ಆರಾಮಾಗಿ ಮಗುವಿನಂತೆ ನಿದ್ರಿಸಿ!

ಚೂಟಿ ಚಿದಾನಂದ

ಸಂಗ್ಯಾನ ಅಪ್ಪ, ‘ಬಾರ್ಲೆ ಊರೀಗೆ ಹೋಗಾನ ಸ್ವಲ್ಪ ಕೆಲ್ಸ ಐತಿಅಂತಾ ಕರ್ಕೊಂಡು ಹೋಗಿ ಒಂದು ವಾರ್ದಾಗ ಸಂಗ್ಯಾಗ ಅವ್ರ ಬಳಗದ ಹುಡುಗೀನ ಮದ್ವಿಮಾಡಿ ಬಿಟ್ಟಿದ್ದ. ಸೈನ್ಯಕ್ಕ ಸೇರಿ ಹೊಡದಾಡಿ ಸಾಯೋಬದ್ಲು ಮದ್ವಿ ಮಾಡ್ಕೊಂಡು ಸಂಸಾರದಲ್ಲಿ ಸಾಯಿ ಅಂತಾ ಹೇಳಿದ್ನಂತೆ!

ನಮ್ಮ ಗೆಳೆಯಾ ಸಂಗ್ಯಾ ನಾವು ಒಂದಾ ಊರಾಗ ಸಾಲಿ ಕಲ್ತೋರು. ನಾವು 8ನೇ ಕ್ಲಾಸಿಗೆ ಬಂದಾಗ ನಮ್ಮೂರಾಗ ಹೈಸ್ಕೂಲ್ ಇರ್ಲಿಲ್ಲ, ಅದ್ಕಾ ನಮ್ಮನ್ನ ಮಗ್ಗಲ ಪ್ಯಾಟಿಗಿನ ಹೈಸ್ಕೂಲಿಗೆ ಸೇರ್ಸಿ ಹಾಸ್ಟೆಲ್ದಾಗ ಬಿಟ್ರು. ನಾವು ಹಾಸ್ಟೆಲ್ಲದಾಗ ಮಾತಾಡ್ತಾ ಕುಂತಾಗ, ನಾ ಓದಿದಮ್ಯಾಲ ಅದು ಆಕೀನಿ, ಇದು ಆಕೀನಿ ಅಂತಾ ಮಾತಾಡ್ತಿದ್ವಿ, ನಮ್ಮ ಸಂಗ್ಯಾ ಮಾತ್ರ ನಾ ಸೈನಿಕ ಆಕೀನಿ ಅಂದಿದ್ದ. ಸಂಗ್ಯಾರ ಅಪ್ಪ ಊರಾಗ ದೊಡ್ಡ ಸೌಕಾರ, ಹತ್ತು ಕೂರ್ಗಿ ಎರಿ ಹೊಲ, ಎಂಟೆತ್ತಿನ ಕಮತ ಇತ್ತು. ಸಂಗ್ಯಾಗ ಏಳು ಜನ ಅಕ್ಕಂದ್ರು, ಅವರಪ್ಪ ಬರೀ ಹೆಣ್ಣಾ ಹುಟ್ಟ್ಯಾವ ಅಂತಾ ಸಂಗಪ್ಪಗ ಹರಿಕಿ ಹೊತ್ತದ್ದಕ್ಕ ನಮ್ಮ ಸಂಗ್ಯಾ ಹುಟ್ಟಿದ್ನಂತೆ, ಅದಕಾ ಅವ್ನಿಗೆ ಸಂಗಣ್ಣ ಅಂತಾ ಹೆಸ್ರು ಇಟ್ರಂತೆ.

ಸಂಗ್ಯಾ ಸೈನಿಕ ಆಕೀನಿ ಅಂತಾ ಅಂದ ಸುದ್ದಿ ಅವ್ರಪ್ಪನ ಕಿವ್ಯಾಗ ಅದ್ಹೆಂಗೋ ಬಿತ್ತು. ಇರಾಕ ಒಬ್ಬ ಮಗ ಸೈನ್ಯಕ್ಕ ಸೇರಿಬಿಟ್ರ ವಂಶ ಬೆಳಿಯೋದು ಹೆಂಗ ಅಂತಾ ಅವ್ರಪ್ಪ ಚಿಂತ್ಯಾಗ ಬಿದ್ದು ಒಂದು ಮಧ್ಯಾಹ್ನದಾಗ ನಾವು ಸಾಲಿಗೆ ಹೋದಾಗ ಸಂಗ್ಯಾನ ಅಪ್ಪ ಜೀಪಿನಾಗ ನಾವಿದ್ದ ಹಾಸ್ಟೆಲ್ಗೆ ಬಂದು ಸಂಗ್ಯಾನ ಹಾಸ್ಗಿ, ಬಟ್ಟಿ, ಟ್ರಂಕ್, ಜೀಪಿಗೆ ಹಾಕ್ಕೊಂಡು ಸೀದಾ ನಮ್ಮ ಹೈಸ್ಕೂಲ್ಗೆ ಬಂದು ಸಂಗ್ಯಾ ಬಾರ್ಲೆ ಊರೀಗೆ ಹೋಗಾನ ಸ್ವಲ್ಪ ಕೆಲ್ಸ ಐತಿ ಅಂತಾ ಕರ್ಕೊಂಡು ಹೋಗಿ ಒಂದು ವಾರ್ದಾಗ ಸಂಗ್ಯಾಗ ಅವ್ರ ಬಳಗದ ಹುಡುಗೀನ ಮದ್ವಿಮಾಡಿ ಬಿಟ್ಟಿದ್ದ. ಸೈನ್ಯಕ್ಕ ಸೇರಿ ಹೊಡದಾಡಿ ಸಾಯೋಬದ್ಲು ಮದ್ವಿ ಮಾಡ್ಕೊಂಡು ಸಂಸಾರ ಮಾಡು ಅಂತಾ ಹೇಳಿದ್ನಂತೆ. ಗಂಡಸ್ರು ಎಲ್ರೂ ಧೈರ್ಯವಂತರಾಗಿರ್ತಾರಂತೆ, ಹೆಚ್ಚು ಧೈರ್ಯವಂತ್ರು ಸೈನ್ಯಕ್ಕೆ ಸೇರಿ ದೇಶಸೇವೆ ಮಾಡ್ತಾರಂತೆ, ಕಡಿಮೆ ಧೈರ್ಯವಂತ್ರು ಮದ್ವಿ ಮಾಡ್ಕೊಂಡು ಜೀವ್ನಪೂರ್ತಿ ಹೊಡದಾಡ್ಕೊಂತಾ ಸಾಯ್ತಾರ ಅನ್ನೋದನ್ನ ನಾನು ಎಲ್ಲೋ ಓದಿದ ನೆನಪು.

ನಾವು ಐದು ಜನ ಡಿಗ್ರಿ ಮುಗ್ಸಿ ಅಲ್ಲಿ ಇಲ್ಲಿ ಕೆಲ್ಸಕ್ಕ ಸೇರಿದ್ವಿ, ನಾವು ಓದು ಮುಗ್ಸಿ ಕೆಲ್ಸ ಹುಡ್ಕೋದ್ರಾಗ ಸಂಗ್ಯಾಗ ಐದು ಮಕ್ಳು ಆಗಿದ್ವು. ಹಳೇ ಗೆಳೆಯಾರ ಬಳಗ ಸೇರಿದ್ವಿ ಅಂದ್ರಾ ಅವನೌವ್ನ ಅದ್ರ ಮಜಾನಾ ಬ್ಯಾರೆ. ನಾವೆಲ್ಲಾ ಕೂಡಿ ಬೆಂಗ್ಳೂರು ಹತ್ರದಾಗಿನ ಒಂದು ರೆಸಾರ್ಟ್ನ್ಯಾಗ ಎಳ್ಡು ರಾತ್ರಿ ಕಳೀಬೇಕು ಅಂತಾ ತೀರ್ಮಾನ ಮಾಡಿ ಸಂಗ್ಯಾನಿಗೂ ಬರಾಕ ಹೇಳಿದ್ವಿ. ಸಂಗ್ಯಾನೂ ಊರಿನ್ಯಾಗ ಬರೀ ಹೊಲ, ಮನೀ, ಮಕ್ಳು ಅನ್ನೋ ಜಂಜಾಟದಾಗ ಸಾಕಾಗೈತಿ, ನಾ ಬರ್ತೀನಿ ಅಂದಾ. ಅವ್ರ ಊರಿನ ಮಗ್ಗಲಾಗಿನ ಪ್ಯಾಟಿಗೆ ಹೋಗಿ ಬೆಂಗ್ಳೂರ್ಗೆ ರಾತ್ರಿ ಹೋಗೋ ಐರಾವತ ಕ್ಲಬ್ಕ್ಲಾಸ್ ಬಸ್ ಹತ್ತಿದ್ನಂತೆ.

ಅವ್ನ ಜೀವನ್ದಾಗ ಮೊದ್ಲಸಲ ಐರಾವತ ಬಸ್ ಹತ್ತಿದ್ನಂತೆ. ಐರಾವತ ಬಸ್ನ್ಯಾಗ ಬೆಂಗ್ಳೂರ್ಗೆ ಹೊಂಟಾನ ಅಂದ್ರ ಸಮ್ನಾ ಹೋಗಾಕ ಅಕೈತೇನು, ಮೂರಾ ಮೂರು ಬೀರು ಮತ್ತ ದಾರ್ಯಾಗ ಸಿಕ್ಕ ಗೆಳಿಯಾನ ಜೊತೀಗೆ ಒಂದು ಕ್ವಾರ್ಟರ್ ಕುಡ್ದು ಉಂಡು ಬಸ್ ಹತ್ತಿದ್ನಂತೆ. ಬಸ್ಸಿನ್ಯಾಗ ಅವ್ನೀಗೆ ಕಿಡಿಕಿ ಮಗ್ಲಾಗಳ ಸೀಟು ಸಿಕ್ಕಿತ್ತಂತೆ, ಸೀಟಿನ್ಯಾಗ ಕುಂತು ಬ್ಯಾಗ ಇಟ್ಕೊಂಡು ಬಸ್ ಹತ್ತೋ ಮಂದೀನ ಪಿಳಿ ಪಿಳಿ ನೋಡ್ಕೊಂತಾ ಕುಂತ್ನಂತೆ. ಬಸ್ ಫುಲ್ ಆಗಿತ್ತಂತೆ, ಇನ್ನೇನು ಬಸ್ ಬಿಡತೈತಿ ಅನ್ನೋದ್ರಾಗ ಒಬ್ಬ ಹೆಣ್ಮಗ್ಳು ಬಂದು ಸಂಗ್ಯಾನ ಹಿಂದಿನ ಸೀಟಿನ್ಯಾಗ ಕುಂತ್ಲಂತೆ, ನೋಡಾಕ ಒಂದೀಟು ಛಂದ ಇದ್ಲಂತ, ನಮ್ಮ ಸಂಗ್ಯಾಗ ಸೀಟಿನಾಗ ಕುಂತಿದ್ದೊಂದೆ ನೆಪ್ಪು, ಯಾವಾಗ ನಿದ್ದಿ ಹತ್ತಿತ್ತೋ ಗೊತ್ತಿಲ್ಲಂತೆ.

ಒಂದು ಸರ್ವೊತ್ತಿನ್ಯಾಗ ಸಂಗ್ಯಾನ ಹಿಂದಿನ ಸೀಟಿನ್ಯಾಗ ಕುಂತಿದ್ದ ಹೆಣ್ಮಗ್ಳು ಬಸ್ ನಿಲ್ಸ್ರೀ, ಬಸ್ ನಿಲ್ಸ್ರೀ ಅಂತಾ ಕೂಗಾಕ ಹತ್ತಿದ್ಲಂತೆ. ಬಸ್ ನಿಲ್ಲ್ಸಿ, ಲೈಟ್ ಹಾಕಿ ಕಂಡಕ್ಟರ ಎಲ್ರೂ ಹೆಣ್ಮಗ್ಳ ಹತ್ರ ಹೊಂಟ್ರಂತೆ. ಏನಾತು ಅಂತಾ ಆಕೀನ ಕೇಳಾದ್ರಾಗ ಆಕೀನೆ, ನೋಡ್ರಿ ಇಲ್ಲಿ ಉಚ್ಚಿ ವಾಸ್ನಿ ಹೊಡಿಯಾಕ ಅತ್ತೈತಿ, ಕೆಳಾಗ ನನ್ನ ಸೀರಿ ಬ್ಯಾಗ ಎಲ್ಲಾ ತೋದು ತಪ್ಡಿ ಆಗ್ಯಾವ ಅಂತಾ ಬ್ಯಾಗ ಹಿಡ್ಕೊಂಡು ಎದ್ದುಬಂದ್ಲಂತೆ, ಹಿಂದಿನ ಮುಂದಿನ ಸೀಟಿನ್ಯಾರು ಸೀಟು ಬಿಟ್ಟು ಎದ್ದು ಬಂದ್ರಂತೆ. ಉಚ್ಚಿ ಎಲ್ಲಿಂದ ಬಂದಾವ ಅಂತಾ ಕಂಡಕ್ಟರ ಬಗ್ಗಿ ನೋಡಾಕ ಹತ್ತಿದಾಗ ಅವು ಸಂಗ್ಯಾನ ಸೀಟಿನಿಂದ ಇಳದಿದ್ದವಂತೆ.

ಸಂಗ್ಯಾನ ಎಬ್ಸಿದ ಕಂಡಕ್ಟರ ಯಾಕ್ರೀ ಸೀಟಿನ ಮ್ಯಾಲ ಉಚ್ಚೀ ಹೊಯ್ದೀರಿ, ಎಳ್ಡು ಕಡೀ ಅದಕಾಗೆ ಬಸ್ ನಿಲ್ಸಿದ್ವಿ ಅಲ್ಲೇ ಹೋಗ್ಬಹುದಿತ್ತಲ್ಲಾ, ಇಲ್ಲಾ ಬಸ್ ನಿಲ್ಲಿಸ್ರಿ ಅಂತಾ ಕೇಳಿದ್ರ ಬಸ್ ನಿಲ್ಲಿಸ್ತಿದ್ವಿ ಅಂದ್ನಂತೆ. ಸಂಗ್ಯಾ ತನ್ನ ಲುಂಗಿ ನೋಡ್ಕೊಂಡು ಇವ್ನನೌವ್ನಾ ನಾ ಕುಡ್ದ ಮೂರು ಬೀರು, ಗೆಳಿಯಾ ಕುಡ್ಸಿದ ಕ್ವಾರ್ಟರ್ ಮತ್ತ ಕಂಡಕ್ಟ್ರ ಕೊಟ್ಟ ನೀರಿನ ಬಾಟ್ಲಿ ಎಡವಟ್ಟ ಮ್ಯಾಡ್ಯಾವ ಅಂದ್ಕೊಂಡು, ಹೇ ನೀರು ಚೆಲ್ಲಿರ್ಬೇಕು ಅಂತಾ ನೀರ್ನ ಖಾಲಿ ಬಾಟ್ಲಿ ತೋರ್ಸಿದ್ನಂತೆ. ಹೆಣ್ಮಗ್ಳು, ಹೇ ಅವು ನೀರಲ್ಲಾ ಉಚ್ಚೀನೇ, ಉಚ್ಚೀ ವಾಸ್ನಿ ಹೊಡೀತೈತಿ ಅಂದ್ಲಂತೆ. ಹೆಂಗ್ಸ್ರ ಮೂಗು ನಾಯಿ ಮೂಗು ಇದ್ಹಾಂಗ ಭಾಳ ಚುರ್ಕು ಇರ್ತಾವ, ಗಂಡ ಇವತ್ತು ಏನು ಕುಡ್ದ ಬಂದಾನ ಅನ್ನೋದನ್ನಾ ಬರೀ ವಾಸ್ನಿ ಹಿಡ್ದು ಹೇಳಿಬಿಡ್ತಾರ ಅನ್ನೋದು ಸಂಗ್ಯಾಗೂ ಗೊತ್ತಿತ್ತು, ಅದಕಾ ಆಕಿ ಅವು ನೀರಲ್ಲ ಉಚ್ಚೀನೇ ಅಂತಾ ಬರೀ ವಾಸ್ನಿ ಹಿಡ್ದ ಹೇಳಿದ್ಲಂತೆ.

ಸಂಗ್ಯಾ 8ನೇ ಕ್ಲಾಸು ಮುಗುಸ್ದೇ ಇದ್ರೂ ಮಾತಿನ್ಯಾಗ ಭಾಳಾ ಬೆರ್ಕಿ ಮತ್ತ ಜೋರಿದ್ದ, ಜೀವನ್ದಾಗ ಬಾಯಿ ಇದ್ದೋರೋ ಬದ್ಕುತಾರ ಅನ್ನೋದು ಅವ್ನಿಗೆ ಗೊತ್ತಿತ್ತು. ನಿಶೆದಾಗ ಹೌದು ಉಚ್ಚೀ ಹೊಯ್ದೀನಿ, ಏನೀಗ ಅಂದ್ನಂತೆ. ಬಸ್ಸಿನ್ಯಾಗಿನ ಜನ, ಹೇ ಮುದೇನಾಗಿ ನಾಚ್ಗಿ ಆಗಾದಿಲ್ಲೇನು, ಹೌದು ಉಚ್ಚೀ ಹೊಯ್ದೀನಿ ಅಂತೀಯಲ್ಲಾ ಅಂತಾ ಬೈಯ್ಯಾಕ ಶುರು ಮಾಡಿದ್ರಂತೆ. ಹೇ, ವಿಷ್ಯಾದಾಗ ನೀವ್ಯಾರೂ ಮಾತಾಡಬ್ಯಾಡ್ರೀ, ನಾ ಕಂಡಕ್ಟರ ಜೊತೀಗೆ ಮಾತಾಡತೀನಿ ಅಂತಾ ಒಂದು ಅವಾಜ್ ಹಾಕಿದ್ನಂತೆ, ಎಲ್ರೂ ಸುಮ್ನಾದ್ರಂತೆ.

ಅವ್ನ ಹಿಂದಿನ ಮುಂದಿನ ಸೀಟಿನೋರು ಕೆಳಾಗ ಇಳದ್ರಂತೆ, ಸಂಗ್ಯಾ ಎದ್ದು ಬ್ಯಾರೆ ಲುಂಗಿ ಸುತ್ತಿಗೊಂಡು ಕಂಡಕ್ಟ್ರನ್ನ ಕರ್ದು ನೀವಾ ಬಸ್ಸಿನ್ಯಾಗ ಬೋರ್ಡ್ ಹಾಕೀರಿ ಅದಕಾ ನಾ ಉಚ್ಚೀ ಹೊಯ್ದೀನಿ ಅಂದ್ನಂತೆ. ಕಂಡಕ್ಟರ್, ಏನೂ ಬಸ್ಸಿನ್ಯಾಗಾ ಉಚ್ಚೀ ಹೊಯ್ರೀ ಅಂತಾ ಬೋರ್ಡ್ ಹಾಕಿವೇನೋ ಅರುವಗೇಡಿ ಅಂದ್ನಂತೆ. ಯಾಕಲೇ ನಿನ್ನೌವ್ನ ಹ್ಯಾಂಗ ಅನ್ಸತೈತಿ ಮಯ್ಯಾಗ ಅಂತಾ ಸಂಗ್ಯಾ ಎದ್ದು ಬಂದು, ಬಸ್ಸಿನ್ಯಾಗ ಬೋರ್ಡ್ ಹಾಕಿ ಹಾಕಿಲ್ಲಾ ಅಂತೀಯಾ ಅಂತಾ ಸಂಗ್ಯಾ ಗಲಾಟಿ ಶುರು ಮಾಡಿದ್ನಂತೆ. ಕಂಡಕ್ಟ್ರ ಕುಡ್ದಗಿಡ್ದ ಬಂದೀ ಏನೂ ಅಂದ್ನಂತೆ. ಸಂಗ್ಯಾ ಹೌದಾ ನಾ ಕುಡ್ದು ಬಂದೀನಿ, ಬಸ್ಸಿನ್ಯಾಗ ಯಾರು ಕುಡ್ದಿಲ್ಲಾ ತೋರ್ಸು, ನೀವಾ ಕುಡ್ಸತೀರಿ, ಮತ್ತ ನನಗಾ ಕುಡ್ದು ಬಂದೀ ಎನೂ ಅಂತಾ ಕೇಳ್ತೀಯಾ, ಅಂತಾ ಸಂಗ್ಯಾ ಜಗ್ಳ ಶುರು ಮಾಡಿದ್ನಂತೆ. ಸಂಗ್ಯಾನ ಮಾತ ಕೇಳಿ ಬಸ್ಸಿನ್ಯಾಗ ಇದ್ದವ್ರಿಗೆಲ್ಲಾ ಗಾಬರಿ ಆತಂತೆ, ಎಲ್ಲಿ ಏನಂತಾ ಬೋರ್ಡ್ ಹಾಕ್ಯಾರ, ಕಂಡಕ್ಟ್ರ ಯಾವಾಗ ಯಾರೀಗೆ ಏನ ಕುಡ್ಸ್ಯಾನ ಅಂತಾ ಕೆಳಗಾ ಮ್ಯಾಲಾ ನೋಡಾಕಹತ್ತಿದ್ರಂತೆ.

ಸಂಗ್ಯಾ ಒಬ್ಬ ಯಜಮಾನನ ಕಡೆ ನೋಡ್ತಾ ನೀವಾರ ಹೇಳ್ರೀ ಯಜಮಾನ್ರ, ನಾ ಉಚ್ಚೀ ಹೊಯ್ದಿದ್ರಾಗ, ಮಾತಾಡಿದ್ದ್ರಾಗ ಎನಾರ ತಪ್ಪು ಐತಾ? ಅಂದ್ನಂತೆ. ಯಜಮಾನ, ಅಲ್ಲಪಾ ನಿನ ಮಾತ ನನಗಾ ಸರಿಯಾಗಿ ಅರ್ಥ ಆಗವಲ್ವೋ, ನೀ ಅದೇನೋ ಬಸ್ಸಿನ್ಯಾಗಾ ಉಚ್ಚೀ ಹೊಯ್ರೀ ಅಂತಾ ಬೋರ್ಡ್ ಹಾಕ್ಯಾರಾ ಅಂತೀ, ಕಂಡಕ್ಟ್ರ ಬಸ್ಸಿನ್ಯಾಗ ಇರೋ ಎಲ್ರಿಗೂ ಕುಡಿಸ್ಯಾನಾ ಅಂತೀ, ನಾನು ಇದಾ ಬಸ್ಸಿನ್ಯಾಗ ಭಾಳಸಲ ಓಡಾಡೀನಿ, ಇದುವರ್ಗೂ ನಾ ಅಂತಾ ಬೋರ್ಡ್ ನೋಡೇ ಇಲ್ಲಪ್ಪಾ ಅಂದ್ರಂತೆ. ಯಾಕ್ರೀ ಯಜಮಾನ್ರ, ದೊಡ್ಡೋರಾಗಿ ನೀವಾ ಹೀಂಗ ಅಂದ್ರ ಹ್ಯಾಂಗ್ರೀ, ಸ್ವಲ್ಪ ಬಸ್ ಇಳ್ದು ಕೆಳಾಗ ಬರ್ರೀ ಬೋರ್ಡ ತೋರಿಸ್ತೀನಿ ಅಂದ್ನಂತೆ.

ಎಲ್ರೂ ಬಸ್ ಇಳ್ದ್ರಂತೆ, ಸಂಗ್ಯಾ ಬಸ್ಸಿನ ಮಗ್ಗಲಾಕ ಹೋಗಿ, ಬಸ್ಸಿನ ಮ್ಯಾಲೆಆರಾಮವಾಗಿ ಮಗುವಿನಂತೆ ನಿದ್ರ್ರಿಸಿಎಂದು ಒಂದು ಕೂಸಿನ ಚಂದಾನ ಫೋಟೋ ಹಾಕಿ ಅದ್ರÀ ಕೆಳಾಗ ಬರ್ದಿರೋದನ್ನು ತೋರ್ಸಿ, ನೋಡ್ರಿ ಎಲ್ರೂ, ಕೂಸು ಮಕ್ಕಂಡ್ಹಾಂಗ ಬಸ್ಸಿನ್ಯಾಗ ಮಕ್ಕಂಡು ಹೋಗ್ರಿ ಅಂತಾ ಬಸ್ಸಿನಮ್ಯಾಲೆ ಬರದೈತೆ, ಸಣ್ಣ ಮಕ್ಳು ರಾತ್ರಿ ಎದ್ದು ಉಚ್ಚಿ ಬಂದಾವ ಅಂತಾ ಎಬ್ಬುಸ್ತಾವೇನ್ರೀ, ಹಾಸಿಗ್ಯಾಗ ಹೊಯ್ತಾವ, ಅದಕಾ ನಾನೂ ಉಚ್ಚೀ ಹೊಯ್ದೀನಿ ಅಂದ್ನಂತೆ. ಸಂಗ್ಯಾನ ಮಾತು ಕೇಳಿ ಜನ ನಕ್ಕಂತ ಮಕ ಮಕ ನೋಡ್ಕೊಳ್ಳಾಕ ಹತ್ತಿದ್ರಂತೆ.

ಬೆಳಗಾ ಮುಂಜಾಲೆ ಒಂದಕಡೀಗೆ ಚಾ ಕುಡಿಯಾಕ ಬಸ್ ನಿಲ್ಸಿ, 15 ನಿಮಿಷ ಟೈಂ ಐತೆ ಅಂತಾ ಕಂಡಕ್ಟರ ಕೂಗಿ, ನಮ್ಮ ಸಂಗ್ಯಾನ ಎಬ್ಸಿ, ಹೇ ಅಣ್ಣಾ ಒಂದಕ್ ಹೋಗಿಬರಾಂಗಿದ್ರ ಹೋಗಿಬಾ ಅಂದ್ನಂತೆ. ಸಂಗ್ಯಾ ಒಂದಕ್ಕ ಹೋಗಿಬಂದು ಚಾ ಕುಡೀತಿರುವಾಗ ಬಸ್ಸಿನ್ಯಾಗ ಇದ್ದ ಯಜ ಮಾನ ಬಂದು ಸಂಗ್ಯಾನ ಮಾತಾಡ್ಸಿ, ನಿಂದು ಯಾವೂರು, ರಾತ್ರಿ ನೀ ಮಾತಾಡಿದ್ದು ನೋಡಿ ಏನೋ ಕುಡ್ದ ಬಂದಾನ ಅಂತಾ ನಿನ್ನ ಮಾತ ಕೇಳಿ ನಕ್ವಿ, ಆದ್ರ ನೀ ಮಾತಾಡಿದ್ರಾಗೂ ಅರ್ಥ ಐತೆ ನೋಡಪಾ, ನಾ ನಿನ್ನ ಮಾತಿನ ಬಗ್ಗೆ ಯೋಚ್ನಿ ಮಾಡ್ಕೊಂತಾ ರಾತ್ರಿ ನಿದ್ದೀನಾ ಮಾಡ್ಲಿಲ್ಲಾ ನೋಡು, ಅಂತಾ ನಕ್ಕನಂತೆ, ಅವ್ರ ಜೊತೀಗೆ ಇದ್ದವ್ರೂ ನಕ್ಕಂತಾ ಸಂಗ್ಯಾನ ಕಡೀಗೆ ನೋಡಿದ್ರಂತೆ.

ಸಂಗ್ಯಾನ ಕರ್ಕೊಂಡು ಬರೋಕೆ ನಾವೆಲ್ಲಾ ಬೆಂಗ್ಳೂರು ಬಸ್ ಸ್ಟ್ಯಾಂಡಿಗೆ ಹೋಗಿದ್ವಿ, ರಾತ್ರಿ ರೆಸಾರ್ಟಿನಾಗ ಸಂಗ್ಯಾನ ಪ್ರಯಾಣದ ಅನುಭವ ಕೇಳಿ ನಕ್ಕೂ ನಕ್ಕೂ ಸುಸ್ತಾದ್ವಿ. ಇವತ್ತಿಗೂ ಕ್ಲಬ್ ಕ್ಲಾಸ್ ಐರಾವತ ಬಸ್ ನೋಡಿದಾಗೆಲ್ಲಾ ನಮ್ಮ ಸಂಗ್ಯಾ ನೆನಪಾಗ್ತಾನ, ಅವ್ನ ಅನುಭವ, ಬಸ್ಸಿನ ಮ್ಯಾಲ ಹಾಂಗ ಬರಿದಿರೋದ್ರ ಬಗ್ಗೆ ಚಿಂತಿಮಾಡಾಕ ಹಚ್ಚತಾವ.

Leave a Reply

Your email address will not be published.