರೆ. ಕೇಂದ್ರ ಸರ್ಕಾರದಿಂದ ಆಶ್ವಾಸನೆ ದೊರಕಿತೇ ವಿನಾ ಅರ್ಥಿಕ ನೆರವು ದೊರಕಲಿಲ್ಲ. ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ದೊರಕಿದ ಅಷ್ಟಷ್ಟು ನೆರವಿನಲ್ಲಿ ತೃಪ್ತಿಯಾಗುವಂತೆ ಮ್ಯಾನೇಜ್ ಮಾಡಿದರು. ಅವರ ಓಟಕ್ಕೆ ಈ ಬ್ರೇಕ್ ಸಾಕಾಗದು ಎನ್ನುವಂತೆ ಕೊರೊನಾ ಆವರಿಸಿದ್ದು, ಅವರು ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಲಕ್ಷ್ಯ ವಹಿಸದಂತೆ ಮಾಡಿತು. ಅಂತೆಯೇ ಕಳೆದ ಒಂದೆರಡು ವರ್ಷ ರಾಜ್ಯದಲ್ಲಿ ಅಡಿಗಲ್ಲು ಅಥವಾ ರಿಬನ್ ಕಟ್ ಸಮಾರಂಭ ಕಾಣಲಿಲ್ಲ.

ಉದ್ಯಮ ಮಂತ್ರಿಗಳು ಪ್ರತೀ ಸಮಾರಂಭದಲ್ಲಿ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಅದರೆ, ಉತ್ಪನ್ನ ಮತ್ತು ಉದ್ಯೋಗ ಸೃಷ್ಟಿ ಮರೀಚಿಕೆಯಾಗಿ ಕಾಣುತ್ತಿದೆ. ಸರ್ಕಾರ ಸಂಕಟ ಕಾಲದಲ್ಲಿದೆ ಎಂದು ತಿಳಿದೂ, ಅಂಗನವಾಡಿ ಕಾರ್ಯಕರ್ತೆಯರಿಂದ ಹಿಡಿದು ವೈದ್ಯರು ಮತ್ತು ಸಾರಿಗೆ ನೌಕರರ ವರೆಗೆ ಇದೇ ಸಕಾಲವೆಂದು ಎಲ್ಲರೂ ಮುಷ್ಕರಹೂಡಿ ಸರ್ಕಾರದ ಇಮೇಜನ್ನು ಸಾಕಷ್ಟು ಡ್ಯಾಮೇಜ್ ಮಾಡಿದರು. ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದರು. ಒಂದು ಸಮಸ್ಯೆಯನ್ನು ಪರಿಹಾರ ಮಾಡಿ ನಿಟ್ಟುಸಿರು ಬಿಡುತ್ತಿರುವಂತೆ ಇನ್ನೊಂದು ಸಮಸ್ಯೆ ಧುತ್ತೆಂದು ಯಡಿಯೂರಪ್ಪನವರ ಮೇಲೆ ಎರಗಿಬೀಳುತ್ತಿದೆ.

ಸಚಿವ ಸಂಪುಟದಲ್ಲಿ 32 ಜನರಿದ್ದರೂ, ವಾಸ್ತವದಲ್ಲಿ 2-3 ಜನ ಮಂತ್ರಿಗಳು ಮೇಲ್ಮೆಯಲ್ಲಿ ಕಾಣುತ್ತಾರೆ. ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ವಿಳಂಬದ ಮಾತು ಭಾರೀ ಕೇಳಿಬರುತ್ತಿದೆ. ಹಾಗೆಯೇ ರಾಷ್ಟç ರಾಜಧಾನಿ ದೆಹಲಿಯಲ್ಲಿ ಕನ್ನಡಿಗರ ಮಾತು ಕೇಳುತ್ತಿಲ್ಲ ಎನ್ನುವ ದೂರಿಗೆ ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಿದೆ. ಕೇವಲ ಎರಡು ಸಂಸದರನ್ನು ಹೊಂದಿರುವ ಮತ್ತು ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆಯಂತಿರುವ ಗೋವಾ ರಾಜ್ಯ ಕರ್ನಾಟಕದ ಮುಂದೆ ಎದೆ ಉಬ್ಬಿಸಿ ನಿಲ್ಲುತ್ತಿದೆ. ಕನ್ನಡಿಗರ ಭಾವನೆಗಳನ್ನು ಹತ್ತಿಕ್ಕಿ ನಿರ್ಲಕ್ಷಿಸಿ ಹಿಂದಿ ಭಾಷೆಯನ್ನು ಹೇರಿದರೂ ಪ್ರತಿಭಟಿಸಿ ಕನ್ನಡಿಗರ ಆತ್ಮಾಭಿಮಾನವನ್ನು ಎತ್ತಿ ಹಿಡಿಯುವ ಪ್ರಯತ್ನವಾಗಲಿಲ್ಲ. ಒಟ್ಟಾರೆಯಾಗಿ ಯಡಿಯೂರಪ್ಪನವರ ಸಾಧನೆ ಕಳಪೆ ಏನಲ್ಲ. ಆದರೆ, ಉತ್ತಮ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಭಿನ್ನಮತೀಯರು ಮತ್ತು ಪಕ್ಷಾಂತರಿಗಳನ್ನು ನಿಭಾಯಿಸಿ ಕಾಲದೂಡುವುದು ಹೇಗೆನ್ನುವ ನಿಟ್ಟಿನಲ್ಲಿ ಅವರ ಸಾಧನೆ ರಾಜಕೀಯ ಶಾಸ್ತದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅಧ್ಯಾಯ ಎನ್ನಬಹುದು.

Leave a Reply

Your email address will not be published.