ಆರೆಸ್ಸೆಸ್ ಬದಲಾಗಿಲ್ಲ, ಬಲವಾಗಿದೆ!

ಎಚ್.ವಿ.ನಟರಾಜ, ಬೆಂಗಳೂರು.

ಹಿಂದುತ್ವ ಸಿದ್ಧಾಂತವನ್ನು ಮುಜುಗರವಾಗಲೀ ಮುಲಾಜಾಗಲೀ ಇಲ್ಲದೆ ಆಡಳಿತ ಪಕ್ಷವೇ ಮೊದಲುಗೊಂಡು ಅದರ ಅಧೀನ ಸಂಘಟನೆಗಳೆಲ್ಲ ದೊಡ್ಡ ಗಂಟಲಲ್ಲಿ ಬೊಬ್ಬೆಯಿಡುತ್ತಿರುವ ಸನ್ನಿವೇಶ ಇಂದಿನದು. ಹೀಗಾಗಿ ಅದರ ಮೂಲ ಪ್ರೇರಣೆಯಾದ ಆರೆಸ್ಸಸ್ ಹಿಂದುತ್ವವನ್ನು ಮೀರಿದ ಧಾರ್ಮಿಕ ಐಕ್ಯತೆಯ ಪ್ರತಿಪಾದನೆಯನ್ನು ಇನ್ನೂ ತನ್ನ ಉದ್ದೇಶದಲ್ಲಿ ಇರಿಸಿಕೊಂಡಿರುವ ಬಗ್ಗೆಯೇ ಸಂದೇಹಗಳಿವೆ.

ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. ಹಿಂದೊಂದು ಕಾಲದಲ್ಲಿ ಆರೆಸೆಸ್ಸನ್ನು ಒಂದು ಸಾಂಸ್ಕೃತಿಕ ಸಂಘಟನೆಯಾಗಿ ನೋಡಬೇಕು ಎಂತಲೂ, ಯಾವುದೇ ರಾಜಕೀಯ ಪಕ್ಷಕ್ಕೂ ಅದು ನೇರ ಸಂಬಂಧ ಹೊಂದಿಲ್ಲವೆಂದೂ ಬಲವಾಗಿ ವಾದಿಸುತ್ತಿದ್ದ ಜನರು ಅನೇಕರಿದ್ದರು. ಇಂದಿರಾಗಾಂಧಿಯನ್ನು ಹಲವಾರು ಕಾರಣಗಳಿಗಾಗಿ ಕೆಲವು ಕಾಲ ಆರೆಸ್ಸೆಸ್ ಬೆಂಬಲಿಸುತ್ತಿತ್ತು ಎಂಬುದನ್ನೂ ನಾವೆಲ್ಲಾ ಕೇಳಿದ್ದೇವೆ.

ಪ್ರಾಕೃತಿಕ ವಿಕೋಪಗಳಾದಾಗ ಈಗಲೂ ಅದರ ಕಾರ್ಯಕರ್ತರು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದೂ ನಿಜವೇ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಮತ್ತು ಮುಖ್ಯವಾಗಿ ಹಿಂದು ರಾಷ್ಟ್ರ ನಿರ್ಮಾಣ ಹಾಗೂ ಹಿಂದುತ್ವದ ಬಲವಾದ ಪ್ರತಿಪಾದನೆಗಳಿಂದ ಅದು ಯಾವತ್ತೂ ವಿಮುಖವಾಗಿರಲಿಲ್ಲ ಮತ್ತು ಈಗ ಹೆಚ್ಚು ಉತ್ಸಾಹದಿಂದ ಅದನ್ನು ಸಾಕಾರಗೊಳಿಸಲು ಕಾರ್ಯ ಪ್ರವೃತ್ತವಾಗಿದೆ.

ಆರೆಸ್ಸೆಸ್ ಸಿದ್ಧಾಂತವನ್ನೇ ಮೂಲವಾಗಿರಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ವಿ.ಎಚ್.ಪಿ., ಬಜರಂಗದಳ, ಮುಂತಾದ ಸಂಘ ಸಂಸ್ಥೆಗಳ ವಕ್ತಾರರು 2014 ರಿಂದಂತೂ ಕೋಮು ಗಲಭೆಗಳನ್ನು ಉಂಟುಮಾಡುವಲ್ಲಿ, ಸೌಹಾರ್ದವನ್ನು ಕೆಡಿಸುವಲ್ಲಿ, ದ್ವೇಷದ ಬೀಜಗಳನ್ನು ವ್ಯಾಪಕವಾಗಿ ಹರಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತದೆ.

ಹಿಂದಿಯೊಂದೆ ರಾಷ್ಟ್ರಭಾಷೆ ಎನ್ನುವ ಆಸಾಂವಿಧಾನಿಕ ನಿಲುವುಗಳಾಗಲಿ, ಜಾತಿ ಮತಗಳ ಭಿನ್ನತೆ ದಿನೇ ದಿನೇ ಹೆಚ್ಚುತ್ತಿರುವುದಾಗಲಿ ಅದರ ಕಣ್ಣಿಗೆ ಬೀಳುವುದಿಲ್ಲ. ಇದು ಏನನ್ನು ಸೂಚಿಸುತ್ತದೆ? ರಾಜ್ಯಗಳ ಬೆಳವಣಿಗೆಯಾಗಲೀ, ಹಿಂದು ಧರ್ಮದಲ್ಲಿ ಆಳವಾಗಿ ಬೇರೂರಿರುವ ಜಾತಿ ಪದ್ಧತಿಯ ನಿರ್ಮೂಲನೆಯಾಗಲಿ ಅದಕ್ಕೆ ಬೇಡ. ಸನಾತನ ಧರ್ಮದ ಪುನರ್ನಿರ್ಮಾಣವೊಂದೇ ಅದರ ಹೆಬ್ಬಯಕೆ ಹಾಗೂ ಆದರ್ಶ. ಪ್ರಸಕ್ತ ಸಂದರ್ಭ ಅತ್ಯಂತ ಅನುಕೂಲಕರವಾಗಿರುವುದರಿಂದ ಅದು ಯಾವುದೇ ಕಾರಣಕ್ಕೂ ಇಂತಹ ಸುವರ್ಣ ಅವಕಾಶವನ್ನು ಕೈ ಬಿಡುವುವುದಿಲ್ಲ.

ಒಟ್ಟಿನಲ್ಲಿ ಆರೆಸ್ಸೆಸ್ ಬದಲಾಗಿಲ್ಲ ಬದಲಿಗೆ ಬಲವಾಗಿದೆ ಮತ್ತು ಇನ್ನೂ ಹೆಚ್ಚು ಬಲವಾಗಿ ಹಿಂದುತ್ವ ವಿಚಾರಧಾರೆಯನ್ನು ಪಸರಿಸುತ್ತ ಮುಂದುವರೆಯಲಿದೆ.

-ಎಚ್.ವಿ.ನಟರಾಜ, ಬೆಂಗಳೂರು.

Leave a Reply

Your email address will not be published.