ಆರು ಚಾರ್ಟುಗಳಲ್ಲಿ ಆರ್ಥಿಕತೆಯ ಚಿತ್ರಣ

ಈ ವಾರ ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸದೆ ಇರಲು ಹಾಗೂ ಡಿಸೆಂಬರ್ ತಿಂಗಳವರೆಗೂ ಯಾಕೆ ದರಗಳನ್ನು ಕಡಿತಗೊಳಿಸುವುದು ಸಾಧ್ಯವಾಗುವಂತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ; ಪ್ರಸ್ತುತ ಆರ್ಥಿಕತೆಯ ಬೆಳವಣೆಗೆಯ ಹೊರೆ ಸಂಪೂರ್ಣವಾಗಿ ಸರ್ಕಾರದ ಹೆಗಲ ಮೇಲಿದೆ..

 – ಉದಿತ್ ಮಿಶ್ರಾ

ಆತ್ಮೀಯ ಓದುಗರೇ,

ಅರವತ್ತರ ದಶಕದಲ್ಲಿ ಭಾರತದಲ್ಲಿಯೂ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಂತಹ, ಕೆನಡಾ ದೇಶದ ಮೂಲದ ಯುಎಸ್‌ನ ಅರ್ಥಶಾಸ್ತ್ರಜ್ಞ ಜಾನ್ ಕೆನ್ನೆತ್ ಗಲಬ್ರೇತ್ ಅವರ ಮಾತುಗಳ ಪ್ರಕಾರ, “ಎರಡು ರೀತಿಯ ಮುನ್ಸೂಚಕರಿದ್ದಾರೆ: ಗೊತ್ತಿಲ್ಲದೆ ಇರುವವರು ಹಾಗೂ ತಮಗೆ ಗೊತ್ತಿಲ್ಲ ಎಂದು ತಿಳಿಯದೇ ಇರುವಂತಹವರು.”

ಹಾಗಾಗಿ ಗಲಬ್ರೇತ್ ಅವರಲ್ಲಿ ಕ್ಷಮೆಯನ್ನು ಕೋರುತ್ತಾ, ಭಾರತೀಯ ರಿಸರ್ವ್ ಬ್ಯಾಂಕ್‌ನ ಐದು ಚಾರ್ಟ್ಗಳು ಹಾಗೂ ಆರ್ಥಿಕತೆಯ ಸ್ಥಿತಿಗತಿಯನ್ನು ತಿಳಿಯಲು ಆರ್‌ಬಿಐ ಕ್ರಮಬದ್ಧವಾಗಿ ನಡೆಸುವಂತಹ ಐದು ಸಮೀಕ್ಷೆಗಳತ್ತ ಒಂದು ಕಣ್ಣು ಹಾಯಿಸೋಣ.

ಚಾರ್ಟ್ 1

 

ಈ ಚಾರ್ಟ್ ಆರ್ಥಿಕತೆಯಲ್ಲಿ ಗ್ರಾಹಕರ ಆತ್ಮವಿಶ್ವಾಸದ ಸ್ಥಿತಿಯನ್ನು ಅಳೆಯುತ್ತದೆ. ಈ ಚಾರ್ಟ್ನಲ್ಲಿ ಕಂಡು ಬರುವ ಕಪ್ಪು ರೇಖೆ ಗ್ರಾಹಕರ ಆತ್ಮವಿಶ್ವಾಸವನ್ನು ಸೂಚಿಸಿದರೆ, ಬೂದು ರೇಖೆ ಈಗಿನಿಂದ ಒಂದು ವರ್ಷದವರೆಗಿನ ಗ್ರಾಹಕರ ನಿರೀಕ್ಷೆಗಳ ಮೇಲೆ ಜಾಡು ಗುರುತಿಸುತ್ತದೆ. ಭಾರತದ 13 ಪ್ರಮುಖ ನಗರಗಳಲ್ಲಿನ 5,300 ಕುಟುಂಬಗಳಿಗೆ ನಮ್ಮ ಆರ್ಥಿಕ ಪರಿಸ್ಥಿತಿ, ಆದಾಯ, ಖರ್ಚು, ಉದ್ಯೋಗ ಹಾಗೂ ದರಗಳ ಮಟ್ಟಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು.

ಕಪ್ಪು ರೇಖೆ ಸೂಚಿಸುವಂತೆ ಗ್ರಾಹಕರ ಆತ್ಮವಿಶ್ವಾಸದ ಸೂಚ್ಯಂಕವು ಹಠಾತ್ತಾಗಿ ಇಳಿಕೆಯಾಗುವುದನ್ನು ಮುಂದುವರೆಸಿದೆ, ಹಾಗೂ ಜುಲೈ ತಿಂಗಳಲ್ಲಿ ಹಿಂದೆಂದಿಗಿಂತಲೂ ಈ ಸೂಚ್ಯಂಕವು ಅತೀ ಕಡಿಮೆಯಿದೆ. ಅಂದರೆ 54 ಅಂಕಗಳಿಗೆ ಇಳಿದಿದೆ. ಮಾರ್ಚ್ 2019ರಲ್ಲಿ ಈಗಿನ ಕೇಂದ್ರ ಸರ್ಕಾರ ಪುನರ್-ಚುನಾಯಿತಗೊಳ್ಳುವ ಸಂದರ್ಭದಲ್ಲಿ ಏರಿಕೆಯನ್ನು ಕಾಣಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸುವುದು ಕುತೂಹಲಕಾರಿಯಾಗಿದೆ.

ಚಾರ್ಟ್ 2

ಈ ಚಾರ್ಟ್ನಲ್ಲಿ ಕಾಣುವ ಬೂದು ರೇಖೆಯು ಈ ವರ್ಷದ ಮೊದಲನೇ ತ್ರೈಮಾಸಿಕ ಅವಧಿ 2020-2021ರಲ್ಲಿ (ಏಪ್ರಿಲ್, ಮೇ, ಜೂನ್) ಭಾರತದ ತಯಾರಿಕಾ ಕಂಪನಿಗಳ ವ್ಯಾಪಾರ ಆತ್ಮವಿಶ್ವಾಸವನ್ನು ಸೆರೆಹಿಡಿಯುತ್ತದೆ ಹಾಗೂ ಕಪ್ಪು ರೇಖೆಯು 2020-21ರ ಎರಡನೇ ತ್ರೈಮಾಸಿಕ ಅವಧಿಯ (ಜುಲೈ, ಆಗಸ್ಟ್, ಸೆಪ್ಟೆಂಬರ್) ನಿರೀಕ್ಷೆಗಳನ್ನು ಸೆರೆ ಹಿಡಿದಿದೆ. ಈ ಎರಡೂ ವ್ಯಾಪಾರ ಸೂಚ್ಯಂಕಗಳು ಪ್ರತಿ ತ್ರೈಮಾಸಿಕ ಅವಧಿಯ ವ್ಯಾಪಾರ ಮೇಲ್ನೋಟದ ತುಣುಕನ್ನು ಒದಗಿಸುತ್ತದೆ ಹಾಗೂ 0 ಯಿಂದ 200ರ ನಡುವಿನ ಮೌಲ್ಯಗಳನ್ನು ಪರಿಗಣಿಸುತ್ತದೆ, ಇದರಲ್ಲಿ 100, ಕುಗ್ಗುವಿಕೆಯಿಂದ ವಿಸ್ತರಣೆಯನ್ನು ಪ್ರತ್ಯೇಕಿಸುವ ಹೊಸ್ತಿಲಾಗಿದೆ.

ಇದರಿಂದ ರುಜುವಾತಾಗುವಂತೆ, ಹಾಲಿ ವ್ಯಾಪಾರದ ವಿಶ್ವಾಸ ಸೂಚ್ಯಂಕವು 2020-21ರ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ, ಹಿಂದಿನ ತ್ರೈಮಾಸಿಕ ಅವಧಿಯಲ್ಲಿದ್ದಂತಹ 102.2ರ ಹೋಲಿಕೆಯಲ್ಲಿ ಅತ್ಯಂತ ಕಡಿಮೆಯಿದ್ದು 55.3 ಅಂಕಗಳಿಗೆ ಇಳಿದಿದೆ.

ಮುಂದಿನ ಎರಡು ಚಾರ್ಟ್ಗಳನ್ನು ಆರ್‌ಬಿಐನ ಜನವರಿ-ಮಾರ್ಚ್ 2020ರ ತ್ರೈಮಾಸಿಕ ಅವಧಿಯ ಒಬಿಕಸ್ (Order Books, Inventories and Capacity Utilisation Survey- OBICUS)ನಿಂದ ತೆಗೆದುಕೊಳ್ಳಲಾಗಿದ್ದು, ಇದು 364 ತಯಾರಿಕಾ ಕಂಪನಿಗಳನ್ನು ಒಳಗೊಂಡಿದೆ.

 

ಚಾರ್ಟ್ 3

ಭಾರತದಲ್ಲಿ ಕೋವಿಡ್ ಆಗಮನಕ್ಕೂ ಮುಂಚೆ ಹೊಸ ವ್ಯಾಪಾರಾದೇಶಗಳು ನಕಾರಾತ್ಮಕ ಬೆಳವಣಿಗೆಯನ್ನು ಎದುರಿಸಲು ಆರಂಭಿಸಿತ್ತು ಎಂಬುದನ್ನು ಈ ಚಾರ್ಟ್ನ ಕಪ್ಪು ರೇಖೆ ಸೂಚಿಸುತ್ತದೆ. ಪ್ರತಿ ತ್ರೈಮಾಸಿಕ ಅವಧಿಯ ಬೆಳವಣಿಗೆಯೂ (ಬೂದು ರೇಖೆ) ಸಹ ನಿಶ್ಚಲವಾಗಿತ್ತು.

 

 

 

ಚಾರ್ಟ್ 4

ಈ ಚಾರ್ಟ್ನಲ್ಲಿ ಕಾಣುವ ಕಪ್ಪು ರೇಖೆಯು, “ಮಾರಾಟದ ವಿರುದ್ಧ ಕಚ್ಚಾ ವಸ್ತುಗಳ ಸರಕುಗಳ ಅನುಪಾತ”ವು ಕಳೆದ ಹಣಕಾಸಿನ ವರ್ಷದಲ್ಲಿ ಎರಡನೆ ತ್ರೈಮಾಸಿಕ ಅವಧಿಯಲ್ಲಿ (ಜುಲೈ, ಆಗಸ್ಟ್, ಸೆಪ್ಟೆಂಬರ್) ಯಾವ ರೀತಿ ಮೇಲೆಕ್ಕೇರುತ್ತಿತ್ತು ಎಂಬುದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಕೋವಿಡ್‌ಗೂ ಮುಂಚಿನಿಂದಲೂ ಆರ್ಥಿಕತೆಯಲ್ಲಿ ಅತ್ಯಂತ ಕಳಪೆ ಬೇಡಿಕೆಯ ಸ್ಥಿತಿ ಗೋಚರಿಸುತ್ತದೆ. ನಮ್ಮ ಆರ್ಥಿಕತೆಯ ತಯಾರಿಕಾ ಕಂಪನಿಗಳ ಸಾಮರ್ಥ್ಯ ಬಳಕೆ (ಇಲ್ಲಿರುವ ಯಾವ ಚಾರ್ಟ್ನಲ್ಲಿಯೂ ತೋರಿಸಿಲ್ಲ) ಮಾರ್ಚ್ 2019ರಲ್ಲಿ 76% ನಿಂದ ಮಾರ್ಚ್ 2020ರಲ್ಲಿ 69.9%ನಲ್ಲಿ ಇಳಿಕೆಯಾಗಿರುವುದನ್ನು ಸೂಚಿಸುತ್ತದೆ.

ಚಾರ್ಟ್ 5

ಅತ್ಯಂತ ವೃತ್ತಿಪರವಾದ ಮುನ್ಸೂಚಕರು – ಬೂದು ಬಣ್ಣದ ಚೌಕಟ್ಟಿನೊಳಗೆ ಗುರುತಿಸಿರುವುದು – ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 5% ನಿಂದ 6% ವರೆಗೆ ಕ್ಷೀಣಿಸುತ್ತದೆ ಎಂಬುದನ್ನು ತಿಳಿಸುತ್ತದೆ.

 

 

ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಕಾಯುತ್ತಾ

ಈ ಐದು ಸಮೀಕ್ಷಾ ಫಲಿತಾಂಶಗಳಲ್ಲಿರುವಂತೆ, ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ಆರ್‌ಬಿಐ ಈ ವಾರ ಏಕೆ ಬಡ್ಡಿ ದರಗಳನ್ನು ಕಡಿತಗೊಳಿಸಲಿಲ್ಲ ಎಂದು ಪ್ರಶ್ನಿಸಬಹುದು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಗೊಂದಲವಿತ್ತು ಹಾಗೂ ಬಹುಶಃ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ ಎನಿಸುತ್ತದೆ.

ಇದಕ್ಕೆ ಪೂರಕವಾಗಿ, ಆರ್‌ಬಿಐ ಅಕ್ಟೋಬರ್ 1ರಂದು ತನ್ನ ಮುಂದಿನ ನೀತಿ ಪರಿಷ್ಕರಣೆಯ ಸಮಯದಲ್ಲಿಯೂ ಬಡ್ಡಿ ದರಗಳನ್ನು ಕಡಿತಗೊಳಿಸುವುದಿಲ್ಲ ಎನ್ನುದಕ್ಕೆ ಬಲವಾದ ಸಾಕ್ಷಿಗಳಿವೆ.

ಫೆಬ್ರವರಿ 2019ರಿಂದಲೂ (ಬ್ಯಾಂಕಿಂಗ್ ವ್ಯವಸ್ಥೆಗೆ ಒದಗಿಸುವ ದರ) ಆರ್‌ಬಿಐ ಯಾವ ರೀತಿ ತನ್ನ ರೆಪೊ ದರವನ್ನು ಕಡಿತಗೊಳಿಸುತ್ತಿದೆ ಎಂಬುದನ್ನು ನೀವು ಈಗಾಗಲೇ ಓದಿರಬಹುದು, ಆದರೆ ಆರ್ಥಿಕತೆಯಲ್ಲಿ ಅತೀ ಹೆಚ್ಚಿನ ಉಬ್ಬರ ಉಂಟಾಗುವ ಕಾಳಜಿಯಿರುವ ಕಾರಣದಿಂದಾಗಿ ಈ ಬಾರಿ ನಿಲ್ಲಿಸಿದೆ.

ರೀಟೆಲ್ ದರಗಳು 2%ಗಿಂತ ಕಡಿಮೆ ಪ್ರಮಾಣದಲ್ಲಿ ಅಥವಾ 6%ಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗದಿರುವಂತೆ ಖಾತ್ರಿಪಡಿಸುವುದು ಆರ್‌ಬಿಐನ ಮುಖ್ಯ ಗಮನವಾಗಿದೆ. ಒಟ್ಟಾರೆಯಾಗಿ ಇದು ಹಣದುಬ್ಬರದ ಗುರಿ ಎಂದು ಕರೆಯಲಾಗುವ ಆಡಳಿತ. ಈ ಕ್ಯಾಲೆಂಡರ್ ವರ್ಷದಲ್ಲಿ ಮಾರ್ಚ್ ತಿಂಗಳನ್ನು ಹೊರತುಪಡಿಸಿದಂತೆ ಎಲ್ಲಾ ತಿಂಗಳುಗಳಲ್ಲಿಯೂ ಹಣದುಬ್ಬರದ ಪ್ರಮಾಣ 6%ಗಿಂತ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಆರ್‌ಬಿಐ ಸಹಜವಾಗಿಯೇ ಚಿಂತಿತವಾಗಿದೆ.

ಆದರೆ ಇಲ್ಲಿ ಇನ್ನೂ ಎರಡು ಇತರೆ ಹಾಗೂ ಕಡಿಮೆ ಪ್ರಕಟವಾಗುವ ಕಾರಣಗಳಿವೆ. ಮೊದಲನೆಯ ಕಾರಣವೇನೆಂದರೆ, ಆರ್‌ಬಿಐ ಕಾಯ್ದೆಯ ಪ್ರಕಾರ ರೀಟೆಲ್ ಹಣದುಬ್ಬರದ ಪ್ರಮಾಣ ಸತತವಾಗಿ ಮೂರು ಕ್ಯಾಲೆಂಡರ್ ತ್ರೈಮಾಸಿಕಗಳ ಅವಧಿಯುದ್ದಕ್ಕೂ 2%ನಿಂದ 6% ಮಟ್ಟದಲ್ಲಿ ಉಳಿದರೆ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ನಮ್ಮ ರಾಷ್ಟ್ರದ ಕೇಂದ್ರೀಯ ಬ್ಯಾಂಕ್ ನಿಗದಿತ ಪ್ರಮಾಣದೊಳಗೆ ಹಣದುಬ್ಬರವನ್ನು ಏಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕಾಗುತ್ತದೆ.

ಖಚಿತವಾಗಿ, ಇದು ಸಂಭವಿಸುವ ಭಯವಿದೆ. ಐಸಿಐಸಿಐ ಸೆಕ್ಯೂರಿಟೀಸ್‌ನ ಸಂಶೋಧನಾ ವಿಶ್ಲೇಷಕರ ಪ್ರಕಾರ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ರೀಟೆಲ್ ಹಣದುಬ್ಬರದ ಪ್ರಮಾಣ 6%ನಲ್ಲಿಯೇ ಮುಂದುವರೆಯುವ ಎಲ್ಲಾ ಸಾಧ್ಯತೆಗಳು ಇರುವ ಕಾರಣದಿಂದಾಗಿ, “ಸತತವಾಗಿ ಮುಂದಿನ ಮೂರು ಕ್ಯಾಲೆಂಡರ್ ತ್ರೈಮಾಸಿಕ ಅವಧಿಗಳಲ್ಲಿಯೂ ಸರಾಸರಿ ಹಣದುಬ್ಬರದ ಪ್ರಮಾಣ 6% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಮುಂದುವರೆಯುವ ಸಾಧ್ಯತೆಗಳಿವೆ, ಇದು ಆರ್‌ಬಿಐ ಕಾಯ್ದೆಯಲ್ಲಿರುವ 45ZN ಕರಾರನ್ನು ಪ್ರಚೋದಿಸುತ್ತದೆ. ಈ ಬೆಳವಣಿಗೆಯಿಂದಾಗಿ ಆರ್‌ಬಿಐನ ಗರ‍್ನರ್ ಅವರು ಈ ಉಲ್ಲಂಘನೆಯನ್ನು ವಿವರಿಸಿ ಸರ್ಕಾರಕ್ಕೆ ಪತ್ರ ಬರೆಯುವ ಅಗತ್ಯ ಅನಿವಾರ್ಯವಾಗುತ್ತದೆ.

ಎರಡನೆಯ ಕಾರಣವೇನೆಂದರೆ, ಚಾರ್ಟ್ 6ರಲ್ಲಿ ತೋರಿಸಿರುವಂತೆ, ಕಳಪೆ ಹಣಕಾಸಿನ ಹರಿವಿಗೆ ಸಂಬಂಧಿಸಿದೆ. ಇತರೆ ಪದಗಳಲ್ಲಿ ಹೇಳುವುದಾದರೆ, ಆರ್‌ಬಿಐ ಯಾವ ರೀತಿ ಅಸಮರ್ಪಕವಾದ ರೀತಿಯಲ್ಲಿ ಬಡ್ಡಿ ದರ ಕಡಿತಗಳನ್ನು ಮಾಡಿವೆ ಹಾಗೂ ಅದು ನೀವು ಹಾಗೂ ನಾನು ಒಳಗೊಂಡಂತೆ ಯಾವ ರೀತಿ ಇಡೀ ಆರ್ಥಿಕತೆಯ ಮೇಲೆ ಪ್ರವಹಿಸಿದೆ ಎಂಬುದನ್ನು ಸೂಚಿಸುತ್ತದೆ.

ಈ ಚಾರ್ಟ್ನಲ್ಲಿರುವ ಕಪ್ಪು ರೇಖೆಯು ಬ್ಯಾಂಕುಗಳಲ್ಲಿ ಹಣವನ್ನು ಸಾಲ ಪಡೆಯುವ ಜನರಿಗೆ ಬ್ಯಾಂಕುಗಳು ವಿಧಿಸುವ ಬಡ್ಡಿ ದರವನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಬೂದು ರೇಖೆಯು, ಆರ್‌ಬಿಐನಿಂದ ಬ್ಯಾಂಕುಗಳ ಸಾಲ ತೆಗೆದುಕೊಂಡಾಗ, ಆರ್‌ಬಿಐ ವಿಧಿಸುವ ರೆಪೊ ದರ ಅಥವಾ ಬಡ್ಡಿ ದರಗಳನ್ನು ಸೂಚಿಸುತ್ತದೆ.

ಈ ಚಾರ್ಟ್ನಲ್ಲಿ ಕಾಣುವ ನಿರ್ಣಾಯಕವಾದ ರೇಖೆಯೆಂದರೆ ಚುಕ್ಕಿಗಳ ರೇಖೆ, ಇದು ಬೂದು ಹಾಗೂ ಕಪ್ಪು ರೇಖೆಗಳ ನಡುವೆ ಇರುವ ವ್ಯತ್ಯಾಸವನ್ನು ಪ್ರತಿನಿಧಿಸುತ್ತದೆ. ಕ್ರೆಡಿಟ್ ಸ್ವಿಸ್‌ನ ನೀಲಕಂಠ್ ಮಿಶ್ರಾ ಅವರ ಪ್ರಕಾರ, ಈ ವ್ಯತ್ಯಾಸ ಹಿಂದೆಂದಿಗಿಂತಲೂ ಅತೀ ಹೆಚ್ಚಿನ ಪ್ರಮಾಣದಲ್ಲಿದೆ. ಇತರೆ ಪದಗಳಲ್ಲಿ ಹೇಳುವುದಾದರೆ, ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಬಡ್ಡಿ ದರವನ್ನು ಕಡಿಮೆಗೊಳಿಸುತ್ತಿದ್ದರೆ, ಬ್ಯಾಂಕುಗಳು ನನಗೆ ಹಾಗೂ ನಿಮಗೆ ನೀಡುವ ಸಾಲದ ಬಡ್ಡಿ ದರಗಳಲ್ಲಿ ಅದೇ ಪ್ರಮಾಣದಲ್ಲಿ ಕಡಿಮೆ ಗೊಳಿಸುತ್ತಿಲ್ಲ. ವಾಸ್ತವದಲ್ಲಿ ಈ ಪ್ರಮಾಣ ಅತೀ ಹೆಚ್ಚಿನ ಪ್ರಮಾಣದಲ್ಲಿದೆ.

ಹಾಗಾಗಿಯೇ ಆರ್‌ಬಿಐ ಇನ್ನೂ ಹೆಚ್ಚು ರೆಪೊ ದರವನ್ನು ಕಡಿತಗೊಳಿಸುವುದಕ್ಕೂ ಮುಂಚೆ ಇನ್ನೂ ಹೆಚ್ಚಿನ ಹಣಕಾಸಿನ ಹರಿವಿಗಾಗಿ ಕಾಯುವುದು ಸೂಕ್ತವಾಗಿರುತ್ತದೆ.

ನಿರ್ಣಯ: ನಮ್ಮ ಆರ್ಥಿಕತೆ, ವಿಶೇಷವಾಗಿ ಅತೀ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವಂತಹ ಸಾಮರ್ಥ್ಯವನ್ನು ಒಳಗೊಂಡಿರುವ ತಯಾರಿಕಾ ವಲಯ ಖಾಲಿಯಾಗಿದ್ದರೂ ಸಹ ಆರ್‌ಬಿಐಗೆ ಇನ್ನೂ ಹೆಚ್ಚು ಮೇಲೆತ್ತಲು ಸಾಧ್ಯವಾಗುವುದಿಲ್ಲ. ಮುಂದಿನ 3-4 ತಿಂಗಳುಗಳಲ್ಲಿ ಬೆಳವಣಿಗೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಬಹುಶಃ ಕೇವಲ ಸರ್ಕಾರದ ಹೆಗಲ ಮೇಲಿದೆ.

*ಲೇಖಕರು ‘ದ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯಲ್ಲಿ ಉಪ ಸಹಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲ: ದ ಇಂಡಿಯನ್ ಎಕ್ಸ್ಪ್ರೆಸ್ 

ಅನುವಾದ: ಕಿಶೋರ್ ಕುಮಾರ್ ಬಿ.ವಿ.

Leave a Reply

Your email address will not be published.