ಆರೆಸೆಸ್ ಸೋಲಿಸಲು ಕಾಂಗ್ರೆಸ್ ಅನಿವಾರ್ಯ

-ಡಾ.ಟಿ.ಆರ್.ಚಂದ್ರಶೇಖರ

ಕಾಂಗ್ರೆಸ್ ಮುಕ್ತ ಭಾರತ ಎಂಬುದು ದುರಹಂಕಾರದ ಪರಾಕಾಷ್ಠೆಯ ಮತ್ತು ಜನತಂತ್ರ ವಿರೋಧಿ ನುಡಿಗÀಟ್ಟು. ಈ ನುಡಿಗಟ್ಟನ್ನು ಸುಮ್ಮನೆ ನೋಡಿದರೆ ಸಾಕು, ಅದರ ಮೂಲದಲ್ಲಿರುವ ಸರ್ವಾಧಿಕಾರಿ ಧೋರಣೆ ಅರ್ಥವಾದೀತು. ಈ ನುಡಿಗಟ್ಟಿನ ಮೂಲದಲ್ಲಿರುವ ದುಷ್ಟತನದ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇತ್ತೀಚೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಗೆಲುವಿನ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.

‘ಪ್ರಗತಿಯನ್ನು ಸಾಧಿಸಬೇಕಾದರೆ ನಾವು ನಮ್ಮ ವಿರೋಧಿಗಳನ್ನು ಶತ್ರುಗಳೆಂದು ಭಾವಿಸುವುದನ್ನು ನಿಲ್ಲಿಸಬೇಕು’ ಎಂಬ ಬಿಡನ್ ಮಾತು ಶಾಂತಿದೂತನೊಬ್ಬನ ಸಂದೇಶದಂತಿದೆ. ಡೊನಾನ್ಡ್ ಟ್ರಂಪ್‍ಗೆ ಮತ ನೀಡಿದ 700 ಲಕ್ಷ ಮತದಾರರನ್ನುದ್ದೇಶಿಸಿ ಅವರು ಹೇಳಿದ್ದು, ‘ನಮ್ಮ ಮುಂದಿರುವ ಗುರಿ ಸೌಹಾರ್ದ ಮತ್ತು ಐಕ್ಯತೆಯೇ ವಿನಾ ಅನೈಕ್ಯತೆಯಲ್ಲ. ಡೆಮಾಕ್ರೆಟಿಕ್ ಪಕ್ಷದ ಹುರಿಯಾಳಾಗಿ ತಮ್ಮಲ್ಲಿ ನಾನು ಮತಯಾಚಿಸಿದ್ದೆ. ಈಗ ನಾನು ಅಮೆರಿಕೆಯ ಅಧ್ಯಕ್ಷನಾಗಿ ಆಡಳಿತ ನಡೆಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತವಿರಲಿ, ಆಳುವ ಪಕ್ಷದ ವಿರುದ್ಧವಾಗಿ 2014ರಲ್ಲಿ ಮತ ನೀಡಿದವರನ್ನು ಆ ಪಕ್ಷ ಹೇಗೆ ಹೀಯಾಳಿಸಿತು, ಎಂತಹ ಸುಸಂಸ್ಕøತ ನುಡಿಮುತ್ತುಗಳನ್ನು ಉದುರಿಸಿತು ಎಂಬುದು ನಿಜಕ್ಕೂ ಒಂದು ರಾಜಕೀಯ ಪಕ್ಷಕ್ಕೆ ಅದು ತಕ್ಕುದಾಗಿರಲಿಲ್ಲ. ಮಾತು ಮಾತಿಗೆ ‘ಪಾಕಿಸ್ತಾನಕ್ಕೆ ಹೋಗಿ/ಕಳುಹಿಸುತ್ತೇವೆ’ ಎನ್ನುವ ನುಡಿಗಳು ರಾಜಕೀಯ ದುಷ್ಟತನದ ಪರಾಕಾಷ್ಠೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಇಷ್ಟು ಆರಂಭದ ಮಾತುಗಳ ನಂತರ ನೀವು ನಮ್ಮ ಮುಂದಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೀಡ ಬಯಸುತ್ತೇನೆ.

  1. ಭಾರತದಲ್ಲಿನ ಕಾಂಗ್ರೆಸ್ ಪಕ್ಷದ ನಾಯಕತ್ವವು ಒಂದು ಕುಂಟುಂಬದ ಗುತ್ತಿಗೆಯಾಗಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಈ ಪ್ರಶ್ನೆಯನ್ನು ತಾವು ಕೇಳಿರುವಂತೆ ಕಾಣುತ್ತದೆ. ಈ ಟೀಕೆಯನ್ನು ಮಾಡುತ್ತಿರುವ ಇಂದಿನ ಆಳುವ ಪಕ್ಷದ ಮೂಲಮಾತೃ ಸಂಸ್ಥೆಯಲ್ಲಿ (ಆರ್‍ಎಸ್‍ಎಸ್) ನಾಯಕತ್ವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದರ ಹಿನ್ನೆಲೆಯಲ್ಲಿ ಈ ಟೀಕೆಯನ್ನು ಪರಿಶೀಲಿಸಬೇಕು. ವಂಶ ಪಾರಂಪರ್ಯದ ಮಿತಿಗಳ ಅರಿವಿದ್ದೂ ನನ್ನ ಪ್ರಕಾರ ಇಂದಿನ ಆಳುವ ಪಕ್ಷಕ್ಕೆ ಇಂತಹ ಟೀಕೆ ಮಾಡುವ ನೈತಿಕ ಹಕ್ಕಿಲ್ಲ. ವಂಶ ಪಾರಂಪರ್ಯ ಮುರಿದು ಹೋಗಲಿ ಅಥವಾ ಮುಂದುವರಿಯಲಿ, ಕಾಂಗ್ರೆಸ್ ಕಥೆ ಮುಗಿಯುವುದಿಲ್ಲ. ಇಂದಿನ ಆಳುವ ಪಕ್ಷದ ಅಧ್ಯಕ್ಷರಾದವರಿಗೆ ಪಕ್ಷದಲ್ಲಿ ಎಷ್ಟು ಅಧಿಕಾರವಿದೆ ಎಂಬುದರ ಹಿನ್ನೆಲೆಯಲ್ಲಿ ನಾನು ಈ ಉತ್ತರ ನೀಡುತ್ತಿದ್ದೇನೆ.
  2. ಈ ಪ್ರಶ್ನೆಗೆ ಉತ್ತರ ಸೋನಿಯಾಗಾಂಧಿ ಹೊರತಾಗಿ ಯಾರು ನಾಯಕ ಸ್ಥಾನಕ್ಕೆ ಬರುತ್ತಾರೆ ಎಂಬುದರ ಮೇಲೆ ನಿಂತಿದೆ. ‘ನಾವು ಅಧಿಕಾರ ಬಿಟ್ಟುಕೊಟ್ಟು ನಿಮಗೆ ಸ್ವಾತಂತ್ರ್ಯ ನೀಡಿದರೆ ಇಲ್ಲಿ ಅರಾಜಕತೆ ಇರುತ್ತದೆ ವಿನಾ ಆಡಳಿತವಿರುವುದಿಲ್ಲ’ ಎಂಬ ಬ್ರಿಟಿಷರ ಪ್ರತಿಕ್ರಿಯೆಗೆ ಗಾಂಧೀಜಿ ‘ವಸಾಹತು ಆಳ್ವಿಕೆಗಿಂತ ಅರಾಜಕತೆಯನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂಬ ಉತ್ತರ ನೀಡಿದ್ದರು. ಈ ನಿಮ್ಮ ಪ್ರಶ್ನೆಗೆ ಇದು ಉತ್ತರವಾದೀತು ಎಂದುಕೊಳ್ಳುತ್ತೇನೆ.
  3. ಹೌದು. ವಂಶ ಪಾರಂಪರ್ಯವಿರಲಿ, ರಾಹುಲ್ ಗಾಂಧಿ ದಡ್ಡನೇ ಇರಲಿ. ಇಟಲಿಯಿಂದ ಬಂದು ಭಾರತದ ಸೊಸೆಯಾಗಿರುವ ಸೋನಿಯಾಗಾಂಧಿ ಇರಲಿ, -ಇಂದು ಭಾರತಕ್ಕೆ ಕಾಂಗ್ರೆಸ್‍ನ ಅಗತ್ಯವಿದೆ. ಏಕೆಂದರೆ ನಮ್ಮೆದುರಿಗಿರುವುದು ಬಿಜೆಪಿಯಲ್ಲ. ಅದು ಆರ್‍ಎಸ್‍ಎಸ್ ಎಂಬುದನ್ನು ನಾವು ಮರೆಯಬಾರದು. ಇವೆರಡರ ನಡುವಿನ ಸಂಬಂಧದ ರಾಜಕೀಯ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರೆ ಕಾಂಗ್ರೆಸ್ ಅಗತ್ಯ ಏಕೆ ಎಂಬುದು ಅಥರ್ವಾಗುತ್ತದೆ.
  4. ಪ್ರಾದೇಶಿಕ ಪಕ್ಷಗಳು ಯಾವಾಗಲೂ ಕೇಂದ್ರದಲ್ಲಿನ ಆಳುವ ಪಕ್ಷದ ‘ಬಿ’ ಟೀಮುಗಳಂತೆ ಕೆಲಸ ಮಾಡುತ್ತವೆ. ನಮ್ಮಲ್ಲಿ ಪ್ರಾದೇಶಿಕ ಪಕ್ಷಗಳು ಜಾತಿಯ ಆಧಾರದಲ್ಲಿ ನಿರ್ಮಾಣವಾಗುತ್ತಿವೆ ವಿನಾ ಜನತಂತ್ರ ಸೂತ್ರದ ಪ್ರಕಾರ ನಿರ್ಮಾಣವಾಗುತ್ತಿಲ್ಲ. ನಾವು ಒಪ್ಪಲಿ-ಬಿಡಲಿ, ಬಿಜೆಪಿ ವಿರುದ್ಧ ಮತಗಳನ್ನು ಒಡೆಯುವ ಕೆಲಸವನ್ನು ಮಾತ್ರ ಪ್ರಾದೇಶಿಕ ಪಕ್ಷಗಳು ಮಾಡುತ್ತಿವೆ ವಿನಾ ಒಂದು ರಾಜಕೀಯ ಸಿದ್ಧಾಂತದ ಆಧಾರದಲ್ಲಿ, ಪ್ರಾದೇಶಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಅವು ಬೆಳೆಯುತ್ತಿಲ್ಲ.

ನಮ್ಮ ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಕ್ಕೆ ‘ಸಿದ್ಧಾಂತ’ ಎನ್ನುವುದೇ ಇಲ್ಲ. ಜಾತ್ಯತೀತ ಎಂದರೇನ್ರೀ, ಅನಂತಮೂರ್ತಿ ಯಾರ್ರೀ ಎಂದು ಕೇಳಿದಂತೆ ‘ಸಿದ್ಧಾಂತ’ ಎಂದರೇನ್ರೀ ಎಂದು ನಮ್ಮ ಪ್ರಾದೇಶಿಕ ಪಕ್ಷದ ಪಾಳೆಗಾರರು ಕೇಳಿಯಾರು! ಪ್ರಾದೇಶಿಕ ಪಕ್ಷಗಳು ಭಾರತದಲ್ಲಿ, ಅದು ಯಾವ ರಾಜ್ಯದಲ್ಲಾಗಿರಲಿ, ಅವು ಜಮೀನ್ದಾರಿ ಪಕ್ಷಗಳಾಗಿವೆ ವಿನಾ ಜನತಂತ್ರ ಪಕ್ಷಗಳಾಗಿಲ್ಲ. ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು, ಅಂದರೆ ಆರ್‍ಎಸ್‍ಎಸ್ ರಾಜಕಾರಣವನ್ನು ಸೋಲಿಸುವ ಸಲುವಾಗಿಯಾದರೂ ಕಾಂಗ್ರೆಸಿನ ಜೊತೆಗೂಡುವ ಅಗತ್ಯವಿದೆ. ಇದು ಗೆಲುವಿನ ಸೂತ್ರವಾಗುತ್ತದೆ. ಉದಾ: ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಪಡೆದ ಮತಗಳು 157.01 ಲಕ್ಷವಾದರೆ (ಶೇ.50.16) ಎಮ್‍ಜಿಬಿ ಪಡೆದದ್ದು 156.88 ಲಕ್ಷ(ಶೇ.49.84). ವ್ಯತ್ಯಾಸ ಬರಿ 13 ಸಾವಿರ ಮಾತ್ರ. ಬಿಜೆಪಿ ವಿರೋಧಿಗಳು ಒಟ್ಟಾಗುವುದಕ್ಕೆ ಇದಕ್ಕಿಂತ ಇನ್ನೇನು ಸಮೀಕರಣ ಬೇಕು?    

Leave a Reply

Your email address will not be published.